“ದಾಸರೆಂದರೆ ಪುರಂದರದಾಸರಯ್ಯ” ಎಂಬ ವ್ಯಾಸರಾಯರ ಮಾತುಗಳನ್ನು ಕೇಳಿದಾಗ ಆಗಿನ ಕಾಲಕ್ಕೆ ಪುರಂದರದಾಸರು ಎಷ್ಟು ದೊಡ್ಡವರಾಗಿದ್ದರು ಎನ್ನುವುದು ನಮಗೆ ತಿಳಿಯುತ್ತದೆ.

ಅವರು ಸ್ವರ್ಗಸ್ತರಾಗಿ ಸುಮಾರು ನೂರೈವತ್ತು ವರ್ಷಗಳು ಕಳೆದ ಬಳೀಕ, ಹರಿದಾಸ ಪರಂಪರೆಯನ್ನು ಮತ್ತೇ ಮುಂದುವರೆಸಿದ ವಿಜಯದಾಸರು, ಪುರಂದರದಾಸರನ್ನು ಕುರಿತು ತಮ್ಮ ಕಾಲದಲ್ಲಿ ಬಳಕೆಯಲ್ಲಿದ್ದ  ಕಥೆಗಳನ್ನು ಅಧಾರವಾಗಿಟ್ಟುಕೊಂಡು ಕೆಲವು ಕೀರ್ತನೆಗಳನ್ನು ಬರೆದಿರುವುದು ಕಂಡುಬರುತ್ತದೆ. ಇವುಗಳೇ ಪುರಂದರದಾಸರ ಜೀವನಚರಿತ್ರೆಯನ್ನು ಮೊತ್ತ ಮೊದಲಿಗೆ ತಿಳಿಸಿಕೊಡುವ ಪ್ರಮಾಣಗಳು. ಆ ಪ್ರಕಾರ ಪುರಂದರದಾಸರನ್ನು ಕುರಿತು ಕಥೆ ಹೀಗಿದೆ.

ಸವಕಲು ಕಾಸ ದಾನ:

ಪುರಂದರದಾಸರು ಪುರಂದರಘಡದಲ್ಲಿ ಹುಟ್ಟಿ ಬೆಳೆದವರು. ಅವರ ಮೊದಲ ಹೆಸರು ಶ್ರೀನಿವಾಸ ನಾಯಕ. ಅವರು ತಮ್ಮ ವಂಶಪಾರಂಪರ್ಯವಾಗಿ ಬಂದ ರತ್ನಪಡಿ ವ್ಯಾಪಾರವನ್ನೇ ಕೈಗೊಂಡರು. ಬಹು ಶ್ರೀಮಂತರಾದರು. ಸ್ವಭಾವತಃ ತುಂಬಾ ಜಿಪುಣರಾಗಿದ್ದರು. ಕಾಸಿಗೆ ಕಾಸು ಗಂಟುಹಾಕುವರು. ಹಣದ ಆಸೆಯಲ್ಲಿ ಬೇರೆಲ್ಲವನ್ನು ಮರೆತ್ತಿದ್ದರು.

ಅವರಿಗೆ ತಿಳಿವನ್ನು ಉಂಟು ಮಾಡಲು ಭಗವಂತನು ಬಡ ಬ್ರಾಹ್ಮಣನ ವೇಷದಲ್ಲಿ ಬಂದನಂತೆ. ತನ್ನ ಮಗನ ಮುಂಜಿಗಾಗಿ ಧನಸಹಾಯ ಮಾಡಬೇಕೆಂದು ಶ್ರೀನಿವಾಸ ನಾಯಕರ ಬೆನ್ನು ಹತ್ತಿದನು.

ಹಲವಾರು ದಿವಸಗಳ ಕಾಲ ಕಳೆದವು. ನಾಯಕರು ಏನೋ ಕೊಡಲೊಲ್ಲರು: ಬ್ರಾಹ್ಮಣನು ಬಿಡಲೊಲ್ಲ. ಬ್ರಾಹ್ಮಣನು ಒಂದೇ ಸಮನಾಗಿ ಶ್ರೀನಿವಾಸನಾಯಕರ ಅಂಗಡಿಯ ಬಾಗಿಲಿಗೆ ಬಂದೂ ಬಂದೂ ಹೋಗಬೇಕಾಯಿತು.

ಕಡೆಗೊಂದು ದಿನ ಶ್ರೀಣಿವಾಸನಾಯಕರು ಬ್ರಾಹ್ಮಣನ ಕಾಟವನ್ನು ತಡೆಯಲಾರದೇ ತಾವು ಶೇಖರಿಸಿಟ್ಟಿದ್ದ ಸವಕಲು ನಾಣ್ಯಗಳನ್ನೆಲ್ಲ ತಂದು, ಬ್ರಾಹ್ಮಣನ ಮುಂದೆ ರಾಶಿ ಹಾಕಿ, “ಇದರಲ್ಲಿ ಒಂದು ನಾಣ್ಯ ತೆಗೆದುಕೋ, ಮತ್ತೇ ಬಂದು ನನ್ನನ್ನು ಕಾಡಬೇಡ” ಎಂದರು. ಬ್ರಾಹ್ಮಣ ಬೇಸರಪಟ್ಟುಕೊಂಡು ಅಲ್ಲಿಂದ ಹೊರಟು ಬಿಟ್ಟ.

ಮೂಗುತಿಯ ದಾನ :

ನಾಯಕರ ಹೆಂಡತಿ ತುಂಬಾ ಮೃದು ಸ್ವಭಾವದವಳು. ಗಂಡನ ಜಿಪುಣತನಕ್ಕಾಗಿ ಆಕೆಗೆ ಬೇಸರ. ಬ್ರಾಹ್ಮಣ ಶ್ರೀನಿವಾಸನಾಯಕರ ಅಂಗಡಿ ಬಿಟ್ಟವನು ನೇರವಾಗಿ ಅವರ ಮನೆಗೆ ಹೋದ. ಅವರ ಹೆಂಡತಿಯ ಸರಸ್ವತಿಯನ್ನು ಬೇಡಿದ: “ನನ್ನ ಮಗನಿಗೆ ಉಪನಯನ ಮಾಡಬೇಕು, ಸಹಾಯ ಮಾಡಿ”.

ಅವನಿಗೆ ಸಹಾಯ ಮಾಡಬೇಕೆಂದು ಆಕೆಗೆ ಹಂಬಲ. ಆದರೆ ಗಂಡನನ್ನು ಕೇಳದೇ ಕೊಡುವಂತಿಲ್ಲ. ಗಂಡನ ಜಿಪುಣ ಸ್ವಭಾವವೂ ಆಕೆಗೆ ತಿಳಿದದ್ದೇ.

ಆಕೆ ಹೇಳಿದಳು :”ನಾನೇನು ಮಾಡಲಿ?  ಯಜಮಾನರು ಮನೆಯಲ್ಲಿಲ್ಲ. ಅವರನ್ನು ಕೇಳದೇ ಎನನ್ನೂ ಕೊಡುವಂತಿಲ್ಲ; ಏನು ಕೊಡುವ ಸ್ವಾತಂತ್ರವು ನನಗಿಲ್ಲ”.

ಬ್ರಾಹ್ಮಣ ಹೇಳಿದ : ” ತಾಯಿ, ನಿಮ್ಮ ತವರು ಮನೆಯಲ್ಲಿ ಕೊಟ್ಟ ಒಡವೆ ಇರಬಹುದಲ್ಲವೇ? ಅದನ್ನು ನೀವು ಕೊಡಬಹುದಲ್ಲವೇ”

ಸರಸ್ವತಿಗೆ ತಾಯಿಯ ಮನೆಯಲ್ಲಿ ವಜ್ರದ ಮೂಗೂತಿ ಕೊಟ್ಟಿದ್ದರು.  ಆಕೆಗೆ ಅದು ನೆನಪಾಯಿತು. ಮೂಗೂತಿಯನ್ನು ತೆಗೆದು, “ಕೃಷ್ಣಾರ್ಪಣ” ಎನ್ನುತ್ತ ಬ್ರಾಹ್ಮಣನ ಕೈಗೆ ಹಾಕಿದಳು.

ಮೂಗೂತಿ ಕಣ್ಣು ತೆರೆಸಿತು !

ಬ್ರಾಹ್ಮಣ ಮೂಗೂತಿಯನ್ನು ತೆಗೆದುಕೊಂಡು ನೇರವಾಗಿ ಶ್ರೀನಿವಾಸನಾಯಕರ ಅಂಗಡಿಗೆ ಬಂದ. ನಾಯಕರಿಗೆ ಅವನನ್ನು ನೋಡಿ ಸಿಟ್ಟು ಬಂತು. “ಮತ್ತೇ ಬರಬೇಡ ಎಂದು ಹೇಳಿರಲಿಲ್ಲವೇ? ಏಕೆ ಬಂದೆ” ಎಂದು ಗದರಿಸಿದ.

ಬ್ರಾಹ್ಮಣನು ಉತ್ತರಿಸಿದ. “ನಿಮ್ಮನ್ನು ಬೇಡಿ ತೊಂದರೆ ಕೊಡಲು ಬಂದಿಲ್ಲ. ನನ್ನ ಹತ್ತಿರ ಒಂದು ಒಡವೆ ಇದೆ. ಅದನ್ನು ಒತ್ತೇ ಇಟ್ಟುಕೊಂಡು ಸಾಲ ಕೊಡಿ”.

ನಾಯಕರಿಗೆ  ಈ ಬಡವನ ಬಳಿ ಏನು ಒಡವೆ ಇದ್ದೀತು? ಎಂದು ತಿರಸ್ಕಾರ. “ಸರಿ  ಕೊಡು ನೋಡೋಣ” ಎಂದರು.

ಬ್ರಾಹ್ಮಣನು ಮೂಗೂತಿಯನ್ನು ತೆಗೆದುಕೊಟ್ಟ.

ನಾಯಕರಿಗೆ  ಆಶ್ಚರ್ಯವಾಯಿತು. ಅದು ತಮ್ಮ ಹೆಂಡತಿಯ ಮೂಗೂತಿ ಇರಬಹುದೇ ಎಂದು ಅನುಮಾನವಾಯಿತು. “ಇದು ನಿನಗೆ ಎಲ್ಲಿ ಸಿಕ್ಕಿತ್ತು?” ಎಂದು ಕೇಳಿದರು.

“ಯಾಕೆ? ಅದನ್ನು ಕದ್ದಿದ್ದೇನೆ ಎಂದು ಅನುಮಾನವೇ ಎಂದ ಬ್ರಾಹ್ಮಣ.

“ಹಾಗಲ್ಲ , ಕೇಳಿದೆ” ಎಂದರು ನಾಯಕರು,.

“ಯಾರೋ ನಿಮ್ಮಂತಹ ಧಾರಾಳಿಗಳು ದಾನ ಕೊಟ್ಟರು. ಅದರ ಬೆಲೆ ಕಟ್ಟಿ ಸಾಲ ಕೊಡಿ. ನಾನು ಹೋಬೇಕು, ಹೊತ್ತಾಯಿತು” ಎಂದ ಬ್ರಾಹ್ಮಣ.

ನಾಯಕರು ಅವನನ್ನು ಮರುದಿನ ಬರುವಂತೆ ಹೇಳಿ,. ಮೂಗೂತಿಯನ್ನು ಭದ್ರವಾಗಿ ಪೆಟ್ಟಿಗೆಯಲ್ಲಿಟ್ಟು, ಮನೆಗೆ ಹೋದರು. ಹೆಂಡತಿಯನ್ನು ಕೇಳಿದರು: : “ಮೂಗೂ ಬರಿದಾಗಿದೆಯಲ್ಲ, ಮೂಗೂತಿ ಏನಾಯಿತು?”

ಸರಸ್ವತಿಗೆ ದಿಕ್ಕು ತೋಚದಂತಾಯಿತು. “ಒಳಗೆ ತೆಗೆದಿಟ್ಟಿದ್ದೇನೆ” ಎಂದಳೂ.

“ತೆಗೆದಿಟ್ಟೀದಿಯೇ? ಭದ್ರವಾಗಿದೆ ತಾನು ? ಸುಳ್ಳು ಹೇಳಬೇಡ.”

“ಇಲ್ಲ ಒಳಗಿಟ್ಟಿದ್ದೇನೆ”.

ನಾಯಕರಿಗೆ ಮೈಯೆಲ್ಲ ಉರಿಯುತ್ತಿತ್ತು. ಬೆಲೆ ಬಾಳುವ ವಜ್ರದ ಮೂಗೂತಿಯನ್ನು ಭಿಕಾರಿಗೆ ಇವಳು ಕೊಟ್ಟು ಬಿಟ್ಟಳೇ ಎಂದು ಅವರಿಗೆ ಕೋಪ. “ಹಾಗಾದರೆ ತೆಗೆದುಕೊಂಡು ಬಾ. ಅದಿಲ್ಲದಿದ್ದರೆ ಏನಾಗುತ್ತದೆ ಯೋಚಿಸು” ಎಂದರು ನಾಯಕರು.

