ಧ್ಯಾನವು ಕೃತ ಯುಗದಲ್ಲಿ ಯಜ್ಞ
ಯಾಗವು ತ್ರೇತಾಯುಗದಲ್ಲಿ
ಅರ್ಚನೆ ದ್ವಾಪರ ಯುಗದಲ್ಲಿ
ಕೀರ್ತನೆ ಮಾತ್ರರು ಕಲಿಯುಗದಲ್ಲಿ ಮು
ಕುತಿಯನ್ನೀವ ಪುರಂದರವಿಠಲ

ಭಕ್ತಿಯುಗದ ಮಹಾತ್ವಾಂಕ್ಷೆಯನ್ನು ಪುರಂದರದಾಸರ ಈ ಕೀರ್ತನೆ ಹಿಡಿದಿಡಲು ಯತ್ನಿಸಿದಂತೆ ತೋರುತ್ತದೆ. ಲೌಕಿಕ ಬಂಧನದಿಂದ ಬಿಡುಗಡೆಗೊಳ್ಳುವ ಮಾರ್ಗದ ಹಲವು ಮತತತ್ವಗಳ ಯಾತ್ರೆಯೇ ಮುಂದುವರಿದಿದೆ. ಒಂದೊಂದು ಮತತತ್ವಕ್ಕೆ ಬದ್ಧರಾದ ಸಿದ್ಧಾಂತಿಗಳು ಆ ತತ್ವವನ್ನು ಜನಮಾನಸಕ್ಕೆ ತಲುಪಿಸುವ, ಅದರಿಂದ ಮುಕ್ತರನ್ನಾಗಿಸುವ ಮಹದಾಸೆಯನ್ನು ಹೊತ್ತಿರುತ್ತಾರೆ. ಪುರಂದರದಾಸರಾಗಲಿ ಉಳಿದಾವ ದಾಸರಾಗಲಿ ತಮ್ಮ ಕೀರ್ತನೆಗಳ ಮೂಲಕ ಮಾಡಿದ ಕಾರ್ಯವೆಂದರೆ ಬಿಡುಗಡೆಯ ಮಾರ್ಗೋಪಾಯಗಳನ್ನು ಹಾಡುತ್ತಾ ಜನರ ಮನೆ ಬಾಗಿಲಿಗೆ ಕೊಂಡೊಯ್ದಿದ್ದು.

ಕೀರ್ತನೆಗಳ ಕ್ರಿಯಾಶೀಲತೆ ಎದ್ದು ಕಾಣುವಂತದ್ದೆ. ಯಾವುದೇ ತತ್ವವಾಗಲಿ ಕಲೆ, ಸಾಹಿತ್ಯ ಆಯಾಕ್ಷೇತ್ರದ ಕ್ರಿಯಾಶೀಲತೆಯನ್ನು ತರ್ಕಬದ್ಧವಾಗಿ ವಿವೇಚಿಸುವ ಒಂದು ಶಿಸ್ತಾದ ತಿಳುವಳಿಕೆಯಾಗಿ ಕಾರ್ಯ ನಿರ್ವಹಿಸಬೇಕು. ಈ ತತ್ವ ರೂಪಗೊಳ್ಳುವುದು ಹಲವು ಜ್ಞಾನಗಳ ನೆಲೆಗಳಿಂದ ಗ್ರಹಿಸಿ ರೂಪಿಸಿಕೊಂಡ ಒಂದು ಬೌದ್ಧಿಕ ವಿಧಾನದಿಂದ ದಾಸರ ಕೀರ್ತನೆಗಳಲ್ಲಿ ಕಾಣುವುದು ಭಾವನಾತ್ಮಕ ಅನುಸಂಧಾನ. ಭಕ್ತಿ ಭಾವನೆಯಿಂದ ರೂಪಿತಗೊಂಡ ಸಂವೇದನೆಯಿಂದ ಒಂದು ತತ್ವವನ್ನು ವಿಶ್ವಾತ್ಮಕಗೊಳಿಸುವ ಅಭೀಪ್ಸೆ ಹೊಂದಿರುವಂತಾದ್ದು, ಮಥಿತಗೊಂಡ ಮಾಧ್ವಮತ ತತ್ವ ಮೀಮಾಂಸೆಯನ್ನು ಕೀರ್ತನ ಸಾಹಿತ್ಯದ ಮೂಲಕ ಕ್ರಿಯಾಗೊಳಿಸುವ ವಿವೇಕವನ್ನು ಪ್ರಕಟಿಸುವ ಸಾಹಿತ್ಯ ತತ್ವವಾಗಿಯೇ ಅವು ಕಾರ್ಯ ನಿರ್ವಹಿಸಿವೆ. ಶುಷ್ಕ ತತ್ವವಾಗಿ ಮತ ಗ್ರಂಥಗಳಲ್ಲಿ ಉಳಿದು ಬಿಡಬಹುದಾಗಿದ್ದ ತತ್ವಗಳಿಗೆ ಕೀರ್ತನೆಗಳಿಂದ ’ದೇಸಿ’ ತನವನ್ನು ಧಾರೆಯೆರೆಯುವುದರ ಮೂಲಕ ಕನ್ನಡದ ಸಾಧ್ಯತೆಯನ್ನು ವಿಸ್ತರಿಸುವ ರಚನೆಗಳಾಗಿಯೂ ಅವುಗಳ ಪಾತ್ರ ದೊಡ್ಡದು.

ಒಂದು ಸಾಹಿತ್ಯ ಕೃತಿ ತನ್ನ ತಾತ್ವಿಕತೆಯಿಂದಲೇ ಅದು ಪ್ರಸ್ತುತವೂ ಹಾಗೂ ಅಪ್ರಸ್ತುತವೂ ಆಗುವ ಪ್ರಕ್ರಿಯೆಯೊಂದರಲ್ಲಿ ಹಾಯ್ದು ಬರುತ್ತಿರುತ್ತದೆ. ಅದರ ಪ್ರಸ್ತುತತೆಯು ಅದು ಹೇಗೆ ಮಾನವೀಯ ಪರವಾದುದು ಮತ್ತು ಮನುಷ್ಯನ ವ್ಯಕ್ತಿತ್ವ ನಿರ್ಮಾಣದಲ್ಲಿ ಅದು ವಹಿಸುವ ಪಾತ್ರವೇನು? ಎಂಬುದರಿಂದ ನಿರ್ಧರಿತವಾಗುತ್ತದೆ. ಇನ್ನ ಕಾಲದ ವೈರುದ್ಧಗಳಿಗೆ ಮುಖಾಮುಖಿಯಾಗಿ ಅನಂತ ತತ್ವವೊಂದರ, ಸತ್ಯವೊಂದರ ಕಡೆ ತುಡಿಯುವ ಅದರ ಪ್ರವೃತ್ತಿಯಿಂದಲೇ ಅದು ಎಲ್ಲ ಕಾಲದ ಸಮಾಜಗಳಲ್ಲಿ ಮಾನ್ಯಗೊಳ್ಳುತ್ತಿರುತ್ತದೆ. ಇದು ಸಾಹಿತ್ಯದ ತತ್ವವೇ ಆಗಿದೆ. ಬದುಕಿನ ಅನುಭವದಿಂದ ಶೋಧಿಸಿಕೊಂಡ ಮಾನವ ಪ್ರೀತಿ ಮತ್ತು ಪ್ರೇಮದ ಮೌಲ್ಯವನ್ನೇ ಸಾಹಿತ್ಯ ಪ್ರತಿನಿಧಿಸುವ ಕಾರಣ ಸಾಹಿತ್ಯ ಸಾರುವ ತತ್ವವು ಜೀವನದ ಅತ್ಯಂತಿಕ ಸ್ವರೂಪವು ಹಾಗೂ ಅದರ ರೂಪಣದ ಕಡೆ ನಡೆಯುವ ಒತ್ತಾಸೆಯನ್ನು ಪ್ರಕಟಪಡಿಸುತ್ತದೆ. ಅಂತಹ ಅಭಿವ್ಯಕ್ತಿಗಳನ್ನು ಕಾಲವೇ ತೋಳುಗಳಲ್ಲಿರಿಸಿ ಮುಂದಿನ ತಲೆಮಾರುಗಳಿಗೆ ಕೊಂಡೊಯ್ಯುತ್ತದೆ.

