ಪ್ರಭು ಎಂಬ ಪದಕ್ಕೆ ಎರಡು ಅರ್ಥಗಳಿವೆ. ಒಂದು ಲೌಕಿಕಕ್ಕೆ ಸಂಬಂಧಿಸಿದ್ದು, ಇನ್ನೊಂದು ಪಾರ ಲೌಕಿಕಕ್ಕೆ ಸಂಬಂಧಿಸಿದ್ದು. ಲೌಕಿಕಕ್ಕೆ ಸಂಬಂಧಿಸಿದ್ದನ್ನು ನೇರವಾಗಿ ಆಳುವವನು ಎಂಬ ಅರ್ಥವನ್ನು ಸೂಚಿಸುತ್ತದೆ. ಲೌಕಿಕದಲ್ಲಿ ನಮ್ಮನ್ನು ಯಾರು ಆಳುತ್ತಾರೋ ಅವರನ್ನು ಪ್ರಭು ಎಂದು ಕರೆಯುತ್ತೇವೆ. ಇನ್ನೊಂದು ಪಾರಲೌಕಿಕಕ್ಕೆ ಸಂಬಂಧಿಸಿದ್ದು. ಹನುಮಂತ ರಾಮನನ್ನು ಕರೆಯುವುದು “ಪ್ರಭು-ರಾಮಚಂದ್ರ” (ಸೀತೆ/ದಮಯಂತಿ/ಚಂದ್ರಮತಿ – ತಮ್ಮ ಗಂಡನನ್ನು ಕರೆಯುವುದು ಆರ್ಯಪುತ್ರ ಎಂದು) ಎಂತಲೇ. ಇಲ್ಲಿ ‘ಆಳುವುದು’ ಎಂದರೆ ಬೇರೆ ಅರ್ಥದಲ್ಲಿ. ಇದಕ್ಕೆ ಕೇವಲ ಲೌಕಿಕದ ಅರ್ಥ ಮಾತ್ರವಿರದೆ ಪಾರಲೌಕಿಕದ ಅರ್ಥವೂ ಇದೆ. ವಾಸ್ತವವಾಗಿ ಭಾರತೀಯ ತತ್ವಜ್ಞಾನದ ಪರಿಭಾಷೆಯಲ್ಲಿ ‘ಪ್ರಭು’ ಎಂದರೆ ‘ದೇವರು’, ‘ಯಜಮಾನ’, ಶಕ್ತಿವಂತ ಮುಂತಾದ ಅರ್ಥಗಳಿವೆ. ಈ ಶಬ್ದದ ವ್ಯುತ್ಪತ್ತಿಯು ಹೀಗಿದೆ : “ಭೂ” ಆಗು; ಆಳು; ಇದರ ಹಿನ್ನೆಲೆಯನ್ನು ಗಮನಿಸಿ ಹೇಳಬೇಕೆಂದರೆ ‘ಪ್ರಭುತ್ವ’ ಎಂಬುದಕ್ಕೆ ಒಂದು ಅರ್ಥವಿಲ್ಲ. ಅದಕ್ಕೆ ನಾನಾ ಅರ್ಥಗಳಿವೆ. ಆದರೆ ಸಾಮಾನ್ಯವಾಗಿ ಒಬ್ಬ ಇನ್ನೊಬ್ಬನ ಮೇಲೆ, ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ಹಿಡಿತ ಸಾಧಿಸುವುದು ಮತ್ತು ಯಾರು ಹಿಡಿತಕ್ಕೆ ಒಳಗಾಗಿದ್ದಾರೋ ಅವರು ತಮ್ಮ ಮೇಲೆ ಅಧಿಕಾರ ಸ್ಥಾಪಿಸಿದವರನ್ನು ‘ಯಜಮಾನ’, ‘ಪ್ರಭು’, ‘ಧಣಿ’, ‘ದೊರೆ’ ಎಂದು ಕರೆಯುವುದು ವಾಡಿಕೆ. ಈ ಪದಗಳ ಮತ್ತೊಂದು ರೂಪವೆಂದರೆ ಸಾಹುಕಾರ, ಗೌಡ, ಜಮೀನ್ದಾರ, ಸ್ವಾಮಿ, ಪಟೇಲ ಪದಗಳು. ಸಂದರ್ಭಕ್ಕೆ ಅನುಸಾರವಾಗಿ ಇದರ ಅರ್ಥ ಬೇರೆಯಾಗುತ್ತದೆ. ಇವುಗಳ ಹಿನ್ನೆಲೆಯಿಂದ ನಾವು “ಪ್ರಭುತ್ವ” ಎಂಬುದನ್ನು ನೋಡಿದರೆ ಅದು ಬಾಹ್ಯದ ವ್ಯಾಪಾರಕ್ಕೆ ಸಂಬಂಧಿಸಿದ್ದಾಯಿತು. ಇವುಗಳು ಲೌಕಿಕದ ಅರ್ಥಗಳನ್ನು ಒಳಗೊಂಡಿವೆ. ದೈಹಿಕವಾಗಿ ಒಬ್ಬರನ್ನು ಇನ್ನೊಬ್ಬನನ್ನು ಆಳುವುದು, ನಮ್ಮ ಕಣ್ಣಿಗೆ ಕಾಣಿಸುತ್ತದೆ. ಇದು ಸಾಮಾಜಿಕ ವರ್ಗ ರಾಜಕಾರಣವಾಯಿತು. ಇದರ ಮತ್ತೊಂದು ರೂಪವು ಸಮಾಜದ ಅಥವಾ ಸಂಸ್ಕೃತಿಯ ಅತ್ಯಂತ ಸಣ್ಣ ಘಟಕವಾದ ಕುಟುಂಬದಲ್ಲಿ ಶಾಲಾ ಕಾಲೇಜುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಯಾರು ಮನೆಯ ಯಜಮಾನರಾಗಿರುತ್ತಾರೋ ಅವರು ಕುಟುಂಬದ ಬಾಹ್ಯದ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಅವರು ಹೆಂಡತಿ, ಮಕ್ಕಳ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ. ಮನೆಯ ಹೆಂಗಸರ ಕೆಲಸ ಮನೆಯೊಳಗಿನದು. ಅವರಿಗೆ ಅಡುಗೆ ಮನೆ ಮತ್ತು ಹಿತ್ತಲ ಜಗುಲಿ ಮಾತ್ರ ಅವರ ವ್ಯಾಪ್ತಿಗೆ ಸಂಬಂಧಿಸಿದ್ದು. ಹಿತ್ತಲ ಜಗಲಿಯಿಂದ ಮನೆಯ ಹೊರಗಿನ ಜಗತ್ತನ್ನು ನೋಡುತ್ತಾರೆ. ಅವರ ವ್ಯವಹಾರದ ಕ್ಷೇತ್ರ ‘ಅಡುಗೆ’ ಮನೆ ಮಾತ್ರ. ಮನೆಯ ಯಜಮಾನನಿಗೆ ಕೂರಲು ಪ್ರತ್ಯೇಕ ‘ಕುರ್ಚಿ’ಯಿದೆ. ಹಣದ ಡಬ್ಬದ ಕೀಲಿ ಕೈ ಅವರ ಹತ್ತಿರವಿದೆ. ಕೆಲವು ಮನೆಗಳಲ್ಲಿಯಂತೂ ಮನೆಯ ಯಜಮಾನ ಊಟ ಮಾಡಿದ ಮೇಲೆ ಮಾತ್ರ (ಊಟಕ್ಕೆ ಕೂರುವಾಗಲು ಯಜಮಾನನಿಗೆ ಅವನದೇ ಜಾಗವಿದೆ). ಉಳಿದವರು ಊಟ ಮಾಡಬಹುದು. ಮನೆಯ ಹೆಂಗಸರಿಗೆ ಕೂರಲು ಪ್ರತ್ಯೇಕ ಕುರ್ಚಿಯಿಲ್ಲ. ಎಲ್ಲರ ಊಟವಾದ ನಂತರ ಅವರು ಊಟ ಮಾಡಬಹುದು. ಈ ರೀತಿಯಲ್ಲಿ ನೋಡುವಾಗಲೂ, ಕುಟುಂಬದ ಯಜಮಾನ ಮತ್ತು ಮನೆಯ ಇತರ ಸದಸ್ಯರಿಗೆ ಇರುವ ಸಂಬಂಧಗಳಿಗೆ ಒಂದು ಲಿಖಿತವಾದ ಸಂವಿಧಾನವಿಲ್ಲ. ಕಾನೂನುಗಳಿಲ್ಲ. ಇದರ ನಡುವಣ ಮತ್ತೊಂದು ರೂಪ ಗ್ರಾಮ ಸಮಾಜದಲ್ಲಿ ಕಾಣಿಸಿಕೊಳ್ಳುತ್ತದೆ. ಊರಿನ ಪಟೇಲನಿಗೆ ಊರನ್ನು ನೋಡಿಕೊಳ್ಳುವ ಜವಾಬ್ದಾರಿಯಿರುತ್ತದೆಯೋ, ಅದೇ ರೀತಿ ಊರಿನ ವ್ಯವಹಾರದ ಜಗತ್ತನ್ನು ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಅವರ ಅಧಿಕಾರಕ್ಕೂ ಯಾವುದೇ ಲಿಖಿತ ಸಂವಿಧಾನಗಳಿಲ್ಲ. ಯಾವುದೇ ಊರೊಳಗಿನ ಕಲಹವನ್ನು ಊರಿನ ದೈವವನ್ನು; ಕೌಟುಂಬಿಕ ವ್ಯವಹಾರಗಳ ಸಂಬಂಧವನ್ನು ಬಗೆಹರಿಸುವುದು ಪಟೇಲ : ಶಾನುಬೋಗ ಮುಂತಾದ ‘ಹಿರೀಕರ’ ವ್ಯವಹಾರ ಮತ್ತು ಅಧಿಕಾರ. ಆದರೆ ಒಂದು ಸಂಗತಿಯನ್ನು ಗಮನಿಸಬೇಕು. ಯಾವುದೇ ಊರಿನಲ್ಲಿ ಪಂಚಾಯಿತಿ ಕಟ್ಟೆಯನ್ನು ಏರುವ ಅಧಿಕಾರ ಸ್ತ್ರೀಯರಿಗೆ ಇಲ್ಲ. ದಲಿತರಿಗೆ ಇಲ್ಲ, ಊರೊಗಳಗಿನ ಅಧಿಕಾರವನ್ನು ವಹಿಸಿಕೊಳ್ಳದಂತೆ ಅಸ್ಪೃಶ್ಯರ, ಕೆಳಜಾತಿಯವರ, ಸ್ತ್ರೀಯರ ಪ್ರಜ್ಞೆಯನ್ನು ನಿಯಂತ್ರಿಸಲಾಗಿದೆ. ಮತ್ತು ದಲಿತರು, ಸ್ತ್ರೀಯರು ‘ಹೀಗೆ ಇರುವುದೇ ಸತ್ಯ’ ವೆಂದು ಪರಿಭಾವಿಸಿಕೊಂಡಿದ್ದಾರೆ.