ಸರಸ್ವತಿಗೆ  ಈಗ ಭೂಮಿಯೇ ಕುಸಿದಂತಾಯಿತು. ಮೂಗೂತಿ ಬ್ರಾಹ್ಮಣನಿಗೆ ಕೊಟ್ಟಾಯಿತು. ಅದನ್ನು ತೋರಿಸದಿದ್ದರೆ ಗಂಡ ಸುಮ್ಮನೆ ಬಿಡುವುದಿಲ್ಲ, “ನಾನು ಅದನ್ನು ದಾನ ಮಾಡಿದೆ ಎಂದರೆ ಚರ್ಮ ಸುಲಿದಾರು !

“ಸರಿ , ಇನ್ನು ಬದುಕಿರಬಾರದು” ಎಂದು ಆಕೆ ತೀರ್ಮಾನಿಸಿದಳು. ಪ್ರಾಣ ಬಿಡಲು ವಿಷವನ್ನು ಬಟ್ಟಲಿಗೆ ಹಾಕಿಕೊಂಡು ಬಟ್ಟಲನ್ನೆತ್ತಿದಳು.

“ಠಣ್” ಎಂದು ಶಬ್ದವಾಯಿತು. ವಜ್ರದ ಮೂಗೂತಿ ಬಟ್ಟಲ್ಲಿ ಬಿದ್ದಿತು.

ಸರಸ್ವತಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಕಣ್ಣುಜ್ಜಿ ನೋಡಿದಳು. ವಜ್ರ ಥಳಥಳ ಹೊಳೆಯುತ್ತಿತ್ತು.

ಕೃತಜ್ಞತೆಯಿಂದ ಅವಳ ಮನಸ್ಸು ತುಂಬಿ ಬಂದಿತು. ದೇವರಿಗೆ ನಮಸ್ಕರಿಸಿ ಮೂಗೂತಿಯನ್ನು ನಾಯಕರ ಬಳಿಗೆ ತೆಗೆದುಕೊಂಡು ಹೋದಳು.

ಈಗ ನಾಯಕರಿಗೆ ತಮ್ಮ ಕಣ್ಣನ್ನು ನಂಬಲಾಗಲಿಲ್ಲ. ಇದು ಅದೇ ಮೂಗೂತಿ, ಬ್ರಾಹ್ಮಣ ತಂದ ಮೂಗೂತಿಯೇ, ಅನುಮಾನವೇ ಇಲ್ಲ.

ಬ್ರಾಹ್ಮಣನಿಗೆ ಕೊಟ್ಟ ಮೂಗೂತಿ ಹೇಗೆ ಬಂದಿತು?"

“ಬ್ರಾಹ್ಮಣನಿಗೆ ಕೊಟ್ಟ ಮೂಗೂತಿ ಮತ್ತೇ ಹೇಗೆ ಬಂದಿತು? ನಿಜ ಹೇಳು” ಎಂದು ಹೆಂಡತಿಯನ್ನು ಕೇಳಿದರು.

ಸರಸ್ವತಿ ನಡೆದುದನ್ನು ಹೇಳಿದರು.

ಶ್ರೀನಿವಾಸ ನಾಯಕರು ಬೆರಗಾದರು. ಅಂಗಡಿಗೆ ಹೋಗಿ ಪಟ್ಟಿಗೆ ತೆಗೆದು ನೋಡಿದರು. ಬರಿದಾಗಿತ್ತು.

ನಾಯಕರ ಕಣ್ಣು ತೆರೆಯಿತು. ಹಣದ ಬೇಟೆಯಲ್ಲಿ ಮುಳುಗಿದ್ದ ತನ್ನ ಕಣ್ಣನ್ನು ತೆರೆಸಲು ಭಗವಂತ ಬ್ರಾಹ್ಮಣ ರೂಪದಲ್ಲಿ ಬಂದಿದ್ದ ಎಂದು ಅರ್ಥವಾಯಿತು. ತಮಗಿಂತ ತಮ್ಮ ಪತ್ನಿಯೇ ಔದಾರ್ಯದಿಂದ , ವಿವೇಕದಿಂದ ನಡೆದುಕೊಂಡಳು ಎನ್ನಿಸಿತು.

ತಮ್ಮ ಜಿಪುಣತನಕ್ಕೆ ತಾವೇನಾಚಿಕೊಂಡ  ಐಶ್ವರ್ಯವನ್ನೆಲ್ಲ ದಾನ ಮಾಢಿ “ಕೃಷ್ಣಾರ್ಪಣ ” ಎಂದರು. ಹರಿದಾಸರಾದರು.

ವಿಜಯದಾಸರ ಮೂಲಕ ತಿಳಿದುಬರುವ ಈ ಸಂಗತಿಗಳಲ್ಲಿ ಅಲ್ಪಸ್ವಲ್ಪ ಅನುಮಾನಕಂಡುಬರಬಹುದು. ಆದರೂ, ಪುರಂದರದಾಸರ ರಚಿಸಿರುವ ಕೆಲವು ಕೀರ್ತನೆಗಳ ಬೆಳಕಿನಲ್ಲಿ ಈ ಕಥೆಯನ್ನು ಪರಿಶೀಲಿಸಿದರೆ ಹಲವು ಕೆಲವು ನಿಜ್ಕೆಕ ಹತ್ತಿರದ ಗುರುತಳನ್ನು ಕಾಣಬಹುದು.  ವಿಜಯದಾಸರಿಗೆ ಪುರಂದರದಾಸರಲ್ಲಿ ತುಂಬ ಭಕ್ತಿ. ಪುರಂದರದಾಸರು ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡು “ವಿಜಯವಿಠಲ” ಎಂಬ ಅಂಕಿತವನ್ನು ಅನುಗ್ರಹಿಸಿದರೆಂದು ಹೇಳಿಕೆಯಿದೆ.

ಕರ್ನಾಟಕದ ಹರಿದಾಸರು:

ಕನ್ನಡ ನಾಡಿನಲ್ಲಿ ಕ್ರಿಸ್ತಶಕ ಹದಿನೈದನೆಯ ಶತಮಾನ ಮೊದಲ್ಗೊಂಡು ಹತ್ತೊಂಬತ್ತನೆಯ ಶತಮಾನದವರೆಗೆ ಅನೇಕ ಹರಿದಾಸರು ಆಗಿ ಹೋಗಿರುತ್ತಾರೆ.  ಶ್ರೀಪಾದರಾಜರು ವ್ಯಾಸರಾಯರು, ವಾದಿರಾಜರು, ಮುಂತಾದವರು ಮಠಾಧಿಪತ್ಯವನ್ನು ವಹಿಸಿದ್ದರೂ ಹರಿದಾಸ ಕಾರ್ಯವನ್ನು ಕಡೆಗಣಿಸಿದವರಲ್ಲ. ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿ ಇತರರಿಗೆ ಮೇಲು ಪಂಕ್ತಿ ಹಾಕಿ ಕೊಟ್ಟಿರುತ್ತಾರೆ.  ವ್ಯಾಸರಾಯರಂತೂ ಹರಿದಾಸ ಪರಪಂಪರೆಗೆ ಒಂದು ಭದ್ರವಾದ ವ್ಯವಸ್ಥೆಯನ್ನು ಏರ್ಪಡಿಸಿದರು ಎನ್ನಬಹುದು. ಅವರಿಂದ  ಪುರಂದರದಾಸರಿಂದ ಈ ಪರಂಪರೆಗೆ ವಿಶಿಷ್ಟವಾದ ಸ್ಥಾನಮಾನಗಳು ದೊರೆತವು. ಪುರಂದರದಾಸರ ಕಾಲದವರೇ ಆಗಿ ಬಹು ಅರ್ಥವತ್ತಾದ ಕೀರ್ತನೆಗಳನ್ನು ರಚಿಸಿರುವ ಕನಕದಾಸರನ್ನು ಮೆಚ್ಚಿದರೂ ಸಾಲದು. ಇದೇ ಕಾಲದಲ್ಲಿ ಬೇಲೂರಿನಲ್ಲಿ ಬಾಳಿ ಬದುಕಿದ ವೈಕುಂಠದಾಸರ ಮೇಲ್ಮೆಯೂ ಮಿಗಿಲಾದುದು. ಇವರಂತೆಯೇ ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಪ್ರಸನ್ನ ವೆಂಕಟದಾಸರು, ಮೋಹನದಾಸರು, ಆನಂದದಾಸರು,  ಮೊದಲಕಲ್ಲು, ಶೇಷದಾಸರು- ಮುಂತಾದವರು ಈ ಹರಿದಾಸರ ಸಂಪ್ರದಾಯವನ್ನು ಒಂದೇ ರೀತಿಯಾಗಿ ಬೆಳೆಸಿ ಬೆಳಗಿದವರಲ್ಲಿ ಪ್ರಮುಖರಾಗಿದ್ದಾಋಎ. ಇಂದಿಗೂ ಹೆಸರಳಿಯದೇ ಉಳಿದು ಬಂದಿರುವ ಈ ಪರಂಪರೆಯನ್ನು ಕಂಡರೆ ಯಾರಿಗಾದರೂ ಹೆಮ್ಮಯಾಗದೆ ಇರದು.

ಶ್ರೀಪದರಾಜರು ತಮ್ಮ ಪೂಜಾ ಕಾಲದಲ್ಲಿ, ಕೀರ್ತನೆ ಸೇವೆಗಾಗಿ ಕನ್ನಡದಲ್ಲಿ ಕೃತಿಗಳನ್ನು ರಚಿಸಿ, ತಾಳ ತಂಬೂರಿ, ಕಾಲಿನ ಗೆಜ್ಜೆಗಳೊಂದಿಗೆ ಹಾಡಲು ತೊಡಗಿದ ಒಂದು ಪದ್ಧತಿ ಕಾಲಕಾಲಕ್ಕೆ ಪುಷ್ಟಿ ಪಡೆದು ಸಂಪ್ರದಾಯವಾಯಿತು. ಆ ಕ್ಷೇತ್ರದಲ್ಲಿ ಗಟ್ಟಿಗರಾದ ತಮ್ಮ ಶಿಷ್ಯ ಪುರಂದರದಾಸರ ತೇಜಸ್ಸು, ಯಶಸ್ಸುಗಳನ್ನು ಮೆಚ್ಚಿಕೊಂಡು ವ್ಯಾಸರಾಯರು “ದಾಸರೆಂದರೆ ಪುರಂದರದಾಸರಯ್ಯ” ಎಂದಿದ್ದಾರೆ.

ಕೀರ್ತನೆಗಳಲ್ಲಿ ಜೀವನದ ವಿವರ :

