ಶ್ರೀ ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ

ದಾಸರೆಂದರೆ ಪುರಂದರ ದಾಸರಯ್ಯ, ವಾಸುದೇವ ಕೃಷ್ಣನ್ನ
ಸೂಸಿ ಪೂಜಿಸುವ ದಾಸರೆಂದರೆ ಪುರಂದರ ದಾಸರಯ್ಯ

ಎಂದು ತಮ್ಮ ಗುರುಗಳಿಂದಲೇ ಹಾಡಿ ಹೊಗಳಿಸಿಕೊಂಡ ಪೂತಾತ್ಮರು ಶ್ರೀ ಪುರಂದರದಾಸರು.

ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡ ಮಹಾನುಭಾವರುಗಳ ಸತ್ ಆಲೋಚನೆಗಳು, ಸತ್ಕ್ರಿಯೆಗಳು, ಶತಶತಮಾನಗಳೇ ಉರಳಿದರೂ ಅದು ಶಾಶ್ವತವಾಗಿ ಸ್ಥಾಪಿತಗೊಂಡು, ಮುಂದಿನ ಜನಾಂಗಕ್ಕೆ ದಾರಿದೀಪವಾಗಿ ನಿಂತು, ಮಾರ್ಗದರ್ಶನ ಮಾಡುತ್ತ ಹೋಗುತ್ತದೆ ಎಂಬ ಮಾತಿಗೆ ಶ್ರೀ ಪುರಂದರದಾಸರ ಜೀವನ, ಸಾಧನೆ, ಸಾಹಿತ್ಯ, ಸಂಗೀತ ಕೈಂಕರ್ಯ, ಲೋಕ ಕಲ್ಯಾಣ ಕಾರ್ಯ ಇವು ನಿದರ್ಶನವಾಗಿ ಕಂಗೊಳಿಸಿ ಅವರನ್ನು ಅಜರಾಮರರನ್ನಾಗಿಸಿದೆ.

ಭಾರತ ದೇಶ ಸಂಸ್ಕೃತಿಗಳ ತಾಣ, ಆಗರ. ಇಲ್ಲಿ ಅನಾದಿಕಾಲದಿಂದಲೂ ಲಲಿತಕಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಲಲಿತಕಲೆಗಳಲ್ಲಿ ಸಂಗೀತಕಲೆಗೆ ಬಹುದೊಡ್ಡ ಎತ್ತರದ ಸ್ಥಾನ ಲಭ್ಯವಾಗಿದೆ. ಅಂದಿನಿಂದ ಇಂದಿನವರೆಗೆ ಈ ಸಂಗೀತ ಕಲೆ ತನ್ನ ಹಿರಿಮೆ ಗರಿಮೆಗಳನ್ನು ವಿಸ್ತರಿಸಿಕೊಂಡೇ ಸಾಗಿಬರುತ್ತಿರುವುದು ಸಂತೋಷಕರ.

ಸಂಗೀತ ಕಲೆಯು ತನ್ನ ಉಗಮವನ್ನು ಕ್ರಿಸ್ತ ಪೂರ್ವದಲ್ಲಿಯೇ ಕಂಡುಕೊಂಡು, ಕಾಲಘಟ್ಟದಲ್ಲಿ ಬೆಳವಣಿಗೆಯ ನೂರಾರು ಹಂತಗಳನ್ನು ಕಾಣುತ್ತಾ ಪ್ರಸ್ತುತ ದೇಶದ ಒಂದು ಉಜ್ವಲ ಭವ್ಯ ಪರಂಪರೆಯುಳ್ಳ ಅತ್ಯುತ್ತ್ಮ ಕಲೆಯಾಗಿ ಮೈದಳೆದು ನಿಂತಿದೆ. ಕ್ರಿಸ್ತ ಪೂರ್ವದಲ್ಲೇ ಆರಂಭಗೊಂಡು ಸುಮಾರು ೧೪-೧೫-೧೬ ನೇ ಶತಮಾನದವರೆಗೆ ಹರಿದು ಬಂದ ಈ ಸಂಗೀತವು ‘ಭಾರತೀಯ ಸಂಗೀತ’ ಎಂಬ ನಾಮಾಂಕಿತದಿಂದ ತನ್ನನ್ನು ಗುರುತಿಸಿಕೊಂಡಿತು. ಅಂದರೆ ಎರಡು ಶಾಸ್ತ್ರಿಯ ಸಂಗೀತ ಪದ್ದತಿಗಳ ವಿಂಗಡಣೆಗೆ ಮೊದಲ ಇದ್ದಂತಹ ಸಂಗೀತವನ್ನು ಭಾರತೀಯ ಸಂಗೀತವೆಂದು ಕರೆಯಲಾಗಿತ್ತು. ಮುಂದೆ ಈ ಭಾರತೀಯ ಸಂಗೀತವು ಪರ್ಶಿಯನ್ ಸಂಗೀತದ ಪ್ರಭಾವಕ್ಕೆ ಗುರಿಯಾಗಿ ‘ಹಿಂದೂಸ್ಥಾನಿ ಸಂಗೀತದ ಆಗಮನವಾಯ್ತು. ಹಿಂದಿದ್ದ ಪರಂಪರೆಯ ಸಂಗೀತ ಮುಂದೆ ಮುಂದುವರೆದು ಕರ್ನಾಟಕ ಸಂಗೀತವೆಂಬ ಅಭಿದಾನಕ್ಕೆ ಗುರಿಯಾಯಿತು. ಹಾಡಿಕೆಯ ದಾಟಿ-ಶೈಲಿ, ಗಮಕವೈವಿಧ್ಯ, ಬಳಸುವವಾದ್ಯ, ರಚನೆಗಳ ಭಿನ್ನತೆ, ಭಾಷೆ, ಪ್ರಾಂತೀಯ ವೈವಿಧ್ಯ, ಜನಾಂಗ ವೈವಿಧ್ಯ, ಅಭಿರುಚಿ ಇವುಗಳ ಭಿನ್ನತೆಯಿಂದಾಗಿ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತಗಳೆಂಬ ಎರಡು ಪದ್ಧತಿಗಳು ಉಂಟಾದ ಬಗೆಗೆ ನಮಗೆ ಚರಿತ್ರೆಯಿಂದ ಮನವರಿಕೆಯಾಗುತ್ತದೆ. ಈ ಪರ್ವಕಾಲದಲ್ಲಿಯೇ ಹರಿದಾಸರ ಸಾಹಿತ್ಯ-ಸಂಗೀತ ಸೃಷ್ಠಿಯಾಗಿರುವುದು ಕಂಡು ಬರುತ್ತದೆ.

ಕನ್ನಡ ಸಾಹಿತ್ಯ ಪರಂಪರೆಗೆ ಅಂತೆಯೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಹರಿದಾಸರು ನೀಡಿರುವ ಕಾಣಿಕೆ ವಿಶಿಷ್ಟವಾದುದು. ತಮ್ಮ ಸಾಹಿತ್ಯ-ಸಂಗೀತಗಳ ಮೂಲಕ, ಜೀವನ ಕ್ರಮದ ಮೂಲಕ ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ದಾಸ ಸಾಹಿತ್ಯವು ಚಿತ್ತದೆತ್ತರದಿಂದ ಹುಟ್ಟಿ ಜನಸಾಮಾನ್ಯರ ಹೃದಯ ಸ್ಪರ್ಶಮಾಡಿ, ಜನತೆಯಲ್ಲಿ ಒಂದು ಉತ್ತಮ ಸಂಸ್ಕೃತಿಯನ್ನೇ ಹುಟ್ಟು ಹಾಕಿತು. ಓದುಬರಹ ಬಾರದ ಜನರು ಪಂಪರನ್ನಾದಿ ಕವಿಗಳನ್ನು ತಿಳಿದಿರಲೀ ಬಿಡಲಿ ಆದರೆ ಹರಿದಾಸರ ಸರಳ ಸವಿ ನುಡಿ ಹಾಡುಗಳನ್ನು ಅರಿಯದವರು ಅತಿವಿರಳ. ತಮ್ಮ ಕೀರ್ತನೆಗಳಿಗೆ ಭಕ್ತಿ, ನೈರ್ಮಲ್ಯಗಳ ನೀತಿ ನಿಯಮಗಳ ಸಿಂಚನ ಮಾಡಿ ನಾಡಿನಲ್ಲಿ ಒಂದು ಉತ್ತಮ ಮಟ್ಟದ ಶುದ್ಧ ಪರಿಸರವನ್ನು ಉಂಟು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರು ಈ ಹರಿದಾಸರು. ದಾಸಪರಂಪರೆಯ ಅವಧಿ ಕ್ರಿ.ಶ. ಸುಮಾರು ೧೩ನೇ ಶತಮಾನದಿಂದ ಸುಮಾರು ಕ್ರಿ.ಶ. ೧೮ನೇ ಶತಮಾನದವರೆಗೂ ಹೋಗುತ್ತದೆ. ದಾಸ ಪರಂಪರೆಯಲ್ಲಿನ ಹರಿದಾಸರೆಲ್ಲರೂ ಮುಕ್ತಿ ಮೋಕ್ಷಗಳಲ್ಲಿ ನಂಬಿಕೆ ಹೊಂದಿದ್ದವರು. ಸಾತ್ವಿಕರು, ದೈವಭಕ್ತರು, ಸಂಗೀತಪ್ರೀಯರು, ಮೇಧಾವಿಗಳು ಭಗವದುನಗ್ರಕ್ಕೆ ಭಕ್ತಿ ಮಾರ್ಗವೇ ಸರ್ವೋತ್ಕೃಷ್ಠವಾದುದೆಂದರಿತ ಹರಿದಾಸರು ತಮ್ಮ ನೀತಿ ತತ್ವಾಧಾರಿತ ರಚನೆಗಳನ್ನು ಸಂಗೀತ ಕಲೆಯೊಂದಿಗೆ ಜನತೆಗೆ ಉಣಬಡಿಸಿ ಕೃತಾರ್ಥರಾದರು.

ಹರಿದಾಸರಲ್ಲಿ ಪುರಂದರದಾಸರು ದಾಸಶ್ರೇಷ್ಟರು ಎನಿಸಿಕೊಂಡವರು, ಹೆಚ್ಚು ಜನಪ್ರಿಯರು, ಅಗ್ರಗಣ್ಯರು. ಇವರ ಕಾಲ ಕ್ರಿ.ಶ. ೧೪೮೪ ರಿಂದ೧೫೬೪. ಇವರು ಕರ್ನಾಟಕದ ಶಿವಮೂಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕ್ಷೇಮಪುರದವರೆಂದು ಹೇಳಲಾಗಿದೆ. ತಮ್ಮ ಬದುಕು ಬರಹಗಳ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ಮಹಾನುಭಾವರಿವರು. ಸಕಲ ಮಾನವ ಕೋಟಿಗೆ ಲೇಸನೆ ಬಯಸುವ ಅವರ ಪರಮೋಚ್ಛ ಸಾಧನೆಗೆ ಸಹಕಾಗಿಯಾಗಿ ಅವರು ಕೈಹಿಡಿದಿದ್ದು ಕಲಾ ಸರಸ್ವತಿಯ ಸಂಗೀತ-ಸಾಹಿತ್ಯಗಳನ್ನು, ಸಿರಿವಂತಿಕೆಯೇ ಮೈದಳೆದಂತೆ ವೈಭವೋಪೇತರಾಗಿ ಬೆಳೆದು ಮೆರೆದ ಒಬ್ಬ ಸಿರಿವಂತ ಚಿನಿವಾರ ವೃತ್ತಿಯ ವ್ಯಾಪಾರಿ, ಸಂಭವಿಸಿದ ಘಟಾನೆಗಳಿಂದಾಗಿ ಅರಿವು ಮೂಡಿದಂತಾಗಿ ಸಿರಿವಂತಿಕೆ ಎಲ್ಲವನ್ನೂ ದಾನಮಾಡಿ ಸ್ವೈಚ್ಛೆಯೆ ಸ್ವೇಚ್ಛೆಯೆ ತಿರುಕರಾಗಿ ಪರಿವರ್ತಿತಗೊಂಡಿದ್ದು ಒಂದು ವಿಸ್ಮಯವೇ ಸರಿ. ಭಗವನ್ನಾಮ ಸಂಕೀರ್ತನೆಯ ಕರ್ತೃವಾಗಿ ಉತ್ತಮ ಸಮಾಜ ನಿರ್ಮಾತೃವಾಗಿ, ನೇತಾರರಾಗಿ ಗಾಯಕರಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ‘ದಾಸ ಶ್ರೇಷ್ಟರು’, ‘ಸಂಗೀತ ಪಿತಾಮಹರು’ ಎಂಬ ಹೆಗ್ಗಳಿಕೆಗೆ ಅಭಿದಾನಕ್ಕೆ ಗುರಿಯಾದವರು. ಈ ಸಂಗೀತ ಪಿತಾಮಹರ ಸಂಗೀತ ಕ್ಷೇತ್ರದ ಕಾಣಿಕೆ ಏನೇನು ಎಂದು ಗುರುತಿಸುವುದೇ ಈ ಲೇಖನದ ಮುಖ್ಯ ಉದ್ದೇಶ.

