ಪುರಂದರದಾಸರ ಕೀರ್ತನೆಗಳನ್ನು ಕುರಿತು ಕನ್ನಡ ಸಂಶೋಧನೆಗಳಲ್ಲಿ ವಿಮರ್ಶೆಗಳಲ್ಲಿ ಸಾಕಷ್ಟು ಒಳನೋಟಗಳು ವ್ಯಕ್ತವಾಗಿವೆ. ಅಧ್ಯಯನಗಳೂ ಕೂಡಾ ಭಿನ್ನ ಭಿನ್ನ ಮಾದರಿಯಲ್ಲಿ ನಡೆದಿವೆ, ನಡೆಯುತ್ತಲಿವೆ. ಇವುಗಳನ್ನೆಲ್ಲ ಓದಿದರೆ ಪುರಂದರದಾಸರ ಬಗ್ಗೆ ಅವರ ಕಿರ್ತನೆಗಳ ಬಗ್ಗೆ ಒಂದಷ್ಟು ತಿಳುವಳಿಕೆ ಮೂಡುತ್ತದೆ. ಆದರೂ ಪುರಂದರರು ಓದುಗರಿಗೆ ಇನ್ನೂ ದಕ್ಕಬೇಕಿದೆ ಎನಿಸುತ್ತದೆ. ಹೀಗೆ ಅನ್ನಿಸಲು ಅಧ್ಯಯನಗಳ ಹಿಂದಿನ ತಾತ್ವಿಕತೆಗಳು ಹೊಸದಾಗಿ ಹುಟ್ಟುತ್ತಲೆ ಇರುತ್ತವೆ. ಸೈದ್ಧಾಂತಿಕತೆಗಳು ಭಿನ್ನ ಭಿನ್ನ ಮಾದರಿಯಲ್ಲಿ ರೂಪುಗೊಳ್ಳುತ್ತಲೇ ಇರುವುದರಿಂದ ಓದುಗನ-ಕೇಳುಗನ ಕಾಲದ ಸಾಂಸ್ಕೃತಿಕ ಸಂದರ್ಭಗಳು, ಸಮಸ್ಯೆ-ಸವಾಲುಗಳು ಬದಲಾಗುತ್ತ ಎದುರಾಗುತ್ತಿರುವುದರಿಂದಲೂ ಎನ್ನಬಹುದು. ಹೀಗಾಗಿ ಅಧ್ಯಯನಗಳು ಬೆಳೆಯುತ್ತಲೇ ಇರುತ್ತವೆ.

ಆದರೂ ಬೆಳೆಯುತ್ತಲೇ ಇರುವ ಅಧ್ಯಯನಗಳಲ್ಲಿ ಉಪಯುಕ್ತವಾದವುಗಳನ್ನು ಗುರುತಿಸುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ. ಸುಲಭವಾಗಿಲ್ಲ ಅನ್ನಿಸುತ್ತದೆ. ಅಕಾಡೆಮಿಕ್ ವಲಯದಲ್ಲಿ ಪುರಂದರದಾಸರನ್ನು ಅವರ ಕೀರ್ತನೆಗಳನ್ನು ಕುರಿತು ವ್ಯಕ್ತವಾದ ಚಿಂತನೆಗಳನ್ನಾಧರಿಸಿ ಉಪಯುಕ್ತತೆಯನ್ನು ಗುರುತಿಸುವುದು. ಚಿಂತನೆಗಳು ಭಿನ್ನ ಭಿನ್ನವಾದರೂ ಅವು ಪೂರಕವಾಗಿ, ವಿಸ್ತಾರವಾಗಿ ಬೆಳೆಯುತ್ತಿವೆ ಅನ್ನುವಂತಿದ್ದರೆ ಅಷ್ಟರಮಟ್ಟಿಗೆ ಸಾರ್ಥಕ ಅನ್ನಬಹುದು. ಒಂದು ಮಾದರಿಯನ್ನು ಅನುಸರಿಸಿ, ಅದರ ಅನುಕರಣೆಗಳು ಬೆಳೆಯುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಮಧ್ಯಕಾಲೀನ ವಚನಕಾರರನ್ನು, ದಾಸರನ್ನು, ತತ್ವಪಾದಕಾರರನ್ನು ಕುರಿತು ನಡೆಯುತ್ತಿರುವ ಅಧ್ಯಯನಗಳಲ್ಲಿ ಬದುಕು-ಬರಹ ಮಾದರಿಗಳು ಹೆಚ್ಚಾಗಿದ್ದು, ಅವುಗಳಲ್ಲಿ ಹೆಚ್ಚಿನ ಅಧ್ಯಯನಗಳು ಏನನ್ನೂ ಹೇಳುವುದಿಲ್ಲ. ಅಧ್ಯಯನಕಾರರ ತಾತ್ವಿಕ ನಿಲುವುಗಳೇ ಕಾಣಿಸುವುದಿಲ್ಲ. ಬದುಕು ಎಂದರೆ ಬದುಕಿನ ದಾಖಲೆಗಳು, ಬರಹ ಎಂದರೆ ಬರಹಗಳನ್ನು ಉಲ್ಲೇಖಿಸುವ, ಅವುಗಳ ಸಾರವನ್ನು ನಿರೂಪಿಸುವುದೇ ಹೆಚ್ಚು. ಅಧ್ಯಯನಕ್ಕೆ ಒಳಗಾಗುವ ವಚನಕಾರ, ದಾಸ, ತತ್ವಪದಕಾರರ ಕಾವ್ಯವನ್ನು, ಅದರ ತುಣಕುಗಳನ್ನು ಉಲ್ಲೇಖಿಸಿ, ಅದರ ಫೇಸ್ ವ್ಯಾಲ್ವಾ** ಅನ್ನೇ ತಿರುಳು ಎಂದು ಭಾವಿಸುವ ಅಧ್ಯಯನಗಳು ಹೆಚ್ಚಾಗಿ ಹುಟ್ಟಿಕೊಳ್ಳುತ್ತಿವೆ. ಇಲ್ಲಿ ಅಧ್ಯಯನಕಾರನ ತಾತ್ವಿಕತೆ ಮಾಯವಾಗಿರುತ್ತದೆ. ಇದರ ಅರ್ಥ ಅಧ್ಯಯನಕ್ಕೆ ಒಳಗಾಗುವ ಕವಿ-ಕಾವ್ಯಕ್ಕಿಂತ ಅಧ್ಯಯನಕಾರನ ಚಿಂತನೆ ವಿಜೃಂಭಿಸಬೇಕು ಎಂದಲ್ಲ. ಕವಿ-ಕಾವ್ಯ ಆಕರವಷ್ಟೇ, ಅದನ್ನು ಒಂದು ಸೈದ್ಧಾಂತಿಕ ನೆಲೆಯಲ್ಲಿ ಅರ್ಥೈಸುವ ಸಾಮರ್ಥ್ಯ ಅಧ್ಯಯನಕಾರನಿಗಿರಬೇಕು ಎಂದರ್ಥ. ಯಾವುದೇ ಅಧ್ಯಯನಗಳಲ್ಲಿ ಅಂತಿಮವಾಗಿ ಅಧ್ಯಯನಕಾರನ ಚಿಂತನೆ ಮುಖ್ಯವಾಗುತ್ತದೆ. ಈ ನೆಲೆಯಿಂದ ಅಧ್ಯಯನಗಳು ನಡೆಯಬೇಕೆಂದು ತೋರುತ್ತದೆ. ಇದು ಹೊಸ ವಿಚಾರವೇನಲ್ಲ.