ಹೆಂಡತಿಯಿಂದ ಶ್ರೀನಿವಾಸನಾಯಕರ ಜೀವನದಲ್ಲಿ ಬದಲಾವಣೆಯಾಗಿ ಅವರು ಪುರಂದರದಾಸರಾದರು. ಎಂಬುವುದನ್ನು ನಂಬುವುದಕ್ಕೆ ಬೆಂಬಲವೋ ಎಂಬಂತೆ ಪುರಂದರದಾಸರು ತಮ್ಮ ಒಂದು ಕೀರ್ತನೆಯಲ್ಲಿ ತಮ್ಮ ಹೆಂಡತಿಯನ್ನು ಬಾಯಿ ತುಂಬ ಹೊಗಳಿ, “ಆದದ್ದೆಲ್ಲ ಒಳಿತೇ ಆಯಿತು. ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು” ಎಂದು ಮನಬಿಚ್ಚಿ ಹಾಡಿರುವುದನ್ನು ಗಮನಿಸಬಹುದು. ಅಹಂಕಾರದಿಂದ ಬೀಗಿ ಮರೆಯುತ್ತಿದ್ದ ತಾವು, ಪತಿನಯ ಮೂಲಕ ವಿರಕಿತಯನ್ನು ಗಳಿಸಿ, ತಾಳ ತಂಬೂರಿಗಳನ್ನು ಹಿಡಿದು ಹೇಗೆ ಹರಿದಾರಾದರೆಂಬುವುದನ್ನು ಸ್ಪಷ್ಟವಾಗಿ ನಿರೂಪಿಸಿರುತ್ತಾರೆ. ಒಂದು ಕಾಲಕ್ಕೆ ವರ್ತಕರಾಗಿ ಬದುಕನ್ನು ನಡೆಸಿದ ಅವರಿಗೆ, ತಾವು ಹರಿದಾಸರಾದ ಬಳಿಕ ತಮ್ಮ ನೂತನ ವ್ಯವಹಾಋವನ್ನು ಕಂಡು ಸ್ವತಃ ಅಶ್ಚರ್ಯವಾಗುವುದು. ಆದರೆ ತಮ್ಮ ಜೀವನದಲ್ಲಿ ಆದ ಬದಲಾವಣೆಗಾಗಿ ಸಂತೋಷಪಟ್ಟುಕೊಂಡು “ವ್ಯಾಪಾರ ನಮಗಾಯಿತು, ಶ್ರೀಪತಿಯ ಪಾದಸೇವೆಯೆಂಬ “ವ್ಯಾಪಾರ ನಮಗಾಯಿತು. ಎಂದು ತಾವೇ ಹೇಳಿಕೊಂಡಿರುತ್ತಾರೆ. ಅವರಿಗೆ ಸರಸ್ವತಿ ಬಾಯಿಯ ಮೂಲಕ ಮನಸ್ಸು ಹೇಗೆ ಬದಲಾಯಿಸಿತು ಎಂಬ ವಿವರ ಸಾಕಷ್ಟು ಖಚಿತವಾಗಿ ತಿಳಿದುಬಾರದಿದ್ರೂ ಯಾವುದೋ ಅನಿರೀಕ್ಷಿತ ಘಟನೆಯೊಂದು ಅವರ ಜೀವನದಲ್ಲಿ ನಡೆದಿರಬೇಕೆಂಬುವುದಕ್ಕೆ ಅವರ ಈ ಎರಡು ಕೀರ್ತನೆಗಳು ಸಾಕ್ಷಿಯಾಗಿವೆ. “ದಂಡಿಗೆ ಬೆತ್ತ ಹಿಡಿಯುವುದಕ್ಕೆ ನಾಚುತ್ತಿದ್ದ” ಅವರನ್ನು ದಂಡಿಗೆ (ತಂಬೂರಿ) ಬೆತ್ತ ಹಿಡಿಯುವಂತೆ ಮಾಡಿದವಳು ಆ ಮಡದಿ! ಗೋಪಾಲ ಬುಟ್ಟಿ ಹಿಡಿಯುವುದಕ್ಕೆ ಗರ್ವಿಸುತ್ತಿದ್ದ”ಅವರಿಗೆ  ಆ ಬಗ್ಗೆ ಅಭಿಮಾನ ಉಂಟು ಮಾಡಿದವಳು ಆ ಅರ್ಧಾಂಗಿ! (ಗೋಪಾಳ ಬುಟ್ಟ ಎಂದರೆ ಭಿಕ್ಷೆ ಬೇಡುವ ಜೋಳಿಗೆ, ಪಾತ್ರ). ಆಕೆಯ ಬಗ್ಗೆ ಅವರಿಗೆ ಆಗಿರುವ ಆನಂದವೋ ಅಷ್ಟಿಷ್ಟಲ್ಲ! ಹೆಂಡತಿ ಸಂತತತಿ ಸಾವಿರಬಾಗಲಿ, ಆ ಪತಿನ ಕುಲ ಸಾವಿರವಾಗಲಿ” ಎಂದು ಆಕೆಯನ್ನು ಹೊಗಳಿ ಹಿಗ್ಗುವುದಲ್ಲದೇ, ಈ ಎಲ್ಲಾ ಕಾರ್ಯಗಳಿಗೂ ಪ್ರೇರಕನಾಗಿರುವ ಪರಮಾತ್ಮನನ್ನು ಸ್ಮರಿಸಿ, “ಸರಸಿಜಾಕ್ಷಿ (ತಾವರೆಯಂತಹ ಕಣ್ಣುಳ್ಳ) ಪುರಂದರ ವಿಠಲನು ತುಳಸಿ ಮಾಲೆ ಹಾಕಿಸಿದನು” ಎಂದು ತಮ್ಮ  ಹಿಂದಿನ ಲೌಕಿಕವಾದ ವ್ಯಾಪಾರದ ರೀತಿಗೂ ನೂತನ ವ್ಯಾಪಾರ ವಿಧಾನಕ್ಕೂ ಇರುವ ವ್ಯತ್ಯಾಸಗಳನ್ನು ಬಗೆಬಗೆಯಾಗಿ ವಿವರಿಸಿರುತ್ತಾರೆ. ಈಗ ಅವರು ಕೈಗೊಂಡಿರುವ ವ್ಯಾಪಾಋದ ಲಕ್ಷಣವನ್ನಾದರೂ ಹೀಗೆ ವಿವರಿಸುವರು: “ಹರಿಕರುಣವೇ ಅಂಗಿ, ಗುರುಕರುಣ ಮುಂಡಾಸು(ತಲೆಯ ಭೂಷಣ), ಹರಿದಾಸರ ದಯವೆಂಬೋ ವಲ್ಲಿ (ಮೈಮೇಲೆ ಹೊದೆಯುವ ಬಟ್ಟೆ), ಪರಮಪಾಪಿ ಎಂಬ ಪಾಪಾಸು (ಚಪ್ಪಲಿ) ಮೆಟ್ಟಿ, ದುರಾತ್ಮರಾದವರ ಎದೆಯ ಮೇಲೆ ನಡೆದಂತ ವ್ಯಾಪಾರವಿದು. “ಬಿಳಿಯ ಕಾಗದ ಹೃದಯ, ಬಾಯಿ ಕಲಮದಾನಿ (ಶಾಯಿ ಕುಡಿಕೆ),ನಾಲಿಗೆ ಎಂಬೋದು ಲೇಖಣಿಕೆಯು, ಶ್ರೀ ಲೋಲನ ಕಥೆ ದಿವ್ಯ ನಾಮಂಗಳ ಶೀಲ ಮನದಿ ಬರೆದು ಹರಿಗೆ ಒಪ್ಪಿಸುವಂಥ:” ವ್ಯಾಪಾರವಿದು! ಪುರಂದರದಾಸರು ಆಡಿದ ಈ ಮಾತುಗಳ ಸುತತಲೂ ಹಲವಾರು ಕಥೆಗಳು ಬಿದಿರುಮೇಳೆಯಂತೆ ಬೆಳೆದುಕೊಂಡು ನಮ್ಮನ್ನು ತಬ್ಬಿಬ್ಬು ಮಾಡುತ್ತವೆ. ಆ ಐತಿಹ್ಯಗಳು ಹೇಗಾದರಿರಲಿ: ಮುತ್ತಿನಂತಹ ಅವರ ಮಾತುಗಳ  ಮೂಲಕ ಅವರ ಜೀವನದ ಮಹತ್ವವೇನು ಎನ್ನವುದುನ್ನು ನಾವು ತಿಳಿಯಬಹುದು.

ನಾಯಕರು ದಾಸರಾದನಂತರ:

ಶ್ರೀನಿವಾಶನಾಯಕರು ಶ್ರೀನಿವಾಶನ ಗಾಯಕರಾಗಿ ನಿಂತ ಬಳೀಕ, ಗುರೂಪದೇಶವನ್ನು ಪಡೆಯಲು ವ್ಯಾಸರಾಯರನ್ನು ಆಶ್ರಯಿಸಿದರು. ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡಲ್ಲಿಯೂ ಕೃತಿಗಳನ್ನು ರಚಿಸಿ ಸರ್ವ ಸಾಮಾನ್ಯರಾಗಿದ್ದ ವ್ಯಾಸರಾಯರು ವಿರಕ್ತರಾದ ನಾಯಕರಿಗೆ “ಪುರಂದರ ವಿಠಲ” ಎಂಬ ಅಂಕಿತವನ್ನು ನೀಡಿ ಹೃತ್ಪೂರ್ವಕವಾಗಿ ಹರಿಸಿದರು.  ಪುರಂದರದಾಸರು ತಮ್ಮ ಕೃತಿಯೊಂದರಲ್ಲಿ “ಗುರು ವ್ಯಾಸರಾಯರ ಚರಣವೆನಗೆ ಗತಿ. ಪುರಂದರ ವಿಠಲನ ಅರಿತೇ ಇವರಿಂದ ಎಂಬುವುದಾಗಿ ತಮ್ಮ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.

ನವಕೋಟಿ ನಾರಾಯಣರೆಂದು ಸುಪ್ರಸಿದ್ಧರಾಗಿದ್ದ ಶ್ರೀನಿವಾಸನಾಯಕರು ತಮ್ಮ ಕುಲಕೋಟೆಯನ್ನು ಉದ್ಧಾರ ಮಾಢುವ ಶ್ರೀಮನ್ನಾರಾಯಣನ ದಾಸರಾಗಿ, ಹೆಂಡತಿ ಮಕ್ಕಳೊಂದಿಗೆ ಹೊಸ ಜೀವನವನ್ನೇ ಆರಂಭಿಸಿದರು. ಪುರಂದರದಾಸರಂತೆಯೇ ಅವರ ಹೆಂಡತಿ ಮತ್ತು ಮಕ್ಕಳೂ ಹಲವಾರು ಕೀರ್ತನೆಗಳನ್ನು ರಚಿಸಿರುವುದಾಗಿ ತಿಳಿದುಬರುತ್ತದೆ.

ಪುರಂದರದಾಸರು ಹಂಪೆಗೆ ಬಂದು ನೆಲೆಸಿದರು. ಅವರಿಗೆ ನಾಲ್ಕು ಜನ ಮಕ್ಕಳು- ವದಪ್ಪ, ಗುರುರಾಯ, ಆಭಿನವಪ್ಪ, ಮತ್ತು ಗುರುಮಧ್ವಪತಿ. ದಿನವೂ ಬೆಳಿಗ್ಗೆ ದಾಶರ ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಲ್ಲಿ ತುಳಸೀಮಣಿ ಧರಿಸಿ ತಂಬೂರಿ ಮೀಟುತ್ತ ಹಾಢುತ್ತ ರಸ್ತೆಯಲ್ಲಿ ಸಾಗುವರು. ಅವರು ಹಾಡುತ್ತಿದ್ದ ಹಾಡುಗಳು ಅವರೇ ರಚಿಸಿದ್ದವು. ಶ್ರೀ ಕೃಷ್ಣನ ಲೀಲೆಗಳನ್ನು ವರ್ಣಿಸುವ ಹಾಡುಗಳು, ದೇವರ ಕರುಣೆಯನ್ನು ನಿರೂಪಿಸಸುವ ಹಾಡುಗಳೂ, ವೇದ-ಉಪನಿಷತ್ತು-ಭಗವದ್ಗೀತೆಗಳ ಸಾರವನ್ನು ಸುಲಭವಾಗಿ ತಿಳಿಸಿಕೊಡುವ ಹಾಡುಗಳು, ಭಗವಂತನನ್ನು ಪ್ರೀತಿಯಿಂದ ಹೊಗಳುವ ಹಾಡುಗಳೂ, ಪ್ರೀತಿಯಿಂದ ಹಾಸ್ಯ ಮಾಢುವ ಹಾಡುಗಳು, ಬಗೆಬಗೆಯ ಹಾಡುಗಳನ್ನು ಹಾಡುತ್ತ ನಡೆಯುವರು. ಜನರು ಬೆರಗಾಗಿ ಸಂತೋಷದಿಂದ ಕೇಳುವರು.  ಜನರು ಕೊಟ್ಟುದ್ದನ್ನು ಸಂತೋಷದಿಂದ ಸ್ವೀಕರಿಸಿ  ಜೀವನ ನಡೆಸುವರು ಪುರಂದರದಾಸರು-ಹಿಂದೆ ನವಕೋಟಿ ನಾರಾಯಣ ಎನಿಸಿಕೊಂಡಿದ್ದ ಶ್ರೀನಿವಾಸನಾಯಕರು.