ಕೌಟುಂಬಿಕ ವ್ಯವಸ್ಥೆಯ ಅಧಿಕಾರ ರೂಪಕ್ಕೆ ನಿರ್ದಿಷ್ಟ ಸಂವಿಧಾನಗಳಲ್ಲಿ ಹಾಗೂ ಅದಕ್ಕಿರುವ ಅಲಿಖಿತ ಅಧಿಕಾರ ಅನೇಕ ಸಂದರ್ಭದಲ್ಲಿ ವ್ಯಕ್ತವಾಗದೇ ಹೋಗುತ್ತದೆ. ಆದರೆ ಈಗ ನಾವು ‘ಪ್ರಭುತ್ವ’ವನ್ನು ನಿರ್ವಚಿಸುವ ಕ್ರಮಗಳು ಬೇರೆ. ಹೀಗಿದ್ದೂ ಒಂದು ಪ್ರಶ್ನೆಯನ್ನು ನಮ್ಮ ಮುಂದಿಟ್ಟುಕೊಳ್ಳಬೇಕು : ಅದು ‘ಯಜಮಾನ’ ಮತ್ತು ಅವನು ಆಳುವ ವರ್ಗಗಳ ನಡುವಣ ಸಂಬಂಧ. ಇದು ಕೇವಲ ಸಂಘರ್ಷವಾಗಿರಬೇಕೆಂದೆನೂ ಇಲ್ಲ. ಅವುಗಳ ನಡುವೆ ಬೇರೆ ಬೇರೆ ರೀತಿಯ ಸಂವಾದಗಳಿರುತ್ತವೆ. ಪ್ರಭುತ್ವ ಮತ್ತು ಅದು ಆಳುವ ಸಾಮಾನ್ಯ ವರ್ಗಗಳ ನಡುವೆ ಇರುವ ಸಂವಾದಗಳು ಹೀಗಿರುತ್ತವೆ:

೧. ಪ್ರಭುತ್ವವನ್ನು ಅನುಕರಿಸುವ ವರ್ಗ, ಇದನ್ನು ವಿಶಾಲವಾದ ಅರ್ಥದಲ್ಲಿ ಎಂ.ಎನ್. ಶ್ರೀನಿವಾಸರು ‘ಸಂಸ್ಕೃತೀಕರಣ’ ಮತ್ತು ‘ಪಾಶ್ಚಾತ್ಯೀಕರಣ’ ಎಂದು ಗುರುತಿಸಿದರು.

೨. ಆಳುವ ವರ್ಗವನ್ನು (ಪ್ರಭುತ್ವವನ್ನು) ಅನುಕರಿಸುವ ವರ್ಗ, ಇದನ್ನು ಹೋ.ಮಿ.ಳೆ. ಬಾಬಾ ಅವರು ಅನುಕರಣಾತ್ಮಕ ನೆಲೆ (Mimetic Mode) ಎಂದು ಕರೆಯುತ್ತಾರೆ.

೩. ಪ್ರತಿರೋಧಾತ್ಮಕ : ಇದು ಪ್ರಭುತ್ವವನ್ನು ಪ್ರತಿರೋಧಿಸುವ ಮೂಲಕ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳುತ್ತದೆ. ಅಥವಾ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತದೆ. ಒಂದು ರೀತಿಯಲ್ಲಿ ಇಲ್ಲಿ ನಡೆಯುವ ಪ್ರತಿರೋಧವು ಸಶಸ್ತ್ರ ಅಥವಾ ನಿಶಸ್ತ್ರದ ಮೂಲಕವೇ ತನ್ನ ಸಾಂಸ್ಕೃತಿಕ, ರಾಜಕೀಯ ಪ್ರತಿರೋಧವನ್ನು ಒಡ್ಡುತ್ತವೆ.

೪. ಇಡಿಯ ಪ್ರಭುತ್ವವನ್ನು ನಿರಾಕರಿಸುವುದರ ಮೂಲಕ ಯಜಮಾನಿಕೆಗೆ ಒಂದು ನಿರ್ಲಕ್ಷ್ಯ ತೋರಿಸುವುದು ಮತ್ತೊಂದು ಪ್ರಕ್ರಿಯೆ. ಈ ಸಂದರ್ಭದಲ್ಲಿ ಪ್ರಭುತ್ವದ ಯಾವುದೇ ನಡೆ-ನುಡಿಯನ್ನು ಪ್ರತಿಯಾಗಿ ಕಟ್ಟಿಕೊಂಡು ಆಳಿಸಿಕೊಳ್ಳುವ ವರ್ಗ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಪರ್ಯಾಯ ಮಾರ್ಗೋಪಾಯಗಳನ್ನು ರೈಲ್ವೆ ಹಳಿಯ ರೀತಿಯಲ್ಲಿ ಕಟ್ಟುವುದಿಲ್ಲ ಎಂಬುದನ್ನು ಅರಿಯಬೇಕು. ಆಳ್ವಿಕೆಯಿಲ್ಲದಿದ್ದರೆ ಆಲಿಸುವ ವರ್ಗ ಹೊಸ ಪರಿಭಾಷೆಯನ್ನು ಕಟ್ಟಿಕೊಳ್ಳವುದಿಲ್ಲ (ರಣಜಿತ ಗುಹಾ : Dominance without Hegemony)

೫. ಪ್ರಭುತ್ವವು ಮತ್ತೊಂದು ಕೆಲಸವನ್ನು ಮಾಡುತ್ತದೆ. ಆಳಿಸಿಕೊಳ್ಳುವ ವರ್ಗವನ್ನು ತನಗೆ ಬೇಕಾದ ರೀತಿಯಲ್ಲಿ ನಿರ್ವಚಿಸುವುದು ಮತ್ತು ಆಳಿಸಿಕೊಳ್ಳುವ ವರ್ಗದ ಮನಸ್ಸು ಮತ್ತು ದೇಹ ತನ್ನ ವ್ಯಾಖ್ಯಾನಕ್ಕೆ ಅನುಸಾರವಾಗಿ ನಿರೂಪಿಸುವುದು. ಒಬ್ಬ ವ್ಯಕ್ತಿ ಹೆಚ್ಚು ಹೆಚ್ಚು ಯಜಮಾನಿಕೆಯನ್ನು ತೋರಿಸಿಕೊಂಡಂತೆ, ಆಳಿಸಿಕೊಳ್ಳುವ ವರ್ಗದ ಬುದ್ಧಿಶಕ್ತಿಯು ಬೇರೆ ಬೇರೆ ರೂಪಾಂತರವನ್ನು ಕಂಡುಕೊಳ್ಳಬಹುದು. ಪ್ರಭುತ್ವವು ಈ ಕಾರಣಕ್ಕಾಗಿ ಒಂದು ಹೊಸ ಚರಿತ್ರೆಯನ್ನು ಕಟ್ಟಬಹುದು. ಮತ್ತು ವ್ಯಕ್ತಿಗಳ ‘ಪ್ರಜ್ಞೆ’ಯ ಮೇಲೆ ಕಟುವಾದ ನಿಯಂತ್ರಣ ಹೇರಬಹುದು. ಈ ಕೆಲಸವು ಪ್ರಜ್ಞೆಯ ಮೇಲೆ ತರುವ ಒತ್ತಡವೂ ಆಗಿರುತ್ತದೆ. ಪ್ರಭುತ್ವ ಪ್ರಜ್ಞೆಯ ಮೇಲೆ ಹಿಡಿತ ಸಾಧಿಸಿಕೊಂಡರೆ ಮತ್ತೆ ಆ ಪ್ರಜ್ಞೆಯಿಂದ ಹೊರಗಡೆ ಬರುವಂತಿಲ್ಲ. ಮಾನಸಿಕವಾಗಿ ಪ್ರಜ್ಞೆಯ ನಿಯಂತ್ರಣ ಮಾಡಿದಾಗ ವ್ಯಕ್ತಿ-ಸಮಾಜ ಒಂದು ಸಮತಲದ ರಚನಾ ಕ್ರಮದಲ್ಲಿ ರೂಪುಗೊಳ್ಳುತ್ತದೆ. (Sudipta Kaviraj).