ವಿಚಾರ ಸಂಕೀರ್ಣಗಳು ಮತ್ತೇ ಮತ್ತೆ ನಡೆಯುವುದು ಯಾಕೆ? ಸಾಹಿತ್ಯವನ್ನು ಕುರಿತು ಹೊಸ ವ್ಯಾಖ್ಯಾನ ಸಾಧ್ಯವಾಗಬಹುದೆ ಎಂದು ಅರಿಯಲು ಮಾತ್ರ. ಆದರೆ ವಿಚಾರ ಸಂಕಿರಣಗಳು ಒಂದು ವಿಷಯ ಕುರಿತು ನಡೆಯುತ್ತಿದ್ದರೆ, ಮಾತನಾಡುವವರು ಹಲವರಿದ್ದರೂ ಗ್ರಹಿಕೆಗಳಲ್ಲಿ ಭಿನ್ನ ಆಯಾಮಗಳು, ಭಿನ್ನ ನೆಲೆಗಳು ವ್ಯಕ್ತವಾಗುವ ಬದಲು ಒಂದೇ ದನಿ, ಅಂದರೆ ಸಾಮಾನ್ಯವಾದ ಒಂದು ಗ್ರಹಿಕೆಯ ಮೇಲೆ ಕೆಲವು ವಿವರಣೆಗಳು ಕಾಣಿಸುತ್ತವೆಯೇ ಹೊರತು, ಭಿನ್ನ ಭಿನ್ನ ಗ್ರಹಿಕೆಗಳು ವ್ಯಕ್ತವಾಗುವುದಿಲ್ಲ. ಹೀಗಾಗಿ ಚರ್ಚೆಗಳು ನಡೆಯದೇ ಇರುವುದಕ್ಕೆ ಇದೂ ಕಾರಣ ಎನ್ನಬಹುದು. ಭಿನ್ನ ಭಿನ್ನ ಗ್ರಹಿಕೆಗಳು ವ್ಯಕ್ತವಾದರೆ ಮಾತ್ರ ಚರ್ಚೆ, ಸಂವಾದ ಹುಟ್ಟಲು ಸಾಧ್ಯವಾಗುತ್ತದೆ. ಕನ್ನಡ ವಿಮರ್ಶಾ ವಲಯದಲ್ಲಿ ಇದು ಈಗ ಇನ್ನೂ ಹೆಚ್ಚಾಗಬೇಕೆಂದು ಕಾಣುತ್ತದೆ.

ಪುರಂದರದಾಸರನ್ನು ಆರಾಧಿಸುವ ಸಮುದಾಯಗಳು ಬಹಳವಿಲ್ಲ. ಒಂದೇ ಎನ್ನಬಹುದು. ಅದು ವೈದಿಕ ಸಮುದಾಯ ಮಾತ್ರ. ಈ ಮಾತನ್ನು ಪುರಂದರರ ಸಾಹಿತ್ಯವನ್ನು ಅಧ್ಯಯನ ಮಾಡುವ ಬೌದ್ಧಿಕ ವಲಯಕ್ಕೆ ಅನ್ವಯಿಸಲು ಆಗುವುದಿಲ್ಲ. ಪುರಂದರರನ್ನು ಆರಾಧಿಸುವ ಸಮುದಾಯ ಮತ್ತು ಅದರ ವ್ಯಕ್ತಿಗಳ ಮನೋಭಾವಗಳನ್ನು ಗ್ರಹಿಸುವ ಅಧ್ಯಯನಗಳು ನಡೆದಿವೆಯೇ? ಯಾವ ಕಾರಣಗಳಿಗಾಗಿ ಆರಾಧಿಸುತ್ತಾರೆ? ಈ ಆರಾಧಿಸುವ ನೆಲೆಗಳ ಸ್ವರೂಪವೇನು? ತಾತ್ವಿಕತೆ ಏನು? ಎಂಬುದರ ಬಗ್ಗೆ ಅಧ್ಯಯನಗಳು ನಡೆಯುವುದಿಲ್ಲ. ಯಾಕೆಂದರೆ ಇದಕ್ಕೆ ಭಾಷಿಕ ರಚನೆಗಳು ಇರುವುದಿಲ್ಲ. ಇದ್ದರೂ ಅವುಗಳನ್ನೂ ಗಂಭೀರ ಅಧ್ಯಯನಕ್ಕೆ ಪರಿಗಣಿಸುವುದಿಲ್ಲ. ಮುಗ್ಧ ಭಕ್ತಿ ಎಂತಲೋ, ಭಾವುಕತೆ ಎಂತಲೋ ಗುರುತಿಸಿ ಕೈ ಬಿಡುವ ಸಾಧ್ಯತೆಗಳು ಹೆಚ್ಚು. ಪುರಂದರದಾಸರ ಕುರಿತು ಸಿನೆಮಾಗಳು, ನಾಟಕಗಳು, ಹಾಡುಗಳು, ಕಥೆಗಳು, ಪವಾಡಗಳು, ಕಾವ್ಯಗಳು ಹುಟ್ಟಿಕೊಂಡಿವೆ. ಈ ಬಗೆಯ ಪ್ರಕಾರಗಳಲ್ಲಿ ಪುರಂದರರನ್ನು ಗ್ರಹಿಸುವ ವಿಧಾನಗಳು, ಅವುಗಳ ಸೈದ್ಧಾಂತಿಕತೆಗಳನ್ನು ಗುರುತಿಸುವ ಅಧ್ಯಯನಗಳು ಕಮ್ಮಿ. ‘ಜನಪ್ರಿಯ ಮಾಧ್ಯಮ’ಗಳಲ್ಲಿ ಪುರಂದರದಾಸರು ಕಾಣಿಸಿಕೊಂಡಿದ್ದಾರೆ. ಅವುಗಳ ಅಧ್ಯಯನದ ಅಗತ್ಯವಿದೆಯೆಂದು ತೋರುತ್ತದೆ.

