೧೫ನೇ ಶತಮಾನದ ತರುವಾಯ ವೈದಿಕ ಧರ್ಮ ಗೊಂದಲದಲ್ಲಿತ್ತು. ಕಾರಣ ಈ ಹಿಂದೆ ಎದುರಿಸಿದ ಅನೇಕ ಸವಾಲುಗಳು. ಇವು ಅದರ ಸೈದ್ಧಾಂತಿಕತೆಗೆ ತೀವ್ರವಾದ ಪೆಟ್ಟು ನೀಡಿದ್ದವು. ಬೌದ್ಧ, ಜೈನ, ವೀರಶೈವ ಧರ್ಮಗಳೊಡ್ಡಿದ ತಾತ್ವಿಕ, ಧಾರ್ಮಿಕ, ಸಾಮಾಜಿಕ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟವಾಗಿತ್ತು. ಇದರ ಜೊತೆಗೆ ಇಸ್ಲಾಮಿನ ಸವಾಲು ಬೇರೆ. ಈ ಎಲ್ಲಾ ಇಕ್ಕಟ್ಟುಗಳ ನಡುವೆ ಅದು ಕೊಂಚ ಉದಾರವಾದಿ ನಿಲುವು ತಳೆಯತೊಡಗಿತು. ಇದು ಸಹಜವೇ ಆಗಿದೆ. ಆಯಾ ಧರ್ಮಗಳು ಕಾಲದ ಏರಿಳಿತಗಳಲ್ಲಿ ಇಂಥ ಬದಲಾವಣೆಗಳನ್ನು ಮಾಡಿಕೊಂಡಿವೆ. ಭಕ್ತಿ ಚಳುವಳಿಯ ಆಯಾಮದಲ್ಲಿ ಬಂದ ಕೆಲವು ದಾಸರು ಈ ಕಾರ್ಯದಲ್ಲಿ ತಮ್ಮನ್ನು ಗಂಭೀರವಾಗಿ ತೊಡಿಗಿಸಿಕೊಂಡಿದ್ದಂತೂ ಸತ್ಯ. ಅದರಲ್ಲೂ ಪುರಂದರದಾಸರ ಕೀರ್ತನೆಗಳಲ್ಲಿ ಈ ಗುಣ ದಟ್ಟವಾಗಿದೆ. ಅಂದರೆ ಅವರ ಖಾಸಗಿ ಸುಖ-ದುಃಖಗಳು ಕೀರ್ತನೆಗಳ ಲೋಕದೃಷ್ಟಿಯನ್ನು ನಿರ್ಧರಿಸಿದಂತೆ ಅವರ ಕಾಲದ ಚಾರಿತ್ರಿಕ, ಸಾಮಾಜಿಕ ಸಂದರ್ಭಗಳೂ ಕೀರ್ತನೆಗಳ ಲೋಕದೃಷ್ಟಿಯನ್ನು ಪ್ರಭಾವಿಸಿವೆ. ಹಳಹಳಿಕೆ ಹಾಗೂ ಉದಾರ ವಾದೀತನ ಸೇರಿ ಒಂದು ಆಕಾರವನ್ನು ನಿರ್ಮಿಸಿವೆ.

ಪುರಂದರದಾಸರ ಕೀರ್ತನೆಗಳು ವೈದಿಕ ಧರ್ಮದ ಸಮರ್ಥನೆಯಂತೆ ಮಾತ್ರವಲ್ಲ, ಅದರ ಒಳವಿಮರ್ಶೆಯಂತೆಯೂ ಇವೆ. ಅವರ ಅಪಾರವಾದ ಸುತ್ತಾಟ ವೈದಿಕ ಧರ್ಮದ ಕುರಿತು ಜನಾಭಿಪ್ರಾಯನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ. ವೈದಿಕತೆ ಮತ್ತು ಜನಸಾಮಾನ್ಯರ ಜೀವನದ ನಡುವೆ ಒಂದು ಬೆಸುಗೆ ಹಾಕುವುದು ಹೇಗೆ? ಎಂಬ ತಾತ್ವಿಕ ಚಿಂತನೆ ಕೀರ್ತನೆಗಳಲ್ಲಿದೆ. ಇಲ್ಲವಾದರೆ ಸಾಮಾಜಿಕ ಜನಜೀವನದ ಅನೇಕ ಸಂಗತಿಗಳನ್ನು ಕೀರ್ತನೆಗಳಲ್ಲಿ ತರುವ ಕಾರಣವೇನಿತ್ತು? ಭಕ್ತಿಯನ್ನು ಅಂತರಂಗದ ದರ್ಶನವಾಗಿಯೂ, ಸಾಮಾಜಿಕ ದರ್ಶನವಾಗಿಯೂ ಪುರಂದರದಾಸರು ಗ್ರಹಿಸಿದ್ದಾರೆ. ಅವರ ಉಪದೇಶ, ಟೀಕೆಗಳು ವೈದಿಕ ಧರ್ಮದ ಮತ್ತು ಮೇಲ್ವರ್ಗದವರ ಕುರಿತೇ ಹೆಚ್ಚಿದೆ. ಈ ವರ್ಗದ ನಡವಳಿಕೆಯನ್ನು ಪುರಂದರದಾಸರ ಕೀರ್ತನೆಗಳು ಪರೀಕ್ಷೆಗೊಳಪಡಿಸಿವೆ.