ಸಾಹಿತ್ಯ ತತ್ವವೆನ್ನುವುದು ಬಹಳ ಸಲ ಕವಿ ಕೇಂದ್ರತವಾಗಿ ಹುಟ್ಟಿಕೊಂಡು ಕ್ರಮೇಣ ಒಟ್ಟು ಸನ್ನವೇಶದಲ್ಲಿ ಸಂಘರ್ಷ, ಸ್ವೀಕರಣ, ನಿರಾಕರಣೆಯ ಮೂಲಕ ಅದು ವಿಕಾಸಗೊಳ್ಳುತ್ತಾ ಹೋಗುತ್ತದೆ. ಈ ಸಾಹಿತ್ಯ ತತ್ವವು ಸಾಮಾಜಿಕ ಚಿಂತನೆಯಿಂದ ಹೇಗೊ ಹಾಗೆ ಧಾರ್ಮಿಕ, ಆರ್ಥಿಕ ಚಿಂತನಾ ನೆಲೆಗಳ ಮೂಲಕ ಹುಟ್ಟು ಪಡೆಯುತ್ತದೆ ಮತ್ತು ಇವುಗಳನ್ನು ಪ್ರಸ್ತುತಗೊಳಿಸುವ ಹಾಗೂ ಅಪ್ರಸ್ತುತಗೊಳಿಸುವ ವಾಗ್ವಾದಗಳೂ ನಡೆಯುತ್ತಲೇ ಇರುತ್ತವೆ. ಆ ತಾತ್ವಿಕ ಚಿಂತನೆಯ ಜವಾಬ್ದಾರಿಯನ್ನು ಎಲ್ಲ ಲೇಖಕರೂ ಹೊರಬೇಕು. ಪರಂಪರೆಯ ನಡುವೆಯೇ ಒಂದು ಸಾಹಿತ್ಯ ತತ್ವ ತನ್ನ ಅಸ್ಥಿತ್ವವನ್ನು ಪಡೆದುಕೊಳ್ಳುತ್ತದೆ. ಇಂಥಾ ಸಾಹಿತ್ಯ ತತ್ವಗಳ ಪಂಥಗಳ ಚಿಂತನೆಯಿಂದ ಹುಟ್ಟಿ ಕೊಂಡಾಗ ಅನೇಕರು ಇದರಿಂದ ದೃಷ್ಟಿಯನ್ನು ಪಡೆದರೆ ಇನ್ನು ಕೆಲವರು ಅದನ್ನು ಮೀರಿ ನಡೆಯುತ್ತಾರೆ.

ಜೀವ ವಿರೋಧಿಯಾದ ರಚನೆಗಳನ್ನು ತಿರಸ್ಕರಿಸುತ್ತ ಜೀವ ಪರವಾದುದನ್ನು ಉಳಿಸುತ್ತಾ, ಸಂಸ್ಕರಿಸುತ್ತಾ ಹೋಗುವುದೇ ಸಾಹಿತ್ಯ ತತ್ವವಾಗಿದೆ. ಬದುಕಿನ ಕ್ಷಣದ ಸಾಧ್ಯತೆಯಿಂದ ಅನಂತಾನಂತದವರೆಗಿನ ಗಮ್ಯಾತಿಗಮ್ಯವಾಗುವ ಎಷ್ಟೋ ವಿಷಯಗಳನ್ನು ಕುರಿತು ಸಾಹಿತ್ಯ ಧೇನಿಸುತ್ತಿದ್ದರೂ, ಅದರಿಂದ ಉತ್ಪನ್ನಗೊಂಡ ಯಾವ ತತ್ವವೇ ಆಗಲಿ ಬದುಕಿನ ವಿಕಾಸಕ್ಕೆ ಭಾದಕವೂ, ಪೂರಕವೂ ಆಗುವ ತತ್ವವಾಗಿದ್ದರೆ ಸಾಕು ಮತ್ತು ಅದರ ಆತ್ಯಂತಿಕ ಉದ್ದೇಶ ಕೂಡ ಅದೇ ಆಗಿದೆ. ತತ್ವಜ್ಞಾನ ಹಾಗೂ ಸಾಹಿತ್ಯಗಳೆರಡು ಈ ಅರ್ಥದಲ್ಲಿ ಒಂದೆಡೆ ಬೆರೆತಂತೆ ತೋರುತ್ತದೆ. ತೋರಿಯೂ ಬೇರೆಯಾಗಿ ನಿಲ್ಲುತ್ತವೆ. ತತ್ವಜ್ಞಾನದ ಶುಷ್ಕ ಜಿಜ್ಞಾಸೆಯ; ಸಂಕೀರ್ಣತ್ವದ ನೆಲೆಗಿಂತ ಸಾಹಿತ್ಯವು ಭಾವನಾತ್ಮಕವೂ ಹಾಗೂ ಬುದ್ಧಿ ಪೂರ್ವಕವೂ ಆದ ಸಂಯೋಗದಿಂದ ಹೊರಟು ಬದುಕಿನ ತತ್ವವೊಂದನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ.ವಿಧಿ ವಿಧಾನ ದೃಷ್ಟಿಯಿಂದ ತರ್ಕ ಸ್ವರೂಪದಲ್ಲಿರುವ ತತ್ವಕ್ಕಿಂತ ಈ ಬಗೆಯ ತತ್ವವು ಅನುಭವಗಮ್ಯ ಸಾಧ್ಯತೆಯದ್ದು ಮತ್ತು ಜೀವಪರವಾದದ್ದು ಆಗಿರುತ್ತದೆ. ಕಾಲಕಾಲದ ಜೀವನ ದೃಷ್ಟಿಯನ್ನು ರೂಪಿಸುವ ಮತ್ತು ಅದಕ್ಕೆ ತಕ್ಕುದಾದ ಸಹ್ಯ ಬದುಕನ್ನು ರೂಪಿಸುವ ಮಹದಾಸೆಯನ್ನು ಈ ತತ್ವ ಒಳಗೊಂಡಿರುತ್ತದೆ. ಆದುದುರಿಂದಲೆ ಸಾಹಿತ್ಯವಿಲ್ಲದೆ ಒಂದು ಸಂಸ್ಕೃತಿ ಜೀವಂತವಾಗಲಾರದು. ಜೀವಂತಿಕೆಯ ಲಕ್ಷಣವೇ ಸಾಹಿತ್ಯ ತತ್ವವಾಗಿರುತ್ತದೆ.

ಜಾಗತಿಕ ಸಾಹಿತ್ಯದ ಒಟ್ಟಂದದಿಂದಾಗಲಿ ಅಥವಾ ಸಾಹಿತ್ಯದ ನೆಲೆಯಿಂದಾಗಲಿ ಈ ನಿಲುವನ್ನು ನಾವು ವಿಶ್ಞೇಷಿಸಿ ನೋಡಬಹುದು. ಕನ್ನಡ ಸಂದರ್ಭದ ಸಾಹಿತ್ಯ ಜೀವ ಪರವಾದ ಧ್ವನಿಯಾಗಿಯೇ ಕೆಲಸ ಮಾಡಿದೆ. ಧರ್ಮದೊಂದಿಗೆ ಸಮೀಕರಣ ಹೊಂದಿಯೂ, ಧಾರ್ಮಿಕ ತತ್ವಗಳ ಬಗ್ಗೆ ನಂಬುಗೆಯಿದ್ದು, ಕೆಲವೊಮ್ಮೆ ಮತವಾದಿ ಎನ್ನುವಷ್ಟರವರೆಗೆ ನಿರ್ವಚನಗೊಂಡಿದ್ದರೂ ಆ ಮಿತಿ ತತ್ವದಾಚೆಯ ವಿಶ್ವಾತ್ಮಕ ನೆಲೆಗಳಿಗೆ ಕೈ ಚಾಚುವ ಅದರ ಅಗೋಚರ ತತ್ವದಿಂದಾಗಿ ಅವು ಮಹತ್ವದ ಕೃತಿಗಳಾಗಿಯೇ ನಮ್ಮ ನಡುವೆ ಇಂದೂ ಅನುಸಂಧಾನಕ್ಕೆ ಅರ್ಹವಾಗಿವೆ. ಅನುಸಂಧಾನಗೊಳ್ಳುತ್ತಿವೆ; ಗೊಳ್ಳುತ್ತಿರುತ್ತವೆ.

