ಆಧ್ಯಾತ್ಮದ ಸಾಧನೆಗೆ ತನ್ಮೂಲಕ ಅನುಭಾವದ ನಿಚ್ಚಣಿಕೆಯನ್ನೇರಲು ಜ್ಞಾನ ಚರ್ಚೆಗಳಿಗಿಂತ ಭಕ್ತಿ ಹೆಚ್ಚು ಪ್ರಶಸ್ತ ಹಾದಿ ಎಂಬ ಅರಿವು ಮೂಡಿದಂದಿನಿಂದ ನಾಡಿನಲ್ಲಿ ಭಕ್ತಿಯ ಭಾವ ಪ್ರವಾಹ ಹರಿಯತೊಡಗಿತು. ದಕ್ಷಿಣದಲ್ಲಿ ತಮಿಳುನಾಡಿನ ವೈಷ್ಣವ ಸಂತರು, ಮಹಾರಾಷ್ಟ್ರದ ವಾರಕರಿ ಪಂಥದಂತೆ ಕನ್ನಡ ನಾಡಿನ ಸಾಹಿತ್ಯೇತಿಹಾಸದಲ್ಲಿ ಭಕ್ತಿಯನ್ನೇ ಮೂಲದ್ರವ್ಯವಾಗಿ ಪಡೆದ ಎರಡು ಪರಂಪರೆಗಳು ಮೂಡಿಬಂದವು. ಒಂದು ಶರಣರ ವಚನಗಳು. ಎರಡು ಹರಿದಾಸರ ಕೀರ್ತನೆಗಳು. ಭಕ್ತಿ ಎನ್ನುವುದೇ ಸ್ವರವಾಹಿನಿಯಾದ ಒಂದು ಭಾವ. ಇದು ಭಾವವು ಹೌದು ರಸವೂ ಹೌದು. ಯಾಕೆಂದರೆ ನಿಸರ್ಗದ ಸೌಂದರ್ಯವನ್ನು ಕುರಿತ ವಿಸ್ಮಯ, ಅದರ ಭಯಾನಕತೆಯನ್ನು ಕುರಿತ ಭಿತಿ ಹಾಗೂ ಅದು ನೀಡಿರುವ ಅನುಕೂಲಗಳನ್ನು ಕುರಿತಾದ ಕೃತಜ್ಞತೆ ಇವೆಲ್ಲವುಗಳ ಸಂಯುಕ್ತ ಸಂಕೀರ್ಣ ಫಲವಾಗಿ ‘ಭಕ್ತಿ’ ಮೂಡಿತು. ಭಕ್ತಿಯ ಉದರದಲ್ಲೇ ದೇವರು ಜನಿಸಿದ್ದು.

ಹರಿದಾಸ ಸಾಹಿತ್ಯ ಸಂದರ್ಭದ ಬಹುಮುಖ್ಯ ಹೆಸರು ಪುರಂದರದಾಸರು. ಅವರ ಕೀರ್ತನೆಗಳ ಅನುಭಾವದ ಸ್ವರೂಪ ಮತ್ತು ನೆಲೆಗಳನ್ನು ಅರಿಯುವ ಪ್ರಯತ್ನ ಇಲ್ಲಿಯದು. ಧಾರ್ಮಿಕ ಪ್ರಜ್ಞೆ ಎಂಬುದು ಮನುಷ್ಯನ ಅಂತರಂಗದಲ್ಲೇ ಹುದುಗಿರುವ ಒಂದು ಬಯಕೆ. ಈ ಪ್ರಜ್ಞೆಯ ಅರಿವಿನ ಕ್ಷಣಗಳು ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ಸ್ಫೋಟಗೊಳ್ಳುತ್ತವೆ. ಮತ್ತು ತಮ್ಮ ಮೌಳ್ಯವನ್ನು ಸಾಂದರ್ಭಿಕತೆಯನ್ನು ಮೆರೆಯುತ್ತವೆ. ಆಗ ಆತ ಧಾರ್ಮಿಕ ಮನುಷ್ಯ. ಆತನ ಅಸ್ತಿತ್ವದ ಪಾತಳಿ, ಪ್ರಜ್ಞೆಯ ಸ್ಥಿರ ಸ್ಥಿತ್ಯಂತರಗೊಳ್ಳುವುದು. ಆಗಲೇ. ಆಗ ಅವನ ಆಬಿವ್ಯಕ್ತಿಯ ಸ್ವರೂಪ ಕೂಡ ಬದಲಾಗುತ್ತದೆ. ಅನುಭವವು ಅನುಭವದ ಒಂದು ಪರಿಣಾಮ. ಹೀಗಾಗಿ ಅದು ವೈಯಕ್ತಿಕ. ಅದು ಒಳಗಿನ ಭಾವ ಪರಿಪಾಕ ಜೊತೆಗೆ ಅನಿರ್ವಚನೀಯ. ಹಾಗಾದರೆ ಅದು ಮಾತಾಗುವುದು ಹೇಗೆ? ಮಾತಿಗೆ ಸಿಲುಕದ್ದನ್ನು ಮಾತು ಆಡುವುದು ಹೇಗೆ? ಮಾತಿಲ್ಲದೆ ಕಾವ್ಯವಿಲ್ಲ. ಆದರೆ ಮಾತೇ ಕಾವ್ಯವಲ್ಲ ಎಂಬುದೇ ಅನುಭವ ಮತ್ತು ಸಾಹಿತ್ಯ ಸಂಧಿಸುವ ಬಿಂದುವಾಗಿರಬೇಕು. ಅದಕ್ಕಾಗಿ ಕಾವ್ಯ ಪ್ರತಿಮೆಗಳ ಮೊರೆ ಹೋಗಬೇಕು.

