ಪುದೀನ ವಿಶಿಷ್ಟ ಕಂಪು ಮತ್ತು ರುಚಿಗೆ ಹೆಸರಾದ ಮೂಲಿಕೆ

ಪೌಷ್ಟಿಕ ಗುಣಗಳು : ಪುದೀನ ಪೌಷ್ಟಿಕ ಸೊಪ್ಪು. ಇದರಲ್ಲಿ ಶರೀರದ ಬೆಳವಣಿಗೆ ಮತ್ತು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಪ್ರೋಟೀನ್, ಶರ್ಕರಪಿಷ್ಟ, ಕೊಬ್ಬು, ಖನಿಜ ಪದಾರ್ಥ, ನಾರುಪದಾರ್ಥ, ಸುಣ್ಣ, ಜೀವಸತ್ವಗಳು ಹಾಗೂ ಕ್ಯಾಲೊರಿಗಳು ಅಧಿಕ ಪ್ರಮಾಣದಲ್ಲಿರುತ್ತವೆ.

೧೦೦ ಗ್ರಾಂ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೮೫.೦೦ ಗ್ರಾಂ
ಶರ್ಕರಪಿಷ್ಟ – ೮.೦ ಗ್ರಾಂ
ಕೊಬ್ಬು – ೦.೬ ಗ್ರಾಂ
ನಾರು ಪದಾರ್ಥ – ೨.೦ ಗ್ರಾಂ
ಒಟ್ಟು ಖನಿಜ ಪದಾರ್ಥ – ೧.೬ ಗ್ರಾಂ
ರಂಜಕ – ೬೨ ಮಿ.ಗ್ರಾಂ
ಕ್ಯಾಲ್ಸಿಯಂ – ೦.೨ ಗ್ರಾಂ
ಕಬ್ಬಿಣ – ೦.೨ ಗ್ರಾಂ
’ಎ’ ಜೀವಸತ್ವ – ೨೭೦೦ ಐಯು
ನಯಾಸಿನ್ – ೧.೨ ಮಿ.ಗ್ರಾಂ
’ಸಿ’ ಜೀವಸತ್ವ – ೦.೦೫ ಮಿ.ಗ್ರಾಂ
ಕ್ಯಾಲೊರಿಗಳು – ೫೭

ಔಷಧೀಯ ಗುಣಗಳು : ಪುದೀನ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಎಲೆಗಳಲ್ಲಿ ದೇಹದ ಶಾಖವನ್ನು ಕಾಪಾಡುವ ಶಕ್ತಿಯಿದೆ. ಅವು ಪಚನಕಾರಕವೂ ಹೌದು. ಅದರ ಜೊತೆಗೆ ಕೊಬ್ಬಿನ ಅಂಶ ಸುಲಭವಾಗಿ ಅರಗುವಂತೆ ಮಾಡಬಲ್ಲವು. ಎಲೆಗಳಲ್ಲಿ ವಾತಹರ ಗುಣಗಳಿವೆ. ಆಯುರ್ವೇದ ಔಷಧಿಗಳಲ್ಲಿ ಹಾಗೂ ಗೃಹ ಔಷಧಿಗಳಲ್ಲಿ ಇದು ವಿಶೇಷವಾಗಿ ಬಳಕೆಯಾಗಿದೆ. ಹೊಟ್ಟೆನೋವು, ಹೊಟ್ಟೆಯ ಉಬ್ಬರ, ಅಜೀರ್ಣದ ತೊಂದರೆಗಳು, ವಾಕರಿಕೆ ಮುಂತಾದುವುಗಳಲ್ಲಿ ಪುದೀನ ಎಲೆಗಳ ರಸ, ನಿಂಬೆಹಣ್ಣಿನ ರಸ ಮತ್ತು ಜೇನುತೊಪ್ಪಗಳನ್ನು ಬೆರೆಸಿ ಸೇವಿಸಬಹುದು. ತಲೆಸಿಡಿತ, ಸಂಧಿವಾತ ಮುಂತಾದವುಗಳಲ್ಲಿ ಎಲೆಗಳನ್ನು ನುಣ್ಣಗೆ ಅರೆದು ಪಟ್ಟು ಹಾಕಿದರೆ ಉಪಶಮನ ಸಿಗುತ್ತದೆ. ಇದು ಕರುಳಿನಲ್ಲಿ ಒಗರನ್ನುಂಟು ಮಾಡುತ್ತದೆ. ಬಿಕ್ಕಳಿಕೆಗೆ ಇದನ್ನು ಸೇವಿಸುವುದು ಲಾಭದಾಯಕ. ಎಲೆಗಳಲ್ಲಿ ಕ್ರಿಮಿನಾಶಕ ಗುಣಗಳಿವೆ. ಊಟದ ನಂತರ ಇದರ ಎಲೆಗಳನ್ನು ಅಗಿದು ತಿನ್ನುವುದರಿಂದ ಹುಳುಕು ಹಲ್ಲುಗಳ ತೊಂದರೆಬಾರದು. ಇದು ಜಂತುನಾಶಕವೂ ಸಹ ಎಲೆಗಳಲ್ಲಿ ಮೂತ್ರೋತ್ಪಾದಕ ಗುಣಗಳಿವೆ. ಸಂಗೀತಗಾರರು ಮತ್ತು ಭಾಷನಕಾರರು ತಮ್ಮ ಧ್ವನಿ ಹಾಗೂ ಗಂಟಲು ಚೆನ್ನಾಗಿರಲು ಇದರ ಎಲೆಗಳನ್ನು ತಿನ್ನುವುದು ಲಾಭದಾಯಕ. ಇದರ ಕಷಾಯಕ್ಕೆ ಒಂದು ಚಿಟಿಕೆ ಅಡುಗೆ ಉಪ್ಪು ಬೆರೆಸಿ ಮುಕ್ಕಳಿಸಿದರೂ ಸಾಕು ಈ ಪ್ರಯೋಜನ ಸಿಕ್ಕಂತೆಯೇ. ಸಾಮಾನ್ಯ ನೆಗಡಿ, ಕೆಮ್ಮುಗಳಿಗೂ ಇದು ಒಳ್ಳೆಯದೇ. ಮೊಡವೆಗಳು ಮಾಯವಾಗಿ ಮುಖಕಾಂತಿ ಹೆಚ್ಚಲು ಇದರ ಎಲೆಗಳ ರಸ ಮತ್ತು ಅರಿಶಿಣಗಳನ್ನು ಬೆರೆಸಿ ಹಚ್ಚಬೇಕು.