ಭಕ್ತ ಸ್ಮರಣೆ :

ಮಡದಿಯ ಮೂಲಕ ಮನಸ್ಸು ಬದಲಾಯಿಸಿ, ವ್ಯಾರಾಯರ ಅನುಗ್ರಹದಿಂದ ಅಂಕಿತವನ್ನು ಪಡೆದ ಪುರಂದರದಾಸರು, ಪರಮಾತ್ಮನ ಪ್ರಸಾದವನ್ನು ಸಂಪಾದಿಸಿದ ಸಾಧನೆಯ ಮಾರ್ಗ ಅತ್ಯಂತ ಸ್ವಾರಸ್ಯವಾಗಿದೆ. ಭಗವಂತನ ಒಲವನ್ನು ಗಳಿಸಿಕೊಂಡ ಒಬ್ಬೊಬ್ಬ ಭಕ್ತರ ಭಾಗ್ಯವನ್ನು ನೆನೆನೆನದು ಆ ಮೂಲಕ ತಮ್ಮ ಹಂಬಲವನ್ನು ತೋಡಿಕೊಳ್ಳುವರು. ಶ್ರೀ ಮನ್ನಾರಾಯಣ ಸೇವೆಯಲ್ಲಿಯೇ ಸದಾಕಾಲ ನಿರತರಳಾಗಿರುವ ಲಕ್ಷ್ಮೀಯ ಪುಣ್ಯವನ್ನು ಮನಗಂಡು “ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ (ಪೂಜ್ಯಳು) ಸಾನುರಾಗದಿಂದ (ಪ್ರೇಮದಿಂದ) ಹರಿಯ ಸೇವೆ ಮಾಢುತಿಹಳು” ಎಂದು ಬಾಯಿತುಂಬ  ಕೊಂಡಾಡುವರು. ಜಗದೋದ್ದಾರನನ್ನು ಮಗುವೆಂದು ಎಣಿಸಿ, ಆಡಿಸಿ, ಆನಂದಿಸಿದ ಯಶೋಧೆಯ ಅದೃಷ್ಟವನ್ನು ಸ್ಮರಿಸಿ ಗೋಪಿಯ ಭಾಗ್ಯವಿದು ಶ್ರೀಪತಿ ತಾ ಶಿಶುರೂಪಿನಲ್ಲಿರುವುದು” ಎಂಬುದಾಗಿ ಆತಾಯಿಯ ಕಾರ್ಯಗಳನ್ನೆಲ್ಲ ಮನಸಾರ್ಯ ಹೊಗಳುವರು. ಭಗವಂತನನ್ನು ಕೇವಲ ಒಕ್ಕುಡಿತೆಯ ಹಾಲಿನಿಂದ ತೃಪ್ತಿಪಡಿಸಿದ ವಿದುರನ ವರ್ತನೆಯನ್ನು ನೆನೆದು “ವಿದುರನ ಭಾಗ್ಯವಿದು ಪದುಮಜಾಂಡ (ಬ್ರಹ್ಮಾಂಡ) ತಲೆದೂಗುತಲಿದೆಕೋ ಎಂದು ಮೈಯುಬ್ಬಿ ಮೆಚ್ಚಿಕೊಳ್ಳುವರು.

ಶ್ರೀಣಿವಾಶ ಅಂಗಡಿಗೆ ಹೋಗಿ ನೋಡಿದಾಗ ಪೆಟ್ಟಿಗೆ ಬರಿದಾಗಿತ್ತು ಪುರಂದರದಾಸರಾಗಿ"

ಕಳವಳ :

ಹರಿದಾಸ ದೀಕ್ಷೆಯನ್ನು ಕೈಗೊಂಡರು. ಪುರಂದರದಾಸರ ಮನಸ್ಸಿಗೆ ಇನ್ನೂ ಸಮಾದಾನ ಲಭಿಸಿರಲಿಲ್ಲ. ಆ ಸಮಾಧಾನವಿಲ್ಲದ ಮನಸ್ಸಿನ ಸ್ಥಿತಿಗೆ ದಾಶರು ತುಂಬಾ ಪರಿತಪಿಸಿರುತ್ತಾರೆ. “ಹಗಲು ನಿನ್ನ ನೆನೆಯಲಿಲ್ಲ. ಹಸಿವು ತೃಷೆಯಿಂದ (ಬಾಯಾರಿಕೆಯಿಂದ) ಇರುಳು ನಿನ್ನ ನೆನೆಯಲಿಲ್ಲ, ನಿದ್ರ ಭರದಿಂದ, ಈ ಎರಡರ ಬಾಧೆಗೆ ನಾನು ಒಳಗಾಗಿದೆನೋ ಪುರಂದರವಿಠಲ” ಎಂದು ನೊಂದುಕೊಳ್ಳೂವರು. ಒಂದು ಕಡೆ ಮನೆಯಾಸೆ,  ಮತ್ತೊಂದು ಕಡೆ ಪತ್ನಿಯ ಆಸೆ, ಮಗದೊಂದು ಕಡೆ ಮಕ್ಕಳಿಗಾಗಿ ಪರದಾಟ! ಈ ಎಲ್ಲ ಆಸೆಗಳನ್ನೂ ಗೆದ್ದು ಹೇಗೆ ಭಗವಂತನನ್ನು ಒಲಿಸಿಕೊಳ್ಳುವುದೆಮಬ ಸಮಸೆಯ ಅವರನ್ನು ಪದೇ ಪದೇ ಕಾಡುತ್ತದೆ. ಹಗಲಿರುಳು ಹರಿಯ ಧ್ಯಾನವನ್ನು ಕೈಗೊಂಡ ಅವರಿಗೆ ಭಗವಂತನು ಒಮ್ಮೆ ಕನಸಿನಲ್ಲಿ ಸುಳಿದಂತಾಗುವುದು: ಮತ್ತೊಮ್ಮೆ ಮನಸ್ಸಿನಲ್ಲಿಯೇ ಗೋಚರಿಸಿದಂತಾಗುವುದು: ಮತ್ತೊಮ್ಮೆ ಮನಸ್ಸಿನಲ್ಲಿಇಯೇ ಗೋಚರಿಸಿದಂತಾಗುವುದು. ಭಕ್ತನ ಹೃದಯದ ಅಳವನ್ನು ಪರೀಕ್ಷಿಸಬೇಕೆಂದು ಭಗವಂತನು ಮತ್ತೆ ಮತ್ತೆ ಅವರ ಹೃದಯವನ್ನು ಮಿಡಿದು ನೋಡುವನು. ಆ ಅಗ್ನಿ ಪರೀಕ್ಷೆಯಿಂದ ಕಳವಳಗೊಂಡ ದಾಸರು ಒಮ್ಮೊಮ್ಮೆ ಕಂಗೆಟ್ಟಿದ್ದವರಂತೆ. “ಆರು ಬದುಕಿದರಯ್ಯ ಹರಿ ನಿನ್ನ ನಂಬಿ” ಎಂದು ದೇವರನ್ನೇ ಹಂಗಿಸುವರು. ಮರುಕ್ಷಣದಲ್ಲಿಯೇ ಎಚ್ಚೆತ್ತವರಂತೆ “ನಿನ್ನನಂಬಿ ಕೆಟ್ಟವರಿಲ್ಲ” ಎಂದು ಸಮಾಧಾನ ಮಾಡಿಕೊಳ್ಳುವರು.

ಪುರಂದರದಾಸ ಪ್ರಪಂಚ:

ಈ ರೀತಿಯಾಗಿ ಅನೇಕದಿನಗಳ ಕಾಲ ಅವರು ಹಂಬಲಿಸಿ ಹಂಬಲಿಸಿ ಹಣ್ಣಾಗಲು ಆಗ ಅವರಿಗೆ ದೇವರ ಅನುಗ್ರಹದ ಅರಿವಾಗುವುದು. ಕಣ್ಣಾರೆ ಕಂಡೆನಚ್ಯುತನ” ಎಂದು ಮೈಮರೆಯುವುದು ಮಾತ್ರವಲ್ಲದೆ, “ಬುದಕಿದೆನು ಬದುಕಿದೇನು ಭೌ ಹಿಂಗಿತು (ಜನ್ಮ ಮುಗಿಯಿತು), ಪದುಮನಾಭನ ಪಾದದೊಲುಮೆ ಎನಗಾಯಿತು” ಎಂದು ತಮ್ಮ ಆನಂದವನ್ನು ಬಾಯಿತುಂಬ ಹಾಡಿ ಹಿಗ್ಗುವರು.

ವ್ಯಾಸರಾರಿಂದ ಹರಿದಾಸ ದೀಕ್ಷೆಯನ್ನು ವಹಿಸಿದ ಈ ಸಾತ್ವಿಕ ಜೀವನದ ಒಂದೊಂದು ಮೆಟ್ಟಿಲೂ ಮಹತ್ವಪೂರ್ಣವಾದುದು. ಪುರಂದರದಾಸರು ರಚಿಸಿರುವ ಕೀರ್ತನೆ ಮೊದಲಾದವುಗಳ (ಸುಳಾದಿ ಮತ್ತು ಉಗಾಬೋಗಗಳು) ಆದಾರದಿಂದಲೇ ಈ ಚೇತನದ ಹಿರಿಮೆಯನ್ನು ತಿಳಿದುಕೊಳ್ಳಬಹುದು. ಆವರ ಅಂತರಂಗದಲ್ಲಿ ಆದ ತಳಮಳ, ಕಳವಳ, ಆಸೆ, ನಿರಾಸೆಗಳ ಅಲೆಗಳು, ಸವಿ ಕನ್ನಡದಲ್ಲಿರುವ ಅವರ ಕೃತಿಗಳ ಮೂಲಕ ಸ್ಪಷ್ಟವಾಗಿ ತಿಳಿದುಬರುವುದು. ಈ ಆತ್ಮೋದ್ದಾರದಿಂದ ಮೇಲ್ಮೆಯನ್ನು ಗಳಿಸಿದ ಪುರಂದರದಾಸರು ತಮ್ಮ ಭಕ್ತಿಬಲದಿಂದ ಅಪೂರ್ವವಾದ ಒಂದು ಹೊಸಪ್ರಪಂಚವನ್ನೇ ಸೃಷ್ಟಿಸಿರುವರು. ತರಳು ಧ್ರುವಿಂದ  ಮೊದಲ್ಗೊಂಡು ಪಾಪಿಯಾದ ಅಜಾಮಿಳನವರೆಗೆ ದೇವರ ನಾಮಸ್ಮರಣೆಯಿಂದ ಉದ್ದಾರವಾದ ಭಗವಂತನ ಭಕ್ತ ಕಥೆಗಳನ್ನು ಆಲಿಸಬಹುದು. ಶ್ರೀಕೃಷ್ಣನ ಬಾಲಲೀಲೆಯಂತೂ ಅತ್ಯಂತ ಮನೋಹರವಾದುದು. ಅವನ ಆಟ-ಪಾಟ, ಚೇಷ್ಟೆ-ಚಾತುರ್ಯಗಳ ಚಿತ್ರ ಒಂದು ಬಗೆಯಾದ ಮನಸ್ಸನ್ನು ಒಲಿಸಿದರೆ, ಆತನಿಗಾಗಿ ಹಾತೊರೆಯುವ ಗೊಪಿಯರ ಹಾವ-ಭಾವ , ವಿಲಾಸ ವಿನ್ಯಾಸಗಳನ್ನು ಮತ್ತೊಮ್ಮೆ ಕಂಡು ತಣಿಯಬಹುದು. ತುಂಟ ಕೃಷ್ಣನ ಕಾಟ ತಡೆಯಲಾರದೆ ದೂರು ಹೇಳಲು ಬರುವ ಗೋಪಿಯರ ಗುಂಪು ಒಂದು ಬಗೆ ಎನ್ನಿಸಿದರೆ, ಆತನನ್ನು ಎತ್ತಿ ಮುದ್ದಿಟ್ಟು ದೃಷ್ಟಿ ತೆಗೆಯುವ ಮಾತೃ ವಾತ್ಸಲ್ಯದ ಗೋಪಿಯರ ತಂಡದ ಹಿಗ್ಗು ಇನ್ನೊಂದು ಬಗೆಯಾದದ್ದು, ಈ ಪುರಂದರ ಪ್ರಪಂಚದ ಒಂದೆರಡು ಚಿತ್ರಗಳನ್ನಾದರೂ ಇಲ್ಲಿ ನೋಡಿ ನಲಿಯಬಹುದಾಗಿದೆ.

ಶ್ರೀಕೃಷ್ಣನ ಬಾಲ ಲೀಲೆಗಳು:

ಪುರಂದರದಾಸರಿಗೆ ಬಾಲ ಗೋಪಾಲನೆಂದರೆ ಕಣ್ಣಿನಲ್ಲಿ ಹರ್ಷ ಬಾಷ್ಪಗಳು ತುಂಬಿ ಕೊಳ್ಳುತ್ತವೆ. ಆ ಚಿಣ್ಣನು ಕೊಳಲನ್ನು ಬಾರಿಸುತ್ತ ಕುಣಿ ಕುಣಿಯುವ ನೋಟವನ್ನು ಎಷ್ಟು ವರ್ಣಿಸಿದರು ಅವರಿಗೆ ತೃಪ್ತಿಯಾಗುವುದಿಲ್ಲ.