ಪುರಂದರದಾಸರು ಅಂತಃಕರಣವುಳ್ಳ ಹಾಗೂ ಅನೇಕ ದ್ವಂದ್ವಗಳಿಂದ ಕೂಡಿರುವ ವ್ಯಕ್ತಿ. ಅವರು ತಿರುಕರಂತೆ ಅಲೆದಾಡಿದ್ದು, ಈ ಸಮಾಜದಲ್ಲಿ ಏನೇನೊ ಕೊರತೆಗಳಿವೆ ಅಂತ ಮನಗಂಡಿದ್ದು, ಅಂಥ ಕೊರತೆಗಳಿಗೆ ತಮ್ಮದೆ ರೀತಿಯಲ್ಲಿ ಉತ್ತರ ಕಂಡುಕೊಳ್ಳುಲು ಯತ್ನಿಸಿದ್ದು ಮಹತ್ವದ ಅಂಶ, ಧಾರ್ಮಿಕತೆಯನ್ನು ಅನುಸರಿಸುವ ಮತ್ತು ಮೀರಲಿಚ್ಛಿಸುವ ಹೊಯ್ದಾಟ ಅವರೊಳಗೆ ನಡೆದಿದೆ. ಹಾಗೆಯೇ ಪುರಂದರದಾಸರು ಮುಗ್ಧರು ಕೂಡ. ನೋಡಿ, ದಾಸರನ್ನು ನಿಂದಿಸಿದರೆ ಉಡಿಯಲ್ಲಿ ಕೆಂಡವ ಕಟ್ಟಿಕೊಂಡಂತೆ, ಸುಡದೆ ಇರಲಾರದೆಂದು ಎಚ್ಚರಿಸಿದ್ದಾರೆ. ತನ್ನ ಕಾಲದ ಅವಮಾನಗಳಿಗೆ ಅವರು ಪ್ರತಿಕ್ರಿಯಿಸಿದ ಒಂದು ಬಗೆಯಿದು. ತಮ್ಮ ಸಿಟ್ಟು ಅವಮಾನಗಳನ್ನು ತಕ್ಷಣಕ್ಕೆ ನೋಡಿಕೊಳ್ಳುತ್ತಿದ್ದ ಸ್ವಾಭಿಮಾನಿಯೂ ಹೌದು. ಹೀಗಾಗಿ ಒಮ್ಮೊಮ್ಮೆ ಕ್ರಾಂತಿಕಾರರಂತೆ ಇನ್ನೊಮ್ಮೆ ಜಡ ಸಂಪ್ರದಾಯವಾದಿಯಂತೆ ಮತ್ತೊಮ್ಮೆ ಅಸಹಾಯಕರಂತೆ ಮೊಗದೊಮ್ಮೆ ಕೃಷ್ಣಭಕ್ತರಂತೆ ಕಂಡುಬರುತ್ತಾರೆ. ಹೀಗಾಗಿ ಅವರ ಕೀರ್ತನೆಗಳಲ್ಲಿರುವುದು ಒಂದು ವ್ಯಕ್ತಿತ್ವವಲ್ಲ, ಅನೇಕ ವ್ಯಕ್ತಿತ್ವಗಳು. ಸಂಕೀರ್ಣ ಮನಸ್ಸಿನ ವ್ಯಕ್ತಿಯೊಬ್ಬ ಅನುಭವಿಸಬಹುದಾದ ಎಲ್ಲಾ ತರಹದ ತಳಮಳದ ವ್ಯಕ್ತಿತ್ವ ಅವರದು. ಹಾಗೆಯೇ ಪುರಂದರದಾಸರು ಕೀರ್ತನೆಗಳ ರೂಪದಲ್ಲಿ, ತತ್ವಪದಗಳ ರೀತಿಯಲ್ಲಿ, ಬೆಡಗಿನ ರಚನೆಗಳ ಹಾಗೆ, ಮಕ್ಕಳ ಹಾಡುಗಳಂತೆ, ಜೋಗುಳದ ಪದಗಳಂತೆ ತಮ್ಮ ಅನುಭವಕ್ಕೆ ಅಭಿವ್ಯಕ್ತಿ ನೀಡಿದ್ದಾರೆ. ಕನ್ನಡ ಭಾಷೆಯನ್ನು ಹೀಗೆ ಅನೇಕ ಎರಕಗಳಲ್ಲಿ ಮೇಳೈಸಿದ್ದು ಕೂಡ ವಿಶಿಷ್ಟವಾದ ಸಂಗತಿ.

ಇನ್ನು ಅವರ ಕೀರ್ತನೆಗಳಲ್ಲಿ ಬರುವ ನಿಲುವುಗಳನ್ನು ಗಮನಿಸಿರಿ, ಸಂಸಾರ, ಬಂಧು-ಬಾಂಧವರು, ಹೊಲ-ನೆಲ, ಹಣ-ಸಂಪತ್ತು ಇವುಗಳ ಬಗ್ಗೆ ಸ್ಪಷ್ಟ ನಿರಾಕರಣೆಯಿದೆ. ಇವುಗಳಿಗೆಲ್ಲ ಇರುವ ಮಿತಿಯ ಬಗೆಗೆ ಖಚಿತ ನಂಬಿಕೆಯಿದೆ. ಇದೆಲ್ಲಕ್ಕೆ ಉತ್ತರವಾಗಿ ಅಥವಾ ಬಿಡುಗಡೆಯಾಗಿ ಅವರಿಗೆ ಕಾಣಿಸಿದ ಮಾರ್ಗವೆಂದರೆ ಹರಿಯಧ್ಯಾನ, ಕೃಷ್ಣನ ಒಡನಾಟ, ವಿಠಲನ ಸ್ಮರಣೆ ಎಲ್ಲವೂ ಇಲ್ಲಿ ಒಂದೇ ಬಾಳಿನ ಒಂದು ನಂಬಿಕೆಯಾಗಿ, ಶ್ರದ್ಧೆಯ ಕೇಂದ್ರವಾಗಿ ವಿಠಲನು ಗೋಚರಿಸಿದ್ದಾನೆ. ಆತನ ಸಾನಿಧ್ಯದಿಂದಲೇ ಈ ಭವವನ್ನು ಪಯಣಿಸುವ ಆತ್ಮವಿಶ್ವಾಸವೊಂದು ಕೀರ್ತನೆಗಳಲ್ಲಿದೆ. ಅನೇಕ ಭಕ್ತಿ ಕವಿಗಳಲ್ಲಿ ಈ ಗುಣ ಇದ್ದೇ ಇದೆ. ಅಧಿಕಾರ, ಪ್ರಭುತ್ವ, ಹಣವನ್ನು ಅವಲಂಬಿಸಿ ಬದುಕುವ ಪರಿಸರದಲ್ಲಿ ಇದೆಲ್ಲವನ್ನು ಕಡೆಗಿಟ್ಟು ತನ್ನ ಇಷ್ಟ ದೈವದ ಸ್ಮರಣೆಯಲ್ಲಿ ಬದುಕುವುದಕ್ಕೂ ವಿಚಿತ್ರ ಧೈರ್ಯ ಬೇಕಾಗುತ್ತದೆ. ಲೋಕದ ಅನೇಕ ಶಕ್ತಿ ಕೇಂದ್ರಗಳ ವಿರುದ್ಧ ಇದೊಂದು ಬಂಡಾಯ ಅಂತಲೇ ಭಾವಿಸಬೇಕಾಗಿದೆ. ಪುರಂದರದಾಸರ ಬಹುತೇಕ ಕೀರ್ತನೆಗಳು ತಮ್ಮ ಈ ನಂಬಿಕೆಯಿಂದಾಗಿ ಲೌಕಿಕದ ನಶ್ವರತೆಯನ್ನೂ ಭಕ್ತಿಯ ಚಿರನೂತನತೆಯನ್ನು ಸದಾ ಎದುರುಬದಿರಿಟ್ಟು ಬದುಕಿನ ತಾತ್ವಿಕತೆಯನ್ನು ನಿರೂಪಿಸಿವೆ.

