ಮಲೆನಾಡಿನ ಕಾಡುಗಳಲ್ಲಿ ಬೆಳೆಯುವ ಪುನರ್ಪುಳಿಗೆ ವಿದೇಶಗಳಲ್ಲೂ ಬಲು ಬೇಡಿಕೆಯ ಸಂಬಾರ. ಮಹಾರಾಷ್ಟ್ರದ ರತ್ನಗಿರಿ ಹುಳಿ ಹಣ್ಣಿನ ಮೂಲ. ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿ ಸಾಕಷ್ಟು ಬಳಕೆಯಲ್ಲಿದೆ. ಕಾಡು ಉತ್ಪತ್ತಿಯಾಗಿರುವ ಹುಳಿ ಮರವನ್ನು ಕೃಷಿಯಾಗಿ ಬೆಳೆಸುವ ಪರಿಪಾಠವಿನ್ನೂ ಆರಂಭವಾಗಿಲ್ಲ. ಭರಪೂರ ಔಷಧೀಯ ಗುಣವಿರುವ, ನಿತ್ಯವೂ ಅಡುಗೆಯಲ್ಲಿ ಬಳಕೆಯಾಗುವಂತಹ ಪುನರ್ಪುಳಿಯನ್ನು ಕೃಷಿಯಾಗಿಸುವ ಜವಾಬ್ದಾರಿಎಲ್ಲರಮೇಲಿದೆ.

‘ಆಸರಿಕೆಗೆ ಕೋಕಂ, ಬ್ಯಾಸರಿಕೆಗೆ ಯಕ್ಷಗಾನ!

ಮಲೆನಾಡು, ಕರಾವಳಿ ಘಟ್ಟ ಪ್ರದೇಶದಲ್ಲಿ ಈ ಮಾತು ಜನಜನಿತ. ಬಿಸಿಲಲ್ಲಿ ದಣಿದು ಬಂದವರಿಗೆ ಮಲೆನಾಡಿನಲ್ಲಿ ಆಸರಿಕೆಗಾಗಿ ನೀಡುವ ಪಾನೀಯ ಕೋಕಂ ಜ್ಯೂಸ್. ಕೋಕಂ, ಪುನರ್ಪುಳಿ, ಮುರುಗಲು.. ಹೀಗೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಈ ಹಣ್ಣನ್ನು ತಿನ್ನುವುದಕ್ಕಾಗುವುದಿಲ್ಲ.

ಕೋಕಂ ಹಣ್ಣಿನ ‘ಎಲ್ಲ ಭಾಗಗಳೂ’ ಮೌಲ್ಯವರ್ಧಿತಗೊಳ್ಳುತ್ತವೆ. ಸಿಪ್ಪೆಯಿಂದ ರಸಂ, ತಂಬುಳಿ, ಗೊಜ್ಜು, ಜಾಮ್, ಜ್ಯೂಸ್ ತಯಾರಿಸುತ್ತಾರೆ. ಕೋಕಂನಲ್ಲಿ ಹುಳಿ ಅಂಶ ಹೆಚ್ಚು. ಹಾಗಾಗಿ ಇದನ್ನು ಹುಣಸೆ ಹುಳಿಗೆ, ಟೊಮ್ಯಾಟೊ ಹಣ್ಣಿಗೆ ಪರ್ಯಾಯವಾಗಿ ಬಳಸುತ್ತಾರೆ. ಈ ಹಣ್ಣಿನಲ್ಲಿ ಅಧಿಕ ಸಿಟ್ರಿಕ್ ಆಮ್ಲ ಇದೆ. ಹಾಗಾಗಿ ಇದು ‘ಪಿತ್ತೋಪಹಾರಿ’. ಮಾತ್ರವಲ್ಲ, ದೇಹದಲ್ಲಿನ ಕೊಬ್ಬು ಕರಗಿಸುವ ಟಾನಿಕ್.

ಈ ಹಣ್ಣು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ ದಕ್ಷಿಣಕ್ಕೆ ಕೇರಳದ ಕಾಸರಗೋಡು, ವಯನಾಡುಗಳವರೆಗೆ, ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣ ಮರ. ಅಲ್ಲದೇ ಕರ್ನಾಟಕ, ಪಶ್ಚಿಮ ಬಂಗಾಳ, ಅಸ್ಸಾಂಗಳಲ್ಲೂ ಈ ಮರ ಬೆಳೆಯುತ್ತಾರೆ. ಉತ್ತರದ ಕೆಲಭಾಗ ಬಿಟ್ಟರೆ ಕೇರಳಿಗರಿಗೆ ಬಹಳ ಪರಿಚಯವಿದೆ.

ಕರ್ನಾಟಕದಲ್ಲಿ ಮಲೆನಾಡು, ಕರಾವಳಿಯಂತಹ ಘಟ್ಟ ಪ್ರದೇಶದವರಿಗೆ ಚಿರಪರಿಚಿತ. ಬಯಲು ಸೀಮೆಯವರಿಗೆ ಅಪರಿಚಿತ. ಏಕೆ ಗೊತ್ತಾ. ಬಯಲು ಸೀಮೆಯ ವಾತಾವರಣದಲ್ಲಿ ಕೋಕಂ ಬೆಳೆಯುವುದಿಲ್ಲ. ಆದರೂ ಹಟಕ್ಕೆ ಬಿದ್ದ ಮೈಸೂರಿನ ಸಾವಯವ ಕೃಷಿಕ ಎ.ಪಿ.ಚಂದ್ರಶೇಖರರಂತಹ ಕೆಲವು ರೈತರು ಎಂಟೋ ಹತ್ತೋ ಗಿಡಗಳನ್ನು ಬೆಳೆಸುತ್ತಿದ್ದಾರೆ.

ಮಲೆನಾಡಿನವರ ಅಡುಗೆ ಮನೆಯಲ್ಲಿ ಕೋಕಂಗೆ ಖಾಯಂ ಸ್ಥಾನ. ಪ್ರತಿ ಅಡುಗೆಯ ಸಂಗಾತಿ. ಬೆಳಿಗ್ಗೆ ಕೋಕಂ ತಂಬುಳಿ. ಮಧ್ಯಾಹ್ನ ಕೋಕಂ ಜ್ಯೂಸ್. ಊಟಕ್ಕೆ ಕೋಕಂ ರಸಂ. ಸಂಜೆಗೆ ಕೋಕಂ ಜಾಮ್.. ಹೀಗೆ ಇದು ಅಲ್ಲಿನ ನಿತ್ಯ ಅಡುಗೆ ಸಂಗಾತಿ.

ಕೋಕಂ ಕೃಷಿ ಹೇಗೆ ?