ಪುರಂದರದಾಸರು ಶ್ರೀಕೃಷ್ಣನ ಬಾಲ ಲೀಲೆಗಳನ್ನು ವರ್ಣಿಸುವಾಗ ಒಮ್ಮೆ ಯಶೋಧೆಯಂತೆ ವರ್ತಿಸಿದರೆರ, ಮತ್ತೊಮ್ಮೆ ಗೋಕುಲದ ಗೋಪಿಯರಂತೆ ತೋರಿಬರುತ್ತಾರೆ. ಕೃಷ್ಣನ್ನು ಹಡೆದ ತಾಯಿ ದೇವಕಿಯಾದರೂ ಅವನನ್ನು ಸಾಕಿ ಸಲುಹುವ ಭಾಗ್ಯ ಯಶೋಧೆಗೆ ಲಭಿಸಿತು. ಎಳೆಯ ಮಗುವಾದ ಶ್ರೀಕೃಷ್ಣ ಎಲ್ಲ ಮಕ್ಕಳಂತ್ತಲ್ಲ. ತೊಟ್ಟಿಲಲ್ಲಿ ಮಲಗಿದ್ದ ಕೂಸು ಇದ್ದಕ್ಕಿದ್ದಂತೆಯೇ ಅತ್ತು ರಗಳೆ ಮಾಡಲು ಕೃಷ್ಣನಿಗೆ ಏನಾಯಿತೋ ಎಂದು ಯಶೋದೆಗೆ ಆತಂಕವೋ ಅತಂಕ. ಎಲ್ಲ ಗೋಪಿಯರನ್ನೂ ಮೊರೆ ಹೊಕ್ಕು ಅವನಿಗೇನಾಗಿದೆ ಎಂದು ಕಳವಳ ಪಡುವಳು. ಯಾರ ದೃಷ್ಟಿ ತಾಕಿತೋ ಎಂದು ಮಗುವಿನ ದೃಷ್ಟಿ ತೆಗೆಯುವಳು. ತುಂಟ ಕೃಷ್ಣಯ್ಯನಾದರೋ ಕ್ಷಣ ಕಾಲವಾದರೂ ಮನೆಯಲ್ಲಿ ನಿಲ್ಲುವವನೇ ಅಲ್ಲ, ಗೋಕುಲವೆಲ್ಲ ಗೋವಿಂದನ ಪಾಲು: ಗೋಫ ಗೋಪಿಯರೆಲ್ಲ ಅವನ ಸಂಗಾತಿಗಳು. ಪೋಗದಿರೆಲೋ ರಂಗ ಬಾಗಿಲಿನಿಂದಾಚೆಗೆ, ಭಾಗವತರು ಕಂಡರೆ ಎತ್ತಿಕೊಂಡೊಯ್ವರೋ” ಎಂದು ಯಶೋದೇ ಕೃಷ್ಣನಿಗೆ ಬುದ್ಧಿ ಹೇಳುವರು. ಆದರೆ ಈ ಒಳ್ಳೆಯ ಮಾತುಗಳಾವುವು ಅವನಿಗೆ ಹಿಡಿಸುತ್ತಿರಲಿಲ್ಲ. ಸದಾ ಅವನ ಸ್ವಚ್ಛೆಯಾಗಿ ಹೊರಗೆ ಆಟ=-ಪಾಠಗಳಲ್ಲಿ ಮಗ್ನನಾಗಿರುತ್ತಿದ್ದನು. ಕಂಡ ಕಂಡವರ ಆಟ-ಪಾಟಗಳಲ್ಲಿ ಮಗ್ನನಾಗಿರುತ್ತಿದ್ದನು. ಕಂಡ ಕಂಡವರ ಮನೆಗಳಿಗೆ ನುಗ್ಗಿ, ಹಾಲು ಬೆಣ್ಣೆಗಳನ್ನು ಲೂಟಿ ಮಾಡುತ್ತಿದ್ದನು.

ಈ ಕಾಟವನ್ನು ಸಹಿಸಲಾರದೆ ಗೋಪಿಯರು ಬಂದು ಯಶೋಧೆಗೆ ದೂರು ಹೇಳಲು ಅವಳ ಹೃದಯ ತುಂಬ ನೊಂದುಕೊಳ್ಳುತ್ತಿತ್ತು.  ಏನು ಮಾಡಲೋ ಮಗನೆ ಯಾಗೆ ಬೆಳಗಾಯಿತೋ ಏನು ಮಾಡಲೋ ಕೃಷ್ಣಯ್ಯ” ಎಂದು ಕಳವಳ ಪಡುವಳು. ದೂರನ್ನು ಕೇಳಿ ಕೇಳಿ ಕಿವಿ ಕವುಡಾಗಲು ಆಗ ಯಶೋದೆ, ದೂರು ಮಾಡುವರೇನೆ ರಂಗಯ್ಯನ ದೂರು ಮಾಡುವರೇನೆ.. ಮೂರು ಲೋಖಕ್ಕೆ ಮುದ್ದು ತೋರೋ ರಂಗಯ್ಯನ ಎಂದು ಗೋಪಿಯರನ್ನೇ ಪ್ರಶಿನಸಿ ಬಾಯಿ ಮುಚ್ಚಿಸುವಳು. ಶ್ರೀ ಕೃಷ್ಣನ ಕೋಟಲೆ ಕೀಟಲೆಗಳನ್ನು ಸಹಿಸಲಾರದೆ ಕೆಲವು ಗೋಪಿಯರು ಅವನ ತುಂಟತನಗಳನ್ನೆಲ್ಲ ಬಗೆಬಗೆಯಾಗಿ  ಹೇಳಿ ಬೇಸರಗೊಂಡರೆ, ಹಲವರು ಅವನನ್ನು ಕ್ಷಣ ಕಾಲವೂ ಅಗಲಿರಲಾಋದೆ, :”ತಾರಮ್ಮಯ್ಯ ಯದುಕಾಲ ವಾರಿಧಿ ಚಂದ್ರಮನ” ಎಂಧು ಬೇಡಿ ಪೆದು, ಅವನನ್ನು ಆಟವಾಡಿಸಿ ಸಂತೋಷಪಡುವರು.

ಯಾರೇ ಎನೇ ಹೇಳಲಿ, ಯಶೋಧೆಗಂತೂ ಅವನು ಅಚ್ಚು ಮೆಚ್ಚಿನ ಮುದ್ದು ಕಂದ. ಜಗದ್ದೋದ್ದಾರನನ್ನು ಆಡಿಸಿ ಮೈಮರೆಯುವಳು. ಅವನಿಗ ಎಣ್ಣೆಯ ನಿಈರನ್ನು ಹಾಕುವಾಗ ಬಗೆ ಬಗೆಯಾಗಿ  ಹರಸುವಳು. ಹೇಳಿದ ಮಾತನ್ನು ಕೇಳದೇ ಹೋಗಲು “ಬೂಚಿ ಬಂದಿದೆ ರಂಗ ಬೂಚಿ ಬಂದಿದೆ” ಎಂದು ಹೆದರಿಸುವಳು. ತಾಯಿಯ ಗುಮ್ಮನನ್ನು ಕರೆಯಲು ತುಂಟ ಕೃಷ್ಣನು ಗುಮ್ಮನ ಕರೆಯದಿರೆ ಅಮ್ಮ ನೀನು, ಸುಮ್ಮನೆ ಇದ್ದೇನೆ… “ದೇವರಂತೆ ಒಂದು ಠಾವಿಲಿ (ಸ್ಥಳದಲ್ಲಿ) ಕೂಡುವೆ- ಎಂಬುದಾಗಿ ತಾಯಿಯನ್ನು ಮರೆ ಹೋಗುವನು. ಅಪ್ಪತಪ್ಪಿ ಕೃಷ್ಣನು ಸಕಾಲಕ್ಕೆ ಮನೆಗೆ ಬಾರದಿದರೆ ಯಶೋಧೆ, “ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಾಣಿರೇನೆ” ಎಂದು ಎಲ್ಲರೊಂದಿಗೆ ತಾನೂ ಹುಡುಕತೊಡಗುವಳು. ಶ್ರೀಕೃಷ್ಣನ ಉಡುಗೆ-ತೊಡುಗೆ, ಒಡವೆ,ಅಭರಣಗಳನ್ನೆಲ್ಲ ಗುರುತು ಹೇಳಿ ಗೋವಿಂದನನ್ನು ಗೋಕುಲದಲ್ಲೆಲ್ಲ ಹುಡುಕಾಡುವ ಈ ಚಿತರಣ ಯಾರ ಮನಸನ್ನಾದರೂ ಸೆಳೆಯದಿರು.

ದಿನ ಕಳೆದಂತೆಲ್ಲ ಗೋವಿಂದನ ಮಹಿಮೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದವು. ಗೋವರ್ಧನ ಗಿರಿಯನ್ನು ಎತ್ತಿ ಸಮಸ್ತರನ್ನೂ ಇಂದ್ರನ ಬಿರುಮಳೆಯಿಂದ ರಕ್ಷಿಸಿದ ಘಟನೆ ಅತ್ಯಪೂರ್ವವಾದುದು. ಹೀಗೆಯೇ ಮಡುವಿನಲ್ಲಿದ್ದು ಎಲ್ಲರಿಗೂ ಕೆಡುಕನ್ನು ಮಾಡುತ್ತಿದ್ದ ಕಾಳಿಂಗನ ಹೆಡೆಯ ಮೇಲೆ ನಿಂತು ಕುಕಣಿದಾಡಿದ ಕೃಷ್ಣನ ನಾಟ್ಯವಂತೂ ಅತ್ಯದ್ಬುತವಾದುದು. ಪುರಂದರದಾಸರು ಈ ಸಂದರ್ಭವನ್ನು ಬಹಳ ಚಿತ್ರವತ್ತಾಗಿ ನಿರೂಪಿಸಿರುವರು. ಆಡಿದನೋ ರಂಗ ಅದ್ಭುತದಿಂದಲಿ, ಕಾಳಿಂಗನ ಫಣೆಯಲ್ಲಿ (ಹೆಡೆಯಲ್ಲಿ) ಪಾಢಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ, ನಲಿದಾಡುತಲಿ, ಬೆಣ್ಣೆ ಬೇಡುತ್ತಲಿ ಎಂದು ಆರಂಭಿಸಿ, ಶ್ರೀ ಕೃಷ್ಣನ ಭಾವ ಭಂಗಿಗಳನ್ನೆಲ್ಲ ವಿಸ್ತಾರವಾಗಿ ವರ್ಣಿಸಿರುವರು.

ಪುರಂದರದಾಸರು ರಚಿಸಿರುವ ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ಕುರಿತು ಕೀರ್ತನೆಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ನಾವು ಯವುದೋ ಒಂದು ಬೇರೆಯ ಲೋಕವನ್ನು ಪ್ರವೇಶಿಸಿದಂತಾಗುತ್ತದೆ. ಈ ಹಾಡುಗಳ ಮೂಲಕ ವಾತ್ಸಲ್ಯ ಭಾವದ ಸವಿಯೇನೆಂಬುವುದನ್ನು ಅರ್ಥಮಾಡಿಕೊಳ್ಳಬಹುದು.

ಸ್ವಾಮಿ– ಸೇವಕ:

ಹರಿದಾಸನಾಧವನು ಭಗವಂತನನ್ನು ಒಡೆಯನೆಂದು ಭಾವಿಸುವುದು ಸಹಜವಷ್ಟೇ. ಆ ಸ್ವಾಮಿಯ ದಾಸನಾಗಲು ಪುರಂದರದಾಸರು ಅಂಗಲಾಚಿ ಬೇಡುವ ಬಗೆಯಂತೂ ಹೇಳತೀರದು. “ದಾಸನ ಮಾಡಿಕೋ ಎನ್ನ, ಇಷ್ಟು ಘಾಷಿ (ಗಾಯ) ಮಾಡುವರೇನೋ ಕರುಣಾ ಸಂಪನ್ನ” ಎಂಬ ಮಾತುಗಳಲ್ಲಿ ಅವರ ಹಂಬಲ ತುಂಬಿ ತುಳುಕುವುದು. “ದೃಢ ಭಕ್ತಿ ನಿನ್ನಲ್ಲಿ ಬೇಡಿ ದೇವ ಅಡಿಗೆರುಗುವೆನಯ್ಯ (ಪಾದಕ್ಕೆ ನಮಸ್ಕರಿಸುವೆನು) ಅನುದಿನ (ಪ್ರತಿದಿನ) ಪಾಡಿ” ಎಂದು  ಕೇಳಿಕೊಳ್ಳುವರು.

ಪ್ರತಿಯೊಬ್ಬ ಹರಿದಾಸರಲ್ಲಿಯೂ ತೋರಿ ಬರುವ ಈ ಸ್ವಾಮಿ-ಸೇವಕ ಸಂಬಂಧವನ್ನು ದಾಸ್ಯಭಾವವೆಂದು ಕರೆಯುವರು. ಪುರಂದರದಾಸರ ಕೀರ್ತನೆಗಳಲ್ಲಿ ಇದಕ್ಕೆ ಬೇಕಾದ ಹಾಗೆ ಉದಾಹರಣೆಗಳಿವೆ. ಭಗವಂತನೊಂದಿಗೆ ಭಕ್ತನ ಸಲಿಗೆ ಬೆಳೆದಂತೆಲ್ಲ ಇಬ್ಬರಲ್ಲಿಯೂ ಅನ್ಯೋನ್ಯ ಸ್ವಭಾವವೂ ಹೆಚ್ಛಾಗುವುದು. “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಸರಸದಿಂದ ದಾಸರು ಒಮ್ಮೆ ನುಡಿದರೆ, ಮತ್ತೊಮ್ಮೆ ಸ್ನೇಹಭಾವದಿಂದ “ಎನಗೂ ಆಣೆ ರಂಗ ನಿನಗೂ ಆಣೆ, ಎನಗೂ ನಿನಗೂ ಇಬ್ಬರಿಗೂ, ನಿನ್ನ ಭಕ್ತರಾಣೆ” ಎಂದು ದೇವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವರು.