ಹೀಗೆ ‘ಅಧಿಕಾರದ ವ್ಯಾಪ್ತಿ’ಯು ಬೇರೆ ಬೇರೆ ಮಾದರಿಗಳಲ್ಲಿ ಇರುತ್ತವೆ. ಆದರೆ ನಾವೀಗ ‘ಅಧಿಕಾರ’ ಎನ್ನುವುದನ್ನು ‘ನೇಶನ್’ ಎಂಬ ಅರ್ಥದಲ್ಲಿ ಬಳಸುತ್ತಿದ್ದೇವೆ. ಅಧಿಕಾರ ಸಾಮಾಜಿಕ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಒಂದು ಸಂಸ್ಥೆಯಿದ್ದರೆ ಅದು ಆಳುತ್ತದೆ ಮತ್ತು ಗುಂಪಿನ ಪರವಾಗಿ ಅಧಿಕೃತ ವಕ್ತಾರರಂತೆ ವಹಿಸುತ್ತದೆ. ಯಜಮಾನ್ಯವೆನ್ನುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರವಹಿಸುವಂತೆಯೇ ಅದರ ಜೊತೆಯಲ್ಲಿ ಅದು ತನ್ನದೇ ಆದ ನಿಯಮವನ್ನು ಹೊಂದಿರುತ್ತದೆ. ಅಧಿಕಾರವನ್ನು ಯಾರು ಹಿಡಿಯುತ್ತಾರೋ ಅವರ ಚಟುವಟಿಕೆಯು ಒಂದು ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳಲು ಉಳಿದವರನ್ನು “ಅಧೀನ” ಎಂಬಂತೆ ನೋಡಿಕೊಳ್ಳುತ್ತಾರೆ. ಅಧಿಕಾರ ಹೊಂದಿದವರಿಗೆ ಕೆಲವು ವಿಶಿಷ್ಟ ಅಂಶಗಳ ಹಕ್ಕುಗಳು ಕೂಡಾ ಇರುತ್ತವೆ. ಅದಕ್ಕೆ ಸಂಬಂಧಿಸಿದಂತೆ ನಿಯಮಗಳು ರೂಪಿಸಲ್ಪಡುತ್ತವೆ. ಆಳುವ ವರ್ಗದ ಲಕ್ಷಣಗಳು ಆಯಾ ಸಮಾಜ ಮತ್ತು ಸಂಸ್ಕೃತಿಗೆ ಅನುಸಾರವಾಗಿ ಬೇರೆಯಾಗಬಹುದು. ಎಷ್ಟೋ ಸಂದರ್ಭಗಳಲ್ಲಿ ‘ಅಧಿಕಾರ’ ಪಡೆದುಕೊಳ್ಳುವ ರೀತಿ ರಿವಾಜುಗಳು ಬೇರೆಯಾಗುತ್ತವೆ. ಅದೇ ರೀತಿಯಲ್ಲಿ ಜನಾಂಗದಿಂದ ಜನಾಂಗಕ್ಕೆ ಬೇರೆಯಾಗುತ್ತವೆ. ಆಳುವ ವರ್ಗ ಆಯಾ ಸಂದರ್ಭ ಮತ್ತು ಪ್ರದೇಶಗಳಲ್ಲಿ ತಮಗೆ ಬೇಕಾದ ರೀತಿಯಲ್ಲಿ ನಿಯಮ ರೂಪಿಸುತ್ತಾರೆ. ಮತ್ತು ಅದಕ್ಕೆ ಬೇಕಾದ ಸ್ಥಾನ ನಿರ್ಣಯಗಳಾಗುತ್ತವೆ. ಉದಾ : ಬೇರೆ ಬೇರೆ ಜಾತಿಯಲ್ಲಿರುವ ಗುರಿಕಾರರು, ಪುರೋಹಿತರು ಇತ್ಯಾದಿ. ಮತ್ತು ಹೊಸ ಸಂದರ್ಭದಲ್ಲಿ ಕೋರ್ಟು, ಕಾನೂನು ಇತ್ಯಾದಿ. ಹಳೆಯ ಸಾಮಾಜಿಕ ರಚನೆಯ ಮೌಖಿಕ ಕಾನೂನುಗಳಿಗೂ ವಸಾಹತು ಪೂರ್ವದ ಕಾಲಘಟ್ಟದಲ್ಲಿ ರೂಪುಗೊಂಡ ಕಾನೂನುಗಳಿಗೂ ವ್ಯತ್ಯಾಸವಿರುತ್ತದೆ. ವಸಾಹತು ಪೂರ್ವದ ಕಾಲಘಟ್ಟದಲ್ಲಿ ಕಾನೂನು ಮತ್ತು ಶಿಕ್ಷೆ ಎರಡಕ್ಕೂ ಊರೊಳಗೆಯೇ ನ್ಯಾಯ ದೊರಕುತ್ತಿತ್ತು. (ಶಿವರಾಮ ಕಾರಂತರ ‘ಕುಡಿಯರ ಕೂಸು’, ಕುಮಾರ ವ್ಯಾಸನ ‘ವಿದುರ ನೀತಿ’ ಮತ್ತು ಭೀಷ್ಮ ಪರ್ವ ಮುಂತಾದವು) ಮತ್ತು ಕೆರೆಗೆ ಹಾರ (ಇದರಲ್ಲಿ ಕೆರೆಗೆ ಹಾರವಾಗುವುದು ಕೂಡಾ ಒಂದು ರೀತಿಯ ಶಿಕ್ಷೆ). ಈ ದೃಷ್ಟಿಯಿಂದಲೇ ಭಾರತಕ್ಕೆ ಬಂದ ಅನೇಕ ಬ್ರಿಟಿಷ್ ಗವರ್ನರ್ ಜನರಲ್‌ಗಳು ಭಾರತದ ಜನರು ಅನಾಗರಿಕರು, ಅವರಿಗೆ ಕಾನೂನುಗಳು ಗೊತ್ತಿಲ್ಲ. ಅವರಿಗೆ ಜಮೀನಿನ ಅಳತೆಯ ಪ್ರಮಾಣ ಗೊತ್ತಿಲ್ಲ. ಅದಕ್ಕಾಗಿ ಅವರಿಗೆ ಬೇಕಾಗಿರುವುದು ‘ನ್ಯಾಯ’ದ ತಿಳುವಳಿಕೆ ಮತ್ತು ಅಕ್ಷರಾಭ್ಯಾಸ ಎಂದು ಭಾವಿಸಿಕೊಂಡಿದ್ದರು. ಉದಾ : ಲಾಡ್ð ಬೆಂಟಿಂಕ್, ಲಾರ್ಡ್ ವೆಲ್ಲೆಸ್ಲಿ, ಇವರ ನೀತಿಗಳು. ಇಲ್ಲಿ ಬಳಕೆಯಾಗಿರುವ ‘ಲಾರ್ಡ್’ ಎಂಬ ಪದವನ್ನು ಗಮನಿಸಿ (ಲಾರ್ಡ್ ವೆಲ್ಲೆಸ್ಲಿ. ಇದೇ ‘ಲಾರ್ಡ್’ ಎಂಬ ಪದವನ್ನು ಮತ್ತೊಂದು ಅರ್ಥದಲ್ಲಿಯೂ ಬಳಸುತ್ತೇವೆ. ಲಾರ್ಡ್ ಕೃಷ್ಣ, ಲಾರ್ಡ್ ಎಂದರೆ ಆಳುವವನು ಎಂಬರ್ಥ ಬರುತ್ತದೆ. ಲಾರ್ಡ ವೆಲ್ಲೆಸ್ಲಿಗೂ, ಲಾರ್ಡ್ ಕೃಷ್ಣನಿಗೂ ಯಾವ ರೀತಿಯ ವ್ಯತ್ಯಾಸವೂ ಇಲ್ಲ. ಭಾರತಕ್ಕೆ ಕೋರ್ಟುಗಳು, ಕಾನೂನುಗಳು, ನ್ಯಾಯಸಂಹಿತೆಗಳು ಬಂದಾಗ ಬಹುದೊಡ್ಡ ಬದಲಾವಣೆಯನ್ನು ನಾವು ಕಾಣುತ್ತೇವೆ). ಪೊಲೀಸರ ಬಗ್ಗೆ ಮತ್ತು ಕೋರ್ಟುಗಳ ಕುರಿತು ಜನಸಾಮಾನ್ಯರಿಗೆ ಭಯ ಹುಟ್ಟಿದ್ದೇ ಆಡಳಿತ ನೀತಿಯ ಪರಿಸ್ಥಿತಿಯಿಂದ.

ಪೊಲೀಸರು, ಕೋರ್ಟುಗಳ, ಎ.ಸಿ.ಗಳು, ಡಿ.ಸಿ.ಗಳು ಪ್ರಭುತ್ವದ ಪರವಾಗಿ ಕೆಲಸ ಮಾಡಿದವು. ನ್ಯಾಯಾಲಯಗಳಿಗೆ ಏಜೆಂಟರಂತೆ ವರ್ತಿಸಿದ್ದು, ಎ.ಸಿ., ಡಿ.ಸಿ. ಮತ್ತು ಪೊಲೀಸ್ ವರ್ಗ, ಪೊಲೀಸರ ಕ್ರೌರ್ಯವೆಂದರೆ ಅದು ರಾಕ್ಷಸೀಭೂತವಾದದ್ದು. ‘ಹಳ್ಳ ಬಂತು ಹಳ್ಳ’ (ಶ್ರೀನಿವಾಸ ವೈದ್ಯ), ‘ಗ್ರಾಮಯಣ’ (ರಾವ್ ಬಹಾದ್ದೂರ್), ಸತ್ಯಾಗ್ರಹ (ರಂ.ರಾ. ದಿವಾಕರ), “ಸ್ವಾತಂತ್ರ್ಯ ಚಳವಳಿಯ ಕರಪತ್ರಗಳು” (ವಿ.ಎಸ್. ಹೆಗಡೆ) ನವರತ್ನ ರಾಮರಾಯರ “ಕೆಲವು ನೆನಪುಗಳು” ಇವೆಲ್ಲವೂ ಆಗಿನ ಬ್ರಿಟಿಶ್ ಪ್ರಭುತ್ವದ ಕ್ರೌರ್ಯವನ್ನು ವಿವರಿಸುತ್ತದೆ. ಇಷ್ಟು ಮಾತುಗಳನ್ನು ಯಾಕೆ ಹೇಳಿದೆನೆಂದರೆ “ಪ್ರಭುತ್ವ”ವನ್ನು ಆಧುನಿಕ ಯುಗ ವಿವರಿಸುವುದು ಒಂದು ಕ್ರಮದಲ್ಲಿ. ಆದರೆ ‘ಪುರಂದರ ದಾಸರು’ ಹಾಡುತ್ತಾ ತಿರುಗುವಾಗ ಈ ರೀತಿಯ ಪ್ರಭುತ್ವವಿರಲಿಲ್ಲ. ಹೀಗಾಗಿ ದಾಸರ ಕೀರ್ತನೆಗಳನ್ನು ವಿವರಿಸುವಾಗ ಆಧುನಿಕ ಅರ್ಥದ (Nation, State, Power)ಗಳ ವ್ಯಾಖ್ಯಾನದ ಹಿನ್ನೆಲೆಯಲ್ಲಿ ವಿವರಿಸಲು ಬರುವುದಿಲ್ಲ.

ಚಾರಿತ್ರಿಕವಾಗಿ ರಾಷ್ಟ್ರೀಯತೆ ಮತ್ತು ಪ್ರಭುತ್ವ ಮೊತ್ತ ಮೊದಲನೆಯದಾಗಿ ಭೌತಿಕ ವ್ಯವಸ್ಥೆಯನ್ನು ಹೊಂದಿರುತ್ತದೆ. ಸಾಮಾನ್ಯ ಪ್ರದೇಶ, ಆರ್ಥಿಕತೆ, ಭಾಷೆ, ಸಂಸ್ಕೃತಿಯ ಅಂಶಗಳನ್ನು ಹೊಂದಿರುತ್ತದೆ. ಸಂಸ್ಕೃತಿಯ ಮೇಲೆ ಅಧಿಕಾರ ಸವಾರಿ ಮಾಡುತ್ತದೆ. ಒಂದು ಜನಾಂಗವೇ ಒಂದು ರಾಷ್ಟ್ರೀಯತೆಯ ಭಾಗವಾಗಬಹುದು.

ಉದಾರವಾದಿಗಳು ಕಾನೂನು, ಅದರ ಅಧಿಕಾರ, ಪ್ರಭುತ್ವವನ್ನು ತಮಗೆ ಬೇಕಾದಂತೆ ನಿರ್ವಚಿಸಿದರು. ಮತ್ತೊಂದೆಡೆಯಿಂದ ಉದಾರವಾದಿಗಳು ವ್ಯಕ್ತಿಯ ಒಂದು ಪ್ರಭುತ್ವ ಮತ್ತು ನಿಯಮ ಸಂಹಿತೆಯ ಒಳಗೆ ನಿರ್ದಿಷ್ಟವಾಗಿ ವರ್ತಿಸಬೇಕು. ಅದು ರಾಜ್ಯಾಂಗ ವ್ಯವಸ್ಥೆಗೆ ಅತ್ಯಂತ ಅಗತ್ಯವೆಂದು ಪ್ರತಿಪಾದಿಸಿದರು. ಒಂದು ರಾಜಕೀಯ ವ್ಯವಸ್ಥೆಯು ಉಳಿಯಬೇಕಾದರೆ ಪ್ರಜೆಗಳು ತಮಗೆ ಬೇಕಾದ ರೀತಿಯಲ್ಲಿ ವರ್ತಿಸಬೇಕಾಗಿಲ್ಲ. ವಸಾಹತು ಪೂರ್ವದ ರಾಜಕೀಯ ಸ್ವರೂಪವನ್ನು ಮುಖ್ಯವಾಗಿ ಹೀಗೆ ಪರಿಗಣಿಸಬಹುದು.