ಕೋಕಂ ಅಥವಾ ಪುನರ್ಪುಳಿಯ ಸಸ್ಯಶಾಸ್ತ್ರೀಯ ಹೆಸರು ಗಾರ್ಸಿನಿಯಾ. ಇದು ಕ್ಲುಸಿಯೆಸಿ ಎಂಬ ಸಸ್ಯಕುಲದ ಸದಸ್ಯ ಸಸ್ಯ. ಬೀಜದಿಂದ ವಂಶಾಭಿವೃದ್ಧಿಯಾಗುತ್ತದೆ. ಅಪರೂಪಕ್ಕೆ ಕಸಿ ಅಥವಾ ಅಂಗಾಂಶ ಕೃಷಿಯಿಂದ ಸಹ ಹೊಸ ಸಸಿ ತಯಾರಿಸಬಹುದು. ಮಣ್ಣಿನ ಪಾತಿ ಅಥವಾ ಮಣ್ಣು ತುಂಬಿದ ಪಾಲಿಥೀನ್ ಚೀಲದಲ್ಲಿ ಬೀಜ ಬಿತ್ತಿದ ಇಪ್ಪತ್ತೆರಡು ದಿನದಲ್ಲಿ ಹೊಸ ಸಸಿ ಬೆಳೆಯುತ್ತದೆ. ನಂತರ ಅದನ್ನು ಸ್ವಲ್ಪ ಗೊಬ್ಬರ, ನೀರು ಕೊಟ್ಟು ಬೆಳೆಸಬೇಕು. ಸುಮಾರು ಮೂರು ನಾಲ್ಕು ತಿಂಗಳೊಳಗೆ ಸಸಿಯು ನೆಡುತೋಪಿಗೆ ನೆಡಲು ಸಿಧ್ಧ.

ಒಂದು ಚದರ ಮೀಟರ್ ಅಳತೆಯ ಕುಣಿ(ಗುಂಡಿ) ತೋಡಿ ಗೊಬ್ಬರ ತುಂಬಬೇಕು. ಕುಣಿಯಿಂದ ಕುಣಿಗೆ ಸುಮಾರು ಹತ್ತು ಮೀಟರ್ ಅಂತರವಿರಲಿ. ಮಳೆಗಾಲದ ಮೊದಲ ಮಳೆ ಶುರುವಾಗುವುದರ ವೇಳೆಗೆ ಸಸಿ ನೆಡುವುದು ಸೂಕ್ತ. ಕಿರಿ(ತೆಳುವಾದ ಅಥವಾ ಸಸಿಗಿಡ) ಕಾಂಡದ ಸಸಿಗೆ ಆಸರೆಗಾಗಿ ಊರುಗೋಲು ನೀಡಬೇಕು. ಕಸಿ ಸಸಿಯಾಗಿದ್ದರೆ ಅದರ ಪಾಲಿಥೀನ್ ಪಟ್ಟಿಯನ್ನು ಎಚ್ಚರಿಕೆಯಿಂದ ತೆಗೆಯಬೇಕು ಎನ್ನುವುದು ಪುನರ್ಪುಳಿ ಬೆಳೆವ ರೈತರ ಅನುಭವದ ಮಾತು.

ಗೋವಾದ ತೋಟಗಾರಿಕಾ ಇಲಾಖೆಯ ಪ್ರಕಾರ (ಲೇಖನದ ಉಲ್ಲೇಖ: ಅಡಿಕೆ ಪತ್ರಿಕೆ ೧೯೯೬, ಜೂನ್ ಸಂಚಿಕೆ) ಪುನರ್ಪುಳಿ ಗಿಡ ಕಲ್ಲು ಗುಡ್ಡಗಳ ತುದಿಯಲ್ಲಿ, ನೀರ ತೊರೆಗಳ ದಡದಲ್ಲೂ ಉತ್ತಮವಾಗಿ ಬೆಳೆಯುತ್ತದೆ. ಸಮುದ್ರ ಮಟ್ಟದಿಂದ ೮೦೦ ಮೀಟರಿಗಿಂತ ಎತ್ತರವಿಲ್ಲದ ಜಾಗ ಸೂಕ್ತ ಎನ್ನುತ್ತಾರೆ ಮರ ತಜ್ಞರು.

ಪುನರ್ಪುಳಿ ಮರಕ್ಕೆ ಹೆಚ್ಚಾಗಿ ನೀರು ಬೇಡ. ನೀರು ಕೊಟ್ಟರೆ ಇಳುವರಿ ಹೆಚ್ಚಾಗಬಹುದು. ಆದರೂ ನೀರಿಲ್ಲದಲ್ಲಿ ಹಳೆಯ ಪುನರ್ಪುಳಿ ಕೊಡುವ ಫಸಲು ಹೆಚ್ಚು ಎನ್ನುತ್ತಾರೆ ಜಲಪತ್ರಕರ್ತ ಶ್ರೀಪಡ್ರೆಯವರು. ಈ ಹಣ್ಣಿಗೆ ಹೇಳಿಕೊಳ್ಳುವಂತಹ ಕೀಟ- ರೋಗ ಬಾಧೆಯಿಲ್ಲ. ಆದರೆ ಮಂಗಗಳ ಕಾಟ ಅಧಿಕ. ಅದನ್ನು ಹೊರತುಪಡಿಸಿದರೆ ಬೇರೆ ಪ್ರಾಣಿಗಳ ಹಾವಳಿಯಿಲ್ಲ. ಇನ್ನೊಂದು ವಿಷಯವೆಂದರೆ, ಈ ಮರದಲ್ಲಿನ ಕಾಯಿಗಳು ಒಟ್ಟಿಗೆ ಹಣ್ಣಾಗುವುದಿಲ್ಲ. ಹಾಗಾಗಿ ಹಂತ ಹಂತವಾಗಿ ಹಣ್ಣುಗಳನ್ನು ಕೊಯ್ಲು ಮಾಡಲಾಗುತ್ತದೆ.

ಮಿಶ್ರಕೃಷಿಯಾಗಿ ಪುನರ್ಪುಳಿ :

ತೆಂಗಿನ ಹತ್ತು ವರ್ಷದ ಹಳೆಯ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಕೋಕಂ ಹಾಗೂ ಈ ಕುಟುಂಬದ ಎಲ್ಲ ಸದಸ್ಯ ಮರಗಳನ್ನು(ಕೋಕಂ, ಉಪ್ಪಾಗೆ, ದೀರ್ಕ, ಮ್ಯಾಂಗೋಸ್ಟಿನ್ ಇತ್ಯಾದಿ)ಬೆಳೆಯಬಹುದು. ಹೀಗೆ ಮಿಶ್ರ ಬೆಳೆಯಾಗಿಸು ವುದರಿಂದ ನೀರುಣಿಸಲು ವಿಶೇಷ ಶ್ರಮ ಬೇಕಾಗಿಲ್ಲ. ತೆಂಗಿನ ತೋಟದ ನೀರಾವರಿಯೇ ಸಾಕು. ಅಂದ ಹಾಗೆ ಅಡಿಕೆಯ ನಡುವೆ ಮತ್ತು ಬೇಲಿ ಅಥವಾ ಬೀಸು ಗಾಳಿಯ ಹೊಡೆತ ತಪ್ಪಿಸಲು ಪುನರ್ಪುಳಿ ಮರಗಳು ಸೂಕ್ತ. ಇಡೀ ವರ್ಷ ಹಸಿರಾಗಿರುವ ದೀರ್ಕ ಅತಿ ಉತ್ತಮ. ಕಾಫಿ ತೋಟದ ನಡುವೆ ನೆರಳಿಗಾಗಿ ಸಹ ಈ ಮರಗಳನ್ನು ಆಯ್ಕೆ ಮಾಡಬಹುದು. ಮಾವು ಮತ್ತು ಇತರ ಹಣ್ಣು ಮರಗಳಾದ ಅಂಜೂರ, ಮೋಸಂಬಿ, ಪಪ್ಪಾಯ ನಡುವೆ ಸಹ ಪುನರ್ಪುಳಿ ಬೆಳೆ ಸಾಧ್ಯ ಎನ್ನುತ್ತಾರೆ ಮರ ಆಧಾರಿತ ಬೇಸಾಯ ತಜ್ಞರು.

