ಶಿವಹರಾ ಸ್ವಾಮಿ ಶಂಕರಾ ಸರ್ವಾಂಗ ಸುಂದರ
ಬೆಳಸಿದ ಶಿವಾಚಾರ ಪುಣ್ಯೇದ ಫಲದಿಂದಾ ||
ಮರಳಿ ಜನಿಸೀದಾ ಕಲ್ಯಾಣಕ ಬಂದಾ ||

ಶಿವನ ವಾಹನ ನಂದಿ ಬಸವಣ್ಣ ಶಿವಾಚಾರ ಪ್ರಕಟ ಮಾಡ್ಯಾನ
ಅಂಗಲಿಂಗ ಬೆರಸಿ ತೋರಿಸಿದಾ ತ್ರಿಗುಣಗಳ ಮೀರಿದಾ ||
ಅಷ್ಟಾಂಗ ಸುದ್ಧ ಆಗಮ ಮಾರ್ಗ ಹಿಡಿದಾ ||

ಚೌರ‍್ಯಾ ಅಂಸಿ ಜೀವರಾಸಿಗೆ ಅನ್ನದಾತ ಮಳಿ ಬೆಳಿ ಕೊಡುವಾತ
ಶಿವಾ ಆನಂದ ಶಿವಾ ಆನಂದಾ ||
ಮೃತ್ಯುಲೋಕಕ್ಕೆ ಗೀತ ಪಾಡುತ ನಾರದ ಮುನಿ ಬಂದಾ ||

ಹೊಳ್ಳಿ ಹೋದ ನಾರದ ಕೈಲಾಸಕ ಕೂತಾನ ಶಿವನ ಬದಿಯಕ
ತಿಳಿಸೀದಾ ಎಲ್ಲ ಕೌತುಕ ಹರನೆಂಬ ಶಬ್ದ ಇಲ್ಲಂದಾ ||
ಹರಿಬೆಳಕ ಮೃತ್ಯಲೋಕದಲ್ಲಿ ಆಗೇತ್ರಿ ಮುಂದಾ  ||

ಒಂದನೇ ಚಾಲ

ಮಹಾದೇವ ತಾನು ಆವಾಗ ತಿಳಿಸ್ಯಾನು ನಂದೀಶ್ವರಗ
ಆಕ್ಷಣಾ ಅಪ್ಪಣಿ ಕೊಟ್ಟಾ
ಮೃತ್ಯು ಲೋಕಕ್ಕೆ ಹೋಗ ನೀ ಹೊಂಟಾ ||
ಹೋಗಿ ಬೆಳೆಸಬೇಕ ಶಿವಾಚಾರ ನೂರಾರು ಗಣದವರ
ಅವರ ಸಾಯಕ್ಕ ಕೊಟ್ಟಾ
ವೀರಭದ್ರ ಅವತಾರ ಆತ ಗಟ್ಟಿಮುಟ್ಟಾ ||

ಎರಡನೇ ಚಾಲ

ತಿಳಿಸಿ ಹೇಳ್ಯಾರು ಎಲ್ಲಾ ತತ್ವದ ಕೀಲಾ
ಗಂಟೆ ಮಡಿವಾಳನವತಾರ ಕಡಿಮಿಲ್ಲಾ ||
ಶಿವನ ಬಾಗಿಲ ಕಾಯುವ ದ್ವಾರಪಾಲಾ
ಬಿಜ್ಜಳನವತಾರ ನಿನಗ ನಾಡ ಮ್ಯಾಲಾ ||

||ಏರ||
ಹಿಂಗ ಅವರವರ ಕೆಲಸಾ ಒಪ್ಪಿಸ್ಯಾನ ಶಿವಾ ಭಗವಾನ
ಎಲ್ಲರಿಗೂ ಬೋಧ ಮಾಡಿ ಭೂಲೋಕಕ್ಕೆ ಕಳಿವಿದಾ ||
ಬೆಳಸಿದ ಶಿವಾಚಾರ ಪುಣ್ಯೇದ ಫಲದಿಂದಾ
ಮರಳಿ ಜನಿಸೀದಾ ಕಲ್ಯಾಣಕ ಬಂದಾ || || ೧ ||