ಸಂವೃತವಿವೃತ

ಸಾಹಿತ್ಯದ ಒಂದು ಸಾಮಾನ್ಯ ಲಕ್ಷಣವಾಗಿ ನಾವುಕಂಡುಕೊಳ್ಳಬಹುದಾದಲ್ಲಿ ಅದರ ಸಂವೃತತೆ ಹಾಗೂ ವಿವೃತತೆ ಎಂಬ ಜೋಡಿ ಕ್ರಿಯೆಗಳು, ಸಯಾಮಿ ಸ್ವರೂಪದ ಈ ಬಗೆ ಒಂದು ಕೃತಿಗೆ ಅಂಟಿಕೊಂಡು ಒಂದ ಕರ್ಣಕುಂಡಲಗಳಂತೆ ತೋರುತ್ತದೆ. ಈ ಮಾತನ್ನು ಹಳೆಗನ್ನಡ ಹಾಗೂ ನಡುಗನ್ನಡ ಪಠ್ಯಗಳನನ್ನಿರಿಸಿ ವಿವರಿಸಿಕೊಳ್ಳಬಹುದು.

ಲೌಕಿಕ ಮತ್ತು ಆಗಮಿಕವೆಂಬ ದೃಷ್ಟಿಗತವಾಗಿ ರೂಪು ಪಡೆದ ಎರಡು ಮಾರ್ಗಗಳನ್ನು ರೂಪಿಸಿದ್ದೆ ಈ ಸಂವೃತ ತತ್ವ ಎಂಬುದು ಸ್ಪಷ್ಟ. ಕವಿ-ಕಾವ್ಯ-ಆಶ್ರಿತ-ಸಮೀಕರಣ-ಮಹತತ್ವ ಈ ಮೊದಲಾದ ಸಂವೃತ ತತ್ವವಿಲ್ಲದೆ ಒಂದೂ ಕೃತಿಯೂ ನಮಗೆ ಲಭ್ಯವಾಗುವುದು ವಿರಳ, ಕೃತಿ ರಚನೆಯ ಹಿಂದಿನ ಒತ್ತಡವಿದು, ಈ ಒತ್ತಡವೆಂಬುದು ಪೂರ್ವ ಗೃಹೀತವೆ. ಈ ಗೃಹೀತಗಳ ನಡುವೆಯೇ ಪಠ್ಯಗಳು ವಿವೃತಗೊಳ್ಳುವ ಮಹದಾಶೆಯನ್ನು ಪ್ರಕಟಿಸುತ್ತವೆ. ಇಂತಹ ಮಹದಾಶೆಗಳೇ ಆ ಕೃತಿಯನ್ನು ಅನನ್ಯವಾಗಿಸಿದೆ ಕೂಡ. ಬದುಕಿನ ತತ್ವದ ಹುಡುಕಾಟ, ಸತ್ಯದ ಆವಿಷ್ಕಾರ ಅಥವಾ ಅದರ ಉತ್ಕರ್ಷದ ಕಡೆ ಈ ಪಠ್ಯಗಳು ತಿಡಿಯುತ್ತಿರುತ್ತದೆ. ಇವು ಓದುಗನಿಗೆ ನಿಂತು ವಿಶ್ರಾಂತಿ ಪಡೆವ ತಂಗುದಾಣಗಳಾಗಿವೆ. ಅಂಥ ತಾಣಗಳಿಗಾಗಿ ಹುಡುಕಾಟವೂ ಮತ್ತು ಅಂಥ ತಾಣಗಳು ಎದುರಾಗುವುದೂ ಸಹಜ ಕೂಡ ಆಗಿದೆ. ಪಠ್ಯಗಳನ್ನು ಓದುವಾಗ ಈ ಬಗೆಯ ಅಲಿಖಿತ ಒಪ್ಪಂದದೊಂದಿಗೆ ಪ್ರವೇಶ ಪಡೆಯುತ್ತೇವೆ. ಈ ಬಗೆಯ ಅಲಿಖಿತ ಒಪ್ಪಂದದೊಂದಿಗೆ ಕಾವ್ಯ ರಚನೆಯೂ ಸನೆಯಲ್ಪಡುತ್ತದೆ.

ಪಂಪ, ರನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ ಕನ್ನಡದ ಮಹತ್ವದ ಕವಿಗಳ ಕಾವ್ಯಗಳ ರಚನೆಯೊಳಗಿನ ಈ ಬಗೆಯ ಬಂಧನ ಮತ್ತು ಬಿಡುಗಡೆಯ ಆಶಯಗಳನ್ನು ನಾವು ವಿಶ್ಲೇಷಿಸಿಕೊಳ್ಳಬಹುದು. ಸೋಷಿಯಲ್ ಸ್ಟಿಕ್ ರಿಯಲಿ ಸಂನಂಥಾ ತತ್ವಗಳ ಕಾರಣಗಳಿಂದ ಪಂಪ ನಮಗೆ ನಿತ್ಯವೂ ನಿರ್ವಚನಗೊಳ್ಳುತ್ತಿದ್ದಾನೆ. ಬದುಕಿನಲ್ಲಿ ಎಂದೂ ಅಂತ್ಯಗೊಳ್ಳಲರದ ಆದರೆ ಅಂತ್ಯಗೊಳ್ಳಲೇಬೇಕೆಂಬ ಆಶಯಗಳುಳ್ಳ ಎಷ್ಟೊಂದು ನಂಬಿಕೆಗಳನ್ನು, ವಿಚರಗಳನ್ನು, ಮೌಢ್ಯವನ್ನು ಅವನು ಚರ್ಚಿಸುತ್ತಾನೆಂದರೆ ಅವೆಲ್ಲ ಸಂವೃತ ವೃತ್ತವನ್ನು ಜಿಗಿದು ವಿವೃತದ ವಿಶಾಲ ಬಯಲೊಳಗೆ ಸ್ವಚ್ಛಂದವಾಗಿ ಬಯಲಾಗುತ್ತವೆ. ಪಂಪ ನಮಗೆ ಮುಖ್ಯವಾಗುವುದು ಇಲ್ಲಿಯೆ. ಪುರಾಣದ ವಸ್ತುವನ್ನು ಬಳಸಿಯೂ ಅದನ್ನೊಂದು ಪ್ರತಿಮೆಯಾಗಿಸುವ ಅವನ ನೈಪುಣ್ಯತೆಯಲ್ಲಿ ಕಾವ್ಯಕ್ಕೆ ಬೆಡಗು ಬಂದು ಬಿಡುತ್ತದೆ. ಪುರಾಣದ ಕಥಾನಕವನ್ನು ಬೆನ್ನಿಗಿರಿಸಿ ಅದು ನೀಡುವ ಜೀವ ಬೆಳಕಿಗಾಗಿ ನಾವು ಹಂಬಲಿಸುತ್ತೇವೆ. ಕವಿ ಅಲ್ಲಿ ದೊಡ್ಡವನಾಗಿ ಕಾಣುತ್ತಾನೆ. ಇಡೀ ಕನ್ನಡ ಕಾವ್ಯವನ್ನು ನಾವು ಹೀಗೆಯೇ ಗ್ರಹಿಸಿಕೊಂಡು ಬಂದಿರುವುದರಿಂದ ಅದರ ಉಪಾಧಿಗಳನ್ನು ಕಾಲಬದ್ಧವೆಂದು ಪಕ್ಕಕ್ಕಿರಿಸಿ ನೋಡಿದ್ದೇವೆ.