ಸಂಸ್ಕೃತದ ‘ಅನುಭೂ’ ಶಬ್ಧಕ್ಕೆ ಅರಿಯುವುದು, ರುಚಿ ನೋಡುವುದು, ಗ್ರಹಿಸುವುದು ಎಂಬ ಅರ್ಥಗಳಿವೆ. ಅನುಭೂ ಶಬ್ಧದಿಂದ ಅನುಭವ ಮತ್ತು ಅನುಭಾವ ಪದಗಳು ಬಂದಿವೆ. ಸಾಮಾನ್ಯವಾಗಿ ಇಂದ್ರಿಯಗಳ ಮೂಲಕ ವಸ್ತುವಿನ ಪ್ರತ್ಯಕ್ಷ ಸಂಪರ್ಕದಿಂದ ತಡೆದದ್ದು ಅನುಭವ ಎಂದೂ ಅಂತರಂಗಕ್ಕೆ ಹೊಳೆದ ಅನುಭವದ ಸ್ಥಿತಿಯು ನೆನೆಗೊಂಡು ನಿಲ್ಲುವ ಅವಸ್ಥೆಯು ‘ಅನುಭಾವ’ ಎಂದೂ ನಂಬಲಾಗಿದೆ. ಹೀಗಾಗಿಯೇ ಅನುಭವಕ್ಕೂ ಅನುಭಾವಕ್ಕೂ ಸಾದೃಶ್ಯವಿದೆ. ತಾಪಾತ್ಮ್ಯವಿಲ್ಲ ಎನ್ನುವುದು. ಅನುಭವವು ಅನುಭಾವಕ್ಕೆ ಏಣಿಯಾಗಬಹುದೇ ಹೊರತು ಅದೇ ನಿಲುಗಡೆಯಾಗಿರುವುದು. ಈ ಅನುಭಾವದ ಸಾಧನೆಗೆ ಎರಡು ಮಾರ್ಗಗಳನ್ನು ಗುರುತಿಸಲಾಗಿದೆ. ಮೊದಲನೆಯದು : ಭಕ್ತಿಮಾರ್ಗ. ಇದರಲ್ಲಿ ಶೃದ್ಧೆ, ಸಮರ್ಪಣ ಭಾವಗಳು ಮುಖ್ಯವಾಗುತ್ತವೆ. ಇನ್ನೊಂದು ಸಾಧನಾಮಾರ್ಗ. ಇದರಲ್ಲಿ ವೃತ, ನಿಯಮಗಳ ಕಠಿಣ ಪರಿಪಾಲನೆಯಿರುತ್ತದೆ. ಇದು ಯೋಗ, ತಂತ್ರ ಮುಂತಾದ ಶಾಸ್ತ್ರಗಳಿಗೆ ಸಂಬಂಧಿಸಿದ್ದು.

ಅನುಭಾವದ ನೆಲೆಗಳೂ ಈ ಮೂಲಕ ಭಿನ್ನವಾಗುತ್ತವೆ. ಮೊದಲನೆಯ ಮಾರ್ಗ ಮನುಷ್ಯನ ಅಸ್ತಿತ್ವ ವಿಶ್ವ ಶಕ್ತಿಯೊಡನೆ ವಿಭಿನ್ನ ಸಂಬಂಧವನ್ನು ಪಡೆಯುವ ಸ್ವರೂಪವನ್ನು ಹೇಳಿದರೆ ಎರಡನೆಯದು ತನ್ನ ಅರಿವನ್ನು ಹಾಗೂ ಅಂತಿಮ ಸ್ಥಿತಿಯನ್ನು ತಾನೇ ಪಡೆಯುವುದನ್ನು ಹೇಳುವ ಸ್ಥಿತಿಯಾಗಿರುತ್ತದೆ. ಅಂದರೆ ದೈವಿ ಪ್ರಜ್ಞೆಯಲ್ಲಿ ಬೆರೆತುಕೊಳ್ಳುವರೆಗಿನ ಸ್ಥಿತಿ ಮತ್ತು ತನ್ನನ್ನು ತಾನು ಅರಿತುಕೊಳ್ಳುವರೆಗಿನ ಸ್ಥಿತಿ ಎಂದು ಇದನ್ನು ನಿರ್ವಚಿಸಬಹುದು.

ಅನುಭಾವದ ಮುಖ್ಯ ಪ್ರಕ್ರಿಯೆ ಈ ಕ್ಷಣಿಕ ಜಗತ್ತಿನಿಂದ ದೂರವಾಗಿ ಅನಂತತೆಯೊಂದಿಗೆ ಬೆರೆಯುವುದೇ ಆಗಿದೆ. ಹೀಗಾಗಿ ನಿರಾಕರಣೆಯನ್ನು ತಮ್ಮ ಅನುಭಾವದ ಹಾದಿಯ ಹೆಜ್ಜೆ ಎಂದೇ ಇವು ತಿಳಿಯುತ್ತವೆ. ಅನುಭಾವಿಯ ಮನೋಭೂಮಿಕೆ ಇಲ್ಲಿ ತನ್ನಿಂದ ಭಿನ್ನವಾದ ಒಂದು ಅಂತಿಮ ಸ್ಥಿತಿಯೊಡನೆ ಸಂಬಂಧ ಕಲ್ಪಿಸುವುದರಲ್ಲಿ ತರ್ಕಾಗಿರುತ್ತದೆ. ಮತ್ತು ಇದನ್ನು ಅಂತಿಮವಾಗಿ ದ್ವೈತ ಸಿದ್ಧಾಂತದ ನಿಲುವು ಎಂದೇ ಗ್ರಹಿಸಬಹುದು. ಈ ಅಂತಿಮ ಸತ್ಯವನ್ನು ‘ಆದರ್ಶದ ಕಲ್ಪನೆ’ ಎಂದು ಬೇಕಾದರೂ ಹೇಳಬಹುದು. ಅನುಭಾವಿ ಇಂಥ ಆದರ್ಶ ಭಾವ ಸ್ವರೂಪವನ್ನು ತನ್ನ ವಾಸ್ತವವೆಂದೇ ತಿಳಿಯುತ್ತಾನೆ. ಇವನ ಇರುವಿಕೆಗೆ ಶಕ್ತಿ ಚೈತನ್ಯಕ್ಕೆ ಇದು ಪೂರಕವಾಗಿರುವಂಥದ್ದು.

ಇದಕ್ಕೆ ವ್ಯತಿರಿಕ್ತವಾದ ನಿರಾಕರಣೆಯನ್ನು ಹಾಗೆಯೇ ಪರಿಭಾವಿಸುವ ಆದರೆ ಪರತತ್ವದಲ್ಲಿ ನಂಬಿಕೆಯಿಲ್ಲದ ನಿರೀಶ್ವರವಾದಿ ಅನುಭಾವಿಗಳೂ ಇದ್ದಾರೆ. ಬೌದ್ಧ, ಜೈನ, ಸಾಂಖ್ಯೆ ಮತ್ತು ಯೋಗ ದರ್ಶನಗಳ ಅನುಭಾವದ ನೆಲೆ ಈ ಸ್ವರೂಪದ್ದು. ಇಲ್ಲಿ ಮುಖ್ಯವಾಗಿ ಜಗತ್ತನ್ನು ನಿರಾಕರಿಸುವ ವ್ಯಷ್ಟಿಪ್ರಜ್ಞೆ ‘ತನ್ನನ್ನು ತಾನು ಅರಿಯುವ’ ಕ್ರಮವನ್ನೇ ಪ್ರಮುಖವೆಂದು ತಿಳಿಯುತ್ತದೆ. ಹಾಗೂ ಆ ವ್ಯಷ್ಟಿಪ್ರಜ್ಞೆ ತಲುಪುವ ನೆಲೆ ‘ಅಂತಿಮ ಸತ್ಯ ಸ್ವರೂಪದ್ದು’ ಎಂದು ಇವು ವಿವರಿಸುತ್ತವೆ. (ಇಲ್ಲಿಯೂ ತನ್ನನ್ನು ತಾನು’ ಅರಿಯುವ ಪ್ರಕ್ರಿಯೆ ಜಗತ್ತಿನ ಗುಣ ಸಮೂಹಗಳಿಗೆ ವಿರುದ್ಧವಾಗಿಯೇ ಇರುತ್ತದೆ ಎನ್ನುವುದನ್ನು ಗುರುತಿಸಬೇಕು).