ಪುರಂದರದಾಸರು ಭತವಂತನ್ನು , ತಮ್ಮ ಇಷ್ಟ ದೇವತೆಯನ್ನು ನಾನಾ ರೀತಿಗಳಲ್ಲಿ  ಭಾವಿಸಿಕೊಂಡು ತಮ್ಮ ಪರಿಶುದ್ಧವಾದ ಭಕ್ತಿಯನ್ನು ಮೇಲಿಂದ ಮೇಲೆ ತಿಳಿಯಪಡಿಸಿರುವರು. “ಭಿನ್ನಹಕೆ (ಹೇಳಿಕೊಳ್ಳುವುದಕ್ಕೆ) ಬಾಯಿಲ್ಲವಲ್ಲಯ್ಯ ಅನಂತ ಅಪರಾಧ ಎನ್ನಲ್ಲಿ ಇರಲಾಗಿ” ಎಂಬ ಮೊರೆಯಿಂದ ಮೊದಲ್ಗೊಂಡು, ಕಾವ(ಕಾಪಾಡುವ) ದೈವವು ನೀಣೆ ಕೊಲುವ ದೈವವೂ ನೀನೆ… ಯಾವ ದೈವಕ್ಕೆ ಈ ವೈಭವವನ್ನು ಕಾಣೆ” ಎಂದು ತಮ್ಮನ್ನೆ ಪೂರ್ಣವಾಗಿ ಮುಡಿಪಾಗಿ ಅರ್ಪಿಸಿಕೊಳ್ಳುವವರೆಗೆ ತಮ್ಮ ಮನಸ್ಸನ್ನು ತೆರೆದು ತೋರಿರುವರು. ಅವರ ಈ ಭಕ್ತಿ ಭಾವನೆಯ ಒಂದೊಂದು ಮೆಟ್ಟಿಲನ್ನೂ ನಮ್ಮ ನಮ್ಮ ಶಕ್ತಿಗೆ ಅನುಗುಣವಾಗಿ ಅರ್ಥಮಾಡಿಕೊಳ್ಳಬಹುದು.

ಸದಾಚಾರ:

ಪುರಂದರದಾಸರು ಸದಾಚಾರಕ್ಕೆ ತುಂಬಾ ಮಹತ್ವ ಕೊಟ್ಟವರು. ಶ್ರೀ ಹರಿಯ ನಾಮದ ಮಹತ್ವವನ್ನು ಅನೇಕ ಹಾಡುಗಳಲ್ಲಿ ಸುಂದರವಾಗಿ ರೂಪಿಸಿದ್ದಾರೆ.  ಆದರೆ ಮನುಷ್ಯನ ನಿತ್ಯ ಜೀವನಕ್ಕೂ ಗಮನ ಕೊಟ್ಟರು ದಾಸರು. ಸಂಸ್ಕೃತ ಬಾರದವರು ಉಪನಿಷತ್ತು, ವೇದ, ಗೀತೆಗಳನ್ನು ತಿಳಿಯುವುದು ಕಷ್ಟ. ದಾಸರು ತಿಳಿಯಾದ ಕನ್ನಡದಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುವುದನ್ನು ಹೆಳಿದರು.ತಾವು ತಮ್ಮ ಉಪದೇಶದಂತೆ ನಡೆದರು ಎಂಬುವುದು ಬಹುಮುಖ್ಯವಾದ ಸಂಗತಿ. ನವಕೋಟಿ ನಾರಾಯಣ ಎನ್ನಿಸಿಕೊಂಡಿದ್ದವರು ಎಲ್ಲವನ್ನೂ ದಾನ ಮಾಡಿದನಂತರವೇ ಇತರರಿಗೆ ಹಣದಾಸೆ ಬಿಡಿ ಎಂದು ಬೋಧಿಸಿದರು. ಅವರು ವೈರಾಗ್ಯ ತಾಳಿ ದೂರ ಹೋಗಲಿಲ್ಲ. ಹೆಂಡತಿ  ಮಕ್ಕಳೋಡನಿದ್ದರು, ಬಡತನ ಅನುಭವಿಸಿದರು, ತಮ್ಮ ಸಂಸಾರದವರ ಕಾಯಿಲೆಗಳೂ-ಸಾವುಗಳನ್ನುಕಂಡರು, ಜನರಿಂದ ಟೀಕೆ ಕೇಳಿದರು. “ಈಸಬೇಕು ಇದ್ದು ಜೈಸಬೇಕು” ಎಂದು ಉಪದೇಶಿಸಿದರು.  ಸಂಸಾರ ಕಷ್ಟಮಯ, ಆದರೆ ಇದನ್ನು ಬಿಟ್ಟು ಓಡಿ ಹೋದರೂ ಫಲವಿಲ್ಲ- ಇದರ ಸುಖಕ್ಕೆ ಆಸೆಪಟ್ಟು, ಸುಖ ಸಿಕ್ಕಲಿಲ್ಲವೆಂದು ಸಂಕಟಪಟ್ಟು ಫಲವಿಲ್ಲ. ಸ್ವಲ್ಪವೂ ಆಸೆ ಇಟ್ಟುಕೊಳ್ಳದೆ “ಆದದ್ದೇಲ್ಲ ಒಳಿತೇ ಆಯಿತು, ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು” ಎಂದು ಬಾಳಬೇಕು ಎಂಬುವುದನ್ನು ತೋರಿಸಿಕೊಟ್ಟರು.

ಜಾತಿ,ಮತ, ಪಂಥಗಳೆಂಬ ಭೇಧವಿಲ್ಲದೆ ಪ್ರತಿಯೊಬ್ಬರೂ ಹೇಗೆ ತ್ರಿಕರಣ ಶುದ್ಧಿಯನ್ನು ಸಾಧಿಸಬಹುದೆಂಬುವುದನ್ನು ಸರಳವಾಗಿ ಸ್ಪಷ್ಟಪಡಿಸಿರುವರು. “ತನುವು (ದೇಹವನ್ನು) ನೀರೊಳಗದ್ದಿ ಫಲವೇನು ತನ್ನ ಮನದಲ್ಲಿ ದೃಢಭಕ್ತಿಯಿಲ್ಲದ ಮನುಜನು” ಎಂದು ಎಚ್ಚರಿಸಿ, ನಿಜವಾದ ಶರೀರ ಶುದ್ಧಿಯ ಸ್ವರೂಪವನ್ನು ತಿಳೀಸಿಕೊಡುವರು. ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ: ಎಂದು ನಾಲಿಗೆಯ ದುರ್ಗುಣಗಳನ್ನೆಲ್ಲ ಪಟ್ಟಿ ಮಾಡಿ, ಮಾತಿನಲ್ಲಿ ಹುದುಗಿರಬಹುದಾದ ಕೊಳೆಯನ್ನು ಹೋಗಲಾಡಿಸುವುದು ಹೇಗೆಂಬುವುದನ್ನು ಎಂದೆಂದಿಗೂ ಮರೆಯದಂತಹ ರೀತಿಯಲ್ಲಿ ವಿವರಿಸಿರುವರು. ಕಡೆಯದಾಗಿ “ಮನವ ಶೋಧಿಸಬೇಕು ನಿಚ್ಚ (ನಿತ್ಯ) ದಿನದಿನ ಮಾಡುವ ಪುಣ್ಯ ಪಾಪದ ವೆಚ್ಚ” ಎಂದು ಚಿತ್ತಶುದ್ಧಿಯ ಕ್ರಮವನ್ನೂ ಸ್ವಾರಸ್ಯವಾಗಿ ತೋರಿಸಿಕೊಟ್ಟಿರುವರು.

“ಸತ್ಯಂ ವದ, ಧರ್ಮಂ ಚರ” (ಸತ್ಯ ನುಡಿ, ಧರ್ಮದಿಂದ ಬಾಳು) ಎಂಬ ಉಪನಿಷತ್ತಿನ ತಿರುಳನ್ನು “ಸತ್ಯವೆಂಬುದೇ ಸ್ನಾನ, ಉಪವಾಸ, ಜಪ,ನೇಮ”, ಧರ್ಮವೇ ಜಯವೆಂಬ ದಿವ್ಯ ಮಂತರ ಮರ್ಮವನ್ನರಿತು (ಗುಟ್ಟನ್ನು ತಿಳಿದು) ಮಾಡಬೇಕು ತಂತ್ರ (ಕೆಲಸ)”- ಎಂಬ ಪಲ್ಲವಿಗಳಲ್ಲಿ ಬಹಳ ಅರ್ಥವತ್ತಾಗಿ ಹುದುಗಿಸಿಟ್ಟಿರುವರು. ಪುರಂದರದಾಸರ ಯಾವ ರಚನೆಯನ್ನೇ ನೋಡಲಿ, ಅಲ್ಲಿ ಅವರ ಸ್ವಂತ ಅನುಭವ ಮತ್ತು ಲೋಕದ ಅನುಭವಗಳು ಸರಿಸಮನಾಗಿ ಬೆರೆತು ಬರುತ್ತವೆ.

ಅಂಕುಡೊಂಕು ಕನ್ನಡಿ :

ಪುರಂದರದಾಸರು ಕೇವಲ ಧರ್ಮಪ್ರಚಾರ, ಭಕ್ತಿ ಪ್ರತಿಆದನೆ, ನೀತಿ ಬೋಧೆಗಳಲ್ಲಿಯೆ ತೃಪ್ತಿಯಾಗದೆ ಮನುಷ್ಯರ ಅಂಕುಡೊಂಕುಗಳನ್ನೂ ಬೆರಳಿಟ್ಟು ತೋರಿರುವರು. ಹೊಟ್ಟೆಯ ಪಾಡಿಗಾಗಿ ಹರಿದಾಸರಾಗುವವರನ್ನು ಕಂಡು, “ಉದರ ವೈರಾಗ್ಯವಿದು (ಹೊಟ್ಟೆಪಾಡಿನ ವೈರಾಗ್ಯ), ನಮ್ಮ ಪದಮನಾಭನಲಿ ಲೇಶ (ಸ್ವಲ್ಪವೂ) ಭಕುತಿಯಿಲ್ಲ” ಎಂದು ಕಟುವಾಗಿಯೇ ಖಂಡಿಸುವರು. ಬೂಟಾಟಿಕೆಯಿಂದ ಭಕ್ತಿಯ ನಾಟಕ ಕಟ್ಟಿ ಡಂಭಾಚಾರ ಮಾಡುವವರನ್ನು ಹಾಸ್ಯ ಮಾಡುತ್ತಾರೆ. ಬೆಳಗ್ಗೆ ಬೇಗನೇ ಎದ್ದು ಗಡಗಡ ನಡುಗುತ ನದಿಯಲ್ಲಿ ಸ್ನಾನ ಮಾಡಿ, ಮನಸ್ಸಿನ ತುಂಬ ಕೆಟ್ಟ ಯೋಚನೆ, ದುರಾಸೆಗಳನ್ನು ತುಂಬಿಕೊಂಡು ಪರಮ ವೈರಾಗ್ಯಶಾಲಿಗಳೆನ್ನಿಸಿಕೊಂಡವರನ್ನು ಹಾಸ್ಯ ಮಾಡುತ್ತಾರೆ. ಕಂಚುಗಾರನ ಅಂಗಡಿಯ ಹಾಗೆ ಕಂಚು ಹಿತ್ತಾಳೆ  ಪ್ರತಿಮೆಗಳನ್ನಿಟ್ಟು ಅನೇಕ ದೀಪಗಳನ್ನು ಹಚ್ಚಿ ವಂಚನೆಯಿಂದ ಪೂಜೆ ಮಾಡುವವರನ್ನು ಹಾಸ್ಯ ಮಾಡುತ್ತಾರೆ. ದೇವರು ಕೊಟ್ಟಿದ್ದಾಗ ಸುಖಪಡದೆ ಆ ಬಳಿಕ ವೃತಾ ಕ್ಲೇಶ ಪಡುವವರನ್ನು ಕುರಿತು “ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ, ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವಲ್ಲೋ ಪ್ರಾಣಿ” ಎಂದು ಟೀಕಿಸುವರು. ದಾನಮಾಡಲು ಹಿಂತೆಗೆದು ನೆವ ಹೆಳುವ ಯಜಮಾನಿಯೊಬ್ಬಳನ್ನು ಉದ್ದೇಶಿಸಿ “ಇಕ್ಕಲಾರದ ಕೈ ಎಂಜಲು, ಚಿಕ್ಕಮಕ್ಕಳು ಅಳುತ್ತಾರೆ ಹೋಗೋ ದಾಸಯ್ಯ” ಎಂಬ ಅವಳ ಮಾತುಗಳಲ್ಲಿಯೆ ಅವಳ ಜಿಪುಣ ಸ್ವಭಾವವನ್ನು ಪರಿಚಯ ಮಾಡಿಕೊಡುವರು. ಧರ್ಮಕ್ಕೆ ಕೈ ಬಾರದೀ ಕಾಲ, ಪಾಪಕರ್ಮಕ್ಕೆ ಮನಸೋಲುವ ಕಾಲ” ಎಂದು ವ್ಯಥೆಪಡುವರು. ಹೃತ್ಪೂರ್ವಕವಾಗಿ ದೇವರನ್ನು ಸ್ತುತಿಸಲಾರದವರ ಅರ್ಭಟವನ್ನು ಕಂಡು “ಕೇಳನೋ ಹರಿ ತಾಳನೋ, ತಾಳಮೇಳಗಳಿದ್ದು, ಪ್ರೇಮವಿಲ್ಲದ ಗಾನ’ ಎಂಬುವುದಾಗಿ ಕೊರಗುವರು. ಮನುಷ್ಯರಲ್ಲಿರುವ ಹಲವಾರು ಕಪಟ, ಕುಹುಕಗಳನ್ನೆಲ್ಲ ನೋಡಿ ನೋಡಿ ರೋಸಿ ಹೋಗಿದ್ದ ದಾಸರು, “ನಗೆಯ ಬರುತ್ತಿದೆ ಎನಗೆ ನಗೆಯ ಬರುತಿದೆ ಜಗದೊಳಿರುವ ಮನುಜರೆಲ್ಲ ಹಗರಣವ (ಕೋಟಲೆ, ಗೊಂದಲ) ಮಾಡುವುದನ್ನು ಕಂಡು ಎಂದು ವ್ಯಂಗ್ಯವಾಗಿ ತಿವಿದು ಎಚ್ಚರಿಸಿದರು.

