ಶ್ರುತಿಗೊಳಿಸುವುದು ಕೀರ್ತನೆಯ ಲಕ್ಷಣ. ಇದಕ್ಕಾಗಿ ಅದು ಕಂಡುಕೊಳ್ಳುವ ಮಾರ್ಗಗಳು ಹಲವು ಪ್ರತಿಯೊಂದು ಕೀರ್ತನೆಯೂ ಶ್ರುತಿಗೊಳ್ಳುವ ಹಲವು ಮಾರ್ಗಗಳಲ್ಲಿ ಕೆಲವೊಂದನ್ನು ಹುಡುಕುತ್ತಿರುತ್ತದೆ. ಹಾಗಾಗಿ ಕೀರ್ತನೆ ಹಾಡೆನ್ನುವುದು ಅದನ್ನು ಹಾಡಲಾಗುತ್ತದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲ. ಹಾಡುವಿಕೆ ಕೀರ್ತನೆಯ ಒಂದು ಹಂತದ ಆಚರಣೆ (performence) ಹೌದು. ಆದರೆ ಕೇವಲ ಹಾಡುವುದರಿಂದಲೇ ಅದು ಕೀರ್ತನೆಯಾಗುವುದಿಲ್ಲ. ಹಲವು ಹಂತಗಳನ್ನು ಅದು ತನ್ನತನವನ್ನು ಸಿದ್ಧಿಸಿಕೊಳ್ಳುತ್ತ ಹೋಗಬೇಕಾಗುತ್ತದೆ. ಹಾಡುವಿಕೆಯೆನ್ನುವುದು ಕೀರ್ತನೆಯ ‘ಕೇಳುವ’ ನಾದದ ಆಯಾಮವೆಂದರೆ ಅದಕ್ಕೆ ಪೂರ್ವಭಾವಿಯಾಗಿ ಭಾಷಿಕ ನೆಲೆಯಲ್ಲಿ ಕೀರ್ತನೆ ‘ಕೇಳದ’ ನಾದದ ಆಯಾಮಗಳನ್ನೂ ಸಿದ್ಧಗೊಳಿಸುತ್ತಿರುತ್ತದೆ. ‘ಕೇಳದ’ ನಾದದ ಪ್ರತಿಯೊಂದು ಘಟಕವೂ ‘ಕೇಳುವ’ ನಾದವನ್ನು ಪುಷ್ಟಿಗೊಳಿಸುವುದಕ್ಕಾಗಿಯೇ ಎಂದು ಮತ್ತೇ ಹೇಳಬೇಕಾಗಿಲ್ಲ. ಇದು ಕೀರ್ತನೆ ಕುದಿದು ಪಾಶಗೊಳ್ಳುವ ಕ್ರಮವೂ ಹೌದು.

ಇಲ್ಲಿ ಕೀರ್ತನೆ ಎದುರಿಸಬೇಕಾದ ಮುಖ್ಯವಾದ ಸವಾಲೊಂದಿಗೆ ಅದು ಲೋಕ ವಿವರದ ಪಾಡುಗಳನ್ನು ಹಾಡಾಗಿಸುವ ಪ್ರಕ್ರಿಯೆ; ಭಾಷಿಕ ವಿವರಗಳನ್ನು ಭಾಷಿಕ ನೆಲೆಯಿಂದಾಚೆಗೆ ಕೊಂಡೊಯ್ಯಬೇಕಾದ ಜವಾಬ್ದಾರಿ. ಶ್ರುತಿಗೊಳ್ಳದ ಮಾತು ನೂರಕ್ಕೆ ನೂರರಷ್ಟು ಅರ್ಥ. ಆದ್ದರಿಂದಲೇ ಅದು ವ್ಯವಹಾರಿಕ ಮತ್ತು ಲೌಕಿಕ. ಈ ಮಾತಿನ ವಿಕಸನದ ಇನ್ನೊಂದು ತುದಿ ನಾದ. ಹೀಗಾಗಿ ಅರ್ಥ ಮತ್ತು ನಾದಗಳ ನಡುವಿನ ಜಗ್ಗಾಟ ಕೀರ್ತನೆಯು ಬೆಳೆಯುವ ಪ್ರಕ್ರಿಯೆಯ ಪ್ರಧಾನ ಲಕ್ಷಣವಾಗುತ್ತದೆ. ಅಥವಾ ಕೀರ್ತನೆಯೇ ಈ ಜಗ್ಗಾಟವೆಂದೂ ಸರಿಯೆ. ಇದಕ್ಕೊಂದು ಪ್ರಾರಂಭವಿರುವಂತೆ ಕಂಡರೂ ಅಂತ್ಯ ಮಾತ್ರ ಇಲ್ಲ. ಅಥವಾ ಅಂತ್ಯವನ್ನು ಕಾಣುವುದು ಕೀರ್ತನೆಯ ಸೋಲೆಂದರೂ ನಡೆದೀತು. ಅರ್ಥದ ಭಾರವನ್ನು ಹೊರವುದನ್ನು ಅದು ಎಷ್ಟರಮಟ್ಟಿಗೆ ಆಟವನ್ನಾಗಿ ಮಾಡಿಕೊಳ್ಳುತ್ತದೆಯೋ ಅಷ್ಟರ ಮಟ್ಟಿಗೆ ಅದು ಅದರ ಯಶಸ್ಸು. ಅದು ಯಾವುದೇ ಹಂತದಲ್ಲೂ ಕುಡಿಯಲೂಬಹುದು. ಆಗ ಅದು ಅದರ ಬಳಲಿಕೆಯ ಸೂಚನೆಯಾಗುತ್ತದೆ.