ಧಾರ್ಮಿಕ ತತ್ವದೊಂದಿಗೆ ಅಭಿವ್ಯಕ್ತಿಗೊಂಡ ವಚನಗಳನ್ನೂ ಈ ನೆಲೆಯಲ್ಲೇ ನಾವು ಗ್ರಹಿಸಿದ್ದೇವೆ ಕೂಡ. ಬಸವಣ್ಣನಾಗಲಿ ವಚನ ಚಳಿವಳಿಯಾಗಲಿ ಅದು ಇಂದು ನಮಗೆ ಮುಖ್ಯವಾದುದು ಅದರ ಮತವಾದಿ ದೃಷ್ಟಿಯಿಂದಲ್ಲ-ಸಂವೃತದಿಂದಲ್ಲ, ಮನವತಾವಾದದಿಂದ-ವಿವೃತದಿಂದ. ನಾವು ಇಂದು ಅವುಗಳನ್ನು ನಿರ್ವಚಿಸುತ್ತಿರುವ ರೀತಿ ಕೂಡ ಎಷ್ಟೆಷ್ಟು ಮಾನವತಾವಾದಿಯಾಗಿ ಪ್ರೀತಿಯೆನ್ನುವ ಭಕ್ತಿ ಎಂಬ ಅರ್ಥದಲ್ಲೂ ಮೌಲ್ಯವನ್ನು ಎಲ್ಲರಲ್ಲೂ ಸಮನಾಗಿ ಕಾಣುವ ಅದರ ಸಮತ್ವ ದೃಷ್ಟಿಗೆ. ವಚನಗಳಲ್ಲಿ ನಮಗೆ ಎದುರಾಗುವಷ್ಟು ವಿವೃತಗಳು ಬೇರಾವ ಮತವಾದಿ ಸಾಹಿತ್ಯದಲ್ಲಿ ಕಾಣುವುದಿಲ್ಲವೆಂಬುದು ನಿಜ. ಲಿಂಗ, ಪ್ರಸಾದ, ಅಷ್ಟಾವರಣ, ಷಟಸ್ಥಲ ಮೊದಲಾದ ತಾಂತ್ರಿಕತೆಯ ವಿವರಗಳಾಚೆ ಅದು ಒಳಗೊಂಡಿರುವ ವಿಶ್ವಾತ್ವಕ ದೃಷ್ಟಿಯೇ ಅವುಗಳನ್ನು ಹಿಡಿದು ನಿಲ್ಲಿಸಿವೆ. ಅನ್ಯಾಯ, ಶೋಷಣೆಗಳಿಗೆ ಜಾತಿ ತಾರತಮ್ಯ ಭಾವಗಳಿಗೆ ಅಲ್ಲಿ ತಕ್ಕ ಉತ್ತರವಿದೆ.

ಇಂಥಾ ದೃಷ್ಟಿಕೋನವೊಂದು ಕೀರ್ತನಕಾರರ ವಿಚಾರದಲ್ಲಿ ಬೆಳೆಯದೇ ಹೋದದ್ದರಿಂದ ದಾಸ ಸಾಹಿತ್ಯವನ್ನು ಈಗಲೂ ಮತವಾದಿ ಸಾಹಿತ್ಯವೆಂದೇ ಗುರುತಿಸಲಾಗುತ್ತದೆ. ಕೀರ್ತನೆಗಳಲ್ಲಿ ಅವರ ಆಧ್ಯಾತ್ಮಿಕ ತತ್ವದ ಜೊತೆಯಲ್ಲಿ ಜೀವನ ತತ್ವದ ವಿವೇಚನೆಯು ನಡೆದಿರುವುದು ಕಾಣಬಹುದು. ಪಾರಭೌತಿಕ ತತ್ವ ವಿವೇಚನೆ ಕೀರ್ತನೆಕಾರರಿಗೆ ಆಸಕ್ತಿಯ ವಿಷಯ ಹೇಗೋ ಹಾಗೆ ಬದುಕಿನ ತತ್ವ ಕುರಿತ ಚಿಂತನೆಯನ್ನೂ ಅಷ್ಟೇ ಗಂಭೀರವಾಗಿ ನಡೆಸಿದ್ದಾರೆಂಬುದು ಮುಖ್ಯ. ವರ್ತಮಾನದ ಬಾಳನ್ನು ಬಾಳುವಂತೆ ಹೇಗೆ ಮಾಡಿಕೊಳ್ಳಬೇಕೆಂಬುದರಲ್ಲೂ ಅವರು ತೋರಿಸಿರುವ ಆಸಕ್ತಿ ಅವರ ಜೀವನ ಪ್ರೀತಿಯನ್ನೇ ತೋರಿಸುತ್ತದೆ. ಹಾಗಾಗಿ ಕೀರ್ತನೆಗಳಲ್ಲೂ ಅಭೇದಗೊಂಡಿರುವ ಈ ಸಂವೃತ-ವಿವೃತ ಅಂಶಗಳನ್ನು ಪರಿಗಣಿಸಿ ಅವುಗಳಲ್ಲಿರುವ ವಿವೃತಗಳನ್ನು ನೋಡುವುದೇ ಅವುಗಳ ಸಾಹಿತ್ಯ ತತ್ವವನ್ನು ಕಂಡುಕೊಳ್ಳುವುದಾಗುತ್ತದೆ. ಜೀವನದ ಬಗೆಗಿನ ಶ್ರದ್ಧೆ, ವಿವೇಚನೆ, ಲೋಕದ ಉಪಾದಿಗಳನ್ನು ಕುರಿತ ಅವರ ನಿಲುವು – ಈ ಮೊದಲಾದ ವಸ್ತುಗಳು ಆವರೆಗೂ ಚಿಂತಿಸುತ್ತಾ ಬಂದ ವಸ್ತುಗಳೂ ಹೌದು. ಹಾಗೆಯೇ ಅವುಗಳನ್ನು ದಾಟಿಸಬೇಕೆನ್ನುವ ಉಮೇದನ್ನೂ ಅವರು ಪ್ರಕಟಿಸಿರುವುದನ್ನು ಕೀರ್ತನೆಗಳಿಂದ ಕಂಡುಕೊಳ್ಳಬಹುದು.

ಮಹಾಕವಿಗಳ ರಚನಾ ವಿಧಾನಕ್ಕಿಂತ ಬೇರೆಯಾದ ಮಾರ್ಗ ಹಿಡಿದ ಕೀರ್ತನಾ ಗೀತೆಗಳಲ್ಲಿ ಸಾಹಿತ್ಯದ ತತ್ವಕ್ಕಿಂತ ಸಂಕೀರ್ತನೆಯು ಪ್ರಧಾನವಾಗಿ ಕಾಣುವುದರಿಂದ ಅವುಗಳಲ್ಲಿ ಏಕಮುಖ ಚಲನೆ ಕಾಣುವುದು ಸಜಹ. ಹರಿಯ ಒಲುಮೆಯ ಕಾರಣಕ್ಕಾಗಿ, ಅವನ ಭಕ್ತಿ ಭಜನೆಯ ಕಾರಣಕ್ಕಾಗಿ ಗೀತೆಯ ಸ್ವರೂಪವನ್ನು ತಾಳಿದ ಕೀರ್ತನೆಗಳು ಒಂದು ಹಂತದ ರಚನೆಗಳೆಂದೇ ನೋಡಬಹುದು. ಪರಾವೃತ್ತಿಯಾದ ನಂತರದ ಸ್ಥಿತಿಯಲ್ಲಿ ರೂಪಗೊಂಡ ಕೀರ್ತನೆಗಳಲ್ಲಿ ಮಾನವೀಯ ಪರವಾದ ನಿಲುವುಗಳನ್ನು ಗುರುತಿಸಬಹುದು. ಸಾಮಾಜಿಕ ವಿಷಣ್ಣತೆ, ಕ್ರೌರ್ಯ, ಅಮಾನವೀಯತೆಗಳ ವಿರುದ್ಧವೂ ಅವರು ಕೀರ್ತನೆಗಳನ್ನು ಕಟ್ಟಿರುವುದನ್ನು ಕಾಣಬಹುದು. ಕೇವನ ನೈತಿಕತೆಯನ್ನೇ ಪ್ರಕಟಪಡಿಸದ ತನ್ನ ಕಾಲದ ಅನೇಕ ಬಿಕ್ಕಟ್ಟುಗಳನ್ನು, ಸವಾಲುಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಅವರು ಪ್ರತಿಕ್ರಿಯಿಸಿರುವುದು ಉಂಟು. ಆಕ್ರೋಶವನ್ನು ಪ್ರಕಟಿಸುತ್ತಲೇ ಅದರೊಂದಿಗಿನ ತನ್ನ ಸಂಬಂಧದ ಸ್ವರೂಪವನ್ನು ಕಂಡುಕೊಳ್ಳುವ ಪ್ರಯತ್ನವೂ ಪುರಂದರದಾಸರಂಥವಲ್ಲಿ ಸಾಧ್ಯವಾಗಿರುವುದನ್ನು ಕಾಣಬಹುದು. ಅದು ಅವರಿಗಿದ್ದ ಸಾಮಾಜಿಕ ಪ್ರಬುದ್ಧತೆ ಮತ್ತು ವಿವೇಚೆನೆಯನ್ನು ತೋರಿಸುತ್ತದೆ. ಹೀಗಾಗಿ ಪುರಂದರ, ಕನಕದಾಸರಂಥ ಕೀರ್ತನೆಕಾರರ ಕೀರ್ತನೆಗಳಲ್ಲಿರುವ ಈ ಜ್ಞಾನ ಮೀಮಾಂಸೆಯನ್ನು ಮತ್ತು ಜೀವನ ಮೀಮಾಂಸೆಯನ್ನು ವಿಶ್ಲೇಷಿಸಿಕೊಂಡು ನೋಡುವಾಗ ಕನ್ನಡ ಕಾವ್ಯ ಪರಂಪರೆಯನ್ನು ಯಾವ ರೂಪದಲ್ಲಿ ಅರ್ಥೈಸಿಕೊಂಡೆವೋ ಅದನ್ನೇ ಇಲ್ಲಿ ಅನ್ವಯಿಸಿ ನೋಡುವುದರಿಂದ ಪುರಂದರರ ಸಾಹಿತ್ಯಿಕ ಸಾಮಾಜಿಕ ಮಹತ್ವವೂ ಮನದಟ್ಟಾಗುತ್ತದೆ. ಮೇಲ್ನೋಟಕ್ಕೆ ಇದೊಂದು ಉದಾರವಾದಿ ದೃಷ್ಟಿಕೋನದಂತೆ ಕಾಣಬಹುದಾದ ಸಾಧ್ಯತೆಯಿದ್ದರೂ ಇಡೀ ಕಾವ್ಯ ಪರಂಪರೆಯನ್ನು ನಾವು ಗ್ರಹಿಸಿಕೊಂಡ ಬಗೆಯಲ್ಲಿ ಗುರುತಿಸದೆ ಕೀರ್ತನೆಗಳನ್ನು ಪ್ರತ್ಯೇಕವಾಗಿ ನೋಡುವುದು ಯಾಕೆ ಎನ್ನುವ ಪ್ರಶ್ನೆಯೂ ಹಾಗೇ ಉಳಿದು ಬಿಡುತ್ತದೆ.