೧. ರಾಜ – ರಾಜಕೀಯದ ಪರಮೋಚ್ಛ ಅಧಿಕಾರ ಹೊಂದಿದವನು

೨. ಮಂತ್ರಿ – ರಾಜನ ರಾಜಕೀಯ ವ್ಯವಹಾರದ ಸಲಹೆಗಾರ

೩. ಸೇನಾಧಿಪತಿ – ಸೇನೆಯ ಅಧಿಕಾರಿ

೪. ಪುರೋಹಿತ – ಧಾರ್ಮಿಕ ಮುಖಂಡ

೫. ಪ್ರಜೆಗಳು – ಸಾಮಾನ್ಯ ಜನರು ಮತ್ತು ರಾಜನೀತಿಗೆ ಅನುಸಾರವಾಗಿ ಬದುಕುವವರು. ಉದಾರವಾದಿಗಳ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ತನಗೆ ಬೇಕಾದ ರೀತಿಯಲ್ಲಿ ಬದುಕುವಂತಿಲ್ಲ. ವಸಾಹತು ಪೂರ್ವದಲ್ಲಿ ಇದನ್ನು ‘ರಾಜದ್ರೋಹ’ ಎಂದು ಕರೆಯಲಾಗುತ್ತಿತ್ತು. ಮೇಲೆ ಹೇಳಿದ ನಾಲ್ಕು ಅಂಶಗಳನ್ನು ‘ವಚನ ಚಳವಳಿ’ ಮತ್ತು ‘ದಾಸ ಚಳವಳಿ’ಯು ಒಡೆಯಲು ಯತ್ನಿಸಿತು. ಅಂದರೆ ಅಧಿಕಾರದ ಪರಮೋಚ್ಛ ಅಧಿಕಾರವನ್ನು ಈ ಚಳವಳಿಗಳು ಮುರಿಯಲು ಯತ್ನಿಸಿದ್ದರಿಂದ ಅವು ತಮಗೆ ಬೇಕಾದ ಪರಿಕಲ್ಪನೆಯನ್ನು ಹುಟ್ಟುಹಾಕಿದವು. ಉದಾ : ಎಲ್ಲಾ ವಚನಕಾರರು ಮತ್ತು ದಾಸರು ಹುಟ್ಟುಹಾಕಿರುವ ‘ಕೂಡಲಸಂಗಮ’, ’ಚನ್ನಮಲ್ಲಿಕಾರ್ಜುನ’, ‘ಆದಿಕೇಶವ’, ‘ಪುರಂದರವಿಠಲ’ ಇವರು ಯಾರೂ ಲೌಕಿಕದ ಅಧಿಕಾರ ಉಳ್ಳವರಲ್ಲ. ಭೌತಿಕ ಅಧಿಕಾರವನ್ನು ಮೀರಿದ ಪ್ರಭುಗಳು ಇವರು. ಇದಕ್ಕೆ ಸಂವಾದಿಯಾಗಿ ೧೭ನೆಯ ಶತಮಾನದ ರಾಜಕೀಯ ತತ್ವಜ್ಞಾನಿ ಜೇಮ್ಸ್ ಹ್ಯಾರಿಂಗ್‌ಟನ್ ಹೇಳಿದ ಪ್ರಮುಖ ಅಂಶಗಳನ್ನು ಇಲ್ಲಿ ಗಮನಿಸಬಹುದು. ಉದಾರವಾದಿ ಮಾನವತಾವಾದವು ಅಧಿಕಾರದ ಎರಡು ಸ್ವರೂಪವನ್ನು ವಿವರಿಸುತ್ತದೆ. ಅಥವಾ ವ್ಯತ್ಯಾಸಗೊಳಿಸುತ್ತದೆ.

೧. ನಾಗರಿಕ ಮಾವತಾವಾದವು (Civil Humanism) ವಾಸ್ತವದ ಅಧಿಕಾರವನ್ನು ಒಂದು ರೀತಿಯಲ್ಲಿ ವಿವರಿಸುತ್ತದೆ.

೨. ಆದರೆ ಕಾನೂನು ಆಧಾರಿತ (Dejure) ಪ್ರಭುತ್ವದ ಸ್ವರೂಪ ಬೇರೆ. ಇಲ್ಲಿ ಅಧಿಕಾರದ ಸ್ವರೂಪ ಬೇರೆಯಾಗಿರುತ್ತದೆ. ಅಧಿಕಾರದ ಹೊಣೆ ಭಿನ್ನವಾದ ಸ್ವರೂಪವನ್ನು ತಾಳುತ್ತದೆ. ಅಧಿಕಾರದ ಹೊಣೆಗಾರಿಕೆಯು ಸಾಕ್ಷ್ಯ, ವಸ್ತುನಿಷ್ಠತೆ ಮುಂತಾದ ಅಂಶಗಳನ್ನು ಒಳಗೊಂಡಿದೆ.

೩. ಕಾನೂನು ಆಧಾರಿತ (Dejure) ಅಧಿಕಾರದಲ್ಲಿ ಪ್ರಭುತ್ವವು ಹಕ್ಕುದಾರಿಕೆಯನ್ನು ಹೊಂದಿದೆ. ಮತ್ತು ಅದು ತನ್ನ ಅಧಿಕಾರವನ್ನು ಅದರದೇ ಅನ್ನಬಹುದಾದ ನ್ಯಾಯವನ್ನು ರೂಪಿಸಿಕೊಳ್ಳುತ್ತದೆ.

ಆದರೆ ಈ ಎರಡೂ ಪ್ರಭು ಸಂಹಿತೆಯಲ್ಲಿ ಅಧಿಕಾರದ ಹೊಣೆಗಾರಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತದೆ.

ವಾಸ್ತವ ಅಧಿಕಾರ ನಿಲುವಿನ ಪ್ರಕಾರ ತನ್ನ ಅಧಿಕಾರ ಏಕಕೇಂದ್ರೀತವಾದುದು. ಎಲ್ಲದಕ್ಕೂ ಅಧಿಕಾರವು ಉತ್ತರ ಹೇಳಬೇಕಾಗಿಲ್ಲ ಎಂದು ಪ್ರತಿಪಾದಿಸುತ್ತದೆ.

ಆದರೆ ಅಧಿಕಾರದ ಹೊಣೆಗಾರಿಕೆಯನ್ನು ಇವು ತಪ್ಪಿಸಿಕೊಳ್ಳುವಂತಿಲ್ಲ. ‘ಅಧಿಕಾರದ ಹೊಣೆಗಾರಿಕೆ’ಯೇ ಇಲ್ಲಿ ಪ್ರಮುಖ ಅಂಶವಾಗಿದೆ. ಹೀಗಿದ್ದೂ ಯಾವುದೇ ಸಮಾಜದ ರಾಜಕೀಯ, ಸಾಂಸ್ಕೃತಿಕ ವಿವರಗಳು ಅಧಿಕಾರಕ್ಕೆ ಬರುವಾಗ ತನ್ನದೇ ನಿರ್ವಚನಗಳನ್ನು ಹೊಂದಿರುತ್ತವೆ. ದಾಸರ ಕೀರ್ತನೆಯಲ್ಲಿ ಈ ಅಂಶಗಳು ಬೇರೆ ಬೇರೆ ಪರಿಕಲ್ಪನೆಗಳ ಮೂಲಕ ಹೊಂದಾಣಿಕೆ ಮಾಡಿಕೊಳ್ಳುತ್ತವೆ.

ಈ ಅಂಶಗಳು ದಾಸರ ಕಿರ್ತನೆಯಲ್ಲಿ ವ್ಯಕ್ತವಾದ ಕ್ರಮವನ್ನು ಹೀಗೆ ಗುರುತಿಸಬಹುದು:

ಅ) ಆಧುನಿಕ ಆರ್ಥಿಕ ಅಧಿಕಾರವು ಇಲ್ಲಿ ಮುಖ್ಯವಲ್ಲ.

ಆ) ದೇವರನ್ನು ಒಲಿಸಲು ಬೇರೆ ಬೇರೆ ಹಾದಿಗಳಿವೆ. (ಉದಾ : “ಯಾಕೆನ್ನ ಈ ರಾಜ್ಯ ಕೆಳೆ ತಂದೆ ಹರಿಯೆ. ಸಾಕಲಾರದೆ ಎನ್ನ ಯಾಕೆ ಪುಟ್ಟಿಸಿದೆ”)

ಇಲ್ಲಿ ನೇರವಾಗಿ ಪುರಂದರವಿಠಲನನ್ನು ಕೇಳುವ ರೀತಿಯನ್ನು ಗಮನಿಸಬೇಕು. ಹುಟ್ಟಿಸಿದವನು ಸಾಕುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು. ರಾಜ ಕೆಳೆತಂದುದು ಪುರಂದರವಿಠಲ. ಹೀಗಾಗಿ ವಿಠಲನ ಜವಾಬ್ದಾರಿ ಹೆಚ್ಚು.

ಇ) ದಾಸನಾಗುವುದರ ಬಗ್ಗೆ ಯಾವ ಮುಜುಗುರವಿಲ್ಲ. ದೇವರ ದಾಸನಾಗಬೇಕು ಎಂಬುದಷ್ಟೇ ಇಲ್ಲಿ ಮುಖ್ಯ.

ಸೇವಕತನದ ರುಚಿಯೇ ನರಿದ್ಯೋ
ದೇವ ಹನುಮರಾಯ ವೈರಾಗ್ಯ ಬೇಡಿ

ಈ) ದಾಸತ್ವ ಎನ್ನುವುದಕ್ಕೆ ವಿಶೇಷ ಅರ್ಥಗಳಿವೆ.

ಉ) ದಾಸರದು ಆಚರಣಬದ್ಧವಾದ (Restualistic) ಕ್ರಮವಲ್ಲ.

ಊ) ದಾಸ ಸಾಹಿತ್ಯಕ್ಕೆ ರಾಗ-ತಾಳ ಎರಡೂ ಇವೆ. ಇದರ ಹಾಡುಗಾರಿಕೆಗೆ ಜನರನ್ನು ಸೆಳೆಯುವ ಗುಣವಿದೆ.

ದಾಸ ಸಾಹಿತ್ಯದಲ್ಲಿ “ಶ್ರೀಕೃಷ್ಣ” ಅಧಿಕೃತ ಪ್ರಭು. ಇಲ್ಲಿ ಪ್ರಭುತ್ವಕ್ಕ ಸಾಮಾಜಿಕ, ರಾಜಕೀಯ, ಧಾರ್ಮಿಕ ಅರ್ಥವಂತಿಕೆಗಳಿವೆ. ಯಾರೇ ಆಗಲಿ, ವಿನಾಕಾರಣ ದಾಸನಾಗುವುದಿಲ್ಲ. ಹಾಗೆಯೇ ಪ್ರಭುವು ಕೂಡಾ. ಅಧಿಕೃತ ಅಧಿಕಾರವುಳ್ಳವರು ಆಳುವ ಶಕ್ತಿಯನ್ನು ಹೊಂದಿರುತ್ತಾರೆ. ಅವರ ಐಣದಲ್ಲಿ ದಾಸರು ಇರುತ್ತಾರೆ. ಇಲ್ಲಿ ದ್ವೈತ (ಎರಡು) ಎನ್ನುವುದು ಮುಖ್ಯ.

