೧೮೭೧ರಲ್ಲಿ ಚಾರ್ಲ್ಸ್ ಈ ಗೋವರ್ ನ ‘ದಿ ಫೋಕ್ ಸಾಂಗ್ಸ್ ಆಫ್ ಸದರ್ನ್ ಇಂಡಿಯಾ’ ಪ್ರಕಟವಾಯಿತು. ಈ ಪುಸ್ತಕ ಕನ್ನಡ, ಬಡಗ, ಕೊಡವ, ತಮಿಳು, ಕುರಳ್, ಮಲೆಯಾಳಂ ಹಾಗೂ ತೆಲಗು ಭಾಷೆಗಳಿಂದ ಆಂಗ್ಲ ಭಾಷೆಗೆ ಅನುವಾದಗೊಂಡ ಪದ್ಯಗಳ ಸಂಕಲನ. ಕನ್ನಡದಿಂದ ಆಂಗ್ಲಭಾಷೆಗೆ ೨೮ ಪದ್ಯಗಳು ಅನುವಾದಗೊಂಡಿವೆ. ಹರ್ಮನ್ ಮೊಗ್ ಲಿಂಗರು ಕಲ್ಲಚ್ಚು ರೂಪದಲ್ಲಿ ತಂದಿದ್ದ ಪುರಂದರದಾಸರ ‘ದಾಸರ ಪದಗಳು’ ಅನ್ನು ಗೋವರ್ ಅನುವಾದಕ್ಕೆ ಬಳಸಿಕೊಂಡಿದ್ದಾರೆ. ಇಲ್ಲಿ ಕುತೂಹಲ ಮೂಡಿಸುವ ಅಂಶ ಅಂದರೆ ಪುರಂದರ ಕೀರ್ತನೆಗಳು ದಕ್ಷಿಣ ಭಾರತದ ಜಾನಪದ ಹಾಡುಗಳ ಸಂಗ್ರಹದಲ್ಲಿ ಸೇರಿರುವುದು, ದಾಸರ ಪದಗಳನ್ನು ನಾನು ಕರ್ನಾಟಕ ಸಂಗೀತದ ನೆಲೆಯಲ್ಲಿ, ಧಾರ್ಮಿಕ ತತ್ವಗಳ ನೆಲೆಯಲ್ಲಿ ಕಂಡುಕೊಂಡಿದ್ದೆ. ಆದರೆ ಈ ಕೀರ್ತನೆಗಳಲ್ಲಿ ನನಗೆ ಯಾವತ್ತೂ ಜನಪದದ ಸೆಲೆ ಕಂಡಿರಲಿಲ್ಲ. ಈ ದಿಸೆಯಲ್ಲಿ ನಾನುದಾಸರ ಪದಗಳ ಅನುವಾದವನ್ನು ಅಧ್ಯಯನ ಮಾಡಿದಾಗ ನನಗೆ ಕಂಡು ಬಂದಂತಹ ಕೆಲವು ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಈ ಲೇಖನದ ಉದ್ದೇಶ.

‘ದಿ ಫೋಕ್ ಸಾಂಗ್ಸ್ ಆಫ್ ಇಂಡಿಯಾ’ ಒಂದು ಅನುವಾದಿತ ಕೃತಿ. ೧೯ನೇ ಶತಮಾದಲ್ಲಿ ಭಾರತೀಯ ಭಾಷೆಯಿಂದ ಆಂಗ್ಲಭಾಷೆಗೆ ಸಾಕಷ್ಟು ಸಾಹಿತ್ಯ ಅನುವಾದವಾಯಿತು. ಹೀಗೆ ಅನುವಾದವಾದ ಹೆಚ್ಚಿನ ಸಾಹಿತ್ಯವು ಸಂಸ್ಕೃತ ಭಾಷೆಯಲ್ಲಿತ್ತು. ಆಂಗ್ಲರ ಆಡಳಿತದ ಆರಂಭಿಕ ಹಂತದಲ್ಲಿ ಅನುವಾದ ಸಾಹಿತ್ಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಹಾಗೂ ಪ್ರೋತ್ಸಾಹವಿತ್ತು. ಸಾಹಿತ್ಯದ ಮುಖಾಂತರ ಭಾರತೀಯರನ್ನು ಅರ್ಥಮಾಡಿಕೊಳ್ಳುವುದು ಅವರ ಮುಖ್ಯ ಉದ್ದೇಶವಾಗಿತ್ತು. ಇದು ಸಂಪೂರ್ಣವಾಗಿ ರಾಜಕೀಯ ಉದ್ದೇಶ. ಭಾರತೀಯರನ್ನು ಆಳುವುದಕ್ಕೆ ಅವರನ್ನು ತಿಳಿದುಕೊಳ್ಳಲೇಬೇಕಾದ, ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆಯಾಗಿತ್ತು. ಈ ಹಿನ್ನಲೆಯಲ್ಲಿ ಗೋವರ್ ನ ಅನುವಾದಿತ ಕೃತಿಯನ್ನು ನಾವು ನೋಡಬೇಕಾಗುತ್ತದೆ. ‘ಅನುವಾದ ಸಂಸ್ಕೃತಿ’ ಹಾಗೂ “ಅನುವಾದಿತ ಸಂಸ್ಕೃತಿ’ಯ ಬಗ್ಗೆ ಸಾಕಷ್ಟು ಅಧ್ಯಯನಗಳು ಈಗಾಗಲೇ ನಡೆದಿದೆ. ಇಲ್ಲಿ ನಾನು ಅನುವಾದದ ಬಗ್ಗೆಗಿರುವ ಕೆಲವು ಕಲ್ಪನೆಗಳನ್ನು ನೀಡುತ್ತಾ, ಗೋವರ್ ನ ಅನುವಾದಿತ ಕೃತಿಯಲ್ಲಿ ಬರುವ ಪುರಂದರದಾಸರ ಪದಗಳನ್ನು ವಿಮರ್ಶೆಗೆ ಒಳಪಡಿಸುತ್ತೇನೆ. ಇತ್ತೀಚೆಗೆ ಪ್ರಕಟಗೊಂಡ ಯು.ಆರ್. ಅನಂತಮೂರ್ತಿಯವರ “ಮತ್ತೆ ಮತ್ತೆ ಬ್ರಕ್ಟ್” ಬರ್ಟೊಲ್ಟ್ ಬ್ರೆಕ್ಟ್ ಕವನಗಳ ಅನುವಾದದ ಸಂಕಲನದ ಮುನ್ನುಡಿಯಲ್ಲಿ ಅನಂತಮೂರ್ತಿಯವರು ಬ್ರೆಕ್ಟ್ ನ ‘ಜೆಸ್ಟಿಕ್’ ಎಂಬ ಶಬ್ಧವನ್ನು ವಿವರಿಸುತ್ತಾ ತನ್ನ ಅನುವಾದದ ನೆಲೆಯೇನು ಎಂದು ಹೇಳುತ್ತಾರೆ.

“ಆ ಶಬ್ಧದ ಅರ್ಥವೇನು ಎಂದರೆ, ಸಾಮಾನ್ಯವಾಗಿ ಒಂದು ಸಾಲನ್ನು ಓದಿದಾಗ ಯಾವ ಭಾವಕ್ಕೆ ಮಹತ್ವ ದೊರೆಯಬೇಕೊ ಆ ಮಹತ್ವ ದೊರೆಯುವಂತೆ ಕೆಲವು ಶಬ್ಧಗಳು ಅಥವಾ ಶಬ್ಧ ಸಮುಚ್ಚಯಗಳು ಆ ವಾಕ್ಯ ರಚನೆಯ ಸರಿಯಾದ ಜಾಗದಲ್ಲಿರಬೇಕು. ನಮ್ಮ ಉಚ್ಚಾರಣೆಯಲ್ಲಿ ಆ ಶಬ್ಧವನ್ನು ಒತ್ತಿ ಹೇಳಿದಾಗ ಸ್ವಲ್ಪ ಹೆಚ್ಚು ಕಾಲವನ್ನು ಲೆಕ್ಕಕ್ಕಿಟ್ಟುರುತ್ತೇವೆ. ವಿವರಣಾತ್ಮಕವಾದದ್ದನ್ನು ಶೀಘ್ರವಾಗಿ ಹೇಳಿ ಮನಸ್ಸಿನಲ್ಲಿ ಹೇಳಬೇಕಾದ್ದನ್ನು ಒತ್ತಿ ಹೇಳಿದಾಗ ನಮ್ಮಲ್ಲಿ ಲಯದ ಕಲ್ಪನೆಯೇ ಬದಲಾಗುತ್ತದೆ. ನನ್ನಲ್ಲಿ ಎಲ್ಲೋ ಒಂದು ಕಡೆ ಅಂಥ ಬದಲಾವಣೆ ಆಗುವ ಲಯದ ಕಲ್ಪನೆಯನ್ನು ನನ್ನಲ್ಲಿ ಗುರುತಿಸಿಕೊಳ್ಳುವುದಕ್ಕಾಗಿ ಕೆಲವು ಬದಲಾವಣೆಗಳನ್ನು ಭಾಷಾಂತರದಲ್ಲಿ ಮಾಡಿದ್ದೇನೆ”.