ಪುರಂದರರಾಗಲಿ, ಕನಕದಾಸರಾಗಲಿ, ಸಾಹಿತ್ಯದ ತತ್ವಗಳನ್ನು ಓದಿಕೊಂಡು ಕೀರ್ತನೆಗಳನ್ನು ರಚಿಸಿದವರಲ್ಲವೆಂಬ ಮಾತನ್ನು ನಾವು ಮೊದಲಿಗೆ ಒಪ್ಪಿಕೊಳ್ಳಬೇಕು. ಭಕ್ತಿ ಪರಂಪರೆಯು ಇಡೀ ಭಾರತವನ್ನು ವ್ಯಾಪಿಸಿಕೊಂಡ ಹೊತ್ತಿನಲ್ಲಿ-ಉತ್ತರ ಭಾರತದಲ್ಲಿ ಇದು ಹಲವು ರೂಪಗಳಲ್ಲಿ ವ್ಯಾಪಿಸಿಕೊಂಡಿತ್ತು. ಮುಕ್ತಿಗೆ ಅದೊಂದು ಮಾರ್ಗವೆಂಬ ಬಲವಾದ ನಂಬುಗೆಯೂ ಆಗ ಬೆಳೆಯುತೊಡಗಿತು. ರಾಜ್ಯ ಸಾಮ್ರಾಜ್ಯಗಳ ಏಳುಬೀಳಾಟ, ರಕ್ತಪಾತ, ಕೊಲೆ, ರಾಜ್ಯ ವ್ಯಾಮೋಹ ದಾಹದಲ್ಲಿ ಮುಳುಗಿದ್ದ ಇಡೀ ಭಾರತದಲ್ಲಿ ಬದುಕಿನ ಅರ್ಥವೇನು ಎಂಬ ಬಗ್ಗೆ ಎದ್ದ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹೊಣೆಯನ್ನು ಆ ಕಾಲದ ಸಂತರು ಮಾಡಬೇಕಿತ್ತು. ಲೌಕಿಕದಿಂದ ಅಲೌಕಿಕತೆಯ ಕಡೆ, ನಶ್ವರತತ್ವದಿಂದ ಶಾಶ್ವತಮೌಲ್ಯದ ಕಡೆ ಸಾಗುವ ನಿರ್ವಚನವನ್ನು ಮಾಡುವ ಅನಿವಾರ್ಯತೆಯನ್ನು ಇವರು ಸ್ವೀಕರಿಸಿದರು. ವೈಭೋಗವೆನ್ನುವದು ಕರಗಿ ಹೋಗುವ ನಾಯಿಯ ತಲೆಯ ಮೇಲಿನ ಬುತ್ತಿಯಂತೆ ಅನಿಶ್ಚಿತವಾದದ್ದು ಎಂದು ಸಾರುವ ಯತ್ನದ ಫಲವೇ ಅಖಂಡ ಭಾರತ ಭಕ್ತಿಮಾರ್ಗದ ಮೊರೆ ಹೋಗಲು ಕಾರಣವಾದಂತೆ ತೋರುತ್ತದೆ. ರಸಾನುಭವತತ್ವದ ಕಾವ್ಯ ಕೂಡ ಲೌಕಿಕದ ಆಸಕ್ತಿಯಿಂದ ಮೂಡಿದ್ದೆಂಬ ಅರಿವೂ ಇವರಿಗೆ ಮನವರಿಕೆಯಾದುದರಿಂದ “ಭಕ್ತಿರಸ”ವನ್ನೇ ಕಾವ್ಯದ ರಸತತ್ವವನ್ನಾಗಿಸಬೇಕೆಂಬ ಚಿಂತನೆಯೂ ಆಗ ನಡೆದಿದೆ. ಕಾವ್ಯದ ಫಲವೇನಿದ್ದರೂ ಐಹಿಕವಾದುದಲ್ಲ. ಭಗವಂತನನ್ನು ಕೊಂಡಾಡಲು ಇರುವ ಮಾರ್ಗವೆನ್ನುವ ವ್ಯಕ್ತಿ ನಿರಪೇಕ್ಷ ಕಾವ್ಯದ ಆಕಾಂಕ್ಷೆ ಹೊತ್ತ ಕಾಲವಿದು. ಇದಕ್ಕೆ ತಕ್ಕುದಾದ ಕಾವ್ಯ ವಸ್ತುಗಳು ಕೀರ್ತನೆಯ ಒಳಪ್ರವೇಶ ಮಾಡಿದವು. ದೈವಿಕ ಅಭೀಪ್ಸೆ, ಸಾಧನೆ ಅದರಿಂದ ದಿವ್ಯಾನಂದವೆನ್ನುವ ಗ್ರಹಿಕೆಯಲ್ಲಿ ಕೀರ್ತನಾ ಸಾಹಿತ್ಯ ಹುಟ್ಟಿಕೊಂಡಿತು.

ಸಾಹಿತ್ಯ ತತ್ವ ಪ್ರಸಾರದ ಮಾಧ್ಯಮವಾಗಿಯೇ ಇದೆಯೆಂಬ ಗೃಹಿತದಿಂದ ಸೃಷ್ಟಿಯಾದ ಸಾಹಿತ್ಯವು ಸಾಮಾಜಿಕ ಸಂಘರ್ಷದಿಂದ ಸಾಂಸ್ಕೃತಿಕ ಪ್ರಶ್ನೆಗಳನ್ನು ಎತ್ತಿಕೊಳ್ಳುವ ಬಗ್ಗೆ ಅದು ಯೋಚನೆಯನ್ನೂ ಮಾಡಲಿಲ್ಲ. ಮಾಧ್ವಮತ ದೃಷ್ಟಿಯನ್ನು ತನ್ನ ಸಾಧನೆಯ ತಾತ್ವಿಕ ದೃಷ್ಟಿಯನ್ನಾಗಿ ಸ್ವೀಕರಿಸಿದಾಗ ಆ ತತ್ವಾರಾಧನೆ ಬರವಣಿಗೆಯಲ್ಲೂ ಮೂಡಿ ಬಿಡುವುದು ಸಾಮಾನ್ಯ. ಈ ಬಗೆಯ ತತ್ವ ದೃಷ್ಟಿ ಕವಿಕೇಂದ್ರಿತವಾಗಿ ಹುಟ್ಟಿಕೊಳ್ಳದೆ ಒಂದು ಮತ ತತ್ವದ ಸ್ವೀಕರಣವಾಗಿ ಧಾರಣಗೊಂಡಿದ್ದರಿಂದ ಅದೊಂದು ಬಗೆಯ ಸಾಧನಾ ಸಾಹಿತ್ಯವಾಗಿ ರೂಪು ಪಡೆಯಿತು.