ಕಲೆ :

ಯಾವ ನೀತಿಯನ್ನೇ ಹೇಳಲಿ, ಪುರಂದರದಾಸರು ಅದನ್ನು ಪ್ರಸ್ತಾಪಿಸುವ ರೀತಿಯೂ ಸಹ ಬಹು ಪ್ರೀಯವಾಗಿರುತ್ತದೆ.  “ಜಾಲಿಯ ಮರದಂತೆ ಧರೆಯೊಳು ದುರ್ಜನರು ಕೆಟ್ಟವರು) ಎಂದು ಎಲ್ಲರೂ ಕಂಡು ಕೇಳಿದ ಒಂದು ಉಪಮಾನವನ್ನು ಹೇಳಿ ತಮ್ಮ ಅಭಿಪ್ರಾಯವನ್ನು ಬಹಳ ವಿಶದವಾಗಿ ವಿವರಿಸುವರು. “ತಾಸು(ಘಂಟೆ) ಬಾರಿಸುತ್ತಿದೆ ಕೇಳಿ ಹರಿದಾಸರೆಲ್ಲ, ಶ್ರೀಶನ ಭಜನೆಯ ಮಾಡದ ಮನುಜನ ಅಯುಷ್ಯ ವ್ಯರ್ಥವಾಗಿ ಹೋಯಿತು” ಎಂದು ಒಡನೆಯೇ ಒಂದು ಹಾಡನ್ನು ಹಾಡಿ ಬುದ್ಧಿ ಹೇಳುವರು. ಪತ್ರವಾಹಕನನ್ನು ನೋಡಿದ ಕೂಡಲೇ, “ಕಾಗದ ಬಂದಿದೆ ನಮ್ಮ ಪದುಮನಾಭನು ತಾನೇ ಬರೆದ ಕಾಗದ ಬಂದಿದೆ” ಎಂದು ಅವನ ಆ ಕಾಯಕವನ್ನೇ ಅವಲಂಬಿಸಿ, ಹಲವಾರು ಹಿತೋಕ್ತಿಗಳನ್ನು ಪೋಣಿಸಿ ಹೇಳುವರು. ಹೀಗೆ ಹಿತವಾದ, ಮಿತವಾದ ಮಾತುಗಳಲ್ಲಿ ಅತ್ಯಂತ ಗಹನವಾದ ತತ್ವಗಳನ್ನು ಜನಸಾಮಾನ್ಯರಿಗೆ ಹೇಳುವ ಕಲೆ ಅವರಿಗೆ ದೇವರಿತ್ತ ಒಂದು ವರವೇ ಸರಿ.

ನಿತ್ಯ ಜೀವನದ ಘಟನೆಗಳು:

ತಮ್ಮ ಕಣ್ಣೆದುರಿಗೆ ನಡೆಯುವ ಎಂಥ ಸಣ್ಣಫುಟ್ಟ ಘಟನೆಗಳನ್ನದರೂ ಭಕ್ತಿಯ ಪ್ರಸಾರಕ್ಕೆ ಬಳಸಿಕೊಳ್ಳುವಂತೆಯೇ ಪುರಂದರದಾಸರು ತಿಳಿಯಾಧ ಒಂದೆರಡು ಮಾತುಗಳಲ್ಲಿಯೇ ಪುರಂದರದಾಸರು ತಿಳಿಯ ಹೇಳಲು ಶಕ್ತರಾಗಿರುತ್ತಾರೆ. ನರಹರಿರೂಫನ ನೋಡದ ಕಣ್ಣು ನವಿಲು ಗರಿಯ ಕಣ್ಣು ಎಂಬ ಒಂದು ವಾಕ್ಯದಲ್ಲಿಯೇ ಕೃತಾರ್ಥವಲ್ಲದ ಕಣ್ಣಿನ ಪಾಡನ್ನು ಮನಮುಟ್ಟುವಂತೆ ತಿಳಿಸಿರುವರು. “ಮಂಡೆ (ತಲೆ) ಬೋಳಾದರೆ ಮನ ಬೋಳಾಯಿತೇ? ಎಂದು ಅಕ್ಷೇಪವೆತ್ತಿ ಸಂನ್ಯಾಸಿಗಳ ಬೂಟಾಟಿಕೆಯನ್ನು ಖಂಡಿಸಿರುವರು. “ಕೆಟ್ಟು ನೆಂಟರ ಸೇರುವುದು ಕಠಿಣ” ಮಡದಿ ಹುಟ್ಟಿದ ಮನೆಯೊಳಿರುವವನು ಮೂರ್ಖ” ನೆಂಟರಿಗೆ ಸಾಲವನು ಕೊಡುವಾಗ ಮೂರ್ಖ ” ಎಂಬ ಸರಳವಾದ ನುಡಿಗಳಲ್ಲಿ ದಾಸರ ಲೋಕಾನುಭವವನ್ನು ಕಾಣಬಹುದು. “ಮನಕೆ ಬಾರದ ಹೆಣ್ಣೂ, ಮನೆಗೆ ಹಬ್ಬಿದ ಬಳ್ಳೀ, ಗುಣವಿಲ್ಲದ ಮನುಜರ ಸಂಗ ಅಪಾಯಕರವೆಂದು  ಎಚ್ಚರಿಸುವರು, “ಆರು ಹಿತವರು ನಿನಗೆ, ನಾರಿಯೋ ಧಾರಿಣಿಯೋ(ಭೂಮಿಯೋ) ಬಲು ಧನವ ಸಿರಿಯೋ” ಎಂದು ಪ್ರಶ್ನೆ ಹಾಕಿ, ಆ ಬಗ್ಗೆ ಮನುಷ್ಯರಿಗಿರುವ ಭ್ರಮೆಯನ್ನು ಹೋಗಲಾಡಿಸುವ ಅವರ ವಾಕ್ಸರಣಿಯನ್ನು ಎಷ್ಟು ಹೊಗಳಿದರೂ ಸಾಲದು. ರಮಣನಿಲ್ಲದ ನಾರಿ ಪರ ಕಣ್ಣೀಗೆ ಮಾರಿ” ಎನ್ನುವಲ್ಲಿ, ಮನೆ ತಪ್ಪಿದ ಹೆಣ್ಣಿನ ಬಗ್ಗೆ ಅವರ ಕರುಳು ಎಷ್ಟು ಮಿಡಿಯುತ್ತದೆ ಎಂಬುವುದನ್ನು ಊಹಿಸಿಕೊಳ್ಳಬಹುದು. ಹೀಗೆಯೇ ಪುರಂದರದಾಸರ ಕೃತಿಗಳನ್ನು ಒಮ್ಮೆ ಪರಿಶೀಲಿಸಿದರೂ ಸಾಕು. ಆಣಿಮುತ್ತಿನಂತಹ ಮಾತುಗಳು ಮೇಲಿಂದ ಮೇಲೆ ಸಿಕ್ಕುತ್ತವೆ. ಹರಿದಾಸರು ಎಷ್ಟು ದೈವಭಕ್ತರೋ ಅಷ್ಟೇ ಭಾವಜೀವಿಗಳೂ ಹೌದು. ಆದ್ದರಿಂದಲೇ ಅವರು  ಆಡಿದ ಮಾತುಗಳೆಲ್ಲ ಸಹಜವಾಗಿ ಹಾಡುಗಳಾಗಿ ಪರಿಣಮಿಸಿ ಕೇಳುವವರ ಹೃದಯವನ್ನು ಮಿಡಿಯುತ್ತವೆ.

ಕೆಲವು ಕಥೆಗಳು :

ಹರಿದಾಸರಲ್ಲಿಯೇ ಅತ್ಯಂತ  ಉನ್ನತವಾದ ಪದವಿಯನ್ನು ಗಳಿಸಿದ ಪುರಂದರದಾಸರನ್ನು ಕುರಿತು ಎಷ್ಟು ಹೆಳಿದರೂ ಮುಗಿಯುವಂತಿಲ್ಲ. ಅವರ ಗುರುಗಳಾದ ವ್ಯಾಸರಾಯರು ಅವರನ್ನು ಹೇಗೆ ಕೊಂಡಾಡಿರುವರೆಂಬುದನ್ನು ಈ ಮೊದಲೇ ಹೇಳಿದೆ. ಸಂಗೀತ-ಸಾಹಿತ್ಯಗಳ ಮೂಲಕ ಧರ್ಮವನ್ನು ತಿಳೀಯ ಹೇಳಿದ ಈ ಮಹಿಮರ ಬದುಕನ್ನು ವಿಚಾರ ಮಾಡಿದಂತೆಲ್ಲ ಯಾರಿಗಾದರೂ ಪೂಝ್ಯ ಭಾವನೆ ಬರುವುದು ಸಹಜ. ಅಷ್ಟೇ ಅಲ್ಲ; ಕಾಲ ಕಳೆದಂತಎಲ್ಲ ಅವರನ್ನು ಕುರಿತಂತಎ ಎಷ್ಟೋ ಕಥೆಗಳು ಹುಟ್ಟಿಕೊಳ್ಳುವುದು ಸ್ವಭಾವಿಕ.

ಪುರಂದರದಾಸರು ಪುರಂದರ ವಿಠಲನ ದೇವಾಲಯದಲ್ಲಿ.