ಇಷ್ಟೆಲ್ಲ ಅವಕಾಶವಿದ್ದರೂ ಈ ಬೆಳೆ ಕಾಡು ಬೆಳೆಯಾಗಿಯೇ ಉಳಿದಿದೆ. ಪುನರ್ಪುಳಿಯನ್ನು ನೆಟ್ಟು ಬೆಳೆಸುವ ಪರಿಪಾಟ ಇನ್ನೂ ಆರಂಭವಾಗಿಲ್ಲ. ಮಹಾರಾಷ್ಟ್ರದ ಸಿಂಧುದುರ್ಗ ಮತ್ತು ರತ್ನಗಿರಿ ಜಿಲ್ಲೆಯಲ್ಲಿ ಕೆಲವು ನೆಡುತೋಪುಗಳನ್ನು ಬಿಟ್ಟರೆ ಇನ್ನೆಲ್ಲೂ ಇದರ ಗಂಭೀರ ಕೃಷಿ ನಡೆದೇ ಇಲ್ಲ. ಆದರೂ ಮಹಾರಾಷ್ಟ್ರ, ಗೋವಾಗಳಲ್ಲಿ ಜಮೀನಿನ ಅಂಚುಗಳಲ್ಲಿ ಇದನ್ನು ನೆಡುತ್ತಾರೆ.

ಉಪಚಾರ, ನಿರ್ವಹಣೆ, ಉಸ್ತುವಾರಿ :

ಸಸಿಯಾಗಿ – ಮರವಾಗಿ ಬೆಳೆಯುವ ಪುನರ್ಪುಳಿ ಮರದ ರೆಂಬೆಗಳನ್ನು ಆಗಾಗ್ಗೆ ಸವರುತ್ತಿದ್ದರೆ ಒಳ್ಳೆಯದು. ವರ್ಷಕ್ಕೆ ಒಂದು ಸಸಿಗೆ ಹತ್ತು ಕೆ.ಜಿ. ಸಾವಯವ ಅಥವಾ ಹಟ್ಟಿಗೊಬ್ಬರ ಕೊಟ್ಟರೆ ಸಾಕು ಎನ್ನುತ್ತಾರೆ ಬೆಂಗಳೂರಿನ ಆಯುರ್ವೇದ ವೈದ್ಯ ಡಾ. ಸತ್ಯನಾರಾಯಣಭಟ್

ಬೆಳೆಯುವ ಸಂದರ್ಭದಲ್ಲಿ ಗಿಡದ ಕಾಂಡ ಇನ್ನೂ ಮೃದುವಾಗಿದ್ದರೆ ಸರ್ವೆ ಮರದ ಗೂಟದ ಆಧಾರ ಕೊಡಬೇಕು. ಆಗ ಸುಲಭವಾಗಿ ಬೆಳೆಯುತ್ತದೆ. ನೆಟ್ಟ ಐದು ವರ್ಷದ ಹೊತ್ತಿಗೆ ಸುಮಾರು ಮೂರು ಮೀಟರ್ ಎತ್ತರ ಬೆಳೆದೀತು. ಆನಂತರ ತುದಿ ರೆಂಬೆ ಸವರಲು ಆರಂಭಿಸಿರಿ. ಮರ ಹೆಚ್ಚು ಎತ್ತರ ಬೆಳೆದರೆ ಕಾಯಿ, ಹಣ್ಣು ಕೊಯ್ಲಿಗೆ ಕಷ್ಟ. ಹಾಗಾಗಿ ಐದು ಮೀಟರ್ ಸರಾಸರಿ ಎತ್ತರವಿದ್ದರೆ ಸಾಕು.

ಹಣ್ಣುಗಳ ಇಳುವರಿ:

ಕಸಿ ಸಸಿ ಸುಮಾರು ಮೂರನೆಯ ವರ್ಷವೇ ಫಲ ಬಿಡಲು ಆರಂಭ. ಆದರೆ ಸ್ಥಿರವಾದ ಇಳುವರಿಗೆ ಹನ್ನೆರಡು ವರ್ಷ ಕಾಯಬೇಕು. ಹದಿನೈದನೆಯ ವರ್ಷದಿಂದ ಉತ್ತಮ ಇಳುವರಿ ಸಾಧ್ಯ. ಸಕಾಲಕ್ಕೆ ನೀರುಕೊಟ್ಟು, ಗೊಬ್ಬರ ನೀಡಿ, ಆರೈಕೆ ಮಾಡಿದರೆ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು. ಆದರೆ ಕಸಿ ಗಿಡಗಳ ಪ್ರಯತ್ನ ಅಷ್ಟಾಗಿ ಆಗಿಲ್ಲ ಎನ್ನುತ್ತಾರೆ ಪರಿಸರ ತಜ್ಞ ಶಿವಾನಂದ ಕಳವೆ. ಏಕೆಂದರೆ ಮರ ತ್ರಿಕೋಣಾಕಾರವಾಗಿ ಬೆಳೆಯುತ್ತದೆ. ಮೇಲಕ್ಕೆ ಹೋಗುವುದರಿಂದ ಕಸಿ ಮಾಡಲು ಆಗುವುದಿಲ್ಲ ಎನ್ನುತ್ತಾರೆ ಕಳವೆ.

ಆದರೆ ಗೋವಾದ ಪಶ್ಚಿಮ ಘಟ್ಟ ಕೋಕಂ ಪ್ರತಿಷ್ಠಾನದ ಅಧ್ಯಯನದ ಪ್ರಕಾರ ‘ಕಸಿ ಕೋಕಂ ಗಿಡಗಳು ದಾಪೋಲಿಯ ಕೊಂಕಣ ಕೃಷಿ ವಿದ್ಯಾಪೀಠದಲ್ಲಿ ಅಥವಾ ವೆಂಗುರ್ಲಾ ಹಣ್ಣುಗಳ ಸಂಶೋಧನಾ ಕೇಂದ್ರದಲ್ಲಿ ಲಭ್ಯವಿವೆ. ಹಳೆಯ ಗೋವಾದಲ್ಲೂ ಈ ಕಸಿ ಸಸಿಗಳಿವೆ. ಆದರೆ ಮಾರಾಟಕ್ಕೆ ಲಭ್ಯವಿಲ್ಲ ಎನ್ನುತ್ತಾರೆ ಡಾ. ಡಿ.ಜಯರಾಮ್ ಭಟ್.