ಪುರಂದರರನ್ನು ನೆನೆಯುವುದು ಅಂದರೆ, ಪುರಂದರರ ಕೀರ್ತನೆಗಳ ತಿರುಳಿನ ಮುಖೇನ ನೆನೆಯುವುದೇ? ಅಕಾಡೆಮಿಕ್ ವಲಯಕ್ಕೆ ಪುರಂದರರು ಅಂದರೆ ಅವರ ಕೀರ್ತನೆಗಳು, ಅವುಗಳ ಸತ್ವ ಎಂದೇ ಅರ್ಥ. ಆರಾಧಿಸುವ ವಲಯದ ವ್ಯಕ್ತಿಗಳಿಗೆ ಕೀರ್ತನೆಗಳನ್ನು ನೇಪಥ್ಯದಲ್ಲಿಟ್ಟುಕೊಂಡೆನೂ ನೆನೆಯುವುದಿಲ್ಲ. ಪರಂಪರೆಯ ನೆರವಿರಬಹುದು. ಕೇಳುವಿಕೆಯಿಂದ ಕೀರ್ತನೆಗಳ ಕೆಲವು ಸಾಲುಗಳು ಮನಸ್ಸಿನಲ್ಲಿರಬಹುದು. ಇದರಿಂದಲೇ ಆರಾಧಿಸುತ್ತಾರೆ. ಇಂಥವರಿಗೆ ಪುರಂದರ ಅಂದರೆ ಹರಿಯನ್ನು ಮನಗಾಣಿಸುವವನೂ ಆಗಿರುತ್ತಾನೆ. ನೇರವಾಗಿ ಹರಿಯನ್ನು ಗ್ರಹಿಸುವುದು ಕಮ್ಮಿ. ದಾಸರಿಂದ ರೂಪಿತವಾದ ಹರಿಯನ್ನು ನೆನೆಯುವುದೇ ಹೆಚ್ಚು. ಪುರಂದರರ ಕೆಲವು ಸಾಲುಗಳು ಮಾತುಗಳಾಗಿ, ತತ್ವಗಳಾಗಿ ಮನಸ್ಸಿನಲ್ಲಿ ತುಂಬಿರುತ್ತವೆ. ಸುಖ-ದುಃಖಗಳಿಗೆ ಅನ್ವಯಿಸಿಕೊಂಡು ಬದುಕನ್ನು ಈಸುವ ಸಾಮರ್ಥ್ಯ ಪಡೆಯುತ್ತಾರೆ. ಇನ್ನೂ ಹಲವಾರು ನೆಲೆಗಳಿರಬಹುದು. ಪುರಂದರರನ್ನು ನೆನೆಯುವ ಆರಾಧಿಸುವ ನೆಲೆಗಳನ್ನು ಶೋಧಿಸುವ ಅಧ್ಯಯನಗಳು ಭಾವುಕ ನೆಲೆಯಲ್ಲಿಯೇ ನಡೆಯಬೇಕೆಂದೆನೂ ಇಲ್ಲ. ಈ ಅಧ್ಯಯನಗಳು ಚಿಂತನೆಗಳನ್ನು ರೂಪಸಿಕೊಳ್ಳುತ್ತವಷ್ಟೇ.

ವಿಚಾರ ಸಂಕೀರ್ಣಗಳಲ್ಲಿ ನಿಡಿದ ಅಥವಾ ಆಯ್ದುಕೊಂಡ ವಿಷಯವನ್ನು ಅಧ್ಯಯನಕಾರರು ಪ್ರಶ್ನಿಸಿಕೊಳ್ಳುವುದು ಕಮ್ಮಿ. ನೀಡಿದ, ಆಯ್ದುಕೊಂಡ ವಿಷಯವನ್ನು ಕುರಿತು ನಿರೀಕ್ಷಿತ ತೀರ್ಮಾನಗಳನ್ನು ಒಪ್ಪಿಕೊಳ್ಳಲಾಗುತ್ತದೆಯೇ ಹೊರತು ಭಿನ್ನವಾದ ಆಲೋಚನೆಗಳು ಮಂಡನೆಯಾಗುವುದಿಲ್ಲ. ಈ ಸಂಕನದಲ್ಲಿ ‘ವೈರಾಗ್ಯ’ ಮತ್ತು ‘ಜೀವನಪ್ರೀತಿ’ ವಿಷಯಗಳನ್ನು ಸಮಸ್ಸೀಕರಿಸಿಕೊಂಡಿಲ್ಲ. ಹಾಗೆಯೇ ‘ವಿಡಂಬನೆ’ ಕೂಡಾ ಸಮಸ್ಸೀಕರಿಸಿಕೊಂಡರೆ ತಲುಪುವ ತೀರ್ಮಾನಗಳಲ್ಲಿ ಭಿನ್ನ ವ್ಯಾಖ್ಯಾನ ಅಥವಾ ಫಲಿತಗಳು ಕಾಣಲು ಸಾಧ್ಯವಿದೆ. ಪ್ರಭುತ್ವ, ಸಮಾಜ, ಅನುಭಾವ, ಲೋಕದೃಷ್ಟಿ, ಕಾವ್ಯತತ್ವ, ದೇಸಿ ಮುಂತಾದ ವಿಷಯಗಳು ಸಾಮಾನ್ಯ ಒಪ್ಪಿತ ತಿಳುವಳಿಕೆಗಿಂತ ಭಿನ್ನವಾಗಬೇಕಾದರೆ ಅವುಗಳನ್ನು ಸಮಸ್ಸೀಕರಿಸಿಕೊಳ್ಳುವುದರಿಂದ ಸಾಧ್ಯ ಎಂದು ತೋರುತ್ತದೆ. ಇಲ್ಲಿನ ಪ್ರಬಂಧಗಳು ಭಿನ್ನವಾಗಲು ಯತ್ನಿಸಿವೆ. ಮಧ್ವ ತತ್ವದ ನಿರೂಪಣೆ ಪುರಂದರರಿಂದ ಆಗಿದೆಯೋ? ಆಗಿಲ್ಲವೋ? ಆಗಿದ್ದರೆ ಅದರ ತಾತ್ವಿಕ ಸ್ವರೂಪ ಗುರುತಿಸಬೇಕು. ಆಗಿಲ್ಲದಿದ್ದರೆ ಪುರಂದರರು ಅದನ್ನು ಮೀರುವ ವಿಧಾನ ಮತ್ತು ಪುರಂದರರ ಆಸಕ್ತಿಗಳನ್ನು ಗುರುತಿಸಬೇಕು. ಈ ಪ್ರಬಂಧಗಳಲ್ಲಿ ಪ್ರಶ್ನೆಗಳಿಲ್ಲ. ವಿಷಯದನ್ವಯ ವಿವೇಚಿಸಲಾಗಿದೆ. ಇಂಗ್ಲಿಷ್ ಭಾಷೆಗೆ ಅನುವಾದಗೊಂಡ ಪುರಂದರ ಕೀರ್ತನೆಗಳು, ಅವುಗಳನ್ನು ಅರ್ಥೈಸಿದ ಬಗೆಯನ್ನು ಇಲ್ಲಿನ ಪ್ರಬಂಧದಲ್ಲಿ ಗುರುತಿಸಲಾಗಿದೆ. ದೇಸಿ ಕವಿ-ಅನುಭಾವಿ, ಸಂತರನ್ನು ಇಂಗ್ಲಿಷ್ ವಿದ್ವಾಂಸರು, ತಮ್ಮ ಅಧೀನ ಭಾರತವನ್ನು ಸಮರ್ಥಿಸಲು ಬೇಕಾದ ತಾತ್ವಿಕತೆಯನ್ನು ಕಟ್ಟಿಕೊಂಡಿರುವುದು ಇಂಥ ಲೇಖನಗಳಿಂದ ತಿಳಿಯುತ್ತದೆ. ಈ ಬಗೆಯ ಶೋಧದ ಅಗತ್ಯವಿದೆ ಅನ್ನಿಸಿದೆ. ಕರ್ನಾಟಕ ಸಂಗೀತಕ್ಕೆ ಪುರಂದರರ ಕೊಡುಗೆಯನ್ನು ತಿಳಿಸುವ ಬರಹವಿದೆ. ಈ ಸಂಕಲನದ ಪ್ರಬಂಧಗಳು ಹೊಸ ದಾರಿ ಕಂಡುಕೊಳ್ಳುವ ಯತ್ನದಲ್ಲಿವೆಯೇ ಎಂಬುದನ್ನು ಓದುಗರು ಗುರುತಿಸಲೆಂದು ಆಶಿಸುತ್ತೇನೆ.

‘ಪುರಂದರದಾಸರ ಅಧ್ಯಯನ ಪೀಠ’ದಿಂದ ವಿಚಾರ ಸಂಕಿರಣದ ಈ ಸಂಕಲನವು ಪ್ರಕಟಣೆಯಾಗುತ್ತಿದೆ. ಈ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ವೀಣಾ ಶಾಂತೇಶ್ವರ, ಡಾ. ಎಚ್. ಎನ್. ಮುರಳೀಧರ ಅವರು ತುಂಬು ನೆರವು ನೀಡಿದ್ದಾರೆ.

‘ಪುರಂದರದಾಸರ ಸಾಹಿತ್ಯ ಅಧ್ಯಯನ’ ಎಂಬ ವಿಚಾರ ಸಂಕಿರಣವನ್ನು ದಿನಾಂಕ ೨೪ ಮತ್ತು ೨೫ ಅಕ್ಟೋಬರ್ ೨೦೦೯ರಂದು ಧಾರವಾಡದಲ್ಲಿ ನಡೆಯಿತು. ಡಾ. ವೀಣಾ ಶಾಂತೇಶ್ವರ ಅವರ ನೇತೃತ್ವದಲ್ಲಿ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ ಪ್ರತಿಷ್ಠಾನ, ಸೃಜನಾ ಕರ್ನಾಟಕ ಕಾಲೇಜಿನ ಆವರಣ ಧಾರವಾಡ ಸಹಯೋಗದಲ್ಲಿ ನಡೆಯಿತು. ಈ ವಿಚಾರ ಸಂಕಿರಣದಲ್ಲಿ ಡಾ. ಕೇಶವ ಶರ್ಮ ಕೆ., ಶ್ರೀ ಆನಂದ ಝಂಜರವಾಡ, ಡಾ. ಜಿ.ಎಂ. ಹೆಗಡೆ, ಡಾ. ಸ್ವಾಮಿರಾವ್ ಕುಲಕರ್ಣಿ, ಶ್ರೀ ಶ್ರೀಧರ ಬಳಗಾರ, ಡಾ. ವಿಕ್ರಮ ವಿಸಾಜಿ, ಡಾ. ಎನ್. ಕೆ. ರಾಜಲಕ್ಷ್ಮಿ, ಡಾ. ಶ್ರೀಧರ ಹೆಗಡೆ ಬದ್ರನ್, ಡಾ. ಅರುಣ ಜೋಳದಕೂಡ್ಲಿಗಿ, ಡಾ. ಆರ್. ತಾರಿಣಿ ಶುಭದಾಯಿನಿ, ಎಚ್. ಎನ್. ಮುರಳೀಧರ ಮತ್ತು ಡಾ. ಶ್ಯಾಮಸುಂದರ ಬಿದರಕುಂದಿ ಇವರೆಲ್ಲ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಪ್ರಬಂಧಗಳನ್ನು ಮಂಡಿಸಿದ್ದಾರೆ. ಪುರಂದರ ಸಾಹಿತ್ಯ ಅಧ್ಯಯನ ಪೀಠದಿಂದ ಈ ವಿಚಾರ ಸಂಕಿರಣ ನಡೆಯಿತು. ಈ ಪೀಠದಿಂದ ವಿಶೇಷ ಉಪನ್ಯಾಸ ಮಾಲೆಯಲ್ಲಿ ಎರಡು ಸ್ಥಳಗಳಲ್ಲಿ ಉಪನ್ಯಾಸಗಳು ನಡೆದಿವೆ. ಪಂಚಮಿ ಸಾಂಸ್ಕೃತಿಕ ವೇದಿಕೆ, ತುಮಕೂರು (೨೦.