ದೇವರು ಪ್ರಭು (I)
ದಾಸ ಪ್ರಭುವಿಗೆ ಊಳಿಗದವನು

ಆದುದರಿಂದ ದೇವರು ಬೇರೆ, ದಾಸರು ಬೇರೆ, ದಾಸರು ದೇವರನ್ನು ಆಶ್ರಯಿಸಿಕೊಂಡವರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ “ದ್ವೈತ”ದ ಪರಿಕಲ್ಪನೆ. ಇಲ್ಲಿ ಅಧಿಕಾರವೆಂದರೆ (ಪ್ರಭುತ್ವ) ಅಗೋಚರವಾದುದು. ಅದಕ್ಕೆ ನಿರ್ದಿಷ್ಟ ಆಕಾರವಿಲ್ಲ. ದಾಸರಿಗೆ ಸಾಮಾಜಿಕ, ಧಾರ್ಮಿಕ ಅಸ್ತಿತ್ವಗಳಿರುತ್ತವೆ. ಅಧಿಕಾರವು ರೂಪುಗೊಳ್ಳುವುದಕ್ಕೆ ಸಾಮಾಜಿಕ, ಚಾರಿತ್ರಿಕ ಕಾರಣಗಳಿವೆ. ಇವು ವಿಷಯ ನಿಷ್ಠವಾದವುಗಳು. ಎರಡನೆಯದಾಗಿ ಪ್ರಭುತ್ವವು ತನಗೆ ಬೇಕಾದ ಜ್ಞಾನರೂಪಗಳನ್ನು ಹುಟ್ಟುಹಾಕುತ್ತವೆ. ಹೀಗಾಗಿ ಪ್ರಭುತ್ವವು ಅಧಿಕಾರವನ್ನು ತನಗೆ ಬೇಕಾದ ವೈಚಾರಿಕ ಆಕೃತಿಯನ್ನು ಪಡೆದುಕೊಳ್ಳುತ್ತವೆ. ಭಾರತದಲ್ಲಿ “ಭಕ್ತಿ” ಚಳವಳಿಗಳು ಹುಟ್ಟಿಕೊಂಡಿದ್ದೇ ಭೌತಿಕ ಅಧಿಕಾರವನ್ನು ವಿರೋಧಿಸುವುದಕ್ಕಾಗಿ. ದಾಸರ ಕೀರ್ತನೆಗಳ ಹಿನ್ನೆಲೆಯಿಂದ ವಿವರಿಸಬೇಕೆಂದರೆ ಲೌಕಿಕದ ಪ್ರಭುತ್ವವನ್ನು ಮೀರಿ, ಪಾರಲೌಕಿಕದ ಅಧಿಕಾರವನ್ನು ರೂಪಿಸುವುದು ದಾಸರಿಗೆ ಮುಖ್ಯವಾಯಿತು.

ದಾಸ ಸಾಹಿತ್ಯ ಪರೋಕ್ಷವಾಗಿ ಹೇಳಿದ್ದೇನೆಂದರೆ ನಮಗೆ ಲೌಕಿಕದ ಪ್ರಭುಗಳಿಲ್ಲ. ನಾವು ದೇವರ (ಶ್ರೀಕೃಷ್ಣ) ದಾಸರೇ ಹೊರತು ಲೌಕಿಕ ದೊರೆಗಳ ದಾಸರಲ್ಲ. ಹೀಗಾಗಿ ತಮಗೂ, ದೇವರಿಗೂ ಇರುವ ಸಂಬಂಧ ಬೇರೆ ಬಗೆಯದು ಎಂದು ನಿರೂಪಿಸಿದರು. ಕೃಷ್ಣನ ಪರಮೋಚ್ಛ ಅಧಿಕಾರವನ್ನು ಸಾರುವುದು ದಾಸರಿಗೆ ಅಗತ್ಯವಾಗಿತ್ತು . ಅಂದರೆ ಇಲ್ಲಿ ಅಧಿಕಾರವನ್ನು ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಮೂಲಕ ವಿವರಿಸಲಾಯಿತು. ಪುಕೋ ಹೇಳುವ ಮೂರು ಅಂಶಗಳನ್ನು ಇಲ್ಲಿ ಗಮನಿಸಬೇಕು :

ಅಧಿಕಾರ (ಪ್ರಭುತ್ವ)ವು ರೂಪುಗೊಳ್ಳುವುದು ಸಾಮಾಜಿಕ ರೂಪಕ್ಕೆ ಅನುಸಾರವಾಗಿ ಇಲ್ಲಿ “ವಿಷಯ ನಿಷ್ಟತೆ” ಎನ್ನುವುದು ಮುಖ್ಯ.

ಜ್ಞಾನರೂಪಗಳು ತನ್ನಿಂದ ತಾನೇ ಅಧಿಕಾರದ ರೂಪದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತವೆ.

ಪ್ರಭುತ್ವದ ಅಧಿಕಾರವು ವಿಶ್ವಾಸಾತ್ಮಕವಾದುದು. ಅದು ಈ ರೂಪವನ್ನು ಪಡೆಯುವದಕ್ಕೆ ಸಾಮಾಜಿಕ ಸಂಬಂಧಗಳ ವ್ಯತ್ಯಯವೇ ಮುಖ್ಯ ಕಾರಣ. ಯಾವಾಗ ಸಾಮಾಜಿಕ ಸಂಬಂಧಗಳಲ್ಲಿ ವಿವಿಧತೆಯು ಹುಟ್ಟಿಕೊಳ್ಳುತ್ತದೆಯೋ ಆಗ ಜ್ಞಾನ ಮತ್ತು ಅಧಿಕಾರಗಳು ಬೇರೆ ಬೇರೆ ರೂಪವನ್ನು ಧರಿಸಬೇಕಾಗುತ್ತದೆ. ಈ ಅರ್ಥದಲ್ಲಿ ಜ್ಞಾನಕ್ಕೂ, ಅಧಿಕಾರಕ್ಕೂ ಸಂಬಂಧವಿದೆ. ಪ್ರಭುತ್ವವು ಈ ಕಾರಣಕ್ಕಾಗಿಯೇ ಆಧ್ಯಾತ್ಮಿಕತೆಯ ಕಡೆಗೆ ತಿರುಗುತ್ತದೆ. ಪ್ರಭುತ್ವಕ್ಕೆ ಈ ಪರಿಕಲ್ಪನೆಯು ಮುಖ್ಯವಾದುದು. ಈ ಕಾರಣದಿಂದಾಗಿ ದಾಸ ಸಾಹಿತ್ಯವು ಹೊಸ ನಿರೂಪಣೆಯನ್ನು ಹೊಂದಬೇಕಾಯಿತು. ಅದು ಪ್ರಕಟಿಸುವ ನಿರೂಪಣೆಯ ಕ್ರಮ ಇನ್ನುಳಿದ ನಿರೂಪಣೆಗಳಿಗಿಂತ ಬೇರೆಯಾಯಿತು. ಉದಾ : “ದಾಸನ ಮಾಡಿಕೋ ಎನ್ನ” ದಾಸತ್ವವು ಇಲ್ಲಿ ನಾಚಿಕೆಯ ವಿಷಯವಲ್ಲ. ದೇವರ ದಾಸನಾಗುವುದು ದೊಡ್ಡಸ್ತಿಕೆ ಕೂಡಾ ಹೌದು. ಭಾರತೀಯ ತತ್ವಜ್ಞಾನದಲ್ಲಿ ಒಂದು ವಿಷಯ ಮತ್ತೆ ಮತ್ತೆ ಮರುಕಳಿಸಿದೆ. ಇದು ಮೊದಲು ಪ್ರಾರಂಭವಾದುದು ಉಪನಿಷತ್ತುಗಳಲ್ಲಿ. ಅನಂತರ ಈ ತತ್ವಜ್ಞಾನವು ಬೇರೆ ಬೇರೆ ರೀತಿಯಲ್ಲಿ ವರ್ಣಿತಗೊಂಡಿತು.

ಭಗವಂತನನ್ನು ಸೇರಲು ಮನುಷ್ಯನಿಗೆ ಇರುವ ಮಾರ್ಗಗಳು ನಾಲ್ಕು:

೧) ಕರ್ಮ – ನಿಷ್ಕಾಮ ಕರ್ಮದಿಂದ – ಕರ್ಮಯೋಗ

೨) ಭಕ್ತಿ  – ಆಚರಣೆಯ ಮೂಲಕ      – ಭಕ್ತಿಯೋಗ

೩) ಜ್ಞಾನ – ತಿಳುವಳಿಕೆಯ ರೀತಿಯಿಂದ – ಜ್ಞಾನಯೋಗ

೪) ಧ್ಯಾನ – ಸ್ವಂತ ಏಕಾಂತ – ಧ್ಯಾನದಿಂದ

ಹಾಗೆಯೇ ರಾಜಕೀಯ ಮಾರ್ಗಗಳನ್ನು ವಸಾಹತು ಕಾಲಘಟ್ಟದ ಅನಂತರ ಬೇರೆ ಬೇರೆ ರೀತಿಯಲ್ಲಿ ನಿರ್ವಚಿಸಲಾಯಿತು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಅರವಿಂದ ಮೊದಲಾದವರು. ಕನ್ನಡದಲ್ಲಿ ಡಿ.ವಿ.ಜಿ, ಮಾಸ್ತಿ, ಕುವೆಂಪು, ಬೇಂದರೆ, ಪು.ತಿ.ನ., ಅವರು ದೇವರಿಗೆ ದಾಸನಾಗುವುದು ಅಥವಾ ಶರಣಾಗುವುದು ಬೇರೆ ಬೇರೆ ರೀತಿಯಲ್ಲಿ ಅರ್ಥದಲ್ಲಿ ವಿವರಿಸಿದರು. “ಅನ್ಯಥಾ ಶರಣಂ ನಾಸ್ತಿ, ಮಾಮೇಕ ಶರಣಂ ಧ್ವಜ” ಇದು ಗೀತೆಯ ಮಾತು. “ನನಗೆ ಯಾರು ಶರಣಾಗುವರೋ ಅವರನ್ನು ನಾನು ರಕ್ಷಿಸುತ್ತೇನೆ”. ಗೀತೆಯ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ದಾಸರ ದಾರಿಯೂ ಇದುವೆ: “ಭಗವಂತನಿಗೆ ಶರಣಾಗುವುದು”. ವಚನಕಾರರು ಶಿವನಿಗೆ ಶರಣಾದರು. ದಾಸರು ಕೃಷ್ಣನಿಗೆ ಶರಣಾದರು. ಇಲ್ಲಿ ಶರಣಾಗುವುದು ಲೋಕ ಜೀವನಕ್ಕೆ ಸಂಬಂಧಿಸಿದ್ದಲ್ಲ ಎಂಬುದನ್ನು ನಾವು ಗಮನಿಸಬೇಕು. ಮನುಷ್ಯ ಯಾವ ಯಾವ ಸಂದರ್ಭದಲ್ಲಿ ಶರಣಾಗುತ್ತಾನೆ ಎಂದು ತಿಳುಯುವುದು ಕೂಡಾ ಅಷ್ಟೇ ಮುಖ್ಯ.

