ಕೀರ್ತನೆಗಳನ್ನು ಓದುವಾಗ ಮತ್ತೊಂದು ಅಂಶವನ್ನು ನಾವು ಗಮನಿಸಬಹುದು. ಒಬ್ಬ ಪುರಂದರದಾಸರು ಒಬ್ಬ ಕನಕದಾಸರು ಎಂಬುದು ದಾಸರ ಹಾಡುಗಳಲ್ಲಿ ಮುಖ್ಯವಾಗಲಿಲ್ಲ. ದಾಸರ ಹಾಡುಗಳು ಪ್ರತಿಪಾದಿಸುವುದು ನೈತಿಕ. ಧಾರ್ಮಿಕ ಮತ್ತು ಸಾಮಾಜಿಕ ಎಚ್ಚರವನ್ನು :

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಪದುಮನಾಭನ ಪಾದಭಜನೆ ಸುಖವಯ್ಯ
ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳು
ಮೆಲ್ಲನೆ ಮಾಧವನ ಮನದಿ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧು ಜನರೊಳಗೆ

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಪುರಂದರದಾಸರ ಹಿಂದಿನ ಹೆಸರು ಶ್ರೀನಿವಾಸ (ಸೀನಪ್ಪ ನಾಯಕ, ಕೃಷ್ಣಪ್ಪ ನಾಯಕ? ಎಂದೋ ಇತ್ತೆಂದು ಊಹಿಸುತ್ತಾರೆ. ವ್ಯಾಸ ತೀರ್ಥರು ಶಿಷ್ಯ. ಅವರ ನಾಮಾಂಕಿತ ಮಾತ್ರ ಪುರಂದರ ದಾಸ. ವ್ಯಾಸರಾಯರಿಂದ ಪಡೆದುಕೊಂಡ ಅಂಕಿತ ನಾಮವಿದು :

ಅಂಕಿತವಿಲ್ಲದ ದೇಹ ನಿಷೇಧ
ಅಂಕಿತವಿಲ್ಲದ ಕಾವ್ಯ ಶೋಭಿಸದು
ಅಂಕಿತವಿಲ್ಲದೆ ಇರಬಾರದೆಂದು
ಕ್ರಾಂತಿಕವನು ಮಾಡಿಎನ್ನಂಗಕೆ
ಪಂಕಜನಾಭ ಶ್ರೀ ಪುರಂದರವಿಠಲನ
ಅಂಕಿತವೆನಗಿತ್ತ ಗುರು ವ್ಯಾಸ ಮುನಿರಾಯ

ಜನ್ಮ ನಾಮ ಬೇರೆ. ಅಂಕಿತ ನಾಮ ಬೇರೆ. ಕನ್ನಡದಲ್ಲಿ ‘ಅಂಕಿತನಾಮ’ ಬೇರೆ ರೀತಿಯ ಅನನ್ಯತೆಯನ್ನು ಹೊಂದಿದೆ.

ಕನಕದಾಸರೂ, ಪುರಂದರದಾಸರೂ ಇಬ್ಬರೂ ತಮ್ಮ ಹರಿ ಸಂಕೀರ್ತನೆಯನ್ನು ಮಾಡುತ್ತಾ ಊರೂರು ತಿರುಗಿದರೆಂದು ಐತಿಹ್ಯ ಹೇಳುತ್ತವೆ. ಪುರಂದರದಾಸರು ಹೇಳುವ ಈ ಮಾತುಗಳನ್ನು ಗಮನಿಸಬೇಕು :

 • ಹರಿದಿನ – ವ್ರತಾಚರಣೆ ನಿಡೆನು
 • ಗುರುನಿಂದೆ, ಹರಿನಿಂದೆ ಆಲಿಸಿದೊಡೆ ಆತ್ಮ ಶುದ್ಧಿಯ ಮಾಡಿಕೊಳ್ಳುವೆನು
 • ಹರಿಸೇವೆಗೆಂದು ಈ ಬದುಕನ್ನು ಮೀಸಲಿಡುವೆನು
 • ಶೃತಿ, ಸ್ಮೃತಿ, ಇತಿಹಾಸ, ಪುರಾಣಗಳನ್ನು ನಂಬುವೆನು.
 • ಸಾಲ ಮಾಡೆನು, ಸಾಲದೆನೆನು ನಾಳೆಗಿಡೆನು

ಹಾಗೆಯೇ ಮತ್ತೊಂದು ಕಡೆ ಪುರಂದರದಾಸರು ಹೀಗೆ ಹೇಳುತ್ತಾರೆ :

 • ದಂಡಿಗೆ ಬೆತ್ತ ಹಿಡಿಯುವುದಕ್ಕೆ
 • ಮಂಡೆ ಬಾಗಿ ನಾಚುತಲಿದ್ದೆ
 • ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
 • ಭೂಪತಿಯಂತೆ ನಾಚುತಲಿದ್ದೆ
 • ತುಳಸೀ ಮಾಲೆಯ ಹಾಕುವುದಕ್ಕೆ
 • ಆಲಿಸಿಕೊಂಡು ನಡೆಯುತಲಿದ್ದೆ

ದಂಡಿಗೆ ಬೆತ್ತವೆಂದರೆ ಹರಿದಾಸರು ಬಳಸುತ್ತಿದ್ದ ತಂತೀ ವಾದ್ಯ. ಅದನ್ನು ನುಡಿಸುತ್ತಾ ಹಾಡುತ್ತಾ ನಡೆಯುವರು. ಗೋಪಾಳ ಬುಟ್ಟಿಯೆಂದರೆ ಎಡಭುಜದಿಂದ ಇಳಿಬಿದ್ದ ಭಿಕ್ಷಾ ಪಾತ್ರೆ (ಬಿದಿರಿನ ಬುಟ್ಟಿ) ಹಾಡುತ್ತಾ ಬೀದಿಯಲ್ಲಿ ನಡೆಯುತ್ತಿರುವಾಗ, ಮನೆಗಳ ಮುಂದೆ ಹೆಂಗಸರು ಹಿಡಿ ಅಕ್ಕಿ ಆ ಪಾತ್ರೆಯೊಳಗೆ ಸುರಿಯುವರು. ತುಳಸೀ ಮಾಲೆ ಹರಿದೀಕ್ಷೆಯ ಪ್ರತೀಕ. ಬಡತನದಲ್ಲಿ ಉಳಿದು ಅಂದಂದಿನ ಕೂಳನ್ನು ಆಗಾಗ ಗಳಿಸಿ, ನಾಳೆಗೆಂದು ಏನನ್ನೂ ಇಡದೆ, ಸಾಲದೆಂದು ಬಯಸದೆ, ಬಂದದ್ದರಲ್ಲಿ ತೃಪ್ತರಾಗಿ; ಸಂತೋಷದಿಂದ ಹರಿಭಜನೆ ಮಾಡುತ್ತಾ ಬಾಳನ್ನು ಕಳೆಯುವುದೇ ಹರಿದಾಸ ದೀಕ್ಷೆ. ದಾಸರು ವಿರಕ್ತರಾದ ಮೇಲೆ ಒಲಿದು ನಡೆಸಿಕೊಂಡು ಬಂದ ಬದುಕಿನ ಚಿತ್ರಣವೂ ಇಲ್ಲಿದೆ (ಪುರಂದರ ಸಾಹಿತ್ಯ ದರ್ಶನ : ಸಂಪುಟ-೧, ಸಾ.ಕೃ. ರಾಮಚಂದ್ರರಾವ್, ೧೯೮೫, ಪು.೨೫). ಮೇಲೆ ಹೇಳಿದ ಎಲ್ಲಾ ಮಾತುಗಳನ್ನು ಗಮನಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ದಾಸರು ಯಾವ, ಯಾರ ಹಂಗೂ ಇಲ್ಲದೆ ಹಾಡುತ್ತಾ ಸಾಗಿದರು. ಇದರಲ್ಲಿ ಸಾಮಾಜಿಕ, ಪ್ರದರ್ಶಾತ್ಮಕ ಅಭಿವ್ಯಕ್ತಿಯನ್ನು ನಾವು ಕಾಣುತ್ತೇವೆ. ಹಾಡುವುದು, ಅದಕ್ಕೆ ತಕ್ಕಂತೆ ಕಾಲಿನ ಗೆಜ್ಜೆಯನ್ನು ಬಳಸಿಕೊಳ್ಳುವುದು ಮತ್ತು ತಂಬುರಿಯನ್ನು ಬಾರಿಸುವುದು ದಾಸರ ಕಿರ್ತನೆಯಲ್ಲಿ ಮುಖ್ಯವಾಗಿದೆ. ಧರ್ಮ ಪ್ರಸರಣವೇ ಇವರಲ್ಲಿ ಮುಖ್ಯ ನೀತಿಯಾಗಿದೆ. ಹಾಗಿದ್ದರೆ ಇದರ ಹಿನ್ನೆಲೆಯಲ್ಲಿ ಏನಿದೆ? ಮಧ್ಯಕಾಲೀನ ಸಾಮಾಜಿಕ ಚರಿತ್ರೆಯು ನಾವೀಗ ಅತ್ಯಂತ ವೈಭವೀಕರಿಸಲಾಗಿರುವ ರೀತಿಯಲ್ಲಿ ಇರಲಿಲ್ಲ ಎಂಬುದು ಗಮನಾರ್ಹ. ವಿಜಯನಗರದ ಅರಸೊತ್ತಿಗೆಯ ಕಾಲದಲ್ಲಿ ರಸ್ತೆಯಲ್ಲಿ ಮುತ್ತು, ರಾಶಿ ಹಾಕಿ ಸೇರಿನಿಂದ ಮಾರುತ್ತಿದ್ದರು ಎನ್ನುವುದು ವೈಭವೀಕರಿಸಲಾಗಿರುವ ಒಂದು ಹೇಳಿಕೆ ಮಾತ್ರ. ಈ ಕಾಲಘಟ್ಟವನ್ನು ನಾವು ಎರಡು ರೀತಿಯಲ್ಲಿ ಹೇಳುತ್ತೇವೆ. ಚಾರಿತ್ರಿಕತೆಯ ಹಿನ್ನೆಲೆಯಲ್ಲಿ ವಿಜಯನಗರ ಅರಸೊತ್ತಿಗೆಯ ಕಾಲ. ಸಾಹಿತ್ಯ ಚರಿತ್ರೆಗೆ ಬಂದರೆ ‘ಬ್ರಾಹ್ಮಣ ಯುಗ’ ಅಥವಾ ಭಾಗವತ ಸಂಪ್ರದಾಯದ ಕಾಲ’ ಈ ಮೊದಲು ಇಲ್ಲಿ ಮಧ್ಯಕಾಲೀನ ಎಂದು ಬಳಸಿದೆ. ಪ್ರಾಚೀನ, ಮಧ್ಯಕಾಲೀನ, ಆಧುನಿಕ ಎಂದು ಕರೆಯಲು ಪ್ರಾರಂಭಿಸಿದವರು ಬ್ರಿಟಿಶ್ ಚರಿತ್ರೆಕಾರರು. ಅವಚರು Ancient, Middle, Modren ಎಂದು ಕರೆಯಲು ಶುರು ಮಾಡಿದರು. ಅವರ ಪ್ರಕಾರ ಆಧುನಿಕ ಚರಿತ್ರೆಯೆಂದರೆ ಕೈಗಾರೀಕರಣಗೊಂಡು, ವೈಜ್ಞಾನಿಕವಾಗಿ ಮುಂದುವರೆದ ಬಂಡವಾಳವಾದ ಹುಟ್ಟಿಕೊಂಡ ಮತ್ತು ಅಭಿವೃದ್ಧಿಯ ಕಡೆಗೆ ಕಣ್ಣು ಹಾಯಿಸಿದ ಮತ್ತು ಸ್ವಯಂ ಲಾಭಕರ ಯುಗವನ್ನು ಕಂಡದ್ದೆಲ್ಲವೂ ‘ಆಧುನಿಕ’. ಈ ಆಧುನಿಕ ಕಾಲದಲ್ಲಿ ನಿಂತುಕೊಂಡ ಚರಿತ್ರೆಗಾರ ಬ್ರಿಟನ್ನಿನ ಅಥವಾ ಒಟ್ಟಾಗಿ ಪಶ್ಚಿಮ ಸಮಾಜದಲ್ಲಿರುವ ‘ಕಾಲ’ Time ಮತ್ತು ಅವಕಾಶ Space ಪರಿಕಲ್ಪನೆಯಿಂದಾಗಿ ಪುನರುಜ್ಜೀವನದ ಹಿಂದಿನ ಕಾಲವನ್ನು ಮಧ್ಯಯುಗೀನ ಎಂದು ಕರೆದು, ಅದಕ್ಕಿಂತಲೂ ಹಿಂದಿನ ಕಾಲವನ್ನು ಪ್ರಾಚೀನವೆಂದು ಕರೆದರು. ಯಾವುದನ್ನು ಚರಿತ್ರೆಕಾರರು ಹೀಗೆ ಗುರುತಿಸುವ ಪ್ರಯತ್ನದಿಂದಾಗಿ ‘ಚರಿತ್ರೆ’ (ಕಾಲ) ಉದ್ದನೆಯ ಸರಳ ರೇಖಾಕೃತಿ ಪರಿಕಲ್ಪನೆಯು ಹುಟ್ಟಿಕೊಂಡಿತು.