ಮನಸ್ಸಿನ ಸೂಕ್ಷ್ಮವಾದ ಭಾವಗಳನ್ನು ಸ್ಪಷ್ಟವಾಗಿ ಮನಮುಟ್ಟುವ ಹಾಗೆ ಸರಳವಾಗಿ ಹೇಳುವುದೇ ಸಾಹಿತ್ಯದ ಮುಖ್ಯ ಲಕ್ಷಣ. ಈ ಲಕ್ಷಣವು ಈ ಗೀತೆಗಳಲ್ಲೆಲ್ಲ ಇದೆ. ಈ ಗೀತೆಗಳು ಮತ ಗ್ರಂಥಗಳಲ್ಲಿ ಸೇರಿದುವೂ ಹೌದು ಎಂದು ಮಾಸ್ತಿಯವರು “ವೈಷ್ಣವ ದಾಸರ ಕೀರ್ತನೆಗಳು” ಎಂಬ ಲೇಖನದಲ್ಲಿ (ವಿಮರ್ಶೆ ಭಾಗ-೧) ವಿವರಿಸುತ್ತಾರೆ. ಅವುಗಳ ಬಹುತ್ವದ ಕಡೆ ಗಮನ ಸೆಳೆಯುತ್ತಾರೆ. ಆದರೆ ಲೌಕಿಕ ಬದುಕಿನ ವಿನ್ಯಾಸವನ್ನು ಕುರಿತಂತೆ ಆಗದೆ ಇರಲು ಅದು ಸ್ವೀಕರಿಸಿದ ಮತ ತತ್ವವೇ ಕಾರಣವೆಂಬ ಅಭಿಪ್ರಾಯವನ್ನು ಒಪ್ಪಿದಂತೆಯೂ ಕಾಣುತ್ತದೆ. “ಆಧ್ಯಾತ್ಮ ನಿಷ್ಠೆಯಿಂದ ಆತ್ಮೋದ್ಧಾರ, ಆತ್ಮೋದ್ಧಾರದಿಂದ ಲೋಕೋದ್ಧಾರ” ಎಂಬ ತಿಳುವಳಿಕೆಯಲ್ಲೇ ರೂಪುಗೊಂಡ ದಾಸರಿಗೆ ದೈವವೇ ಕೇಂದ್ರವಾಯಿತು. ಆದುದರಿಂದಲೇ ಭವದ ಬದುಕನ್ನು “ಸುಳ್ಳೆ ಸಂಸಾರ”ವೆಂದು ಸುಮ್ಮನೆ ಈ ಮನೆಯಲ್ಲಿದ್ದೇವೆಂಬ ಭಾವನೆಯೂ ಅವರಿಗೆ ಬಂದಿತ್ತು. ಮನುಷ್ಯ ದೇಹವನ್ನು ಸಾಧಾನಾ ಶರೀರವನ್ನಾಗಿ ಮಾರ್ಪಡಿಸಿಕೊಂಡು ದೈವವನ್ನು ಬಿಂಬ ರೂಪದಲ್ಲಿ ಇರಿಸಿಕೊಂಡು, ಅದನ್ನು ಅವನ ಅರಿವಿನಲ್ಲಿ ಮೂಡಿಸಿ ಅವನ ಉದ್ಧಾರಕ್ಕೆ ಕಾರಣವಾಗುವಂತೆ ನೋಡಿಕೊಳ್ಳುವ ತತ್ವವನ್ನು ಒಪ್ಪಿಕೊಂಡರು. ಅದರಂತೆ ನಡೆಯಿಸಿಕೊಳ್ಳುವ ಕಡೆ ಹರಿದಾಸರು ನಡೆಯತೊಡಗಿದಾಗ ಅವರ ಹಾಡೆಲ್ಲವೂ ಶ್ರೀ ಹರಿಯನ್ನು ಹೊಂದುವ ಏಕೈಕ ಗುರಿ ಮಾತ್ರವಾಯಿತು. ಭಕ್ತಿಯನ್ನು ಪ್ರಕಟ ಪಡಿಸಲು ಸಾಹಿತ್ಯ ಮತ್ತು ಸಂಗೀತಗಳೆರಡು ಅತ್ಯುತ್ತಮ ಮಾಧ್ಯಮವೆಂಬ ಅವರ ತಿಳುವಳಿಕೆ ಹಾಗೂ ಅವುಗಳ ಸಾರ್ಥಕತೆ ಇರುವುದೆ ಏಕಾಂತ ಭಕ್ತಿಯಲ್ಲಿ, ಭಕ್ತ ಮತ್ತು ಭಗವಂತ ಸಂಬಂಧ ಸ್ವರೂಪವೇ ಕೀರ್ತನೆ ಸಾಹಿತ್ಯದ ಸ್ವರೂಪವನ್ನು ನಿರ್ಧರಿಸಿದೆ.

ಕೇಳನೋ ಹರಿ ತಾಳನೊ
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ
ನಾನಾ ಬಗೆಯ ರಾಗಭಾವ ತಿಳಿದು ಸ್ವರ
ದೀನವಾರಿಯ ದಿವ್ಯನಾಮ ರಹಿತವಾದ
ಹೀನ ಸಂಗೀತಸಾಹಿತ್ಯ……..”

ಹರಿನಾಮ ಸ್ಮರಣೆ ಮಾಡದ ಸಾಹಿತ್ಯ ಮತ್ತು ಸಂಗೀತಗಳು ಲೌಕಿಕಾಸಕ್ತಿಗಳ ಕಡೆ ಹೊರಳಿದರೆ ಅವು ಸಾರ್ಥಕವಲ್ಲ. ಅದಕ್ಕೆ ಹೀನತ್ವ ಪ್ರಾಪ್ತವಾಗುತ್ತದೆನ್ನುವ ಪುರಂದರದಾಸರು ತಮ್ಮ ರಚನೆಗಳನ್ನು ನೆಲೆಗೊಳಿಸಲು ಆಯ್ಕೆಮಾಡಿದ ಮಾರ್ಗ ಸಂಪೂರ್ಣವಾಗಿ ಭಿನ್ನವಾದುದು. ಆನಂದತೀರ್ಥರನ್ನು ವರ್ಣಿಸಿ ಆದ ಮೇಲೆ ಪುರಂದರ “ಕವಿತಾ ಕಾವ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ”-ಎನ್ನುತ್ತಾರೆ. ಅವರ ದೃಷ್ಟಿಯಲ್ಲಿ ಕೇವಲ ಕಲ್ಪನಾ ಕುದುರೆಯನ್ನು ಓಡಿಸುವುದು ಕಾವ್ಯ, ಅದು ವಿವೇಕವಲ್ಲ. ವಿವೇಕವಾದ ಕಾವ್ಯವೆಂದರೆ ಭಕ್ತಿ ಮತ್ತು ಪ್ರೀತಿಯಿಂದ ಭಾವಾನುಭೂತಿಯನ್ನು ತಂದುಕೊಡುವುದೇ ಆಗಿದೆ ಎಂಬ ಅಭಿಪ್ರಾಯ ಅವರಿಗಿದ್ದಂತೆ ತೋರುತ್ತದೆ.