ಪುನರ್ಪುಳಿ ಮರ ಜನವರಿ ಸುಮಾರಿಗೆ ಹೂವು ಬಿಡಲು ಆರಂಭಿಸುತ್ತದೆ. ಮೇ ತಿಂಗಳಲ್ಲಿ ಫಲ ಕೊಡುತ್ತದೆ. ಇದರ ಹಣ್ಣು ಮಾಗಿದಾಗ ಹಸಿರಿನಿಂದ ಗಾಢ ರಕ್ತಗೆಂಪು ಬಣ್ಣಕ್ಕೆ ತಿರುಗುತ್ತದೆ. ಸುಮಾರು ೩೫ ರಿಂದ ೮೦ಗ್ರಾಂ ತೂಗುವ ಈ ಹಣ್ಣಿನ ಸಿಪ್ಪೆ ಒಳಗಿನ ತಿರುಳು, ಬೀಜ ಎಲ್ಲವೂ ಹಲವು ರೀತಿಯಲ್ಲಿ ಬಳಕೆಯಾಗುತ್ತದೆ. ಪುನರ್ಪುಳಿ ಆಹಾರವೂ ಹೌದು, ಮನೆಯಂಗಳದ ಔಷಧವೂ ಹೌದು.

ಕೋಕಂನ ವಿಧಗಳು ಮತ್ತು ತಳಿಗಳು:

ಇತ್ತೀಚೆಗಿನ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಒಟ್ಟು ೨೦೦ ಕ್ಕೂ ಹೆಚ್ಚು ಕೋಕಂ ಪ್ರಭೇದಗಳಿವೆ. ಇವುಗಳಲ್ಲಿ ೩೦ ತಳಿಗಳನ್ನು ಭಾರತದ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದೆ. ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು, ಗೋವಾ, ಕೊಂಕಣ ಭಾಗ ಮತ್ತು ಊಟಿ ಮುಂತಾದ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ.

ಗಾರ್ಸಿನಿಯ ಇಂಡಿಕಾ(ಕೋಕಂ), ಗಾರ್ಸಿನಿಯಾ ಗುಮ್ಮಿಗುಟ್ಟಾ(ಕೋಡಂಪುಳಿ), ಗಾರ್ಸಿನಿಯಾ ಮ್ಯಾಂಗೋಸ್ಟಿನ್ ಮತ್ತು ಗಾರ್ಸಿನಿಯಾ ಸ್ಪೈಕೆಟಾ ಇವುಗಳು ಪಶ್ಚಿಮಘಟ್ಟದ ಕಾಡುಗಳಲ್ಲಿ ಬೆಳೆಯುತ್ತಿರುವ ಕೋಕಂ ಪ್ರಭೇದಗಳು. ಈ ಪ್ರಭೇದಗಳಲ್ಲಿ ಕೆಲವನ್ನು ಗೋವಾ ಮಲಬಾರ ತೀರ ಪ್ರದೇಶಗಳು ಮತ್ತು ಕರ್ನಾಟಕದ ಕರಾವಳಿ ಭಾಗದ ರೈತರು ಕೃಷಿಯಾಗಿ ಬೆಳೆಸುತ್ತಿದ್ದಾರೆ.

ಕೋಕಂ ಹಣ್ಣಿನ ಎರಡು ಪ್ರಭೇದಗಳು ಹೆಚ್ಚು ಬಳಕೆಯಲ್ಲಿವೆ. ಒಂದು ಕೆಂಪು ಮುರುಗಲು ಇನ್ನೊಂದು ಬಿಳಿ ಮುರುಗಲು. ಸಾಮಾನ್ಯವಾಗಿ ಕೆಂಪು ಮುರುಗಲನ್ನು ಎಲ್ಲಾ ಕಡೆಯೂ ಬೆಳೆಯುತ್ತಾರೆ. ಆದರೆ, ಬಿಳಿ ಮುರುಗಲು ಅಪರೂಪ. ಇದರ ಬಣ್ಣ ಹಳದಿ. ಇದು ಉತ್ತರ ಕನ್ನಡದ ಶಿರಸಿ, ಅಂಕೋಲ ಭಾಗದಲ್ಲಿ ಹೆಚ್ಚು ಪ್ರಚಲಿತ. ಶಿರಸಿ ತಾಲ್ಲೂಕಿನ ಬೆಂಗಳಿಯ ವೆಂಕಟೇಶ್ ಅವರು ಬಿಳಿ ಮುರುಗಲನ್ನು ಕಳೆದ ಹತ್ತು ವರ್ಷಗಳಿಂದ ಬೆಳೆಯುತ್ತಿದ್ದಾರೆ. ಮುರುಗಲಿಂದ ವಿವಿಧ ಉತ್ಪನ್ನಗ ಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಬಿಳಿ ಮುರುಗಲು ಕೃಷಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ರುಚಿಯಲ್ಲಿ ಕೆಂಪು ಮುರುಗಲುಗಿಂತ ವಿಪರೀತ ಹುಳಿ ಎನ್ನುವುದು ವೆಂಕಟೇಶ್ ಅವರ ಅಭಿಪ್ರಾಯ.

ಗೋವಾದ ಪಶ್ಚಿಮ ಘಟ್ಟ ಕೋಕಂ ಪ್ರತಿಷ್ಠಾನದ ಸದಸ್ಯರಾಗಿರುವ ಡಾ. ಡಿ.ಜಯರಾಮ್ ಭಟ್ ಅವರ ಪ್ರಕಾರ ‘೧೯೯೭ರಲ್ಲಿ ಮಹಾರಾಷ್ಟ್ರದ ದಾಪೋಲಿಯದಲ್ಲಿರುವ ಕೊಂಕಣ ಕೃಷಿ ವಿದ್ಯಾಪೀಠ ‘ಕೋಕಂ ಅಮೃತ’ ಎಂಬ ತಳಿಯನ್ನು ಬಿಡುಗಡೆ ಮಾಡಿತು. ಇದು ಪೊದೆಯ ರೀತಿಯಲ್ಲಿ ೧೦ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಒಂದು ಮರದಿಂದ ೧೪೦ ಕೆ.ಜಿ ಇಳುವರಿ ಲಭ್ಯವಾಗುತ್ತದೆ. ಒಂದು ಹಣ್ಣಿನ ತೂಕ ೩೫ ಗ್ರಾಂ. ಈ ಹಣ್ಣಿನ ತಾಳಿಕೆ ಅವಧಿ ೧೫ ದಿವಸಗಳು ಎನ್ನುತ್ತಾರೆ ಡಾ ಭಟ್.

