ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಇರುವಂತೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಲವು ಪೀಠಗಳಿವೆ. ಅವುಗಳಲ್ಲಿ ‘ಪುರಂದರದಾಸರ ಅಧ್ಯಯನ ಪೀಠ’ ಒಂದು. ಎರಡು ವರ್ಷಗಳ ಅವಧಿಗೆ (೨೦೦೯ ಮತ್ತು ೨೦೧೦) ನಾನು ಪೀಠದ ಸಂಚಾಲಕನಾಗಿ ಕೆಲಸ ಮಾಡಬೇಕಾಯಿತು. ವಿಭಾಗದ ಎಂದಿನ ಕೆಲಸಗಳ ಜೊತೆಗೆ ಈ ಪೀಠದ ಕೆಲಸಗಳನ್ನು ಮಾಡುವುದು ಅನಿವಾರ್ಯವಾಗಿದೆ.

ಪುರಂದರದಾಸರ ಪೀಠವು, ಪುರಂದರದಾಸರ ಸಾಹಿತ್ಯವನ್ನು ಕುರಿತು ಹಲವು ನೆಲೆಗಳಲ್ಲಿ ಅಧ್ಯಯನ ಕೈಗೊಳ್ಳಲು ಅವಕಾಶವಿದೆ. ಕನ್ನಡ ಹರಿದಾಸ ಪರಂಪರೆಯಲ್ಲಿ ಬಹುಮುಖ್ಯ ಕೀರ್ತನಕಾರರಾಗಿ ಪುರಂದರದಾಸರು ನಿಂತಿದ್ದಾರೆ. ಆಧುನಿಕ ಸಾಹಿತ್ಯ ಅಧ್ಯಯನಗಳು ನಡೆಯಲಾರಂಭಿಸಿದಂದಿನಿಂದ ಈವರೆಗೂ ಪುರಂದರದಾಸರನ್ನು ಕುರಿತು ಸಂಶೋಧನೆಗಳು, ವಿಮರ್ಷೆಗಳು ಅಪಾರವಾಗಿ ನಡೆದಿವೆ. ಈ ಅಧ್ಯಯನಗಳಿಗೆ ನೂರು ವರ್ಷದ ಚರಿತ್ರೆಯಿದೆ. ವಚನಗಳನ್ನು, ಕೀರ್ತನೆಗಳನ್ನು ಅಧ್ಯಯನ ಮಾಡುವ ಸಮುದಾಯ ಸಹಜವಾಗಿ ಮತಿಯಾಗಿದೆ. ಇದು ಮೇಲುನೋಟಕ್ಕೆ ಸಹಜವೆಂಬಂತೆ ಕಾಣುತ್ತದೆ. ಆದರೆ ಇದರಿಂದ ಸಾಹಿತ್ಯವನ್ನು ಕುಬ್ಜಗೊಳಿಸದಂತಾಗುತ್ತದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜೈನ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ವೀರಶೈವ ಸಾಹಿತ್ಯ ತತ್ವಪದ ಸಾಹಿತ್ಯ ಹೀಗೆ ವಿಭಾಗಿಸಿ ನೋಡುವುದು ಅನಿವಾರ್ಯವಾಯಿತೇನೋ, ವಿಭಾಗಿಸುವುದು ಅನಿವಾರ್ಯವಾಗಿರಬಹುದು, ಅಧ್ಯಯನಗಳು ಮತೀಯ ಚೌಕಟ್ಟಿನಲ್ಲಿ ನಡೆಯುವುದು ಅನಿವಾರ್ಯವಾಗಬೇಕೇ? ಸಾಹಿತ್ಯವನ್ನು ಧರ್ಮದ, ಮತಿಯ ನೆಲೆಯಲ್ಲಿ ಅಧ್ಯಯನ ಮಾಡುತ್ತ ಬಂದಿರುವುದುರಿಂದ ಆ ಸಾಹಿತ್ಯವು ವಿಸ್ತಾರ ಚರ್ಚೆಗೆ ಒಳಗಾಗಲಿಲ್ಲ. ಅಧ್ಯಯನಕಾರರೂ ವಿಶಾಲತೆಯನ್ನು ತೋರಿಸಲಿಲ್ಲ ಅನಿಸುತ್ತದೆ.