ಜಿಲ್ಲಾ ಬಿಜಾಪುರ ಬಾಗೇವಾಡಿ ಊರ ಜಾತೀಲಿ ಬ್ರಾಹ್ಮಣರ
ಇದ್ದಾರ ಗಂಡ ಹೆಂಡಿರಾ ||
ಮಾದರಸ ಗಂಡನ ಹೆಸರ ಮಾದಲಾಂಬಿಕೆ ಸತಿ ಸುಂದರಾ ||

ಅವರೀಗೆ ಇದ್ದಿಲ್ಲ ಹುಡುಗೋರ ಅಲ್ಲಿ ಹುಟ್ಟಿ ಬಂದ ನಂದೀಶ್ವರ
ರೂಪ ಸುಂದರಾ ||
ಅಕ್ಷಯ ತೃತಿಯಾ ಪಾಡ್ಯೆ ಸೋಮವಾರ ವಿಕ್ರಮನಾಮ ಸಂವತ್ಸರಾ ||

ಆಗ ಆದ್ರ ಎಲ್ಲಾರು ಆನಂದ ವರುಷ ಹನ್ನೊಂದ
ತಾಯಿ ತಂದಿ ಪ್ರೀತಿ ಮಾಡುವರಾ ||
ಶಿವವಾಕ್ಯದಂತೆ ಪವಾಡ ಮಾಡ್ಯಾರ ||

ಕಲ್ಯಾಣಕ ಬಂದಾರ ಸಾಗಿ ಬಿಜ್ಜಳನ ಭೆಟ್ಟಿಗಿ ಆದೀತ ಲಗುಬಗಿ
ಒಳ್ಳೆ ಉಮ್ಮೇದ್ವರಾ ||
ತಾಮ್ರ ಪಟಾ ಓದಿ ತೋರಿಸ್ಯಾರ ದ್ರವ್ಯ ತಗಿಸ್ಯಾರ ||

ಎಂಟು ಮಂದಿ ಇದ್ರ ಸಭಾದಲಿ ಕುಂತಿದ್ರ ಅರಸರ ಬದಿಯಲಿ
ಅಂತಾವರ ಕಾರಬಾರ ||
ಕುಂತವರಿಗೆ ಇಲ್ಲ ಖಬರ ಹಾಕತಾರ ಉಸರ ||

ಒಂದನೇ ಚಾಲ

ಲಿಂಗ ಪೂಜಿಗಿ ಕುಂತಿದ್ರ ಬಸವಣ್ಣಾ ಆತ್ಮಮಯಾ ಪೂರ್ಣ
ನೂರಾರು ಹರಗಣದವರಾ
ಶಿವಶರಣರಾಗಿ ಜನಿಸಿದರಾ ||
ಮಡಿವಾಳಪ್ಪನವರು ವೀರಗಂಟಿ ನಾದ ಹಿಡಿಸ್ಯಾರ ಮದ್ದಲಿಗಂಟಿ
ಕೇಳಿದರು ಕೈಲಾಸ ದೇವತೇರಾ
ಮುಳಿಗ್ಯಾರ ಆನಂದ ಸಾಗರಾ ||

ಎರಡನೇ ಚಾಲ

ಪ್ರಮತ ಗಣಂಗಳು ಭೈರವಾದಿ
ಶಿವಾ ಪಾರ್ವತಿಗೆ ಆದೀತು ಉಮೇದಿ ||

ಮಳಿ ಸುರಿಸ್ಯಾರ ಕಲ್ಯಾಣ ಪಟ್ಟಣದಿ
ಆನಂದ ಹೊಂದ್ಯಾರ ಎಲ್ಲಾ ಮಂದಿ ||

||ಏರ||

ಬಿಜ್ಜಳ ಬಸವಣ್ಣಗ ಹೇಳಿದ ನಮ್ಮ ತಂಗಿನ್ನ ಮಾಡಿಕೊ ಅಂದ
ಗೋತ್ರ ನೋಡಂದಾ ||
ಬೆಳಸಿದ ಶಿವಾಚಾರ ಪುಣ್ಯೇದ ಫಲದಿಂದಾ
ಮರಳಿ ಜನಿಸೀದಾ ಕಲ್ಯಾಣಕ ಬಂದಾ || || ೨ ||