ಇನ್ನೊಂದು ಕಡೆಯಿಂದ ನೋಡಿದಾಗ ಕೀರ್ತನೆ ಅರ್ಥದ ಜೊತೆಯಲ್ಲಿ ನಡೆಸುವ ಜಗ್ಗಾಟವೇ ತಾತ್ವಿಕತೆಯೊಂದಿಗೆ ನಡೆಸುವ ಜಗ್ಗಾಟವೂ ಹೌದು. ಕೇವಲ ತತ್ವಬದ್ಧತೆ ಸಿದ್ಧಾಂತ ಮಂಡನೆಯಲ್ಲೇ ನೀತಿ ನಿರೂಪಣೆಯಲ್ಲೋ ಕೊನೆಗೊಂಡಿತು. ಆದರೆ ಅಭಿವ್ಯಕ್ತಿ ಆಟವಾಗಬೇಕಾದರೆ ಅದು ತನ್ನನ್ನು ತತ್ವದ ಭಾರದಿಂದಲೂ ಬಿಡಿಸಿಕೊಳ್ಳಬೇಕಾಗುತ್ತದೆ. ಈ ಬಗೆಯ ಸಿದ್ಧಿಗೆ ಅಸಂಖ್ಯ ನಿದರ್ಶನಗಳಿವೆನ್ನುವುದು ಕೀರ್ತನೆಗಳ ಯಶಸ್ಸಿನ ಅಥವಾ ಯಶಸ್ವೀ ಕೀರ್ತನೆಗಳ ಇನ್ನೊಂದು ಮುಖವೂ ಹೌದು.