ಬುದ್ಧನ ಪ್ರಕಾರ ಅನುಭಾವ ಮನುಷ್ಯನನ್ನು ದುಃಖ-ನೋವುಗಳಿಂದ ಮುಕ್ತವನ್ನಾಗಿಸುತ್ತದೆ. ಆದ್ದರಿಂದಲೇ ಅವುಗಳ ಪ್ರತೀಕವಾಗಿರುವ ಜನನ-ಮರಣಗಳ ಚಕ್ರದಿಂದ ಅದು ಬಿಡುಗಡೆ ಮಾಡುತ್ತದೆ. ಆದ್ದರಿಂದ ಬುದ್ಧ ಹೇಳುವ ’ನಿರ್ವಾಣ’ವೆಂದರೆ, ವ್ಯಕ್ತಿಯು ಕಾಲದೇಶಗಳಿಂದ ಬದ್ಧವಾದ ಈ ಜಗತ್ತಿನಿಂದ ಬೇರೆಯಾಗುವುದು.

ಸಾಂಖ್ಯ ಕೂಡ ತನ್ನ ವೈಚಾರಿಕತೆಯ ಸ್ವರೂಪವನ್ನು ವ್ಯಷ್ಟಿ ಹಾಗೂ ಸಮಷ್ಟಿಯ ಪ್ರತ್ಯೇಕತೆಯಿಂದಲೇ ಆರಂಭಿಸುತ್ತದೆ. ಪ್ರಕೃತಿಯು ಯಾವಾಗಲೂ ಬದಲಾಗುತ್ತ ನಾಶವಾಗುತ್ತ ತನ್ನ ಅನಿತ್ಯತೆಯನ್ನು ತೋರಿಸುವುದರಿಂದ, ಪುರುಷ ಇದರಿಂದ ಪ್ರತ್ಯೇಕವಾಗುತ್ತಾ ಹೋಗುತ್ತಾನೆ. ಪುರುಷರಿಗಿಂತ ಹೆಚ್ಚಿನದು ಬೇರೆ ಇಲ್ಲವಾದ್ದರಿಂದ; ಜೀವನದ ಕೆಲಸ ಯಾವುದು ಅಶಾಶ್ವತವೋ ಅದರಿಂದ ಬಿಡಿಸಿಕೊಳ್ಳುವುದು ಮತ್ತು ತನ್ನಲ್ಲೇ ಇರುವ ಸತ್ವಗಳ ಮೂಲಕ ತನ್ನನ್ನು ಪುನಃ ಕಂಡುಕೊಳ್ಳುವುದೇ ಆಗಿದೆ. ಅಂದರೆ ತಾತ್ಕಾಲಿಕದ ವಿರುದ್ಧ ಶಾಶ್ವತ ಸಂಬಂಧದ ಅನ್ವೇಷಣೆ. ಅಂತಿಮವಾಗಿ ಅವುಗಳ ಸಂಬಂಧದ ಕಡಿತ.

ಸಾಂಖ್ಯದ ನೆರಳಿನಲ್ಲೇ ತನ್ನನ್ನು ಸೃಷ್ಟಿಸಿಕೊಂಡ ಯೋಗ ಭಿನ್ನವಾಗುವುದು “Divine, Consciouseness” ಪುರುಷನು ಈ ತಾತ್ಕಾಲಿಕ ಜಗತ್ತಿನಿಂದ ಬಿಡುಗಡೆ ಹೊಂದಲು ‘ಈಶ್ವರ’ನ ಸಹಾಯವನ್ನು ಬಳಸುತ್ತಾನೆ. ಈ ‘ಈಶ್ವರ’ ಪುರುಷ ಶ್ರೇಷ್ಠ ಎನ್ನಲಾಗಿದೆ. ಶಕ್ತಿಶಾಲಿಯಾದ ಇವನು ತನಗಿಂತ ಕೆಳಸ್ಥರದಲ್ಲಿರುವ ಪುರುಷನನ್ನು ಬಿಡುಗಡೆಯ ಹಾದಿಯಲ್ಲಿ ನಡೆಸುತ್ತಾನೆ. ಇಲ್ಲಿ ಜೀವ (ಪುರುಷ) ಪ್ರಕೃತಿಯಿಂದ ಪ್ರತ್ಯೇಕಗೊಳ್ಳುವ ಕಾರ್ಯದಲ್ಲಿ ಮಾತ್ರ ಈಶ್ವರನ ಸಹಾಯ ಪಡೆಯುತ್ತಾನೆ. ಅಷ್ಟೆ ಈ ಸಂಬಂಧದ ಸ್ವರೂಪವನ್ನು ಮತ್ತಷ್ಟು ಸ್ಪಷ್ಟಗೊಳಿಸಲು ಯೋಗ ಸೂತ್ರಗಳಲ್ಲಿ ಮುಂದೆ ಇಷ್ಟ ದೇವತೆಯ ಸಿದ್ಧಾಂತ ರೂಢಿಗೊಂಡಿತು. ಇದರಿಂದಾಗಿ ಮನಸ್ಸಿನ ವಿಕಲ್ಪತೆಯನ್ನು ತೊಡೆದು ಕೇಂದ್ರೀಕರಣ ಸಾಧ್ಯವೆಂದೂ ಈ ಘಟ್ಟವನ್ನು ದಾಟಿದ ಮೇಲೆ ಅದನ್ನು ನಿರಾಕರಿಸಬೇಕೆಂದೂ ಹೇಳಲಾಗುತ್ತದೆ.

ಈ ಅನುಭಾವದ ರೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ಹೋಲಿಕೆಗಳನ್ನು ಕಾಣುತ್ತೇವೆ. ಇವುಗಳ ಮಧ್ಯ ವ್ಯತ್ಯಯ ಕಾಣುವುದು ‘ಅಂತಿಮ ಸತ್ಯ’ದ ಸ್ವರೂಪ ವಿವರಣೆಯಲ್ಲಿ ಮಾತ್ರ. ಅಂತಹ ಕೆಲವು ಸಾಮ್ಯಗಳನ್ನು ಇಲ್ಲಿ ಗಮನಿಸಬಹುದು.

೧. ವ್ಯಷ್ಟಿ ಪ್ರಜ್ಞೆಯ ಕಾಲ-ದೇಶಗಳಿಗೆ ಕಟ್ಟು ಬಿದ್ದಿರುವ ಮತ್ತು ಆ ಮೂಲಕವಾಗಿಯೇ ಅಸ್ಥಿರವಾಗಿರುವ ಬದುಕಿನ ನಿರಾಕರಣೆಯನ್ನು ಮಾಡುತ್ತದೆ.