ಈ ದೃಷ್ಟಿಯಿಂದ ಈಗಲಾರದರೂ ಸಾಹಿತ್ಯವನ್ನು ಧರ್ಮದ, ಮತಿಯ ಚೌಕಟ್ಟಿನಲ್ಲಿ ಗ್ರಹಿಸದೆ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಗ್ರಹಿಸುವ ಪರಿಪಾಠ ಬೆಳೆಯಬೇಕಾಗಿದೆ. ಇಂಥ ನಿಲುವು ಇಲ್ಲವೆ ಇಲ್ಲ ಎಂದು ಹೇಳಲುಬಾರದು. ಜಾತ್ಯಾತೀತವಾಗಿ ಅಧ್ಯಯನಗಳು ನಡೆದಿವೆ. ಈ ನೆಲೆಗಳಲ್ಲಿ ಅಧ್ಯಯನಗಳು ಹೆಚ್ಚು ವಿಸ್ತಾರವಾಗಿ ನಡೆಯಬೇಕಾಗಿದೆ. ‘ಪುರಂದರದಾಸರ ಅಧ್ಯಯನ ಪೀಠ’ವು ಈ ದಾರಿಯಲ್ಲಿ ಸಾಗಲು ಪ್ರಯತ್ನಿಸಿದೆ. ಅದರ ಫಲವಾಗಿ ಕೆಲವು ಯೋಜನೆಗಳು ಪುಸ್ತಕ ರೂಪದಲ್ಲಿ ಈಗ ಪ್ರಕಟವಾಗುತ್ತಿವೆ.

‘ಪುರಂದರದಾಸರ ಅಧ್ಯಯನ ಪೀಠ’ವು ೨೦೦೯ ಮತ್ತು ೧೦೦ರ ಅವಧಿಯಲ್ಲಿ ಸಹಲಾ ಸಮಿತಿ ಸದಸ್ಯರಾದ ಡಾ. ವೀಣಾ ಶಾಂತೇಶ್ವರ ಮತ್ತು ಡಾ. ಎಚ್.ಎನ್. ಮುರಳೀಧರ ಅವರ ಮಾರ್ಗದರ್ಶನದಲ್ಲಿ ಕೆಲವು ಯೋಜನೆಗಳನ್ನು ರೂಪಿಸಲಾಯಿತು. ಅವುಗಳಲ್ಲಿ ಮೂರು ಯೋಜನೆಗಳು ಕಾರ್ಯರೂಪದಲ್ಲಿ ಬಂದು ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿವೆ.