ಪುನರ್ಪುಳಿ ಉತ್ಪಾದನೆ :

ದೇಶದ ಪುನರ್ಪುಳಿ ಉತ್ಪಾದನೆ ಬಗ್ಗೆ ನಿಖರವಾದ ಅಂಕಿ-ಅಂಶಗಳು ಸಿಗುವುದಿಲ್ಲ. ಒಂದೂವರೆ ದಶಕದ ಹಿಂದಿನ ಮಾಹಿತಿ ಪ್ರಕಾರ ಕೊಂಕಣ ಪ್ರದೇಶದಲ್ಲಿ ಪ್ರತಿವರ್ಷ ನಾಲ್ಕು ರಿಂದ ಎಂಟು ಸಾವಿರ ಟನ್‌ನಷ್ಟು ಒಣಸಿಪ್ಪೆ ಉತ್ಪಾದನೆಯಗುತ್ತದೆ ಎನ್ನುತ್ತದೆ ಒಂದು ಮೂಲ. ಇನ್ನೊಂದೆಡೆ ಪಶ್ಚಿಮ ಘಟ್ಟದಲ್ಲಿ ಹದಿನೈದು ಲಕ್ಷ ಮರಗಳಿದ್ದು, ೧೦,೦೦೦ ಗೋಣಿಚೀಲದಷ್ಟು ಸಿಪ್ಪೆ ಬೆಳೆಯುತ್ತದೆ ಎಂಬ ಉಲ್ಲೇಖವಿದೆ.

ಇತ್ತೀಚೆಗಿನ ಅಧ್ಯಯನದ ಪ್ರಕಾರ ಪ್ರಸ್ತುತ ದೇಶದಲ್ಲಿ ೧೨೦೦ ಹೆಕ್ಟೇರ್ ಪ್ರದೇಶದಲ್ಲಿ ಕೋಕಂ ಬೆಳೆಯಲಾಗುತ್ತಿದ್ದು, ವಾರ್ಷಿಕವಾಗಿ ೧೦,೨೦೦ ಟನ್ ಹಣ್ಣು ಉತ್ಪತ್ತಿಯಾಗುತ್ತಿದೆ. ಅಂದರೆ ವಾರ್ಷಿಕ ಎಕರೆಗೆ ೮.೫ ಟನ್ನಿನಷ್ಟು ಕೋಕಂ ಉತ್ಪಾದನೆಯಾಗುತ್ತಿದೆ ಎನ್ನುತ್ತಾರೆ ಜಯರಾಮ್ ಭಟ್.

ಮಾರುಕಟ್ಟೆ ಮತ್ತು ಮೌಲ್ಯವರ್ಧನೆ

ಸಂಬಾರ ಮಂಡಳಿಯ ಸಂಬಾರ ಪಟ್ಟಿಯಲ್ಲಿ ಪುನರ್ಪುಳಿಯೂ ಸೇರಿದೆ. ಇದರ ಸಿಪ್ಪೆ ಮತ್ತು ತುಪ್ಪ ವಿದೇಶಗಳಿಗೆ ರಫ್ತಾಗುತ್ತದೆ. ಈ ಬಗ್ಗೆ ನಿಖರವಾದ ಅಂಕಿ-ಅಂಶಗಳು ಲಭ್ಯವಾಗಿಲ್ಲ. ೧೯೯೦ -೯೨ರ ಸಾಲಿನಲ್ಲಿ ಸುಮಾರು ೧.೫ ಲಕ್ಷ ರೂಪಾಯಿ ಬೆಲೆಯ ಸಿಪ್ಪೆಯನ್ನು ಅಮೇರಿಕಾ ಆಮದು ಮಾಡಿಕೊಂಡಿತ್ತು. ನಂತರದ ವರ್ಷಗಳಲ್ಲಿ ಜಪಾನ್, ಇಂಗ್ಲೆಂಡ್, ಯು.ಎ.ಇ., ಸೌದಿ ಅರೇಬಿಯಾ ಮತ್ತಿತರ ರಾಷ್ಟ್ರ್ರಗಳು ಸುಮಾರು ೫ ಲಕ್ಷ ರೂಪಾಯಿ ಮೌಲ್ಯಕ್ಕೂ ಹೆಚ್ಚಿನ ಪುನರ್ಪುಳಿ ಉತ್ಪನ್ನ ಆಮದು ಮಾಡಿಕೊಂಡ ಉದಾಹರಣೆಗಳಿವೆ. ಇತರ ಹಲವು ರಾಷ್ಟ್ರ್ರಗಳಿಗೆ ಚಿಲ್ಲರೆ ಪ್ರಮಾಣದಲ್ಲಿ ಹೋಗುತ್ತಲೇ ಇದೆ.

೧೫ರಿಂದ ೩೦ಹಣ್ಣುಗಳು ಒಟ್ಟಾದರೆ ಒಂದು ಕೆ.ಜಿ ತೂಕ ಬರುತ್ತದೆ. ೧೦ರಿಂದ ೧೩ಕಿಲೋ ತಾಜಾ ಹಣ್ಣಿದ್ದರೆ ಒಂದು ಕೆ.ಜಿ ಒಣಸಿಪ್ಪೆ ಸಿಗುತ್ತದೆ. ಸಾಧಾರಣವಾಗಿ, ಕೆ.ಜಿ ತಾಜಾ ಹಣ್ಣಿನಲ್ಲಿ ೩೦೦ ಗ್ರಾಂ ಸಿಪ್ಪೆ, ೭೦೦ ಗ್ರಾಂ ಬೀಜ ಲಭ್ಯವಾಗುತ್ತದೆ.

೯೦ರ ದಶಕದಲ್ಲಿ ಒಣಸಿಪ್ಪೆಗೆ ಕಿಲೋಗೆ ೮-೧೦ ರೂಪಾಯಿ. ಈಗ ಕೆ.ಜಿ ಒಣಸಿಪ್ಪೆಗೆ ೨೫ ರಿಂದ ೩೦ ರೂಪಾಯಿಗೆ ಏರಿದೆ. ಒಂದು ಕಾಲದಲ್ಲಿ ಗೋವಾದಲ್ಲಿ ಈ ಸಿಪ್ಪೆಗೆ ೮೦-೯೦ ರೂಪಾಯಿ ಬೆಲೆ ಇತ್ತಂತೆ. ಹಣ್ಣು, ಬೀಜ, ಸಿಪ್ಪೆ ಮಾರಾಟಕ್ಕಿಂತ ಹೆಚ್ಚು ಬೆಲೆಯಿರುವುದು ಪುನರ್ಪುಳಿಯ ‘ಮೌಲ್ಯವರ್ಧಿತ ಉತ್ಪನ್ನಗಳಿಗೆ’ ಎನ್ನುವುದು ಕೋಕಂ ಉತ್ಪನ್ನ ತಯಾರಕರ ಅಭಿಪ್ರಾಯವಾಗಿದೆ.