ಅನಂತಮೂರ್ತಿಯವರ ‘ಅನುವಾದ’ದ ಈ ಕೃತಿಯಲ್ಲಿ ಪದ್ಯದ ಇಡೀ ಸ್ವರೂಪವನ್ನು ಹಿಡಿದಿಡುವ ಪ್ರಯತ್ನವಿದೆ. ಲಯದ ಕಲ್ಪನೆಯ ಮುಖಾಂತರ ಪದ್ಯದ ವಸ್ತುವನ್ನು ಬಿಚ್ಚಿಡುವ ರೀತಿಯನ್ನು ಅವರು ಹೇಳುತ್ತಾರೆ. ಪದ್ಯದ ಇಡೀ ಸ್ವರೂಪವನ್ನು ಹಿಡಿದಿಡುವುದಕ್ಕೆ ಶಬ್ಧಗಳಿಗೆ, ನುಡಿಗಟ್ಟುಗಳಿಗೆ ಮಾತ್ರವಲ್ಲದೆ ಪದ್ಯದ ವಸ್ತುವಿಗೂ ಅನುವಾದಕನಲ್ಲಿ ಸೂಕ್ಷ್ಮಸ್ಪಂದನವಿರಬೇಕಾಗುತ್ತದೆ. ಗೋವರ್ ಗೆ ‘ಪದ್ಯದ ಇಡೀ ಸ್ವರೂಪವನ್ನು ಹಿಡಿದಿಡುವ ಕಲ್ಪನೆ ಹಾಗೂ ಸೂಕ್ಷ್ಮತೆ ಇತ್ತೇ ಎಂದು ನೋಡೋಣ. ಇಲ್ಲಿ ಉದಾಹರಣೆಗಾಗಿ ದಾಸರ “ನಗೆಯು ಬರುತಿದೆ ಎನಗೆ ನಗೆಯು ಬರುತಿದೆ” ಎಂಬ ಪದದ ಅನುವಾದವನ್ನು ತಿಗೆದುಕೊಳ್ಳುತ್ತೇನೆ. ಆತನ ಅನುವಾದದಲ್ಲಿ ಮೂಲ ಕೃತಿಯಲ್ಲಿದ್ದಂತೆ ಪಲ್ಲವಿ ಹಾಗೂ ಅನುಪಲ್ಲವಿಯನ್ನು ಜೊತೆಯಾಗಿಸಿ ಆತ ‘ಕ್ಹೋರಸ್’ (Chorus) ಎಂದು ಅನುವಾದಿಸುತ್ತಾನೆ. ಕ್ಹೋರಸ್ ಎನ್ನುವ ಪದ ಗ್ರೀಕ ನಾಟಕಗಳಲ್ಲಿ ಬಳೆಕೆಯಲ್ಲಿದ್ದ ಶಬ್ಧ. ಕೋರಸ್ ಎಂದರೆ ಎಲ್ಲರೂ ಒಟ್ಟಾಗಿ ಹಾಡುವ ಸಾಲುಗಳು ಪದ್ಯದ ಚರಣಗಳನ್ನು ಒಬ್ಬ ವ್ಯಕ್ತಿ ಹಾಡಿದರೆ ಅನುಪಲ್ಲವಿಯಾಗಿ ಬರುವ ಸಾಲುಗಳನ್ನು ಗುಂಪಾಗಿ ಉಳಿದವರು ಹಾಡುವುದಕ್ಕೆ ಕ್ಹೋರಸ್ ಎನ್ನುತ್ತಾರೆ. ಗೋವರ್ ನ ಅನುವಾದಿತ ಪದವು ಪ್ರಥಮ ಚರಣದಿಂದ ಪ್ರಾರಂಭವಾಗಿ ಪಲ್ಲವಿ ಅನುಪಲ್ಲವಿಯ ಕೋರಸ್ ನ ರೂಪದಲ್ಲಿ ನಂತರ ಕಾಣಬರುತ್ತದೆ. ನಾನಿಲ್ಲಿ ಒಂದು ಚರಣದ ಉದಾಹರಣೆಯನ್ನು ನೀಡುತ್ತೇನೆ.

“Once night i have a man”
Kissing a harlot’s lips
Next morn to bathe he ran
Amol prayed on finger tips.
Chorus-Oh, how? Laugh ! laugh out loud.
It makes me laugh to see the crowd
Such triks they do. I have vowed
I’d laugh no more: with it i’m bowed.

ಇದು ಮೂಲ ಕನ್ನಡ ಆವೃತ್ತಿಯಲ್ಲಿ

ಗೋವರ್ ತನ್ನ ಅನುವಾದದಲ್ಲಿ ಪದ್ಯದ ಲಯ, ಹಾಗೂ ಲಾಲಿತ್ಯವನ್ನು ಉಳಿಸಿಕೊಳ್ಳುವುದಕ್ಕೆ ಪ್ರಾಸವನ್ನು ಅನುಸರಿಸುತ್ತಾನೆ. man ಹಾಗೂ ran; lips ಹಾಗೂ tips; loud ಹಾಗೂ crowed ಮತ್ತು vowed ಹಾಗೂ bowed ಸಾಲಿನ ಕೊನೆಯಲ್ಲಿ ಪ್ರಾಸಬದ್ಧವಾಗಿದೆ. ಇದನ್ನು ಓದುವಾಗ ಒಂದು ರೀತಿಯಲ್ಲಿ ನರ್ಸರಿ ರೈಮನ್ನು ಓದಿದ ಅನುಭವವಾಗುತ್ತದೆ. ಅಷ್ಟೊಂದು ಪ್ರಾಸವನ್ನು ಅನುವಾದ ಹೊಂದಿದೆ ಎನ್ನಬಹುದು. ಆದರ ಈ ಶಬ್ಧಗಳ ಲಯ, ಹಾಗೂ ಸಮುಚ್ಚಯ ‘ಪದ್ಯದ ಇಡೀ ಸ್ವರೂಪವನ್ನು ಹಿಡಿದಿಟ್ಟಿದೆಯೇ? ಮೂಲ ಪದ್ಯದಲ್ಲಿರುವ ಸಾಂದ್ರತೆಯನ್ನು ಹಿಡಿದಿಟ್ಟಿದೆಯೇ? ‘ಪರರ ವನಿತೆಯೊಲುಮೆಗೊಲಿದು ಹರುಷದಿಂದ ಅವಳ ಬೆರೆದು’ ಎನ್ನುವುದರಲ್ಲಿ ಮನುಜ ಕಾಮನೆಗಳಿಗೆ ನೋಲುವುದರ ಚಿತ್ರಣವಿದೆ. ಕಾಮಕ್ಕೆ ಸೋಲುವ ಗಂಡಿನ ಚಿತ್ರವಿದೆ. ‘Once night I saw a man kissing a harlot’s lips’ ಎಂಬ ಭಾಷಾಂತರದಲ್ಲಿ ವೇಶ್ಯೆಗೆ ರಾತ್ರಿಯಲ್ಲಿ ಮುತ್ತಿಕ್ಕುವ ಚಿತ್ರಣವಿದೆ. ಪಲ್ಲವಿ ಅನುಪಲ್ಲವಿಯ ಅನುವಾದವನ್ನು ಗಮನಿಸೋಣ. ಮೂಲಕೃತಿಯಲ್ಲಿನ ನಗುವಿನಲ್ಲಿ ಕರುಣೆ, ವ್ಯಂಗದ ಭಾವವಿದೆ. ಅನುವಾದದಲ್ಲಿ ಅಪಹಾಸ್ಯದಿಂದ ಗಹಗಹಿಸಿ ನಗುವುದು ಕಾಣುತ್ತದೆ. ಮೂಲ ಪದ್ಯದಲ್ಲಿ ಬರುವ ಪಾಪ ಮಾಡುವ, ಮಾಡುತ್ತ ಮಾಡುತ್ತಲೇ ಪುಣ್ಯಜೀವಿಯ ಸೋಗು ಹಾಕುತ್ತ ಸೋಗಲಾಡಿತನದ ಬದುಕು ನಡೆಸುವವರ ಚಿತ್ರಣವನ್ನು ಗೋವರ್ ತೀರಾ ಸರಳೀಕೃತವಾಗಿ ನೀತಿ ಪಾಠದ ನೆಲೆಯಲ್ಲಿ ಚಿತ್ರಿಸುತ್ತಾನೆ. ಮೂಲ ಕೃತಿಯ ಸಾಂದ್ರತೆ ಅನುವಾದಿತ ಕೃತಿಯಲ್ಲಿ ಕಾಣಬರುವುದಿಲ್ಲ. ಗೋವರ್ ಗೆ ಈ ಪದ್ಯವು ಬ್ರಾಹ್ಮಣರ ಆಚರಣೆಯನ್ನು ಅವಹೇಳನ ಮಾಡಿದಂತೆ ಕಂಡುಬರುತ್ತದೆ. ಹಾಗಾಗಿ ಪದ್ಯದ ಇಡೀ ಸ್ವರೂಪವನ್ನು ಹಿಡಿದಿಡುವಲ್ಲಿ ಗೋವರ್ ಸೋಲುತ್ತಾನೆ. ಇಲ್ಲಿಯವರೆಗೆ ನಾನು ೨೦-೨೧ನೇ ಶತಮಾನದ ಕನ್ನಡ ವಿದ್ವಾಂಸರ ಅನುವಾದದ ಅರ್ಥಗಾರಿಕೆಯ ನೆಲೆಯಲ್ಲಿ ಗೋವರ್‌ನ ಅನುವಾದವನ್ನು ನೋಡಿದೆ. ಇನ್ನು ಮುಂದೆ ಆತನ ಅನುವಾದವನ್ನು, ೨೦ ನೇ ಶತಮಾನದ ಆರಂಭದಲ್ಲಿ ಯುರೋಪನಲ್ಲಿ ಅನುವಾದದ ಬಗೆಗಿನ ಪರಿಕಲ್ಪನೆ ಏನಿತ್ತು ಎಂಬ ಹಿನ್ನೆಲೆಯಲ್ಲಿ ಗಮನಿಸೋಣ. ಇಲ್ಲಿ ನಾನು ಅನುವಾದದ ಎರಡು ಲೇಖನಗಳನ್ನು ಗಮನಿಸುತ್ತೇನೆ. ಮೊದಲನೆಯದು ೧೯೨೩ ರಲ್ಲಿ ವಾಲ್ಟರ್ ಬೆಂಜಮಿನ್ ಅನುವಾದದ ಬಗ್ಗೆ ಬರೆದ ಲೇಖನ. ಎರಡನೆಯದು ಜಾರ್ಜ ಲುಯಿ ಬೋರಸ್ ೧೯೩೫ ರಲ್ಲಿ ಬರೆದ ಲೇಖನ.