ಕಾಡ ಬೆಳದಿಂಗಳು ಸಂಸಾರ
ಕತ್ತಲೆ ಬೆಳದಿಂಗಳು……..”

ಸಂಸಾರ ಎಂತಹದ್ದೆಂದು ಹೇಳಲು ಬಳಸಿಕೊಂಡ ರೂಪಕವಿದು. ತತ್ವಪದಕಾರರಲ್ಲೂ ಈ ರೂಪಕ ಬಳಕೆಯಾಗಿದೆ. ಸಂಸಾರವನ್ನು ಒಂದು ಭ್ರಾಂತಿಯಾಗಿ, ಬಂಧನವಾಗಿ ಕೀರ್ತನೆಗಳು ಪರಿಭಾವಿಸಿವೆ. ಭಕ್ತಿಗೆ, ಆಧ್ಯಾತ್ಮಕ್ಕೆ ತೊಡಕಾಗಿ ಸಂಸಾರ ಕಂಡಿದೆ. ಕೆಲವೆಡೆ ತನ್ನನ್ನು ಭಕ್ತಿಗೆ ಒಪ್ಪಿಸಿದ ಹೆಂಡತಿಯ ಕುರಿತು ಗೌರವವಿದ್ದರೂ ಅನೇಕ ಕಡೆ ಸಂಸಾರವನ್ನು ನಕಾರಾತ್ಮಕವಾಗಿ ಗಮನಿಸಲಾಗಿದೆ;

ಈಸಬೇಕು ಇದ್ದು ಜಯಿಸಬೇಕು
ಹೇಸಿಕೆ ಸಂಸಾರದಲ್ಲಿ ಲೇಸ ಆಸೆ ಇಡದಲೆ

ಎಂಬ ಮಾತಿನಲ್ಲಿರುವ ಅರ್ಥ ಆತ್ಯಂತಿಕವಾಗಿ ಸಂಸಾರದ ನಿರಾಕರಣೆಯನ್ನು ಹೇಳುತ್ತಿದೆ. ಯಾಕೆ ನಿರಾಕರಣೆಯೆಂದರೆ ಅದು ಆತ್ಮೋನ್ನತಿಗೆ ಅವಕಾಶ ನೀಡುವುದಿಲ್ಲವೆಂಬ ನಂಬಿಕೆ.

ಸಾಮಾಜಿಕ ಬದುಕಿನ ಕೆಡಕುಗಳನ್ನೂ ಇಲ್ಲಿಯ ಕೀರ್ತನೆಗಳು ಕಾಣಿಸಿವೆ. ಇವುಗಳ ಪಟ್ಟಿ ದೊಡ್ಡದಾಗಿದೆ. ಸಿರಿವಂತಿಕೆಯ ಅಹಂಕಾರವನ್ನು ಹೀಗಳೆದದ್ದು, ದುರಾಸೆಯ ಅಪಾಯವನ್ನು ತಿಳಿಸಿದ್ದು, ಕುಲಮದವು ತಪ್ಪೆಂದು ಸಾರಿದ್ದು, ಹೊಲೆಯ-ಹೊಲತಿಯ ಅರ್ಥವನ್ನು ಬೇರೆ ರೀತಿ ಗ್ರಹಿಸಿದ್ದು, ಹರಿವ ನದಿಯಲ್ಲಿ ಒಣಮಂತ್ರ ಹೇಳುತ್ತ ಕೂರುವ ಮೌಢ್ಯವನ್ನು ಕಂಡದ್ದು, ದೊರೆಗಳ ಗೆಳೆತನ ಮಾಡಿ ಬಡವರನ್ನು ಹಿಂಸಿಸುವ ಪ್ರವೃತ್ತಿಯನ್ನು ಟೀಕಿಸಿದ್ದು, ವಿದ್ವಜ್ಜನರು ರೊಕ್ಕಕ್ಕೆ ಮರುಳಾಗುವುದನ್ನು ಉಲ್ಲೇಖಿಸಿದ್ದು, ಡೊಂಕುಬಾಲದ ನಾಯಕರ ಚಪಲವನ್ನು ಚಿತ್ರಿಸಿದ್ದು-ಇಲ್ಲೆಲ್ಲ ಪುರಂದರದಾಸರ ಸುಧಾರಕ ಮನೋಧರ್ಮ ಎದ್ದು ಕಾಣುತ್ತದೆ.

ಈ ಸುಧಾರಕ ಮನೋಧರ್ಮದ ಹಿಂದಿನ ಲೋಕದೃಷ್ಟಿ ಅಷ್ಟು ಸರಳವಾದದ್ದಲ್ಲ. ಅದು ಸಮಸ್ಯಾತ್ಮಕವಾಗಿಯೂ ಇದೆ; ಅವರ ಕೀರ್ತಿನೆಯೊಂದು ಯಾರು ಹೊಲೆಯ? ಎಂಬ ಪ್ರಶ್ನೆಯನ್ನೆತ್ತಿಕೊಂಡು ಚರ್ಚಿಸಿದೆ. ’ಕದ್ದು ತನ್ನೊಡಲ ಹೊರೆವಾತನೇ ಹೊಲೆಯ’, ‘ಹುಸಿ ಮಾತನಾಡುವವನೇ ಸಹಜ ಹೊಲೆಯ’ ಎಂಬಿತ್ಯಾದಿ ಮಾತುಗಳನ್ನು ಅರ್ಥಮಾಡಿಕೊಳ್ಳಬಹುದು. ಆದರೆ ’ಪೇಳಿದ ಹರಿಕತೆಯ ಕೇಳದವನೆ ಹೊಲೆಯ’ ’ಆಳಾಗಿ ಅರಸಂಗೆ ಕೈಮುಗಿಯದವ ಹೊಲೆಯ’ … ಇಂಥ ಸಾಲುಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಅವರ ಇನ್ನೊಂದು ಕೀರ್ತನೆಯಲ್ಲಿಯೂ ಈ ವೈರುಧ್ಯವಿದೆ;

ಸ್ನಾನ ಸಂಧ್ಯಾ ಜಪ ಮಾಡದಲೆ ಮೈಗಟ್ಟೆ
ವೃತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ
ಶ್ರುತಿಶಾಸ್ತ್ರ ಪುರಾಣ ಕತೆಗಳನ್ನು ಕೇಳಲಿಲ್ಲ….