ಪ್ರಾಚೀನ : ತುಂಬಾ ಹಳೆಯದು. ಪ್ಯೂಡಲ್ ಗುಣ ಹೊಂದಿರುವುದು

ಮಧ್ಯಕಾಲೀನ : ಪರಿವರ್ತನೆಯ ಕಾಲದ ಯುಗ ಈ ಕಾಲದಲ್ಲಿ ಹಣದ ಚಲಾವಣೆ ರೂಪುಗೊಂಡಿತು. ಪ್ರಭುತ್ವ ಹಾಗೂ ಚರ್ಚ್‌ಗಳು ಸಮಾಜದ ಮೇಲೆ ಬೀರಿದ ಪ್ರಭಾವ ಕಡಿಮೆಯಾಗತೊಡಗಿತು. ಚರ್ಚಿನ ಹಾದಿ, ಪ್ರಭುತ್ವದ ಹಾದಿ ಬೇರೆಯಾಗತೊಡಗಿತು. ಹಾಗೂ ಅವುಗಳ ನಡುವೆ ಒಳ ಒಪ್ಪಂದ ನಡೆಯಿತು.

ಆಧುನಿಕ- ಹಿಂದಿನ ಚರಿತ್ರೆಯನ್ನು ಗುರುತಿಸಿದರೆ ಈ ಯುಗ ಆಧುನಿಕವಾದದ್ದು, ಇಲ್ಲಿ ವ್ಯಕ್ತಿವಾದ ಬೆಳೆಯಿತು. ವಿಜ್ಞಾನ ತಂತ್ರಜ್ಞಾನವು ಮುಂದುವರೆಯಿತು, ವಿನಿಮಯ ಮೌಲ್ಯಗಳು ಬದಲಾದವು.

ಈ ದೃಷ್ಟಿಯಿಂದಲೇ ನಾವು ಕೂಡಾ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಯುಗವೆಂದು ಕರೆಯುತ್ತೇವೆ. ವಿಜಯನಗರ ಅರಸೊತ್ತಿಗೆಯು ಮಧ್ಯಕಾಲೀನ ಯುಗಕ್ಕೆ ಸಂಬಂಧಿಸಿದ್ದು, ಒಟ್ಟಾರೆ ಗಮನಿಸಿದರೆ ವಿಜಯನಗರ ಅರಸೊತ್ತಿಗೆ ಸ್ವಯಂ ಪೂರ್ಣ ಸಾಮಾಜಿಕ ಸ್ವಾಸ್ಥ್ಯವನ್ನು ಪಡೆದುಕೊಂಡಿರುವ ಸಮಾಜವಾಗಿರಲಿಲ್ಲ. ಸಾಮಾಜಿಕ ಸಹಮತವನ್ನು ಹೊಂದಿರಲಿಲ್ಲ. ವಿಜಯನಗರ ಅರಸೊತ್ತಿಗೆಯು ತನ್ನ ಅತ್ಯಂತಿಕವಾದ ಏಕಕೇಂದ್ರೀತ ಅಧಿಕಾರದ ಮೂಲಕ ತನ್ನ ಪ್ರಭುತ್ವ ಬೇಕಾದ ಸಲಕರಣೆಯನ್ನು ಹೊಂದಿತು. ಪ್ರಭುತ್ವ ತನಗೆ ಬೇಕಾದ ಸಂಗತಿಗಳನ್ನು ಪುನರ್ ವ್ಯಾಖ್ಯೆ ಮಾಡಿತ್ತು. ಇದರಿಂದಾಗಿಯೇ ಯಜಮಾನಿಕೆಯ ಹೊಂದಿರುವ ಮತಧರ್ಮಗಳು, ಪರಮೋಚ್ಛವಾದ ವರ್ಗಗಳು ಪ್ರಭುತ್ವದ ಜೊತೆಗೆ ಕೈ ಜೋಡಿಸಿದ್ದವು. ಇದರ ನಡುವೆಯೇ ದಾಸ ಪಂಥ ಹುಟ್ಟಿತು.

ಒಂದು ಅರ್ಥದಲ್ಲಿ ಪುರಂದರದಾಸರ ಕೀರ್ತನೆಗಳು ಪ್ರಬಲ ವರ್ಗ ಮತ್ತು ಜಾತಿ, ಕುಲತಾರತಮ್ಯಗಳನ್ನು ಕಟುವಾಗಿ ಟೀಕಿಸುತ್ತವೆ. ಅಷ್ಟೇ ಅಲ್ಲ ಆಗ ಇದ್ದ ಸಾಂಸ್ಕೃತಿಕ ರೂಪಗಳನ್ನು ದಾಸರು ನಿರಾಕರಿಸುತ್ತಾರೆ.

ಉಂಬುಡುವದಕ್ಕಿರುವ ಅರಸನೋಲಗಕಿಂತ
ತುಂಬಿದರೊಳಗೆ ತಿರಿದಿಂಬುವುದೆಲೇಸು
ಹಂಬಲಿಸಿ ಹಾಳು ಹರಟೆ ಹೊಡೆಯುವುದಕ್ಕಿಂತ
ನಂಬಿ ಹರಿದಾಸರೊಳು ಪೊಂದಿ ಹಾಡುವುದೇ ಲೇಸು

ಆಗಿನ ಭಾಗವತ ಸಂಪ್ರದಾಯವು ಎರಡು ಮಾದರಿಗಳನ್ನು ಹೊಂದಿದ್ದವು. ಒಂದು ಭೌತಿಕವಾದ ಪ್ರಭುತ್ವದ ನಿರಾಕರಣೆ:

ಮುನ್ನ ಶತ ಕೋಟಿರಾಯರುಗಳಾಳಿದ ನೆಲನ
ತನ್ನದೆಂದೆನುತ ಶಾಸನ ಬರೆಸಿ
ಭಿನ್ನಣದ ಮನೆ ಕಟ್ಟಿಕೋಟೆ ಕೊತ್ತಳವಿಕ್ಕಿ
ಚೆನ್ನಿಗನು ಅಸುವಳಿಯೆ ಹೊರಗೆ ಹಾಕುವರು
ಮತ್ತೊಂದು ಬೌದ್ಧಿಕ ಪ್ರಭುತ್ವದ ನಿರಾಕರಣೆ:
‘‘ಮಾನ ಹೀನನಿಗೆ ಅಭಿಮಾನವೇಕೆ
ಜ್ಞಾನವಿಲ್ಲದವಂಗೆ ಗುರುಬೋಧೆಯೇಕೆ?