೧. ಎದುರಾಳಿಯೊಂದಿಗೆ ಹೋರಾಟ ಮಾಡಿ ಸೋತಾಗ. ಇಲ್ಲಿ ಸೋತವನು ನಿಶಸ್ತ್ರಧಾರಿಯಾಗಿರಬೇಕು ಮತ್ತು ಇಲ್ಲಿ ಸಂಘರ್ಷವೇ ಮುಖ್ಯ. ಸಂಘರ್ಷ ನಡೆಯದೆ ಶರಣಾಗುವುದು ಸಾಧ್ಯವಿಲ್ಲ.

೨. ಊಳಿಗದವನು ಯಜಮಾನಿಗೆ ಶರಣಾಗುವುದು (ಇದರ ಇನ್ನೊಂದು ರೂಪವೆಂದರೆ-ಪತಿಯೇ ಪರದೈವ), ಊಳಿಗದವನ ಆರ್ಥಿಕ ಪರಿಸ್ಥಿತಿ ಮತ್ತು ಕೀಳರಿಮೆಯೇ ಶರಣಾಗತಿಗೆ ಕಾರಣ.

೩. ಭಕ್ತನು ದೇವರಿಗೆ ಶರಣಾಗುವುದು. ಇಲ್ಲಿ ಭಕ್ತಿಯ ಭಾವವೇ ಮುಖ್ಯವಾಗಿದೆ.

೪. ಮಕ್ಕಳು ಗುರು-ಹಿರಿಯರಿಗೆ ಶರಣಾಗುವುದು. ಇಲ್ಲಿ ಹಿರಿತನ ಮತ್ತು ಕಿರಿತನ ಎನ್ನುವುದು ಮುಖ್ಯ.

ಅಂದರೆ ಈ ‘ಶರಣಾಗುವುದು’ ಎನ್ನುವ ಕಂðವು ಸಂದರ್ಭಕ್ಕೆ ಅನುಸಾರವಾಗಿ ಬೇರೆ ಬೇರೆ ರೀತಿಯ ಅರ್ಥವನ್ನು ಪಡೆದುಕೊಳ್ಳುತ್ತದೆ. ಒಬ್ಬನ ಬದಲಿಗೆ ಮತ್ತೊಬ್ಬ ಕಾರ್ಯನಿರ್ವಹಿಸುವಾಗ “ಅಧಿಕಾರ” (Detacto) ನಿಶಸ ಅನ್ನುವುದು ಬೇರೆ ಅರ್ಥ ಕೊಡುತ್ತದೆ. ಕಾಯಿದೆ ಪ್ರಕಾರ ಒಬ್ಬ ಅಧಿಕಾರಕ್ಕೆ ಬರುವುದೆಂದರೆ ಅದರ ಸ್ವರೂಪವು ಬೇರೆಯಾಗಿರುತ್ತದೆ. ಅಧಿಕಾರವನ್ನು ವಿವರಿಸಬೇಕಾದ ಸಂದರ್ಭದಲ್ಲಿ ಪುಕೋ ಅಧಿಕಾರಾದ ಕುರಿತು ಪುನರ್ ವ್ಯಾಖ್ಯೆ ಮಾಡಿದ್ದಾನೆ. ಅವರ ಪ್ರಕಾರ ಯಜಮಾನಿಕೆ (ಪ್ರಭುತ್ವ) ಎನ್ನುವುದು ಸಾಮಾಜಿಕ ರೂಪಗಳಲ್ಲಿ ಒಂದು. ಅದು ವಷ್ತುನಿಷ್ಟವಲ್ಲ; ವಿಷಯನಿಷ್ಟ. ಒಂದು ಹಂತದಲ್ಲಿ ಪ್ರಭುತ್ವವು ಜ್ಞಾನದ ರೂಪವನ್ನು ಪಡೆದುಕೊಂಡು ಅದರ ಮೂಲಕ ಅಧಿಕಾರವನ್ನು ಚಲಾಯಿಸುತ್ತವೆ. ಹೀಗಾಗಿ ಅಧಿಕಾರವು ಸಾಮಾಜಿಕ ಸಂದರ್ಭದಲ್ಲಿ ವಿಶ್ವಾತ್ಮಕವಾದ ಅರ್ಥವನ್ನು ಪಡೆಯುತ್ತದೆ. ಇದನ್ನು ಅನ್ವಯಿಸಿಕೊಂಡು ಹೇಳುವುದಾದರೆ ದಾಸರು ಭಕ್ತಿಯನ್ನು ಹೊಸ ರೀತಿಯ ವ್ಯಾಖ್ಯೆಗೆ ಗುರಿಪಡಿಸುತ್ತಾರೆ. ಪುರಂದರ ವಿಠಲನು ಬಯ್ಯುವುದು, ಹೊಗಳುವುದು ಎರಡೂ ಭಕ್ತಿಗೆ ಸಂಬಂಧಿಸಿದ ಸೂತ್ರಗಳಾಗಿವೆ.

೧. ದೇವರ ಸ್ತೋತ್ರ : (ಉದಾಹರಣೆ ಕೊಡಬೇಕು)
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು”.

೨. ದೈವ ನಿಂದನೆ :
ಪದುಮನಾಭನ ಪಾದದೊಲುಮೆ ಎನಗಾಯಿತು”, “ನೀನ್ಯಾಕೋ ನಿನ್ನ ಹಂಗ್ಯಾಕೊ

೩. ದೈವದ ಮೊರೆ ಹೋಗುವುದು (ಆರಾಧನೆ) :
            “ಪೊಡವಿಪಾಲಕನ ಪಾದಧ್ಯಾನವನು
          ಬಿಡದೆ ಮಾಡುವುದು ಅದು ಮಡಿಯು

೪. ದೈವತ್ವದ ಸಾಮಾಜೀಕರಣ :
ವೇದವನೋದದ ವಿಪ್ರ ತಾನೇಕೆ
          ಕಾದಲರಿಯದ ಕ್ಷತ್ರಿಯನೇಕೆ
          ಕ್ರೋಧವ ಬಿಡದ ಸನ್ಯಾಸಿತಾನೇಕೆ

೫. ಸಾಂಪ್ರದಾಯಿಕ ಆಚರಣೆಗೆ ವಿರುದ್ಧ ಮತ್ತು ದೇವರನ್ನು ಬೀದಿಗೆ ತಂದುದು
ಕರೆದರೆ ಎನ್ನಬಾರದೆ
          ಕರುಣ ಸಾಗರ ಅನಿಮಿತ್ತ ಬಂಧುವೆ ಕೃಷ್ಣಾ

೬. ದೈವವನ್ನು ಸ್ತುತಿಸುವಾಗ ಶಬ್ದ, ಅರ್ಥ ಮತ್ತು ಗೇಯತೆಗ ಪ್ರದರ್ಶನ (ರಾಗ, ತಾಳ, ಸಮೇತ) ಸಂಗೀತದ ಮಾದರಿಯಲ್ಲಿ ರಾಗ-ತಾಲಗಳು ಜನ ಸಾಮಾನ್ಯರನ್ನು ತಲುಪಲು ಸುಲಭವಾದ ವಿಧಾನವಾಗಿದೆ.)

೭. ದೈವದ ಜ್ಞಾನ ಸಾಮಾಣ್ಯ ಜನರಿಗೂ ತಲುಪಬೇಕು.
          ನಿಮ್ಮ ಭಾಗ್ಯ ಲಕ್ಷ್ಮೀದೇವಿ, ನಮ್ಮ ಭಾಗ್ಯ ನಾರಾಯಣ
          ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು

೮. ಭಕ್ತಿಯ ಎರಡು ವಿಧಾನಗಳಾದ “ಮಾರ್ಜಾಲ ಭಕ್ತಿ”

(ಬೆಕ್ಕು ತನ್ನ ಮರಿಗಳನ್ನು ಬಾಯಲ್ಲಿ ಬೇರೆಡೆ ತೆಗೆದುಕೊಂಡು ಹೋಗುವಂತೆ ಭಗವಂತನು ತನ್ನ ಭಕ್ತರನ್ನು ಕರೆದೊಯ್ಯುವುದು)

ಮತ್ತು “ಮರ್ಕಟ ಭಕ್ತಿಯಲ್ಲಿ” ದಾಸರದು ಮರ್ಕಟ ಭಕ್ತಿ.

ಮಂಗನ ಮರಿಯು ತನ್ನ ತಾಯಿಯನ್ನು ಅಪ್ಪಿಕೊಳ್ಳುವಂತೆ ದೇವರನ್ನು ತಾನೇ ಸ್ವತಃ ಅಪ್ಪಿಕೊಳ್ಳುವುದು

ಸಾಮಾನ್ಯನಿಗೆ ಸಾರ್ವಭೌಮ ಪದವಿಯೇಕೆ
ಪ್ರೇಮವಿಲ್ಲದೆ ಬಂಧು ಜನವೇತಕೆ
ಸ್ವಾಮಿ ಶ್ರೀ ಪುರಂದರ ವಿಠಲನ ನೆನಯದಿಹ
ತಾಮಸಾಧಮನಿಗೆ ಕೈವಲ್ಯವೇತಕೆ?”