ವಾಲ್ಟರ ಬೆಂಜಮಿನ್ ಅನುವಾದವನ್ನು ‘ಮೂಲಕೃತಿಯ ಜೀವಿತ ಕಾಲದ ನಂತರದ ಅನ್ಯಕೃತಿ’ ಎನ್ನುತ್ತಾನೆ. ಆತನ ಪ್ರಕಾರ ಕೃತಿಯನ್ನು ವ್ಯಾಖ್ಯಾನಿಸುವಾಗ ಕೃತಿರಚಿತವಾದ ಕಾಲದ ‘ಸಾರ’ (essence)ದ ಪರಿಚಯ ಅತ್ಯಗತ್ಯ. ಕೃತಿಯ ವ್ಯಾಖ್ಯಾನವು ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಮೂಲ ಸಾಹಿತ್ಯ ಕೃತಿಯು ತದನಂತರದಲ್ಲಿ ಕಲೆಹಾಕಿದ ಮೌಲ್ಯಗಳನ್ನು ಪುನರ್ ಸೃಷ್ಟಿ ಮಾಡುವ ಕ್ರಿಯೆಯಾಗಿ ಮೂಡಿಬರುತ್ತದೆ ಎನ್ನುತ್ತಾನೆ. ಆತನ ಪ್ರಕಾರ ಅನುವಾದವೆನ್ನುವುದು ಮೂಲಕೃತಿಯ ವ್ಯಾಖ್ಯಾನ ರೂಪ. ಈ ವ್ಯಾಖ್ಯಾನರೂಪವು ನಂತರ ಒಗ್ಗೂಡಿಸಿಕೊಂಡ ಮೌಲ್ಯಗಳನ್ನು ಒಳಗೊಂಡಿರುತ್ತದೆ. ಆದರೆ ಅನುವಾದಕನಿಗೆ ಕೃತಿರೂಪಗೊಂಡ ಕಾಲದ ಗುಣಾಂಶಗಳ ಪರಿಚಯವಿರಬೇಕಾಗುತ್ತದೆ. ಅದು ಇದ್ದಾಗ ಮಾತ್ರ ನಂತರದ ಮೌಲ್ಯಗಳ ಒಗ್ಗೂಡುವಿಕೆಯ ಅರಿವಿರುತ್ತದೆ. ಈ ಹಿನ್ನಲೆಯಲ್ಲಿ ಗೋವರ್‌ನ ಅನುವಾದವನ್ನು ನೋಡೋಣ. ಗೋವರ್ ತನ್ನ ಅನುವಾದಿತ ಪದ್ಯಗಳಿಗೆ ದೀರ್ಘವಾದ ಮುನ್ನುಡಿಯನ್ನು ನೀಡುತ್ತಾನೆ. ಪದಗಳನ್ನು ಓದುವ ಮೊದಲು ಅದನ್ನು ಹೇಗೆ ಓದಬೇಕು ಎನ್ನುವ ನಿರ್ದೆಶನವನ್ನು ನಿಡುತ್ತಾನೆ. ಆದರೆ ಆತ ಎಲ್ಲಿ ಕೂಡಾ ಪುರಂದರದಾಸರು ಯಾರು, ಅವರ ಕಾಲ ಮಾನವೇನು, ಅವರ ಜೀವಿತಕಾಲದಲ್ಲಿ ಯಾವ ಹಿನ್ನೆಲೆಯಿಂದ ಈ ಪದಗಳು ಮೂಡಿವೆ ಎಂಬುದನ್ನು ಹೇಳುವುದಿಲ್ಲ. ಮಧ್ಯಯುಗೇನ ಭಾರತದ ಅಥವಾ ದಾಸರ ಪದಗಳ ಕಾಲದ ಗುಣಾಂಶಗಳ ಪರಿಚಯ ಗೋವರ್‌ಗೆ ಇಲ್ಲವೇ ಇಲ್ಲ ಎಂದು ಹೇಳಬಹುದು. ಹಾಗಾಗಿ ಆತನಿಗೆ ಈ ಪದಗಳು ಸಂಪೂರ್ಣವಾಗಿ ೧೯ನೇ ಶತಮಾನದ ಸಾಹಿತ್ಯವಾಗಿಯೇ ಕಾಣುತ್ತದೆ. ಹಾಗಾಗಿಯೋ ಏನೋ ಆತ ದಾಸ ಪರಂಪರೆಯನ್ನು ವೈದಿಕ ವಿರೋಧಿ, ವೈದಿಕ ಬ್ರಾಹ್ಮಣ ಪರಂಪರೆಗೆ ವಿರೋಧಿ ನೆಲೆಯಲ್ಲಿ ಹುಟ್ಟಿಕೊಂಡಂತಹ ಸಾಹಿತ್ಯ ಎನ್ನುತ್ತಾನೆ. ಆತನಿಗೆ ಇದು ಬ್ರಾಹ್ಮಣೇತರ, ದ್ರಾವಿಡ ಸಂಸ್ಕೃತಿಯ ಪ್ರತಿನಿಧಿಯಾಗಿ ತೋರುತ್ತದೆ. ಇದಕ್ಕಿರುವ ಹಿನ್ನೆಲೆ ಹಾಗೂ ಕಾರಣಗಳನ್ನು ನಾನು ಮುಂದೆ ಚರ್ಚಿಸುತ್ತೇನೆ. ಜಾರ್ಜ ಲೂಯಿ ಬೋರಸ್ ತನ್ನ ಲೇಖನದಲ್ಲಿ ‘ಸಾಹಿತ್ಯ ಕೃತಿಗಳ ಅನುವಾದಗಳು ಒಂದು ಅನ್ಯಕೃತಿ (foreigh text) ಮತ್ತು ಅದರ ವಿಭಿನ್ನ ಸಾಂಸ್ಕೃತಿಕ ನೆಲೆಗಳನ್ನು ಬಿಂಬಿಸುತ್ತವೆ ಎನ್ನುತ್ತಾನೆ. ಮೂಲ ಹಾಗೂ ಅನುವಾದಿತ ಕೃತಿಗಳ ನಡುವಿನ ಸಾಮ್ಯತೆಯೆನ್ನುವುದು ಯಾವಾಗಲೂ ಅನುಮಾನಾಸ್ಪದ ವಿಷಯ. ಅನುವಾದಿತ ಕೃತಿಯು ಯಾವ ಮಟ್ಟದಲ್ಲಿ ತನ್ನ ಪ್ರಭಾವವನ್ನು ಬೀರಿದರೂ ಕೂಡಾ ಮೂಲ ಕೃತಿಯೊಂದಿಗಿನ ಸಾಮ್ಯತೆ ಉಳಿಸಿಕೊಳ್ಳುವ ಸಾಧ್ಯತೆ ಅನುಮಾನಾಸ್ಪದವೇ. ಏಕೆಂದರೆ ಮೂಲಕೃತಿಯೊಂದಿಗಿನ ಸಾಮ್ಯತೆಯನ್ನು ಕಳೆದುಕೊಂತಹ ಕೃತಿಗಳೇ ಹೆಚ್ಚಿನ ವೇಳೆ ಜನಮನಕ್ಕೆ ಹತ್ತಿರವಾಗಿದೆ. ಹಾಗಾಗಿ ಸಾಮ್ಯತೆಯನ್ನೇ ಅನುವಾದಿತ ಕೃತಿಯ ಹಿರಿಮೆಯೆಂದುಕೊಳ್ಳುವ ಅವಶ್ಯಕತೆಯಿಲ್ಲ. ಅದಕ್ಕೆ ಬದಲಾಗಿ ವಿಭಿನ್ನತೆಯನ್ನು ಕೊಂಡಾಡುವುದು ಆರೋಗ್ಯಪೂರ್ಣ. ವಿಭಿನ್ನತೆಯನ್ನು ಚಾರಿತ್ರಿಕವಾಗಿ ಅಧ್ಯಯನ ಮಾಡುವುದು ಮತ್ತು ಅವುಗಳ ಐಡಿಯಲಾಜಿಕಲ್ ಧ್ವನಿಗಳನ್ನು ಪ್ರಶ್ನಿಸುವುದರ ಮೂಲಕ ಅನುವಾದಿತ ಕೃತಿಯ ಅಧ್ಯಯನ ಮಾಡಬೇಕು ಎನ್ನುತ್ತಾನೆ. ಬೋತಸ್ ಮುಂದುವರೆಯುತ್ತಾ ಹೀಗೆ ಹೇಳುತ್ತಾನೆ ‘ಅನುವಾದಕನ ಅಪನಂಬಿಕೆ, ಆತನ ಸಂತೋಷ ಹಾಗೂ ಸೃಜನಾತ್ಮಕತೆಯಲ್ಲಿನ ಅಪನಂಬಿಕೆ ನಮಗೆ ಪ್ರಮುಖವಾಗಬೇಕು. ಹಾಗಂತ ಬೋರಸ್ ಗೆ ಎಲ್ಲಾ ಅಪನಂಬಿಕೆಯು ಒಂದೇ ತೆರನಾಗಿ ಕಾಣುವುದಿಲ್ಲ. ಆತನಿಗೆ ರಾಜಕೀಯ ಉದ್ದೇಶಗಳಿಂದಲೇ ಮಾಡುವ ಅನುವಾದದಲ್ಲಿ ಕಾಣಬರುವ ಅಪನಂಬಿಕೆಯ ಅರಿವಿದೆ. ಅಂತಹ ಅನುವಾದಗಳ ಸಾಕಷ್ಟು ಉದಾಹರಣೆಗಳನ್ನು ಆತ ನೀಡುತ್ತಾನೆ. ಆತನಿಗೆ ಮೆಚ್ಚಿಗೆ ಆಗುವಂತಹ ಅನುವಾದದ ರೀತಿಯೆಂದರೆ ‘ಸಾಹಿತ್ಯದ ಅಲೆಯಲ್ಲಿ ಮೂಡಿ ಬರುವ ಅನುವಾದ’. ಹಾಗಾಗಿ ಆತ ಅನುವಾದ ಪ್ರಕ್ರಿಯೆಯನ್ನು ಒಂದು ಘನವಾದ ಗಂಭೀರವಾದ ಕಾರ್ಯ ಎನ್ನುತ್ತಾನೆ. ಭಿನ್ನ ಭಾಷೆಗಳ ಮೌಲ್ಯವನ್ನು ಮತ್ತು ಸಂಕರವನ್ನು ಸಂಭ್ರಮದಿಂದ ಎದುರುಗೊಳ್ಳುತ್ತಾನೆ. ಬೋರಸನ ವಾದದಲ್ಲಿ ಅನುವಾದಕನಿಗೆ ಸಾಕಷ್ಟು ಸ್ವಾತಂತ್ರ್ಯವಿದೆ. ಅನುವಾದಕ ಸಾಮ್ಯತೆಯನ್ನು ನಿರೂಪಿಸಬೇಕಿಲ್ಲ. ಆದರೆ ಸಾಹಿತ್ಯಕ್ಕೆ ಒಂದು ರೀತಿಯಲ್ಲಿ ಬದ್ಧನಾಗಿರಬೇಕಾಗುತ್ತದೆ. ಸಾಂಸ್ಕೃತಿಕ ವಿಭಿನ್ನತೆಯಿಂದ ಮಾಡುವ ಸೃಜನಾತ್ಮಕತೆಯನ್ನು ಬೋರಸ್ ಒಪ್ಪಿಕೊಳ್ಳುತ್ತಾನೆ ಮತ್ತು ಸ್ವಾಗತಿಸುತ್ತಾನೆ. ವಿಭಿನ್ನ ಭಾಷೆಗಳಲ್ಲಿ ವಿಭಿನ್ನ ಸಂಸ್ಕೃತಿಗಳಲ್ಲಿ ಇದು ಸಹಜ. ಆದರ ಅನುವಾದಕನ ಮೂಲ ಉದ್ದೇಶಗಳು ಕೂಡಾ ಬೋರಸ್ ಗೆ ಅಷ್ಟೇ ಮುಖ್ಯವಾಗಿರುತ್ತದೆ. ಸಾಂಸ್ಕೃತಿಕ ಸಂಕರ ಹಾಗೂ ಹಂಚಿಕೊಳ್ಳುವಿಕೆ ಆತನಿಗೆ ಪ್ರಿಯವಾಗುತ್ತದೆ. ಆದರೆ ರಾಜಕೀಯ ಉದ್ದೇಶಗಳನ್ನು ಆತ ಸಹಿಸುವುದಿಲ್ಲ. ಇಂತಹ ಅನುವಾದಗಳನ್ನು ಗುರುತಿಸುತ್ತಾ ಆತ ‘ಓರಿಯಂಟಲ್ ಅನುವಾದಗಳು ಹೇಗೆ ಮೂಲ ಕೃತಿಗೆ ಧಕ್ಕೆ ತಂದಿವೆ’ ಎಂದು ಹೇಳುತ್ತಾನೆ.‘ಓರಿಯಂಟಲ್ ನೆಲೆ’ಯ ಅನುವಾದಗಳು ವಸಾಹತೀಕರಣದ ಸಂದರ್ಭದಲ್ಲಿ ಸಾಕಷ್ಟು ಆಗಿವೆ. ಈ ಅನುವಾದಗಳ ಮುಖಾಂತರ ಭಾರತವನ್ನು ಆಧ್ಯತ್ಮಿಕ ಮೇಲ್ಮೆಯ, ವೈಧಿಕ ಸಂಸ್ಕೃತಿಯ ಹಾಗೂ ಅನಾಗರಿಕ ಜನರಿಂದ ತುಂಬಿದ ದೇಶ ಎಂದು ಬಿಂಬಿಸಲಾಯಿತು. ಗೋವರ ನ ಅನುವಾದದ ಮೂಲ ಉದ್ದೇಶವು ರಾಜಕೀಯವೇ ಆಗಿದ್ದರೂ ಆತ ತನ್ನ ಹಿಂದಿನ ಅನುವಾದಕರಿಗಿಂತ ಸ್ವಲ್ಪ ಭಿನ್ನನಾಗಿದ್ದಾನೆ. ಆತನಿಗೆ ಎರಡು ಉದ್ದೇಶಗಳಿವೆ. “ಮೊದಲನೆಯದಾಗಿ ವಸ್ತುನಿಷ್ಟವಾಗಿ ಖಚಿತವಾಗಿ, ಪುರಾವೆಗಳೊಂದೆಗೆ, ಭಾರತೀಯರೆಂದರೆ ಯಾರು ಎಂದು ನಿರೂಪಿಸುವುದು. ಅವರ ಭಾವನೆಗಳೇನು ಎಂದು ತಿಳಿಸುವುದು, ತನ್ಮೂಲಕ ಯುರೋಪಿಯನ್ನರೆಗೆ ಭಾರತೀಯವರನ್ನು ಅವರ ನಿಜ ರೂಪದಲ್ಲಿ ಅರ್ಥಮಾಡಿಸುವುದು. ಎರಡನೆಯದು, ಜನರನ್ನು ಉತ್ತಮವಾದ ಸಾಹಿತ್ಯಕ್ಕೆ ಪರಿಚಯಿಸುವುದು”. ದಕ್ಷಿಣ ಭಾರತದ ಜನರನ್ನು ಯಥಾವತ್ತಾಗಿ ಯುರೋಪಿಯನ್ನರಿಗೆ ಪರಿಚಯಿಸುವುದು ಗೋವರ್ ಗೆ ಅತಿ ಮುಖ್ಯವಾಗುತ್ತದೆ. ಆತನೇ ಮುಂದೆ ಹೇಳುವಂತೆ ಆಳುವ ಆಂಗ್ಲರಿಗೆ ಆಳ್ವಿಕೆಯಡಿಯಲ್ಲಿ ಬರುವ ವಸಾಹತು ಪ್ರಜೆಗಳನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಿಂದೆ ಅನುವಾದಗೊಂಡಿದ್ದಂತಹ ಸಾಹಿತ್ಯವು ಸಂಸ್ಕೃತ ಭಾಷೆಯಿಂದ ಅನುವಾದವಾದ ಹಾಗೂ ಬ್ರಾಹ್ಮಣ ಪಂಡಿತರ ಒಡನಾಟದಿಂದ ಮೂಡಿಬಂದ ಜ್ಞಾನದಿಂದ ಮಾಡಿದ ಅನುವಾದಗಳು. ಗೋವರ ಈ ಅನುವಾದಗಳು ಭಾರತೀಯರ ಬಗ್ಗೆ ತಪ್ಪು ಕಲ್ಪನೆಯನ್ನು ಮೂಡಿಸಿವೆ ಎನ್ನುತ್ತಾನೆ. ಅ ಅನುವಾದಗಳು ಭಾರತೀಯರೆಂದರೆ ವೈದಿಕ ಬ್ರಾಹ್ಮಣರು ಎಂದು ಬಿಂಬಿಸಿವೆ. ವೈದಿಕ ಬ್ರಾಹ್ಮಣ ಆಚಾರ, ವಿಚಾರ ಹಾಗೂ ತಾತ್ವಿಕ ನಂಬಿಕೆಗಳೇ ದೇಶದ ಆಚಾರ. ವಿಚಾರ ಹಾಗೂ ತಾತ್ವಿಕ ನಂಬಿಕೆಗಳು ಎನ್ನುವಂತೆ ಮೂಡಿವೆ. ಈ ಓರಿಯಂಟಲ್ ವಾದ ಸರಿಯಲ್ಲ ಎಂದು ಗೋವರ್ ಹೇಳುತ್ತಾನೆ. ಭಾರತವು ಕೇವಲ ‘ವೈದಿಕ’ ಹಾಗೂ ‘ಸಂಸ್ಕೃತ’ ಭಾರತವಲ್ಲ ಎಂದು ತಿಳಿಪಡಿಸುವುದು ಗೋವರನ್ ಉದ್ದೇಶಾ. ಈ ಉದ್ದೇಶದ ಹಿನ್ನೆಲೆ ಮಾತ್ರ ಬೇರೆ ಅನುವಾದಕರಂತೆ ಆಂಗ್ಲರ ಆಡಳಿತವನ್ನು ಭಾರತದಲ್ಲಿ ಸುಗಮಗೊಳಿಸುವುದೇ ಆಗಿತ್ತು. ಈ ದಿಸೆಯಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಗೋವರ್ ನಿಗೆ ರಾಜಕೀಯ ಉದ್ದೇಶವೇ ಪ್ರಮುಖವಾಗಿತ್ತು ಎಂಬುದು. ಬೋರಸ್ ಹೇಳುವಂತೆ ಅನುವಾದಕನ ಉದ್ದೇಶನುವಾದದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಹಿತ್ಯದ ಅಲೆಯಲ್ಲಿ ಮೂಡಿಬರುವ ಅನುವಾದದ ಶ್ರೇಷ್ಟತೆಯನ್ನು ಇತರ ಉದ್ದೇಶಗಳಿಂದ ಮಾಡಿದ ಅನುವಾದಗಳು ಹೊಂದುವುದಿಲ್ಲ. ಗೋವರ್ ನ ಅನುವಾದವು ಈ ಸೋಲನ್ನು ಕಾಣುತ್ತದೆ. ಆದರ ಗೋವರನ ಅನುವಾದಿತ ಕೃತಿ ರಾಜಕೀಯದ ನೆಲೆಯಲ್ಲಿ ಪ್ರಮುಖ ಕೃತಿಯಾಗುತ್ತದೆ. ಸಾಹಿತ್ಯವಾಗಿ ಸೋಲನ್ನು ಕಾಣುವ ಈ ಅನುವಾದಿತ ಕೃತಿ ರಾಜಕೀಯ ನೆಲೆಯಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದೆ ಎನ್ನಬಹುದು. ಗೊವರಗೆ ದಾಸರ ಪದಗಳು ಅರ್ಥವಾಗುವ ತಾತ್ವಿಕ ನೆಲೆ ಹಾಗೂ ಆತ ದಾಸರ ಪದಗಳನ್ನು ಜಾನಪದ ಹಾಡುಗಳಿಗೆ ನೋಡುವುದರ ಹಿನ್ನಲೆ ಈ ಎರಡು ವಿಷಯಗಳನ್ನು ಮಾತ್ರ ನಾನಿಲ್ಲಿ ಚರ್ಚಿಸುತ್ತೇನೆ.

ಮೊದಲೇ ಹೇಳಿದಂತೆ ಭಾರತೀಯ ಸಂಸ್ಕೃತಿ ಹಾಗೂ ವೈದಿಕ ಸಂಸ್ಕೃತಿಯನ್ನು ಒಂದೇ ಎಂದು ಸಮೀಕರಿಸಿದ ಅನುವಾದ ಸಾಹಿತ್ಯ ಹಾಗೂ ಆಂಗ್ಲರು ಈ ನೆಲೆಯಲ್ಲಿ ಭಾರತವನ್ನು ಅರ್ಥೈಸಿಕೊಂಡು ಭಾರತವನ್ನು ಆಳುತ್ತಿರುವ ಸಂಪೂರ್ಣ ಪರಿಚಯ ಗೋವರ್‌ಗೆ ಇತ್ತು. ಸಾಹಿತ್ಯದ ಮುಖಾಂತರವೇ ಒಂದು ಪ್ರದೇಶದ ಸಾಂಸ್ಕೃತಿಕ ಪರಿಚಯ ಸಾಧ್ಯ ಎನ್ನುವುದನ್ನು ಗೋವರ್ ಬಲವಾಗಿ ನಂಬಿದ್ದ. ಆತ ದಕ್ಷಿಣ ಭಾರತದಲ್ಲಿ ಸಾಕಷ್ಟು ಕಾಲ ಇದ್ದು ಎಲ್ಲಿಯ ಜನರ ಬದುಕನ್ನು ಹತ್ತಿರದಿಂದ ಕಂಡಿದ್ದ ಅಥವಾ ಹಾಗಿ ಭಾವಿಸಿದ್ದ. ಆತನಿಗೆ ದ್ರಾವಿಡ ರಾಷ್ಟ್ರ ಆಂದೋಲನದ ಪರಿಚಯವಿತ್ತು. ಈ ಆಂದೋಲನವನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಆತ ಸಾಹಿತ್ಯವನ್ನು ಅಧ್ಯಯನ ಮಾಡುತ್ತಾನೆ. ತಮಿಳು, ಕನ್ನಡ, ಬಡಗ, ಕರುಳ್, ಮಲೆಯಾಳಂ ಭಾಷೆಗಳ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಆತನಿಗೆ ಇಲ್ಲಿನ ಸಾಹಿತ್ಯವು ಸಂಸ್ಕೃತ ಭಾಶೆಯ ಸಾಹಿತ್ಯಕ್ಕಿಂತ ಸಂಪೂರ್ಣ ಭಿನ್ನವಾಗಿ ತೋರುತ್ತದೆ. ಇಲ್ಲಿ ಆತ ಜಾನಪದ ಸಾಹಿತ್ಯವನ್ನು ಆರಿಸಿಕೊಳ್ಳುವುದಕ್ಕೆ ಆತನ ಯುರೋಪಿಯನ್ ಹಿನ್ನೆಲೆ ಕಾರಣವಾಗುತ್ತದೆ. ಯುರೋಪ ಇತಿಹಾಸದಲ್ಲಿ ಜಾನಪದ ಸಾಹಿತ್ಯಕ್ಕೂ ರಾಷ್ಟ್ರೀಯತೆಗೂ ಬಲವಾದ ನಂಟಿದೆ. ಯುರೋಪನಲ್ಲಿ ರಾಷ್ಟ್ರ ಹಾಗೂ ರಾಷ್ಟ್ರೀಯತೆಯ ಕಲ್ಪನೆ ಮೂಡಿದಾಗ ಅವರು ತಮ್ಮಲ್ಲಿದ್ದ ಜಾನಪದ ಸಾಹಿತ್ಯವನ್ನು ಕಲೆಹಾಕಿ, ತಮ್ಮ ಸಂಸ್ಕೃತಿಗೊಂದು ಮೂರ್ತ ರೂಪ ಕೊಟ್ಟು, ಅದನ್ನು ರಾಷ್ಟ್ರೀಯ ಸಂಸ್ಕೃತಿಯೆಂದು ಅಧಿಕೃತವಾಗಿ ಒಪ್ಪಿಕೊಂಡರು. ಈ ಯುರೋಪಿಯನ್ ಇತಿಹಾಸದ ಹಿನ್ನಲೆಯನ್ನು ಅಂತರ್ಗತ ಮಾಡಿಕೊಂಡಿದ್ದ ಗೋವರ್ ದಕ್ಷಿಣ ಭಾರತವನ್ನು ಅದೇ ದೃಷ್ಟಿಯಿಂದ ನೋಡುತ್ತಾನೆ. ದಕ್ಷಿಣ ಭಾರತದ ದ್ರಾವಿಡ ಆಂದೋಲನ ಹಾಗೂ ರಾಷ್ಟ್ರೀಯತೆಯ ವಾಸ್ತವಕ್ಕೆ ಬಂದರೆ, ಗೋವರ್ ನಿರೀಕ್ಷಿಸುವ ಭಾಷೆಯ ಶುದ್ಧತೆ ಹಾಗೂ ಪ್ರಾಚೀನತೆಯು ತಮಿಳು ಭಾಷೆಗೆ ಇತ್ತು. ೧೯ನೇ ಶತಮಾನದ ದ್ವಿತೀಯಾರ್ದದಲ್ಲಿ ತಮಿಳಿನಲ್ಲಿ ಸಮೃದ್ಧ ಸಾಹಿತ್ಯವಿತ್ತು ಹಾಗೂ ರಾಷ್ಟ್ರೀಯತೆಯನ್ನು ವ್ಯಕ್ತ ಪಡಿಸಬಲ್ಲಂತಹ ಶಕ್ತಿಕೂಡ ಇತ್ತು. ಭಾಷೆಯ ಶುದ್ಧತೆ ಹಾಗೂ ಪ್ರಾಚೀನತೆಯಲ್ಲಿ ಸಂಸ್ಕೃತಕ್ಕಿಂತ ಯಾವುದೇ ರೀತಿಯಲ್ಲಿ ತಮಿಳು ಕೆಳ ಮಟ್ಟದ್ದಾಗಿರಲಿಲ್ಲ. ಹಾಗಾಗಿ ಕೆಳವರ್ಗದ ಹಾಗೂ ಜಾತಿಯ ಮೇಲಿನ ಸಂಸ್ಕೃತ ಭಾಷೆಯ ಸಾಂಸ್ಕೃತಿಕ ದಬ್ಬಾಳಿಕೆ ಹಾಗೂ ದಾಳಿಯನ್ನು ಎದುರಿಸಲು ಬೇಕಾದಂತಹ ಶಕ್ತಿ ತಮಿಳಿಗೆ ಇತ್ತು. ಹಾಗಾಗಿ ೧೮೭೦ ರ ದಶಕದಲ್ಲಿ ಜಾನಪದ ಸಾಹಿತ್ಯವನ್ನು ಸಾರ್ವಜನಿಕವಾಗಿ ಗೌರವಾನ್ವಿತ ಸಾಹಿತ್ಯ ಎಂದು ಗುರುತಿಸುವುದು ಸಾಧ್ಯ ಮತ್ತು ಅನಿವಾರ್ಯವಾಗುತ್ತದೆ. ಜಾನಪದ ಸಾಹಿತ್ಯವು ಸ್ಥಳೀಯ(imdigrlous) ಸಂಸ್ಕೃತಿ ಹಾಗೂ ಪೂರ್ವ ವಸಾಹತುಶಾಹಿ ಅನನ್ಯತೆ (identity)ಯನ್ನು ನೀಡುವ ಸಾಹಿತ್ಯವಾಗಿ ಗುರುತಿಸಲ್ಪಡುತ್ತದೆ. ದಕ್ಷಿಣ ಭಾರತೀಯರ ಈ ಪ್ರಯತ್ನವು ಹಿಂದೂ ರಾಷ್ಟ್ರೀಯತೆ ಹಾಗೂ ವೈದಿಕ ಸಂಸ್ಕೃತಿಗೆ ಪರ್ಯಾಯ ನೆಲೆಯಲ್ಲಿ ರೂಪುಗೊಂಡದ್ದಾಗಿರುತ್ತದೆ. ಆದರೆ ಈ ದ್ರಾವಿಡ ರಾಷ್ಟ್ರೀಯ ಆಂದೋಲನವು ಪುರಂದರದಾಸರ ಕೃತಿಗಳನ್ನು ಜಾನಪದೀಯ ನೆಲೆಯಲ್ಲಿ ನೋಡುವುದಾಗಲಿ ಅಥವಾ ರಾಷ್ಟ್ರೀಯತೆಯ ಅನನ್ಯತೆಗೆ ಬಳಸುವುದಾಗಲೀ ಕಂಡು ಬರುವುದಿಲ್ಲ. ಗೋವರ್‌ನ ರಾಜಕೀಯ ಉದ್ದೇಶಾ ದಾಸರಪದಗಳನ್ನು ಜಾನಪದ ಗೀತೆಗಳೆಂದು ನೋಡುವಂತೆ ಮಾಡಿರಬಹುದು ಅಥವಾ ಇದೊಂದು ಮುಗ್ಧ ಪ್ರಯತ್ನ ಕೂಡಾ ಇರಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದಾಸರ ಪದಗಳನ್ನು ಗೋವರ್ ಹೇಗೆ ವ್ಯಾಖ್ಯಾನಿಸುತ್ತಾನೆ ಎಂಬುದು.

ಗೋವರ್ ನ ಅನುವಾದವು ವ್ಯಾಖ್ಯಾನದ ನೆಲೆಯಲ್ಲಿ ಆಗುತ್ತದೆ. ಇಲ್ಲಿ ಆತ ಅಧ್ಯಾತ್ಮಿಕತೆಗೆ ಒತ್ತನ್ನು ನೀಡುತ್ತಾನೆ. ನಾನು ಈ ಹಿಂದೆ ಹೇಳಿದಂತೆ ಅವನ ಅಧ್ಯಯನ ಹಾಗೂ ವ್ಯಾಖ್ಯಾನ ಎರಡೂ ಕೂಡಾ ವೈದಿಕ ಬ್ರಾಹ್ಮಣ ಸಂಸ್ಕೃತಿಯ ವಿರೋಧಿ ನೆಲೆಯಲ್ಲಿಯೇ ರೂಪುಗೊಂಡಿದೆ. ಜೊತೆಗೆ ಆತನ ರಾಜಕೀಯ ಉದ್ದೇಶ ಭಾರತೀಯರು ಯಾರು? ಏನು? ಎಂಬುದನ್ನು ಆಂಗ್ಲರಿಗೆ ನಿರೂಪಿಸುವುದು ಕೂಡಾ ಅವನ ಅಧ್ಯಯನದ, ವ್ಯಾಖ್ಯಾನದ ಸ್ವರೂಪದಲ್ಲಿ ಕಾಣಬರುತ್ತದೆ. ಗೋವರ್ ಆಳುವ ಆಂಗ್ಲರ ಹಾಗೂ ಆಳ್ವಿಕೆಗೊಳಗಾದ ಭಾರತೀಯರ ನಡುವೆ ಒಂದು ‘ಸಮಾನ ಭಾಷೆ’ಯನ್ನು ಹುಟ್ಟುಹಾಕಬೇಕಾದ ಅವಶ್ಯಕತೆಯಿತ್ತು. ಯಾಕೆಂದರೆ ಸಮಾನ ಭಾಷೆಯಿದ್ದಾಗ ಮಾತ್ರ ಸಂವಹನ ಸಾಧ್ಯ. ಈ ‘ಸಮಾನ ಭಾಷೆ’ಯನ್ನು ಗೋವರ್ ಧಾರ್ಮಿಕ ನೆಲೆಯಲ್ಲಿ ರೂಪಿಸುತ್ತಾನೆ. ಹೀಗೆ ಮಾಡುವಾಗ ಗೋವರ್ ಸಮಾನತೆ ಇಲ್ಲದಲ್ಲಿ ಸಮಾನತೆ ಇದು ಎಂದು ನಿರೂಪಿಸಿದಂತಾಗುತ್ತದೆ. ಯಾಕೆಂದರೆ ಆಳುವ ಪ್ರಭುಗಳು ಹಾಗೂ ಆಳ್ವಿಕೆಗೆ ಒಳಗಾದ ಪ್ರಜೆಗಳ ನದುವೆ ಸಮಾನತೆಯ ಭಾಷೆ ಇರುವುದು ಅಸಾಧ್ಯ. ಅಧಿಕಾರ, ಪ್ರಭುತ್ವವಿದ್ದಲ್ಲಿ ಸಮಾನತೆ ಇರಲು ಸಾಧ್ಯವಿಲ್ಲ. ಇದು ಗೋವರ್ ಗೆ ತಿಳಿಯದ ವಿಚಾರವೇನಲ್ಲ. ಹಾಗಾಗಿ ಅನುವಾದಕನಾಗಿ ಆತ ತನ್ನದೆ ಆದ ಕೆಲವು ಕೌಶಲ್ಯಗಳನ್ನು ಬಳಸುತ್ತಾನೆ. ಈ ಕೌಶಲ್ಯಗಳ ಫಲವಾಗಿ ದಾಸರ ಪದಗಳಲ್ಲಿ ಅನನ್ಯವಾಗಿ ಬರುವ ತೀರಾ ಸರಳೀಕೃತವಾಗಿ ಅನುವಾದದಲ್ಲಿ ಕಂಡುಬರುತ್ತದೆ. ಗೋವರ್ ದ್ರಾವಿಡ ರಾಷ್ಟ್ರೀಯತೆಯಲ್ಲಿ ಎಷ್ಟು ತನ್ಮಯನಾಗಿದ್ದಾನೆಂದರ ಆತನಿಗೆ ದಾಸರ ಪದಗಳು ೧೬ನೇ ಶತಮಾನದ ಹಿನ್ನಲೆಯನ್ನು ಹೊಂದಿವೆ ಎಂದು ಹೊಳೆಯುವುದೇ ಇಲ್ಲ. ದಾಸ ಸಾಹಿತ್ಯ ನಮಗೆಲ್ಲ ತಿಳಿದಿರುವಂತೆ ವೈದಿಕ ಆಚರಣೆಗಳ ಕೆಲವು ವಿಷಯಗಳನ್ನು ಪ್ರಶ್ನಿಸುತ್ತದೆಯಾದರೂ ವೈದಿಕ ಸಂಸ್ಕೃತಿಗೆ ವಿರೋಧವಾಗಿ ಹುಟ್ಟಿಕೊಂಡಂತಹ ಸಾಹಿತ್ಯವೇನಲ್ಲ. ಅಡಚಣೆಯಲ್ಲಿ ಬರುವ ಲೋಪಗಳು, ಶೋಷಣೆಗಳನ್ನು ದಾಸ ಸಾಹಿತ್ಯ ವ್ಯಂಗವಾಡುತ್ತದೆ ಮತ್ತು ತಿರಸ್ಕರಿಸುತ್ತದೆ. ಆದರೆ ವೈದಿಕ ಸಂಸ್ಕೃತಿ ತಾತ್ವಿಕ ನೆಲೆಯನ್ನು ಎಲ್ಲೆಲ್ಲಿಯೂ ವಿರೋಧಿಸುವದಿಲ್ಲ. ದಾಸ ಸಾಹಿತ್ಯವು ಹಿಂದೂ ಧರ್ಮವನ್ನು ಜನಸಾಮಾನ್ಯರಿಗೆ ತಲುಪಿಸುವ ಒಂದು ಪ್ರಯತ್ನವೇ ಆಗಿದೆ. ಸಂಸ್ಕೃತ ಭಾಷೆಯಲ್ಲಿದ್ದ ವೇದಗಳು ಕೇವಲ ಪಂಡಿತ ಪಾಮರರ ಸೊತ್ತಾಗಿದ್ದು, ತನ್ಮೂಲಕ ಕೆಳವರ್ಗದ ಜನರ ಶೋಷಣೆಯೂ ಇದರಿಂದ ಆಗುರ್ರಿದ್ದ ಕಾಲದಲ್ಲಿ ದಾಸರು ವೇದ ಸಾರವನ್ನು ಕನ್ನಡದಲ್ಲಿ ಆಡು ಭಾಷೆಯಲ್ಲಿ ಜನಮನಕ್ಕೆ ನೀಡುತ್ತಾರೆ. ಸಾಮಾಜಿಕ ಬದುಕಿಗೆ ಪೂರಕವಾಗುವಂತೆ ವೇದ ತತ್ವಗಳನ್ನು ಆಡುಭಾಷೆಯಲ್ಲಿ ಜನರಿಗೆ ತಲುಪಿಸುವುದು ಈ ಸಾಹಿತ್ಯದ ಉದ್ದೇಶ. ಪುರಂದರದಾಸರ ಕೀರ್ತನೆಗಳು ಸಂಗೀತದ ಮೂಲಪಾಠವಾಗಿಯೂ ದಕ್ಷಿಣ ಭಾರತದ ಮನೆಮನಗಳಲ್ಲಿ ಜನಜನಿತವಾಗಿದೆ. ಗೋವರ್ ಅಂದುಕೊಳ್ಳುವಂತೆ ಬ್ರಾಹ್ಮಣೇತರರಿಗೆ ಅನನ್ಯತೆಯನ್ನು ನೀಡಲು ಮೂಡಿದ ಸಾಹಿತ್ಯವಲ್ಲ. ಗೋವರ್ ತನ್ನ ಮುನ್ನುಡಿಯಲ್ಲಿ ದಾಸರ ಪದಗಳಲ್ಲಿ ಬರುವ ಸಾಮಾನ್ಯ ಮೂಲ ತತ್ವಗಳನ್ನು ಗುರುತಿಸುತ್ತಾ ಹೀಗೆ ಹೇಳುತ್ತಾನೆ: “ಈ ಪದಗಳಲ್ಲಿ ಕಾಣಬರುವ ಅತಿಮುಖ್ಯ ಅಂಶವೆಂದರೆ ಇಲ್ಲಿ ಬ್ರಾಹ್ಮಣ ವ್ಯವಸ್ಥೆಯ ಬಗ್ಗೆ ತೀವ್ರವಾದ ತಿರಸ್ಕಾರವಿದೆ. ದೇವರ ಬಗ್ಗೆ ಗಾಢವಾದ ಪ್ರೀತಿಯಿದೆ”. ಇಲ್ಲಿ ದೇವರುಗಳ ಎಂಬ ಬಹುತ್ವ ಅಥವಾ ಅನೇಕತ್ವವಿಲ್ಲ ವಿಷ್ಣು, ಪುರಂದರವಿಠಲ, ಬ್ರಹ್ಮ, ಯಮ ಎನ್ನುವುದು ಒಂದೇ ದೇವರ ಬೇರೆ ಬೇರೆ ಹೆಸರುಗಳು ಹಾಗೂ ದೇವರ ಅಜ್ಞಾಪಾಲಕನಾಗಿರುವ ಮೃತ್ಯು ಬದಲಾಗಿ ಮೂರು ಹೆಸರುಗಳಾಗಿ ಕಾಣ ಬರುತ್ತವೆ. ತಾತ್ವಿಕ ಹಾಗೂ ತಾರ್ತಿಕ ನೆಲೆಯಲ್ಲಿ ಗೋವರ್ ಹೇಳುವುದನ್ನು ಒಪ್ಪಿಕೊಳ್ಳೊಣ. ಆದರೆ ಭಾರತೀಯ ಜನಸಮುದಾಯದ, ದಿನನಿತ್ಯದ ಜೀವನದಲ್ಲಿ ಇದು ಸತ್ಯ ಅಥವಾ ವಾಸ್ತವವಾಗುವುದಿಲ್ಲ. ಜಾತಿ ಹಾಗೂ ಪಂಗಡಗಳು ದೇವರುಗಳನ್ನು ವಿಂಗಡಿಸಿಕೊಂಡಿವೆ. ಜಾತಿ ರಾಜಕೀಯಗಳು ಕೂಡಾ ಅವರು ಪೂಜಿಸುವ ಜಾತಿ ಒಂದಾದರೆ, ವಿಷ್ಣುವನ್ನು ಪೂಜಿಸುವ, ಮಾರಿಯನ್ನು ಪೂಜಿಸುವ ಹಾಗೂ ದುರ್ಗೆಯನ್ನು ಪೂಜಿಸುವ ಜಾತಿಗೆಳು ಬೇರೆಯೇ ಆಗಿವೆ. ದೇವನೊಬ್ಬ ನಾಮ ಹಲವು ಎಂಬ ವಿಭಿನ್ನತೆಯನ್ನು ಏಕತೆಗೆ ತರುವ ಪ್ರಯತ್ನ ತಾತ್ವಿಕವಾಗಿ ಸೊಗಸೆನಿಸಿದರೂ ವಾಸ್ತವದಲ್ಲಿ ವಿಭಿನ್ನತೆ ವಿಭಿನ್ನತೆಯಾಗಿಯೇ ಉಳಿದಿರುವುದು ಸುಳ್ಳೇನಲ್ಲ. ಗೋವರ್ ಗೆ ಈ ಸಾಂಸ್ಕೃತಿ ನೆಲಯ ಅರಿವಿದ್ದರು ಅದರ ಸಂಕೀರ್ಣತೆ ಹಾಗೂ ರಾಜಕೀಯ ಅರ್ಥವಾದಂತೆ ಕಾಣುವುದಿಲ್ಲ. ಹಾಗಾಗಿಯೇ ಕ್ರೈಸ್ತ ಧರ್ಮದಲ್ಲಿ ಕಾಣಬರುವ ‘ಟ್ರಿನಿಟಿ’ ಹಾಗೂ ಭಾರತೀಯ ‘ತ್ರಿಮೂರ್ತಿ’ ಒಂದೇ ತೆರನಾಗಿ ಆತನಿಗೆ ಕಾಣುತ್ತದೆ.

ಗೋವರ್‌ಗೆ ಆಚರಣೆಗಳು ಹಾಗೂ ಅದರ ಹಿಂದಿರುವ ತಾತ್ವಿಕ ನೆಲೆಗಳಿರುವ ಸಂಬಂಧವನ್ನು ಪೂರ್ಣ ಪ್ರಮಾಣದಲ್ಲಿ ಗ್ರಹಿಸಲಾಗಿಲ್ಲ ಎಂದೇ ಹೇಳಬಹುದು. ಭಾರತದ ವಾಸ್ತವ ಎಂದು ನಾವು ಏನನ್ನು ಗುರುತಿಸುತ್ತೇವೆಯೋ ಅದು ಯುರೋಪಿನ ವಾಸ್ತವಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಆಟೋನಿಯೊ ಗ್ರಮ್ಷಿ ಹೇಳುವಂತೆ ಐಡಿಯಾಲಜಿಗಳು ನಮ್ಮ ಕಣ್ಣಿಗೆ ಕಾಣುವಂತವು ಮತ್ತು ಅದಕ್ಕೆ ನಾವು ನೀಡುವ ಐಡಿಯಾಲಾಜಿಕಲ್ ಶಬ್ಧಗಳು ವಾಸ್ತವ ಆಚರಣೆಗಳ ಆಮುರ್ತ ರೂಪ. ಐಡಿಯಾಲಾಜಿಯು ವಾಸ್ತವ ಆಚರಣೆಗಳ ರೂಪದಲ್ಲಿಯೇ ಸಂಪೂರ್ಣ ಅರ್ಥ ಹೊಂದಲು ಸಾಧ್ಯ. ನಮ್ಮ ಆಚರಣೆಗಳು ಮತ್ತು ಅವು ಒಳಗೊಂಡಿರುವ ತಾತ್ವಿಕತೆಗೂ ಪರಸ್ಪರ ಸಂಬಂಧವಿರುತ್ತದೆ. ತತ್ವಗಳು ಆಮೂರ್ತ ರೂಪವನ್ನು ಹೊಂದಿದ್ದರೂ ಅವುಗಳು ಮೂಲಾರ್ಥವಿರುವುದು ಆಚರಣೆಯ ರೂಪದಲ್ಲಿಯೆ. ಹಾಗಾಗಿ ಆಚರಣೆ ರಹಿತವಾದ ತಾತ್ವಿಕತೆ ಇದೆ ಎಂದಾದರೆ ಅದು ತರ್ಕದಿಂದ ರೂಪಿತವಾದ ತಾತ್ವಿಕತೆಯಾಗಿರುತ್ತದೆ. ಗೋವರ್ ಆಚರಣೆ ಹಾಗೂ ವಾಸ್ತವದಿಂದ ರೂಪಿತವಾಗದ ತಾತ್ವಿಕತೆಯನ್ನು ತನ್ನ ಅನುವಾದದಲ್ಲಿ ಬಳಸುತ್ತಾನೆ. ಗೋವರ್‌ಗೆ ದಾಸರ ಪದಗಳಲ್ಲಿ ಬರುವ ‘ಪಾಪ’ ಎನ್ನುವ ಕಲ್ಪನೆ ಅರ್ಥವಾಗುವುದು ಕ್ರೈಸ್ತ ಧರ್ಮದಲ್ಲಿರುವ ‘sim’ ಎಂಬ ಅರ್ಥದಲ್ಲಿ. ಕ್ರೈಸ್ತ ಧರ್ಮದ ಪ್ರಕಾರ ‘ಸೈತಾನನ ಅನುಯಾಯಿಯಾದಾಗ ಮನುಷ್ಯ ಪಾಪವನ್ನು ಮಾಡುತ್ತಾನೆ. ಸೈತಾನನ ಬಗೆಗಿನ ಆಕರ್ಷಣೆ ಮನುಷ್ಯನಿಗಿರುತ್ತದೆ. ದೇವರಲ್ಲಿ ಪಾಪ ನಿವೇದನೆ ಮಾಡುವುದರಿಂದ ಪಾಪದಿಂದ ಮುಕ್ತಿಯನ್ನು ಪಡೆಯಬಹುದು. ಹಿಂದೂ ಧರ್ಮದಲ್ಲಿ ಬರುವ ‘ಪಾಪ’ ಹಾಗೂ ‘ಪುಣ್ಯದ’ ಕಲ್ಪನೆ ಇದಕ್ಕಿಂತ ಭಿನ್ನವಾದುದು. ಪುಣ್ಯವನ್ನು ಸಂಪಾದಿಸುವುದು ದೇವರ ಧ್ಯಾನ ಹಾಗೂ ಲೌಕಿಕವನ್ನು ಗೆಲ್ಲುವುದರ ಮೂಲಕ ‘ಪಾಪ’ ಲೌಕಿಕದೊಳಗೆ ಸಿಲುಕಿ ಮಾಡುವ ಅಪಚಾರಗಳು. ಪಾಪ ಹಾಗೂ ಪುಣ್ಯಗಳು ಈ ಲೋಕದ ಸಂಪಾದನೆ. ದೇವರಿಗೆ ವಿರೋಧಿ ಶಕ್ತಿಯಾಗಿ ರಾಕ್ಷಸರನ್ನು ಗುರುತಿಸಿದರೂ ರಾಕ್ಷಸರೆಂದೂ ಮನುಷ್ಯನ ಮನಸ್ಸಿನ ಮೇಲೆ ಸೈತಾನನಂತೆ ಪರಿಣಾಮ ಬಿರುವುದಿಲ್ಲ. ಹಿಂದೂ ಹಾಗೂ ಕ್ರೈಸ್ತ ಧರ್ಮಕ್ಕಿರುವ ವ್ಯತ್ಯಾಸಗಳ್ಳು ಧರ್ಮಸೂಕ್ಷ್ಮದ ನೆಲೆಯಲ್ಲಾಗಲೀ, ಆಚರಣೆಯ ನೆಲೆಯಲ್ಲಾಗಲೀ, ಗೋವರ್ ನೋಡುವುದೇ ಇಲ್ಲ. ಯಾಕೆಂದರೆ ಆತನಿಗೆ ಯಾವ ಪುರ್ವತನ ಸಂದರ್ಭದಲ್ಲಿ ಈ ಧಾರ್ಮಿಕ ತತ್ವಗಳು ಹಿಟ್ಟಿಕೊಂಡವು ಎನ್ನುವುದು ಮುಖ್ಯವಾಗುವುದಿಲ್ಲ. ಹಾಗಾಗಿ ಆತನಿಗೆ ‘ಪಾಪ’ ಎನ್ನುವುದು ‘ಸಾರ್ವತ್ರಿಕ ಮೌಲ್ಯ’ (quariqussal volue) ಆಗೆ ಕಾಣುತ್ತದೆ. ಆತನ ಪ್ರಕಾರ “ದ್ರಾವಿಡರ ಜೀವನವು ಪಾಪಿಗಳ ಸಮುದ್ರ, ಪಾಪಗಳ ಹೊರೆಯೊಡನೆ ಕಷ್ಟ. ನೋವು ಹಾಗೂ ದುಃಖ ಅವರನ್ನು ಹಿಂಬಾಲಿಸಿವೆ. ಅವರಿಗೆ ಶಾಂತಿ ಎಂಬುದಿಲ್ಲ. ಇದು ದ್ರಾವಿಡರ ದುಃಸ್ಥಿತಿ” ಎನ್ನುತ್ತಾನೆ. ಆತನಿಗೆ ದ್ರಾವಿಡರ ಬಗ್ಗೆ ಕರುಣೆ ಮೂಡುತ್ತದೆ. ಅವರನ್ನು ನಾಗರೀಕರನ್ನಾಗಿ ಮಾಡಬೇಕಾಗಿದ್ದು, ಪಾಪದ ಸಮುದ್ರದಿಂದ ಎತ್ತ ಬೇಕಾದುದು ವಸಾಹಾತು ದೊರೆಗಳ ಕರ್ತವ್ಯ. ದಾಸರಪದಗಳಲ್ಲಿ ಆತ ದ್ರಾವಿಡರ ಈ ದುಃಸ್ಥಿತಿಯನ್ನು ಕಾಣುತ್ತಾನೆ. “ಹೊಲೆಯ ಹೊರಗಿಹನೆ” ಎಂಬ ಪದ್ಯದ (TheTrue pariah) ಅನುವಾದಕ್ಕೆ ಮುನ್ನುಡಿ ಬರೆಯುತ್ತ ಗೋವರ್ ಹೀಗೆ ಹೇಳುತ್ತಾನೆ. ಜಾತಿಗಳ ಮಾನ್ಯತೆಯು ವೈಯಕ್ತಿಕ ಒಳ್ಳೆಯತನದ ನೆಲೆಯಲ್ಲಿ ನಡೆದಿದ್ದರೆ ಭಾರತಕ್ಕೆ ಆಂಗ್ಲರ ಅವಶ್ಯಕತೆಯೇ ಇರುತ್ತಿರರಲಿಲ್ಲ. ದಾಸರ ಪದಗಳು ವೈದಿಕ ಸಂಸ್ಕೃತಿಯೊಳಗಿನ ಆಚರಣೆಗಳಲ್ಲಿ ಬರುವ ಶೋಷಣೆಯನ್ನು ನಿವಾರಿಸುವ ನೆಲೆಯಲ್ಲಿ ಹಾಡಿದ ಪದ್ಯಗಳು, ಈ ಹಿನ್ನಲೆಯಲ್ಲಿ ಗೋವರ್‌ಗೆ ವೈದಿಕ ವಿರೋಧಿಯಾಗಿ ಕಾಣುತ್ತದೆ. ಆದರೆ ಈ ಸಂಸ್ಕೃತಿಗೆ ತೀರ ಸಮೀಪವಿರುವಂತೆ ತೋರುತ್ತದೆ. ಹಾಗಾಗಿ ಯುರೋಪಿನಲ್ಲಿ ಹೇಗೆ ನಾಗರಿಕ ಸಮಾಜ ನಿರ್ಮಾಣವಾಯಿತೋ ಹಾಗೆಯೇ ಭಾರತದಲ್ಲಿಯೂ ನಾಗರಿಕ ಸಮಾಜವನ್ನು ನಿರ್ಮಿಸುವುದು ಆಂಗ್ಲರಿಗೆ ಸಾಧ್ಯ. ಗೋವರ್ ಗೆ ದಾಸರ ಪದಗಳು ಸುಧಾರಣಾ ನೆಲೆಯಲ್ಲಿರುವ ಪದ್ಯಗಳಾಗಿ ಕಾಣುವುದಿಲ್ಲ ಅದರ ಜೊತೆಗೆನ ಆತ ಈ ಪದ್ಯಗಳನ್ನು ಆಂಗ್ಲರಿಗೆ ಆಡಳಿತೆ ನಡೆಸುವುದಕ್ಕೆ ಇರುವ ಸಕಾರಣವಾಗಿ ಉಪಯೋಗಿಸುತ್ತಾನೆ.

ಕೊನೆಯಲ್ಲಿ ಒಂದು ಮಾತು ‘ಅನುವಾದ’ ಹಾಗೂ ‘ಅನುವಾದಿತ’ ಸಂಸ್ಕೃತಿ ಎಷ್ಟರಮಟ್ಟಿಗೆ ರಾಜಕೀಯಾತ್ಮಕವಾಗೆಲ್ಲದೆ ಸೇರಲು ಸಾಧ್ಯ. ಸಾಂಸ್ಕೃತಿಕ ವಿಭಿನ್ನತೆಯನ್ನು ಮುಗ್ಧವಾಗಿ ಮೆಚ್ಚಿಕೊಳ್ಳುವಂಗಹ ವಾತವರಣ ಎಂದಾದರೂ ಇತ್ತೆ? ಧಾರ್ಮಿಕ ತಾತ್ವಿಕ ನೆಲೆಗಳು ಆಚರಣೆಗಳಿಂದ ದೂರ ನಿಂತು ದಾರಿ ದೀಪಗಳಾಗಳೂ ಸಾಧ್ಯವೇ ಎಂಬ ಪ್ರಶ್ನೆಗಳನ್ನು ಗೋವರ್ ನ ದಾಸರ ಪದಗಳ ಅನುವಾದ ನಮ್ಮ ಮುಂದಿ ಬಿಚ್ಚಿಡುತ್ತದೆ.