‘ಕಲೆಗಾಗಿ ಕಲೆ’ ‘ಹಾಡಿಗಾಗಿ ಹಾಡು’ ಎನ್ನುವುದು ಪುರಂದರದಾಸರ ದೃಷ್ಟಿಯಲ್ಲಿ ಅರ್ಥಹೀನ. ಮತ್ತು ಪುರಂದರದಾಸರು ತಮ್ಮ ಹಾಡಿನ ಸಂಪ್ರದಾಯವನ್ನು ರೂಪಿಸುವುದಕ್ಕಿಂತ ಮೊದಲು ಇದ್ದ ಸಾಂಪ್ರದಾಯಿಕ ಮಾನವತೆಯ ದೃಷ್ಟಿಕೋನವನ್ನು ಅವರು ಮೀರಿದರು. ಅಂದಿನ ಸಾಂಪ್ರದಾಯಿಕ ಮಾನವತೆಯ ವ್ಯಾಖ್ಯಾನಗಳು ಜಾತಿ ಧರ್ಮಕ್ಕೆ ಸೇರಿದವುಗಳು. ಕೆಳ ಜಾತಿಯವರು, ಸ್ತ್ರೀಯರು – ಮುಂತಾದವರನ್ನು ತಮ್ಮ ಅವಶ್ಯಕತೆಗೆ ಅನುಸಾರವಾಗಿ ವ್ಯಾಖ್ಯಾನಿಸಿದರು. ಈ ರೀತಿಯಲ್ಲಿ ಸಾಮಾನ್ಯವಿದ್ದ ಗಡಿ ರೇಖೆಗಳನ್ನು ಪುರಂದರದಾಸರು ದಾಟಿದರು. ಮತ್ತು ಪುರಂದರದಾಸರ ಕೃತಿಗಳೆಂದರೆ, ಹಾಡುಗಳು. ಅವು ಲಿಖಿತ ಪಠ್ಯವಲ್ಲ. “ಹಾಡು ಗಬ್ಬಗಳಿಗೆ” ಕರ್ನಾಟಕದಲ್ಲಿ ವಿಶಿಷ್ಟ ಸ್ಥಾನಮಾನಗಳಿವೆ. ಅವರ ಕೃತಿಗಳು ತಾಳೆಗರಿಯ ಮೇಲೆ ಪಠ್ಯಗಳಲ್ಲವಾದ್ದರಿಂದ ಅದಕ್ಕೆ ಬೇರೆ ಅರ್ಥವಂತಿಕೆಯಿದೆ. ಯಾವಾಗಲೂ ಲಿಖಿತ ಪಠ್ಯ ಮತ್ತು ಮೌಖಿಕ ಪಠ್ಯಗಳ ರೂಪಗಳು ಬೇರೆ. ಲಿಖಿತ ಪಠ್ಯಗಳು ತಮ್ಮ ಅರ್ಥಗಳನ್ನು ತಾವೇ ನಿರೂಪಿಸುತ್ತವೆ. ಆದರೆ ಮೌಖಿಕ ಸಂಪ್ರದಾಯಗಳಿಗೆ ಬೇರೆ ರೂಪವಿರುತ್ತವೆ. ದಾಸರ ಕೀರ್ತನೆಗಳು ಇದಕ್ಕೆ ಉದಾಹರಣೆಯಾಗಿದೆ. ಇವು ದಾಸರ ಕಾಲ್ಗೆಜ್ಜೆ : ತಂಬೂರಿಗಳ ಸಹಾಯದಿಂದ ಪ್ರದರ್ಶನಾತ್ಮಕ ಹಾಗೂ ಆಯಾ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಚಹರೆಗಳನ್ನು ಹೊಂದಿರುತ್ತವೆ. ಕೀರ್ತನೆಗಳು : ಜ್ಞಾನಮಾರ್ಗಕ್ಕಿಂತ ಭಕ್ತಿ ಮಾರ್ಗ ಮುಖ್ಯವೆಂದು ಪ್ರತಿಪಾದಿಸಿದವು. ಇದರಿಂದ ಪುರಂದರದಾಸರ ಕೀರ್ತನೆಗಳ ಮೌಲ್ಯಗಳು ಬೇರೆ ಬಗೆಯವು. ಅವುಗಳಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಹರೆಗಳಿವೆ ಮತ್ತು ಆ ಕೀರ್ತನೆಗಳು ವೈಯಕ್ತಿಕ ಮಟ್ಟವನ್ನು ಮೀರಿ ವಿಶ್ವಾತ್ಮಕ ದೃಷ್ಟಿಯನ್ನು ಹೊಂದಿದವುಗಳು. ಆದುದರಿಂದ ಅವುಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ಮುಖ್ಯ.

ದಕ್ಷಿಣ ಕನ್ನಡದ ಯಕ್ಷಗಾನ ಮೇಳಗಳಿಗೆ “ದಶಾವತಾರ” ಮೇಳವೆಂದು ಕರೆಯುತ್ತಿದ್ದರು. ದಶಾವತಾರವೆಂದರೆ ವಿಷ್ಣುವಿನ ಹತ್ತು ಅವತಾರಗಳ ಕುರಿತ ಪ್ರದರ್ಶನಗಳು, ಅವುಗಳನ್ನು ಹಾಗೆಯೇ ಯಕ್ಷಗಾನ ಮೇಳಗಳನ್ನು “ದಾಸರಾಟ” ಎಂದು ಕರೆಯುತ್ತಿದ್ದರು. ಹಿಂದೆ ಯಕ್ಷಗಾನ ಮೇಳಗಳಲ್ಲಿ ಯಕ್ಷಗಾನ ಪ್ರಸಂಗ ಪ್ರಾರಂಭವಾಗುವ ಮೊದಲು ಇಬ್ಬರು ಸ್ತ್ರೀ ವೇಷ ಧರಿಸಿ ಕುಣಿಯುತ್ತಿದ್ದರು. ಆಗ ಭಾಗವತರು (ಈ ಪದವೇ ವೈಷ್ಣವ ಸಂಪ್ರದಾಯವನ್ನು ಸೂಚಿಸುತ್ತದೆ) ಹಾಡುತ್ತಿದ್ದ ದಾಸರ ಕೀರ್ತನೆಗಳು ಮುಖ್ಯವಾಗಿದ್ದವು. “ಯಾರೆ ರಂಗನ ಕರೆಯ ಬಂದವರು”, “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ”, “ಪೋಗದಿರಲೋರಂಗ ಬಾಗಿಲಿಂದಾಚೆಗೆ, ಭಾಗವತರು ಬಂದು ಎತ್ತಿಕೊಂಡೊಯ್ಯುವರು” ಮುಂತಾದವು (ಭಾಗವತರು ಬಂದರೆ ಕೃಷ್ಣನನ್ನು ಎತ್ತಿಕೊಂಡು ಒಯ್ಯುವುದು ಮುಖ್ಯ). ಯಕ್ಷಗಾನ ಮೇಳಗಳಲ್ಲಿ ಬ್ರಾಹ್ಮಣರು ತಿರುಗಾಟ ಪ್ರಾರಂಭಿಸಿದರೆ ಅವರನ್ನು ಮೈಲಿಗೆಯೆಂದೇ ತಿಳಿಯುತ್ತಿದ್ದರು. ಇದರಿಂದ ಅವರಿಗೆ ಊಟದ ಸಮಯದಲ್ಲಿ ಅಡ್ಡಪಂಕ್ತಿ ಹಾಕುತ್ತಿದ್ದರು. ಜಾತಿ ಯಜಮಾನಿಕೆಯು “ದಾಸರನ್ನು” ಹೇಗೆ ನೋಡಿದೆ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ.