ತಾನು ಯಾಕೆ ಹಾಳಾದೆ ಎಂದು ಪಟ್ಟಿ ನೀಡಲಾಗಿದೆ. ಈ ಆಚರಣೆಗಳು ಒಂದು ನಿರ್ದಿಷ್ಟ ಧಾರ್ಮಿಕತೆಯ ಮುಂದುವರಿಕೆಯನ್ನು ಒಪ್ಪಿಕೊಂಡ ಮನಸ್ಸಿನವು. ಹೊಲೆತನವನ್ನೂ ನಿಗದಿಪಡಿಸುವಾಗಲೂ ಕೀರ್ತನೆಗಳು ಕಂದಾಚಾರದಿಂದ ಸಂಪೂರ್ಣವಾಗಿ ಬಿಡುಗಡೆಗೊಂಡಿಲ್ಲ. ಕೀಳು ದೈವಗಳ ನಿರಾಕರಣೆಯನ್ನು ಹೇಳುವ ಇಲ್ಲಿಯ ಕೀರ್ತನೆಯ ಮನೋಧರ್ಮದ ಮೂಲವು ಇಂತಹದ್ದೆ ಆಗಿದೆ.

’ಕಾಮ’ ಒಂದು obsession ತರಹ ಕೀರ್ತನೆಗಳಲ್ಲಿ ಮನೆ ಮಾಡಿದೆ. ಕಾಮ ಈ ಕೀರ್ತನೆಗಳ ಲೋಕದೃಷ್ಟಿಯನ್ನು ನಿರ್ಧರಿಸಿರುವಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಿದೆ. ಲೌಕಿಕದ ಅತಿಯಾದ ವ್ಯಾಮೋಹಕ್ಕೆ ಕಾಮದ ಕುರಿತಿರುವ ತೀವ್ರವಾದ ಆಸಕ್ತಿಯೂ ಒಂದು ಕಾರಣವೆಂಬ ಅಂಶ ಇಲ್ಲಿ ಮತ್ತೆ ಮತ್ತೆ ನಮೂದಾಗಿದೆ. ಮನುಷ್ಯನ ತೊಳಲಾಟದ ಮೂಲ ಕಾರಣವಾಗಿ ಇದನ್ನು ಕೀರ್ತನೆಗಳು ಗ್ರಹಿಸಿವೆ.

ಮಾನಿನಿಯರ ಕುಚಕೆ ಮರುಳಾಗದಿರು
ಮಾಂಸದ ಗಂಟುಗಳಲ್ಲಿ  ||
ನಾನಾ ಪರಿಯಲಿ ಮೋಹ ಮಾಡದಿರು
ಹೀನ ಮೂತ್ರದ ಕುಳಿಯಲ್ಲಿ ||
ಜಾನಕಿರಮಣನ ನಾಮವ ನೆನೆದರೆ
ಜಾಣನಾಗುವೆಯಲ್ಲೋ ಪ್ರಾಣಿ  ||

ಕಾಮವನ್ನು ತ್ಯಜಿಸುವುದು ಭಕ್ತಿಗೆ ಅಗತ್ಯವೆಂಬ ತತ್ವ ಇಲ್ಲಿಯೂ ಮುಂದುವರಿದಿದೆ. ಇದು ಪುರಂದರದಾಸರ ಕೀರ್ತನೆಗಳ ಮುಖ್ಯ ಗ್ರಹಿಕೆಯಾಗಿದೆ. ಇದನ್ನವರು ಪ್ರಥಮ ಪುರುಷದಲ್ಲಿ ನಿರೂಪಿಸುವ ಮೂಲಕ ತೀವ್ರತೆಯನ್ನು ಕಲ್ಪಿಸಿದ್ದಾರೆ;

ಪರವನಿತೆಯರ ಲಾವಣ್ಯಕ್ಕೆ ಲೋಚನ
ಚರಿಸುತಲವರ ಕೂಟಕ್ಕೆ ಬೆರಸಿ ||
ಉರಿವ ಕಿಚ್ಚು ತನಗೆ ಹಿತವೆಂದು ಅದರೊಳು
ಎರಗಿದ ಪತಂತದಂತಾದೆನಲ್ಲ ||”

ಈ Obsession ಕೃಷ್ಣನ ವರ್ಣನೆಯಲ್ಲೂ ಕಾಣಿಸಿಕೊಂಡಿದೆ. ಕೈಯ ತೋರೋ ಕರುಣಿಗಳರಸಾ ಕೈಯ ತೋರೋ….. ಕೀರ್ತನೆಯಲ್ಲಿ ವಿವಿಧ ಪವಾಡಗಳನ್ನು ಮಾಡಿದ ಕೃಷ್ಣನ ವರ್ಣನೆಯಿದೆ. ಈ ವರ್ಣನೆಗಳಲ್ಲಿ “ಅಂಗನೆಯರ ಉತ್ತುಂಗ ಕುಚದಲ್ಲಿಟ್ಟು ಕೈಯ ತೋರೊ” ಎಂಬ ಸಾಲೂ ಇದೆ. ಕೀರ್ತನೆಯ ಧಾಟಿ ಅವನ ಎಲ್ಲಾ ಕ್ರಿಯೆಗಳನ್ನು ಗೌರವದಿಂದ, ಪ್ರೀತಿಯಿಂದ ನೋಡುವ ನೆಲೆಯಲ್ಲಿದೆ. ಮನುಷ್ಯನ ತೊಳಲಾಟದ ಕಾರಣವಾಗಿ ಕಾಮವನ್ನು ಗುರುತಿಸುವ ಪುರಂದರದಾಸರ ಕೀರ್ತನೆಗಳು ಕೃಷ್ಣನ ಸಂದರ್ಭದಲ್ಲಿ ಮಾತ್ರ ’ಕಾಮ’ವನ್ನು ಒಂದು ಚೈತನ್ಯದ ಸಂಗತಿಯಾಗಿ ಗಮನಿಸಿವೆ.