‘ಪುನರ್ಪುಳಿಯಿಂದ ನೈಸರ್ಗಿಕ ಪಾನೀಯ ಉತ್ಪಾದನೆಯಾಗುತ್ತದೆ. ವಾಣಿಜ್ಯವಾಗಿ ಮಾರಾಟ ಮಾಡುವವರೂ ಕೂಡ ಯಾವುದೇ ರಾಸಾಯನಿಕ ಸಂರಕ್ಷಕಗಳನ್ನು ಬಳಸದೇ ಮಾರಾಟ ಮಾಡುತ್ತಾರೆ’ ಎನ್ನುವುದು ಪುತ್ತೂರಿನ ಕೋಕಂ ಪಾನೀಯ ಉದ್ದಿಮೆದಾರ ವಿಶ್ವಪ್ರಸಾದ್ ಅವರ ಅಭಿಮತ. ಇವರು ಕಳೆದ ಎರಡು ದಶಕಗಳಿಂದ ಪುನರ್ಪುಳಿ ಜ್ಯೂಸ್ ಅನ್ನು ‘ವಿಶ್ವಾಸ್ ಫುಡ್ ಪ್ರಾಡಕ್ಟ್’ ಬ್ರಾಂಡ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ‘ವಿಶ್ವಾಸ್ ಫುಡ್ ಪ್ರಾಡಕ್ಟ್’ಗೆ ತುಂಬಾ ಬೇಡಿಕೆಯಿತ್ತಂತೆ. ವಿಶ್ವಪ್ರಸಾದ್ ಸೇಡಿಯಾಪು ಅವರ ಬಿರಿಂಡಾ ಜ್ಯೂಸ್ ಪುತ್ತೂರಿನಲ್ಲಿ ತುಂಬಾ ಫೇಮಸ್ಸು. ಆದರೆ, ಎರಡು ವರ್ಷಗಳಿಂದ ಮಾರಾಟ ಕಡಿಮೆಯಾಗಿದೆ. ‘ಬಣ್ಣ, ಸಂರಕ್ಷಕಗಳನ್ನು ಬೆರೆಸಿ ಮಾರಾಟ ಮಾಡುವವರ ಸಂಖ್ಯೆ ಇಲ್ಲಿ ಹೆಚ್ಚಾದ್ದರಿಂದ ನಮ್ಮ ಒರಿಜಿನಲ್ ಕೋಕಂ ಜ್ಯೂಸ್ ಮಾರಾಟ ತುಸು ಕಡಿಮೆಯಾಯಿತು. ಅವರೆಲ್ಲ ಕಡಿಮೆ ಬೆಲೆಗೆ ಮಾರುತ್ತಾರೆ. ಅವರಿಗೆ ಸ್ಪರ್ಧೆ ಒಡ್ಡಲು ನಾವು ತಯಾರಿಲ್ಲ. ನಾವು ಬೇಡಿಕೆ ಆಧರಿಸಿ ಪಾನೀಯ ತಯಾರಿಸುತ್ತಿದ್ದೇವೆ’ ಎನ್ನುತ್ತಾರೆ ವಿಶ್ವಪ್ರಸಾದ್.

ಇದು ಕೆಂಪು ಮುರುಗುಲ ಹಣ್ಣಿನ ಮೌಲ್ಯವರ್ಧನೆಯಾದರೆ, ಬೆಂಗಳಿ ವೆಂಕಟೇಶ್ ಅವರ ಬಿಳಿ ಮುರುಗಲ ಮೌಲ್ಯವರ್ಧನೆ ಮತ್ತಷ್ಟು ವಿಭಿನ್ನವಾಗಿದೆ. ವೆಂಕಟೇಶ್ ಅವರು ಕಳೆದ ಹತ್ತು ವರ್ಷಗಳಿಂದ ಬಿಳಿ ಮುರುಗಲದ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದ್ದಾರೆ.

 

ಪುನರ್ಪುಳಿಔಷಧೀಯ ಗುಣಗಳ ಭಂಡಾರ

ಪುನರ್ಪುಳಿಯ ಮುಖ್ಯ ಔಷಧೀಯ ಗುಣ ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್‌ನಲ್ಲಿದೆ ಎನ್ನಲಾಗಿದೆ. ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರದ(ಸಿಎಫ್‌ಟಿಆರ್‌ಐ) ಪ್ರಕಾರ ತಾಜಾ ಪುನರ್ಪುಳಿ ಹಣ್ಣಿನಲ್ಲಿ ಸುಮಾರು ೧೬.೮ ಶೇಕಡಾದಷ್ಟು ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್ ಇರುತ್ತದೆ.

‘ಪಿತ್ತ ನೆತ್ತಿಗೇರಿ ತಲೆ ಗಿರ್ ಎನ್ನುತ್ತಿದ್ದಾಗ ಒಂದು ಲೋಟ ಕೋಕಂ ಜ್ಯೂಸ್ ಕುಡಿದರೆ ಪಿತ್ತ ಇಳಿಯುತ್ತದೆ. ತಲೆ ಸುತ್ತ ಕಡಿಮೆಯಾಗುತ್ತದೆ’. ಹಾಗೆಯೇ ‘ಎರಡರಿಂದ ಮೂರು ಕೋಕಂ ಸಿಪ್ಪೆಯನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿ. ಮರುದಿವಸ ಆ ನೀರನ್ನು ಕುಡಿದರೆ ಗ್ಯಾಸ್ಟ್ರಿಕ್(ಹೊಟ್ಟೆ ಉರಿ) ಕಡಿಮೆಯಾಗುತ್ತದೆ’ ಎನ್ನುತ್ತಾರೆ ಡಾ. ಸತ್ಯನಾರಾಯಣ ಭಟ್.

ಕೋಕಂ ಬೀಜದಿಂದ ತುಪ್ಪ ತಯಾರಿಸುತ್ತಾರೆ. ಕೇರಳದ ಕೆಲವು ಭಾಗದಲ್ಲಿ ಊಟಕ್ಕೂ ಈ ತುಪ್ಪ ಬಳಸುವ ಸಂಪ್ರದಾಯವಿದೆ. ನಾಟಿ ವೈದ್ಯರು ಚರ್ಮದ ಕಾಯಿಲೆಗೆ ಈ ಬೀಜದ ತುಪ್ಪವನ್ನು ಹಚ್ಚಿಕೊಳ್ಳಲು ಸಲಹೆ ನೀಡುತ್ತಾರೆ.

ಬಿಳಿಮುರುಗಲ ತುಪ್ಪ ಚರ್ಮದ ಕಾಯಿಲೆ, ಅತಿಸಾರ ಬೇಧಿ ಕಡಿಮೆ ಮಾಡುವಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನುವುದು ಬೆಂಗಳಿ ವೆಂಕಟೇಶ್ ಮತ್ತು ಕುಟುಂಬದವರ ಅಭಿಪ್ರಾಯವಾಗಿದೆ. ಈ ಔಷಧೀಯ ಗುಣದಿಂದಾಗಿ ಬೀಜದಿಂದ ತಯಾರಾದ ತುಪವನ್ನು ಮನೆ ಬಳಕೆಗೂ ಬಳಸುತ್ತಾರೆ.

ಒಂದು ಲೋಟ ಬಿಸಿ ನೀರಿಗೆ/ಹಾಲಿಗೆ ಒಂದು ಚಮಚೆ ಕೋಕಂ ಬೀಜದ ತುಪ್ಪ ಹಾಕಿ, ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ ಎನ್ನುತ್ತಾರೆ ಶ್ರೀಮತಿ ವೆಂಕಟೇಶ್.