ಉಗಮ ಮತ್ತು ಹಂಚಿಕೆ : ಇದರ ತವರೂರು ಯೂರೋಪು ಹಾಗೂ ಭಾರತ. ಜಗತ್ತಿನ ಶೀತ ಹಾಗೂ ಸಮಶೀತೋಷ್ಣವಲಯಗಳ ಎಲ್ಲಾ ಕಡೆ ಇದರ ಬೇಸಾಯ ಮತ್ತು ಬಳಕೆಗಳು ಇವೆ.

ಸಸ್ಯ ವರ್ಣನೆ : ಪುದೀನ ಬಹುವಾರ್ಷಿಕ ಸಸ್ಯಮೂಲಿಕೆ; ಸುಮಾರು ೩೦ ರಿಂದ ೯೦ ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತದೆ. ಇದರ ಕಾಂಡ ಬಲಹೀನ. ನೆಲದ ಮೇಲೆ ತೆವಳಿ ಸಾಗುತ್ತದೆ. ಕಾಂಡ ಭಾಗ ಮೃದು. ನಾಲ್ಕು ಮೂಲೆಗಳಿಂದ ಕೂಡಿರುತ್ತದೆ ಹಾಗೂ ಕೆನ್ನೀಲಿ ಬಣ್ಣವಿರುತ್ತದೆ. ಎಲೆಗಳೂ ಸಹ ಮೃದುವಾಗಿದ್ದು ನೋಡಲು ಸುಕ್ಕುಗಟ್ಟಿದಂತೆ ಕಾಣುತ್ತವೆ. ತೊಟ್ಟು ಇರುವುದಿಲ್ಲ. ಎಲೆಯ ಅಂಚು ಕಚ್ಚುಗಳಿಂದ ಕೂಡಿರುತ್ತದೆ. ಆಕಾರದಲ್ಲಿ ಸ್ವಲ್ಪ ಉದ್ದನಾಗಿದ್ದು ಚೂಪು ತುದಿಯಿಂದ ಕೂಡಿರುತ್ತವೆ. ಎಲೆಗಳ ಬಣ್ಣ ಹಸುರು. ಹೂವು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತವೆ. ತೆನೆಗಳಲ್ಲಿ ಮೂಡುತ್ತವೆ. ಸಸ್ಯದ ಎಲ್ಲಾ ಭಾಗಗಳು ವಿಶಿಷ್ಟ ಕಂಪನ್ನು ಸೂಸುತ್ತವೆ.

