ಉ.ಕ., ದ.ಕ. ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಯಾವುದೇ ಸಮಾರಂಭಕ್ಕೆ ಹೋದರೂ ಪುನರ್ಪುಳಿ (ಕೋಕಂ, ಮುರುಗಲು)  ಜ್ಯೂಸಿನದೇ ಮೇಲುಗೈ. ಇಲ್ಲಿ ಮಲೆನಾಡಿನ ಕಾಡಂಚಿನಲ್ಲಿ ತಾವೇ ಬೆಳೆದ ಮರಗಳೇ ಹೆಚ್ಚು. ಮನೆಮಟ್ಟದಲ್ಲಿ ಸಿರಪ್, ಸಿಪ್ಪೆ ಸಿದ್ಧ ಮಾಡಿಟ್ಟಿರುತ್ತಾರೆ. ಸಾರು, ತಂಬುಳಿಗಳ ರೂಪದಲ್ಲಿ ಹೊಟ್ಟೆಗಿಳಿಯುತ್ತದೆ. ಮಹಾರಾಷ್ಟ್ರದ ಕೊಂಕಣ್ ಪ್ರದೇಶ ಮತ್ತು ಗೋವಾಗಳಲ್ಲಿ ಹಣ್ಣಿನ ಸಿಪ್ಪೆ (ಆಮ್ಸೊಲ್)ಯನ್ನು ಅಡುಗೆಗೆ ಬಳಸುತ್ತಾರೆ. ಹುಣಸೆ ಹುಳಿಗೆ ಇದು ಪರ್ಯಾಯ.

‘ಪುನರ್ಪುಳಿ ಹಣ್ಣು ಕಲ್ಪವೃಕ್ಷ. ಇದರಲ್ಲಿ ತಾಜ್ಯ ಇಲ್ಲವೇ ಇಲ್ಲ’ ಎನ್ನುತ್ತಾರೆ ವೆಸ್ಟರ್ನ್ ಘಾಟ್ಸ್ ಕೋಕಂ ಫೌಂಡೇಶನ್ನಿನ ಅಧ್ಯಕ್ಷ ಅಜಿತ್ ಶಿರೋಡ್ಕರ್. ‘ಕೊಂಕಣ್ ಬೆಲ್ಟ್’ ಎಂದೇ ಹೆಸರಾದ ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ ಜಿಲ್ಲೆಗಳು ಕೋಕಮ್ ಕೃಷಿಯಲ್ಲಿ ಮುಂದು. ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ನಾಲ್ಕೂವರೆ ಟನ್ ಹಣ್ಣಿನ ಉತ್ಪಾದನೆ. ಇದು ಎರಡು ವರುಷದ ಹಿಂದಿನ ಲೆಕ್ಕ.

ಮಹಾರಾಷ್ಟ್ರ ಜಿಲ್ಲೆಯಲ್ಲಿ ಸುಮಾರು ನಲವತ್ತೈದು ಸಾವಿರಕ್ಕೂ ಮಿಕ್ಕಿ ಕೋಕಮ್ ಮರಗಳಿವೆ ಎಂಬುದು ಅಲ್ಲಿನ ಅರಣ್ಯ ಇಲಾಖೆಯ ಮಾಹಿತಿ. ಉತ್ತರ ಕೊಂಕಣ್ ಬೆಲ್ಟ್‌ನಲ್ಲೇ ಒಂದೂವರೆ ಸಾವಿರ ಮೆಟ್ಟಿಕ್ ಟನ್ನಿಗೂ ಮಿಕ್ಕಿ ಕೋಕಮ್ ಹಣ್ಣುಗಳು ಒಣಸಿಪ್ಪೆಗಳಾಗಿ ರೂಪಾಂತರಗೊಂಡರೆ, ಏಳುನೂರು ಮೆಟಿಕ್‌ಟನ್ನಿಗೂ ಮಿಕ್ಕಿ ಹಣ್ಣುಗಳು ಸಿರಪ್ ಮತ್ತು ಪುನರ್ಪುಳಿ ಬೆಣ್ಣೆಯ ರೂಪ ಪಡೆಯುತ್ತದೆ.