ಹೀಗೆ ವೈವಿಧ್ಯಮಯ ಗುಣಗಳಿಂದ ಸಸ್ಯಲೋಕದಲ್ಲಿ ಗುರುತಿಸಿಕೊಂಡಿರುವ ಪುನರ್ಪುಳಿಗೆ ಕೃಷಿ ಭಾಗ್ಯ ಇನ್ನೂ ದೊರೆತಿಲ್ಲ. ಪಶ್ಚಿಮ ಘಟ್ಟಗಳ ಸಾಲಿಗಷ್ಟೇ ಸೀಮಿತವಾಗಿರುವ ಪುನರ್ಪುಳಿಗೆ ಇಂದು ವಿಶ್ವದಾದ್ಯಂತ ಬೇಡಿಕೆಯಿದೆ. ಹಾಗಾಗಿ ಕಾಡಿನಿಂದ ನಾಡಿನತ್ತ ಮುಖ ಮಾಡಿರುವ ಈ ಹುಳಿ ಮರವನ್ನು ನಾಡಿನಲ್ಲೇ ಕಾಯಂ ಆಗಿ ಉಳಿಸಬೇಕಿದೆ.

ಈ ನಿಟ್ಟಿನಲ್ಲಿ ಗೋವಾದ ಪಶ್ಚಿಮಘಟ್ಟಗಳ ಕೋಕಂ ಪ್ರತಿಷ್ಠಾನ ದಾಪುಗಾಲಿಟ್ಟಿದೆ. ಪುನರ್ಪುಳಿ ಕುರಿತು ಎರಡು ಬೃಹತ್ ರಾಷ್ಟ್ರೀಯ ಕಾರ್ಯಾಗಾರಗಳನ್ನು (ವೆಂಗುರ್ಲಾ ಹಾಗೂ ಗೋವಾದಲ್ಲಿ) ನಡೆಸಿದೆ. ಇಂಥ ಸಂಸ್ಥೆಗಳ ಜೊತೆ ರೈತರು, ಸಂಬಾರ ಮಂಡಳಿ, ಮರ ವಿಜ್ಞಾನ ವಿಭಾಗ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳು ಕೈ ಜೋಡಿಸಿ, ಔಷಧ, ಆಹಾರವಾಗಿರುವ ಪುನರ್ಪುಳಿಯನ್ನು ನಾಡಿಗೆ ತಂದು ಕೃಷಿಯಲ್ಲಿ ಕಾಯಂ ಸ್ಥಾನ ಕಲ್ಪಿಸಬೇಕಿದೆ.

 

ಬಿಳಿ ಮುರುಗಲದ ಮೌಲ್ಯವರ್ಧನೆಪುನರ್ಪುಳಿಯಲ್ಲಿ ಬಿಳಿ ಮುರುಗಲ ತಳಿ ಅಪರೂಪದ್ದು. ಹೆಚ್ಚು ಉತ್ತರ ಕನ್ನಡದಲ್ಲಿ ಬೆಳೆಯುತ್ತಾರೆ. ಶಿರಸಿ ತಾಲ್ಲೂಕಿನ ಬೆಂಗಳಿ ವೆಂಕಟೇಶ್ ಅವರು ತಳಿಯನ್ನು ಬೆಳೆಸಿದ್ದಾರೆ.ಹದಿನೈದು ವರ್ಷಗಳ ಹಿಂದೆ ವೆಂಕಟೇಶ್ ಬೆಂಗಳೂರಿನ ಲಾಲ್ಬಾಗ್ ಸಮೀಪದ ಸಿದ್ಧಾಪುರ ನರ್ಸರಿಯಿಂದ ಕೋಕಂ ಗಿಡಗಳನ್ನು ತಂದು ತೋಟದಲ್ಲಿ ನೆಟ್ಟರು. ಗಿಡದ ಆರೈಕೆ ಮಾಡಲಿಲ್ಲ. ಆದರೂ ಚೆನ್ನಾಗಿ ಬೆಳೆದು ಹಣ್ಣು ಬಿಡಲು ಶುರುವಾಯಿತು. ಬೆಳೆದ ಹಣ್ಣನ್ನು ಏನು ಮಾಡುವುದೆಂದು ಗೊತ್ತಾಗದೆ ಹಾಗೆಯೇ ಹಣ್ಣು ಗಿಡದಲ್ಲಿ ಉಳಿಯಿತು.

ಒಮ್ಮೆ ಎದೆ ನೋವು ಕಾಣಿಸಿಕೊಂಡಾಗ ಇವರು ಆಯುರ್ವೇದ ವೈದ್ಯ ಡಾ.ಪಠವರ್ಧನ್ರವರ ಬಳಿ ಚಿಕಿತ್ಸೆ ಪಡೆದಿದ್ದಾರೆ. ನೋವು ನಿವಾರಣೆಗಾಗಿ ಬಿಳಿ ಮುರುಗಲಿನಿಂದ ತಯಾರಿಸಿದ ಔಷಧ ಕೊಟ್ಟಿದ್ದಾರೆ. ‘ಅದನ್ನು ತೆಗೆದುಕೊಂಡ ಮೇಲೆ ಎದೆ ನೋವು ಮಾಯವಾಯಿತು. ಅದು ಅಸಿಡಿಟಿಯಿಂದ ಬಂದಿದ್ದ ನೋವು ಎಂದು ತಿಳಿದುಬಂದಿತು. ನಂತರ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಕೋಕಂ ಬಳಸಲು ಶುರು ಮಾಡಿದೆವುಎಂದು ಪುನರ್ಪುಳಿ ಬೆಳೆಸಿದ ಹಿಂದಿನ ಕಥೆ ಹೇಳುತ್ತಾರೆ ಬೆಂಗಳಿ ವೆಂಕಟೇಶ್.

ಅಂದಿನಿಂದ ಇವರ ಮನೆಯಲ್ಲಿ ಕೋಕಂ ಕಾಯಂ ವಸ್ತುವಾಯಿತು. ನಿತ್ಯದ ಅಡುಗೆಯ ವಸ್ತುವಾಯಿತು. ಹಾಗೆಯೆ ಮೌಲ್ಯವರ್ಧನೆಗೂ ನಾಂದಿಯಾಯಿತು.

ವೆಂಕಟೇಶ್ ಅವರು ಬಿಳಿ ಮುರುಗಲ ಹಣ್ಣು ಮತ್ತು ಸಿಪ್ಪೆಯಿಂದ ಜಾಮ್, ಉಪ್ಪಿನಕಾಯಿ, ಜ್ಯೂಸ್, ತಯಾರಿಸುತ್ತಾರೆ. ಬೀಜದಿಂದ ತುಪ್ಪ ಮಾಡುತ್ತೇವೆ. ಜಾಮ್, ಉಪ್ಪಿನಕಾಯಿ ಮಾರಾಟಕ್ಕಾದರೆ, ತುಪ್ಪ ಮನೆ ಉಪಯೋಗಕ್ಕೆ ಮಾತ್ರಎನ್ನುತ್ತಾರೆ ವೆಂಕಟೇಶ್.

ಉಪ್ಪಿನಕಾಯಿ, ಜಾಮ್ಗೆ ತುಂಬಾ ಬೇಡಿಕೆಯಿದೆಯಂತೆ. ‘ನಾವು ೭೦೦ ಗ್ರಾಂ ತೂಕದಲ್ಲಿ ಕೋಕಂ ಜಾಮ್ ಅನ್ನು ಬಾಟಲಿಗೆ ತುಂಬಿ ಮಾರಾಟ ಮಾಡುತ್ತೇವೆ. ಒಂದು ಬಾಟಲಿಗೆ ೬೦ ರೂಪಾಯಿ ಬೆಲೆ. ಶಿರಸಿಯ ಹಾಪ್ಕಾಮ್ಸ್, ಕದಂಬ ಮಾರುಕಟ್ಟೆ ಮತ್ತು ಅರಣ್ಯ ಉತ್ಪಾದನಾ ಮಾರಾಟ ಕೇಂದ್ರಗಳೇ ನಮ್ಮ ಮಾರುಕಟ್ಟೆ ಮೂಲಗಳು. ವರ್ಷಪೂರ್ತಿ ಮಾರಾಟ ಮಾಡಲಾಗುವುದಿಲ್ಲ. ಸೀಸನ್ನಲ್ಲಿ ೬೦೦ ದಿಂದ ,೦೦೦ ಸಾವಿರ ಬಾಟಲಿ ಮಾರಾಟವಾಗುತ್ತಿದೆಎಂದು ವೆಂಕಟೇಶ್ ಕೋಕಂ ವ್ಯಾಪಾರವಹಿವಾಟು ಬಗ್ಗೆ ವಿವರಣೆ ನೀಡುತ್ತಾರೆ. ಕೋಕಂ ವ್ಯಾಪಾರದಿಂದ ಅವರ ಖರ್ಚು, ವೆಚ್ಚ, ನಷ್ಟ ಎಲ್ಲವನ್ನು ಕಳೆದು ಇಪ್ಪತ್ತರಿಂದ ಇಪ್ಪತೈದು ಸಾವಿರ ವರಮಾನವಿದೆಯಂತೆ.

 

ಸಪ್ನಾ ಬ್ರಾಂಡ್ ಕೋಕಂ ಉತ್ಪನ್ನಪುತ್ತೂರಿನ ಸಾಯಿಕೋಟೆ ಎಂಟರ್ ಪ್ರೈಸಸ್ ಮಾಲೀಕ ಸತ್ಯಪ್ರಸಾದ್ ಕೋಟೆ ಅವರ ಕೋಕಂ ಇನಸ್ಟೆಂಟ್ ಪೌಡರ್, ಸಾಂದ್ರೀಕೃತ ಜ್ಯೂಸ್(ಛಿoಟಿಛಿeಟಿಣಡಿಚಿಣe ರಿuiಛಿe), ಕೋಕಂ ಸ್ಕ್ಯಾಷ್ಗೆ ಸಾಕಷ್ಟು ಬೇಡಿಕೆಯಿದೆ. ಕರ್ನಾಟಕದ ಅದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕರಾವಳಿ, ಮಡಿಕೇರಿ, ಕಾಸರಗೂಡಿನವರಿಗೂ ಇವರ ಕೋಕಂ ಉತ್ಪನ್ನ ಹರಡಿಕೊಂಡಿದೆ. ‘ನಾವು ಮೈಸೂರಿನ ಸಿ.ಎಫ್.ಟಿ.ಆರ್. ಯಂತ್ರಗಳನ್ನು ಬಳಸಿ ಕೋಕಂ ಉತ್ಪನ್ನ ತಯಾರಿಸುತ್ತಿದ್ದೇವೆಎನ್ನುವ ಸತ್ಯಪ್ರಸಾದ್, ಉದ್ಯಮದಲ್ಲಿ ನಮಗೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಏಕೆಂದರೆ ಇದು ಸೀಸನಲ್ ಪ್ರಾಡಕ್ಟ್. ಜೊತೆಗೆ ಬಳಕೆಯ ಮಿತಿಯೂ ಇದೆಎನ್ನುತ್ತಾರೆ.ಸಪ್ನಾ ಬ್ರಾಂಡ್ ಮೂಲಕ ಮಾರಾಟವಾಗುತ್ತಿರುವ ನಮ್ಮ ಉತ್ಪನ್ನಗಳಿಗೆಮಿತಿಯಲ್ಲಿ ಸಂರಕ್ಷಕಗಳನ್ನು ಮತ್ತು ಬಣ್ಣಗಳನ್ನು ಬಳಸುತ್ತೇವೆ. ಇದರಿಂದ ಯಾವುದೇ ತೊಂದರೆಯಿಲ್ಲಎಂದು ತಮ್ಮ ಉತ್ಪನ್ನಗಳ ಗುಣಮಟ್ಟ ಕುರಿತು ಸಮರ್ಥನೆ ನೀಡುತ್ತಾರೆ.

ಇದೆಲ್ಲದರ ಜೊತೆಗೆ ಗೋವಾ ಮತ್ತಿತರ ಕೊಂಕಣ ಪ್ರದೇಶದಲ್ಲಿ ಸೋಡಾ ಶರಬತ್ತು ಮಾಡಿ ಮಾರುವ ಚಿಕ್ಕ ಚಿಕ್ಕ ಗೂಡಂಗಡಿಗಳಲ್ಲಿ ಬೇಸಿಗೆಯಲ್ಲಿ ಬಿರಿಂಡಾ ಜ್ಯೂಸ್ ಹೆಸರಲ್ಲಿ ಕೋಕಂ ಜ್ಯೂಸ್ ಮಾರಾಟವಾಗುತ್ತದೆ. ಪುತ್ತೂರು, ವಿಟ್ಲಗಳಂತಹ ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಜ್ಯೂಸ್ ತುಂಬಿಸಿ ಐಸ್ ಬಾಕ್ಸ್ ಇರುವ ಅಂಗಡಿಗಳಿಗೆ ಪೂರೈಸುವ ಸ್ವಉದ್ಯೋಗವೂ ಚಾಲ್ತಿಯಲ್ಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪುನರ್ಪುಳಿ ಜೊತೆಗೆ ಶುಂಠಿ ಮತ್ತು ಮೆಣಸು ಬಳಸಿ ಜ್ಯೂಸ್ ತಯಾರಿಸುವ ಪರಿಪಾಠವಿದೆ. ಕರಾವಳಿ ಭಾಗದಲ್ಲಿ ಕೋಕಂ ಅನ್ನು ಮೀನಿನ ಅಡುಗೆಗೆ ಬಳಸುತ್ತಾರೆ. ಮೈಸೂರಿನ ಸಾವಯವ ಕೃಷಿಕ .ಪಿ.ಚಂದ್ರಶೇಖರ್ ಅವರು ಕೋಕಂ ಜ್ಯೂಸ್, ಜಾಮ್ ಮತ್ತು ಒಣ ಸಿಪ್ಪೆಗಳನ್ನು ಅಲ್ಲಿನನೇಸರಆರ್ಗಾನಿಕ್ ಮಳಿಗೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.