ದಾಸರ ದೇವರು ಏನನ್ನೂ ಉದ್ದೇಶಕಾಗಿ ಮಾಡುವುದಿಲ್ಲ. ಉದ್ದೇಶವೆನ್ನುವುದು ಕೊರತೆಯ ಇನ್ನೊಂದು ಮುಖ. ಯಾವುದನ್ನೂ ‘ಇನ್ನೊಂದಕ್ಕಾಗಿ’ ಮಾಡದೆ ಮಾಡುವಿಕೆಗಾಗಿಯೇ ಮಾಡುವುದು ಅವನ ರೀತಿ. ಇಲ್ಲಿ ಮಾಡಿದ್ದರಿಂದ ಲಾಭವಿಲ್ಲ; ಮಾಡದುದರಿಂದ ನಷ್ಟವಿಲ್ಲ. ಆದ್ದರಿಂದಲೇ ಇಲ್ಲಿ ಕ್ರಿಯೆಯೆಲ್ಲವೂ ಆಟ. ಆದ್ದರಿಂದಲೇ ಈ ದೇವರು ‘ಲೀಲಾಮಯ’ ದಾಸರೂ ತಮ್ಮ ದೇವರಂತೆ ಕರ್ತೃತ್ವದ ಭಾರದಿಂದ ಪಾರಾದವರು; ತಮ್ಮ ದೇವರ ಪಾದಕ್ಕೆ ತಮ್ಮನ್ನು ಒಪ್ಪಿಕೊಂಡವರು. ಆದ್ದರಿಂದ ಅವರು ಮಾಡುವ ಸ್ವಾತಂತ್ರ್ಯವನ್ನು ಮಾತ್ರವಲ್ಲ, ಹಕ್ಕನ್ನೂ ಬಿಟ್ಟುಕೊಟ್ಟವರು. ಆದರೆ ಈ ಬಂಧನವನ್ನೇ ಬಿಡುಗಡೆಯೆಂದು ಕಂಡರೂ, ಇನ್ನೊಂದು ರೀತಿಯಲ್ಲಿ, ಬಂಧವನ್ನು ಬಿಡುಗಡೆಯಾಗಿಸುವುದು ದಾಸರ ರೀತಿಯೂ ಹೌದು. ಅದಕ್ಕಾಗಿ ಅವರು ಅಭಿವ್ಯಕ್ತಿಯನ್ನೂ ಆಟವಾಗಿಸಿದರು. ಮಾತನ್ನು ಅದರ ಅರ್ಥದ ಭಾರದೊಂದಿಗೆ ಸ್ವೀಕರಿಸಿಯೇ ಅರ್ಥದಾಚೆಗೆ ಕೊಂಡೊಯ್ಯಲು ಹವಣಿಸಿದರು. ಇದಕ್ಕಾಗಿ ಅವರು ಭಾಷಿಕ ನೆಲೆಯಲ್ಲಿ ಕಂಡುಕೊಂಡ ಉಪಾಯಗಳು ಹಲವು. ಅವರು ದೇವರನ್ನು ಕರೆಯುವ ನಿದರ್ಶನವೊಂದು ಇಲ್ಲಿದೆ. (‘ಯಾದವ ನೀ ಬಾ’) ಆದರೆ ಕರೆಯುತ್ತಲೇ ಹೋಗುವುದು ಅಥವಾ ಕರೆಯುತ್ತಲೇ ‘ಇರುವುದು’ ಇದರ ಲಕ್ಷಣ. ಆದ್ದರಿಂದ ಇಲ್ಲಿ ಮಾತು ಕೊನೆಯಾಗುವುದಿಲ್ಲ. ಪ್ರಾರಂಭವಾಗಿದೆಯೆಂದು ಹೇಳುವುದೂ ಉಪಚಾರಕ್ಕಾಗಿ. ಹೀಗಾಗಿ ಇಲ್ಲಿ ‘ಅರ್ಥ’ ಕಳೆದುಕೊಂಡ ‘ಸ್ಥಿತಿ’ಯೊಂದರ ನಿರ್ಮಾಣವಾಗುತ್ತದೆ.

ದಾಸತ್ವವೆನ್ನುವುದು ಕರ್ತೃತ್ವದ ನಿರಾಕರಣೆಯೆಂದು ಹೇಳಲಾಯಿತಷ್ಟೆ. ಆದ್ದರಿಂದ ಇಲ್ಲಿ ‘ಮಾಡುವ’ ನೆಲೆ ಇಲ್ಲ; ‘ಮಾಡಿಸಿ’ಕೊಂಡರೆ ಮಾತ್ರ ‘ಆಗು’ತ್ತದೆ ಎಂಬ ಭಾವ. ಆದ್ದರಿಂದಲೇ ಇಲ್ಲಿ ದಾಸರು ತಾನು ದಾಸನಾಗಿದ್ದೇನೆ ಎಂದಾಗಲಿ, ಆಗುತ್ತೇನೆ ಎಂದಾಗಲಿ ಹೇಳಿಕೊಳ್ಳುವುದಿಲ್ಲ. ಬದಲಾಗಿ ತನ್ನನ್ನು ದಾಸನನ್ನಾಗಿ ‘ಮಾಡಿಕೋ’ ಎನ್ನುತ್ತಾನೆ. ದಾಸನೆನ್ನುವುದು ಕೇವಲ ಹಣೆಪಟ್ಟಿಯಲ್ಲ. ಅದು ದೈನಂದಿನ ಎಲ್ಲ ವಿವರಗಳಲ್ಲಿ ವಾಸ್ತವವಾಗಬೇಕು. ಆದ್ದರಿಂದಲೇ ‘ಇಸು’ ಪ್ರತ್ಯಯಗಳ ದೊಡ್ಡದೊಂದು ಪಟ್ಟಿಯೇ ಈ ಕೀರ್ತನೆಯಲ್ಲಿದೆ. ಇದು ದಾಸನ ಶರಣಾಗತಿಯ ನೆಲೆಯೂ ಹೌದು.