ಅರಸೊತ್ತಿಗೆಯ, ಮೇಲುಜಾತಿ, ಮೇಲು ವರ್ಗಗಳ ಸಂಸ್ಕೃತಿಯೇ ಬೇರೆ. ಅವರ ಆಂತರ‍್ಯದಲ್ಲಿ ಯಜಮಾನಿಕೆಯ ಸಾಂಸ್ಕೃತಿಕ ನಿರೂಪಣೆಗಳಿವೆ. ಅರಸರ ಸಂಸ್ಕೃತಿಯಲ್ಲಿ ರಾಜ್ಯಾಧಿಕಾರವಿದೆ. ಅದಕ್ಕೆ ಅದರದೇ ಅನ್ನಬಹುದಾದ ನಿಯಮಗಳಿವೆ. ಅದು ತನ್ನ ಅಧಿಕಾರಕ್ಕೆ ತಕ್ಕಂತೆ ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ. ದಾಸ ಸಾಹಿತ್ಯವು ಈ ರೀತಿಯ ಸಂಸ್ಕೃತಿಯನ್ನು ನಿರಾಕರಿಸಿದ್ದರಿಂದ ಅದರ ಸಾಂಸ್ಕೃತಿಕ ನಿರೂಪಣೆಗಳು ಬೇರೆಯಾದವು. ಒಂದು ಸಣ್ಣ ಉದಾಹರಣೆ ಕೊಡಬೇಕೆಂದರೆ ಹಾಡಿಗೆ ರಾಗ ಯಾಕೆ ಬೇಕು? ರಾಗವಿಲ್ಲದ ಹಾಡು ಜನರಿಗೆ ಬೇಗ ತಲುಪುವುದಿಲ್ಲ. ಅಂದರೆ ಇದು ಒಂದು ರೀತಿಯ ಸಂವಹನ ಮಾಧ್ಯಮ, ಹಾಗೂ ಈ ರಾಗಗಳು ವಿಶಿಷ್ಟ ರೀತಿಯಲ್ಲಿ ಜನರನ್ನು ಸೆಳೆಯುತ್ತವೆ. ಪುರಂದರದಾಸರು ಈ ರೀತಿಯಲ್ಲಿ ಜನಸಾಮಾನ್ಯರನ್ನು ತಲುಪಿದರು. ರಾಜಕೇಂದ್ರಿತ ಸಂಸ್ಕೃತಿಗೆ ಕೆಲವು ನಿಯಮಾವಳಿಗಳಿರುತ್ತವೆ. ಅದಕ್ಕೆ ಭೌಗೋಳಿಕ ವ್ಯಾಪ್ತಿ ಇರುತ್ತದೆ. ಆದರೆ, ದಾಸ ಸಂಸ್ಕೃತಿಗೆ ರಾಜಕೇಂದ್ರಿತ ನಿಯಮಾವಳಿಗಳಿಲ್ಲ. ಇಲ್ಲಿಯೇ ಇನ್ನೊಂದು ಅಂಶವನ್ನು ಗಮನಿಸಬೇಕು: ಷಟ್ಪದಿ, ಸಾಂಗತ್ಯ, ಚಂಪೂ ಮುಂತಾದ ಮಾದರಿಗಳು ಪ್ರತಿಷ್ಠಿತವಾಗಿದ್ದಾಗ ಪುರಂದರದಾಸರು ಹೊಸ ಕಾವ್ಯದ ಮಾದರಿಯನ್ನು ಹುಟ್ಟುಹಾಕಿದರು. ಅವರ ಕೀರ್ತನೆಗಳು ಒಂದು ನಿರ್ದಿಷ್ಟ ನಿಯಮ, ನಿರ್ದಿಷ್ಟ ಕಾಲ, ನಿರ್ದಿಷ್ಟ ಜಾಗದಲ್ಲಿ ಕುಳಿತು ರಚಿತವಾದವುಗಳಲ್ಲ. ದಾಸರ ಕೀರ್ತನೆಗಳು ಬರಿಯ ಸಾಹಿತ್ಯಿಕ ಮಾದರಿಯೆಂದು ಗ್ರಹಿಸುವಂತಿಲ್ಲ. ಪುರಂದರದಾಸರ ಕೀರ್ತನೆಯನ್ನು ವಿಶ್ಞೇಷಿಸಲು ಈಗಾಗಲೇ ನಮಗೆ ಕಲಿಸಲಾದ ವಿಮರ್ಶೆಯ ಮಾದರಿಗಳನ್ನು ಮಾತ್ರ ಹಿಡಿದುಕೊಳ್ಳುವಂತಿಲ್ಲ. ವಾದವಿಷ್ಟೆ ದಾಸರ ಕೀರ್ತನೆಯ ಉದ್ದೇಶವಿಷ್ಟೆ.

೧. ಸಮಾಜಕ್ಕೆ ನೈತಿಕತೆಯನ್ನು ತುಂಬುವುದು.

೨. ರಾಗದ ಮೂಲಕ ಕೀರ್ತನೆಯನ್ನು ಹೇಳುವುದು

೩. ಈಗಾಗಲೇ ಸಿದ್ಧವಾದ ಸಾಹಿತ್ಯಕ ವಸ್ತುಗಳ ನಿರಾಕರಣೆ. ಆದರೆ ಇವುಗಳನ್ನು ಮಾತ್ರವೇ ಕೇಂದ್ರೀಕರಿಸಿ ವಿಮರ್ಶೆ ಮಾಡುವಂತಿಲ್ಲ. ವಿಮರ್ಶೆಯು ಕೃತಿಗಳನ್ನು ವಿಶ್ಲೇಷಿಸುವ ಕೆಲವೊಂದು ಸಂದರ್ಭದಲ್ಲಿ ಕೃತಿಯ ಅತ್ಯುತ್ತಮ ಅಂಶ ಯಾವುದು ಎಂದು ಹುಡುಕುತ್ತದೆ. ಆದರೆ ವಚನ, ದಾಸರ ಕೀರ್ತನೆಗಳನ್ನು ಓದುವಾಗ ಅತ್ಯುತ್ತಮ ಸಾಹಿತ್ಯ ಕೃತಿ (Pec acop) ಎಂದು ವರ್ಗೀಕರಿಸಲು ಬರುವುದಿಲ್ಲ. ನಮ್ಮ ಗ್ರಹೀತ ಸಾಹಿತ್ಯ ವಿಮರ್ಶೆಯು ಬಳಸಿಕೊಳ್ಳುವ ಉಪಕರಣಗಳು ಕೀರ್ತನೆಗಳ ಚರ್ಚೆಗೆ ಸಾಕಾಗಲಾರವು. ಅವುಗಳು ಮಾತಾಡಿದ್ದು, ಹಾಡು ಹೇಳಿದ್ದು, ಸಾಮಾನ್ಯರ ಪರಿಭಾಷೆಗಳಲ್ಲಿ.

ಮೂಢಬಲ್ಲನೆ ಜ್ಞಾನ ದೃಢ ಭಕ್ತಿಯ
ಕಾಡ ಕಪಿ ಬಲ್ಲುದೆ ಮಾಣಿಕದ ಬೆಲೆಯು
ದೋಷವುಳ್ಳವ ನಾನು, ಭಾಷೆಯುಳ್ಳವ ನೀನು
ಮೋಸ ಹೋದೆನೊ ಭಕ್ತಿ ರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸಂಗವಿತ್ತು ಪಾಲಿಸೊ ಹರಿಯ

ಮೇಲೆ ಉಲ್ಲೇಖಿಸಿದ ಸಾಲುಗಳಲ್ಲಿ ಮತ್ತೆ ಕೆಲವು ಅಂಶಗಳನ್ನು ಗುರುತಿಸಬಹುದು. ದಾಸರ ಕೀರ್ತನೆಗಳು ಅಷ್ಟೊಂದು ಪ್ರಚಾರ ಪಡೆದದ್ದು ಈಗ ನಮಗೆ ಐತಿಹ್ಯ. ಆದರೆ ದಾಸರ ಕೀರ್ತನೆಗಳು ಹುಟ್ಟಿದ್ದು ಮತ್ತು ಜನರ ಕಿವಿಗೆ ನಾಟಿದ್ದು ಹೊಸ ರೀತಿಯ ಪ್ರಜ್ಞೆಯ ಹುಟ್ಟನ್ನು ಸೂಚಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಉದಾಹರಣೆಯನ್ನು ಕೊಡಬೇಕು. ಪ್ರಭುತ್ವವೆಂದರೆ ಅದು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸೇನೆ ಮಂತ್ರಿಗಳು, ಸೇನಾಧಿಪತಿ ಮೊದಲಾದ ಮಧ್ಯವರ್ತಿಗಳನ್ನು ಬಳಸಿಕೊಳ್ಳುತ್ತದೆ. ಪ್ರಜೆಗಳಿಗೆ ಮತ್ತು ದೊರೆಗಳಿಗೆ ನೇರ ಸಂಬಂಧವಿರುವುದಿಲ್ಲ. ಅಧಿಕಾರಕ್ಕೆ ಜನಸಾಮಾನ್ಯರು ಹೆದರುತ್ತಾರೆ. ರಾಜನ ಅಧಿಕಾರವೆಂದರೆ ಅದಕ್ಕೆ ಸ್ವತಂತ್ರ ಅಸ್ತಿತ್ವವಿರುತ್ತದೆ. ರಾಜ ನಾಡಿನಲ್ಲಿ ಸರ್ವೊಚ್ಛ ಅಧಿಕಾರಿ, ಪ್ರಭುತ್ವವು ಕೆಲವು ವಿಧಿ ವಿಷೇಧಗಳನ್ನು ಹೇರುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು (ನ್ಯಾಯ-ಅನ್ಯಾಯಗಳನ್ನು) ನಿರ್ಧರಿಸುವುದು ಪ್ರಭುತ್ವ ರಾಜನ ಅಧಿಕಾರವೆಂದರೆ ಅವನೇ ರಾಜ್ಯಕ್ಕೆ ಒಂದು ಕೇಂದ್ರ ಬಿಂದು ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಸರಿ-ತಪ್ಪುಗಳ ನಡುವೆ ತೀರ್ಮಾನ ಕೊಡುವವನು ಅರಸ. ಅರಸನ ಸ್ಥಿತಿಯೇ ನ್ಯಾಯ ತೀರ್ಮಾನದ ಅಸ್ತಿವಾರನ್ನು ಹೊರುತ್ತದೆ. ನ್ಯಾಯ-ತೀರ್ಮಾನಕ್ಕೆ ಯಾವುದೇ ಪೂರ್ಣವಾಗಿ ನಿರ್ಣೀತಗೊಂಡ ಲಿಖಿತವಾದ ನಿಯಮ ಸಂಹಿತೆಗಳಿಲ್ಲ. ಇದು ಸಂವಾದಿಯಾದುದು, ದಾಸ ಪಂಥ ಪ್ರಭುತ್ವ ಹೇರಿದ ಮೌಲ್ಯಗಳನ್ನು ಪ್ರಶ್ನಿಸಿತು. ಅದು ಅಧಿಕಾರವನ್ನು ನಿರಚನೆಗೊಳಿಸಿತು. ಪುರಂದರದಾಸರ ಕೀರ್ತನೆಯೊಂದರಲ್ಲಿ ವ್ಯಂಗ್ಯವಾಗಿ ಹೀಗೆ ಬರುತ್ತದೆ :