೨. ಹೀಗೆ ನಿರಾಕರಿಸಿದ ಮೇಲಿನ ಆಯ್ಕೆಯೆನೆಂದರೆ ಕಾಲ-ದೇಶದಿಂದ ಮುಕ್ತವಾದ ನಿರ್ಗುಣ ಸಂಯುಕ್ತ ಸತ್ಯದೊಡನೆ ಎರಡಿಲ್ಲದಂತೆ ಒಂದಾಗುತ್ತದೆ (ಅಥವಾ ಪ್ರತ್ಯೇಕವಾದ ಸ್ವರೂಪವನ್ನು ಅರಿಯುತ್ತದೆ)

೩. ಈ ಅನುಭಾವದ ಸ್ವರೂಪ ಬುದ್ಧಿ ಮತ್ತು ತರ್ಕಗಳಿಗೆ ಸಿಗುವಂಥದಲ್ಲ. ಆದ್ದರಿಂದ ಅಭಿವ್ಯಕ್ತಿಗೆ ಅಸಾಧ್ಯವಾಗುತ್ತದೆ.

ಪುರಂದರದಾಸರ ಸಂದರ್ಭಕ್ಕೆ ಬಂದಾಗ ದ್ವೈತದ ಅನುಭಾವ ಲಕ್ಷಣಗಳು ಕಾಣುವುದರಿಂದ ಈ ಮೇಲಿನ ಚರ್ಚೆಗಿಂತ ಇದು ಭಿನ್ನವಾಗುತ್ತದೆ. ಏಕೆಂದರೆ ದೇವರು ಮತ್ತು ಭಕ್ತನ ಭಿನ್ನತೆಯನ್ನು ಹೇಳುವುದು ದ್ವೈತದ ಮುಖ್ಯ ಲಕ್ಷಣ. ಈ ಅನುಭಾವದ ಲಕ್ಷಣಗಳು ಮುಖ್ಯವಾಗಿ ‘ಅದ್ವೈತ’ದ ನೆಲೆಯ ಲಕ್ಷಣಗಳನ್ನು ಸಂಪೂರ್ಣವಾಗಿ ವಿರೋಧಿಸುವಂಥವು. ಅಂತಹ ಕೆಲವು ಲಕ್ಷಣಗಳನ್ನು ಇಲ್ಲಿ ಸ್ಥೂಲವಾಗಿ ಗಮನಿಸಬಹುದು.

ಅನುಭಾವಿ ತಾನು ಆಶಿಸುವ ದ್ವೈತವನ್ನು ತಮ್ಮಿಬ್ಬರ ಭಿನ್ನತೆಯಲ್ಲಿಯೇ ಗ್ರಹಿಸುತ್ತಾನೆ. ಅಂದರೆ ವ್ಯಷ್ಟಿಗೆ ವ್ಯತಿರಿಕ್ತವಾಗಿ ದ್ವೈತ ಇಲ್ಲಿ ಶಕ್ತಿಶಾಲಿಯಾಗುತ್ತದೆ. ವ್ಯಕ್ತಿ ಸಾಮಾನ್ಯನಾಗುತ್ತಾನೆ.

ಉದಾ :

ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ ಕಾಣುವ
ಸಕಲಗ್ರಹಬಲ ನೀನೆ ಸರಸಿಜಾಕ್ಷ
ಶ್ರೀಪತಿಯು ನಮಗೆ ಸಂಪದವೀಯಲಿ
ವಾಣಿಪಡೆಯು ನಮಗೆ ದೀರ್ಘಾಯು ಕೊಡಲಿ
ಬಣ್ಣಿಸಲಳವೇ ನಿನ್ನ
ನೀನೇ ಅನಾಥ ಬಂಧಕಾರಣ್ಯ ಸಿಂಧು

೨. ಅನುಭಾವಿಯ ಕಲ್ಪನೆಯ ಪರಮಾತ್ಮ ಗುಣ ಹಾಗೂ ಆಕಾರಗಳುಳ್ಳವನು, ಅಂದರೆ ಇವನು ಅನುಭಾವಿಯ ಶಿಕ್ಷಕನಾಗಿರುತ್ತಾನೆ. ಪ್ರೀತಿಸುತ್ತಾನೆ ಮತ್ತು ಅವನ ಮನಸ್ಸಿಗೆ ಆಹ್ಲಾದಕರವಾಗುವಂಥ ಆಕರ್ಷಕ ಆಕಾರ-ರೂಪ ಹೊಂದಿರುತ್ತಾನೆ. ಉದಾಹರಣೆಗೆ :

ಪರಿಯ ಸೊಬಗಾದ ದೇವರು ನಾ ಕಾಣೆ
ಎನಗೊಬ್ಬ ದೊರೆ ದೊರಕಿದನು
ರಕ್ಷಿಸೊ ಲೋಕನಾಯಕನೆ ನೀ ಎನ್ನ
ಎಲ್ಲಿರುವನೊ ರಂಗನೆಂಬ ಸಂಶಯಬೇಡ
ಎನ್ನ ರಕ್ಷಿಸೊ ನೀನು ದೇವರ ದೇವ

೩. ದ್ವೈತಕ್ಕೆ ಜೀವ ಮತ್ತು ಜಗತ್ತನ್ನು ಹುಟ್ಟಿಸುವ ಮತ್ತು ನಾಶ ಮಾಡುವ ಶಕ್ತಿಯಿದೆ.

ಉದಾಹರಣೆಗೆ:

ಪುಟ್ಟಿಸಬೇಡವೋ ದೇವ ಎಂದಿಗೂ ಇಂಥ
ಮಾಯೆ ಎನ್ನ ಕಾಯವನ್ನು ಪಾಯಿದಿಂದ ಮೋಹಿಸಿ
ಕಾಯಬೇಕೆನ್ನ ಗೋಪಾಲ

ಈ ಲಕ್ಷಣಗಳನ್ನು ಅದ್ವೈತದ ಲಕ್ಷಣಗಳೊಂದಿಗೆ ಹೋಲಿಸಿ ನೋಡಿದರೆ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಅಂದಾಕ್ಷಣ ಇವೆರಡು ಅನುಭಾವ ಸ್ವರೂಪಗಳಲ್ಲಿ ಯಾವುದು ಸತ್ಯ ಅಥವಾ ಶ್ರೇಷ್ಠ ಎನ್ನುವ ಮಾತಲ್ಲ ಇದು. ಇವೆರಡೂ ಅನುಭಾವಿಗಳ ಭಿನ್ನ ರೀತಿಯ ಅನುಭವಗಳನ್ನೇ ಹೇಳುತ್ತವೆ. ಇವೆರಡರ ಸ್ವರೂಪಗಳಲ್ಲಿ ಗುರುತಿಸಬಹುದಾದ ಒಂದು ಮುಖ್ಯ ಅಂಶವೆಂದರೆ, ಎರಡೂ ಪರಸ್ಪರ ವಿರೋಧ ಗುಣಗಳನ್ನು ಹೊಂದಿರುವಂಥವು. ಒಂದು ಸಂಪೂರ್ಣ ಗುಣಾತ್ಮಕ ಅಂಶವನ್ನು ಹೇಳಿದರೆ ಇನ್ನೊಂದು ಸಂಪೂರ್ಣ ನಿರ್ಗುಣ ಸ್ವರೂಪವನ್ನು ವಿವರಿಸುವಂಥದ್ದು. ಒಂದು ಸಾಂದ್ರತೆಯ ಅಂಶಗಳನ್ನು ಒಳಗೊಂಡಿದ್ದರೆ ಇನ್ನೊಂದು ಶೂನ್ಯತೆಯನ್ನು ಪ್ರತಿಪಾದಿಸುವಂಥದ್ದು.