ಕೀರ್ತನೆಗಳಲ್ಲಿನ ಕೃಷ್ಣ ಒಂದು ಪಾತ್ರವೂ ಹೌದು. ಒಂದು ತತ್ವವೂ ಹೌದು. ಅಲ್ಲದೆ ಅದೊಂದು ವಿಶಿಷ್ಟವಾದ ಅಭಿವ್ಯಕ್ತಿಯ ದನಿಯೂ ಹೌದು. ಸೋಗಿನ ಜ್ಞಾನ ಮತ್ತು ಪಾಂಡಿತ್ಯಗಳನ್ನು ಎದುರಿಸಲು ಒಂದು ಮಾಧ್ಯಮವಾಗಿಯೂ ಅದು ಕೆಲಸ ಮಾಡುವುದುಂಟು. ಜೊತೆಗೆ ಪ್ರಭುತ್ವವನ್ನು ಎದುರಿಸಲು ಒಂದು ಮಾಧ್ಯಮವಾಗಿಯೂ ಅದು ಕೆಲಸ ಮಾಡುವುದುಂಟು. ಜೊತೆಗೆ ಪ್ರಭುತ್ವವನ್ನು ಎದುರಿಸುವ ನೆಲೆಯೊಂದನ್ನು ಕಟ್ಟಿಕೊಳ್ಳಲೂ ಅದು ನೆರವಾಗುವುದುಂಟು. ಪಂಡಿತರದು ಹೇಗೋ ಹಾಗೆಯೇ ಪ್ರಭುಗಳದೂ ಗಂಡುದನಿ. ಆದರೆ ಕೃಷ್ಣನ ಸಂದರ್ಭದಲ್ಲಿ ದಾಸರು ಹೆಣ್ಣಾಗುತ್ತಾರೆ. ಅದು ತಾಯಿಯಾಗಿರಬಹುದು, ತಾಯಿಯ ನೆರೆಹೊರೆಯವರಿರಬಹುದು ಅಥವಾ ಸಖಿಯರಿರಬಹುದು. ಜೊತೆಗೆ ಕೃಷ್ಣನ ಮೂಲಕ ಇಲ್ಲಿ ಒಂದು ಮಗುವಿನ ದನಿಯೂ ಕೆಲಸ ಮಾಡುತ್ತದೆ. ಈ ಎಲ್ಲ ದನಿಗಳ ಪಲ್ಲಟದಲ್ಲಿ ಅಭಿವ್ಯಕ್ತಿಯ ಮಾಧ್ಯಮವನ್ನು ಮೀರುವುದೆಂದರೆ ಅರ್ಥದ ನೆಲೆಯನ್ನು ದಾಟುವುದೂ ಹೌದು. ಆದ್ದರಿಂದಲೇ ಇಲ್ಲಿ ಅಭಿವ್ಯಕ್ತಿ ವಿಚಿತ್ರವಾದ ವೈರುಧ್ಯಗಳನ್ನು ಪ್ರಕಟಿಸುತ್ತದೆ. ಒಂದೆಡೆ ಅತ್ಯಂತ ಮಾನವ ಸಹಜವೂ ಲೋಕನಿಷ್ಟವೂ ಆದ ವಿವರಗಳನ್ನು ಪ್ರಕಟಿಸುತ್ತಲೇ ಇನ್ನೊಂದೆಡೆ ಅದನ್ನು ಮಾನುಷೋತ್ತರವೂ, ಲೋಕಾತೀತವೂ ಆದ ನೆಲೆಗಳಿಗೆ ಎತ್ತುವ ಪ್ರಯತ್ನವೂ, ಒಂದರಿಂದ ಇನ್ನೊಂದನ್ನು ಪರಸ್ಪರ ಬೇರ್ಪಡಿಸಲು ಸಾಧ್ಯವಿಲ್ಲದಂತೆ ನಡೆಯುತ್ತಿರುತ್ತದೆ. ಆದ್ದರಿಂದಲೇ ಇಲ್ಲಿ ‘ಪೋಗದಿರೆಲೋ ರಂಗ’ ಎಂಬ ಮಾತೃ ಸಹಜವಾದ ದನಿಯೊಂದಿಗೇ ಋಷಿಮುನಿಗಳ ವಿಲಕ್ಷಣವಾದ ತಪೋಭೂಮಿಕೆಯೊಂದನ್ನು ಎದುರುಹಾಕಿಕೊಳ್ಳುವುದೂ ಇದೆ. ಲೋಕ ಪ್ರಸಿದ್ಧ ನಾದವನ್ನು, ಲೋಕೋತ್ತರ ಲೀಲೆಗಳನ್ನು ಮೆರೆದವನನ್ನು, ಯಾರನ್ನು ಕಾಣದಿರಲು ಸಾಧ್ಯವೇ ಇಲ್ಲವೋ ಅಂಥವನನ್ನು “ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗದ ಕಂಡಿರೇನಮ್ಮ” ಎಂದು ಹುಡುಕಾಡುವುದೂ ಇದೆ. ಇಲ್ಲಿನ ಪಲ್ಲವಿ ಹಾಗೂ ಚರಣಗಳ ಸಂಬಂಧವೂ ವಿಶಿಷ್ಟವಾದ ವಿನ್ಯಾಸಗಳನ್ನು ಪ್ರಕಟಿಸುತ್ತದೆ. ಕೀರ್ತನೆಯ ಪ್ರಾರಂಭದಲ್ಲಿ ಉತ್ತರವನ್ನು ಅಪೇಕ್ಷಿಸುವ ಪ್ರಶ್ನೆಯಾಗಿದ್ದ ಪಲ್ಲವಿ ಕೀರ್ತನೆ ಬೆಳೆಯುತ್ತ ಹೋದಂತೆ ಉತ್ತರವನ್ನು ಅಪೇಕ್ಷಿಸರ, ಅಷ್ಟೇಕೆ ಉತ್ತರವನ್ನೂ ಒಳಗೊಂಡ ಒಂದು ವಾಕ್ಯವಾಗಿ ಬಿಡುತ್ತದೆ. ‘ಯಾರೇ ರಂಗನ ಕರೆಯಬಂದವರು’ ಎಂದರೂ ಕರೆಯಬಂದವರು ಗೌಣವಾಗಿ ಕರೆಸಿಕೊಳ್ಳುವವನೇ ಪ್ರಧಾನವಾಗಿಬಿಡುತ್ತಾನೆ. ಇಲ್ಲಿ ಆಳದವನನ್ನು ಅಳಿಸುತ್ತಲೇ (‘ಬಾಲಯ್ಯನಳುತಾನ’) ಅಳುವಿನ ನಿರಾಕಣೆಯನ್ನು ಮಾಡಲಾಗುತ್ತದೆ. ಇನ್ನೊಂದು ರೀತಿಯಲ್ಲಿ ಇದು ಅವತಾರಗಳ ಮಾನವೀಕರಣದ ನೆಲೆಯೂ ಹೌದು. ಇಲ್ಲಿ ಪ್ರಸಿದ್ಧವಾದ ಪುರಾಣ ಪರಂಪರೆಗಳನ್ನು ಅತ್ಯಂತ ಗ್ರಾಮ್ಯವಾದ ವಿವರಗಳಿಗೆ ಇಳಿಸಲಾಗುತ್ತದೆ. ಮಾನುಷ ಮತ್ತು ದೈವಿಕ, ಲೋಕ ಮತ್ತು ಲೋಕೋತ್ತರ ಇವುಗಳ ಕರ್ಷಣವನ್ನು ವಿಶಿಷ್ಟವಾಗಿ ಹಿಡಿದಿಡುವ ಈ ಬಗೆಯ ಅಭಿವ್ಯಕ್ತಿ ಅನನ್ಯವದುದು. ಲೋಕವನ್ನು ಲೋಕೋತ್ತರಕ್ಕೆತ್ತುವಂತೆಯೇ ಲೋಕೋತ್ತರವನ್ನು ಲೌಕಿಕವಾಗಿಸುವ ಪ್ರಕ್ರಿಯೆಯೂ ಏಕಕಾಲದಲ್ಲಿ ಸಂಭವಿಸುವುದೇ ಇಲ್ಲಿನ ವಿಶಿಷ್ಟತೆ.