“ಪುರಂದರದಾಸರ ಸಾಹಿತ್ಯ ಮತ ಸಾಹಿತ್ಯ, ಕಾವ್ಯವು ಮತದ ಆಳಾಗಿ ದುಡಿದದ್ದುಂಟು. ಹೀಗಿದ್ದರೂ ದಾಸರ ಕೃತಿಗಳನ್ನು ಸಾಹಿತ್ಯವೆಂದು ಆ ಕಾಲದಲ್ಲಿ ಕಣಿಸಲಿಲ್ಲ. ಕೀರ್ತನೆಗಳ ಧ್ಯೇಯ ನೀತಿಬೋಧೆ, ಭಕ್ತಿ ನಿರೂಪಣೆ ಆಗಿದೆ. ಕಾವ್ಯೋದ್ದೇಶದಲ್ಲಿಯೂ, ರಚನೆಯಲ್ಲಿಯೂ ಪುರಂದರದಾಸರ ಕೀರ್ತನೆಗಳು ಲೌಕಿಕ ಕಾವ್ಯ ಪರಂಪರೆಯ ಉದ್ದೇಶ ಹಾಗೂ ರಚನೆಗಳಿಂದ ಭಿನ್ನವಾಗಿವೆ. ಆದುದರಿಂದ ಅವುಗಳನ್ನು ಸಾಹಿತ್ಯ ಎಂದು ಎಣಿಸಿರಲಿಕ್ಕಿಲ್ಲ”-ಎನ್ನುವ ಎ.ವಿ. ದಿವಾಣಜಿಯವರ ಮಾತು ವಿಚಾರನೀಯವಾಗಿದೆ. (ಪುರಂದರದಾಸರ ಕೀರ್ತನೆಗಳಲ್ಲಿಯ ಕಾವ್ಯ ಸೌಂದರ್ಯ” ಪುರಂದರದಾಸರ ಕೀರ್ತನೆ” – ಸಾಹಿತ್ಯ ಅಕಾಡೆಮಿ, ಬೆಂಗಳೂರು).

ಮತ ತತ್ವದ ಆಶಯವಿದ್ದು ವರ್ತಮಾನಕಾಲವನ್ನು ಧಾರುಣಗೊಳಿಸಿದ ಶಕ್ತಿಗಳ ವಿರುದ್ಧ ದನಿಯೆತ್ತಿದ ಕಾರಣದಿಂದ ವಚನ ಚಳುವಳಿ ಮಾನ್ಯವಾದಂತೆ ಮತ್ತು ಪ್ರಗತಿಗಾಮಿಯೆಂಬ ಭಾವನೆ ಮೂಡಿಸಿದಂತೆ ಹರಿದಾಸ ಸಾಹಿತ್ಯ ಮೂಡಿಸಲಿಲ್ಲ. ತನಗೂ ಹಿಂದೆ ಇದ್ದ ವಚನ ಸಾಹಿತ್ಯಕ್ಕೆ ವಿರುದ್ಧವಾದ ನೆಲೆಯ ದಿಕ್ಕಿನಲ್ಲಿ ದಾಸ ಸಾಹಿತ್ಯ ಹೊರಟಿದ್ದು ಅದರ ಕ್ರಾಂತಿಕಾರಕ ತನವನ್ನು ಮಸುಕುಮಾಡಿದಂತೆ ತೋರುತ್ತದೆ. ತನ್ನ ಹಿಂದಿನ ಮಾದರಿಯಲ್ಲಿದ್ದ ಅಮೂರ್ತತೆಯನ್ನು, ಸೂಕ್ಷ್ಮತೆಯನ್ನು ಗ್ರಹಿಸಿದಂತೆ ತೋರುವ ದಾಸಸಾಹಿತ್ಯ ಮೂರ್ತಗೊಳ್ಳುವ ಸರಳಗೊಳ್ಳುವ ಕಡೆಯೇ ಗಮನಹರಿಸಿದಂತೆ ತೋರುತ್ತದೆ.ಅಮೂರ್ತವಾಗಿದ್ದ ವಚನ ರಚನೆಗಳು ಸೂಕ್ಷ್ಮಗ್ರಹಿಕೆ ನಿಲುಕುವುದರಿಂದ ಸಾಮಾನ್ಯರ ದೃಷ್ಟಿಯಲ್ಲಿ ಇವುಗಳನ್ನು ಇನ್ನಷ್ಟು ಮೂರ್ತಗೊಳಿಸುವುದರ ಕಡೆ ಆಸಕ್ತಿಯನ್ನು ಹೊಂದಿ ವೇದ, ಆಗಮ, ಪುರಾಣಗಳನ್ನು ಪುರಸ್ಕರಿಸುವ ನೆಲೆಗೆ ಹೋದುದರಿಂದ ಸೃಜನಶೀಲತೆಯ ಒಂದು ಮುಖ್ಯ ಗುಣವಾದ ಜಂಗಮತ್ವವನ್ನೇ ಅದು ಒಪ್ಪದಂತಾಯಿತು. ಹೀಗಾಗಿ ಮತ ಸಾಹಿತ್ಯದಲ್ಲಿ ಹಾಗೂ ತತ್ವ ಗ್ರಂಥಗಳಲ್ಲಿ ಕೀರ್ತನ ಸಾಹಿತ್ಯಕ್ಕೆ ಸಂದ ಗೌರವ ಸಾಹಿತ್ಯ ಮಟ್ಟದ ಚರ್ಚೆಯಲ್ಲಿ ಸಿಗದೆ ಹೋಯಿತು. ಹಿರಿಯರ ಗುಣಗಾನ, ಹಿರಿಯರ ಒಲುಮೆಗಾಗಿ ಹಂಬಲ, ಭಕ್ತನ ಅಳಲು, ತೊಳಲಾಟ, ಭಕ್ತಿ ನಿವೇದನೆ ಈ ಮೊದಲಾದ ವಸ್ತುಗಳ ಜೊತೆಯಲ್ಲಿ ಪುರಾಣೋಕ್ತವಾದ ಹರಿಯ ಪವಾಡಗಳನ್ನು ಕೊಂಡಾಡುವುದಕ್ಕೆ ಅವು ಹೆಚ್ಚಾಗಿ ಮೀಸಲಾದವು ಮತ್ತು ಕನ್ನಡವನ್ನೇ ಅವರು ಬಳಸಲು ಉದ್ದೇಶಿಸಿದ್ದು ಈ ಕಾರಣಕ್ಕೆ ಎಂಬುದನ್ನು ಗಮನಿಸಬೇಕು. ಸಂಸ್ಕೃತದಲ್ಲೇ ರೂಪಿತಗೊಂಡ ಸ್ತೋತ್ರಸಾಹಿತ್ಯ ಮತ್ತು ದೇವಭಾಷೆಯಲ್ಲಿ ರಚಿಸುವುದೇ ಶ್ರೇಷ್ಠವೆಂಬ ನಂಬುಗೆಯಿದ್ದ ಕಾಲದಲ್ಲಿ ಕನ್ನಡವನ್ನು ಮಾಧ್ಯಮವಾಗಿಸುವುದರ ಹಿಂದಿದ್ದ ಏಕೈಕ ಉದ್ದೇಶ ಜನಪರವಾಗಿ ಜನಪ್ರಿಯವಾಗುವುದು. ಹೆಚ್ಚೆಚ್ಚು ಜನರನ್ನು ತಲುಪುವುದು. ಅವರನ್ನು ಅನೀತಿ, ಅವಿದ್ಯೆ, ಅಜ್ಞಾನದಿಂದ ದೂರಮಾಡಿ ಅವರನ್ನು ನೀತಿವಂತರನ್ನಾಗಿಸಬೇಕೆಂಬ ಹಂಬಲ ಈ ಆಶಯವೇನೋ ಅವರ ಕೃತಿಗಳಲ್ಲಿ ಪ್ರಕಟವಾಗಿದೆಯಾದರೂ ಮತ ತತ್ವದ ಲೇಪನವಿಲ್ಲದೆ ಅದು ಸಾಧ್ಯವಾಗಲಿಲ್ಲ ಎನ್ನುವುದು ವ್ಯಾಸರಾಯರು ಆರಂಭಿಸಿದ ಈ ಕ್ರಮ ಕನದ ಪುರಂದರರಲ್ಲೂ ಮುಂದುವರೆದು ಜನರ ಆಡುಭಾಷೆಯನ್ನು ಒಳಗೊಂಡು ಕನ್ನಡ ಭಾಷಾ ಪ್ರಯೋಗವನ್ನು ಈ ನಿಟ್ಟಿನಲ್ಲಿ ಮಾಡಿರುವುದನ್ನು ನಾವು ಗಮನಿಸಬಹುದು.