ಪುರಂದರದಾಸರು ಹರಿದಾಸರಾದನಂತರ ಅವರ ಜೀವನದಲ್ಲಿ “ಹೀಗೆ ನಡೆಯಿತು- ಹಾಗೆ ನಡೆಯಿತು” ಎಂದು ಅನೇಕ ಕಥೆಗಳಿವೆ. ಅಪ್ಪಣ್ಣ ಅವರ ಪ್ರೀಯ ಶಿಯ. ಪಂಡರಪುರದಲ್ಲಿ  ಒಮ್ಮೆ ದಾಸರು” ಕೈ ಕಾಲು ತೊಳೆಯಲು ನೀರುಕೊಡು ಎಂದುಅಪ್ಪಣ್ಣನನ್ನು ಕರೆದರಂತೆ. ಅಪ್ಪಣ್ಣ  ಕೂಡಲೇ ಬರಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ನೀರು ತಂದುಕೊಟ್ಟ. ದಾಸರಿಗೆ ಕೋಪ ಬಂದಿತು. ತಂಬಿಗೆಯನ್ನೆ ತೆಗೆದುಕೊಂಡು ಅವನ ತಲೆಯ ಮೇಲೆ ಕುಕ್ಕಿದರು. ಸ್ವಲ್ಪ ಹೊತ್ತಾದ ಮೇಲೆ ತಿಳಿಯಿತು- ವಿಠಲನ ಮೂರ್ತಿಯ ತಲೆಯ ಮೇಲೆ ಗಾಯವಾಗಿ ಊದಿಕೊಂಡಿದೆ, ವಿಗ್ರಹದ ಕಣ್ಣುಗಳಲ್ಲಿ ನೀರು ಸೋರುತ್ತಿದೆ ಎಂದು. ದಾಸರಿಗೆ ಅರ್ಥವಾಯಿತು-ತಮಗೆ ನೀರು ಸೋರುತ್ತಿದೆ ಎಂದು. ದಾಸರಿಗೆ ಅರ್ಥವಾಯಿತು- ತಮಗೆ ನೀರು ತಂದುಕೊಟ್ಟವನು ಅಪ್ಪಣ್ಣನಲ್ಲ. ತಮ್ಮ ದೇವರು ಪುರಂದರ ವಿಠಲ, ತಾವು ಹೊಡೆದದ್ದು ಅವನನ್ನು ಎಂದು. ಓಡಿ ಹೋಗಿ ಮೂರ್ತಿಯನ್ನು ತಬ್ಬಿಕೊಂಡು ತಮ್ಮ ತಪ್ಪಿಗೆ ಕ್ಷಮೆ ಬೇಡಿ, ವಿಠಲನನ್ನು ಸಮಾಧಾನ ಮಾಡಿದರು. ಊತ ಇಳಿಯಿತು ಕಣ್ಣೀರು ನಿಂತಿತು. ಮತ್ತೊಂದು ಪ್ರಸಂಗ: ವಿಠಲ ದಾಸರ ರೂಪ ಧರಿಸಿ, ಊರಿನ ಹೆಂಗಸೊಬ್ಬಳಿಗೆ ವಿಠಲನ ಕೈಯಲ್ಲಿದ್ದ ಬಂಗಾಋದ ಕಡಗವನ್ನು ಕೊಟ್ಟ. ದೇವಸ್ಥಾನದಲ್ವರು ಕಡಗ ಕಳುವಾಯಿತು ಎಂದು ಅಧಿಕಾರಿಗಳಿಗೆ ದೂರು ಕೊಟ್ಟರು.  ಅಧಿಕಾರಿಗಳು ಹುಡುಕಿಸಿದಾಗ ಅದು ಆ ಹೆಂಗಸಿನ ಬಳಿ ಪತ್ತೇಯಾಯಿತು. ಅವರು ವಿಚಾರಿಸಿದಾಗ ಆಕೆ ಅದನ್ನು ಪುರಂದರದಾಸರು ತಂದುಕೊಟ್ಟರು ಎಂದು ಹೇಳಿದರು.  ಆಧಿಕಾರಿಗಳು ದಾಸರನ್ನು ಕರೆಸಿದರು. ದೇವಾಲಯದಲ್ಲಿ ಒಂದು ಕಂಬಕ್ಕೆ ಅವರನ್ನು ಬಿಗಿದು ಚಾಟಿ ಏಟು ಕೊಟ್ಟರು.ಆಗ ದಾಸರು ನಿರಾಪರಾಧಿಗಳೆಂದು ಅಶರೀರವಾಣಿ  ಕೇಳಿಸಿತು. ಅಧಿಕಾರಿಗಳು ಪಶ್ಚತಾಪ ಪಟ್ಟು ದಾಸರನ್ನು ಬಿಡುಗಡೆ ಮಾಡಿದರು ಎಂದು ಹೇಳುತ್ತಾರೆ. ದಾಸರ ಮುಯ್ಯಕ್ಕೆ ಮುಯ್ಯ ತೀರಿತೋ, ಅಯ್ಯ. ನಿಜಯ್ಯ ಸಹಯ್ಯ ಪಂಢರಿರಾಯ: ಎಂಬ ಹಾಡನ್ನು ಅವರು ಹಾಡಿದ್ದು, ಈ ಸಂದರ್ಭದಲ್ಲಿ   ಎಂದು ಹೇಳುತ್ತಾರೆ. ಪಂಢರಪುರದ ವಿಠಲ ಮಂದಿರದಲ್ಲಿ ಒಂದು ಕಂಬವಿದೆ. ಅದಕ್ಕೆ ಪುರಂದರ ಕಂಬ ಎಂದೇ ಇಂದಿಗೂ ಹೆಸರು. ದಾಸರನ್ನು ಕಟ್ಟಿ ಹಾಕಿದ್ದು ಈ ಕಂಬಕ್ಕೆ ಎಂದು ಹೇಳುತ್ತಾರೆ. (ಪುರಂದರದಾಸರು ಸಾಮಾನ್ಯವಾಗಿ ಆ ಕಂಬದ ಬಳಿ ನಿಲ್ಲುತ್ತಿದ್ದರಿಂದ ಅಥವಾ ಕುಳಿತು ಹಾಡುತ್ತಿದ್ದುದರಿಂದ ಆ ಹೆಸರು ಬಂದಿರಬಹುದು)

ಇಂತಹ ಹಲವು ಕಥೆಗಳನ್ನು ಭಕ್ತರು ನಂಬಿ ಶ್ರದ್ದೇಯಿಂದ ಹೇಳುತ್ತಾರೆ. ಯಾವ ಅಸಾಧಾರಣ ಪುರುಷರ ಸುತ್ತಲಾದರೂ ಕಥೆಗಳೂ ಹಬ್ಬುವಂತೆ ಪುರಂದರದಾಸರ ಸುತ್ತಲೂ ಹಬ್ಬಿವೆ.  ಇವುಗಳಲ್ಲಿ ಸತ್ಯವಾದುದು ಎಷ್ಟು, ಭಕ್ತ ನಂಬಿಕೆ ಎಷ್ಟು ಎಂದು ಬಿಡಿಸಿ ಖಚಿತವಾಗಿ ಹೇಳುವುದು ಕಷ್ಟ.

ಜಗತ್ತನ್ನು ಬಿಟ್ಟರು :

ಪುರಂದರದಾಸರು ಸುಮಾರು ಎಂಬತ್ತನಾಲ್ಕು ವರ್ಷಗಳಿಂದ (ಕ್ರಿ.ಶ.೧೪೮೦-೧೫೬೪) ಬದುಕಿ ಬಾಳಿರಬಹುದೆಂದು ವಿದ್ವಾಂಸರ ಎಣಿಕೆ. ಅವರು ವಿಜಯನಗರ ಪತನವಾಗುವುದಕ್ಕೆ ಒಂದು ವರ್ಷ ಮುಂಚಿತವಾಗಿಯೇ ವೈಕುಂಠವಾಸಿಗಳಾಗಿರಬೇಕೆಂದು ಅವರ ಮಗನಾದ ಮಧ್ಯಪತಿಯ ಅಂಕಿತದಲ್ಲಿ ದೊರೆತಿರುವ ಒಂದು ಕೀರ್ತನೆಯ ಆಧಾರದಿಂದ ಹೇಳುತ್ತಾರೆ. ಈ ಒಂದು ಪ್ರಮಾಣವನ್ನು ಅವಲಂಬಿಸಿಯೇ ಪುರಂದರದಾಸರ ಪುಣ್ಯದಿನವನ್ನು ಇಂದಿಗೂ ಪುಷ್ಯ ಬಹುಳ ಅಮವಾಸ್ಯೆಯ ದಿನದಂದು ಆಚರಿಸುವರು.

“ಪುರಂದರ ಗುರುಂ ವಂದೇ”

ದಂತಕಥೆಗಳಲ್ಲಿಯೇ ನಾವು ತೃಪ್ತರಾಗದೇ, ಅವರ ಕೃತಿಗಳ ಮೂಲಕ ಕಂಡುಬರುವ ಅವರ ವ್ಯಕ್ತತ್ವವನ್ನು ತಿಳಿಯತೊಡಗುವುದು ನಮ್ಮ ಕರ್ತವ್ಯ. ಪುರಂದರದಾಸರ ಕೃತಿಗಳಲ್ಲಿ ತೋರಿಬರುವಷ್ಟು ವೈವಿದ್ಯ ಮತ್ತು ವೈಶಿಷ್ಟ್ಯ ಗಳನ್ನು ಬೇರೆ ಯಾವ ಹರಿದಾಸರಲ್ಲಿಯೂ ನಾವು ಕಾಣಲಾರೆವು. ಅವರು ೪,೭೫,೦೦೦ ಕೃತಿಗಳನ್ನು ರಚಿಸಿರುವುದಾಗಿ ಅವರು ಅಂಕಿತದಲ್ಲಿರುವ ಕೀರ್ತನೆಯೊಂದರಿಂದ ವಿಶದವಾಗುತ್ತದೆ.  ಇಲ್ಲಿ ಉಕ್ತವಾಗಿರುವ ಲೆಕ್ಕಾಚಾರದ ವಿವರ ಹೇಗಾಗದಿರರಲಿ.  ಈಗ ನಮಗೆ ಲಭಿಸಿರುವಷ್ಟು ರಚನೆಗಳಣ್ನೇನಾವು ಒಮ್ಮೆ ಪರಿಶೀಲಿಸಿದರೆ, ಅವರ ಮಹತ್ವವೇನು ಎನ್ನುವುದು ವಿದಿತವಾಗುತ್ತದೆ.

ಕರ್ನಾಟಕ ಸಂಗೀತದಲ್ಲಿ ಪುರಂದರದಾಸರದು ಬಹುದೊಡ್ಡ ಹೆಸರು. ಇಂದಿಗೂ ಕರ್ನಾಟಕ ಸಂಗೀತಕಲಿಯುವವರು, ಲಂಬೋದರ ಲಕುಮಿಕರಾ , ಕುಂದ ಗೌರಗೌರೀವರ‍್, ಕೆರೆಯ ನೀರನು ಕೆರೆ ಚೆಲ್ಲಿ, ಪದುಮನಾಭ ಪರಮಪುರುಷ”- ಈ ಗೀತೆಗಳಿಂದಲೇ ಪ್ರಾರಂಭ ಮಾಡುತ್ತಾರೆ. ಇವೆಲ್ಲ ಪುರಂದರದಾಸರೇ ರಚಿಸಿದವು. ಗೀತ, ರಾಯಿ, ಸುಳಾದಿ, ಉಗಾಭೋಗ, ಪದ್ಯ, ಪದವೃತ್ತ ನಾಮ ಮೊದಲಾದ ಬೇರೆ ಬೇರೆ ವಿಧವಾದ ಹಾಡುಗಳನ್ನು ರಚಿಸಿದ್ದಾರೆ. ಸಂಗೀತವನ್ನು ಜನ ಸಾಮಾನ್ಯರು ಜೀವನದ ಅಮೂಲ್ಯ ಭಾಗವನ್ನಾಗಿ ಮಾಡಿಕೊಟ್ಟರು ಅವರು.

ದಾಸರ ಕೃತಿಗಳಲ್ಲಿ ಕಾಲುಭಾಗ ಅವರ ಅಧ್ಯಾತ್ಮಿಕ ಜೀವನದ ಸಾಧನೆಯ ವಿವಿಧ ಹಂತಗಳಲ್ಲಿ ತಿಳಿಯಪಡಿಸಿದರೆ,  ಉಳಿದ ಮುಕ್ಕಾಲು ಭಾಗದಲ್ಲಿ ಅವರ ಲೋಕಾನುಭವ, ಭಕ್ತ ಜ್ಞಾನ, ವೈರಾಗ್ಯಗಳನ್ನು ಕುರಿತು ಅವರ ಗಾಢವಾದ ಅನುಭವ ಮೊದಲಾದವು ಮನವರಿಕೆಯಾಗುವುವು, ವ್ಯಾರಾಯರು ಈ ಕೃತಿ ಸಮುದಾಯವನ್ನು ಪುರಂದರೋಪನಿಷತ್ತು ಎಂದು ಕರೆದು ಗೌರವಿಸಿದರು ಎಂದ ಮೇಲೆ , ಪುರಂದರದಾಸರಿಗೆ ಇನ್ನು ಬೇರೆಯವರು ಪ್ರಶಸ್ತಿಯಾದರೂ ಏಕೆ ಬೇಕು? ಆದರೂ ಕಳೆದ ನಾನ್ನೂರು ವರ್ಷಗಳಿಗಿಂತಲೂ ಮಿಗಿಲಾಗಿ ಜನರು ಮನಸ್ಸನ್ನು ಒಲಿಸಿ, ನಲಿಸಿ, ದಾರಿ ತೋರಿರುವ ಪುರಂದರ ದಾಸರ ಹಿರಿಯ ಚೇತನದ ಮೇಲ್ಮೆಯನ್ನು ಮನಗಂಡ ಯಾರೋ ಮಹನೀಐರೊಬ್ಬರು ದಾಸವರ್ಯರ ಒಟ್ಟು ವ್ಯಕ್ತಿತ್ವಕ್ಕೆ ಅನ್ವಯಿಸುವಂತೆ ಹೇಳಿರುವ ಈ ಕೆಳಗಿನ ಸ್ತುತಿ ವಾಕ್ಯವನ್ನು ನೀವೂ ಹೇಳೀ ಕೃತಾರ್ಥರಾಗಬಹುದು.

“ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿಂ”.