ಲೋಕವನೆ ಸಲಹುವ ಶ್ರೀನಿವಾಸನು ನಮ್ಮ
ಸಾಕಲಾರದೆ ಬಿಡುವನೇ ಮನವೆ

ಪುರಂದರದಾಸರ ಹರಿಭಕ್ತಿಯ ಕುರಿತಾದ ಕೀರ್ತನೆಗಳು ಅವರ ಲೋಕದೃಷ್ಟಿಯು ಇನ್ನೊಂದು ಕೋನವನ್ನು ಕಾಣಿಸುತ್ತಿವೆ. ಅಂದರೆ ಈ ಲೋಕವನ್ನು ಮುನ್ನಡೆಸುವವನೊಬ್ಬ ಇದ್ದಾನೆ. ಅವನ ಕರುಣೆಯಿಲ್ಲದೆ ಇಲ್ಲಿ ಏಳಿಸಲಾಗದು. ಅವನಲ್ಲಿ ನಂಬಿಕೆಯಿಟ್ಟು ಕೋರಿದರೆ ಎಲ್ಲವೂ ಒಳಿತಾಗುತ್ತದೆ. ಅವನನ್ನು ನಿರಾಕರಿಸಿ ನಡೆಯುವ ಬದುಕಿಗೆ ಯಾವ ದಾರಿಯೂ ಇಲ್ಲ. ಇಂಥದ್ದೊಂದು ಖಚಿತವಾದ ತಾತ್ವಿಕತೆ ಪುರಂದರದಾಸರ ಒಟ್ಟಾರೆ ಲೋಕದೃಷ್ಟಿಯನ್ನು ರೂಪಿಸಿದೆ. ಅವರ ಈ ತರಹದ ಗ್ರಹಿಕೆಯಲ್ಲಿ ಲೌಕಿಕದಿಂದ ಬಿಡುಗಡೆಗೊಳ್ಳುವ ಬಯಕೆಯೂ, ಅಸಹಾಯಕತೆಯೂ, ದೈವಭಕ್ತಿಯೂ ಸೇರಿಕೊಂಡಿವೆ. ಅವರ ದೇವತಾಸ್ತುತಿಯ ಬಹುತೇಕ ಕೀರ್ತನೆಗಳಲ್ಲಿ ಈ ತರಹದ ಭಾವವಿದೆ. ಭೌತಿಕ ಸಂಪತ್ತನ್ನೆಲ್ಲ ತ್ಯಜಿಸಿ ಬಂದ ಪುರಂದರದಾಸರು ತಮ್ಮ ಬಡತನವನ್ನು ಹರಿಯ ಧ್ಯಾನದಲ್ಲಿ ಮೀರಲೆತ್ನಿಸಿದ್ದಾರೆ. ಹರಿಯ ಜೊತೆಯಿರಲು ತನಗೆ ಬಡತನವಿಲ್ಲವೆಂಬುದು ಅವರ ಆಳದ ಅನಿಸಿಕೆ.

ರಾಮಾಯಣ, ಮಹಾಭಾರತ, ಭಾಗವತಗಳು ಕೂಡ ಇಲ್ಲಿಯ ಕೀರ್ತನೆಗಳ ಒಳಜಗತ್ತಿನಲ್ಲಿವೆ. ಇವು ಕೂಡ ಅವರ ಲೋಕದೃಷ್ಟಿಯನ್ನು ಪ್ರಚೋದಿಸಿವೆ. ಆದರೆ ಇವು ಚಂಪೂಕಾವ್ಯ, ವಚನ, ಷಟ್ಪದಿಗಳನ್ನು ಪ್ರಭಾವಿಸಿದ ರೀತಿಗೂ ಕೀರ್ತಿನೆಗಳನ್ನು ಪ್ರಭಾವಿಸಿದ ರೀತಿಗೂ ವ್ಯತ್ಯಾಸವಿದೆ. ಅಲ್ಲಿ ಕತೆಯ ಅನೇಕ ಭಾಗಗಳು ಒಡೆದುಕೊಂಡು ಕವಿಯ ಕಾಲದ ಪರೀಕ್ಷೆಗೊಳಪಟ್ಟು ಅಳವಡುತಿದ್ದವು. ಕೀರ್ತನೆಗಳಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಆಲೋಚನೆಗಳು ಯಥಾವತ್ತಾಗಿ ಬಳಕೆಯಾಗಿವೆ. ಅವುಗಳ ನೀತಿ, ವಿಚಾರ ಹಾಗೆಯೇ ಮುಂದುವರೆದಿವೆ. ಅಲ್ಲಿಯ ಮೌಲ್ಯಗಳನ್ನು ಕೀರ್ತಿಸುವುದು, ಅನುಸರಿಸುವಂತೆ ಕರೆಕೊಡುವುದು ಕಂಡುಬರುತ್ತದೆ. ತನ್ನ ಹಿಂದಿರುವ ತಿಳುವಳಿಕೆಯನ್ನು ಶ್ರದ್ಧೆಯಿಂದ ಮುಂದುವರೆಸುವ ಗುಣವೊಂದು ಕೀರ್ತನೆಗಳಲ್ಲಿದೆ. ಇದು ಕೀರ್ತನೆಗಳ ಜನಪ್ರಿಯತೆಗೆ ಕಾರಣವಾದಂತೆ ತೊಡಕೂ ಉಂಟುಮಾಡಿದೆ. ಸಂಕೀರ್ಣತೆ, ಸಂಘರ್ಷಗಳು ಮರೆಯಾಗಿ ಘಟನಾವಳಿಗಳು ಸಪಾಟಾಗಿ ನಿರೂಪಣೆಗೊಂಡಿವೆ. ಈ ಘಟನಾವಳಿಗಳು ಅನೇಕ ಸಲ ಹೊಸ ಅರ್ಥವನ್ನು ಪಡೆದುಕೊಳ್ಳುತ್ತಿಲ್ಲ. ನೋಡಿ, ವಾಸ್ತವವನ್ನು ಕುರಿತು ರಚಿಸಿದ ಕೀರ್ತನೆಗಳಲ್ಲಿ ಸಂಘರ್ಷ, ವ್ಯಂಗ್ಯ ಢಾಳಾಗಿ ಕಂಡುಬರುತ್ತದೆ. ಅಂದರೆ ಹಿಂದಿನದನ್ನು ನೆನಪಿಸಿಕೊಳ್ಳುವಾಗ ಶ್ರದ್ಧೆಯೂ ಈಗಿನದನ್ನು ಕಾಣಿಸುವಾಗ ತಳಮಳ, ವಿರೋಧವೂ ಕಾಣಿಸಿಕೊಂಡಿವೆ. ಈಗಿನದು ತನ್ನ ನಂಬಿಕೆಗೆ ವಿರುದ್ಧವಾಗಿದೆಯೆಂಬ ಆಕ್ಷೇಪಣೆಯಿದೆಯೇ ಹೊರತು ಇದು ಯಾಕೆ ಹೀಗಿದೆಯೆಂದು ಅರ್ಥ ಮಾಡಿಕೊಳ್ಳುವ ತಾಳ್ಮೆ ಇಲ್ಲಿಲ್ಲ.

ಕೃಷ್ಣನ ಕುರಿತಾದ ಕೀರ್ತನೆಗಳಲ್ಲಿಯೂ ಇದನ್ನು ಕಾಣಬಹುದು. ಗೋಪಿಕೆಯರ ಜೊತೆಗಿನ ಸರಸ ಅನೇಕ ಕೀರ್ತನೆಗಳ ವಸ್ತುವಾದರೂ ಯಶೋಧೆ ಮತ್ತು ಕೃಷ್ಣನ ಸಂಬಂಧವು ಹೆಚ್ಚು ಪ್ರಖರವಾಗಿದೆ. ರಾಧೇಯ ಕೃಷ್ಣನಿಗಿಂತ ಯಶೋಧೆಯ ಕೃಷ್ಣ ಮುಂದಿದ್ದಾನೆ. “ನಿನ್ನ ಮಗನೇನೆ ಗೋಪಿ, ಗೋಪಮ್ಮ ನಿನ್ನ ಮಗನೇನೆ ಗೋಪಿ”, “ಲಾಲಿಸಿದಳು ಮಗನ ಯಶೋಧೆ ಲಾಲಿಸಿದಳು ಮಗನ”, “ಏನಾಯಿತು ರಂಗಗೆ ನೋಡಿರಮ್ಮ, ಧಾನಿಸಿ ಎನಗೊಂದು ಹೇಳಿರಮ್ಮ” “ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ”- ಹೀಗೆ ತಾಯಿ-ಮಗನ ಸಂಬಂಧದಲ್ಲಿ ಕೃಷ್ಣ ಅವತರಿಸಿದ್ದಾನೆ. ಪುರಂದರದಾಸರ ಅಂತರಂಗದ ದನಿ ಹೆಚ್ಚು ಪ್ರಾಮಾಣಿಕ ಅನ್ನಿಸುವಂತೆ ಇಲ್ಲೆಲ್ಲ ಕಲೆತುಕೊಂಡಿದೆ. ಗಂಡ-ಹೆಂಡತಿಯ ಸಂಬಂಧದಲ್ಲಿ ವಿಷಾದ ಉಕ್ಕಿಸುವ ಗಳಿಗೆಗಳೇ ಜಾಸ್ತಿ. ಆದರೆ ತಾಯಿ-ಮಗನ ಸಂಬಂಧಗಳು ಉಲ್ಲಾಶದ ಕ್ಷಣಗಳಲ್ಲಿ, ಜೀವಂತವಾಗಿ ತೆರೆದುಕೊಂಡಿವೆ. ಕೃಷ್ಣನನ್ನು ಹೀಗೆ ತಾಯಿ-ಮಗನ ಹಿನ್ನೆಲೆಯಲ್ಲಿ ಗಮನಿಸಿದ್ದರಿಂದ ಉಂಟಾದ ಸಾಧ್ಯತೆಗಳನ್ನು ನೋಡೋಣ. ಇದರಿಂದಾಗಿ ಭಾವನಾತ್ಮಕವಾದ ಎಳೆಯ ಮಗುವಿನ ಲೀಲೆಗಳು ಕಣ್ತುಂಬಿ ನಿಂತಿವೆ. ತಾಯ್ತನದ ಹರ್ಷೋಲ್ಲಾಸಗಳಿಗೆ ಅವಕಾಶವಾಗಿದೆ. ಈ ಚಿತ್ರಗಳು ಬದುಕಿನ ನವಿರಾದ ಅನುಭವಗಳಾಗಿ ಮುದಗೊಳಿಸುತ್ತವೆ. ಪುರಂದರದಾಸರು ಅರ್ಜುನನ ಕೃಷ್ಣನನ್ನು, ರಾಧೇಯ ಕೃಷ್ಣನನ್ನು ದೂರವಿಟ್ಟದ್ದರಿಂದ ಹಿಂಸೆಯ, ಯುದ್ಧದ, ಪ್ರೇಮದ ಪ್ರಶ್ನೆಗಳನ್ನೂ ದೂರವಿಟ್ಟಂತಾಗಿದೆ. ಈ ಆಯ್ಕೆ ತಪ್ಪು ಎಂದು ಭಾವಿಸಬೇಕಿಲ್ಲ. ಆದರೆ ಇಂಥ ಆಯ್ಕೆಯಿಂದ ದೂರಸರಿದ ಪ್ರಶ್ನೆಗಳನ್ನೂ ನೆನಪಿಸಿಕೊಳ್ಳವುದರಲ್ಲಿ ತಪ್ಪಿಲ್ಲ.