ಗುಡ್ಡದಲ್ಲಿ ಹಣ್ಣಾದ ಪುನರ್ಪುಳಿಯನ್ನು ಆಯ್ದು ಅವುಗಳಿಂದ ಉತ್ಪನ್ನಗಳನ್ನು ತಯಾರಿಸುವುದೇ ಹೆಚ್ಚು. ಇದನ್ನೇ ಕೃಷಿಯನ್ನಾಗಿ, ಪ್ರತ್ಯೇಕ ತೋಟವನ್ನಾಗಿ ಮಾಡಿದ ಕೃಷಿಕರು ಅಲ್ಲೋ ಇಲ್ಲೋ ಮಾತ್ರ.

ಮೌಲ್ಯವರ್ಧನೆ


ಶಿರಸಿಯ ವಿಧೀಶ ಭಟ್ಟರು ಪುನರ್ಪುಳಿ ಸಿರಪ್ಪನ್ನು ಮನೆಯಲ್ಲೇ ಮಾಡಿ, ತನ್ನ ಸೀಮಿತ ಗಿರಾಕಿಗಳಿಗೆ ಒದಗಿಸುತ್ತಾರೆ. ಕಳೆದ ಎರಡ್ಮೂರು ವರುಷದಿಂದ ಪುನರ್ಪುಳಿಯ ಬೀಜವನ್ನು ಒಂದಷ್ಟು ಮಂದಿ ಆಸಕ್ತರಿಗೆ ನೀಡಿದ್ದಾರೆ. ಈ ವರುಷದಿಂದ ಪುನರ್ಪುಳಿ ಗಿಡ ಮಾಡಿ ನೀಡುವ ಉದ್ದೇಶ ಅವರದು. ‘ನಮ್ಮ ಮನೆಯ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಣ್ಣು ಸಿಗುವಂತಾದರೆ ಮೌಲ್ಯವರ್ಧನೆಗೆ ಸಹಕಾರಿ’ ಎನ್ನುತ್ತಾರೆ.

ಉ.ಕ.ದ ಕರೂರು, ನಡೀಮನೆ, ಕದ್ರುಗೋಡಿನ ಕಾಡಂಚಿನ ಮಂದಿ ಮೊದಲು ಹಣ್ಣನ್ನು ತಂದು, ತುಂಡರಿಸಿ, ಒಣಗಿಸಿ ಸಿಪ್ಪೆ ಮಾಡಿ ಕಾಡುತ್ಪತ್ತಿಯ ಗುತ್ತಿಗೆದಾರನಿಗೆ ಒದಗಿಸುತ್ತಿದ್ದರಂತೆ. ಅದರಿಂದ ಅವರಿಗೆ ಸಿಗುತ್ತಿದ್ದ ಪಗಾರ ಕಿಲೋಗೆ ಮೂರು ರೂಪಾಯಿ.

ಈಚೆಗೆ ಮೂರು ವರುಷದಿಂದ ಶಿರಸಿಯ ಪ್ರಕೃತಿ ಸಂಸ್ಥೆ ಇಲ್ಲಿ ಕಾಲಿಟ್ಟಿದೆ. ಸಿರಪ್ ತಯಾರಿಸುವ ಕುರಿತು ಮಾಹಿತಿ, ತರಬೇತಿ. ಸಿರಪ್‌ಗೆ ಬೇಕಾದ ಎಲ್ಲಾ ಒಳಸುರಿ, ಪರಿಕರಗಳ ಒದಗಣೆ. ‘ಈ ವರ್ಷ ಏನಿಲ್ಲವೆಂದರೂ ಹತ್ತು ಕ್ವಿಂಟಾಲ್ ಸಿರಪ್ ತಯಾರಾಗಬಹುದು’ ಎನ್ನುತ್ತಾರೆ ‘ಪ್ರಕೃತಿ’ಯ ಎಂ.ಆರ್.ಹೆಗಡೆ. ರಸ ಕಳೆದುಕೊಂಡ ಸಿಪ್ಪೆ ಮೊದಲಿನಂತೆ ಗುತ್ತಿಗೆದಾರನ ಪಾಲಾಗುತ್ತದೆ. ‘ಮೊದಲು ಸಿರಪ್ ತೆಗೆಯಲು ಆಗುತ್ತೆ ಅಂತ ಗೊತ್ತಿರಲಿಲ್ಲ. ಗೊತ್ತಿರುತ್ತಿದ್ದರೆ ನಮ್ಮ ಆರ್ಥಿಕ ಮಟ್ಟ ಈಗ ಎಷ್ಟೋ ಸುಧಾರಣೆಯಾಗುತ್ತಿತ್ತು’ ಎನ್ನುತ್ತಾರೆ ಕರೂರಿನ ರಾಮೇಗೌಡ.