ಪುರಂದರದಾಸರು ಕರ್ನಾಟಕ ಸಂಗೀತ ಪದ್ಧತಿಗೆ ತಮ್ಮನ್ನು ಪ್ರಮುಖವಾಗಿ ಗುರುತಿಸಿಕೊಂಡವರು. ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಇವರ್ ಕೊಡುಗೆ, ಕಾಣಿಕೆ ಏನೆಂದು ಗುರುತಿಸುವಲ್ಲಿ ಕೆಲವು ಘಟ್ಟಗಳನ್ನಾಗಿ ವಿಂಗಡಿಸುವುದು ಉಚಿತ. ಅವುಗಳೆಂದರೆ,

. ಕರ್ನಾಟಕ ಸಂಗೀತ ಪದ್ಧತಿಯ ಅಭ್ಯಾಸಗಾನದ ಕಾರಂಅ ಪುರುಷರಾಗಿ ಪುರಂದರದಾಸರು.

. ರಚಿಸಿರುವ ರಚನೆಗಳು.

. ಬಳಸಿರುವ ರಾಗಗಳು.

. ಬಳಸಿರುವ ತಾಳಗಳು.

. ರಚನೆಗಳಲ್ಲಿ ಸಂಗೀತ ಸಂಬಂಧಿತ ಪದಸಂಪತ್ತು.

. ರಚನೆಗಳಲ್ಲಿನ ಅಲಂಕಾರಿಕ ಅಂಶಗಳು.

. ಇತರ ವಿಚಾರಗಳು.

. ಕರ್ನಾಟಕ ಸಂಗೀತ ಪದ್ಧತಿಯ ಅಭ್ಯಾಸಗಾನದ ಕಾರಣ ಪುರುಷರಾಗಿ ಪುರಂದರದಾಸರು

ಅಂದು ಕರ್ನಾಟಕ ಸಂಗೀತವೇನೋ ಇದ್ದಿತು ನಿಜ. ಆದರೆ ಅದಕ್ಕೆ ಖಚಿತ ರೂಪುರೇಷೆ ನೆಲೆಗೊಂಡಿರಲಿಲ್ಲ. ಇದನ್ನರಿತ ಸೂಕ್ಷ್ಮ ಮತಿಗಳಾದ ಪುರಂದರರು ಇದಕ್ಕೆ ಸೂಕ್ತವಾದ ಪಾಠಕ್ರಮವನ್ನು ಅನುಗೊಳಿಸಿದರು. ಈ ನಿಟ್ಟಿನಲ್ಲಿ ಅವರೆಸಗಿದ ಕಾರ್ಯ ಸ್ತುತ್ಯಾರ್ಹ. ಈ ದೃಷ್ಟಿಯಿಂದ ಅವರು ಸಂಗೀತ ಪಿತಾಮಹ ಶ್ರೀ ಪುರಂದರದಾಸರು ಎಂಬ ಖ್ಯಾತಿ ಹೆಗ್ಗಳಿಕೆಗೆ ಭಾಜನರಾದರು. ಅವುಗಳನ್ನು ಈಗ ಪರಾಮರ್ಶಿಸೋಣ. ಯಾವುದೇ ಒಂದು ಶಾಸ್ತ್ರಬದ್ಧ ಸಂಗೀತಕ್ಕೆ ಅದರ ಪ್ರಥಮ ಪಾಠಗಳು ಅತಿಮುಖ್ಯವೆನಿಸದಿರದು. ಅದು ಮುಂದಿನ ಸಂಗೀತ ಲಕ್ಷಣಗಳ ಓಘಕ್ಕೆ ಭದ್ರ ಅಡಿಪಾಯ ಹಾಕಿ ಕೊಡುತ್ತವೆ. ಈ ದೃಷ್ಟಿಯಿಂದ ಪುರಂದರರು ಸೃಷ್ಠಿಸಿದ ಬಾಲಪಾಠ ಕ್ರಮಗಳು ಅಂದರೆ ಸರಳ ವರಸೆ ಅಥವಾ ಸ್ವರಾವಳಿ, ಜಂಟೀವರಸೆ ಅಥವಾ ಜಂಟೀ ಸ್ವರಾವಳಿ, ದಾಟುವರಸೆ. ಸಪ್ತತಾಳಗಳ ಅಲಂಕಾರ, ಪಿಳ್ಳರೀಗೀತೆ, ದೀಪಿನಿ ಜಾತಿಯ ಗೀತೆ ಇವುಗಳು ಕರ್ನಾಟಕ ಸಂಗೀತಾಭ್ಯಾಸಿಗಳಿಗೆ ಒಂದು ಭದ್ರ ಬುನಾದಿಯಾಗಿದ್ದು ಅದರ ನಿರ್ಮಾತೃಗಳಾಗಿ ಪುರಂದರರು ವಿಜೃಂಬಿಸಿದ್ದಾರೆ. ಸ್ವರಾವಳಿ ಪಾಠವು ಸ್ವರಗಳ ಸರಳವಾದ ಅಭ್ಯಾಸ ಕ್ರಮಗಳಾಗಿವೆ. ಇದರಿಂದ ಸ್ವರಗಳ ಸ್ಥಾನ, ಹಿಡಿತ, ಅಂತರ್ಯಗಳನ್ನರಿಯಲು ಸಾಧ್ಯವಾಗುತ್ತದೆ. ಜಂಟೀ ವರಸೆಯು ಸ್ವರಗಳ ಜಂಟೀ ಪ್ರಯೋಗದ ಅಭ್ಯಾಸ ಪಾಠ. ಈ ಅಭ್ಯಾಸ ಕ್ರಮದಿಂದ ಸ್ವರಗಳನ್ನು ವೇಗವಾಗಿ, ಸ್ಫುತವಾಗಿ ಉಚ್ಚಾರಿಸಲು ಸಾಧ್ಯವಾಗುತ್ತದೆ. ದಾಟುವರಸೆಯು ಸ್ವರಗಳ ದಾಟುಪ್ರಯೋಗ ಮಾಡುವ ಅಭ್ಯಾಸ ಪಾಠವಾಗಿದೆ. ಸಪ್ತತಾಳಗಳ ಅಲಂಕಾರ ಪಾಠದಲ್ಲಿ ಅಭ್ಯಾಸಿಯು ಧ್ರುವತಾಳ, ಮಠ್ಯತಾಳ, ರೂಪಕತಾಳ, ಝಂಪೇತಾಳ, ತ್ರಿಪುಟತಾಳ, ಅಟ್ಟತಾಳ, ಏಕತಾಳಗಳ ವ್ಯವಸ್ಥೆಯನ್ನು ಆಯಾ ತಾಳಗಳಿಗೆ ಹೊಂದಿಸಿದ ಸ್ವರಗಳ ಅಭ್ಯಾಸ ಕ್ರಮದಿಂದ ತಿಳಿಯಲು ಸಾಧ್ಯವಾಗುತ್ತದೆ. ಈ ಸಪ್ತತಾಳಗಳ ಜ್ಞಾನ ಕರ್ನಾಟಕ ಸಂಗೀತಾಭ್ಯಾಸಗಳಿಗೆ ಬಹುಮುಖ್ಯ. ಈ ತಾಳಗಳು ನಮ್ಮ ಸಂಗೀತದ ಬೆನ್ನೆಲುಬಿದ್ದಂತೆ. ಇನ್ನು ಪಿಳ್ಳರೀ ಗೀತೆಗಳು ಇವು ಬಾಲಪಾಠದಲ್ಲಿ ಮೊಟ್ಟಮೊದಲಿಗೆ ಆರಂಭಗೊಳ್ಳುವ ಸಾಹಿತ್ಯ ಭಾಗವನ್ನುಳ್ಳ ಗಣಪತಿ ಸ್ತುತಿಯ ರಚನೆಗಳು. ಪಿಳ್ಳಾರಿ ಎಂದರೆ ಗಣಪತಿ. ಎಲ್ಲಾ ಕಾರ್ಯಗಳಲ್ಲಿ ವಿಗ್ನವಿನಾಶಕನಾದ ಈತನಿಗೆ ಪ್ರಥಮ ಪೂಜೆ. ಸ್ವರಾಭ್ಯಾಸದ ನಂತರ ಸಾಹಿತ್ಯ ಭಾಗವನ್ನುಳ್ಳ ಈ ಪ್ರಥಮ ರಚನೆ ಪಿಳ್ಳಾರೀ ಗೀತೆಯನ್ನು ಧಾತು ಮಾತುಸಹಿತವಾಗಿ ಅಂದರೆ ಸ್ವರಸಾಹಿತ್ಯಗಳೊಂದಿಗೆ ಹಾಗ್ ಪಲ್ಲವೆ-ನುಡಿಗಳೊಂದಿಗೆ ಪುರಂದರದಾಸರು ಅತ್ಯಂತ ಕುಶಲ ಮತಿಗಳಾಗಿ ಸೇರ್ಪಡೆ ಮಾಡಿದ್ದಾರೆ. ಮಲಹರಿ ರಾಗದ ಲಂಬೋದರ ಲಕುಮಿಕರ, ಕುಂದ ಗೌರಗೌರೀವರ, ಕೆರೆಯನೀರನು ಕೆರೆಗೆ ಚೆಲ್ಲಿ, ಪದುಮನಾಭ ಪರಮ ಪುರುಷ ಈ ೪ ಗೀತೆಗಳು ಪಿಳ್ಳರಿ ಗೀತೆಗಳೆನೆಸಿವೆ. ತಾಳದ ದೃಷ್ಟಿಯಿಂದ ಪಿಳ್ಳರೀ ಗೀತೆಗಳು ಸುಳಾದಿಗಳ ಒಂದು ಭಾಗವೆಂದೆನ್ನಲು ಅಡ್ಡಿ ಇಲ್ಲ. ಆನಲೇಖರ ಉನ್ನ್ತೋನ್ನತ ಸಕಲಶಾಸ್ತ್ರ ಪುರಾಣದೀನಂ ಎಂದು ಆರಂಭಗೊಳ್ಳುವ ಶುದ್ಧಸಾವೇರಿ ರಾಗ ತ್ರಿಷ್ಯ ತ್ರಿಪುಟತಾಳದ ಸುಂದರವಾದ ದೀಪಿನಿ ಜಾತಿಯ ಬಗೆಗೆ ತಿಳಿದುಕೊಳ್ಳುವುದುಚಿತ. ನಮ್ಮ ಪ್ರಾಚೀನ ಸಂಗೀತ ಪರಿಭಾಷೆಯಲ್ಲಿ ಎಲ್ಲಾ ಹಾಡುಗಳಿಗೂ ಪ್ರಬಂಧ ಎಂಬಂತಹ ಸಾಮುದಾಯಿಕ ಹೆಸರಿದ್ದುದು ಕಂಡುಬರುತ್ತದೆ. ಒಂದು ಪ್ರಬಂಧವೆಂದರೆ ೪ ಅವಯವಗಳ ಹಾಡು. ಅವುಗಳೆಂದರೆ ಉದ್ಗ್ರಾಹ, ಧ್ರುವ, ಮೇಲಾಪಕ, ಅಭೋಗ. ಪ್ರಬಂಧವು ಉದ್ಗ್ರಾಹ+ಅಭೋಗದಿಂದಲೂ ನಿರ್ಮಾಣಗೊಳ್ಳುತ್ತದೆ. ಅವುಗಳ ವಿವರಣೆ ಪ್ರಸ್ತುತ ಅನಗತ್ಯ. ಪ್ರಬಂಧದ ವಸ್ತುವನ್ನು ಧಾತುಗಳೆಂಬ ೬ ಅಂಶಗಳ ಸಹಾಯದಿಂದ ವಿವರಿಸಲಾಗಿದೆ. ಅವುಗಳೇ ಸ್ವರ, ಬಿರುದ, ಪದ, ತೇನ, ಪಾಟ ಪ್ರಬಂಧಗಳನ್ನು ಸೂಡ, ಆಲಿಕ್ರಮ, ವಿಪ್ರಕೀರ್ಣಗಳೆಂಬ ವಿಂಗಡನೆಯನ್ನೂ ಮಾಡಲಾಗಿದೆ. ಪ್ರಬಂಧಗಳಲ್ಲಿ ಪ್ರಯೋಗವಾಗಿರುವ ಧಾತುಗಳ ಸಂಖ್ಯೆಯ ದೃಷ್ಟಿಯಿಂದ ಬೇರೆ ಬೇರೆ ಜಾತಿಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ ಮೇಧಿನಿ ಜಾತಿಯ ಪ್ರಬಂಧ (ಯಾವುದಾದರೂ ಆರು ಧಾತುಗಳನ್ನು ಹೊಂದಿರುವುದು), ಆನಂದನೀ ಜಾತಿಯ ಪ್ರಬಂಧ (ಯಾವುದಾದರೂ ಐದು ಧಾತುಗಳನ್ನು ಹೊಂದಿರುವುದು), ದೀಪಿನೀ ಜಾತಿಯ ಪ್ರಬಂಧ(ಯಾವುದಾದರೂ ನಾಲ್ಕು ಧಾತುಗಳನ್ನು ಹೊಂದಿರುವುದು), ಭಾಮಿನೀ ಜಾತಿಯ ಪ್ರಬಂಧ (ಯಾವುದಾದರೂ ಮೂರು ಧಾತುಗಳನ್ನು ಹೊಂದಿರುವುವು), ತಾರಾವಳಿ ಜಾತಿಯ ಪ್ರಬಂಧ (ಯಾವುದಾದರೂ ಎರಡು ಧಾತುಗಳನ್ನುಳ್ಳ ಪ್ರಬಂಧ) ಈ ಎಲ್ಲಾ ಜಾತಿಯ ಪ್ರಬಂಧಗಳಲ್ಲೂ ತಾಳವು ಸಮಾನವಾದ ಅಂಶವಾಗಿರುತ್ತದೆ. ಆನಲೇಖಕರ ಉನ್ನತೋನ್ನತ ಎಂಬ ದೀಪಿನಿ ಜಾತಿಯ ಗೀತೆಯು ಭಾಂಡೀರ ಭಾಷೆಯ ಭಾಂಡೀರ ಗೀತೆಯಾಗಿದೆ. ಇದರಲ್ಲಿ ಇಯ್ಯ ಇಯ್ಯ ಎಂಬ ಪದಗಳು ಸೇರಿವೆ. ಸ್ವರಾಕ್ಷರ, ಪಾಠಾಕ್ಷರಗಳ ಬಳಕೆ ಪುರಂದರರಿಂದಾಗಿದೆ. ಬಹಳ ಮುಖ್ಯವಾಗಿ ಅಭ್ಯಾಸಗಾನಕ್ಕೆ ಪುರಂದರರು ಅಕ್ಷರಕಾಲದಲ್ಲಿ ಅಂದರೆ/ಏಟಿಗೆ/ಅಕ್ಷರದಂತೆ ಹಾಡುವಂತಾಗಿಸಿದ್ದು ಅವರ ಚಾಣಾಕ್ಷಮತಿಗೆ ಹಿಡಿದ ಕನ್ನಡಿಯಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಹಿಂದೆ ಇದ್ದ ಸಂಗೀತಕ್ಕೆ ಮತ್ತು ರೂಢಿಯಲ್ಲಿರುವ ಸಂಗೀತಕ್ಕೆ ಮಧ್ಯ ಸೇತುವೆಯಾಗಿ ಪುರಂದರರು ಸಂಪರ್ಕ ಸಾಧನವಾಗಿ ತಮ್ಮ ಅಮೂಲ್ಯ ರಚನೆಗಳ ಮೂಲಕ ತೊಡಗಿಸಿಕೊಂಡಿದ್ದಾರೆ.