ನಂಬಿಕೆಗೆ ಅನುಸಾರವಾಗಿ ಅಥವಾ ಭಕ್ತಿಯ ರೂಪಕ್ಕೆ ಅನುಗುಣ ಕೃಷ್ಣನ ಬಿಂಬವು ವ್ಯಕ್ತವಾಗುತ್ತದೆ. ಇದಕ್ಕೆ ಒಂದು ಉದಾಹರಣೆ

ಅಂಬಿಗ ನಾ ನಿನ್ನ ನಂಬಿದೆ ಜಗ
ದಂಬಾರಮಣ ನಿನ್ನ ನಂಬಿದೆ
………

ಈ ಕೀರ್ತನೆಯ ಕೊನೆಯ ಸಾಲುಗಳು ಹೀಗಿವೆ ……

ಸತ್ತ್ವ ಪಥದೊಳಗಂಬಿಗ ಪರಾ
ಭಕ್ತಿ ಹುಟ್ಟನು ಹಾಕಿ ಅಂಬಿಗ
ಮುಕ್ತಿ ದಾಯಕ ನಮ್ಮ ಪುರಂದರವಿಠ್ಠಲನ
ಮುಕ್ತಿ ಮಂಟಪಕೊಯ್ಯೊ ಅಂಬಿಗ

ಲೌಕಿಕದ ವಿವರಣೆಯೊಂದಿಗೆ ಈ ಕೀರ್ತನೆಯು ಪ್ರಾರಂಭವಾಗಿದೆ. ಅಂಬಿಗ ಲೌಕಿಕದ ಸಂಕೇತ. ಅಂಬಿಗನೇ ಎರಡನೆಯ ಸಾಲಿಗೆ ಬರುತ್ತಿದ್ದಂತೆಯೇ ವಿಶ್ವಾತ್ಮಕವಾಗುತ್ತದೆ. ಕೃಷ್ಣ ಜಗದಂಬಾರಮಣನೂ ಹೌದು. ಕೊನೆಯ ಪ್ಯಾರಾಕ್ಕೆ ಬರುತ್ತಿರುವಂತೆಯೇ ಸತ್ವಪಥ, ಪರಾಭಕ್ತಿ, ಮುಕ್ತಿ ಮಂಟಪಗಳ ಪರಿಕಲ್ಪನೆಯು ಬಂದು ಸಾಮಾನ್ಯವಲ್ಲದ ಸಾವಿನ ಪ್ರತೀಕದಲ್ಲಿ ಮುಕ್ತಾಯವಾಗುತ್ತದೆ. ಇಲ್ಲಿ ಸಾವು ಸಾವಲ್ಲ, ಅದು ಮುಕ್ತಿಯ ಪಥ. ಸಾಮಾನ್ಯವೆನ್ನಬಹುದಾದ ಸಾವು ಕೂಡಾ ಭಕ್ತನಿಗೆ ಮುಕ್ತಿಯ (ಬಿಡುಗಡೆಯ) ರೂಪವಾಗುತ್ತದೆ.

ಹದಿಮೂರನೆಯ ಶತಮಾನದ ಅನಂತರ ಜೈನ, ವೀರಶೈವ, ಕಾಪಾಲಿಕ ಪಂಥಗಳು ಒಂದು ರೀತಿಯಲ್ಲಿ ಸಾಂಸ್ಥೀಕರಣಕ್ಕೆ ಗುರಿಯಾದವು. ಈ ಕಾಲಘಟ್ಟದ ಧಾರ್ಮಿಕತೆಯು ಕೇವಲ ಆಚಾರ-ವಿಚಾರಗಳ ಜಡತೆಯನ್ನು ಒಳಗೊಂಡಿತು. ಭಾರತದಲ್ಲಿ ಹುಟ್ಟಿಕೊಂಡ ಅನೇಕ ಧರ್ಮಗಳ ಮುಖ್ಯ ಲಕ್ಷಣವೆಂದರೆ ಮನುಷ್ಯರನ್ನು ಮೇಲೆಕ್ಕೆತ್ತುವುದು. ದೈನಂದಿನ ವ್ಯಸನಗಳಿಂದ ಮನುಷ್ಯರನ್ನು ಮುಕ್ತಗೊಳಿಸುವುದು ಎಲ್ಲಾ ಧರ್ಮಗಳ ಎಲ್ಲಾ ಆಚರಣೆಗಳು ಮನುಷ್ಯರ ಚಂಚಲತೆಯನ್ನು ನಿರಾಕರಿಸಿ, ಮನಸ್ಸನ್ನು ತಲ್ಲೀನಗೊಳಿಸಲು ಸಹಾಯಕಾರಿಯಾಯಿತು. ಅಹಿಂಸೆ, ಸತ್ಯ, ವ್ರತಾಚರಣೆಗಳನ್ನು ನಂಬಿದ್ದ ಜೈನರು, ಕರಸ್ಥಲ ಲಿಂಗವನ್ನೇ ನಂಬಿದ ವಚನಕಾರರು ತಮ್ಮ ಮತ, ಧರ್ಮಕ್ಕೆ ಅನುಸಾರವಾಗಿ ನಡೆದುಕೊಂಡರೆ ಅದ್ವೈತ ಧರ್ಮ ತನ್ನ ‘ಏಕಾಂತವಾದಿ’ ಸಿದ್ಧಾಂತ ನಂಬಿಕೊಂಡಿತ್ತು. ಈ ಮಾದರಿಯ ಬಿಗಿಯಾದ ಧಾರ್ಮಿಕ ಧೋರಣೆಗಳು “ಚಿರಸ್ಥಿತಿ”ಯನ್ನು ನಂಬಿಕೊಂಡಿತ್ತು. ಆಗ ಜನಸಾಮಾನ್ಯರು ಮತ್ತು ಧಾರ್ಮಿಕ ಪುರೋಹಿತರ ನಡುವೆ ಉಂಟಾಗಿದ್ದು ಖಾಲಿಯಾದ ಜಾಗ ಮಾತ್ರ ಮತ ಧರ್ಮಗಳು ರಾಚನಿಕವಾಗಿ ಒಂದು ಸ್ಥಿರಸ್ಥಿತಿಯನ್ನು ತಲುಪಿದಾಗ ಚಾರಿತ್ರಿಕವಾಗಿ ಹೊಸ ನಡಾವಳಿಗಳು ಅಗತ್ಯವಿರುತ್ತವೆ. ಸಾರ್ವಜನಿಕರಿಗಾಗಿ ಮತ್ತು ಜನಸಾಮಾನ್ಯರಿಗಾಗಿ ಖಾಲಿಯಾದ ಜಾಗವನ್ನು ತುಂಬಿಕೊಳ್ಳಲು ಮತ್ತು ದೇವರನ್ನು ದೇವಸ್ಥಾನದ ಒಳಗಿನಿಂದ ಹೊರತಂದು ಸ್ಥಾಪಿಸುವುದರ ಮೂಲಕ ಹೊಸ ತತ್ವ ಪ್ರಚಾರ ಅಗತ್ಯವಾಯಿತು.

ದಾಸರು ಹುಟ್ಟಿಕೊಂಡಿದ್ದೇ ಈ ರೀತಿಯ ಚಾರಿತ್ರಿಕ ಸಂದರ್ಭದಿಂದ. ದಾಸ ಸಾಹಿತ್ಯದ ಮುಖ್ಯ ಆಶಯವೆನೆಂದರೆ ಶ್ರೀಹರಿಯನ್ನು ಹೆಚ್ಚು ಪ್ರಚುರಪಡಿಸುವುದು ಮತ್ತು ಆಗ ಇದ್ದ ಧಾರ್ಮಿಕ ನೀತಿಯನ್ನು ಬದಲಾಯಿಸಿ ಹೊಸ ಭಕ್ತ ಸಮೂಹವನ್ನು ಕಟ್ಟುವುದು (ಭಕ್ತಿ ಎನ್ನುವುದು ಭಜ್ ಎಂಬ ಧಾತುವಿನಿಂದ ಬಂದಿದೆ. ‘ಭಜ್’ ಎಂದರೆ ಸಂಕೀರ್ತಿಸು ಎಂದು ಅರ್ಥ). ಆ ಚಾರಿತ್ರಿಕ ಸಂದರ್ಭವನ್ನು ಗಮನಿಸಿದರೆ ‘ಭಜನೆ’ಯು ಕೂಡಾ ಹೊಸ ತತ್ವಶಾಸ್ತ್ರವೇ ಆಗಿತ್ತು. ಅದಕ್ಕಾಗಿ ದಾಸ ಸಾಹಿತ್ಯ ಪರಂಪರೆಯನ್ನು ನಾವು ‘ಭಕ್ತಿ ಚಳವಳಿ’ ಎಂದು ಕರೆಯುತ್ತೇವೆ. ಯಾವುದೇ ಚಳವಳಿಯು ಒಬ್ಬ ವ್ಯಕ್ತಿಯಿಂದ ಆಗುವುದಿಲ್ಲ. ಅದಕ್ಕೆ ಜನಸಮೂಹ ಬೇಕು. ಹೀಗಾಗಿ ಪುರಂದರದಾಸರ ಕೀರ್ತನೆಯು ಭಕ್ತ ಸಮೂಹವನ್ನು ಹೊಸ ರೀತಿಯಲ್ಲಿ ನಿರ್ವಚಿಸುತ್ತದೆ. ಅದರಂತೆ ಪುರಂದರದಾಸರು ಪ್ರಭುತ್ವ ರಾಜ್ಯಾಧಿಕಾರವನ್ನು ನಿರ್ವಚಿಸುವುದು ಕೂಡಾ ಬೇರೆ ರೀತಿಯಲ್ಲಿ.

ವೇದವನೋದದ ವಿಪ್ರತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ
ಆದರವಿಲ್ಲದ ಅಮೃತಾನ್ನವೇಕೆ?’
ಅಳಿದೊಡೆಯನ ಮಾತು ಕೇಳಿ ನಡೆಯಲಿಬಹುದು
ಊಳಿಗವ ಮಾಡಿ ಮನದಣಿಯಬಹುದು
ಕಾಳಗವ ಪೊಕ್ಕು ಕಡಿದಾಡಿ ಜಯಿಸಲಿಬಹುದು
ಪೇಳಲಳವಲ್ಲ ಯಣದವಗೊಂದು ಸೊಲ್ಲ

ಪುರಂದರದಾಸರು ಕೀರ್ತನೆಗಳಲ್ಲಿ ಬಳಸುವ ರೂಪಕಗಳು ದಿನದಿನದ ಅನುಭವಕ್ಕೆ ಸಂಬಂಧಿಸಿದ್ದು. ಈ ಮೊದಲೇ ಹೇಳಿರುವಂತೆ ಕೀರ್ತನೆಗಳು ಪ್ರತಿಪಾದಿಸುವ ಸಾಮಾಜಿಕ ಮೌಲ್ಯಗಳು ಬೇರೆ. ಅದು ರೂಪಿಸಿರುವ ನಿರೂಪಣೆಯು ಕೂಡಾ ಬೇರೆ. ಈ ತತ್ವದಲ್ಲಿ ಎಲ್ಲಾ ಜನರು ಒಂದೆ. ಅವರ ಕೀರ್ತನೆಗಳಲ್ಲಿ ರಾಜನು ಒಂದೇ. ಸಾಮಾನ್ಯನೂ ಒಂದೇ. ಅದಕ್ಕಿಂತ ಹೆಚ್ಚಾಗಿ ಪುರಂದರವಿಠಲ‘ ಎಂಬ ಪ್ರಭುವು ನಿಮ್ಮಂತೆ ವ್ಯವಹರಿಸುತ್ತಾನೆ. ಇದರಿಂದ ಲೌಕಿಕದ ಎಲ್ಲಾ ಯಜಮಾನರ ಜಾಗವು ಕೀರ್ತನೆಗಳ ಸಂದರ್ಭದಲ್ಲಿ ಜಾಗ ಬದಲಾಯಿಸುತ್ತದೆ. ಇಲ್ಲಿಯ ಪುರಂದರ ವಿಠಲನಿಗೆ ಅವನದೇ ಅನ್ನಬಹುದಾದ ಒಂದು ಸ್ವರೂಪವಿದೆ. ಪುರಂದರವಿಠಲನಿಗೆ ಇರುವ ಅನನ್ಯತೆಯು ಲೌಕಿಕದ ಯಜಮಾನರನ್ನು ಮೀರಿಸಿದ್ದು.