ಒಂದು ದೃಷ್ಟಿಯಿಂದ ಕೀರ್ತನೆಗಳ ಅಭಿವ್ಯಕ್ತಿಯ ಪ್ರಧಾನ ತುಡಿತವಿರುವುದೇ ಅಲೌಕಿಕವನ್ನು ಲೌಕಿಕವಾಗಿಸುವುದರಲ್ಲಿ. ಈ ಹಿನ್ನಲೆಯಿಂದ ನೋಡಿದಾದ ಲೋಕವನ್ನು ಸಂಬೋಧಿಸಿ ನುಡಿಯುವುದು (Addressing) ಅವುಗಳ ಪ್ರಧಾನ ನೆಲೆಯಾಗುತ್ತದೆ. ಅಥವಾ ಕೀರ್ತನೆಗಳ ಸೃಷ್ಟಿಯಾಗುವುದೇ ಸಂಬೋಧನೆಯಲ್ಲಿ ಎಂದರೂ ನಡೆದೀತು. ಸಂಬೋಧನೆಯ ಹಲವು ನೆಲೆಗಳಲ್ಲಿ ಇಲ್ಲಿನ ಅಭಿವ್ಯಕ್ತಿಯ ವಿನ್ಯಾಸಗಳು ತೆರೆದುಕೊಳ್ಳುತ್ತವೆ. ಅದಕ್ಕೆ ತಕ್ಕಂತೆ ಪಲ್ಲವಿಯ ವಿವಿಧ ಬಗೆಗಳು, ಪಲ್ಲವಿ-ಚರಣಗಳ ನಡುವಿನ ಸಂಬಂಧದ ಹಲವು ರೀತಿಯಲ್ಲಿ, ನಿರೂಪಣೆಯ ಹಲವು ದನಿಗಳು, ದೃಷ್ಟಾಂತ-ಪ್ರತೀಕಗಳು ಅನಾವರಣಗೊಳ್ಳುತ್ತ ಹೋಗಿವೆ. ‘ಕಲ್ಲುಸಕ್ಕರೆ ಕೊಳ್ಳಿರೋ’, ‘ಕೃಷ್ಣ ಎನಬಾರದೆ’, ‘ಆಚಾರವಿಲ್ಲದ ನಾಲಗೆ’, ಮೊದಲಾದ ಹಲವಾರು ಕೀರ್ತನೆಗಳು ಇದಕ್ಕೆ ನಿದರ್ಶನವಾಗಿದೆ.