ಕೆರೆ ಬಾವಿ ಕಟ್ಟುವರಿಲ್ಲಿ ದೊಡ್ಡ
ದೊರೆ ತನವಾಳುವರಿಲ್ಲಿ
ಕರೆದೆನ್ನ ಇಕ್ಕುವರಿಲ್ಲ
ಸಿರಿಸಂಪನ್ನರಾಗಿಹರಲ್ಲಿ

ಮತ್ತೊಂದು ಹಾಡಿನಲ್ಲಿ

ದೊರೆತನ ಮಾಡುವುದೆ ಹೊಟ್ಟೆಗಾಗಿ
ತುರಗ ವೇರುವುದು ಹೊಟ್ಟೆಗಾಗಿ

ಭಕ್ತಿಯೇ ಪುರಂದರದಾಸರ ಕೀರ್ತನೆಗಳಲ್ಲಿ ಒಂದು ಶಕ್ತಿ. ಅದಕ್ಕೆ ಪ್ರಭುತ್ವಕ್ಕಿರುವಂತೆ ಒಂದು ಕೇಂದ್ರವಿಲ್ಲ. ವಿಧಿ ನಿಷೇಧಗಳಿಲ್ಲ. ನ್ಯಾಯ-ಅನ್ಯಾಯದ ಪ್ರಶ್ನೆಯಿಲ್ಲ. ಧರ್ಮವೇ ಕೀರ್ತನೆಗಳಲ್ಲಿ ಸ್ಥಾಪಿತವಾದ ಅಧಿಕಾರ. ಪುರಂದರ ದೊರೆ. ಇದರಿಂದಾಗಿ ಪುರಂದರದಾಸರ ಕೀರ್ತನೆಗಳು ತತ್ವಜ್ಞಾನ, ನೈತಿಕತೆ ಮತ್ತು ಕುಲದ ಪ್ರಶ್ನೆಗಳನ್ನು ಹೊಸ ಆಯಾಮದ ಮೂಲಕ ಪರಿಶೀಲಿಸುತ್ತವೆ. ಹುಟ್ಟು ಅನ್ನುವುದು ಇಲ್ಲಿಯೇ ಮುಕ್ತಾಯವಾಗುವುದಿಲ್ಲ. ಸಾವು ಎನ್ನುವುದು ಕಾಯಕದಿಂದ ಬಿಡುಗಡೆ. ಸಾವು ಮೋಕ್ಷಕ್ಕೆ ದಾರಿ.

ದಾಸರ ಪಂಥ ಅದ್ವೈತದಂತೆ ಏಕತಾವಾದಿ ಚಿಂತನೆಯ ಕ್ರಮವನ್ನು ಹೊಂದಿಲ್ಲ. ಮತ್ತು ಉಪನಿಷತ್ತು ಮುಂತಾದವುಗಳಿಂದ ಪ್ರೇರಣೆ ಪಡೆದುಕೊಂಡ ಹಾಗೆ ಕಾಣಿಸುವುದಿಲ್ಲ. ಇದರಲ್ಲಿ ಬರುವ ಕೃಷ್ಣನಿಗೆ ಬೇರೆ ಚಹರೆಯಿದೆ. ಏಕತೆಯ ಬದಲು ಬಹುತ್ವವೆಂದು ಇದು ಪ್ರತಿಪಾದಿಸುತ್ತದೆ. ದೇವರಿಗೂ ಭಕ್ತರಿಗೂ ಭಿನ್ನತೆಯಿದೆ, ಅಂತರವಿದೆ. ಭಕ್ತ ದೇವರನ್ನು ಒಲಿಸಬೇಕು. ಒಲಿಸಬೇಕೆಂದರೆ, ಅಲ್ಲಿ ಸ್ತುತಿಸಬೇಕು. ಸ್ತುತಿ ಒಂದು ಮಾರ್ಗ ಅಷ್ಟ. ದಾಸರ ದೃಷ್ಟಿಯಲ್ಲಿ ದೇವರು ದೊಡ್ಡವನು. ಮನುಷ್ಯರು ಚಿಕ್ಕವರು. ಅಂತಿಮವಾಗಿ ದೇವರನ್ನು ಹೊಂದುವುದು ದಾಸರ ಮುಖ್ಯ ಗುರಿ. ಇದರಲ್ಲಿ ದೇವರ ನಾಮವೊಂದೇ ಸಾಕು. ಭಗವದ್ಗೀತೆಯಲ್ಲಿ ಅರ್ಜುನನಿಗೆ ಬೋಧಿಸುವ ಕೃಷ್ಣ ಇಲ್ಲಿ ಬದಲಾಗಿದ್ದಾನೆ. ರಂಗ; ಬಾಲಕ; ಯಜಮಾನ; ಸಂಬಂಧ ಹೀಗೆ ಬೇರೆ ಚಹರೆಗಳಲ್ಲಿ ಕೃಷ್ಣ ರೂಪುಗೊಂಡಿದ್ದಾನೆ.

ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ
ಬಾಲಕೃಷ್ಣನೆಂಬ ನಾಮಯಾಕಾಯ್ತು?”

ಇಲ್ಲಿ ವಿಜ್ಞಾನವಾದವೂ ಮುಖ್ಯವಲ್ಲ, ದೇವರ ಬಗೆಗಿನ ಭಾವನಾತ್ಮಕ ನಿಲುವು ಮುಖ್ಯ. ಭಗವಾನ್ ವಿಷ್ಣು ಈ ಜಗತ್ತನ್ನು ಸೃಷ್ಟಿಸಿದ, ಭಕ್ತರನ್ನು ಸಲಹಿದ ಹಾಗೂ ವಿಷ್ಣುವಿಗೆ ದಶಾವತಾರಗಳಿವೆ:

೧. ಮತ್ಸ್ಯ – ಜಗತ್ತಿನ ಸೃಷ್ಟಿ

೨. ಕೂರ್ಮ – ಜಗತ್ತನ್ನು ಆಧರಿಸುವುದು

೩. ವರಾಹ – ಹಂದಿಯ ರೂಪ -ಹಿರಣಾಕ್ಷನ ವಧೆ

೪. ನರಸಿಂಹ – ಹಿರಣ್ಯಕಶಿಪುವಿನ ವಧೆ

೫. ಬಲಿ – ಬಲಿಯ ತಲೆಯ ಮೇಲೆ ಕಾಲಿಟ್ಟು ಅವನನ್ನು ನರಕಕ್ಕೆ ಕಳೆಸುವುದು

೬. ಪರಶುರಾಮ – ಕಾರ್ತವೀರ‍್ಯಾರ್ಜುನನ ವಧೆ

೭. ರಾಮ – ರಾವಣವಧೆ

೮. ಕೃಷ್ಣ – ಕಂಸವಧೆ

ಅವನಿಗೆ ವಿಶ್ವ ರೂಪವಿದೆ. ಬಾಲಕೃಷ್ಣ ಮಣ್ಣು ತಿನ್ನುವಾಗ ನೋಡಿದ ಯಶೋಧೆಯು ಅವನ ಬಾಯಿಯಿಂದ ಮಣ್ಣು ತೆಗೆಯಲು ಹೊರಟಾಗ, ಬಾಲಕೃಷ್ಣ ಬಾಯಿ ತೆರೆದ. ಆಗ ಅವಳಿಗೆ ಕಂಡದ್ದು ವಿಶ್ವರೂಪ, ಅನಂತರ ಅವನ ವಿಶ್ವರೂಪ ಕಾಣಿಸಿದ್ದು ಅರ್ಜುನನಿಗೆ.