ಈವರೆಗೆ ಗಮನಿಸಿದಂತೆ ಅನುಭಾವದಲ್ಲಿ ಎರಡು ಮಾದರಿಯ ಪ್ರವೃತ್ತಿಗಳನ್ನು ಕಾಣಬಹುದು. ಒಂದು ನಿರಾಕರಣಾತ್ಮಕ ಮಾದರಿ (Nagative) ಇನ್ನೊಂದು ಅಂಗೀಕಾರಾತ್ಮಕ (Positive) ಮಾದರಿ. ಮೊದಲನೆಯದು ಕಾಲ-ದೇಶ-ವರ್ತಮಾನಗಳೆಂಬುದನ್ನು ನಿರಾಕರಿಸಿದರೆ, ಎರಡನೆಯದು ಅಪರೋಕ್ಷ ಹಾಗೂ ದಿವ್ಯಾನುವಭವವನ್ನು ಪಡೆಯುತ್ತದೆ. ನಿರಾಕರಣಾತ್ಮಕ ನೆಲೆಯಲ್ಲಿ ನಾವಿರುವ ಪ್ರಪಂಚ ಅಪೂರ್ಣ ಮತ್ತು ಅಸಮರ್ಪಕ ಎಂಬ ಭಾವ ಮೂಡಿರುತ್ತದೆ.

ಅನುಭಾವಿಕ ಅಸ್ತಿತ್ವದ ಬಗೆಗಿನ ಚರ್ಚೆ ಇಲ್ಲಿಂದ ಆರಂಭವಾಗುತ್ತದೆ. ಆತ ತನ್ನ ಅಸ್ತಿತ್ವವನ್ನು ಈ ಜಗತ್ತಿನ ದಿನನಿತ್ಯದ ಸಾಮಾನ್ಯವಾದ ಅನುಭವಗಳಿಂದ ಮುಕ್ತವಾಗುತ್ತ ಸ್ವತಂತ್ರನಾಗುವ ಹೊಸ ಮನಸ್ಥಿತಿಯೊಂದನ್ನು ರೂಪಿಸಿಕೊಳ್ಳುತ್ತಾನೆ. ಅಂದರೆ ದಿನನಿತ್ಯದ ಪ್ರಪಂಚದಿಂದ ಭಿನ್ನವಾಗುವುದು, ಪ್ರತ್ಯೇಕಗೊಳ್ಳುವುದು ಬಹುಶಃ ಜಗತ್ತಿನ ಎಲ್ಲ ಅನುಭಾವಿಗಳ ಹುಡುಕಾಟದ ಪ್ರಕ್ರಿಯೆ ಆರಂಭವಾಗುವುದು ಇಲ್ಲಿಂದಲೇ. ಇದನ್ನೇ ಅನುಭಾವಶಾಸ್ತ್ರದ ಪರಿಭಾಷೆಯಲ್ಲಿ ಪರ್ಗೆಷನ್ (Purgotion) ಶೋಧನೆ ಎಂದು ಕರೆಯುವುದು. ಈ ನಿರಾಕರಣೆಗೆ ಈ ಜಗತ್ತಿನ ನೋವುಗಳು, ನಿರಾಶೆ, ದುಃಖ, ಚಂಚಲತೆ ಹಾಗೂ ಅರ್ಥಹೀನತೆಗಳು ಮುಖ್ಯ ಕಾರಣವಾಗಿರುತ್ತವೆ. ಅಂದರೆ; ವ್ಯಕ್ತಿ ಈ ಜಂಜಾಟಗಳಲ್ಲಿ ತನ್ನ ಅಧ್ಯಾತ್ಮಿಕತೆಯನ್ನು ಕಳೆದುಕೊಂಡು ಸ್ವಹಿತ ಸಾಧನೆಗೆ ತೊಳಲಾಡುತ್ತಾ ಲೋಭಿಯೂ, ಕ್ರೂರಿಯೂ ಮದ ಮಾತ್ಸರ್ಯವುಳ್ಳವನೂ ಆಗುತ್ತಾನೆ. ಆದ್ದರಿಂದ ಪ್ರಾಣಿ ಪಾತಳಿಯ ಬದುಕನ್ನು ತ್ಯಜಿಸುವುದು ಮುಖ್ಯವೆಂದು ಇವರು ಭಾವಿಸುತ್ತಾರೆ. ಇದನ್ನೇ ವಿರಕ್ತಿ ಎಂದೂ ಕರೆಯಬಹುದು. ಈ ಮೊದಲು ಧರ್ಮ ಚಕ್ಕೂಲಿನಿಂದ ನೋಡುತ್ತಿದ್ದವನು ಈಗ ಶೋಧನೆಯ ನೆಲೆಯಲ್ಲಿ ದಿವ್ಯ ಚಕ್ಷುವಿನಿಂದ ನೋಡಲು ತೊಡಗುತ್ತಾನೆ.

ಉದಾ :

ಮನುಜ ಶರೀರವಿದೇನು ಸುಖ ಇದ
ನೆನೆದರೆ ಘೋರ ವಿದೇನು ಸುಖ
ಕೆಟ್ಟೆನಲ್ಲೊ ಹರಿಯೆ

ಹಾಗಾದರೆ ಈ ಅನುಭಾವಿಗಳು ಆಶಿಸುವ ಇನ್ನೊಂದು ವಾಸ್ತವತೆ, ವಾತಾವರಣ ಭಿನ್ನ ಎನ್ನುವುದನ್ನು ಹೇಗೆ ಗ್ರಹಿಸಬೇಕು? ಅನುಭಾವಿಗಳ ಮಾತುಗಳಲ್ಲಿ ಖಚಿತವಾದ ಯಾವ ಮಾತೂ ಈ ಬಗ್ಗೆ ಕೇಳುವುದಿಲ್ಲ. ಅವರ ಮಾತುಗಳೆಲ್ಲ ಮುಖ್ಯವಾಗಿ ಈ ಭೌತಿಕ ಜಗತ್ತಿನ ಗುಣಗಳಿಗೆ ವಿರೋಧವಾದಂಥ ಗುಣಗಳನ್ನು ತಮ್ಮ ಅನುಭಾವದ ಮುಖ್ಯ ಅಭಿವ್ಯಕ್ತಿಯನ್ನಾಗಿ ಮಾಡಿಕೊಂಡಿರುತ್ತವೆ. ಅಂದರೆ ಅವರು ಯಾವುದನ್ನು ಕಂಡೆವು ಎಂದು ಹೇಳುತ್ತಾರೋ ಅದು ಈ ಜಗತ್ತಿನ ಸಕಲ ಗುಣಗಳಿಗಿಂತ ಭಿನ್ನವಾದ್ದವು. ಅದು ಸಕಲ ರೂಪ, ಗುಣಗಳಿಗೆ ಅತೀತವಾದದ್ದು. ಒಟ್ಟಾರೆ ಯಾವುದನ್ನು ಕಂಡೆವು ಎಂದು ಹೇಳುತ್ತಾರೋ ಅದು ಈ ಜಗತ್ತಿನ ಸಕಲ ಗುಣಗಳಿಗಿಂತ ಭಿನ್ನವಾದ್ದವು. ಅದು ಸಕಲ ರೂಪ, ಗುಣಗಳಿಗೆ ಅತೀತವಾದದ್ದು, ಒಟ್ಟಾರೆ ಯಾವುದು ಕ್ಷಣಿಕವೋ ಅದರಿಂದ ಹೊರತಾದದ್ದು, ಇದು ಎರಡನೆಯ ಹಂತ ಇಲ್ಯೂಮಿನೇಷನ್ (Illumination) ಅಂದರೆ ದರ್ಶನ. ಇದು ಹೊರಗಣ್ಣಿಗೆ ಸಿಗುವ ದರ್ಶನವಲ್ಲ.ಇದು ಹೃದಯದ ಬೆಳಕಿನ ಒಳಗಣ್ಣಿನ ಪ್ರಭೆ. ದಿವ್ಯತೆಯ ಅನುಭೂತಿ. ಇಂಥ ದರ್ಶನ ಪಾಂಡಿತ್ಯದಿಂದಾಗಲಿ, ತಪ್ಪಸ್ಸಿನಿಂದಾಗಲಿ ಅಸಾಧ್ಯವೆಂದು ಅನುಭಾವಿಗಳು ಹೇಳುತ್ತಾರೆ.