ಆರಿಸಿರುವ ಕೀರ್ತನೆಗಳು, ಕೀರ್ತನೆಗಳ ಸಂಖ್ಯೆಗಳ ಉಲ್ಲೇಖ: ಎ.ವಿ.ನಾವಡ ಮತ್ತು ಗಾಯತ್ರಿ ನಾವಡ (ಸಂ), ಸಾವಿರ ಕೀರ್ತನೆಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

೧. ಯಾದವ ನೀ ಬಾ (೩೭೧)

೨. ದಾಸನ ಮಾಡಿಕೋ ಎನ್ನ (೨೮೨)

೩. ಪೋಗದಿರೆಲೋ ರಂಗ (೩೨೬)

೪. ಅಮ್ಮ ನಿಮ್ಮ ಮನೆಗಳಲ್ಲಿ (೧೬೯)

೫. ಯಾರೇ ರಂಗನ (೩೭೫)

೬. ಬಾರೆ ಗೋಪಮ್ಮ ನಿನ್ನ ಬಾಲಯ್ಯನಳುತಾನೆ

೭. ಊರಿಗೆ ಬಂದರೆ ದಾಸಯ್ಯ (೨೦೧)

೮. ಇವನ ಹಿಡಿದುಕೊಂಡು ಹೋಗಲೋ ಜೋಗಿ (೧೯೧)

೯. ಕಲ್ಲುಸಕ್ಕರೆ ಕೊಳ್ಳಿರೋ (೨೩೫)

೧೦. ಕೃಷ್ಣ ಎನಬಾರದೆ (೨೪೩)

೧೧. ಆಚಾರವಿಲ್ಲದ ನಾಲಗೆ (೧೭೨)

೧೨. ಎಲ್ಲಾನು ಬಲ್ಲೆನೆಂಬುವಿರಲ್ಲ (೨೧೮)

೧೩. ಮಾನವ ಜನ್ಮ ದೊಡ್ಡದು (೩೪೯)

೧೪. ರೊಕ್ಕ ಎರಡಕ್ಕೂ ದುಃಖ ಕಾಣಕ್ಕ (೩೮೦)

೧೫. ಮುಪ್ಪಿನ ಗಂಡನು ಬೇಡಕ್ಕ

 

. ಯಾದವ ನೀ ಬಾ ಯದುಕುಲನಂದನ

ರಾಗ : ಕಾಂಬೋದಿ
ತಾಳ : ಏಕ

ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ                 ಪ

ಸೋದರಮಾವನ ಮಧುರೆಲಿ ಮಡುಹಿದ ಯ
ಶೋದೆನಂದನ ನೀ ಬಾರ                          ಅ

ಕಣಕಾಲಂದಿಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣ್ಣಿಕೋಲು ಚೆಂಡು ಬುಗುರಿನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ಬಾರೊ         ೧

ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೊ
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೊ                     ೨

ಖಗವಾಹನನೆ ಬಗೆಬಗೆಯಿಂದಲಿ
ನಗೆಮೊಗದರಸನೆ ನೀ ಬಾರೊ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಠ್ಠಲ ನೀ ಬಾರೊ                  ೩

 