ಹವಾಗುಣ : ಇದು ಶೈತ್ಯ ಹವೆಯಲ್ಲಿ ಚೆನ್ನಾಗಿ ಫಲಿಸುತ್ತದೆ. ಹೆಚ್ಚು ನೆರಳಿದ್ದರೆ ರೆಂಬೆಗಳು ಸಣಕಲಾಗಿ, ಉದ್ದಕ್ಕೆ ಬೆಳೆಯುತ್ತವೆ. ಇದನ್ನು ಸಮುದ್ರಮಟ್ಟದಿಂದ ೧೦೦೦ ಮೀಟರ್ ಎತ್ತರದವರೆಗೆ ಬೆಳೆಯಬಹುದು. ಗಾಳಿ ಮತ್ತು ಮಳೆಗಳಿಂದ ರಕ್ಷಣೆ ಅಗತ್ಯ.

ಭೂಗುಣ : ಪುದೀನ ಸೊಪ್ಪನ್ನು ಎಲ್ಲಾ ತೆರನಾದ ಮಣ್ಣಿನಲ್ಲಿ ಬೆಳೆಯಬಹುದು, ಆದರೆ ನೀರು ಬಸಿಯುವುದು ಬಲು ಮುಖ್ಯ. ತೇವದಿಂದ ಕೂಡಿದ ಹಾಗೂ ಫಲವತ್ತಾದ ಮಣ್ಣಿನಲ್ಲಿ ಸೊಂಪಾಗಿ ಬೆಳೆಯುತ್ತದೆ. ಮರಳುಮಿಶ್ರಿತ ಗೋಡುಮಣ್ಣು ಅತ್ಯುತ್ತಮ. ಸಾವಯವ ಪದಾರ್ಥವನ್ನು ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿಗೆ ಸೇರಿಸಬೇಕು.

ಭೂಮಿ ಸಿದ್ಧತೆ ಮತ್ತು ನಾಟಿ : ಇದರಲ್ಲಿ ಬೀಜ ಪದ್ಧತಿ ಸಾಧ್ಯವಿದ್ದರೂ ಹೆಚ್ಚಾಗಿ ಅನುಸರಿಸುವುದು ನಿರ್ಲಿಂಗ ಪದ್ಧತಿಯನ್ನೇ. ನಿರ್ಲಿಂಗ ಪದ್ಧತಿ ಸುಲಭ ಹಾಗೂ ಬೆಳೆ ಬೇಗ ಕೊಯ್ಲಿಗೆ ಬರುತ್ತದೆ. ಕಾಂಡದ ಅಥವಾ ಬೇರು ತುಂಡುಗಳನ್ನು ನೆಡಬಹುದು. ಪ್ರತಿ ತುಂಡಿನಲ್ಲಿ ಎರಡರಿಂದ ನಾಲ್ಕು ಗೆಣ್ಣುಗಳಿರಬೇಕು. ಬಿತ್ತನೆಗೆ ವರ್ಷದ ಯಾವ ಕಾಲವಾದರೂ ಸರಿಯೇ.

ಸಾಲುಗಳ ನಡುವೆ ೨೦-೨೨ ಸೆಂ.ಮೀ. ಅಂತರ ಇರಬೇಕು. ಆಯಾಕಾರದ ಮಡಿಗಳಲ್ಲೂ ಸಹ ನೆಡುವುದುಂಟು. ನಾಟಿಗೆ ಮುಂಚೆ ಪೂರ್ಣ ಪ್ರಮಾಣದ ತಿಪ್ಪೆಗೊಬ್ಬರವನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ನಾಟಿಯ ಕಾಲಕ್ಕೆ ಮಣ್ಣು ಹಸಿಯಾಗಿರುವುದು ಬಹು ಮುಖ್ಯ. ದಿಂಡುಗಳ ಇಳಿಜಾರಿನ ಒಂದು ಮಗ್ಗುಲ ಉದ್ದಕ್ಕೆ ೧೫-೨೦ ಸೆಂ.ಮೀ. ಗೊಂದರಂತೆ ಕಾಂಡದ ಅಥವಾ ಬೇರು ತುಂಡುಗಳನ್ನು ನಾಟಿ ಮಾಡಬೇಕು. ನಾಟಿಗೆ ಅಕ್ಟೋಬರ್ ಹಾಗೂ ಮಾರ್ಚ್ ಹೆಚ್ಚು ಸೂಕ್ತ. ನೆಡುವ ಆಳ ಎರಡು ಗೆಣ್ಣು ಮಣ್ಣಲ್ಲಿ ಇಳಿಯಬೇಕು.