ಉದಾ :

ಕಂಡೆನಾ ಕನಸಿನಲಿ ಗೋವಿಂದನಾ
ಕಂಡೆ ಕಂಡೆ ಕಂಡೆನಯ್ಯ ಕಂಗಳು ದಣಿಯುವ
ಕಣ್ಣಾರೆ ಕಂಡೆನಚ್ಯುತನ
ಕಂಡೆ ನಾ ಗೋವಿಂದನ
ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ
ದಣಿಯ ನೋಡಿದೆನೋ ವೆಂಕಟನ ಮನ
ದೇವ ಬಂದ ನಮ್ಮ ಸ್ವಾಮಿ ಬಂದನೋ
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿ

ವೈಯಕ್ತಿಕ ಅಥವಾ ವ್ಯಷ್ಠಿ ಪ್ರಜ್ಞೆಯ ಫಲವಾಗಿ ಈ ಅನುಭಾವವು ವ್ಯಕ್ತಿಯ ಆಂತರಿಕ ಬದುಕಿನ ಅವಸ್ಥೆಗಳು ಅತ್ಯಂತ ಪ್ರಾಮಾಣಿಕವಾಗಿರಬೇಕು, ನಿರ್ಮಲವಾಗಿರಬೇಕು ಎಂದು ಒತ್ತಾಯಿಸುತ್ತದೆ. ತನ್ಮೂಲಕ ಸಮಷ್ಠಿಯ ಹಿತವನ್ನು ಆಶಿಸುವುದಾಗಿರುತ್ತದೆ.

ಉದಾ :

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ
ಬೇವು ಬೆಲ್ಲದೊಳಿಡಲೇನು ಫಲ

ಹಾಗೂ ತಾನು ಬಯಸುತ್ತಿರುವ ವಾಸ್ತವದಲ್ಲಿ ಒಂದಾಗುವುದರ ತೀವ್ರತೆಯು ಗಾಢವಾಗಿರಬೇಕು; ಇದನ್ನು ಅನುಭಾವಶಾಸ್ತ್ರದ ಕೊನೆಯ ಹಂತವಾದಿ ಯೂನಿಯನ್ ಸಂಗಮ ಎನ್ನಬಹುದು.

ಉದಾ :

ಅಗಲಿ ಸೈರಿಸಲಾರದೀ ಮನ/ಅಗಲದಿಪ್ಪುದೆ ಜೀವನ
ಆರಿದ್ದರೇನಯ್ಯ ನೀನಲ್ಲದೆನಗಿಲ್ಲ
ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ/ಪುಲ್ಲನಾಭವೆ ನೀನಿದ್ದಲ್ಲಿ
ಇರಿಸೆನ್ನ
ಜೀವ ನಿಂದು ಫಲವೇನು/ರಾಜೀವಲೋಚನನ
ಮರೆದಿಹ ತನುವಿನಲಿ

ಕೊನೆಯ ಹಂತವಾದ ಈ ಎರಡೂ ಬಗೆಗಳು ಹೊರಗಿನಿಂದ ನಿಂತು ನೋಡುವಾಗ ಕೇವಲ ಸಾಂಕೇತಿಕವೂ ಕಾಲ್ಪನಿಕವೂ ಆಗಿ ಕಾಣುವುದು ಸಹಜವೇ ಆಗಿದೆ. ಆದರೆ ಅನುಭಾವಿಗೆ ಇದು ಅತ್ಯಂತ ಗಾಢವಾದ ವಾಸ್ತವ. ಇದು ಅವನ ತರ್ಕ ಅಥವಾ ಬುದ್ಧಿಗಮ್ಯ ಆಲೋಚನೆಯಿಂದ ಹುಟ್ಟಿರುವಂಥದ್ದಲ್ಲ. ಬದಲಿಗೆ ಆಳದ ತಲ್ಲಣದ ಪ್ರತಿಫಲ. ಹೀಗಾಗಿ ಆತ ತನ್ನ ಅಂತರಂಗ ಹಾಗೂ ಬದುಕಿನ ಬಹಿರಂತ (ಸಮಾಜ) ಇವೆರಡರಲ್ಲೂ ತನ್ಮಯತೆಯನ್ನು, ಪ್ರಾಮಾಣಿಕತೆಯನ್ನು ಬಯಸುವುದು. ಇದರ ಪರಿಣಾಮವನ್ನೂ ಅವನು ಕಾಣಬಲ್ಲ.

ಉದಾ :

ಕಡುಕೃಪೆಯಿಂದ ಹರಿ ಒಲಿದರೆ ಸತ್ಯದ
ನಡವಳಿ ಮೌನವೆ ಸಾಕ್ಷಿ
ದೃಢ ಭಕ್ತರಿಗುಣಬಡಿಸಿದಂಥವರಿವಗೆ
ಷಚುರ ಸಾನ್ನವೇ ಸಾಕ್ಷಿ