ವೇದಗಳರಸಿ ಕಾಣದ ಪರಬ್ರಹ್ಮ ನೀ
ಮೋದದಿಂದ ಶಿರದಿ ಕರವಿಡೆ ಬರಲು
ತರುಣಿಯ ರೂಪವ ತಾಳಿ ದೈತ್ಯನ
ಹರಣವನೆಳೆದೆನು ನೀಕಲಿತೆಯೋ ರಂಗ ||”

ಪ್ರತಿಯೊಬ್ಬ ದೇವರಿಗೂ ಅವರದೇ ಆದ ಕರ್ತವ್ಯವಿದ :

ವಿಷ್ಣುಸತ್ವ
ಬ್ರಹ್ಮರಜಸ್
ಶಿವತಮಸ್ಸು

ಮೂರು ಗುಣಗಳಂತೆ ದೇವರು ಕೆಲಸ ಮಾಡುತ್ತಾರೆ. ಹಾಗೆಯೇ ಸೃಷ್ಟಿ, ಸ್ಥಿತಿ, ಲಯದ ಅಧಿಕಾರವನ್ನು ಹೊಂದಿದ್ದಾರೆ. ಬ್ರಹ್ಮ ಸೃಷ್ಟಿಕರ್ತ, ವಿಷ್ಣುವಿಗೆ ಸ್ಥಿತಿ ಹಾಗೂ ಶಿವ ಲಯಾಧಿಕಾರ ಹೊಂದಿದವನು. ಇವಕ್ಕೆ ಸಂಬಂಧಿಸಿದಂತೆ ಎರಡು ಕತೆಗಳು ಭಾಗವತ ಸಂಪ್ರದಾಯದಲಿ ಪ್ರಚಲಿತವಿದೆ. ಒಂದು ವಿಷ್ಣು ಮತ್ತು ಬ್ರಹ್ಮರಿಗೆ ಒಂದು ದಿನ ಚರ್ಚೆ ಬರುತ್ತದೆ. ಬ್ರಹ್ಮ, ವಿಷ್ಣುವಿಗೆ ಹೇಳುತ್ತಾನೆ : ನಾನು ನಿನಗಿಂತ ಶ್ರೇಷ್ಠ ವಿಷ್ಣು ಅದಕ್ಕೆ ಪ್ರತಿಯಾಗಿ “ನಾನು ನಿನಗಿಂತ ದೊಡ್ಡವನು” ಎಂದು ಹೇಳುತ್ತಾನೆ. ಇಬ್ಬರ ಚರ್ಚೆ ತಾರಕಕ್ಕೆ ಏರುತ್ತದೆ. ಕೊನೆಗೆ ವಿಷ್ಣು ಹೇಳುತ್ತಾನೆ: ನಿನ್ನ ಹೊಟ್ಟೆಯ ಒಳಗೆ ಹೋಗಿ ನೋಡುತ್ತೇನೆ. ಅದರಲ್ಲಿ ಏನು ಕಾಣಿಸುತ್ತದೆ ಎಂಬುದರಿಂದ ನಿನ್ನ ಶ್ರೇಷ್ಠತೆಯನ್ನು ಒಪ್ಪುತ್ತೇನೆ. ಬ್ರಹ್ಮ ಒಪ್ಪಿಕೊಳ್ಳುತ್ತಾನೆ. ಅದರಂತೆ ವಿಷ್ಣು ಬ್ರಹ್ಮನ ಬಾಯಿಯ ಮೂಲಕ ಹೊಟ್ಟೆಯ ಒಳಗೆ ಹೋಗುತ್ತಾನೆ. ಬ್ರಹ್ಮ ಹೇಳುತ್ತಾನೆ. “ಏನಿದೆ ನನ್ನ ಹೊಟ್ಟೆಯಲ್ಲಿ ?” ವಿಷ್ಣು ಹೇಳುತ್ತಾನೆ : “ಏನೂ ಇಲ್ಲ”, ಬ್ರಹ್ಮ : “ಹಾಗಿದ್ದರೆ ಹೊರಗೆ ಬಾ”, ವಿಷ್ಣು : “ಸರಿ ಎಲ್ಲಿಂದ ಬರಲಿ ಬ್ರಹ್ಮ ? ಅಧೋದ್ವಾರದ ಮೂಲಕ ಬಾ” ಅದರಿಂದಾಗಿ ವಿಷ್ಣುವಿಗೆ “ಅಧೋಕ್ಷಜ”|| ಎಂಬ ಹೆಸರು ಬಂತು. ಬ್ರಹ್ಮ ವಿಷ್ಣುವಿನ ಹೊಟ್ಟೆಯೊಳಗೆ ಹೋಗುತ್ತಾನೆ. ಅವನಿಗೆ ವಿಷ್ಣುವಿನ ಹೊಟ್ಟೆಯಲ್ಲಿ ಬ್ರಹ್ಮಾಂಡ ಕಾಣಿಸುತ್ತದೆ. ಆದರೆ ವಿಷ್ಣು ತನ್ನ ನವ ದ್ವಾರಗಳನ್ನು ಮುಚ್ಚಿಕೊಳ್ಳುತ್ತಾನೆ. ಬ್ರಹ್ಮ ಹೊರಬರಲು ಅವಕಾಶ ಕೊಡು ಎಂದು ಪ್ರಾರ್ಥಿಸುತ್ತಾನೆ. ಕೊನೆಗೆ ವಿಷ್ಣುವಿನ ಹೊಕ್ಕುಳಿನ ಮೂಲಕ ಬ್ರಹ್ಮ ಹೊರಬರುತ್ತಾನೆ. ಅವನು ವಿಷ್ಣುವಿನ ಹೊಕ್ಕುಳದ್ವಾರದ ಮೂಲಕ ಮೇಲೆ ಬರುವಾಗ ಒಂದು ಕಮಲವೂ ಇರುತ್ತದೆ. ವಿಷ್ಣುವಿನ ಹೊಕ್ಕುಳದ್ವಾರದ ಮೂಲಕ (ಕಮಲದ ದ್ವಾರ) ಮೇಲೆ ಬಂದ ಬ್ರಹ್ಮ ಕಮಲದ ಮೇಲೆ ಕುಳಿತು ವಿಷ್ಣುವಿನ ಭಜನೆ ಮಾಡುತ್ತಾನೆ. ಆದುದರಿಂದ ಬ್ರಹ್ಮನಿಗೆ “ಕಮಲಭವ” ಎಂಬ ಹೆಸರು ಬಂತು.

ಎರಡನೆಯ ಕತೆಯು ಹೀಗಿದೆ : ವಿಷ್ಣು ನಿದ್ದೆ ಮಾಡುತ್ತಿರುವಾಗ ತನ್ನ ಕಿವಿಯಲ್ಲಿರುವ ಕಲ್ಮಶವನ್ನು ತೆಗೆದು ಬಿಸಾಕುತ್ತಾನೆ. ಅದರಿಂದ ಮಧು ಕೈಟಭರೆಂದು ರಾಕ್ಷಸರು ಹುಟ್ಟುತ್ತಾರೆ. ವಿಷ್ಣು ಅವರನ್ನು ಸೋಲಿಸುತ್ತಾನೆ. ಕೊನೆಗೆ ರಾಕ್ಷಸರು ವಿಷ್ಣುವಿಗೆ ಶರಣಾಗತಿ ಹೊಂದಿ ನಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡು ಎಂದು ಕೇಳುತ್ತಾರೆ. ವಿಷ್ಣು ಅಭಯ ಕೊಡುತ್ತಾನೆ. ಮಧು ಕೈಟಭರನ್ನು ಕೊಂದ ಮೇಲೆ ಅವರ ಶವದಿಂದ ಭೂಲೋಕ ಹುಟ್ಟಿತು. ಮಧುವಿನ ಹೆಸರಿನಿಂದ “ಮೇಧಿನಿ” ಹುಟ್ಟಿತು.

ಈ ಮೂಲಕ ವಿಷ್ಣು ಸರ್ವೋತ್ತಮ; ಈ ಭೂಮಿಯ ಉತ್ಪತ್ತಿಗೆ ಅವನೇ ಕಾರಣವಾದನು ಎಂದು ಭಾಗವತ ಸಂಪ್ರದಾಯ ಸೂಚಿಸಿತು. ವಿಷ್ಣುವೇ ಎಲ್ಲಾ ಕಾರ್ಯ ಕಾರಣಗಳಿಗೆ ಸಂಬಂಧಿಸಿದವನಾದುದರಿಂದ ಅವನ ಭಜನೆಯು ಸುಖ ತರುವುದು. ವಿಷ್ಣುವನ್ನು ಭಜಿಸುವುದೆಂದರೆ ಸ್ವ-ಸಂಪನ್ಮೂಲವನ್ನು ತ್ಯಜಿಸುವುದು ಮತ್ತು ಸಂಸಾರದ ಋಣದಿಂದ ವಿಮುಕ್ತನಾಗುವುದು. ಅಧಿಕಾರವು ಈ ರೀತಿಯ ವಿಮುಕ್ತತೆಯನ್ನು ಬಯಸುವುದಿಲ್ಲ. ಅದರ ಬದಲು ಸಂಪನ್ಮೂಲದ ಶೇಖರಣೆ ಬಯಸುತ್ತದೆ. ಭಜನೆಯೆಂದರೆ ಅದು ಮಾನಸಿಕವಾದ ಖಿನ್ನತೆ; ಮನೋಕ್ಲೇಶವನ್ನು ದೂರ ಮಾಡುತ್ತದೆ. ಭಾರತದಲ್ಲಿ ಭಕ್ತಿ ಮಾರ್ಗ ಅಷ್ಟೊಂದು ಪ್ರಚಾರಕ್ಕೆ ಬಂದಿರುವುದಕ್ಕೆ ಇದು ಒಂದು ಕಾರಣ. ಈಗ ನಾವು “ಪ್ರಗತಿಪರತೆ”ಯ ಹೆಸರಿನಲ್ಲಿ ಅದನ್ನು ಖಂಡಿಸುತ್ತೇವೆ ಅಷ್ಟೆ. ದಾಸರ ಕೀರ್ತನೆಯು ಒಂದೆಡೆ ಕುಳಿತು ಆಚರಿಸುವ ವಿಧಾನವಲ್ಲ. ಕೃಷ್ಣ ಚರಿತೆಯನ್ನು ಹೇಳುತ್ತಾ ತಿರುಗುವುದು ದಾಸ ಸಾಹಿತ್ಯದ ಮುಖ್ಯ ಲಕ್ಷಣ. ಒಂದೆಡೆ ಕುಳಿತುಕೊಳ್ಳಬೇಕಾಗಿಲ್ಲ. ಅದಕ್ಕೆ ಮತ ಸಂಬಂಧಿಯಾದ ಆಚರಣೆಯು ಮುಖ್ಯವಲ್ಲ. ಹಾಗೆಯೇ ಭಜನೆಗಳು ಮಂತ್ರವಲ್ಲ. ಇದರ ತಾತ್ವಿಕತೆಯೇ ಬೇರೆ,

ಕಂಡು ಕಂಡು ನೀ ಎನ್ನ ಕೈ ಬಿಡುವರೆ |
ಪುಂಡರೀಕಾಕ್ಷ ಶ್ರೀ ಪುರಷೋತ್ತಮ
……..
ಭಕ್ತವತ್ಸಲನೆಂಬೋಬಿರುದು ಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೆ
ಮುಕ್ತಿ ದಾಯಕ ದೇವ ಪುರಂದರ ವಿಠಲನೆ
ಶಕ್ತ ನೀನಹುದೆಂದು ನಂಬಿದೆನೊ ಕೃಷ್ಣಾ

ಭಜನೆಯ ಕಾರ್ಯದಲ್ಲಿ ಎಲ್ಲಾ ಜಾತಿಯವರು ಸೇರಬಹುದು. ಅದು ಜಾತಿಯ ಚೌಕಟ್ಟನ್ನು ಮೀರಿದೆ. ಭಜನೆಯನ್ನು ಹಾಡಲು ದೇವಸ್ಥಾನವೇ ಇರಬೇಕೆಂದೇನೂ ಇಲ್ಲ. ಎಲ್ಲಾ ಜನರು ಈ ಮೂಲಕ ದೇವರನ್ನು ಸ್ತುತಿಸಬಹುದು. ಈ ಮೂಲಕ ಅವರು ದೇವರ ಸೇವಕರಾಗಬಹುದು. ಈ ರೀತಿಯ ಧೋರಣೆಯಲ್ಲಿ ದೇವರು ಮತ್ತು ಮನುಷ್ಯರ ನಡುವೆ ಮಧ್ಯವರ್ತಿಗಳಾದ ಪುರೋಹಿತರು ಬೇಕಾಗಿಲ್ಲ. ಪುರಂದರದಾಸರ ಕೀರ್ತನೆಗಳಲ್ಲಿ ಹೆಚ್ಚಾಗಿ ಕಾಣಿಸುವುದು ಸಖ್ಯಭಾವ. ಕೃಷ್ಣ ಅರ್ಜುನರು ಇದ್ದ ಹಾಗೆ. ಆದರೆ ಯಾವುದೇ ಅಧಿಕಾರವಿರಲಿ, ಅದು ಉಳಿದವರ ಮೇಲೆ ಅಧಿಕಾರ ಚಲಾಯಿಸುತ್ತದೆ. ಅಲ್ಲಿ ಸಖ್ಯಭಾವವು ಉಳಿಯಲು ಸಾಧ್ಯವಿಲ್ಲ.

ಪುರಂದರದಾಸರ ಕೀರ್ತನೆಗಳಲ್ಲಿ ಎದ್ದು ಕಾಣುವ ಮತ್ತೊಂದು ಅಂಶವೆಂದರೆ ಅವು ದೇವರೊಡನೆ ನೇರವಾಗಿ ಮಾತಾಡುತ್ತವೆ. ದೇವರೊಡನೆ ಜಗಳ ಮಾಡುತ್ತವೆ. ತಾರ್ಕಿಕವಾದ ಜ್ಞಾನ ಇಲ್ಲಿ ಮುಖ್ಯವಲ್ಲ. ಗೋಪಮ್ಮ ಹತ್ತಿರ ದಾಸರು ಬಂದು ಕೃಷ್ಣನ ಬಗ್ಗೆ ದೂರು ಕೊಡುತ್ತಾಳೆ.

ನಿನ್ನ ಮಗನ ಬಾಧೆ ಬಹಳವಾಗಿರೆ
ಇನ್ನಷ್ಟು ತಾಳುವೆವೆ ಗೋಪಮ್ಮ

ಹಾಗೆ ನೋಡುವುದಿದ್ದರೆ “ಮಂತ್ರ” ಅನ್ನುವುದು ಈ ದೇಶದಲ್ಲಿ ಕೆಲವರ ಸ್ವತ್ತು ಆಯಿತು. ಮಂತ್ರಗಳಿರುವುದೇ ಸಂಸ್ಕೃತದಲ್ಲಿ. ಸಂಸ್ಕೃತದ ಪರಿವೇಷದಲ್ಲಿರುವ ಮಂತ್ರಗಳು ಸರಳವಾಗಿರಲಿಲ್ಲ. ಅವು ಜನಸಾಮಾನ್ಯರಿಗೆ ಅರ್ಥವೂ ಆಗುತ್ತಿರಲಿಲ್ಲ. ಹೀಗಾಗಿ ದೇವರು ಮತ್ತು ಭಕ್ತರ ಮಧ್ಯೆ ಪೂಜಾರಿಗಳು ತಮ್ಮ ಮಂತ್ರ ’ಪವಿತ್ರ’ವೆಂದೂ, ಅದಕ್ಕೆ ಮ್ಯಾಜಿಕಲ್ ಎನ್ನಬಹುದಾದ ಗುಣವಿದೆಯೆಂದೂ ಪ್ರತಿಪಾದಿಸಿದರು. ಮಂತ್ರವನ್ನು ಎಲ್ಲರೂ ಉಚ್ಛರಿಸಬಾರದು. ಅದನ್ನು ಉಚ್ಛರಿಸಿದರೆ ಮಂತ್ರದ ಶಕ್ತಿಯು ಹೊರಟುಹೋಗುತ್ತವೆ ಎಂದು ಪ್ರತಿಪಾದಿಸಿದರು. ಉದಾ : “ಗಾಯತ್ರಿ ಮಂತ್ರ” ವೇದದ ಪ್ರಕಾರ, ಇಂತಹ ಮಂತ್ರಗಳಿಂದ ದೇವರನ್ನು ಒಲಿಸಿಕೊಳ್ಳಬಹುದು. ಯಾರು ಮಂತ್ರಗಳನ್ನು ಕಲಿತು ಉಚ್ಛರಿಸುತ್ತಾರೋ ಅವರಿಗೆ ರಾಜನಿಗಿಂತಲೂ ಹೆಚ್ಚು ಶಕ್ತಿಯಿದೆಯೆಂದು ಪ್ರಚುರಪಡಿಸಲಾಯಿತು. ದಾಸ ಪಂಥದ ಪ್ರಮುಖ ಸಾಧನೆಯೆಂದರೆ, ಈ ರೀತಿಯ ನುಡಿಗಟ್ಟುಗಳನ್ನು ಮುರಿದು ಹಾಕಿದ್ದು, ರಾಜರು, ಪುರೋಹಿತರು ಇವರೆಲ್ಲರಿಗಿಂತ ಕೃಷ್ಣ ದೊಡ್ಡವನು. ಅವನಿಗೆ ಪರಮೋಚ್ಛ ಶಕ್ತಿಯಿದೆ. ಅದಕ್ಕಾಗಿಯೇ ಅವನ ದಯೆಯು ಬೇಕಾಗಿದೆ.

ದಯ ಮಾಡೋ ರಂಗ ದಯಮಾಡೊ
ದಯಮಾಡೊ ನಿನ್ನ ದಾಸನು ನಾನೆಂದು
ಹಲವು ಕಾಲದಿ ನಿನ್ನ ಹಂಬಲು ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ

ಇಲ್ಲಿ ಹೇಳಬೇಕಾದ ಮತ್ತೊಂದು ಅಂಶವಿದೆ. ಭಾರತದ ಎಲ್ಲಾ ರಾಜರಿಗೂ ಧಾರ್ಮಿಕ ನಂಬಿಕೆಯಿತ್ತು. ಆದರೆ ಭಾರತದಲ್ಲಿ ಒಂದೇ ಧರ್ಮ, ಒಂದೇ ಆರಾಧನೆಯೆಂಬುದಿರಲಿಲ್ಲ. ಇದರ ಅರ್ಥವಿಷ್ಟೆ; ಇಡಿಯ ಪ್ರಭುತ್ವವು ಧರ್ಮ ಸೂತ್ರವನ್ನು ಬಿಟ್ಟಿದೆಯೆಂದಲ್ಲ. ಪ್ರಭುತ್ವದ ಆಡಳಿತಾತ್ಮಕ ಸೂತ್ರಗಳಿಗೆ ಕೆಲವರು ಧರ್ಮಶಾಸನವನ್ನು ಅವಲಂಬಿಸಿಕೊಂಡಿರುವುದು ಅಷ್ಟೇ ನಿಜ. ರಾಜನಿಗೆ ದೇವರ ಸ್ಥಾನವನ್ನು ಕೊಟ್ಟವರೂ ಇದ್ದಾರೆ. ’ರಾಜೋ ಪ್ರತ್ಯಕ್ಷ ದೇವತಾ’ ರಾಜ, ಸಾಮಾನ್ಯರನ್ನು ಪಾಲಿಸುತ್ತಾನೆ. ರಾಜ ಧರಣಿಯ ಪಾಲಕ ಮತ್ತು ಧರಣಿಯ ಗಂಡ. ಆದರೆ ಅದಕ್ಕೆ ತದ್ವಿರುದ್ಧವಾದ ನಿಲುವು ದಾಸ ಪಂಥದ್ದು.