ಹೀಗೆ ದೂರ ಸರಿದ ಇನ್ನಷ್ಟು ಸಂಗತಿಗಳೂ ಇವೆ. ಪುರಂದರದಾಸರು ಅಪಾರ ತಿರುಗಾಟ ಮಾಡಿದವರು. ಆದರೆ ಅವರ ಕೀರ್ತನೆಗಳಲ್ಲಿ ನಿಸರ್ಗ, ಪ್ರಾಣಿ, ಪಕ್ಷಿಗಳು ಗೈರುಹಾಜರಾಗಿವೆ. ಒಂದೆರಡು ಕಡೆ ಬಂದರೂ ಅವು ಜೀವಕ್ಕೊ, ಆಧ್ಯಾತ್ಮಕ್ಕೊ, ದರ್ಶನಕ್ಕೊ ಸಂಕೇತವಾಗಿ ಬಂದಿವೆ. ನಿಸರ್ಗವನ್ನು ತನ್ನ ಆಲೋಚನೆಯ ಭಾಗವನ್ನಾಗಿ ಮಾಡಿಕೊಳ್ಳಲು ಈ ಕೀರ್ತನೆಗಳು ಅಷ್ಟು ಆಸಕ್ತಿ ತೋರುತ್ತಿಲ್ಲ. ಈ ಸಂಗತಿ ಕೂಡ ಅವರ ಲೋಕದೃಷ್ಟಿಯ ಕುರಿತು ಮುಖ್ಯ ಸೂಚನೆ ಕೊಡುತ್ತಿದೆ. ವ್ಯಕ್ತಿವಿಶಿಷ್ಟ ನಿಲುವಿನಲ್ಲಿ ಅವರ ಆಲೋಚನೆಗಳು ಬೆಳೆಯುತ್ತಿರುವಂತಿದೆ. ಹಾಗೆಯೇ ಈ ಕೀರ್ತನೆಗಳ ದೇಸಿ ತಿಳುವಳಿಕೆ ಕೂಡ ಸಮಸ್ಯಾತ್ಮಕವಾಗಿದೆ. ಜನಪದ ಅಂಶಗಳು Negative ಅರ್ಥದಲ್ಲಿ ಬಂದಿದ್ದೆ ಹೆಚ್ಚು. ಕೀರ್ತನೆಯೊಂದು ತಿರಸ್ಕರಿಸುವ ದೇವರುಗಳ ಪಟ್ಟಿ ನೋಡಬೇಕು. ಹಾಗೆಯೇ ’ದುಡಿಮೆ’ ಕುರಿತಾದ ಆಸಕ್ತಿ ಕೂಡ ಕೀರ್ತನೆಗಳಲ್ಲಿ ವಿರಳ. ಸ್ತ್ರೀ ಬಗೆಗಿನ ಸಂಗತಿಗಳಲ್ಲಿ ಪ್ರಶ್ನಿಸಬಹುದಾದ ಅನೇಕ ಅಂಶಗಳಿವೆ.

ನೂರಾರು ಕೀರ್ತನೆಗಳನ್ನು ಓದುತ್ತಿರುವಾಗ ಹೌದು ಇವು ಪುರಂದರದಾಸರ ಖಚಿತ ಆಯ್ಕೆಗಳು ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಕೆಲ ಕೀರ್ತನೆಗಳು ಇವುಗಳಿಗೆ ವಿರುದ್ಧ ದಿಕ್ಕಿನ ಆಲೋಚನೆಗಳಿಂದ ಕೂಡಿವೆ. ಸಂಸಾರ, ಹೆಣ್ಣು ಆಚರಣೆಗಳ ಬಗಗೆ ಹೀಗೆ ವೈರುಧ್ಯಗಳಿಂದ ಕೂಡಿರುವ ನಿಲುವು ಕಾಣಬಹುದು. ಪುರಂದರದಾಸರು ಪೊರೆಯನ್ನು ಸಂಪೂರ್ಣವಾಗಿ ಕಳಚಲಾಗದೇ ಮತ್ತು ಆ ಪೊರೆ ಒಳಗಡೆಯೇ ಇದ್ದು ಹೊಸ ದಾರ್ಶನಿಕತೆಯನ್ನು ಕಾಣಿಸಬೇಕಾದ ಇಕ್ಕಟ್ಟಿನಲ್ಲಿದ್ದಾರೆ. ನೋಡಿ ಕನಕಾಭರಣವನ್ನು ದಾನ ಮಾಡಲು ಅದರಿಂದ ಸದ್ಗತಿ ಪಡೆಯುವುದರ ವಿವರಗಳೂ ಕೀರ್ತನೆಗಳಲ್ಲಿವೆ. ಧರ್ಮದ ಸಾಂಪ್ರದಾಯಿಕತೆಯನ್ನು ಕೆಲವೆಡೆ ಮೀರುತ್ತ, ಮತ್ತೆ ಕೆಲವೆಡೆ ಅನುಸರಿಸುತ್ತ ಇರುವುದು ಸ್ಪಷ್ಟವಾಗಿಯೇ ಕಾಣುತ್ತದೆ. ಪುರಂದರದಾಸರದು ಆಚರಣೆಯನ್ನು ಮೀರಿದ ಅನುಭಾವಿಯ ದೃಷ್ಟಿಕೋನವಲ್ಲ. ಆಚರಣೆಯನ್ನು ಒಪ್ಪಿಕೊಂಡೂ ಕೆಡುಕನ್ನು ಸರಿಪಡಿಸುವ ಲೌಕಿಕ ಮನಸ್ಸಿನವರು.