ಅನುಭಾವಿ ತನ್ನ ಸಾಧನೆಯ, ಅರವಿನ ಅಂದಿನಿಂದ ಅನುಭವಗಳನ್ನು ಅಭಿವ್ಯಕ್ತಿಗೊಳಿಸುತ್ತಾ ಹೋಗುತ್ತಾನೆ. ಅವನ ಅನುಭವವು ಭಾವನಿಷ್ಠ Subjective ಆಗಿರುವುದರಿಂದ ಅದನ್ನು ಅಭಿವ್ಯಕ್ತಿ ರೂಪಕ್ಕೆ ತರುವಾಗ ಸಂಕೇತ, ಪ್ರತಿಮೆಗಳನ್ನು ಅನಿವಾರ್ಯವಾಗಿ ಆಶ್ರಯಿಸಲೇಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ಬೆಡಗಿನ ರೂಪವನ್ನೂ ಪಡೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಅವುಗಳಿಗೆ ಒಂದು “ವರ್ತಮಾನದ ಸ್ವರೂಪ”ವಿರುವುದು. ಈ ಸ್ವರೂಪ ವ್ಯಕ್ತಿಯಾಗಿ, ಭಾವವಾಗಿ ಹೊರಹೊಮ್ಮುವಾಗ; ಅವುಗಳೊಂದಿಗಿನ ಸಂಬಂಧವನ್ನು ಹೇಳುವ ಸಂಕೇತಗಳು ಸಹಜವಾಗಿಯೇ ಮನುಷ್ಯ-ಮನುಷ್ಯರ ನಡುವಣ ಸಂಬಂಧವನ್ನು ಸೂಚಿಸುವ ಅಭಿವ್ಯಕ್ತಿಯಾಗಿಯೇ ರೂಪಪಡೆಯುತ್ತದೆ. ಈ ಸಂದರ್ಭಗಳಲ್ಲಿ (ಸಾಮೂಹಿಕ) ಮನುಷ್ಯನ ಸಮುದಾಯದ ವೈಯಕ್ತಿಕ ಆಸೆ ಆಕಾಂಕ್ಷೆಗಳ ಪೂರೈಕೆಯ ಅವಶ್ಯಕತೆಯಾಗಿ ದೈವಿಕ ವಾಸ್ತವ ರೂಪಗೊಳ್ಳುವ ಪರಿಯನ್ನೂ ಗಮನಿಸಬಹುದು. ಅಂತಹ ಕೆಲವು ಸಂಕೇತಗಳನ್ನು ಪುರಂದರದಾಸರ ಕೀರ್ತನೆಗಳ ಹಿನ್ನೆಲೆಯಲ್ಲಿ ಇಲ್ಲಿ ವಿವೇಚನೆಗೆ ಒಡ್ಡಬಹುದು.

. ವಾತ್ಸಲ್ಯಭಾವ

ತಾಯಿ ಮತ್ತು ಮಗುವಿನ ಮಧ್ಯದ ವಾತ್ಸಲ್ಯ ಭಾವ ಮಾನವ ಬದುಕಿನ ಆಹ್ಲಾದಕರ ಸಂಬಂಧವನ್ನು ಹೊರಹೊಮ್ಮಿಸುವ ಭಾವನೆ. ಎಲ್ಲ ಅನುಭಾವಿಗಳ ಸ್ಥಾಯಿ ಭಾವವೇ ಇದು. ಯಾಕೆಂದರೆ ಇಡೀ ಜಗತ್ತನ್ನು ಇಡೀ ಸೃಷ್ಟಿಯನ್ನು ಉಳಿಸುವ, ಬೆಳೆಸುವ ಇದೊಂದೆ ಎಂಬ ಸಾರ್ವತ್ರಿಕ ಸತ್ಯವನ್ನು ಅವರು ಅರಿತಿರುತ್ತಾರೆ. ಇಲ್ಲಿ ಅನುಭಾವಿ ತಾಯಿಯಾಗಿ, ಅವನು ಆಶಿಸುವ ಸತ್ಯವು ಮಗುವಾಗಿ ಅಭಿವ್ಯಕ್ತಗೊಳ್ಳುತ್ತದೆ. ಅನುಭಾವಿಕ ನೆಲೆಯಲ್ಲಿ ಕೌಟುಂಬಿಕ ಸಾಮರಸ್ಯಮಯ ಆಶಯವನ್ನು ಧಾರಾಳವಾಗಿ ಇಲ್ಲಿ ಕಾಣುತ್ತೇವೆ. ಇದಕ್ಕೆ ಪುರಂದರದಾಸರ ಜೋಗುಳದ ಹಾಡುಗಳೆಲ್ಲವನ್ನೂ ಉದಾಹರಣೆಯಾಗಿ ನೀಡಬಹುದು.

ಉದಾ :

ಜೋಜೋ ಯಶೋಧೆಯ ನಂದ ಮುಕುಂದನೆ
ಜೋಜೋ ಶ್ರೀಕೃಷ್ಣಪರಮಾನಂದ..
ತೂಗಿರೆ ರಂಗನ ತೂಗಿರೆ ಕೃಷ್ಣನ
ಅಮ್ಮ ನಿಮ್ಮ ಮನೆಗಳಲ್ಲಿ ಕಂಡಿರೇನು ಕೃಷ್ಣನ
ಸೆರಗಬಿಡಯ್ಯ ಕೃಷ್ಣ ಕರೆಯಲು ಪೋಪೆನು ಕರುಗಳು
ಹಸಿದಿವೆ ಕರುಣಿಗಳರಸನೆ

. ಸಖ್ಯಭಾವ

ಇದೂ ಕೂಡ ಮನುಷ್ಯ ಸಂಬಂಧದ ಸೌಹಾರ್ದವನ್ನು ಪ್ರತಿಬಿಂಬಿಸುವ ಇನ್ನೊಂದು ಕ್ರಮ. ಇಲ್ಲಿ ಗೆಳೆತನದ ಮೌಲ್ಯಗಳು, ಅದರ ಸಲುಗೆಯ ನಡವಳಿ, ಪ್ರಾಮಾಣಿಕತೆ, ಮುಗ್ಧತೆ ಇತ್ಯಾದಿಗಳು ಪ್ರಧಾನ ಲಕ್ಷಣಗಳಾಗಿ ಕಂಡುಬರುತ್ತವೆ. ಇಲ್ಲಿ ಭಕ್ತ-ಅನುಭಾವಿ ತಾನು ನಂಬುವ ಸತ್ಯದೊಡನೆ ಗೆಳೆತನದ ಸಾಮೀಪ್ಯ ಸಂಬಂಧವನ್ನು ಸ್ಥಾಪಿಸುವ ಕ್ರಮ ಕಾಣುತ್ತದೆ.