ದಾಸರ ಪಂಥ, ಶೈವ ಪಂಥ, ಶಾಕ್ತ ಪಂಥ ತಾತ್ವಿಕವಾಗಿ ಭಿನ್ನವಾಗಿವೆ. ಅವುಗಳ ಆರಾಧನೆಯ ಕ್ರಮದಲ್ಲಿಯೂ ಭಿನ್ನತೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ದಾಸ ಪಂಥ ಶೂನ್ಯವನ್ನು ಆರಾಧಿಸುವುದಿಲ್ಲ. ಕೃಷ್ಣನ ಪರಿಕಲ್ಪನೆಯೇ ಪುರಂದರದಾಸರಲ್ಲಿ ಸೃಜನಾತ್ಮಕವಾಗಿದೆ. ಶೈವ ಪಂಥ ಈ ಪ್ರತಿಮಾತ್ಮಕ, ಸೃಜನಾತ್ಮಕವಾದ ಆರಾಧನೆಯನ್ನು ವಿರೋಧಿಸುತ್ತದೆ.

ಮತದೊಳಗೆ ಒಳ್ಳೆ ಮತ ಮಧ್ಯವತರವು
ರಘುಪತಿ ಪೂಜಾ ವಿಧಾನಕೆ ಪಾವನ ಮತವು
ನಾರಾಯಣನ ನಾಮ ಸ್ಮರಣೆ ನಂಬಿದವಂತವು
ವೇದ ಪಾರಾಯಣಕೆ ಅನುಕೂಲ ಮತವು
ತಾರತಮ್ಮದಿ ಉದ್ಧರಿಸಿ ಶ್ರುತಿಗಳ ನೊರೆದ
ಧಾರಿಣಿ ಸುರರ ಸಂತೋಷ ಮತವು

ಮಾಧ್ವ ಸಂಪ್ರದಾಯದ ನಿಲುವನ್ನು ಇದು ವ್ಯಕ್ತಪಡಿಸುತ್ತದೆ.

ಮಧ್ವ ಮುನಿಯೆ ಗುರು ಮಧ್ವ ಮುನಿಯೆ
ಮಧ್ವಮುನಿ ನಮ್ಮೆಲ್ಲರ ಉದ್ಧರಿಸುವ ಕಾಣಿರೋ

ಭಾರತೀಯ ಪ್ರಭುತ್ವದ ಕಲ್ಪನೆಯೇ ವಾಸ್ತವವಾಗಿ ಭಿನ್ನ ರೂಪದ್ದು, ಧಾರ್ಮಿಕ ನೆಲೆಗೆ ಬಂದರೆ ದೇವರು ಪ್ರಭು, ಸಾಮಾಜಿಕ ಹಿನ್ನೆಲೆಗೆ ಬಂದರೆ ಲೌಕಿಕದ ರಾಜರು ಪ್ರಭುಗಳು. ಈ ಮೊದಲು ವಿವರಿಸಿದಂತೆ ಲೌಕಿಕದ ರಾಜರು ರಾಜ್ಯವನ್ನು ಆಳಿದ್ದು ಯುದ್ಧದಿಂದ ಮಾತ್ರವೇ ಅಲ್ಲ. ಬ್ರಿಟಿಶರು ಬಂದ ಮೇಲೆ ಅಧಿಕಾರದ ವ್ಯಾಖ್ಯೆಗಳು ಬದಲಾದವು. ಅಧಿಕಾರವೆಂದರೆ ಅದು ಕಾನೂನು ಮತ್ತು ನಿಯಮಾವಳಿಗಳು ಎಂದು ಭಾವಿಸಿದ್ದು ಬ್ರಿಟಿಶರು. ಅಧಿಕಾರವೆಂದರೆ ಒಂದು ಕೇಂದ್ರವಿದೆಯೆಂದು ಬ್ರಿಟಿಶರು ಭಾವಿಸಿದರು. ಆದುದರಿಂದಲೇ ಗಾಂಧಿ ರಾಜಧರ್ಮ, ರಾಮರಾಜ್ಯ, ಸತ್ಯಯುಗ, ಅಹಿಂಸೆ ಮುಂತಾದ ಪರಿಕಲ್ಪನೆಗಳನ್ನು ತಮ್ಮ ರಾಜಕೀಯ ಹೋರಾಟದಲ್ಲಿ ಬಳಸಿಕೊಂಡರು. ಈ ಹಿನ್ನೆಲೆಯಿಂದ ಹೇಳುವುದಿದ್ದರೆ ವಿನಯ ಮತ್ತು ಭಕ್ತಿ ನಮ್ಮ ಜೀವನ ಕ್ರಮದಲ್ಲಿ ಹಾಸುಹೊಕ್ಕಾಗಿವೆ.

ಭಕ್ತಿಯು ಕೆಲವು ಮಾದರಿಗಳನ್ನು ಹೊಂದಿವೆ.

ಅ) ರಸ (ಸೌಂದರ್ಯಶಾಸ್ತ್ರದ ಪರಿಕಲ್ಪನೆ-ರಸಾನಂದವು ಅಲೌಕಿಕವೇ).

ವಿಜಯನ ಸತಿಯಿಂದ ಕಾಯಾಯಿತು ಅದು
ಗಜೇಂದ್ರನಿಂದ ದೋರೆ ಹಣ್ಣಾಯ್ತು
ಶ್ರೀ ಶುಕ ಮುನಿಯಿಂದ ಪರಿಪಕ್ವವಾಯಿತು
ಅಜಾಮಿಳ ತಾನುಂಡು ರಸಸವಿದು.”
(
ರಸಭಕ್ತಿಯ ಸಾರವೆಂದರೆ ನಾಮ ಸ್ಮರಣೆ)

ಆ) ದಾಸ್ಯ – ದಾಸ (ಒಬ್ಬ ಆಳಿನಲ್ಲಿ ಇರಬೇಕಾದ ಗುಣ)

ಧರೆಯೊಳು ಸುಜನರ ಪೊರೆಯುತ್ತಿರುವನ
ಪುರಂದರವಿಠಲನ ಚರಣ ಕಮಲವ

ಇ) ಅಲೌಕಿಕವಾದ, ತಲ್ಲೀನತೆಯಲ್ಲಿ ದೇವತ್ವದ ಆರಾಧನೆ.

ಈ) ವೈರಾಗ್ಯ

ಪುರಂದರದಾಸರ ಕೀರ್ತನೆಗಳಲ್ಲಿ ಈ ಗುಣಗಳು ಎದ್ದು ಕಾಣಿಸುತ್ತವೆ. ಪುರಂದರದಾಸರು ದೇವರನ್ನು ದಾಟಿ ಮುಂದೆ ಹೋಗುವುದಿಲ್ಲ. ಪುರಂದರದಾಸರು ಕೃಷ್ಣನನ್ನು ಕೂಗಿ ಕರೆಯುವಾಗ ತಮ್ಮ ವಿನಯವನ್ನು ಪ್ರದರ್ಶಿಸುತ್ತಾರೆ. ಅವರ ಕೀರ್ತನೆಗಳಲ್ಲಿ ಆಶ್ರಿತ ಭಾವವಿದೆ. ದಾಸನ ಗುಣವಿದೆ. ಕೃಷ್ಣನ ಬಗ್ಗೆ ಮಧುರವಾದ ಭಾವನೆಗಳಿವೆ. ಈ ದೃಷ್ಟಿಯಿಂದ ಬ್ರಿಟಿಷರು ಚರಿತ್ರೆಯನ್ನು ಬರೆದ ಕ್ರಮಕ್ಕೂ-ನಾವೀಗ ವಸಾಹತು ಪೂರ್ವದ ಚಳುವಳಿಗಳನ್ನು ನೋಡುವ ಕ್ರಮಕ್ಕೂ ಭಿನ್ನತೆಯಿದೆ. ಈ ನಿಟ್ಟಿನಿಂದ ಪುರಂದರದಾಸರ ಕೀರ್ತನೆಗಳನ್ನು ಬೇರೆ ರೀತಿಯಲ್ಲಿ ನೋಡಬಹುದು. ನಮ್ಮಲ್ಲಿರುವ ಅನೇಕ ಮೌಖಿಕ ಸಂಪ್ರದಾಯ ಪಠ್ಯಗಳನ್ನು ನಾವು ನೋಡುವ ಕ್ರಮದಲ್ಲಿಯೇ ಭಿನ್ನತೆಯನ್ನು ಸಾಧಿಸಿಕೊಳ್ಳಬೇಕು.

ಬ್ರಿಟಿಶ್ ಸರಕಾರ ವಸಾಹತು ಪೂರ್ವದ ಸನ್ನಿವೇಶ

೧. ಆಜ್ಞೆ – ದಂಡ

೨. ಅಭಿವೃದ್ಧಿ – ಭಕ್ತಿ

೩. ವಿನಯ – ಭಕ್ತಿ

೪. ಅಗತ್ಯವಿದ್ದರೆ – ಕಾನೂನಿನ ಪ್ರಶ್ನೆಯಿಲ್ಲ.

ಕಾನೂನಿನ ಮೂಲಕ ದಮನ

ಭಿನ್ನಾಭಿಪ್ರಾಯ ತೋರಿಸುವುದುಧಾರ್ಮಿಕ ಪ್ರತಿಭಟನೆ

ಈ ರೀತಿಯ ಎಲ್ಲಾ ಸಂಗತಿಗಳನ್ನು ಪುರಂದರದಾಸರ ಭಕ್ತಿಯು (ಲೌಕಿಕದಿಂದ) ಮೀರಿ ನಿಲ್ಲುತ್ತದೆ. ಈ ಕಾರಣಕ್ಕಾಗಿಯೇ “ದಾಸರೆಂದರೆ ಪುರಂದರದಾಸರಯ್ಯ” ಎನ್ನುವ ಉಕ್ತಿಯು ಜಾರಿಗೆ ಬಂದಿರುವುದು.