ಈ ಮೇಲೆ ತಿಳಿಸಿದ ರಚನೆಗಳೆಲ್ಲವೂ ಸಂಗೀತಾಭ್ಯಾಸಿಗಳಿಗೆ ಅತ್ಯವಶ್ಯಕವಾಗಿ ಬೇಕಾಗಿರುವಂತಹ ಸ್ವರ ಭೇದಗಳ ಮತ್ತು ತಾಳ ಭೇದಗಳ ಜ್ಞಾನವನ್ನು ಮತ್ತು ಅದರ ಸೂಕ್ಶ್ಮ-ಸ್ಥೂಲತನಗಳನ್ನು ನಿರೂಪಿಸುವ ಬಾಲಪಾಠಗಳಾಗಿವೆ. ಅಂತೆಯೇ ಅಭ್ಯಾಸಗಾನಕ್ಕೆ ಅಥವಾ ಬಾಲಪಾಠಕ್ಕೆ ಒಂದು ಚೌಕಟ್ಟು ಯೋಚಿಸಿದ ಅದನ್ನು ನಿಯೋಜಿಸಿದ ಪುರಂದರರೇ ಸಂಗೀತ ಪಿತಾಮಹರು. ಇವರಿಗೆ ಸಂಗೀತ ಲೋಕವೇ ಚಿರಋಣಿ.

. ಪುರಂದರರು ರಚಿಸಿರುವ ರಚನೆಗಳು

ಅಭ್ಯಾಸ ಪಾಠವನ್ನು ಹೊರತು ಪಡಿಸಿ ಪುರಂದರರು ಸುಳಾದಿ, ಉಗಾಭೋಗ, ವೃತ್ತನಾಮ, ದಂಡಕ, ಕೀರ್ತನೆ, ಉದಯರಾಗಗಳಂತಹ ರಚನೆಗಳನ್ನು ಸಹ ರಚಿಸಿ ಸಂಗೀತ ಕ್ಷೇತ್ರವನ್ನು ಸಂಪತ್ಭರಿತವನ್ನಾಗಿಸಿದ್ದಾರೆ. ಇವುಗಳಲ್ಲಿ ಸುಳಾದಿ, ಉಗಾಭೋಗ, ಕೀರ್ತನೆಗಳು ಹೆಚ್ಚು ಜನಪ್ರಿಯತೆಗಳಿಸಿವೆ. ಈ ರಚನೆಗಳು ದಾಸಕೂಟದವರ ಶ್ರೇಷ್ಠ ಕೊಡುಗೆಯೂ ಆಗಿದೆ. ಪ್ರೊ.ಎಸ್.ಕೆ. ರಾಮಚಂದ್ರರಾವ್ ಅವರು ಹೇಳಿರುವ ಮಾತು ಪ್ರಸ್ತುತ ಅರ್ಥಪೂರ್ಣ. ‘ಪುರಂದರದಾಸರ ರಚನೆಗಳು ಶಾಸ್ತ್ರನಿಷ್ಟವೆಂಬ ನಾಗರಿಕ ಸಾಹಿತ್ಯ ಪ್ರಕಾರಕ್ಕೂ ಸೇರಬಲ್ಲವು. ಜಾನಪದ ಸಾಹಿತ್ಯಕ್ಕೂ ಸೇರಬಲ್ಲವು. ಗದ್ಯಕ್ಕಿಂತಲೂ ಪದ್ಯ ಪ್ರಭಾವಶಾಲಿಯಾದುದೆಂಬುದನ್ನು ಮನಗಂಡು ಹಾಡುಗಳನ್ನೇ ಹೆಣೆದರು: ಭಕ್ತಿಗೆ ಸಂಗೀತ ನೆರವಾದಿತೆಂದು ಬಗೆದು ಹಾಡುಗಳಿಗೆ ಶಾಸ್ತ್ರೀಯ ಸಂಗೀತ ಮೇಲಾಟವಿರದಂತೆ ಎಚ್ಚರವಹಿಸಿದರು. ಅವರ ಕೃತಿಗಳಲ್ಲಿ ಕೆಲವು ಮಾತ್ರ ಶುದ್ಧ ಸಂಗೀತದ ಪ್ರಕಾರಕ್ಕೆ ಸೇರುತ್ತವೆ: ಮತ್ತೆ ಕೆಲವು ನಾಟ್ಯಪದ್ಧತಿಗೆ ಸಾಮಗ್ರಿಯಾಗುತ್ತವೆ. ಉಳಿದಂತೆ ಸಾಹಿತ್ಯ ಸೊಗಸನ್ನು ಎತ್ತಿ ಕಾಣಿಸುವಷ್ಟೇ ಸಂಗೀತದ ಬಳಕೆ’ ಎಂಬ ವಿದ್ವಾಂಸರ ಮಾತು ದಿಟವಾದುದು. (ಪುರಂದರ ಸಾಹಿತ್ಯ ದರ್ಶನ ಸಂಪುಟ-೪, ಪುಟ-೯)

) ಸುಳಾದಿ

ಹರಿದಾಸರ ರಚನೆಗಳಲ್ಲಿ ಸುಳಾದಿಗಳು ಬಹಳ ಪ್ರಸಿದ್ಧಿ ಪಡೆದಿವೆ. ಇದನ್ನು Musical master piece ಎಂದೂ ಕರೆಯಲಾಗಿದೆ. ಇದು ಕನ್ನಡ ಭಾಷೆಯನ್ನು ಹೊರತು ಪಡಿಸಿ ಬೇರೆ ಭಾಷೆಗಳಲ್ಲಿ ಇದ್ದಂತೆ ತೋರುವುದಿಲ್ಲ. ಸುಳಾದಿ ಎನ್ನುವ ಪದದ ಸ್ಪಷ್ಟವಾದ ಅರ್ಥವು ನಮಗೆ ಆ ಕಾಲದ ಯಾವ ಗ್ರಂಥಗಳಿದಲೂ ತಿಳಿದು ಬರುವುದಿಲ್ಲ. ಆದರೆ ಅನಂತರ ಬಂದಂತಹ ಗ್ರಂಥಗಳಿಂದ ಸುಳಾದಿಗಳ ಬಗೆಗೆ ತೀಳಿದು ಬರುತ್ತದೆ. ಸುಳಾದಿಯನ್ನು ಕೆಲವು ವಿದ್ವಾಂಸರು ಸೂಡಾದಿ ಎಂದೂ ಭಾವಿಸಿದ್ದಾರೆ. ಸೂಡಾದಿ ಎಂಬುದು ಸಪ್ತತಾಳಗಳನ್ನು ಸೂಚಿಸುವುದೆಂದು ತಿಳಿದು ಬರುತ್ತದೆ. ಇದು ಗೀತ ಸಮೂಹ ವಿಶೇಷವಾಚಿ ದೇಶಿ ಶಬ್ಧವೆಂದುಚರುತ ಕಲ್ಲಿನಾಥ ಮತ್ತು ವೆಂಕಟಮುಖಿ ತಿಳಿಸಿದ್ದಾರೆ. ಸುಳಾದಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ರಚಿಸಿರುವವರು ಪುರಂದರರೇ. ಕ್ರಿ.ಶ. ೧೭೩೦ರಲ್ಲಿ ಸಂಗೀತ ಸಾರಾಮೃತವನ್ನು ಬರೆದ ತುಳಜಾಜಿಯೂ ಸುಳಾದಿಗಳನ್ನು ಹೇಳುವಾಗ ಪುರಂದರದಾಸರ ಸುಳಾದಿಗಳನ್ನೇ ನಿದರ್ಶನವಾಗಿ ಎತ್ತಿ ಕೊಂಡಿದ್ದಾನೆ. ಪುರಂದರರು ‘ಸುಳಾದಿ ಎಂಬ ಹೆಸರನ್ನು ಹೇಳಿದ್ದರೆ’ ಎಂದಿದ್ದಾರೆ. ಪ್ರೊ.ಸಾ.ಕೃ. ರಾಮಚಂದ್ರರಾವ್ ತಮ್ಮ ಪುರಂದರ ಸಾಹಿತ್ಯದರ್ಶನ ಸಂಪುಟ-೪, ಪುಟ-೨೫ ರಲ್ಲಿ. ಈ ಹಿಂದೆಯೇ ತಿಳಿಸಿದಂತೆ ಪ್ರಬಂಧಗಳಲ್ಲಿ ಸೂಡ, ಆಲಿಕ್ರಮ, ವಿಪ್ರಕಿರ್ಣಗಳೆಂಬ ೩ ಬಗೆಗಳಿದ್ದು ಸೂಡದಲ್ಲಿ ಶುದ್ಧ ಚಯಲಗ, ಉಂಟಾಯಿತು. ಆಲಿಕ್ರಮವೇ ಮುಂದೆ ಸಾಲಗ ಸೂಡವೆಂದೂ ಹೆಸರು ಪಡೆಯಿತು. ಇದೇ ಸುಳಾದಿಯ ಪ್ರಥಮ ರೂಪವೆಂದೂ ಶುದ್ಧ ಸೂಡದಲ್ಲಿ ಶಾಸ್ತ್ರೊಕ್ತವಾಗಿ ಮಾರ್ಗೀ ಪದ್ಧತಿಯೂ, ಸಾಲಗ ಸೂಡದಲ್ಲಿ ದೇಶೀ ಪದ್ದತಿಯೂ ಆಯಿತೆಂದು ತಿಳಿದು ಬರುತ್ತದೆ. ಸೂಳ್ ಎಂಬ ಕನ್ನಡ ಪದವೇ ಮುಂದೆ ಸೂಡ ಎಂಬುದಕ್ಕೆ ಮೂಲವೆಂದು ಒಟ್ಟಿನಲ್ಲಿ ಸುಳಾದಿ, ಸೂಡಗಳು ಹರಡುವುದಕ್ಕಾಗಿಯೇ ರಚಿತಗೊಂಡ ಪ್ರಬಂಧವೆಂದು ನಿಖರವಾಗಿ ಹೇಳಬಹುದು. ಪಂಡರೀಕ ವಿಠ್ಠಲನ ನರ್ತನ ನಿರ್ಣಯದ ಪ್ರಕಾರ ಸೂಡೆಂದರೆ ರಾಗ. ಧ್ರುವಕ ಮಂಠಕ, ರೂಪಕ, ಝಂಪಕ, ತ್ರಿವಿಡ, ಅತ, ಏಕ, ಎಂಬ ೭ ತಾಳಗಳನ್ನು ಬಳಸಿ ಹಾಡಿದಾಗ ಸುಡಾದಿ ಆಗುವುದೆಂದು ತಿಳಿದು ಬರುತ್ತದೆ. ಸೂಳಾದಿಗಳ ಗಾಯನದಲ್ಲಿ ಸಪ್ತತಾಳಗಳು ಇರಲೇಬೇಕೆಂಬ ನಿರ್ಬಂಧವೆನಿಲ್ಲ. ರಚನೆಯಲ್ಲಿಯೂ ಅಷ್ಟೇ ನುಡಿಗಳು ಇಷ್ಟೇ ಸಾಲುಗಳಿರಬೇಕೆಂಬ ನಿಯಮವೇನಿಲ್ಲ. ಆದರೆ ಧ್ರುವತಾಳ, ಮಠ್ಯ ತಾಳಗಳಿಲ್ಲದೆ ಸೂಳಾದಿಗಳಿಲ್ಲ. ಸೂಳಾದಿಗಳು ೫ ನುಡಿಗಳಿಂದ ೪ ನುಡಿಗಳವರೆಗೆ ಇರುತ್ತವೆ. ಆಯಾ ನುಡಿಗಳಿಗೆ ತಾಳವು ನಿರ್ದೇಶಿತಗೊಂಡಿರುತ್ತದೆ. ರಚನೆಯ ಕಡೆಗೆ ೨ ಸಾಲುಗಳ ‘ಜೊತೆ’ ಎನ್ನುವ ಸಾಹಿತ್ಯ ಭಾಗವಿರುತ್ತದೆ. ಸೂಳಾದಿಯ ಸಾಹಿತ್ಯವು ಪುರಾಣ ವಿಷಯವನ್ನಾಧರಿಸಿರುತ್ತದೆ. ಇವು ಸಂಕೀರ್ತನ ಪದ್ಧತಿಗೆ ಸೇರುವಂತಹ ರಚನೆಗಳು. ಸುಳಾದಿಯನ್ನು ೫ ಅಥವಾ ೭ ತಾಳಗಳಲ್ಲಿ ಹೊಂದಿಸಲ್ಪಟ್ಟ ಲಯಪ್ರಾಸಗಳಿಗೆ ನಿಯೋಜಿಸಲ್ಪಟ್ಟ, ಒಂದು ಪ್ರಮೇಯವನ್ನು ಪೂರ್ಣಗೊಳಿಸುವ ಗೀತೆ ಎನ್ನಲೂಬಹುದು. ಸುಳಾದಿಗಳಿಗೆ ಪಲ್ಲವಿ-ಚರಣಗಳ ವಿಭಾಗಗಳಿರುತ್ತವೆ. ಕಡೆಯ ಎರಡು ಸಾಲಿನ ‘ಜೊತೆ’ಯನ್ನು ಪ್ರತಿಯೊಂದು ಚರಣದ ಕಡೆಗೂ ಹಾಡಬೇಕು. ಇವುಗಳನ್ನು ೫ ಆಥವಾ ೭ ತಾಳಗಳಲ್ಲಿಯೂ ಹಾಡುವ ಅಗತ್ಯವುಂಟು. ಪುರಂದರದಾಸರಿಂದ ರಚಿತಗೊಂಡ ಸುಳಾದಿಗಳ ಸಂಖ್ಯೆ ಎಷ್ಟೋ ತಿಳಿದಿಲ್ಲ. ಆದರೆ ಲಭ್ಯವಿರುವ ಅವರ ಸುಳಾದಿಗಳ ಸಂಖ್ಯೆ ೫೩. ಇದರಲ್ಲಿನ ವಿವಿಧ ತಾಳಗಳ ಬಿಗಿ ಎಲ್ಲರನ್ನೂ ಸೇರಲು ಆಸ್ಪದ ಮಾಡಿಕೊಟ್ಟಿಲ್ಲ. ಇದೊಂದು ಸಂಗೀತ ಲಕ್ಷ್ಯ-ಲಕ್ಷಣಗಳೆರಡರ ಜ್ಞಾನವನ್ನು ಅಪೇಕ್ಷಿಸುವಂತಹ ಶಾಸ್ತ್ರ ಬದ್ಧ ಸಂಗೀತ ಪಾಠಕ್ರಮ ತಿಳಿದ ಕಲಾವಿದರಿಂದ ಪ್ರಸ್ತುತಿಗೊಳ್ಳುವಂತಹ ರಚನೆ. ಸುಳಾದಿಗಳಿಗೆ ಉದಾಹರಣೆ-ಆನಂದ ಸುಳಾದಿ ‘ಆಪಾದವಾನಂದ’, ‘ಆನಖವಾನಂದ’, ‘ಪರಿಪುರ್ಣ ಸುಳಾದಿ’, ‘ಪಾದನಖ ಪರಿಪೂರ್ಣ’, ‘ಜಾನುಜಂಘ ಪರಿಪೂರ್ಣ’, ಇತ್ಯಾದಿಗಳನ್ನು ಹೆಸರಿಸಬಹುದು.

) ಉಗಾಭೋಗ

ಇದು ೧೨ನೇ ಶತಮಾನದ ವಚನಕಾರರ ವಚನಗಳನ್ನು ಅನುಸರಿಸಿರುವಂತಹ ಸರಳ ಸುಂದರ ರಚನೆ. ಮಾತ್ರಾಗಣ, ಲಯಬಂಧ, ಕಾವ್ಯಗುಣಗಳನ್ನು ಒಳಗೊಂಡ ಗಧ್ಯ ಪದ್ಯಗಳೆರಡರ ಸಮ್ಮಿಶ್ರ ಸಾಹಿತ್ಯ. ಈ ಉಗಾಭೋಗದ್ದಾಗಿದೆ. ಪುರಂದರರ ಸುಮಾರು ೧೪೦ ಉಗಾಭೋಗಗಳು ನಮಗೆ ಉಪಲಬ್ಧವಿವೆ. ಸುಳಾದಿ ನಿಯಮಬದ್ಧ ರಚನೆಯಾದರೆ ಉಗಾಭೋಗ ಅನಿಯಮಬದ್ಧ ರಚನೆ. ಇದನ್ನು ರಾಗವಾಗಿ ಹಾಡುವುದುಚಿತ. ವಿದ್ವಾಂಸರ ಪ್ರಕಾರ “ಉಗಾಭೋಗಗಳು ಅತಿ ಪ್ರಾಚೀನವಾದ ಸಂಗೀತ ರೂಪಗಳು ಮತ್ತು ಇದು “ಆಲಾಪ” ಎಂಬ ಶಾಸ್ತ್ರ ವಿಷಯಕ್ಕೆ ಅನ್ವಯವಾಗಿದೆ. ಉಗಾಭೋಗಗಳನ್ನು ಗದ್ಯರೂಪದಲ್ಲಿರುವ ರಚನೆಗಳೆನ್ನುವುದು ಒಂದು ರೀತಿಯಿಂದ ಉಚಿತವೆನಿಸುತ್ತದೆ. ಈ ರಚನೆಗಳ ವ್ಯಾಪ್ತಿಯು ನಾಲ್ಕಾರು ಶಬ್ಧಗಳ ಒಂದು ಅರ್ಥಪೂರ್ಣ ವಾಕ್ಯವಾಗಿರುತ್ತದೆ. ಇವುಗಳ ಗಾನಕ್ರಮಕ್ಕೆ ಸ್ವರಗಳ ಮತ್ತು ರಾಗಗಳ ಶಾಸ್ತ್ರೋಕ್ತ ವಿನ್ಯಾಸ ಅತ್ಯಗತ್ಯ” (ಟಿ.ಆರ್. ನಾಗರತ್ನ, ಗಾನಶಾಸ್ತ್ರದಾಯಿನಿ, ಪು.೯೦) ಊರ್ಧ್ವಲೋಕಕ್ಕೆ ಹೋಗತಕ್ಕಂತಹ ಭಾಗವೇ ಉಗಾಭೋಗ ಎಂದು ಹೇಳುವ ವಾಡಿಕೆಯೂ ನಮ್ಮಲ್ಲಿದೆ. ಪುರಂದರರು ಉಗಾಭೋಗ ಎಂಬ ಪದವನ್ನು ಎಲ್ಲಿಯೂ ಬಳಸಿಲ್ಲ. ನೂರಾರು ವರ್ಷಗಳ ನಂತರ ವಿಜಯದಾಸರು ತಮ್ಮ ಪದವೊಂದರಲ್ಲಿ ಪುರಂದರರು ಸಾವಿರಾತು ಉಗಾಭೋಗಗಳನ್ನು ರಚಿಸಿರುವರೆಂದು ಉಲ್ಲೇಖಿಸಿದ್ದಾರೆ. ಇಲ್ಲಿಯೇ ನಮಗೆ ಮೊಟ್ಟ ಮೊದಲ ಬಾರಿಗೆ ಉಗಾಭೋಗ ಎಂಬ ಪದವು ಕಾಣಸಿಗುವುದು. ಉಗಾಭೋಗವು,ಉದ್ರಾಹ, ಮೆಲಾಪಕ, ಧ್ರುವ, ಅಭೋಗ ಎಂಬ ೪ ಅಂಗಗಳಿರುವ ರಚನೆ ಎಂದು ಮೊದಲ ಉದ್ಗ್ರಾಹ ಹಾಗೂ ಕಡೆಯ ಅಭೋಗಗಳು ಸೇರಿ ಅದ್ಗ್ರಾಹಾಭೋಗವಾಯಿ ತೆಂದು ಮುಂದೆ ಇದೇ ಉಗಾಭೋಗವೆಂದು ಕರೆಯಲ್ಪಟ್ಟಿತೆಂದು ತಿಳಿದುಬರುತ್ತದೆ. ಉದ್ಗ್ರಾಹ ಎಂದರೆ ರಾಗವನ್ನು ಎತ್ತಿ ಕೊಳ್ಳುವುದು ಎಂದರ್ಥ. ಅಭೋಗ ಎಂದರೆ ಹಾಡಿನ ಉಪಸಂಹಾರ. ಒಟ್ಟಿನಲ್ಲಿ ಉಗಾಭೋಗ ರಚನೆಯ ಬಗೆಗೆ ಅದನ್ನು ಹಾಡುವ ಬಗೆಗೆ ಹಾಗೂ ಅದರ ಅಂಗಗಳ ಬಗೆಗೆ ನಿಖರವಾಗಿ ತಿಳಿದು ಬರುವುದಿಲ್ಲ. ಅದರೆ ರಾಗವೊಂದರಲ್ಲಿ ಅದರ ಸಾಹಿತ್ಯದ ಭಾವಕ್ಕನುಗುಣವಾಗಿ ನಿಯಮಬದ್ಧವಾಗಿ ವಿವಿಧ ಸ್ಥಾಯಿಗಳಲ್ಲಿ ಹಾಡುವ ಪರಿ ಈಗಲೂ ಇದೆ. ವಚನಗಳಂತಯೇ ಭಾಸವಾಗುವ ಈ ಉಗಾಭೋಗಗಳಲ್ಲಿ ಛಂದಸ್ಸಿನ ಕಟ್ಟು ಪಾಡಿಲ್ಲ. ಅಲ್ಲಿನ ಉಕ್ತಿಯನ್ನು ಪೂರೈಸಲು ರಾಗವಾಗಿ ಹಾಡುವುದೇ ಈ ಉಗಾಭೋಗ. ಉಗಾಭೋಗದ ಸಾಹಿತ್ಯದ ಅರ್ಥಕ್ಕೆ ಹೊಂದಿ ನಡೆವ ಕೀರ್ಥನೆಗಳನ್ನು ಆಯ್ಕೆ ಮಾಡಿ, ನಿಯಮಬದ್ಧವಾಗಿ ಉಗಾಭೋಗವನ್ನು ಮುಂದುವರೆದು ದಾಸರ ಪದವನ್ನು ನಿಯಮಬದ್ಧವಾಗಿ ಹಾಡಿ ರಂಜಿಸುವುದು ಈಗಲೂ ರೂಢಿಯಲ್ಲಿದೆ. ಉಗಾಭೋಗವನ್ನು ತಾಳವಿಲ್ಲದೆ ಹಾಡುವಲ್ಲಿ ಭಾವನೆಗೆ ಅಡ್ದಿಯಾಗದಂತೆ, ಅರ್ಥಸ್ಪುರಣೆಗೆ ಒತ್ತು ಕೊಟ್ಟು ಹಾಡಲು ಇದರಿಂದ ಸಾಧ್ಯವಾಗುತ್ತದೆ. ಇದಕ್ಕಾಗಿಯೇ ಉಗಾಭೋಗಗಳನ್ನು ‘ಅನಿಯಮಬದ್ಧ ಸಾಕ್ಷರರಾಗಾಲಾಪ್ತಿ’ ಎಂದು ಕರೆಯಲಾಗಿದೆ. ಉಗಾಭೋಗಕ್ಕೆ ಉದಾಹರಣೆ- ‘ಉರಿಗಂಜೆ ನೆರೆಗಂಜೆ ಶರೀರದ’, ‘ಜಗವ ಸುತ್ತಿಹುದೆಲ್ಲ ನಿನ್ನ ಮಾಯೆವಯ್ಯ’, ಇದಕಾರಂಜುವರೋ ಗೋಪಾಲ’ ಇತ್ಯಾದಿ.

) ಕೀರ್ತನೆ/ಪದ

ಪುರಂದರದಾಸರ ರಚನೆಗಳನ್ನು ದಾಸರ ಪದಗಳು ದೇವರ ನಾಮ, ಕೀರ್ತನೆ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುವದನ್ನು ನಾವು ಕಾಣುತ್ತೇವೆ. ಇವು ಪರಸ್ಪರ ಒಂದಕ್ಕೊಂದು ಹತ್ತಿರದವೇ. ‘ಪದ’ ರಚನೆಯಲ್ಲಿ ಮಾತ್ರೆಗಿಂತಲೂ ಲಯಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದ್ದು ಲಯದಲ್ಲಿ ಅಂಶ ಲಯಕ್ಕಿಂತಲೂ ತಾಳ ಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಇಲ್ಲೆಲ್ಲಾ ಸಂಗೀತಕ್ಕಿಂತ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ. ಸಾಹಿತ್ಯ ಮುತ್ತುಗಳಂತಾದರೆ ಸಂಗೀತ ಅದನ್ನು ಸೇರಿಸುವ ದಾರವಷ್ಟೇ. ಆಡುಮಾತಿನಲ್ಲಿ ಸಾಮಾನ್ಯರ ಬಾಯಲ್ಲಿ ಪದ ಎಂದರೆ ಹಾಡು ಎಂದೂ ಒಟ್ಟಾರೆ ದಾಸರ ಪದವೆಂದೂ, ಅದು ದೇವರನ್ನು ಕೀರ್ತಿಸುವ ನಾಮಾವಳಿಗಳಾದರೆ ದೇವರ ನಾಮವೆಂದೂ, ಪಲ್ಲವಿ-ಅನುಪಲ್ಲವಿ-ಚರಣ ಭಾಗಗಳನ್ನು ಹೊಂದಿರುವ ೩ ರಿಂದ ೫-೬ ನುಡಿಗಳನ್ನು ಹೊಂದಿರುವ ರಚನೆಯನ್ನು, ದೇವಸ್ತುತಿಯನ್ನು ಹೊಂದಿರುವ ರಚನೆಗೆ ಕೀರ್ತನೆ ಎಂದೂ ವಾಡಿಕೆಯಲ್ಲಿ ಕರೆಯಲಾಗುತ್ತದೆ. ಕೆಲವು ಕೀರ್ತನೆಗಳು ೨೦ಕ್ಕಿಂತ ಹೆಚ್ಚು ನುಡಿಗಳನ್ನು ಹೊಂದಿವೆ. ಈ ರಚನೆಗಳು ನವವಿಧ ಭಕ್ತಿಗಳನ್ನು ಒಳಗೊಂಡು ರಾಮಾಯಣ, ಮಹಾಭಾರತ, ವೇದೋಪನಿಷತ್ತು, ಪುರಾಣ ಪುಣ್ಯ ಕತೆಗಳನ್ನು ಸಾಮಾಗಿಕರ ಸಮಾಜ ವ್ಯವಸ್ಥೆಯನ್ನು, ತತ್ವೋಪದೇಶವನ್ನು ಒಳಗೊಂಡ ಆಕರ್ಷಕ ವಿಚಾರಗಳನ್ನು ಹೊಂದಿವೆ. ಕೀರ್ತನೆ ಸಾಹಿತ್ಯ ಪ್ರಧಾನ ಪ್ರಬಂಧ ಹಿತಮಿತ ಸಂಗೀತ ಇದಕ್ಕೆ ಸೂಕ್ತ. ಪುರಂದರರ ನೂರಾರು ಕೀರ್ತನೆಗಳು ಜನಪ್ರಿಯತೆಗಳಿಸಿವೆ. ಉದಾಹರಣೆಗೆ ದಾಸನ ಮಾಡಿಕೊ ಎನ್ನ, ಭಾಗ್ಯದ ಲಕ್ಷ್ಮಿ ಬಾರಮ್ಮ, ಓಡಿಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯೆ, ಆಡಿದನೋರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ, ಏನುಧನ್ಯಳೋ ಲಕುಮಿ ಎಂಥ ಮಾನ್ಯಳೋ ಮುಂತಾದವು. ಅನಂತರದ ಶತಮಾನದಲ್ಲಿ ಬಂದ ಕೃತಿ ಮಾತೃಕೆಯ ಪ್ರಥಮ ದರ್ಶನ ಹರಿದಾಸರ ಕೀರ್ತನೆಗಳಿಂದಾಗಿವೆ ಎಂದರೆ ತಪ್ಪಿಲ್ಲ.

. ಬಳಸಿರುವ ರಾಗಗಳು

ಅಭ್ಯಾಸಗಾನದ ಪ್ರಪ್ರಥಮ ಪಾಠಕ್ಕೆ ಪುರಂದರದಾಸರು ಮಾಯಾಮಾಳವಗೌಳ ರಾಗದ ನಿರ್ದೇಶನ ಮಾಡಿದ್ದಾರೆ. ಇದು ಅತ್ಯಂತ ಸಮರ್ಪಕ ರೀತಿಯ ಆಯ್ಕೆ ಎಂದೇ ನನ್ನ ಭಾವನೆ. ಮಾಯಾಮಾಳವಗೌಳ ರಾಗವು ಸಂಪೂರ್ಣ ಮೇಳ ಪದ್ಧತಿಯ ಹೆಸರು. ಇದು ೧೫ನೇ ಮೇಳಕರ್ತರಾಗ, ಹಿಂದೆ ಈ ರಾಗವು ಅಸಂಪೂರ್ಣ ಮೇಳ ಪದ್ಧತಿಯಲ್ಲಿ ಮಾಳವಗೌಳ ಎಂದು ಕರೆಯಲ್ಪಡುತ್ತಿತ್ತು. ಕಾಲಕ್ರಮದಲ್ಲಿ ಮೇಳ ಪದ್ಧತಿಯಲ್ಲಿ ಮಾಳವಗೌಳ ಎಂದು ಕರೆಯಲ್ಪಡುತ್ತಿತ್ತು. ಕಾಲಕ್ರಮದಲ್ಲಿ ಕಟಪಯಾದಿ ಸೂತ್ರಕ್ಕೆ ಹೊಂದಿಸಲು ಅನ್ವಯವಾಗುವಂತೆ ‘ಮಾಯ’ ಎಂಬ ಪದವನ್ನು ಮುಂಪ್ರತ್ಯಯವಾಗಿ ಸೇರಿಸಿ, ಮಯಾಮಾಳವಗೌಳವೆಂದು ಕರೆಯಲಾಯಿತು. ಈ ರಾಗದ ಸ್ವರಗಳು ಅಂತರವು ಪರಸ್ಪರ ಸಮಾನವಾಗಿದೆ. ಈ ರಾಗದಲ್ಲಿ ಪ್ರಕೃತಿ ಸ್ವರದ ನಂತರವೇ ಒಂದು ವಿಕೃತಿ ಸ್ವರವೂ, ಒಂದು ವಿಕೃತಿಸ್ವರದ ನಂತರದಲ್ಲಿ ಅಂತರವನ್ನು ಬಿಟ್ಟು ಮತ್ತೊಂದು ವಿಕೃತಿ ಸ್ವರವೂ ಬರುವ ಕಾರಣದಿಂದಾಗಿ ಸಂಗೀತಾಭ್ಯಾಸಿಗಳಿಗೆ ತೊಡಕಿಲ್ಲ, ಯಾವ ಕ್ಲೇಶವೂ ಇಲ್ಲದೆ ಸುಲಭಗ್ರಾಹ್ಯವಾಗಿರುವುದೊಂದು ಅತಿ ದೊಡ್ಡ ಪ್ರಯೋಜನವೆನ್ನಬಹುದು. ಅಂತೆಯೇ ಮಾಯಾಮಾಳವಗೌಳ ರಾಗದ ಆಯ್ಕೆ ಅತ್ಯಂತ ಸಮರ್ಪಕವಾಗಿ ಸಂಗೀತಾಭ್ಯಾಸಿಗಳಿಂದ ಸ್ವೀಕೃತಗೊಂಡಿದೆ. ಲಕ್ಷಣಕಾರ ರಾಮಾಮಾತ್ಯ ತನ್ನ ಸ್ವರಮೇಳ ಕಳಾನಿಧಿಯಲ್ಲಿ ಮಾಳವಗೌಳ ರಾಗದ ಬಗೆಗೆ ಹೇಳುತ್ತಾ ‘ರಾಗಾಣಾಂ ಉತ್ತೋಮತೋಮಃ’ ಎಂದು ಆ ರಾಗದ ಉತ್ತಮಾಂಶವನ್ನು ಕೊಂಡಾಡಿದ್ದಾನೆ. ಯಾವುದಾದರೊಂದು ತಂಬೂರಿ ಅಥವಾ ವೀಣೆಯನ್ನು ನಿಖರವಾಗಿ ಶ್ರುತಿಮಾಡಿ ಮಿಡಿದಾಗ ಅದರಲ್ಲಿ ಶುದ್ಧ ಮಾದ್ಧ್ಯಮ ಪಂಚಮ ಭಾವಗಳೂ, ಅಂತರ ಗಾಂಧರದ ಭಾವವೂ, ತಾರಷಡ್ಡದ ಭಾವವೂ ತಾವೇ ತಾವಾಗಿ ಹುಟ್ಟಿಕೊಂಡು ಸೂಕ್ಷ್ಮಮತಿಗಳಾದ ಕೇಳುಗರಿಗೆ ಸ್ಫುರಿಸುತ್ತದೆ. ಈ ಸ್ವರಗಳನ್ನು ರಾಮಾಮಾತ್ಯ ಸ್ವಯಂಭೂ ಸ್ವರಗಳೆಂದು ಕರೆದಿದ್ದಾನೆ. ಈ ಸ್ವರಗಳೆಲ್ಲವೂ ಅಧಾರ ಸ್ವರಗಳು. ಬಹಳವಾದ ಮನುಷ್ಯ ಪ್ರಯತ್ನವನ್ನಪೇಕ್ಷಿಸದೆ ಇವು ಸೃಷ್ಟಿಗೊಳ್ಳುತ್ತವೆ. ಈ ಕಾರಣದಿಂದಲೂ ಸಹ ಅಭ್ಯಾಸ ಗಾನದ ಮಾಯಾಮಾಳವಗೌಳ ರಾಗದ ಆಯ್ಕೆ ಅತ್ಯಂತ ಉಚಿತವಾದದ್ದೇ ಸರಿ. ಇನ್ನು ಪಿಳ್ಳಾರಿ ಗೀತೆಗಳಿಗೆ ನಿರ್ದೇಶಿಸಿರುವ ಮಲಹರಿ ರಾಗ. ಮಲಹರಿಯು ಮಾಯಾ ಮಾಳವಗೌಳದ ಜನ್ಯರಾಗ, ಸಂಗೀತಾಭ್ಯಾಸಿಗಳು ಮಾಯಾಮಾಳವಗೌಳ ರಾಗವನ್ನು ಹಿಂದಿನ ಪಾಠಗಳಲ್ಲಿ ಅಭ್ಯಸಿಸಿ ಆ ರಾಗದ ಹಿಡಿತ ಸಾಧಿಸಿರುತ್ತಾರೆ. ಮುಂದೆ ಅದೇ ಸ್ವರಗಳುಳ್ಳ ಆದರೆ ಕೆಲವು ಸ್ವರಗಳು ವರ್ಜ್ಯವಿರುವ ಔಡವ ಷಾಡವವರ್ಗಕ್ಕೆ ಸೇರುವ ಮಲಹರಿ ರಾಗವನ್ನು ಪಿಳ್ಳಾರಿಗೀತೆ ಕಲಿಕೆಯ ಸಂದರ್ಭದಲ್ಲಿ ಕಲಿಯಲು ಸಂಗೀತಾಭ್ಯಾಸಿಗಳಿಗೆ ತೊಡಕಾಗುವುದಿಲ್ಲ. ಮಲಹರಿ ರಾಗದ ಆಯ್ಕೆಯೂ ಕೂಡ ಸಮಯೋಚಿತವಾಗಿದೆ. ಪುರಂದರದಾಸರ ‘ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ‘ತುತ್ತೂರು ತೂರೆಂದು’’ ನಳಿನಜಾಂಡ ತಲೆಯತೂಗಿ’ ಎಂದು ಆರಂಭಗೊಳ್ಳುವ ಪುರಂದರರ ಮೂರು ಕೀರ್ತನೆಗಳಲ್ಲಿ ಹಲವಾರು ರಾಗಗಳು ಉಕ್ತಗೊಂಡಿವೆ. ಮೊದಲನೆಯ ಕೀರ್ತನೆಯಲ್ಲಿ ಪಾಡಿ, ಮಲ್ಹಾರಿ, ಬೈರವಿ, ಸಾರಂಗಿ, ದೇಶಿ, ಗುಂಡಕ್ರಿಯ ಗುರ್ಝರಿ, ಕಲ್ಯಾಣಿ ರಾಗಗಳು ಹೇಳಲ್ಪಟ್ಟಿವೆ. ತುತ್ತುರಿತೊರೆಂದು ಎಂದು ಪ್ರಾರಂಭಗೊಳ್ಳುವ ಕೀರ್ತನೆಯಲ್ಲಿ ಗೌಳ, ನಟ್ಟ, ಆಹಿರಿ, ಗೂರ್ಜರಿ, ಮಾಳವ, ಸಾರಂಗಿ, ಫಲಮಂಜರಿ, ಗೌಳಿ, ದೇಶಾಕ್ಷಿ ರಾಗಗಳು ಉಲ್ಲೇಖಗೊಂಡಿವೆ. ‘ನಳಿನ ಜಾಂಡ ತಲೆಯದೂಗಿ’ ಎಂದು ಆರಂಭಗೊಳ್ಳುವ ಕೀರ್ತನೆಯಲ್ಲಿ ಮಾಳವಿ, ದೇಶಿ, ಗುರ್ಜರಿ, ಬೈರವಿ, ಗೌಳಿ, ನಾಟಿ, ಸಾವೇರಿ, ಆಹೇರಿ, ಪೂರ್ವಿ, ಕಾಂಬೋಡಿ, ಪಾಡಿ, ದೇಶಾಕ್ಷಿ, ಶಂಕರಾ ಭರಣ, ಮಾಳವ, ವರಾಳಿ, ಕಲ್ಯಾಣಿ, ತೋಡಿ, ಮುಖಾರಿ, ಯರಳಿ? ವಸಂತ, ಚೌಳಿ, ಧನ್ಯಾಸಿ, ಸೌರಾಷ್ಟ್ರ, ಗುಂಡಕ್ರಿಯ, ರಾಮಕ್ರಿಯ, ಮೇಘ, ಕುರಂಜಿ ರಾಗಗಳು ಹೇಳಲ್ಪಟ್ಟಿವೆ. ಈ ಕೀರ್ತನೆಗಳಿಂದ ನಮಗೆ ಲಭ್ಯವಾಗುವ ರಾಗಗಳ ಹೆಸರುಗಳು ೩೦. (ಪುನರುಕ್ತಿಯನ್ನು ಪರಿಗಣಿಸದೆ) ಬತ್ತಿಸರಾಗಗಳೆಂದರೆ ಇವುಗಳೇ ಎಂದು ನಮಗೆ ನಿಖರವಾಗಿ ತಿಳಿದು ಬರುವುದು, ೧೫ ನೇ ಶತಮಾನದ ನಿಜಗುಣ ಶಿವಯೋಗಿಯವರ ವಿವೇಕ ಚಿಂತಾಮಣಿ ಗ್ರಂಥದಿಂದ. ಅಲ್ಲಿ ಸೂಚಿಸಿರುವ ರಾಗಗಳು ಪುರಂದರದಾಸರರು ಹೇಳಿರುವ ರಾಗಗಳು ಸಾಮಾನ್ಯತೆ ದೃಷ್ಟಿಯಿಂದ ಬಹಳ ಹತ್ತಿರವೆನಿಸುತ್ತವೆ. ಆದರೆ ಸಂಪೂರ್ಣ ಸಾಮ್ಯತೆಯನ್ನು ಹೊಂದಿಲ್ಲ. ಪುರಂದರರು ಸೂಚಿಸಿರುವ ರಾಗಗಳಲ್ಲಿ ಶ್ರೀರಾಗ ಮತ್ತು ಆರಭಿ ರಾಗಗಳು ಸೇರಿಲ್ಲ. ಈ ಎರಡು ರಾಗಗಳು ಆರ್ಷೇಯರಾಗಗಳೇ, ಇದಕ್ಕೆ ಕಾರಣವೇನೋ ತಿಳಿದುಬಂದಿಲ್ಲ. ಪುರಂದರರ ಪದಗಳೆಲ್ಲ ಸುಮಾರು ೩೦ ರಾಗಗಳಲ್ಲಿ ಸೂಚಿಸಲ್ಪಟ್ಟಿವೆ.

. ಬಳಸಿರುವ ತಾಳಗಳು

ಪುರಂದರರು ಸಂಗೀತಾಭ್ಯಾಸಿಗಳಿಗೆ ಪ್ರಾರಂಭಿಕ ತಾಳವಾಗಿ ಆದಿತಾಳವನ್ನು ಸೂಚಿಸಿದ್ದಾರೆ. ಅದರ ಹೆಸರೇ ಹೇಳುವಂತೆ ಆದಿತಾಳವು ಮೊದಲ ತಾಳವೇ ಆಗಿದೆ.ಒಂದು ಆವರ್ತಕ್ಕೆ ೮ ಅಕ್ಷರಗಳನ್ನು ಹೊಂದಿರುವ, ಚತುರಶ್ರ ಜಾತಿಯ ಒಂದು ಲಘು ಹಾಗೂ ಎರಡು ದೃತಗಳುನ್ನುಳ್ಳ ತಾಳವಿದು. ಗಾಯಕರು, ವಾದಕರು, ಒಟ್ಟಾರೆ ಸಂಗೀತಗಾರರು ಸಾಮಾನ್ಯವಾಗಿ ಶೇಕಡ ೮೦ರಷ್ಟು ಬಳಸುವ ತಾಳವಿದೆಂದರೆ ಅತಿಶಯೋಕ್ತಿಯೆನಲ್ಲ. ಇದು ಪುರಂದರರು ಹಾಕಿಕೊಟ್ಟ ತಾಳ ಚೌಕಿಟ್ಟಿನ ಹಿರಿಮೆ. ಇನ್ನು ಅಲಂಕಾರಗಳಿಗೆ ಸಪ್ತತಾಳಗಳನ್ನು ಸಮಿಕರಿಸಿ, ತಾಳದ ಬಗೆಗೆ, ತಾಳದ ಜಾತಿಗಳ ಬಗೆಗೆ, ಅದರ ವಿವಿಧ ಅಂಗಗಳ ಬಗೆಗೆ ಒಟ್ಟು ನಿಖರ ಲೆಕ್ಕಾಚಾರವನ್ನು ಸ್ಥಿರಗೊಳಿಸಿ ಕೊಟ್ಟ ಮಹಾನುಭವರಿವರು. ಧ್ರುವ ತಾಳದ ತಾಳಾಂಗ 100414, ಮಠ್ಯತಾಳದ ತಾಳಾಂಗ 14014, ರೂಪಕತಾಳದ ತಾಳಾಂಗ 014. ಈ ತಾಳಗಳೆಲ್ಲವು ಚತುರಶ್ರ ಜಾತಿಗೆ ಸೇರಿದವುಗಳು. ಝಂಪೇತಾಳದ ತಾಳಂಗ 17U0 ಇದು ಮಿಶ್ರಜಾತಿಗೆ ಸೇರಿದುದು. ತ್ರಿಪುಟ ತಾಳದ ತಾಳಾಂಗ 1300.ಇದು ಕ್ರಿಷ್ಯಜಾತಿಯದು. ಅಟ್ಟತಾಳದ ತಾಳಂಗ 151500. ಇದು ಖಂಡ ಜಾತಿಗೆ ಸೇರಿದುದ. ಕಡೆಯದು ಏಕತಾಳ ಇದರ ತಾಳಾಂಗ 19. ಇದು ಸಂಕೀರ್ಣಜಾತಿಗೆ ಸೇರಿದುದು.

ಈ ತಾಳಗಳ ಅಧಾರದ ಮೇಲೆ ನಮ್ಮ ಕರ್ನಾಟಕ ಸಂಗೀತವು ಸದೃಢವಾಗಿ ಬೆಳೆದು ನಿಂತಿದೆ. ಬೇರಾವ ಸಂಗೀತ ಪದ್ಧತಿಯಲ್ಲೂ ಕಾಣಸಿಗದಷ್ಟೂ ವಿಸ್ತಾರವಾದ, ಕ್ಲಿಷ್ಟವಾದ, ಸೂಕ್ಷ್ಮವಾದ ಮಿದುಳಿಗೆ ಕೆಲಸ ನೀಡುವ, ಅಚ್ಚರಿಯನ್ನುಂಟು ಮಾಡುವಷ್ಟು ವಿಚಾರಗಳು ನಮ್ಮ ಕರ್ನಾಟಕ ಸಂಗೀತ ಪದ್ದತಿಯ ಲಯ ವಿಚಾರಗಳಲ್ಲಡಗಿವೆ ಎಂಬುದು ಇದರ ವ್ಯಾಪ್ತಿಯನ್ನು ಸೂಚಿಸುತ್ತದೆ. ಪುರಂದರರ ಪಿಳ್ಳಾರೀ ಗೀತೆಗಳಿಗೂ ಈ ಸುಳಾದಿ ಸಪ್ತತಾಳಗಳೇ ಬಳಕೆಗೊಂಡಿವೆ.

ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಛಾಪುತಾಳಗಳ ಪಾತ್ರಹಿರಿದು. ಪುರಂದರರು ಈ ಛಾಪುತಾಳಗಳ ನಿರ್ಮಾತೃಗಳು ಸಾಹಿತ್ಯ ಪ್ರಧಾನವಾಗಿ ಹಾಡುವಲ್ಲಿ ಅಂತೆಯೇ ಸಾಹಿತ್ಯ ಚೆನ್ನಾಗಿ ಸ್ಫುರಿಸುವಂತೆ ಹಾಡುವಲ್ಲಿ ರಾಗವನ್ನು ಎಳೆದು ಎಳೆದು ಹಾಡಿದಾಗ, ಸಾಹಿತ್ಯದ ಸ್ಫುರಣೆ ಕಡಿಮೆ ಆಗುತ್ತದೆ. ಈ ನ್ಯೂನತೆಗೆ ಪುರಂದರರು ಪರಿಹಾರ ಕಂಡುಕೊಂಡಿದ್ದು, ಹೀಗೆ. ಇದಕ್ಕೆ ಉದಾಹರಣೆಯಾಗಿ ಪುರಂದರರ ‘ಅನುಭವದಡಿಗೆಯ ಮಾಡಿ’ ಎಂಬ ಕೀರ್ತನೆಯನ್ನು ನೋಡೋಣ. ಇದನ್ನು ತ್ರಿಷ್ಯ ತ್ರಿಪುಟದಲ್ಲಿ ಹಾಡು ಸಾಧ್ಯ. ಸಾಹಿತ್ಯದ ವೇಗ ಸರಿಯಾಗಿದ್ದಲ್ಲಿ ಮಾತ್ರ ಕೇಳುಗರಿಗೆ ಸರಿಯಾಗಿ ಅರ್ಥವಾಗುತ್ತದೆಯಲ್ಲವೆ? ತ್ರಿಷ್ಯ ತ್ರಿಪುಟ ತಾಳದಲ್ಲಿ ಹಾಡಿದಲ್ಲಿ ಆವೇಗಕ್ಕೆ ತಾಳ ಹಾಕುವುದು ಕಷ್ಟ ಸಾಧ್ಯ. ಈ ತೊಡಕನ್ನು ಬಿಡಿಸಿಕೊಂಡ ಮಾರ್ಗವೇ ಅಥವಾ ಸುಲಭೋಪಾಯವೇ ಛಾಪುತಾಳ. ಮೆಲ್ಕಂಡ ೭ ಅಕ್ಷರಗಳನ್ನು ೩+೨+೨=೭ ರಂತೆ ಅಂದರೆ ಮೂರಕ್ಕೆ ಒಂದು ಘಾತ, ಮತ್ತೆ ಎರಡಕ್ಕೆ ಒಂದು ಘಾತ ಹಾಕುವುದರ ಮೂಲಕ ಛಾಪುತಾಳಗಳಿಗೆ ನಾಂದಿಹಾಡಿದರು. ಈ ಪರಂಪರೆಯಿಂದಾಗಿ ಖಂಡಛಾಪು-ತಕ್ಕ ತಕ್ಕಿಟ, ಮಿಶ್ರಛಾಪು-ತಕ್ಕಿಟ ತಕದಿಮಿ, ಸಂಕೀರ್ಣ ಛಾಪು-ತಕ್ಕದಿಮಿತಕ್ಕತಕ್ಕಿಟಗಳ ಆಗಮನವಾಯಿತು. ಹರಿದಾಸರು ಬಲಗೈಯಲ್ಲಿ ತಂಬೂರಿ ಹಿಡಿದು ಎಡಗೈಯಲ್ಲಿ ಚಿಟಿಕೆ ತಾಳ ಹಿಡಿದು ಈ ಬಗೆಯಲ್ಲಿ ಛಾಪುಗಳನ್ನು ಅದರ ಘಾತವನ್ನು ಹಾಕುವುದರ ಮೂಲಕ ತಾಳ ನಿರ್ವಹಿಸುತ್ತಿದ್ದರು. ಇದು ಸರ್ವರಿಗೂ ಸಾಹಿತ್ಯದ ಖಚಿತವಾದ ಸ್ಫುರಣೆಗೆ ಸಹಕರಿಸಿತು.

ಸುಳಾದಿ ಸಪ್ತತಾಳಗಳು ಜನರಲ್ಲಿ ಚೆನ್ನಾಗಿ ಸ್ವೀಕೃತಗೊಳ್ಳುವಲ್ಲಿ ‘ಸುಳಾದಿ’ ರಚನೆಗಳಿಗೆ ಧ್ರುವ, ಮಠ್ಯತಾಳಗಳಿಂದ ಆರಂಭಿಸಿ ಉಳಿದ ತಾಳಗಳನ್ನು ಇದರೊಂದಿಗೆ ವಿವಿಧ ನುಡಿಗಳಿಗೆ ಹೆಣೆದು ಅತ್ಯಂತ ನವೀನ ರಚಯಿತರೆನಿಸಿದರು. ಹಾಗೂ ನವೀನ ಮಾದರಿಯ ತಾಳಗಳ ಉಗಮಕ್ಕೆ ನಾಂದಿಹಾಡಿದರು. ಇದು ಪುರಂದರರ ಸಂಗೀತ ಕ್ಷೇತ್ರದ ಬಹುದೊಡ್ಡ ಕಾಣಿಕೆ.