ಉದಾ :

ಆಡ ಹೋಗಲು ಬೇಡವೊ ರಂಗಯ್ಯಬೇಡಿಕೊಂಬೆನು ನಿನ್ನನು
ಆಡ ಹೋಗೋಣ ಬಾರೊ ರಂಗ
ನಿಲ್ಲ ಬೇಕಯ್ಯ ನೀನು ಕೃಷ್ಣಯ್ಯ
ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತ್ತಾನೆ
ಯಿದ್ದ ಪಾಂಡವರ ಬಿಳಿಯ ಶುದ್ಧ ಮಾನವ ಮುದ್ದು
ಮೋಹದ ಮುದ್ದು ಗೆಳೆಯಾರು

. ರಕ್ಷಕ ಭಾವ

ಇದು ಮನುಷ್ಯನನ್ನು ತನ್ನ ಸಮಕಾಲೀನ ಸಂದರ್ಭದ ಮೂಲಕವಾಗಿ ತೀವ್ರವಾಗಿ ಕಾಡುವ ಭಾವನೆಯಾಗಿದೆ. ಅಸಹಾಯಕನಾದ ಮನುಷ್ಯ ತನ್ನ ತಲ್ಲಣದ ಘಳಿಗೆಗಳಲ್ಲಿ ಏಕೋಭಾವದಿಂದ ಮೊರೆಹೋಗುವ ಮತ್ತು ರಕ್ಷಣೆಗಾಗಿ ಆರ್ತನಾಗಿ ಬೇಡಿಕೊಳ್ಳುವ ಸಾಮಾನ್ಯ ಕ್ರಿಯೆಯೊಂದಿದೆ. ಇದು ಭಕ್ತಿಪಂಥದ ಅನುಭಾವಿಗಳ ಸಹಜ ಪ್ರಕ್ರಿಯೆಯೂ ಹೌದು. ಜಗತ್ತಿನ ವಿಷಮತೆಗಳಿಂದ ರಕ್ಷಿಸುವ, ಕಾಪಾಡುವ ಶಕ್ತಿಯಾಗಲಿ ದ್ವೈತವನ್ನು ಕಾಣುವ ಕಟ್ಟುವ ಕ್ರಿಯೆ ಇಲ್ಲಿ ಸ್ಥಾಯಿಯಾಗಿರುತ್ತದೆ. ತನ್ಮೂಲಕ ಇಹದ ಪಾಪದಿಂದ ಆಧ್ಯಾತ್ಮಿಕ ಸಾವಿನಿಂದ ಪಾರು ಮಾಡುವ ವಾತಾವರಣದ ಹುಡುಕಾಟ ನಡೆಯುತ್ತಿರುತ್ತದೆ.

ಉದಾ :

ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ
ಎನ್ನ ರಕ್ಷಿಸೊ ನೀನುದೇವರ ದೇವ
ಕಂಡು ಕಂಡೆಂತು ಕೈಬಿಡುವೆ ಹರಿಯೆ
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ
ನಿನ್ನ ನಂಬಿದೆ ನೀರಜ ನಯನ ಎನ್ನ ಪಾಲಿಸೊ
ಇಂದಿರೆ ರಮಣ
ನಿನ್ನ ನಂಬಿದಿನೊ ನೀಯೆನ್ನ ಸಲಹಯ್ಯ

. ದೇಹಜೀವ ಸಂವಾದ

ಅನಿತ್ಯವಾದ ದೇಹ ಮತ್ತು ಶಾಶ್ವತವಾದ ಆತ್ಮ ಇವೆರಡರ ಕುರಿತಾದ ಚರ್ಚೆ ಅನುಭಾವ ಪರಂಪರೆಯಲ್ಲಿ ನಿತ್ಯವಾದುದು. ಇವುಗಳ ಸ್ಥಿತಿಯ ನಿಲುವಾದರೂ ದ್ವೈತ ಚಿಂತನೆಯ ಹಿನ್ನೆಲೆಯದು. ಪುರಂದರದಾಸರ ಕೀರ್ತನೆಗಳಲ್ಲಿ ಜೀವ-ದೇಹ ಸಂವಾದ ತುಂಬಾ ಅರ್ಥಪೂರ್ಣ ನೆಲೆಯಲ್ಲಿ ಗರಿಕಟ್ಟುತ್ತದೆ. ದೇಹದ ಅಸಾರತೆಯ ಬಗ್ಗೆ, ‘ಸಂಸಾರದ ನಿಸ್ಸಾರತೆಯ ಬಗ್ಗೆ ನಂಬದಿರು’, ‘ಈ ದೇಹ ನಿತ್ಯವಲ್ಲ’, ‘ಅನಿತ್ಯ ದೇಹವಿದಣ್ಣ’ ಮುಂತಾದ ಕೀರ್ತನೆಗಳಿವೆ. ಇವುಗಳ ಮುಂದುವರಿದ ರೂಪಗಳೆಂದೇ ಗ್ರಹಿಸಬಹುದಾದವು. ಸಂವಾದ ಕೀರ್ತನೆಗಳು ಸಾವಿನ ಕ್ಷಣದಲ್ಲಿ ದೇಹವನ್ನು ಬಿಟ್ಟು ಹೋಗಲಿರುವ ಜೀವವನ್ನು ಹೋಗಬೇಡ ಎಂದು ದೇಹ ವಿನಂತಿಸಿಕೊಳ್ಳುತ್ತದೆ. ಆಗ ದೇಹ ಕೇಳುವ ಪ್ರತಿಯೊಂದು ಪ್ರಶ್ನೆಗೂ ಜೀವ ಔಪಚಾರಿಕ ಉತ್ತರ ನೀಡುತ್ತಾ ಹೋಗುತ್ತದೆ. ಅಂತಿಮವಾಗಿ ಇಹದ ನಶ್ವರತೆ ಸಾಭೀತಾಗುತ್ತದೆ.

ಉದಾ :

ಅನುದಿನವು ಬಂದು ತನುವ ಸೂರೆಯಗೊಂಡು
ತನುವಿನೊಳಗನುದಿನವಿದ್ದು ಎನಗೊಂದು ಮಾತ
ಪೇಳದೆ ಹೋದೆಯಾ ಹಂಸಾ

ನಾನೆಂದರೆ ದೇಹ ಮಾತ್ರ ಎಂದುಕೊಳ್ಳುವುದು, ತೌಕಿಕ ವಾಸ್ತವಗಳನ್ನೇ ಪರಮ ಸತ್ಯ ಎಂದು ನಂಬುವುದು ಮುಂತಾದವುಗಳು.

ಸಹಜ ಪ್ರಕ್ರಿಯೆಗಳಾದರೂ ಅನುಭಾವದ ನಿಜಕ್ಕೆ ವ್ಯತಿರಿಕ್ತವಾದಂಥವುಗಳು. ಈ ಸಹಜ ವಾಸ್ತವಗಳನ್ನು ಮೀರುವ ಮೂಲಕ ಕಾಲಾತೀತ ಸ್ಥಿತಿಯನ್ನು ಅನುಭಾವಿ ನಿರ್ಮಿಸಿಕೊಳ್ಳುತ್ತಾನೆ. ಈ ಸ್ಥಿತಿಯ ನಿರ್ಮಾಣಕ್ಕಾಗಿ ಅವನು ಪ್ರತಿಮೆ-ಪ್ರತೀಕ-ರೂಪಕಗಳ ಮೊರೆ ಹೋಗುತ್ತಾನೆ. ಇಂತಹ ಅಂಶಗಳು ಪುರಂದರದಾಸರ ಕೀರ್ತನೆಗಳ ಮೂಲಕ ಸ್ಪಷ್ಟಗೊಳ್ಳುತ್ತಿದ್ದು ಅಂತಹ ಕೆಲವು ಸಾಧ್ಯತೆಗಳನ್ನು ಈ ಮೇಲೆ ಚರ್ಚಿಸಲಾಗಿದೆ.