ಇವಿಷ್ಟು ಮನೆಮಟ್ಟದ, ಸಾಮೂಹಿಕ ಕೆಲಸಗಳಲ್ಲಿ ಪುನರ್ಪುಳಿ ಮೌಲ್ಯವನ್ನು ವೃದ್ಧಿಸಿಕೊಂಡ ಕತೆ. ಇತ್ತ ಕಂಪೆನಿಗಳು ತಮ್ಮ ಯಂತ್ರಗಳ ಬಾಯೊಳಗೆ ಹಣ್ಣನ್ನು ತೂರಿಸಿ ವಿಧ ವಿಧದ ರೂಪದಲ್ಲಿ ಹೊರಬರುತ್ತಿದೆ. ಮೇ ಮೊದಲ ವಾರ ಗೋವಾದ ವಿವಿಯಲ್ಲಿ  ಪುನರ್ಪುಳಿ(ಕೋಕಂ)ಯ ರಾಷ್ಟ್ರೀಯ ಮಾತುಕತೆಯಲ್ಲಿ ಇಂತಹ ಮೌಲ್ಯವರ್ಧಿತ ಉತ್ಪನ್ನಗಳ ಕುರಿತಾದ ಮಾತುಕತೆ.

ರತ್ನಾಗಿರಿಯ ದೀಪಶ್ರೀ ಪ್ರಾಡಕ್ಟ್ಸ್ ಕಂಪೆನಿಯ ಪುನರ್ಪುಳಿ ಚಾಕೊಲೇಟ್ ಉತ್ತಮ ಸ್ವಾದ. ಮಕ್ಕಳು ಇಷ್ಟ ಪಡುವ ಉತ್ಪನ್ನ. ಪುನರ್ಪುಳಿಯ ‘ ಚಾಕೊಲೇಟ್ ಮೋದಕ’ ಅವರ ಹೊಸ ತಯಾರಿ. ಮುಂದಿನ ಗಣೇಶ ಚತುರ್ಥಿಯ ಸಮಯದಲ್ಲಿ ಇದನ್ನು ಬಿಡುಗಡೆ ಮಾಡುವುದು ಅವರ ಪ್ಲಾನ್. ಸಿಪ್ಪೆ, ಬೀಜ, ಸಿರಪ್.. ಇವರ ಇನ್ನಿತರ ಉತ್ಪನ್ನಗಳು.

ಈ ಭಾಗದಲ್ಲಿ ‘ಆಮ್‌ಸೋಲ್’ಗೆ ಹೆಚ್ಚು ಬೇಡಿಕೆ. ಇದು ಪುನರ್ಪುಳಿಯ ಜ್ಯೂಸ್‌ನಲ್ಲಿ ಮುಳುಗಿಸಿದ ಒಣಸಿಪ್ಪೆ. ಮೀನಿನ ಪದಾರ್ಥಕ್ಕೆ ಹುಳಿಯ ಬದಲಿಗೆ ಬಳಕೆ. ‘ಸೋಲ್ಕಡಿ’ – ಹಣ್ಣಿನ ತೆಳು ಉಪ್ಪುಮಿಶ್ರಿತ ರಸ. ತೆಂಗಿನ ಹಾಲು ಸೇರಿಸಿ ಅಥವಾ ಸೇರಿಸದೆಯೂ ಮಾಡುತ್ತಾರೆ. ಅನ್ನದ ಊಟದ ಕೊನೆಯಲ್ಲಿ ಮಜ್ಜಿಗೆ ಬದಲಿಗೆ ಸೋಲ್ಕಡಿ ಬಳಸುವುದೇ ಹೆಚ್ಚು. ಇದನ್ನೇ ಪೇಯವಾಗಿಯೂ ಕೊಡುವುದಿದೆ. ಕೋಕಂ ‘ಚಟ್ನಿ’ಯು ಅನ್ನದ ಜತೆ ನೆಂಜಿಕೊಳ್ಳಲು ಬಳಕೆಯಾಗುತ್ತದೆ.

ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆ ಸೇರಿದ ಕೊಂಕಣ್ ಪ್ರದೇಶದಲ್ಲಿ ಸುಮಾರು ಮುನ್ನೂರಕ್ಕೂ ಮಿಕ್ಕಿ ಮುರುಗಲು ಮೌಲ್ಯವರ್ಧನಾ ಘಟಕಗಳಿವೆ. ಇವುಗಳಲ್ಲಿ ಕಂಪೆನಿಗಳು ಎನ್ನುವಂಥದ್ದು ಬೆರಳೆಣಿಕೆಯವು. ಉಳಿದದ್ದೆಲ್ಲಾ ಬಹುತೇಕ ಗೃಹ ಉದ್ದಿಮೆಯೇ.

ಪುಣೆಯ ಅಪರಾಂತ್ ಆಗ್ರೋ ಫುಡ್ಸ್ ಇದರ ಮುಕುಂದ್ ಭಾವೆ ಅವರ ಕೋಕಂ ಪೇಯ ‘ಫ್ರುಟಿ’ಯಂತೆ ‘ಟೆಟ್ರಾಪ್ಯಾಕ್’ ಹೊದಿಕೆಯಲ್ಲಿ ಪ್ರಪ್ರಥಮವಾಗಿ ಮಾರುಕಟ್ಟೆಗೆ ಬಂದಿದೆ. ಕೋಕಂ ಪೌಡರ್, ಶರಬತ್ ಪೌಡರ್, ಸೋಲ್ಕಡಿ ಪೌಚ್, ಕೋಕಂ ಸೋಡಾ.. ಹೀಗೆ ಐದಾರು ಉತ್ಪನ್ನಗಳನ್ನು ಪುಣೆಯ ಹರ್ಡೀಕರ್ ಟೆಕ್ನಾಲಜೀಸ್ ತಯಾರಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪುನರ್ಪುಳಿ ಬೀಜದಿಂದ ತಯಾರಿಸುವ ಬೆಣ್ಣೆಯನ್ನು ಔಷಧಿಯಾಗಿ ಬಳಸುತ್ತಾರೆ. ‘ಕಾಲು ಒಡೆಯುವುದಕ್ಕೆ ಇದನ್ನು ಲೇಪಿಸಿದರೆ ಶಮನವಾಗುತ್ತದೆ. ನಾವೆಲ್ಲಾ ಇದನ್ನೇ ಬಳಸುವುದು’ ಎಂದು ಶಿರಸಿಗಾಂವ್‌ನ ವೆಂಕಟ್ರಮಣ ಸಿದ್ದಿ ಸ್ವಲ್ಪ ಬೆಣ್ಣೆಯನ್ನು ಅಂಗೈಗೆ ಹಾಕಿದರು. ಭೇದಿಗೆ, ಬೆಂಕಿ ಗಾಯಗಳಿಗೂ ಇದು ಉತ್ತಮ ಔಷಧ. ನಮ್ಮಲ್ಲಿ ಹಲವು ಆಯುರ್ವೇದ ಔಷಧಿ ತಯಾರಿಕಾ ಉದ್ದಿಮೆಗಳು ಇವೆ. ಆದರೆ ಪುನರ್ಪುಳಿ ಬೆಣ್ಣೆಯಿಂದ ಯಾರೂ ಔಷಧಿ ಹೊರತಂದಂತಿಲ್ಲ.