ಬದುಕಿನ ನಿಗೂಢ ಅಂಶಗಳನ್ನು ಜಿಜ್ಞಾಸುವಿನ ಹಾಗೆ ನೊಡಿದ ಕೀರ್ತನೆಗಳೂ ಕೂಡ ಇಲ್ಲಿವೆ. ತತ್ವಪದಗಳ ರೀತಿಯಲ್ಲಿ ಇವುಗಳ ರಚನೆಯಿದೆ. ಮುಖ್ಯ ಪ್ರತಿಮೆಯೊಂದು ರೂಪಿತವಾಗಿ ಸೂಕ್ಷ್ಮವಾದ ಆವರಣವನ್ನು ಉದ್ದಕ್ಕೂ ನಿರ್ಮಿಸಿರುತ್ತದೆ. ’ಅಂಬಿಗ ನಾ ನಿನ್ನ ನಂಬಿದೆ”, “ಗಿಳಿಯು ಪಂಜರದೊಳಿಲ್ಲ”, “ಅನುದಿನದಲಿ ಬಂದು ತನುವ ಸ್ನೇಹವ ಮಾಡಿ”, “ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ” ಇತ್ಯಾದಿ ರಚನೆಗಳನ್ನು ಗಮನಿಸಬೇಕು. ಪುರಂದರದಾಸರ ಚಿಂತನೆಯ ಹರಳುಗಟ್ಟಿದ ರೂಪ ಇವುಗಳಲ್ಲಿದೆ. ಅವರ ಕೀರ್ತನೆಗಳಲ್ಲಿ ಕಂಡುಬರುವ ಭಕ್ತಿ, ಕೃಷ್ಣಲೀಲೆ ಕೆಲವೊಮ್ಮೆ ಬಹಳ ಕ್ಯಾಸುವಲ್ ಆಗಿ ಕಾಣುತ್ತದೆ. ಅವರ ಸಾಮಾಜಿಕ ವಿಡಂಬನೆಯ ಕೀರ್ತನೆಗಳು ಕೂಡ. ಹಾಗೆಂದು ಅವರು ತಮ್ಮ ಪರಿಧಿಯಲ್ಲಿ ಎತ್ತಿದ ಸಾಮಾಜಿಕ ಪ್ರಶ್ನೆಗಳು ಗೌಣವೆಂದು ಭಾವಿಸಬೇಕಾಗಿಲ್ಲ. ಅಂದರೆ ತಾತ್ವಿಕ ಜಿಜ್ಞಾಸೆಯ ತರಹದ ರಚನೆಗಳು ಅವರ ವ್ಯಕ್ತಿತ್ವದ ಬೇರೊಂದು ಮುಖವನ್ನು ಖಚಿತವಾಗಿ ಹಿಡಿದಿಟ್ಟಿವೆ. ಇಂಥಲೆಲ್ಲ ತಾವು ನಂಬಿದ ಧರ್ಮವನ್ನು ಅದರ ಆಚರಣೆಗಳನ್ನು ಮರೆತ ಪುರಂದರದಾಸರ ವ್ಯಕ್ತಿತ್ವ ಇಲ್ಲಿದೆ. ಯಾವುದಕ್ಕೆ ತಮ್ಮನ್ನು ಕಟ್ಟಿಹಾಕಿಕೊಳ್ಳಬೇಕೆನ್ನುತ್ತಿದ್ದರೂ ಅದು ಅವರಿಗೆ ಗೊತ್ತಿಲ್ಲದೆ ಇಲ್ಲಿ ಬಿಡುಗಡೆಯ ಹಾದಿ ಹಿಡಿದಿದೆ. ತಮ್ಮ ಕಚವ-ಕುಂಡಲಗಳನ್ನು ಕೆಳಗಿಟ್ಟು ನುಡಿಯುತ್ತಿರುವಂತೆ ಇಲ್ಲಿ ಕಾಣುತ್ತಿದೆ.

ಪುರಂದರದಾಸರ ಅತ್ಯಂತ ಜನಪ್ರಿಯವಾದ ಕೀರ್ತನೆಯೊಂದಿದೆ. ಅದು “ಎಲ್ಲಾರು ಮಾಡುವುದು ಹೊಟ್ಟೆಗಾಗಿ” ಇಲ್ಲಿ ಹೊಟ್ಟೆಗಾಗಿ ಅನ್ನುವುದು ಬರೀ ಅನ್ನದ ಹಸಿವು ಮಾತ್ರವಲ್ಲ. ಅದು ಎಲ್ಲ ತರಹದ ಹಸಿವನ್ನು ಹೇಳುತ್ತಿದೆ. ಅಧಿಕಾರದ, ಹೆಣ್ಣಿನ, ಹಣದ, ಧರ್ಮದ ಹಸಿವು ಕೂಡ ಹೌದು.

ದೊರೆತನ ಮಾಡುವುದು ಹೊಟ್ಟೆಗಾಗಿ
ಕರಿ ತುರುಗವೇರುವುದು ಹೊಟ್ಟೆಗಾಗಿ

ಇಲ್ಲಿ ಹಸಿವಿಗೆ ಅನೇಕ ಮುಖಗಳಿವೆಯೆಂಬುದಕ್ಕೆ ಮೇಲಿನ ಸಾಲುಗಳು ಒಂದು ಸಣ್ಣ ಉದಾಹರಣೆ. ಯಾಕೆಂದರೆ ದೊರೆತನವನ್ನು ಯಾರೂ ಹೊಟ್ಟೆಗಾಗಿ ಮಾಡುವುದಿಲ್ಲ. ಇವು ಅಧಿಕಾರದ ಹಸಿವಿನ ಕ್ರಿಯೆಗಳು. “ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ” ಕೀರ್ತನೆ ಕೂಡ ಟೊಳ್ಳಿನ ಅನೇಕ ಸಂಗತಿಗಳನ್ನು ತೋರ್ಪಡಿಸಿದೆ. ಪುರಂದರದಾಸರ ರಾಜಕೀಯ ದೃಷ್ಟಿಕೋನ ಹರಿತವಾದುದು. ಅಲ್ಲಿರುವ ಆಳವಾದ ವ್ಯಂಗಕ್ಕೆ ವಿಚಿತ್ರವಾದ ಶಕ್ತಿಯಿದೆ. ಅದು ಕೆಲವೊಮ್ಮೆ ಅಧಿಕಾರದ ಕೇಂದ್ರಗಳನ್ನು ತಣ್ಣಗೆ ಕೊಯ್ದುಬಿಟ್ಟಿದೆ. ಅವರ ಕೀರ್ತನೆಯ ಅರ್ಥದ ಗಡಿಗಳು ಇಂಥಲೆಲ್ಲ ವಿಸ್ತಾರಗೊಂಡಿವೆ. ಈಗ ಒಂದೊಂದೇ ಸ್ಪಷ್ಟಗೊಳ್ಳತೊಡಗಿದೆ; ಪುರಂದರದಾಸರದು ಒಂದು ಧಾರ್ಮಿಕ ಮನಸ್ಸು ಹೇಗೋ, ಹಾಗೆಯೇ ಸಾಮಾಜಿಕ, ರಾಜಕೀಯ, ಸಾಹಿತ್ಯಿಕ ಮನಸ್ಸು ಕೂಡ ಹೌದು. ಧಾರ್ಮಿಕ ಮನಸ್ಸು ಹಿಂದೆ ಸರಿದಾಗಲೆಲ್ಲ ಕೀರ್ತನೆಗಳು ಒಡೆದ ಕೆರೆಯಂತೆ ಅನೇಕ ದಿಕ್ಕಿಗೆ ಚಾಚಿಕೊಳ್ಳುತ್ತವೆ. ಪುರಂದರದಾಸರ ಲೋಕದೃಷ್ಟಿಯನ್ನು ಈ ಎಲ್ಲ ವೈರುಧ್ಯಗಳ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕಾಗಿದೆ.