. ಊರಿಗೆ ಬಂದರೆ ದಾಸಯ್ಯ

ರಾಗ : ಹಿಂದುಸ್ತಾನಿ ಕಾಪಿ
ತಾಳ : ಆದಿ

ಊರಗೆ ಬಂದರೆ ದಾಸಯ್ಯ, ನಮ್ಮ                           ಪ
ಕೇರಿಗೆ ಬಾ ಕಂಡ್ಯ ದಾಸಯ್ಯ
ಕೇರಿಗೆ ಬಂದರೆ ದಾಸಯ್ಯ, ಗೊಲ್ಲ
ಕೇರಿಗೆ ಬಾ ಕಂಡ್ಯ ದಾಸಯ್ಯ                                  ಅ

ಕೊರಳೊಳು ವನಮಾಲೆ ಧರಿಸಿದವನೆ ಕಿರು
ಬೆರಳಲಿ ಬೆಟ್ಟವನೆತ್ತಿದನೆ
ಇರುಳು ಹಗಲು ನಿನ್ನ ಕಾಣದೆ ಇರಲಾರೆ
ಮರುಳು ಮಾಡಿದಂಥ ದಾಸಯ್ಯ                             ೧

ಕಪ್ಪು ವರ್ಣದ ದಾಸಯ್ಯ, ಕಂ
ದರ್ಪನ ಪಿತನೆಂಬೊ ದಾಸಯ್ಯ
ಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆ
ಅಪ್ಪವ ಕೊಡುವೆನು ದಾಸಯ್ಯ                                ೨

ಮುಂದೇನು ದಾರಿ ದಾಸಯ್ಯ, ಚೆಲ್ವ
ಪೊಂಗೊಳಲೂದುವ ದಾಸಯ್ಯ
ಹಾಂಗೇ ಪೋಗದಿರು ದಾಸಯ್ಯ ಹೊ
ನ್ನುಂಗುರ ಕೊಡುವೆನು ದಾಸಯ್ಯ                            ೩

ಸಣ್ಣ ನಾಮದ ದಾಸಯ್ಯ, ನಮ್ಮ
ಸದನಕೆ ಬಾ ಕಂಡ್ಯ ದಾಸಯ್ಯ
ರಟ್ಟು ಮಾಡದಿರು ದಾಸಯ್ಯ, ತಂ
ಬಿಟ್ಟು ಕೊಡುವೆನು ದಾಸಯ್ಯ                                  ೪

ಸಿಟ್ಟು ಮಾಡದಿರು ದಾಸಯ್ಯ, ಸಿರಿ
ಪುರಂದರವಿಠಲ ದಾಸಯ್ಯ
ಸದನಕೆ ಬಮದರೆ ದಾಸಯ್ಯ, ಮಣಿ
ಸರವನು ಕೊಡುವೆನು ದಾಸಯ್ಯ                             ೫

 

. ಇವನ ಹಿಡಿದುಕೊಂಡು ಹೋಗೆಲೊ ಜೋಗಿ

ರಾಗ : ನಾದನಾಮಕ್ರಿಯೆ
ತಾಳ : ಆದಿ

ಇವನ ಹಿಡಿದುಕೊಂಡು ಹೋಗೆಲೊ ಜೋಗಿ                ಪ
ಇವ ನಮ್ಮ ಮಾತ ಕೇಳದೆ ಪುಂಡನಾದ                    ಅ

ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟ ಬೆನ್ನಲಿ ಹೊತ್ತ
ದಾಡೆಯ ಮೇಲೆ ತಾ ಧಾರಿಣಿ ನೆಗಹಿದ
ಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ              ೧

ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದಿ
ಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದ
ಬಿಲ್ಲು ಹಿಡಿದು ರಾಕ್ಷಸರನು ಸವರಿದ
ಬಲ್ಲಿದ ಮಾವನ ಶಿರವನು ತರಿದ                              ೨

ಬತ್ತಲೆ ಕುದುರೆಯ ಹತ್ತಬೇಡೆಂದರೆ
ಹತ್ತಿದನೋ ಇವ ಛಲದಿಂದ
ಭಕ್ತವತ್ಸಲ ಸಿರಿ ಪುರಂದರವಿಠಲನ
ಎತ್ತಲಾದರು ಕೊಂಡು ಹೋಗೆಲೋ ಜೋಗಿ               ೩

 

. ಕಲ್ಲು ಸಕ್ಕರೆ ಕೊಳ್ಳಿರೋ

ರಾಗ : ಕಲ್ಯಾಣಿ
ತಾಳ : ಮಿಶ್ರಛಾಪು

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೋ                                          ಪ

ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣ ನಾಮವೆಂಬ                        ಅ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವುದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿಲಾಭ ಬರುವಂಥ                   ೧

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ದರು ಬೆಲೆ ರೊಕ್ಕವಿದಕಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ                        ೨

ಸಂತೆ ಸಂತೆಗೆ ಹೋಗಿ ಶ್ರಮಪಡಿಸುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ                       ೩

 

೧೦. ಕೃಷ್ಣ ಎನಬಾರದೆ

ರಾಗ : ಕಾಮಬೋದಿ
ತಾಳ : ಛಾಪು

ಕೃಷ್ಣ ಎನಬಾರದೆ
ಕೃಷ್ಣನ್ನ ನೆನೆದರೆ ಕಷ್ಟ ಒಂದಿಷ್ಟಿಲ್ಲ                             ಪ

ನರಜನ್ಮ ಬಂದಾಗ
ನಾಲಗೆ ಇರುವಾಗ ಕೃಷ್ಣ ಎನಬಾರದೆ                        ಅ

ಮಲಗಿದ್ದು ಮೈ ಮುರಿದೇಳುತ್ತಲೊಮ್ಮೆ ಕೃಷ್ಣ ಎನಬಾರದೆ
ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ                  ೧

ಸ್ನಾನ ಪಾನ ತಪಗಳ ಮಾಡುತ ಕೃಷ್ಣ ಎನಬಾರದೆ
ಶಾಲ್ಯಾನ್ಯ ಷಡುರಸ ತಿಮದು ತೃಪ್ತನಾಗಿ ಕೃಷ್ಣ ಎನಬಾರದೆ                   ೨

ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣ ಎನಬಾರದೆ
ಚೆಂದುಳ್ಳ ಹಾಸಿಗೆಯೊಳು ಕುಳಿತೊಮ್ಮೆ ಕೃಷ್ನ ಎನಬಾರದೆ                    ೩

ಕಂದನ್ನ ಬಿಗಿ ಬಿಗಿದಪ್ಪಿ ಮುದ್ದಾಡುತ ಕೃಷ್ನ ಎನಬಾರದೆ
ಮಂದಗಾಮಿನಿಯೊಳು ಸರಸವಾಡುತಲೊಮ್ಮೆ ಕೃಷ್ಣ ಎನಬಾರದೆ           ೪

ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ ಕೃಷ್ಣ ಎನಬಾರದೆ
ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ನ ಎನಬಾರದೆ                  ೫

ಪರಿಹಾಸ್ಯದ ಮಾತುನಾಡುತಲೊಮ್ಮೆ ಕೃಷ್ಣ ಎನಬಾರದೆ
ಪರಿಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ                  ೬

ದುರಿತ ರಾಶಿಗಳನು ತರಿದು ಬಿಸಾಡುವಾಗಲೊಮ್ಮೆ ಕೃಷ್ನ ಎನಬಾರದೆ
ಗರುಡಗನಮ ನಮ್ಮ ಪುರಂದರವಿಠಲನ ಕೃಷ್ಣ ಎನಬಾರದೆ                    ೭

 

೧೧. ಆಚಾರವಿಲ್ಲದ ನಾಲಗೆ

ರಾಗ : ಮೋಹನ
ತಾಳ : ಅಟ್ಟ

ಆಚಾರವಿಲ್ಲದ ನಾಲಗೆ ನಿನ್ನ
ನೀಚ ಬುದ್ದಿಯ ಬಿಡು ನಾಲಗೆ                                  ಪ

ವಿಚಾರವಿಲ್ಲದೆ ಪರರ ದೂಷಿಪುದಕ್ಕೆ
ಚಾಚಿಕೊಂಡಿರುವಂಥ ನಾಲಗೆ                                ಅ.ಪ.

ಪ್ರಾತಃಕಾಲದೊಳೆದ್ದು ನಾಲಗೆ
ಸಿರಿಪತಿಯೆನ್ನಬಾರದೆ ನಾಲಗೆ
ಪತಿತ ಪಾವನ ನಮ್ಮ ರತಿಪತಿ ಜನಕನ
ಸತತವು ನುಡಿ ಕಂಡ್ಯ ನಾಲಗೆ                                ೧

ಚಾಡಿ ಹೇಳಲಿಬೇಡ ನಾಲಗೆ
ನಿನ್ನ ಬೇಡಿಕೊಂಬುವೆನು ನಾಲಗೆ
ರೂಢಿಗೊಡೆಯ ಶ್ರೀರಾಮನ ನಾಮವ
ಪಾಡುತಲಿರು ಕಂಡ್ಯ ನಾಲಗೆ                                  ೨

ಹರಿಯ ಸ್ಮರಣೆ ಮಾಡು ನಾಲಗೆ
ನರಹರಿಯ ಭಜಿಸು ಕಂಡಯ್ಯ ನಾಲಗೆ
ವರದಪುರಂದರವಿಠಲರಾಯನ
ಚರಣಕಮಲವ ನೆನೆ ನಾಲಗೆ                                  ೩

 

೧೨. ಎಲ್ಲಾನು ಬಲ್ಲೆನೆಂಬುವಿರಿಲ್ಲ

ರಾಗ : ಮಧ್ಯಮಾವತಿ
ತಾಳ : ಆದಿ

ಎಲ್ಲಾನು ಬಲ್ಲೆನೆಂಬುದಿರಿಲ್ಲ ಅವಗುಣ ಬಿಡಲಿಲ್ಲ            ಪ
ಸೊಲ್ಲಿಗೆ ಶರಣರ ಕಥೆಗಳ ಪೇಳುತ
ಅಲ್ಲದ ನುಡಿಯನು ನುಡಿಯುವಿರಲ್ಲ                          ಅ

ಕಾವಿಯನುಟ್ಟು ತಿರುಗುವಿರಲ್ಲ ಕಾಮವ ಬಿಡಲಿಲ್ಲ
ನೇಮನಿಷ್ಠೆಗಳ ಮಾಡುವಿರಲ್ಲ ತಾಮಸ ಬಿಡಲಿಲ್ಲ
ತಾವೊಮದರಿಯದೆ ಆಗಮ ತಿಳಿಯದೆ
ಶ್ವಾನನ ಕುಳಿಯಲಿ ಬೀಳುವಿರಲ್ಲ                             ೧

ಗುರುಗಳ ಸೇವೆ ಮಾಡಿಸಿದರಲ್ಲ ಗುರುತಾಗಲಿಲ್ಲ
ಪರಿಪರಿ ದೇಶವ ತಿರುಗಿದಿರಲ್ಲ ಪೊರೆಯುವರಿನ್ನಿಲ್ಲ
ಅರಿವೊಂದರಿಯದೆ ಆಗಮ ತಿಳಿಯದೆ
ನರಕ ಕೂಪದಲಿ ಬೀಳುವಿರಲ್ಲ                                 ೨

ಬ್ರಹ್ಮ ಜ್ಞಾನಿಗಳು ಎನಿಸುವಿರಲ್ಲ ಹಮ್ಮು ಬಿಡಲಿಲ್ಲ
ಸುಮ್ಮನೆ ಯಾಗವ ಮಾಡುವಿರಲ್ಲ ಸುಳ್ಳನು ಬಿಡಲಿಲ್ಲ
ಗಮ್ಮನೆ ಪುರಂದರ ವಿಠಲನ ಪಾದಕೆ
ಹೆಮ್ಮೆ ಬಿಟ್ಟು ನೀವೆರೆಗಲೆ ಇಲ್ಲ.                                ೩

 

೧೩. ಮಾನವ ಜನ್ಮ ದೊಡ್ಡದು

ರಾಗ : ಪಂತುವರಾಲಿ
ತಾಳ : ಅಟ್ಟ

ಮಾನವಜನ್ಮ ದೊಡ್ಡದು ಇದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ                     ಪ

ಕಣ್ಣು ಕೈಕಾಲ್ಕವಿ ನಾಲಗೆ ಇರಲಿಕ್ಕೆ
ಮಣ್ಣುಮಕ್ಕಿ ಮರುಳಾಗುವರೆ
ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು
ಉಣ್ಣದೆ ಉಪವಾಸವಿರುವರೇನೊ                            ೧

ಕಾಲನವರು ಬಮದು ಕರಪಿಡಿದೆಳೆವಾಗ
ತಾಳು ತಾಳೆಮದರೆ ಕೇಲುವರೆ?
ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ                                             ೨

ಏನು ಕಾರಣ ಯದುಪತಿಯನು ಮರೆತಿರಿ
ಧನ ಧಾನ್ಯ ಸತಿ ಸುತರಿಪು ನಿತ್ಯವೆ?
ಇನ್ನಾದರು ಶ್ರೀಪುರಂದರವಿಠಲನ
ಚೆನ್ನಾಗಿ ಭಜಿಸಿ ನೀವು ಸುಖಿಯಾಗಿರಯ್ಯ                                          ೩

 

೧೪. ರೊಕ್ಕ ಎರಡಕ್ಕೂ ದುಃಖ ಕಾಣಕ್ಕ

ರಾಗ : ಪಂತುರಾವಳಿ
ತಾಳ : ಅಟ್ಟ

ರೊಕ್ಕ ಎರಡಕ್ಕೂ ದುಃಖ ಕಾಣಕ್ಕ                             ಪ

ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ತಿನಿಸೋದು ರೊಕ್ಕ
ಕಕ್ಕುಲಾತಿಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತ ಕಾಣಕ್ಕ                              ೧

ನೆಂಟರ ಇಷ್ಟರ ಮರೆಸೋದು ರೊಕ್ಕ
ಕಂಟಕಗಳ ಪರಿಹರಿಸೋದು ರೊಕ್ಕ
ಗಂಟುಕಟ್ಟಲಿಕ್ಕೆ ಕಲಿಸೋದು ರೊಕ್ಕ
ತುಂಟತನಗಳನು ಬಲಿಸೋದು ರೊಕ್ಕ                      ೨

ಇಲ್ಲದ ಗುಣಗಳ ತರಿಸೋದು ರೊಕ್ಕ
ಸಲ್ಲದ ನಾಣ್ಯವ ನಡಿಸೋದು ರೊಕ್ಕ
ಬೆಲ್ಲಕ್ಕಿಂತಲೂ ಬಹು ಸವಿರೊಕ್ಕ
ಇಲ್ಲದಿರಲು ಬಹು ದುಃಖ ಕಾಣಕ್ಕ                             ೩

ಉಂಟಾದ ಗುಣಗಳ ಮರೆಸೋದು ರೊಕ್ಕ
ಬಂಟರನೆಲ್ಲರ ಬರಿಸೋದು ರೊಕ್ಕ
ಕಂಠಿ ಸರಿಗೆಯನು ಗಳಿಸೋದು ರೊಕ್ಕ
ಒಂಟೆ ಕುದುರೆ ಆನೆ ತರಿಸೋದು ರೊಕ್ಕ                    ೪

ವಿದ್ಯದ ಮನುಜರ ಕರೆಸೋದು ರೊಕ್ಕ
ಹೊದ್ದಿದ ಜನರನು ಬಿಡಿಸೋದು ರೊಕ್ಕ
ಮುದ್ದು ಪುರಂದರವಿಠಲನ ಮರಸುವ
ಬಿದ್ದು ಹೋಗೋ ರೊಕ್ಕವ ಸುಡು ನೀನಕ್ಕ                   ೫

 

೧೫. ಮುಪ್ಪಿನ ಗಂಡನು ಬೇಡಕ್ಕ

ರಾಗ : ಪಂತುರಾವಳಿ
ತಾಳ : ಅಟ್ಟ

ಮುಪ್ಪಿನ ಗಂಡನು ಬೇಡಕ್ಕ
ತಪ್ಪದೆ ಪಡಿಪಾಟ ಪಡಲಾರೆನಕ್ಕ                             ೨

ಉದಯದಲ್ಲೊಳು ಬೇಕು ಉದಕ ಕಾಸಲುಬೇಕು
ಬದಿಯಲಿ ನಾನಿದ್ದು ಬಜೆ ಅರಿಯಬೇಕು
ಹದನಾಗಿ ಎಲೆಸುಣ್ಣ ಅಡಿಕೆ ಕುಟ್ಟಲುಬೇಕು
ಬಿದಿರುಕೋಲನು ಮುಂದೆ ಇಡಬೇಕಕ್ಕ                      ೧

ಮೆತ್ತನೆ ರೊಟ್ಟಿ ಮುದ್ದೆ ಮಾಡಲು ಇಡಬೇಕಕ್ಕ
ಒದ್ದಿ ಒದರಿ ಕೂಗಿ ಕರೆಯಲುಬೇಕು
ಪಿತ್ತವಾಕರಿಕೆಯ ಮೂಗಿನ ಸಿಂಬಳ
ಮತ್ತೆ ವೇಳೇಗೆ ಎದ್ದು ತೊಳಯಬೇಕಕ್ಕ                     ೨

ಗೋಣಿ ಹರಿಸಲುಬೇಕು ಬೆನ್ನು ಗುದ್ದಲು ಬೇಕು
ಗೋಣು ಹಿಡಿದು ಮೇಲಕ್ಕೆತ್ತಬೇಕು
ಶ್ರೀನಿಧಿ ಪುರಂದರವಿಠಲನ ನೆನೆಯುತ್ತ
ನಾನೊಂದು ಮೂಲೆಯಲಿ ಒರಗಬೇಕು                     ೩