೧. ೨೦೦೯ರಲ್ಲಿ ‘ಪುರಂದರದಾಸರ ಸಾಹಿತ್ಯ ಅಧ್ಯಯನ’ ಯೋಜನೆಯಡಿಯಲ್ಲಿ ಮೊದಲ ವಿಚಾರ ಸಂಕಿರಣವು ದಿ. ೨೪ ಮತ್ತು ೨೫, ಅಕ್ಟೋಬರ್ ೨೦೦೯ರಂದು ಸೃಜನಾ: ಕರ್ನಾಟಕ ಕಾಲೇಜಿನ ಆವರಣ, ಧಾರವಾಡದಲ್ಲಿ ಎರಡು ದಿನಗಳ ಕಾಲ ನಡೆಯಿತು. ಅಲ್ಲಿ ಮಂಡಿತವಾದ ಪ್ರಬಂಧಗಳನ್ನು ಮತ್ತು ‘ವಿಶೇಷ ಉಪನ್ಯಾಸ ಮಲೆ’ ಎಂಬ ಮಾಲೆಯಲ್ಲಿ ದಿ. ೩೦.೧೧.೨೦೦೯ರಂದು ಸ್ನಾತಕೋತ್ತರ ಕೇಂದ್ರ (ಯರಗೇರಾ ರಾಯಚೂರು)ದಲ್ಲಿ ಹಾಗು ದಿ. ೨೦.೧೧.೨೦೦೯ರಂದು ಪಂಚಮಿ ಸಾಂಸ್ಕೃತಿಕ ಸಂಘ, ತುಮಕೂರಿನಲ್ಲಿ ಕೆಲವು ಉಪನ್ಯಾಸಗಳನ್ನು ವಿದ್ವಾಂಸರಿಂದ ಮಾಡಿಸಲಾಯಿತು. ಅವುಗಳನ್ನು ಸೇರಿಸಿ ‘ಪುರಂದರದಾಸರ ಕೀರ್ತನೆಗಳ ಅಧ್ಯಯನಗಳು’ ಎಂಬ ಸಂಪಾದಿತ ಕೃತಿಯನ್ನು ಈತ ಪ್ರಕಟಿಸಲಾಗುತ್ತದೆ.

೨. ಮರಾಠಿಯಲ್ಲಿ ತುಂಬ ಪ್ರಸಿದ್ಧಿಯನ್ನು ಪಡೆದ ‘ವಿದ್ರೋಹಿ ತುಕಾರಾಮ’ ಎಂಬ ಕೃತಿಯನ್ನು ಡಾ. ಅ.ಹ. ಸಾಳುಂಖೆ ಅವರು ಬರೆದಿದ್ದಾರೆ. ಅದನ್ನು ಶ್ರೀ ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದನ್ನು ಪರಿಶೀಲಿಸಿ, ಪ್ರಕಟಿಸಬಹುದು ಎಂದು ಶ್ರೀ ಅಮೃತ ಯಾರ್ದಿ ಧಾರವಾಡ ಅವು ಶಿಫಾರಸ್ಸು ಮಾಡಿದ್ದಾರೆ. ಅದನ್ನು ಈಗ ‘ಕ್ರಾಂತಿಕಾರಿ ತುಕಾರಾಮ’ ಎಂದು ಪೀಠದ ವತಿಯಿಂದ ಪ್ರಕಟಿಸಲಾಗುತ್ತಿದೆ.

೩. ಈ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಎಚ್.ಎನ್. ಮುರಳೀಧರ ಅವು ಸಂಪಾದಿಸಿಕೊಟ್ಟಿರುವ ‘ಈ ಪರಿಯ ಸೊಬಗು’ ಪುಸ್ತಕವು ಮಹತ್ವದ್ದಾಗಿದೆ. ದಾಸ ಸಾಹಿತ್ಯಕುರಿತ ಅಧ್ಯಯನಗಳು ಕಳೆದ ನೂರು ವರ್ಷಗಳಿಂದ ನಡೆಯುತ್ತ ಬಂದಿವೆ. ಅವುಗಳಲ್ಲಿ ಬೇರೆ ಬೇರೆ ಕಾರಣಗಳಿಂದ ವಿಶೇಷ ಅನ್ನಿಸಿದ ಲೇಖನಗಳನ್ನು ಆಯ್ದು ಸಂಪಾದಿಸಿದ್ದಾರೆ. ದಾಸಸಾಹಿತ್ಯದ ಬಗೆಗಿನ ಅಧ್ಯಯನಗಳ ಚರಿತ್ರೆಯನ್ನು ಅರಿಯಲು ಈ ಲೇಖನಗಳೂ ನೆರವು ನೀಡಬಲ್ಲವು. ಈ ಕೃತಿಯನ್ನು ಪೀಠದಿಂದ ಈಗ ಪ್ರಕಟಿಸಲಾಗುತ್ತಿದೆ.

ಡಾ. ಅಮರೇಶ ನುಗಡೋಣ
ಸಂಚಾಲಕರು