. ದಾಸನ ಮಾಡಿಕೊ ಎನ್ನ

ರಾಗ : ನಾದನಾಮಕ್ರಿಯೆ
ತಾಳ : ಆದಿ

ದಾಸನ ಮಾಡಿಕೊ ಎನ್ನ ಇಷ್ಟು
ಘಾಸಿ ಮಾಡುವರೇನೊ ಕರುಣಾಸಂಪನ್ನ

ದುರುಳ ಬುದ್ದಿಗಳೆಲ್ಲ ಬಿಡಿಸೊ ನಿನ್ನ
ಕರುಣಕವಚವೆನ್ನ ಹರಣಕ್ಕೆ ತೊಡಿಸೊ
ಚರಣ ಸೇವೆ ಎನಗೆ ಕೊಡಿಸೊ ಅಭಯ
ಕರಪುಷ್ಪ ಎನ್ನ ಶಿರದೊಳೊ ಮುಡಿಸೊ                                              ೧

ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ                                            ೨

ಮೊರೆ ಹೊಕ್ಕವರ ಕಾಯ್ವ ಬಿರುದು ನೀ
ಮರೆಯದೆ ರಕ್ಷಣೆ ಮಾಡೆನ್ನ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸ್ವಾಮಿ
ಪುರಂದರವಿಠಲ ಕರುಣದಿ ಕರೆದು                                                    ೩

 

. ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ

ರಾಗ : ಶಂಕರಾಭರಣ
ತಾಳ : ಆದಿ

ಪೋಗದಿರಲೊ ರಂಗ, ಬಾಗಿಲಿಂದಾಚೆಗೆ                    ಪ
ಭಾಗವತರು ಕಂಡರೆತ್ತಿಕೊಂಡೊಯ್ವರೊ                   ಅ

ಸುರಮುನಿಗಳು ತಮ್ಮ ಹೃದಯಗಹ್ವರದಲ್ಲಿ
ಪರಮಾತ್ಮನ ಕಾಣದರಸುವರೊ
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರದೆತ್ತಿಕೊಂಬರೊ                   ೧

ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿವರೊ ಗೋಪಾಲನೆ
ಮಗುಗಳ ಮಾಣಿಕ್ಯ ತಗಲಿತು ಕರಕೆಂದು
ಬೇಗದಿಂದಲಿ ಬಂದ ಬಿಗಿದಪ್ಪಿಕೊಂಬರೊ                   ೨

ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ಹಿಂದೆ ಇಷ್ಟವ ಸಲಿಸೆಂದು
ಸೃಷ್ಟೀಶ ಪುರಂದರವಿಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೊ ರಂಗಯ್ಯ                    ೩

 

. ಅಮ್ಮಾ ನಿಮ್ಮ ಮನೆಗಳಲ್ಲಿ

ರಾಗ : ಸೌರಾಷ್ಟ್ರ
ತಾಳ : ಆದಿ

ಅಮ್ಮಾ ನಿನ್ನ ಮನೆಗಳಲ್ಲಿ
ನಮ್ಮ ರಂಗನ ಕಂಡಿರೇನೆ                                      ಪ

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ
ಲೇಸಾಗಿ ತುಲಸಿಯ ಮಾಲೆಯ ಹಾಕಿದ
ವಾಸುದೇವನು ಬಂದ ಕಂಡಿರೇನೆ                            ೧

ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ
ಅರಳೆಲೆ ಕನಕದ ಕುಂಡಲ ಕಾಲಂದಿಗೆ
ಉರುಗಶಯನ ಬಂಡ ಕಂಡಿರೇನೆ                            ೨

ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ
ನೀಲವರ್ಣನು ನಾಟ್ಯವಾಡುತಲಿ
ಮೇಲಾಗಿ ಬಾಯಲ್ಲಿ ಜಗವನು ತೋರಿದ
ಮೂರ್ಲೋಕದೊಡೆಯನ ಕಂಡಿರೇನ                        ೩

ಕುಂಕುಮ ಕಸ್ತೂರಿ ಕುಡಿಕುಡಿ ನಾಮವು
ಶಂಖಚಕ್ರಂಗಳ ಧರಿಸಿಹನಮ್ಮ
ಬಿಂಕದಿಂದಲಿ ಕೊಳಲೂದುತ ಪಾಡುತ
ಪಂಕಜಾಕ್ಷನು ಬಂದ ಕಂಡಿರೇನೆ                              ೪

ಹದಿನಾರು ಸಾವಿರ ಗೋಪಿಯರೊಡಗೂಡಿ
ಚದುರಂಗ ಪಗಡೆಯನಾಡುವನಮ್ಮ
ಮದನ ಮೋಹನರೂಪ ಎದೆಯಲಿ ಕೌಸ್ತುಭ
ಪದಮನಾಭನು ಬಂದ ಕಂಡಿರೇನೆ                           ೫

ನೊಸಲ ಸುತ್ತಿದ ಪಟ್ಟಿ ನಡುವಿನ ಒಡ್ಯಾಣ
ಎಸೆವ ಕಸ್ತೂರಿ ಬಟ್ಟು ಮೈಯವನಮ್ಮ
ಪಸರಿಸಿ ಪಟ್ಟಯ ಹಾವಿಗೆ ಮೆಟ್ಟಿದ
ಅಸುರಾಂತಕ ಬಂದ ಕಂಡಿರೇನ                              ೬

ತೆತ್ತೀಸಕೋಟಿ ದೇವತೆಗಳ ಒಡಗೂಡಿ
ಹತ್ತವತಾರವನೆತ್ತಿದನೆ
ಭಕ್ತವತ್ಸಲ ನಮ್ಮ ಪುರಂದರ ವಿಠಲ
ನಿತ್ಯೋತ್ಸವ ಬಂದ ಕಂಡಿರೇನ                               ೭

 

. ಯಾರೆ ರಂಗನ ಯಾರೆ ಕೃಷ್ಣನ

ರಾಗ : ಹಿಮದೋಳ
ತಾಳ : ಆದಿ

ಯಾರೆ ರಂಗನ ಯಾರೆ ಕೃಷ್ಣನ
ಯಾರೆ ರಂಗನ ಕರೆಯ ಬಂದವರು                           ಪ

ಗೋಪಾಲಕೃಷ್ಣನ ಪಾಪವಿನಾಶನ
ಈ ಪರಿಯಿಂದಲಿ ಕರೆಯ ಬಂದವರು                                    ೧

ವೇಣು ವಿನೋದನ ಪ್ರಾಣಪ್ರಿಯನ
ಜಾಣೆಯರರಸನ ಕರೆಯ ಬಂದವರು                                    ೨

ಕರಿರಾಜವರದನ ಪರಮಪುರುಷನ
ಪುರಂದರವಿಠಲನ ಕರೆಯ ಬಂದವರು                                              ೩

 

. ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ
ಬಾರೇ ಗೋಪಮ್ಮ ನಾವ್
ಆರೂ ತೂಗಿದರೂ ಮಲಗನು ಮುರವೈರಿ
ಬಾರೇ ಗೋಪಮ್ಮ

ನೀರೊಳಗಾಡಿ ಮೈಯೊರೆಸೆಂದು ಅಳುತಾನೆ ಬಾರೆ ಗೋಪಮ್ಮ
ಮೇರುವ ಹೊತ್ತು ಮೈಭಾರವೆಂದಳು ತಾನೆ, ಬಾರೆ ಗೋಪಮ್ಮ
ಧರೆಯ ನೆಗಹಿ ತನ್ನ ದಾಡೆನೊಂದಳು ತಾನೆ ಗೋಪಮ್ಮ
ದುರುಳ ರಕ್ಕಸನ ಕರುಳ ಕಂಡಳು ತಾನೆ ಬಾರೆ ಗೋಪಮ್ಮ

ನೆಲವನಳೆದು ಪುಟ್ಟ ಚರಣನೊಂದಳುತಾನೆ ಬಾರೆ ಗೋಪಮ್ಮ
ಛಲದಿಂದ ಕೊಡಲಿಯ ಪಿಡಿವೆನೆಂದಳುತಾನೆ ಬಾರೆ ಗೋಪಮ್ಮ
ಬಲುಕಪಿಗಳ ಕಂಡಂಜಿಕೊಂಡಳು ತಾನೆ ಬಾರೆ ಗೋಪಮ್ಮ
ನೆಲುವಿನ ಬೆಣ್ಣೆ ಕೈನಿಲುಕದೆಂದಳು ತಾನೆ ಬಾರೆ ಗೋಪಮ್ಮ

ಬಟ್ಟ ಬತ್ತಲೆ ನಿಂತು ಎತ್ತಿಕೊಯಂದಳು ತಾನೆ ಗೋಪಮ್ಮ
ಶ್ರೇಷ್ಠ ತೇಜಿಯನು ಹತ್ತಿಸೆಮದಳು ತಾನೆ ಬಾರೆ ಗೋಪಮ್ಮ
ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ ಬಾರೆ ಗೋಪಮ್ಮ
ಸೃಷ್ಟಿಯೊಳು ಪುರಂದರವಿಠಲ ಕರೆಯುತಾನೆ ಬಾರೆ ಗೋಪಮ್ಮ