. ರಚನೆಗಳಲ್ಲಿನ ಸಂಗೀತ ಸಂಬಂಧಿತ ಪದ ಸಂಪತ್ತು

ಪುರಂದರರು ತಮ್ಮ ಅನೇಕ ರಚನೆಗಳ ಒಂದಿಲ್ಲೊಂದು ಸಂದರ್ಭದಲ್ಲಿ ಗಾಯನವನ್ನುದ್ದೇಶಿಸಿಯೋ, ವಾದ್ಯವನ್ನುದ್ದೇಶಿಸಿಯೋ, ಇಲ್ಲವೇ ಅವುಗಳನ್ನು ಒಳಹೊಕ್ಕು ಭಕ್ತಿ, ಭಾವ, ಪ್ರೀತಿ, ಪ್ರೇಮ ಇವುಗಳನ್ನು ಕುರಿತಾಗಿಯೋ ಹೇಳುತ್ತಾ ಸಂಗೀತ ಸಂಬಂಧಿ ಪದ ಪ್ರಯೋಗ ಮಾಡಿದ್ದಾರೆ. ಇದು ಅಂದಿನ ಸಂಗೀತ ಪ್ರಸ್ತುತಿಯ ವಿಚಾರ. ಪರಿಸರ, ಪರಿಕರ, ಘಟನೆ, ಚರಿತ್ರೆ, ಇತ್ಯಾದಿಗಳ ಮೇಲೆ ಬೆಳಕು ಚಿಲ್ಲುತ್ತದೆ. ಈ ಬಗೆಗೂ ಒಂದು ಸಂಶೋಧನೆಗೆ ಒದಗುವಷ್ಟು ಸಾಮಗ್ರಿ ಸಾಧ್ಯವಾಗಬಹುದೇನೋ? ಪ್ರಸ್ತುತ ನಾನು, ಕೆಲವು ಕೀರ್ತನೆಗಳ ಉದಾಹರಣೆಗಳೊಂದಿಗೆ ಅತ್ಯಂತ ಸ್ಥೂಲವಾಗಿ ತಿಳಿಸುತ್ತಿದ್ದೇನೆ. ಈ ಕೆಳಕಂಡ ಕೀರ್ತನೆಗಳಲ್ಲಿ ತಾಳ, ತಂಬೂರಿ, ಕೊಂಬು ಕೊಳಲು, ವಾಧ್ಯ, ಸಂಗೀತ, ಸ್ವರ, ಗಾನ, ಮನೋಧರ್ಮ, ಡಂಗುರ ಮುಂತಾದ ಸಂಬಂಧಿತ ಪದಗಳನ್ನು ಕಾಣಬಹುದು.

ರಾಗ :   ಕಲ್ಯಾಣಿ ಅಟ್ಟತಾಳ
ಕೇಳನೋ ಹರಿ ತಾಳನೋ                         ||ಪ||
ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ         ||ಅ.ಪ||
ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು
ಕೊಂಬು ಕೊಳಲ ಧ್ವನಿ ಸ್ವರಗಳಿದ್ದು
ತಂತುರು ನಾರದರ ಗಾನ ಕೇಳುವ ಹರಿ
ನಂಬಲಾದ ಈ ಢಂಬಕರ ಕೂಗಾಟ              ||೧||

ನಾನಾ ಬಗೆಯ ರಾಗ ಭಾವ ತಿಳಿದು
ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮ ರಹಿತವದ
ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು          ||೨||

ಅಡಿ ಗಡಿಗಾನಂದ ಬಾಷ್ಪ ಪುಳಕದಿಂದ
ನಡೆನುಡಿಗಡ ಶ್ರೀ ಹರಿಯೆನ್ನುತ
ದೃಡ ಭಕ್ತರನ್ನು ಕೂಡಿ ಹರಿ ಕೀರ್ತನೆ ಪಾಡಿ
ಕಡೆಗೆ ಪುರಂದರ ವಿಠಲನೆಂದರೆ ಕೇಳ್ವ          ||೩||

.        ಮಧ್ಯ ಮಾವತಿ ಅಟ್ಟ:
ತಾಳಬೇಕು ತಕ್ಕ ಮೇಳಬೇಕು ಶಾಂತ
ವೇಳೆಬೇಕು ಗಾನವನ್ನು ಕೇಳಬೇಕೆಂಬುವರಿಗೆ ||

.        ಆನಂದಭೈರವಿ ಚಾಪು:
ಹೊಯ್ಯೋ ಹೊಯೋ ಹೊಯೋ ಡಂಗುರವ
ಅಯ್ಯ ಕೃಷ್ಣಯ್ಯನು ಪರನೆಂದು ||

.        ಪಂತುವರಾಳಿ ಅಟ್ಟ:
ಹೊಯ್ಯಲೊ ಡಂಗುರವ, ಜಗ
ದಯ್ಯನಯ್ಯ ಶ್ರೀಹರಿಯಲ್ಲದಿಲ್ಲವೆಂದು ||

. ರಚನೆಗಳಲ್ಲಿನ ಆಲಂಕಾರಿಕ ಅಂಶಗಳು

ಹಾಡಲರ್ಹವಾದ, ಧಾತುಮಾತುಗಳನ್ನುಳ್ಳ ರಚನೆಗಳನ್ನು ಗೇಯರಚನೆ ಎಂದು ಕರೆಯುತ್ತೇವೆ. ಪದ, ರಾಗ, ತಾಳ, ಕಾಲಗಳು ಈ ನಿಟ್ಟಿನಲ್ಲಿ ಮುಖ್ಯ ಪಾತ್ರವಹಿಸಿದರೆ ಇದರ ಆಂತರಿಕ ಸೌಂದರ್ಯಲಯಗಳು ರಚನೆಯ ಆಲಂಕಾರಿಕ ಅಂಶಗಳಾಗಿ ಗಣಿಸಲ್ಪಡುತ್ತವೆ. ಒಂದು ರಚನೆಯಲ್ಲಿನ ಪಲ್ಲವಿಯ ಭಾಗ, ಅದನ್ನನುಸರಿಸುವ ಅನುಪಲ್ಲವಿ, ಅದಕ್ಕೆ ಅನುಸರಣಿ ಯೋಗ್ಯವಾಗಿ ಎಡೆಪಡೆದಿರುವ ನುಡಿಗಳು, ರಚಯಿತನ ಮುದ್ರಿಕೆ ಅಥವಾ ಅಂಕಿತ, ಗೇಹರಚನೆಗೆ ಬೇಕಾದ ಸಾಹಿತ್ಯ ಸಿದ್ಧಾಂತ, ಸಾಹಿತ್ಯ ಸೊಗಸು, ಒತ್ತಕ್ಷರಗಳಿಲ್ಲದ ಹಿತವಾದ ಮಧುರ ಉಚ್ಚಾರಣೆಯ ಸಾಹಿತ್ಯ, ರಚನಾವಸ್ತು, ಶೈಲಿ, ಭಾಷೆ, ಪದ ಜೋಡಣೆ, ಪುನರುಕ್ತಿ, ಸ್ವರಾಕ್ಷರ-ಪಾರಕ್ಷರ, ಪ್ರಾಸ-ಅನುಪ್ರಾಸ-ಅಂತ್ಯಪ್ರಾಸ, ಗತಿ-ಯತಿ-ವಡಿ-ಛಂದಸ್ಸು ಈ ಅಂಶಗಳು ರಚನೆಯ ಸಾಹಿತ್ಯ ಸೊಗಸನ್ನು ಇಮ್ಮಡಿಗೊಳಿಸುತ್ತವೆ. ಈ ಎಲ್ಲಾ ಸೌಂದರ್ಯಾಂಶಗಳನ್ನು ಪುರಂದರರ ರಚನೆಗಳು ತಮ್ಮಲಿ ಒಳಗೊಂಡು ಸಾಹಿತ್ಯಾಭ್ಯಾಸಿಗಳ, ಸಂಗೀತಾಭ್ಯಾಸಿಗಳ ನಾನಾ ದೃಷ್ಟಿಕೋನದ ಅಧ್ಯಯನ. ಸಂಶೋಧನಗಳಿಗೆ ಗುರಿಯಾಗಿರುವುದು ಹಾಗೂ ಅದಕ್ಕೆ ಗ್ರಾಸ ಒದಗಿ ಬರುತ್ತಿರುವುದು ಸಂತಸದ ಸಂಗತಿ. ಇದು ಪುರಂದರರ ಸಾಹಿತ್ಯ ಶ್ರೀಮಂತಿಕೆಯ ಕುರುಹೂ ಕೂಡ. ಈಗ ನಡೆಯುತ್ತಿರುವ ಎರಡು ದಿನಗಳ ವಿಚಾರ ಸಂಕಿರಣವೂ ಕೂಡ ಪುರಂದರರ ಸಾಹಿತ್ಯದ ವಿವಿಧ ಮಜಲುಗಳನ್ನು ವಿವಿಧ ದೃಷ್ಟಿಕೋನಗಳಿಂದ ದರ್ಶನ ಮಾಡುವುದೇ ಆಗಿದೆ ಎಂಬುದು ನನ್ನ ಭಾವನೆ. ಪುರಂದರರ ರಚನೆಗಳಲ್ಲಿನ ಪ್ರಾಸದ ಬಗೆಗೆ ಸ್ಥೂಲವಾಗಿ ನೋಡೋಣ.

೧.        ಶಂಕರಾಭರಣ ಆದಿ:
ತಾರಿಸೋ ಶ್ರಿಹರಿ ರಾರಿಸೊ/ಪ/ಪ್ರಥಮಾಕ್ಷರ ಪ್ರಾಸ.
ತೋರಿಸೋ ವೈಕುಂಠ ಸೇರಿಸೊ ರಂಗಯ್ಯ /ಆ/ ಅಂತ್ಯಾಕ್ಷಾರ ಪ್ರಾಸ
ಪಾಪ ವಿನಾಶನ ಮಾಡುವಿ ನೀ
ತಾಪಸರನು ನಿತ್ಯ ಸಲುಹು ನೀ/ ದ್ವಿತೀಯಾಕ್ಷರ ಪ್ರಾಸ.
ವ್ಯಾಪಿಸಿ ಸರ್ವತ್ತ ನಿನ್ನವರನು ಕಾಯ್ವ
ಶ್ರೀ ಪಾಂಡುರಂಗ ಪರಮಾತ್ಮ ಮುಕುಂದ

೨.        ದನಾಸರಿ ಆದಿ ದ್ವಿತೀಯಾಕ್ಷರಪ್ರಾಸ.
ಹರಿ ನಿನ್ನೊಲುಮೆಯು ಆಗುವ ತನಕ
ಅರಿತು ಸುಮ್ಮನಿರುವುದೆ ಲೇಸು      //ಪ//
ಏಮರಳಿ, ಮರಳಿ ತಾ ಪಡೆಯುವ ಭಾಗ್ಯತೆ ಪನರುಕ್ತಿ/ ಪದಜೋಡಣೆ
ಹೊರಳಿ ಹೊರಳಿ ಅತ್ತರೆ ಬಂದೀತೆ //

೩.        ಕಲ್ಯಾಣಿ ಆದಿ:
ಶರಣೆಂಬೆ ವಾಣಿ ಪೊರೆಯ ಕಲ್ಯಾಣಿ /ಪ/
ದ್ವಿತೀಯಾಕ್ಷರ ಪ್ರಾಸ.
ಅಂತ್ಯಾಕ್ಷರ ಪ್ರಾಸ.
ವಾಗಾಭಿಮಾನಿ ವರ ಬ್ರಹ್ಮಾಣಿ ಅಂತ್ಯಪ್ರಾಸ
ಸುಂದರ ವೇಣಿ ಸುಚಿರಿತ್ರಾಣಿ /ಅ.ಪ/
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಸುವಮ್ಮಾ      // // ಅಂತ್ಯ ಪ್ರಾಸ

೪.        ನಾದನಾಮಕ್ರಿಯ ಆದಿ:
ಗುರುವಿನ ಗುಲಾಮನಾಗುವ ತನಕ ಪದಜೋಡಣೆ
ದೊರೆಯದಣ್ಣ ಮುಕುತಿ
ಪರಿಪರಿಶಾಸ್ತ್ರವ ನೇರಿವ ನೋದಿ
ವ್ಯರ್ಥವಾಯಿರು ಭಕುತಿ //ಅ.ಪ//
ಆರು ಶಾಸ್ತ್ರವ ನೋದಿದವರಿಲ್ಲ ಮೂ ದ್ವಿತೀಯಾಕ್ಷರ ಪ್ರಾಸ
ರಾರು ಪುರಾಣವ ಮುದಿಸಿದವರಿಲ್ಲ ಪದಜೋಡಣೆ
ಸಾರಿ ಸಜ್ಜನರ ಸಂಗವ ಮಾಡದೆ ಪುನರುಕ್ತಿ
ಧೀರನಾಗಿ ತಾಮೆರೆದರೆ ಇಲ್ಲ // //

. ಇತರ ವಿಚಾರಗಳೂ

ಪುರಂದರರ ರಚನೆಗಳೆಲ್ಲಿ ಜೋಗುಳ ಪದಗಳಿವೆ. ಉದಾಹರಣೆಗೆ: ಜೋ ಜೋ ಶ್ರೀ ಕೃಷ್ಣ ಪರಮಾನಂದ, ಜೋಜೋಜೋಜೋ ಸಾಧುವಂತ, ಶೋಭಾನೆಪದಗಳಿವೆ. ಉದಾಹರಣೆಗೆ: ಶೋಬಾನ ಶೋಬಾನವೇ, ಶೋಬಾನವೇ ಇದು ಶೋಭಾನವೆ. ಜಾನಪದ ಗೀತೆಯ ಮಟ್ಟಗಳುಳ್ಳ ಪದಗಳಿವೆ. ಉದಾಹರಣೆಗೆ ಊರದೇವರ ಮಾಡಬೇಕಣ್ಣ. ಲೋಳಲೊಟ್ಟೆ ಎಲ್ಲ ಲೊಳಲೊಟ್ಟೆ. ನೃತ್ಯಕ್ಕಾಗಿಯೇ ರಚಿಸಿದರೆನ್ನಬಹುದಾದಂತಹ ರಚನೆಗಳಿವೆ. ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣಿಯಲಿ. ಪಾಠಾಕ್ಷತಗಳನ್ನೊಳಗೊಂಡ ರಚನೆ ತತ್ತತಧಿಮಿತ ಧಿಮಿಕಿ ಎನ್ನುತ ಹರಿಯಾಡಿದರೆ ಇವುಗಳನ್ನು ಇದಕ್ಕೆ ಉದಾಹರಿಸಬಹುದು. ಅಲ್ಲದೆ ದೃತ ಕಾಲದ ಸಾಹಿತ್ಯವಿರುವ ರಚನೆಗಳು, ಸ್ವರಾಕ್ಷರವಿರುವ ರಚನೆಗಳು, ಕ್ಷೇತ್ರ ಮುದ್ರೆಗಳನ್ನೊಳಗೊಂಡ ರಚನೆಗಳು, ಗಂಭೀರ ಭಾಷೆಯನ್ನೊಳಗೊಂಡ ರಚನೆಗಳು ಹೀಗೆ ಹಲವಾರು ಮುಖಗಳನ್ನು ಕಾಣಲು ಸಾಧ್ಯ. ಪುರಾಣ – ಭಾಗವತ – ರಾಮಾಯಣ – ಮಹಾಭಾರತ – ವೋದೋಪನಿಷತ್ತು, ಅಷ್ಟಾದಶಪುರಾಣ ಇತ್ಯಾದಿಗಳ ಸಾರಸಂಗ್ರಹ ಪುರಂದರರ ರಚನೆಯಲ್ಲಡಗಿದೆ. ಇನ್ನು ಶೃಂಗಾರಗೀತೆಗಳು, ವಿರಹಗೀತೆಗಳು, ನವರಸ ಭಕ್ತಿಯನ್ನುಳ್ಳ ರಚನೆಗಳೂ ಕೂಡ ಇವರಿಂದ ರಚಿತಗೊಂಡಿವೆ.

ಪುರಂದರದಾಸರ ಪ್ರಭಾವ ಹಿಂದೂಸ್ಥಾನಿ ಸಂಗೀತದ ಮೇಲೆಯೂ ಆಗಿದೆ. ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ವಿದ್ವಾಂಸರಾಗಿದ್ದ ತಾನ್ ಸೆನ್ ಗುರುಗಳತಿದ್ದಂತಹ ಸ್ವಾಮಿ ಹರಿದಾಸರು ಪುರಂದರದಾಸರ ಶಿಷ್ಯತು. ಹೀಗಾಗಿ ಪುರಂದರ ಸಂಗೀತ ಸುಧೆ-ಸಂಗೀತ ಕಂಪು ಎರಡು ಸಂಗೀತ ಪದ್ಧತಿಗಳಿಗೂ ಹಂಚಲ್ಪಟ್ಟಿದೆ.

ಪುರಂದರರು ಆಗಿಂದಾಗಿ ತಿರುಮಲೆಗೆ ಹೋಗಿ ವೆಂಕಟೇಶ್ವರನ ದರುಶನ ಭಾಗ್ಯ ಪಡೆದು ಬರುವ ಪದ್ಧತಿ ಇಟ್ಟುಕೊಂಡಿದ್ದರಂತೆ. ಒಮ್ಮೆ ಹೀಗೆಯೇ ಅವರು ತಿರುಮಲೆಗೆ ಹೋಗಿದ್ದಾಗ, ಪ್ರಸಿದ್ಧ ಸಂಕೀರ್ತನಾಕಾರರಾದ ಹಣ್ಣು ಹಣ್ಣು ಮುದುಕರಾಗಿದ್ದ ತಳ್ಳಪಾಕಂ ಅನ್ನಮಾಚಾರ್ಯರ (ಕ್ರಿ.ಶ. ೧೪೦೮-೧೫೦೭) ದರುಶನ ಭಾಗ್ಯ ಲಭ್ಯವಾಗಿ ಅವರ ಮುಂದೆ ಪುರಂದರರು ತಮ್ಮ ಕನ್ನಡ ಭಾಷೆಯ ದೇವರನಾಮಗಳನ್ನು ಹಾಡಿದರಂತೆ. ಅದನ್ನು ಕೇಳಿ ಅನ್ನಮಾಚಾರ್ಯರು ‘ದಿವ್ಯನಾದ ಗಾನ ಪಾಂಡುರಂಗ ವಿಠ್ಠಲನೇ ಎದುರಿಗೆ ನಿಂತಂತಿದೆ’ ಎಂದು ಹೇಳಿ ಮೆಚ್ಚುಗೆ ಸೂಚಿಸಿದರಂತೆ.

ನಾದಬ್ರಹ್ಮ ತ್ಯಾಗರಾಜರು ಶ್ರೀ ಪುರಂದರರ ದರುಶನ ಭಾಗ್ಯ ಪಡೆದೆದ್ದರಂತೆ. ಇದೊಂದು ಅಭೂತ ಪೂರ್ವ ವಿಷಯವೇ ಸರಿ. ಬಾಲಕ ತ್ಯಾಗರಾಜನಿಗೆ ಅವನ ತಾಯಿ ಪುರಂದರದಾಸರ ಪದಗಳನ್ನು ಹಾಡಲು ಹೇಳಿಕೊಡುತ್ತಿದ್ದರಂತೆ.

ಪ್ರಾಸ ಪ್ರಿಯರಾಗಿದ್ದ ಪುರಂದರರ ಪ್ರಭಾವ ಮತ್ತು ಸ್ವಾಮಿ ದೀಕ್ಷಿತರಿಗೂ ಆಗಿ ಅವರು ತಮ್ಮ ರಚನೆಗಳಲ್ಲಿ ಪ್ರಾಸವನ್ನು ಅನಾವರಣಗೊಳಿಸಿದ್ದಾರೆ ಎಂದು ಹೇಳುವುದುಂಟು.

ಕನ್ನಡ ಭಾಷೆಯಲ್ಲಿ ಪದ ಎಂದರೆ ಹಾಡು ಎಂಬರ್ಥವು ಬಂದದ್ದು ಹರಿದಾಸರಿಂದ ಮುಂದೆ ಕಾಲಕ್ರಮದಲ್ಲಿ ‘ಪದ’ ಎಂಬ ಪ್ರತ್ಯೇಕ ರಚನಾ ಪ್ರಕಾರವು ಕ್ಷೇತ್ರಜ್ಞನಿಂದ ರಚಿತಗೊಂಡಿತಾದರೂ ಜನಸಾಮಾನ್ಯರ ಬಾಯಿಯ ‘ಪದ’ ಎನ್ನುವ ಪದವು ಹರಿದಾಸರ ಹಾಡುಗಳನ್ನೇ ನಿರ್ದೇಶಿಸುತ್ತದೆ ಎಂಬುದು ನಿಸ್ಸಂಶಯ.

ಹಾಡುಗಳ ಮಟ್ಟಗಳಲ್ಲಿಯೂ ಸಹ ಹಲವಾರು ಪದಗಳು ಕಂಠ ಪರಂಪರೆಯಿಂದ ಕರ್ಣ ಪರಂಪರೆಯಿಂದ ಹಾಗೆಯೇ ಉಳಿದು ಸದೃಢವಾಗಿ, ಅಚಲವಾಗಿ ಹೆಮ್ಮರವಾಗಿ ನಿಂತು ಬಿಟ್ಟಿದೆ. ಉದಾಹರಣೆಗೆ ಭಾಗ್ಯಾದ ಲಕ್ಷ್ಮಿ ಬಾರಮ್ಮ-ಶ್ರೀರಾಗ, ಕರುಣಾಕರ ನೀನೆಂಬುವದ್ಯಾತಕೊ-ತೋಡಿರಾಗ, ಓಡಿಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯೆ-ಭೈರವಿ ರಾಗ ಇತ್ಯಾದಿ ಪದಗಳು ಹೀಗೆ ಅನೇಕ ಪದಗಳು ಇಂದಿತೂ ತನ್ನ ಹಿಂದಿನ ರಾಗದಿಂದಲೇ ತನ್ನನ್ನು ಕಂಡು ಕೊಳ್ಳುವಂತೆ ಬಿಗಿಯಾದ ಹಿಡಿತದಲ್ಲಿ ಸಿಲುಕಿ ಮಿಂದು, ನರುಗಂಪನ್ನು ಸೂಸುತ್ತಿರುವುದು ಆ ಹಿಂದಿನ ರಾಗ ಸಂಯೋಜನೆಯ ಗಟ್ಟಿತನಕ್ಕೆ ಸಾಕ್ಷಿಯಾಗಿ ನಿಂತಿವೆ.

ಪುರಂದರ ರಚನೆಗಳಲ್ಲಿ ಕಂಡು ಬರುವ ಪಾಠಾಕ್ಷರಗಳು ಅಂದರೆ ತತ್ತತ, ದಿಮಿತ, ತಕದಿಮಿ, ಇತ್ಯಾದಿ ಜತಿಗಳು ಮುಂದೆ ಬಂದಂತಹ ತಿಲ್ಲಾನಗಳ ರಚನೆಗೆ ನಾಂದಿಹಾಡಿವೆ.

‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಯ ಮಾತಿನಂತೆ ಪುರಂದರರು ತಮ್ಮ ರಚನೆಗಳಲ್ಲಿ ಹೇಳದ ವಿಷಯವಿಲ್ಲ. ಲೌಕಿಕದಿಂದ ಪಾರಮಾರ್ಥದವರೆಗೆ, ಸಾಮಾಜಿಕದಿಂದ ಪರಮಾತ್ಮನವರೆಗೆ, ಬಾಹ್ಯ ಪ್ರಪಂಚದಿಂದ ಮನದಂತರಾತ್ಮದವರೆಗೆ, ಇಹಪರಗಳೆರಡರ ಸರ್ವಸ್ವವನ್ನೂ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಅದ್ಭುತ ಮಹತ್ಕಾರ್ಯ ಸಾಧಿಸಿದ್ದಾರೆ. ಭಾವ, ರಾಗ, ಲಯಗಳಿಗೆ, ನಾಡಿನ ಸಂಸ್ಕೃತಿಗೆ, ಲೋಕದ ಜನತೆಯ ಕಲ್ಯಾಣಕ್ಕೆ ಭಗವದನುಗ್ರಹಕ್ಕೆ, ಮುಕುತಿಗೆ ತಮ್ಮ ಅಮೂಲ್ಯ ರಚನೆಗಳ ಮೂಲಕ ಪುರಂದರರು ಸಾಹಿತ್ಯ ಸಂಗೀತ ಪ್ರಪಂಚದ ಸ್ಮೃತಿ ಪಟಲದಲ್ಲಿ ಆಚಂದ್ರಾರ್ಕರಾಗಿ ಚಿರಸ್ಥಾಯಿಯಾಗಿ, ಚಿರನೂತನರಾಗಿ ಕಂಗೊಳಿಸಿದ್ದಾರೆ. ಇವರ ಸಾಹಿತ್ಯ-ಸಂಗೀತಗಳ ಸೊಗಸು ಮಾನವ ಕೋಟಿ ಲೋಕದಲ್ಲಿರುವವರೆಗೂ ನಿರಂತರ ನಡೆದುಕೊಂಡು ಹೋಗುತ್ತದೆ, ಸ್ವೀಕರಿಸಲ್ಪಡುತ್ತದೆ. ಅಮೂಲ್ಯ ಭಂಡಾರವಾಗಿರುವ ಪುರಂದರರ ಸಾಹಿತ್ಯ ಸಂಗೀತಗಳಿಗೆ ಅಳಿವಿಲ್ಲ, ಇದು ನಿಸ್ಸಂಶಯ.