ಗೊಬ್ಬರ : ಈ ಬೆಳೆಗೆ ಮೊದಲೇ ಹೇಳಿದಂತೆ ಹೆಚ್ಚಿನ ಫಲವತ್ತತೆ ಅಗತ್ಯ. ಹೆಕ್ಟೇರಿಗೆ ೨೦-೨೫ ಟನ್ ತಿಪ್ಪೆಗೊಬ್ಬರ ಕೊಡಬೇಕಾಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಕೊಡುವ ರೂಢಿ ಇಲ್ಲ. ಇದರ ಬಗ್ಗೆ ಸಂಶೋಧನೆ ಅಗತ್ಯ.

ನೀರಾವರಿ : ಹದವರಿತು ನೀರು ಕೊಡಬೇಕು. ಚಳಿಗಾಲದಲ್ಲಿ ವಾರಕ್ಕೊಮ್ಮೆ ಮತ್ತು ಬೇಸಿಗೆಯಲ್ಲಿ ನಾಲ್ಕರಿಂದ ಐದು ದಿನಗಳಿಗೊಮ್ಮೆ ನೀರು ಹಾಯಿಸಬೇಕಾಗುತ್ತದೆ. ತೋಟದಲ್ಲಿ ನೀರು ಕಾಲುವೆಗಳ ಉದ್ದಕ್ಕೆ ನೆಟ್ಟು ಬೆಳೆಸಿದಾಗ ಪ್ರತ್ಯೇಕವಾಗಿ ನೀರು ಹಾಯಿಸುವ ಅಗತ್ಯವಿಲ್ಲ. ತೇವ ಹೆಚ್ಚಿ ಸೊಪ್ಪು ಕೊಳೆಯುವ ಸಾಧ್ಯತೆ ಇರುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ತೆಗೆಯಬೇಕು. ಪ್ರತಿ ಸಾರಿ ಸೊಪ್ಪನ್ನು ಕೊಯ್ಲು ಮಾಡಿದ ನಂತರ ಹೆಕ್ಟೇರಿಗೆ ೫ ರಿಂದ ೧೦ ಟನ್ನುಗಳಷ್ಟು ತಿಪ್ಪೆಗೊಬ್ಬರ ಹರಡಿ ಮಣ್ಣಿನಲ್ಲಿ ಬೆರೆಸಬೇಕು.

ಕೊಯ್ಲು ಮತ್ತು ಇಳುವರಿ : ಮಳೆಗಾಲ ಮತ್ತು ಬೇಸಿಗೆಗಳಲ್ಲಿ ಇಳುವರಿ ಕಡಿಮೆ. ಅಕ್ಟೋಬರ್ ತಿಂಗಳಿನಿಂದಾಚೆಗೆ ಇಳುವರಿ ಹೆಚ್ಚುತ್ತದೆ. ಸೊಪ್ಪನ್ನು ಕಾಂಡಗಳ ಸಮೇತ ನೆಲಮಟ್ಟಕ್ಕೆ ಕೊಯ್ಲು ಮಾಡುವುದು ಸಾಮಾನ್ಯ. ವಾರ್ಷಿಕ ಇಳುವರಿ ಹೆಕ್ಟೇರಿಗೆ ೧೨ ರಿಂದ ೧೫ ಟನ್ನುಗಳಷ್ಟಿರುತ್ತದೆ. ಒಮ್ಮೆ ನೆಟ್ಟರೆ ಸುಮಾರು ಮೂರು ನಾಲ್ಕು ವರ್ಷಗಳವರೆಗೆ ಸಾಕಷ್ಟು ಇಳುವರಿ ಸಿಗುತ್ತಿರುತ್ತದೆ. ಅನಂತರ ಅದನ್ನು ಕಿತ್ತು ಬೇರೆ ತಾಕುಗಳಿಗೆ ವರ್ಗಾಯಿಸಬೇಕು.

ಕೀಟ ಮತ್ತು ರೋಗಗಳು : ಈ ಬೆಳೆಯನ್ನು ಬಾಧಿಸುವ ಗುರುತರ ಕೀಟ ಅಥವಾ ರೋಗಗಳಾವುವೂ ವರದಿಯಾಗಿಲ್ಲ.

ಬೀಜೋತ್ಪಾದನೆ : ಇದನ್ನು ಸಾಮಾನ್ಯವಾಗಿ ನಿರ್ಲಿಂಗ ವಿಧಾನದಲ್ಲಿ ವೃದ್ಧಿಪಡಿಸುವುದೇ ಹೆಚ್ಚು.

* * *