ಚಿಕ್ಕ ಕರಡಿಗೆಯಲ್ಲಿ ಕಾಲೊಡೆಯುವುದಕ್ಕೆ ಹಚ್ಚುವ ಮುಲಾಮು, ಭೇದಿಯ ಗುಳಿಗೆ, ಬೆಂಕಿ ತಗಲಿದಾಗ ಹಚ್ಚಲು ಮನೆಮನೆಗಳಲ್ಲಿ ಇಟ್ಟುಕೊಳ್ಳಬಹುದಾದ ಮುಲಾಮು – ಇಂಥ ಔಷಧಗಳನ್ನು ಹೊರತರುವ ಬಗ್ಗೆ ಉ.ಕ, ದ.ಕ ಜಿಲ್ಲೆಗಳ ಆಯುರ್ವೇದ ಔಷಧ ಕಂಪೆನಿಗಳು ಏಕೆ ಚಿಂತಿಸಬಾರದು? ಮಹಾರಾಷ್ಟ್ರದಂತೆ ಮೌಲ್ಯವರ್ಧಿತ ಘಟಕಗಳು ನಮ್ಮಲ್ಲೂ ಯಾಕಾಗಬಾರದು?

ಅಮೃತಹಾತೀಸ್

ಕೋಕಂ ಎಪ್ರಿಲ್, ಮೇ ತಿಂಗಳುಗಳಲ್ಲಿ ಹಣ್ಣಾಗುತ್ತದೆ. ಈ ಸಮಯದಲ್ಲಿ ಬೇಸಿಗೆ ಮಳೆ ಬರುತ್ತದೆ. iಳೆ ಬಿದ್ದರೆ ಹಣ್ಣುಗಳು ಹಾಳಾಗುತ್ತವೆ. ‘ಕೊಂಕಣ್ ಪ್ರದೇಶವೊಂದರಲ್ಲೇ ಶೇ.೫೦-೭೦ರಷ್ಟು ಹಣ್ಣುಗಳು ಈ ರೀತಿ ಮಳೆಯಿಂದ ಹಾಳಾಗುತ್ತವೆ. ಇದರ ಮೌಲ್ಯ ಸುಮಾರು ೧೫೭ ಲಕ್ಷ ರೂಪಾಯಿ’ ಎಂಬ ಅಂಕಿಅಂಶ ಎದುರಿಡುತ್ತಾರೆ ದಾಪೊಲಿಯ ಡಾ.ಬಾಳಾಸಾಹೆಬ್ ಕೊಂಕಣ್ ಕೃಷಿ ವಿದ್ಯಾಪೀಠದ ತೋಟಗಾರಿಕಾ ವಿಭಾಗದ ಮುಖ್ಯಸ್ಥ ಡಾ.ಪರಾಗ್ ಹಲ್ದಂಕರ್.

ಇದಕ್ಕಾಗಿ ದಾಪೋಲಿ ವಿವಿಯು ಒಂದು ಪ್ರಯೋಗ ಮಾಡಿದೆ – ಹೂ ಬಿಟ್ಟ ನಂತರ ಎರಡು ಸಲ ಪೊಟಾಶಿಯಂ ನೈಟ್ರೇಟ್ ಸಿಂಪಡಿಸುತ್ತಾರೆ. ಇದರಿಂದಾಗಿ ಒಂದು ತಿಂಗಳು ಮುಂಚೆಯೇ ಹಣ್ಣನ್ನು ಪಡೆಯುವುದಕ್ಕಾಗುತ್ತದಂತೆ! ದಾಪೋಲಿಯ ಕೊಂಕಣ್ ಕೃಷಿ ವಿದ್ಯಾಪೀಠವು ‘ಕೊಂಕಣ್ ಅಮೃತ’ ಮತ್ತು ‘ಕೊಂಕಣ್ ಹಾತಿಸ್’ ಎಂಬ ಎರಡು ಪುನರ್ಪುಳಿ ತಳಿಗಳನ್ನು ಅಭಿವೃದ್ಧಿಪಡಿಸಿದೆ.