ನೀಲಾನ್ನ ಕೊಟ್ರ ಬಸವಣ್ಣಗ ಸತಿಪತಿ ಒಳೆ ಜೋಡಿ ನಾಡಾಗ
ರಾಜ ದರಬಾರ ಬಸವಣ ಕೈಯಾಗ ಆತ ಪ್ರಬಲ್ಲಾ ||
ಲಿಂಗ ಚಿನ್ನ ತೋರಿತ ಬಸವರಾಜ ಅಂದ್ರ ಜನರೆಲ್ಲಾ ||

ಜಾತಿ ಕುಲಾ ಹದಿನೆಂಟ ಏಕ ಬಳಿಕಿ ಆದೀತರಿ ಊಟ
ಬಸವ ಲೀಲಾಟ ಕೀರ್ತಿ ಹಬ್ಬಿತ ನಾಡಮ್ಯಾಲಾ ||
ಬಸವಣ್ಣ ದೇವರೆನಿಸಿಕೊಂಡ ಲೀಲಾ ಶಿವಬಲ್ಲಾ ||

ಬ್ರಾಹ್ಮಣ ಹರಿಜನರಿಗೆ ನಂಟ ಮಾಡಿಸಿದ ಬಂಟ
ಅಂದ್ರ ಕುಲಕಂಟ ಬಿಜ್ಜಳಗ ಹೇಳಿದಾರ ಖುಲ್ಲಾ ||
ಬಿಜ್ಜಳ ಆದಾನು ಸಿಟ್ಟ ಯೋಚನಿ ಮಾಡಲಿಲ್ಲಾ ||

ಹರಳಯ್ಯ ಮಧುವರಸರು ಅವರನ್ನ ಕರಸ್ಯಾರು
ಆನಿಕಾಲಿಗಿ ಕಟ್ಟಿ ಎಳೆಸ್ಯಾರು ಬಿಜ್ಜಳ ಅಂತಾನ ಇನ್ನಮ್ಯಾಲ ||
ಕಿತ್ತಹೋತ ಪಾಪ ಉಳಿಲಿಲ್ಲ ಬಸವ ಹೊಂಟ ನಾಡಮ್ಯಾಲಾ ||

ಒಂದನೇ ಚಾಲ

ಒಂದ ಲಕ್ಷ ತೊಂಬತ್ತಾರು ಸಾವಿರ ಗಣಂಗಳು ಆಗಿದ್ರ ತಯ್ಯಾರ
ಎಲ್ಲರನ ಕರಿ ಕಳಿಸ್ಯಾರು
ಎಚ್ಚರದಿ ನಡಿ ಅಂದಾರು
ಶರಣರು ಆದಾರ ಬಲು ಬೆಂಕಿ ಉಳಿಯಲಿಲ್ಲ ಶಾಂತಿ
ಬಿಜ್ಜಳನ ಎಳದ ಕೊಂದಾರು
ತಕ್ಕಂತಾ ಶಾಸ್ತಿ ಮಾಡ್ಯಾರು ||

ಎರಡನೇ ಚಾಲ

ಚೆನ್ನ ಬಸವಣ್ಣ ಹೊಂಟಾರ ದಕ್ಷಿಣಕ
ಹೋಗಿ ಮುಟ್ಟ್ಯಾರು ಉಳುವಿ ಗುಡ್ಡಕ ||
ಗಂವಿಯೊಳಗ ಹೋಗೋ ಪೂರ್ವಕ
ಮಾತಾಡ್ಯಾರು ನಿಂತ ಕಡಿಯಕ ||

||ಏರ||
ಎಲ್ಲರಿಗೂ ಅಂದರ ಇನ್ನ ಮುಂದ ಭೂಲೋಕ
ಪೂರ್ತಿ ಬಸವಣ್ಣಂದಾ ||
ಬೆಳಸಿದಾ ಶಿವಾಚಾರ ಪುಣ್ಣೇದ ಫಲದಿಂದಾ
ಮರಳಿ ಜನಿಸೀದಾ ಕಲ್ಯಾಣಕ ಬಂದಾ || || ೩ ||