೧೨.೨೦೦೯) ಮತ್ತು ಸ್ನಾತಕೋತ್ತರ ಕೇಂದ್ರ ಯರಗೇರಾ, ರಾಯಚೂರು (೨೦.೧೧.೨೦೦೯) ಇಲ್ಲಿ ಆಯೋಜಿಸಿದವರು ಶ್ರೀ ವೆಂಕಟರೆಡ್ಡಿ ಮತ್ತು ಡಾ. ವಿಕ್ರಮ ವಿಸಾಜಿ ಇಲ್ಲಿನ ಉಪನ್ಯಾಸಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ.

ವಿಭಾಗದ ಎಲ್ಲ ಬೌದ್ಧಿಕ ಚಟುವಟಿಕೆಗಳಿಗೆ ನೆರವು ನೀಡುತ್ತಿರುವ ಕುಲಪತಿ ಡಾ. ಎ. ಮುರಿಗೆಪ್ಪ, ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಅಧ್ಯಯನಾಂಗದ ನಿರ್ದೇಶಕ ಡಾ. ವೀರೇಶ ಬಡಿಗೇರ, ಪ್ರಸಾರಾಂಗದ ತಾಂತ್ರಿಕ ಸಲಹೆಗಾರರಾದ ಶ್ರೀ ಸುಜ್ಞಾನಮೂರ್ತಿ, ಡಾ. ಮೋಹನ್, ಶ್ರೀ ಕೆ.ಕೆ. ಮಕಾಳಿ ಈ ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡಿದ್ದಾರೆ. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ, ಅಧ್ಯಾಪಕರಿಗೆ, ಸಂಶೋಧನ ವಿದ್ಯಾರ್ಥಿಗಳಾದ ಶ್ರೀ ತುಕಾರಾಮ ನಾಯ್ಕ, ಶ್ರೀ ಕೆ.ಎಚ್. ಧರ್ಮವೀರ, ಶ್ರೀ ಗುರುರಾಜ ಮತ್ತು ಕಚೇರಿ ಸಹಾಯಕರಾದ ಶ್ರೀ ಪಿ. ಕರೀಂಸಾಬ್, ಡಿಟಿಪಿ ಮಾಡಿ ಕೆಲಸ ನಿರ್ವಹಿಸಿದ ಶ್ರೀ ಸುರೇಶ ಕರಿಲಿಂಗಣ್ಣವರ, ಕರಡು ನೋಡಿದ ಜಗಳೂರು ಎಚ್. ಕುಮಾರ ಅವರು ಪುಸ್ತಕ ರೂಪುಗೊಳ್ಳುವಲ್ಲಿ ದುಡಿದಿದ್ದಾರೆ. ಈ ಎಲ್ಲ ಮಹನೀಯರಿಗೆ ಪುರಂದರ ಅಧ್ಯಯನ ಪೀಠದ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು ಸಲ್ಲುತ್ತದೆ.

ಡಾ. ಅಮರೇಶ ನುಗಡೋಣಿ