ಒಂದು ಮಾತಿದೆ : ಅಧಿಕಾರವೆನ್ನುವುದು ಅತ್ಯಂತ ಸಂಕೀರ್ಣವಾದುದು. ಅದು ಸಾಮಾಜಿಕ ರಚನೆಯನ್ನು ನಿಯಂತ್ರಿಸುತ್ತದೆ. ಮತ್ತು ತನ್ನನ್ನು ತಾನೇ ವ್ಯಾಖ್ಯಾನಿಸುತ್ತದೆ. ಆದರೆ ಪುರಂದರದಾಸರ ಕೀರ್ತನೆಗಳು ಆಗ ಪ್ರಚಲಿತವಿದ್ದ ಅಧಿಕಾರವನ್ನು ಮತ್ತು ಜಾತಿಗುಣವನ್ನು ನಿರಾಕರಿಸುತ್ತದೆ. ಅಷ್ಟೇ ಅಲ್ಲ. ಆ ಸಂದರ್ಭದಲ್ಲಿ ಇದ್ದ ಸಾಂಸ್ಕೃತಿಕ ರೂಪಗಳನ್ನು ಪುರಂದರದಾಸರು ತುಂಡರಿಸುತ್ತಾರೆ. ವಾಸ್ತವವಾಗಿ ಭಾಗವತ ಸಂಪ್ರದಾಯವು ಲೌಕಿಕದ ಪ್ರಭುತ್ವವನ್ನು ತಿರಸ್ಕರಿಸುತ್ತದೆ. ಹೀಗಾಗಿ ಲೌಕಿಕ ಜೀವನಕ್ರಮ, ಅದರ ಹಿಂದಿರುವ ಕಂದಾಚಾರವನ್ನು ಪುರಂದರದಾಸರು ಕಟುವಾಗಿ ಟೀಕಿಸುತ್ತಾರೆ.

ಉದಾ : ಪುರಂದರದಾಸರ ಕೀರ್ತನೆಯು ಕಲಾತ್ಮಕವಾದ ಸುಂದರ ರೂಪವಲ್ಲ. ಅದಕ್ಕೆ ಬೇರೆ ಉದ್ದೇಶವಿದೆ.

ಉದಯವಾದರೆ ಊಟದ ಚಿಂತೆ
ಅದರ ಮೇಲೆ ಭೋಗದ ಚಿಂತೆ
ಹದಿನಾಲ್ಕು ಲೋಕವಾಳಬೇಕೆಂಬ ಚಿಂತೆ
ಇದು ಪುಣ್ಯ, ಇದು ಪಾಪವೆಂಬ
ಹೃದಯದಲಿ ಭಯವಿಲ್ಲದೆ
ಮದನಮೋಹನ ನಿನ್ನ ಪಾದವ ನಂಬಿದೆ
ದೀನದಯಾಳು

ಹೀಗೆ ದಾಸ ಪಂಥವು ಹೊಸ ಸಾಂಸ್ಕೃತಿಕ ನಿರೂಪಣೆ ಮತ್ತು ಹೊಸ ರೀತಿಯ ಸಾಮಾಜಿಕ ಸಂಕಥನಗಳನ್ನು ರೂಪಿಸಿದವು. ಹಾಗೆ ನೋಡುವುದಿದ್ದರೆ ಭಕ್ತಿಯೆನ್ನುವುದೇ ಒಂದು ಪಂಥ. ಈ ಭಕ್ತಿ ಪಂಥದಲ್ಲಿ ಕೆಲವು ಪ್ರಮುಖ ಸಂಗತಿಗಳಿವೆ.

೧. ಕುಲದ ತಾರತಮ್ಯ ನೀತಿಗಳನ್ನು ನಿವಾರಿಸುವುದು :

ಆವ ಕುಲವಾದರೇನು ಆವನಾದರೇನು ಆತ್ಮ
ಭಾವವರಿತ ಮೇಲೆ

೨. ದೇವರನ್ನು ಒಲಿಸಿಕೊಳ್ಳುವುದು :

ರಕ್ಷಿಸು ಲೋಕನಾಯಕನೆ, ರಕ್ಷಿಸು
ಎಷ್ಟೆಷ್ಟು ಜನುಮ ಕಳೆದೆನೋ

೩. ಅಭಿವ್ಯಕ್ತಿಯಲ್ಲಿ ರಾಗವನ್ನು ಒಂದು ಪರಿಕರವಾಗಿ ಬಳಸಿಕೊಳ್ಳುವುದು. ಇದು ಸಂವಹನ ಮುಖ್ಯ ಅಭಿವ್ಯಕ್ತಿ.

೪. ಮನೆಮನೆಗೆ ತೆರಳಿ ಧರ್ಮ ಪ್ರಚಾರವನ್ನು ಹಾಡಿನ ಮೂಲಕ ವ್ಯಕ್ತಪಡಿಸುವುದು, ಇಲ್ಲಿ ಭಜನೆಯೆನ್ನುವುದು ಕೂಡಾ ಒಂದು ರಹದಾರಿ.

ಇದರಿಂದಾಗಿ ಸಾಂಸ್ಕೃತಿಕ ಸ್ವರೂಪಗಳನ್ನು ಬದಲಾಯಿಸುವಲ್ಲಿ ಕೀರ್ತನೆಗಾರರು ಯಶಸ್ಸನ್ನು ಕಂಡರು. ಪುರಂದರದಾಸರ ಕೀರ್ತನೆಗಳನ್ನು ಬರಿಯ ಸಾಂಸ್ಕೃತಿಕ ಉತ್ಪಾದನೆಯೆಂದು ನಾವು ತಿಳಿಯಬಾರದು. ಪ್ರಭುತ್ವದ ಪರಮೋಚ್ಛ ಅಧಿಕಾರವನ್ನು ಅದು ಪ್ರಶ್ನಿಸುತ್ತದೆ. ಶುದ್ಧ ಕರ್ಮಠರಾದ ಭಕ್ತರು ಜ್ಞಾನಮಾರ್ಗ ಮಾತ್ರವೇ ದೇವರನ್ನು ಸೇರಲು ಇರುವ ಹಾದಿಯೆಂದು ತಿಳಿದರೆ, ಪುರಂದರದಾಸರು ಅದನ್ನು ತಿರಸ್ಕರಿಸುತ್ತಾರೆ. ಸಾಮಾನ್ಯ ಜನರಿಗೆ ದೇವರನ್ನು ಹೇಗೆ ಒಲಿಸಬಹುದು ಅಥವಾ ಕಾಣಬಹುದು ಎಂಬುದು ಮಾತ್ರ ಪುರಂದರದಾಸರಿಗೆ ಮುಖ್ಯವಾಗುತ್ತದೆ. ಈ ಕಾರಣದಿಂದಲೇ ಯಾವಾಗ ಪುರಂದರದಾಸರು ದೇವರ ಭಜನೆ ಊರಿಡೀ ಸಂಚಾರ ಮಾಡಲು ಪ್ರಾರಂಭಿಸಿದರೋ ಅಂದಿನಿಂದ ಹೊಸ ಮಾರ್ಗವು ಸೃಷ್ಟಿಯಾಯಿತು. ಪುರಂದರ ದಾಸರು ಹಾಡಿದರೇ ವಿನಃ ತಮ್ಮ ಕೀರ್ತನೆಗಳನ್ನು ಬರೆಯಲಿಲ್ಲ. ಇದರಿಂದಾಗಿ ಆಗಿನ ಸಮಾಜದಲ್ಲಿ ಜಾರಿಯಲ್ಲಿದ್ದ ಒಂದು ಅಂಶವನ್ನು ಪುರಂದರದಾಸರು ಜರೆಯುತ್ತಾರೆ. ‘ರಾಜೋ ಪ್ರತ್ಯಕ್ಷ ದೇವತಾಃ’ ಎನ್ನುವ ನಾಡುನುಡಿಯು ಪುರಂದರ ದಾಸರಿಗೆ ಮುಖ್ಯವಾಗಲಿಲ್ಲ. ಪುರಂದರದಾಸರ ನಿಲುವು ಬೇರೆ ಬಗೆಯದು : ರಾಜನನ್ನೂ ಮೀರಿಸುವ ಒಬ್ಬ ‘ಪುರಂದರವಿಠಲ’ವೆಂಬ ಪ್ರಭುವಿದ್ದಾನೆ. ಅವನನ್ನು ತಿಳಿದುಕೊಳ್ಳಿ ಅವನನ್ನು ತಲುಪಲು ಎಲ್ಲರಿಗೂ ಸಾಧ್ಯ ಎಂದು ಪುರಂದರದಾಸರು ಹೇಳುತ್ತಾರೆ ಎಂಬುದು ಅವರ ಅಭಿಪ್ರಾಯ. ಆ ದೇವರ ಎದುರಿನಲ್ಲಿ ಡಾಂಭಿಕತೆ, ಕುಲ ಯಾವುದೂ ಮುಖ್ಯವಲ್ಲ. ರಾಜಕೀಯ ಪ್ರಭುತ್ವಕ್ಕೆ ಒಂದು ಎಲ್ಲೆಯಿರುತ್ತದೆ. ಗಡಿರೇಖೆಯಿರುತ್ತದೆ. ಅವನದು ಸೀಮಾತೀತವಾದ ವ್ಯಕ್ತಿತ್ವ ಆದುದರಿಂದ ಭಕ್ತರು ದೇವರು ಇರುವಲ್ಲಿಗೆ ಹೋಗಬೇಕಾದ್ದಿಲ್ಲ. ಭಕ್ತರಿರುವಲ್ಲಿಗೆ ದೇವರು ಬರುತ್ತಾನೆ. ಅದೂ ಕೀರ್ತನೆಯ ಮೂಲಕ ಹೇಗೆಂದರೆ ‘ನೀನ್ಯಾಕೋ ನಿನ್ನ ಹಂಗ್ಯಾಕೋ’ ನಿನ್ನ ನಾಮದ ಬಲವೊಂದಿದ್ದರೆ ಸಾಕು’. ದೇವರ ಹೆಸರು ಒಂದಿದ್ದರೆ ಸಾಕು. ಇದು ಎಲ್ಲ ದಾಸರ ಮುಖ್ಯ ತಾತ್ವಿಕತೆ. ಹೀಗಾಗಿ ಕೀರ್ತನೆಗಳಿಗೆ ಸಾಮಾಜಿಕವೆನ್ನಬಹುದಾದ ಗುಣವಿದೆ. ಅದನ್ನು ವಿಭಿನ್ನ ರೀತಿಯ ‘ಸಾಂಸ್ಕೃತಿಕ ಸಮಾಜಶಾಸ್ತ್ರ’ ಎಂದು ಕರೆಯಬಹುದು.