ಬಸವೇಶ್ವರ ಮಹಿಮಾ ಎಷ್ಟಂತ ಹೇಳಲಿ
ಅವರ ಲೀಲಾ ನಡಿತ ನಾಡಮ್ಯಾಲಿ
ಕಲಿಯುಗದಲ್ಲಿ ಇಂಥವರು ಹುಟ್ಟಾಕಿಲ್ಲಾ ಮುಂದಾ ||
ತ್ರತಾಕೃತಾ ದ್ವಾಪರ ಆಗಿಲ್ಲರಿ ಹಿಂದಾ ||

ಇಂಥಾ ಲೀಲಾ ಆಗಿಲ್ಲ ಪೂರ್ವದಲ್ಲಿ ಹರಕೃತ ಯುಗದಲ್ಲಿ
ಮಹಿಮೆ ಇಂಥಾದಾ ||
ಹರನೆಂಬೊ ಬೆಳಕ ಅಲ್ಲಿಂದಾ ಬೆಳಕ ಅಲ್ಲಿಂದಾ ||

ನೋಡರಿ ಹಿಂಗ ಬರದಿತ್ತ ರಾಜೀವಂಬುದಿತ್ತ
ಶಂಭನ ಸ್ತಾನಾ ಮ್ಯಾಲಿಂದಾ ||
ಸೃಷ್ಟಿಕರ್ತನು ಆಗಿ ತಾನಾ ಪಾಲನ ಮಾಡಿದಾ ||

ಹದಿನೆಂಟ ಪುರಾಣಗಳು ಪೂರಾ ನಾಲ್ಕು ವೇದಗಳು ಮನೋಹರಾ
ಆನಂದದಿಂದ ಸ್ಥಳ ತೋರಿದಾ
ಪಂಚಾಚಾರ ಷಡಸ್ಥಳದಿಂದಾ ಬೆಳಕ ತೋರಿದಾ ||

ಒಂದನೇ ಚಾಲ

ಇಂತು ಭೂಲೋಕದಲ್ಲಿ ಈ ಕಲಿಯುಗದಲ್ಲಿ
ಹೆಸರಾದರ ಬಸವಣ್ಣವರಾ
ಅವರ ಸರಿ ಇಲ್ಲ ಯಾರ‍್ಯಾರಾ ||
ಸ್ವರ್ಗ ಮೃತ್ಯು ಪಾತಾಳಕ ಬಿದ್ದಿತರಿ ಬೆಳಕ
ತೇಜದಲ್ಲಿ ಸೂರ್ಯ ಚಂದಿರಾ
ಛಾಯ ಬಿತ್ತ ಶಿವ ಹರಹರಾ

ಎರಡನೇ ಚಾಲ

ಸರ್ವ ಜೀವಿಗಳಿಗೆ ಅನ್ನದಾತಾ
ಲೋಕದೊಳಗ ಅನಿಸಿದೊ ಪುಣ್ಯವಂತಾ ||
ತಿಗಡೊಳ್ಳಿ ಊರ ಜಾಗಾ ಶಿಸ್ತಾ
ಬಲಭೀಮನ ದಯಾ ಐತಿ ಮಸ್ತಾ ||

||ಏರ||
ಪದಾ ಕೇಳಿ ಆಗ್ರಿ ಆನಂದ ಕವಿ ಮಾಡಿದ ಮರಿಕಲ್ಲ ಇದೊಂದ
ಮರಿ ಬ್ಯಾಡ್ರಿ ಬಸವಣ್ಣನ ಪಾದಾ ||
ಬೆಳೆಸಿದಾ ಶಿವಾಚಾರ ಪುಣ್ಯೇದ ಫಲದಿಂದಾ
ಮರಳಿ ಜನಿಸೀದಾ ಕಲ್ಯಾಣಕ ಬಂದಾ || ೪ ||

ರಚನೆ : ಮರಿಕಲ್ಲಕವಿ
ಕೃತಿ :
ಮರಿಕಲ್ಲಕವಿಯ ಗೀಗೀ ಪದಗಳು