ಎರಡೂ ತಳಿಗಳಲ್ಲೂ ಪ್ರತ್ಯೇಕವಾಗಿ ಗುಣವಿಶೇಷಗಳು ಕೋಕಮ್ ಅಮೃತವು ಮಾರ್ಚ್-ಎಪ್ರಿಲ್ ಹಣ್ಣು ಕೊಟ್ಟರೆ, ಕೋಕಮ್ ಹಾತಿಸ್ ಎಪ್ರಿಲ್-ಮೇಯಲ್ಲಿ ಇಳುವರಿ ನೀಡುತ್ತದೆ. ಏಳನೇ ವರುಷದಲ್ಲಿ ಅಮೃತ ತಳಿಯು ಒಂದು ಮರದಲ್ಲಿ ಒಂದುನೂರ ಮೂವತ್ತೆಂಟು ಕಿಲೋ ಹಣ್ಣು ಕೊಡುತ್ತದೆ. ಕಿಲೋವೊಂದರಲ್ಲಿ ಇಪ್ಪತ್ತೊಂಭತ್ತು ಹಣ್ಣು ತೂಗುತ್ತದೆ. ಹಾತಿಸ್‌ನಲ್ಲಿ ಇನ್ನೂರೈವತ್ತು ಕಿಲೋ ಹಣ್ಣುಗಳನ್ನು ಮರವೊಂದು ನೀಡಿದರೆ, ಒಂದು ಕಿಲೋದಲ್ಲಿ ತೂಗುವ ಹಣ್ಣುಗಳ ಸಂಖ್ಯೆ ಹನ್ನೊಂದು!

ಕೋಕಮ್ ಸಂಬಾರ ಮಂಡಳಿಯ ‘ಮರ ಸಂಬಾರ’ ವರ್ಗಕ್ಕೆ ಸೇರುತ್ತದೆ. ಆದರೆ ಇಷ್ಟೊಂದು ಉಪಯುಕ್ತ, ಆದರೆ ಅವಗಣಿತ ಹಣ್ಣಿನ ಅಭಿವೃದ್ಧಿಯ ಬಗ್ಗೆ ಸಂಬಾರ ಮಂಡಳಿ ಇನ್ನೂ ಏನೇನೂ ಕಾರ್ಯಕ್ರಮ ಹಾಕಿಕೊಂಡಿಲ್ಲ.

ತಾಜಾ ಹಣ್ಣಿನ ನೇರ ಮಾರಾಟ  

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನ ತರಕಾರಿ ವ್ಯಾಪಾರಿ ಡೇವಿಡ್ ಕರಾವಳಿಯಲ್ಲಿ ತಾಜಾ ಹಣ್ಣಿನ ಮಾರಾಟಕ್ಕೆ ಇಂಬು ಕೊಟ್ಟವರು. ಅಲ್ಲದೆ ಗಿರಾಕಿಗಳಿಗೆ ಹಣ್ಣಿನ ಔಷಧೀಯ ಗುಣಗಳ ಅರಿವನ್ನು ಮೂಡಿಸಿ, ಒಂದಷ್ಟು ಗ್ರಾಹಕ ವಲಯವನ್ನು ರೂಪಿಸಿದ ಹೆಗ್ಗಳಿಗೆ ಇವರಿಗಿದೆ. ಮಂಗಳೂರು ನಗರವೊಂದರಲ್ಲೇ ಒಂದು ವರುಷಕ್ಕೆ ___ ಟನ್ ಪುನರ್ಪುಳಿಯ ತಾಜಾ ಹಣ್ಣು ಅಡುಗೆ ಮನೆ ಸೇರುತ್ತಿದೆ. ಊರಿಗೆ ಬಂದ ಕಡಲಾಚೆಯ ಬಂಧುಗಳು ಊರಿನ ನೆನಪಿಗಾಗಿ ಒಯ್ಯುತ್ತಾರಂತೆ.

ಪುನರ್ಪುಳಿಯಲ್ಲಿರುವ ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ ಬೊಜ್ಜು ಬೆಳೆಯುವುದನ್ನು ತಡೆದು ನಮ್ಮ ದೇಹದಲ್ಲಿ ಹೆಚ್ಚು ಕೊಲೆಸ್ಟರಾಲ್ ಸೇರದಂತೆ ನೋಡಿಕೊಳ್ಳುತ್ತದೆ. ಕೋಕಮಿನಿಂದ ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ ಪ್ರತ್ಯೇಕಿಸಿ ನಮ್ಮಲ್ಲಿಂದ ಅಮೆರಿಕಾಕ್ಕೆ ರಫ್ತು ಮಾಡುತ್ತಾರೆ. ಆಯುರ್ವೇದದ ಪ್ರಕಾರ ಪುನರ್ಪುಳಿಗೆ ಪಿತ್ತಶಮನ ಮಾಡುವ, ರಕ್ತ ವರ್ಧಿಸುವ ಗುಣಗಳಿವೆ.