ಸ್ತೋತ್ರ ಸಾಹಿತ್ಯಕ್ಕೂ ಹಾಗೂ ಕೀರ್ತನೆಗಳ ಸಾಹಿತ್ಯ ಸ್ವರೂಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಎರಡನ್ನೂ ಬೇರ್ಪಡಿಸುವುದು ತತ್ವಸಿದ್ಧಾಂತ ಹಾಗೂ ವರ್ತಮಾನಕಾಲದ ವಾಸ್ತವಕ್ಕೆ ಪ್ರತಿಸ್ಪಂದಿಸುವ ಗುಣ. ಸ್ತೋತ್ರವು ಸಿದ್ಧಾಂತಕ್ಕೆ ಹತ್ತಿರವಿದ್ದು ಸಂವೃತ ಸ್ವರೂಪದ್ದಾದರೆ ಕೀರ್ತನೆಗಳು ಪ್ರತಿಯೊಂದು ಸನ್ನಿವೇಶ ಸಂದರ್ಭದಲ್ಲಿ ಸದ್ಯದಲ್ಲಿ ನಿಜವಾಗುತ್ತಾ ಹೋಗುವುದು ವಿವೃತ ಸ್ವರೂಪದ್ದು, ಇವೆರಡರ ನಡುವೆ ಪುರಂದರು ನಮಗೆ ನಿಜವಾಗುವುದು ಅವರ ಅಂತರಂಗಿಕ ಹಾಗೂ ಬಹಿರಂಗದ ತೋಳಲಾಟದಲ್ಲಿ. ಅದು ಭಕ್ತನೊಬ್ಬನ ತೊಳಲಾಟವೆಂದು ಹೇಳಬಹುದಾದರೂ ಅಲ್ಲಿ ನಿಜ ಮನುಷ್ಯನ ಸಂಕಟಗಳಿರುವುದನ್ನು ಕಾಣಬಹುದು. ವ್ಯಾಸಕೂಟದ ಶಿಷ್ಯನಾಗದೆ ಒಂದು ಆದರ್ಶದ ಕಡೆ ಕೊಂಡೊಯ್ಯುವ ಸಂಕಲ್ಪವನ್ನು ತೊಟ್ಟಿರುವುದು ಅವರ ಕೀರ್ತನೆಗಳಲ್ಲಿ ಸ್ಪಷ್ಟವಾಗುತ್ತದೆ. ಆಧುನಿಕ ಸಮಾಜದ ನೆಲೆಯಲ್ಲಿ ನಿಂತು ನಾವು ಈ ಕೀರ್ತನೆಗಳು ಕಟ್ಟಿಕೊಡುವ ಸಮಾಜವನ್ನು ನೋಡಿದರೆ ಅದು ಕ್ರಾಂತಿಕಾರಕ ತನವಿಲ್ಲದ ಆದರ್ಶ ಸಮಾಜವಾಗೇ ಉಳಿದು ಬಿಡುತ್ತದೆ.

ತನ್ನ ಕಾಲದ ಸಂಘರ್ಷವನ್ನು ಹಿಡಿದಿಡದ ಸಾಹಿತ್ಯ ಸಾಹಿತ್ಯವೇ ಅಲ್ಲ. ಅದೊಂದು ಬಗೆಯ ಲೋಲುಪತೆ. ಸಾಮಾಜಿಕ ಸಂಘರ್ಷವನ್ನು ಅಮಾನವೀಯವಾದುದನ್ನು ಮತ್ತೆ ಮತ್ತೆ ಪರಿಶೀಲನೆಗೆ ಒಳಗುಪಡಿಸುತ್ತದೆ. ಪಂಪನ ಕಾಲದಿಂದ ಈ ಹೊತ್ತಿಗೂ ಚರ್ಚಿಸಲ್ಪಡುತ್ತಿರುವ ಜಾತಿ ವಿನಾಶವನ್ನು ಕುರಿತು ಪುರಂದರರು ತಮ್ಮ ಕೀರ್ತನೆಯಲ್ಲಿ ವಿವರಿಸಿದ್ದಾರೆ. ಹೊಲೆತನವೆನ್ನುವುದು ಒಂದು ಸಮಾಜಕ್ಕೆ ಅಂಟಿಕೊಂಡ ಒಂದು ಶಾಪವೆಂಬ ಭಾವನೆ ಹೀಗೆ ವ್ಯಕ್ತವಾಗಿದೆ.

ಹೊಲೆಯ ಹೊರಗಿಹನೆ ಊರಳಗಿಲ್ಲವೆ
ಬಲ್ಲವರು ಪೇಳಿ ಹರಿಭಕ್ತರಾದವರು
ಹೇಳಿದ ಶಾಸ್ತ್ರವನು ತಿಳಯದವ
ಆಳಾಗಿ ಅರಸಿಗೆ ಮಣಿದಾತ
ಇದ್ದು ದಾನ ಧರ್ಮವ ಮಾಡಿದ್ದವ
ಆಶೆಯಿಂದಲಿ ಬಹಳ ದೋಷವ ಮಾಡುವವ
ಹುಸಿಯಾಡುವವ

ಈ ಸ್ವಭಾವ ಇರುವರೆಲ್ಲರೂ ಹೊಲೆಯರೆಂದು ಕರೆದು ಹೊಲೆತನ ಯಾರನ್ನು ಬಿಟ್ಟಿಲ್ಲವೆಂದು ಹೇಳುವ ಮೂಲಕ ಸಮಾಜಕ್ಕೆ ಅಂಟಿರುವ ಕೊಳೆಯನ್ನು ತೊಳೆಯುವುದರ ಕಡೆ ಗಮನಹರಿಸುತ್ತದೆ. ಹಾಗೆಯೇ ಬ್ರಾಹ್ಮಣವೆಂದರೆ, ’ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವನು ಅವನೀಗ ಬ್ರಾಹ್ಮಣನು’ ಎನ್ನುವ ಬಗೆಯಲ್ಲಿ ಒಂದು ಸಮಾಜ ತನ್ನ ಅಜ್ಞಾನದಿಂದಲೇ ರೂಪಿಸಿಕೊಂಡು ಬಂದ ವರ್ಣಾಶ್ರಮ ವ್ಯವಸ್ಥೆಯ ನೀತಿಯನ್ನೆ ಖಂಡಿಸುತ್ತಾರೆ. ಪುರಂದರದಾಸರ ಮೀಮಾಂಸೆ ಜೀವನ ಮೀಮಾಂಸೆಯ ತತ್ವವಾಗಿಯೇ ಪ್ರಕಟಗೊಂಡಿರುವುದನ್ನು ಅವರ ಅನೇಕ ಕೀರ್ತನೆಗಳಿಂದ ನಾವು ಕಂಡುಕೊಳ್ಳಬಹುದು. ಅವರ ಕೀರ್ತನೆಗಳಿಗೆ ದಕ್ಕದ ವಿಷಯಗಳಿಲ್ಲ. ಆದರೆ ಅವೆಲ್ಲ ಸಾಮಾಜಿಕ ಸಂಚಲನೆಯ ಅಂಗವಾಗಿ ಹುಟ್ಟುವುದಕ್ಕಿಂತ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬೇಕೆಂಬ ಬಯಕೆಯಿಂದಲೆ ಬಂದವುಗಳು.

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ
ಎಂತಾದರೂ ಚಿಂತೆ ಬಿಡದು
ನಿಶ್ಚಿಂತರಾದವರೊಬ್ಬರನು ಕಾಣೆ
ಮನವ ಶೋಧಿಸಬೇಕು ನಿಚ್ಚಾ ದಿನ
ದಿನದಿ ಮಾಡುವ ಪಾಪ ಪುಣ್ಯದ ವೆಚ್ಚಾ

ವಚನಕಾರರ ಹಾಗೆಯೆ ಉಪನಿಷತ್ತಿನಲ್ಲಿರುವ ಬಾಳಿನ ಸಂಗತಿಗಳನ್ನು ದೈವದ ಕೃಪೆ ಪಡೆದು ಬಾಳುವಂತೆ ಸರಳವಾಗಿ ಪುರಂದರದಾಸರು ಹೇಳಿರುವ ಹಿಂದ ಒಂದು ಬದ್ಧತೆ ಮತ್ತು ಕಾಳಜಿ ವ್ಯಕ್ತವಾಗುತ್ತದೆ. ಅವರು ಭಕ್ತಿ ಮತ್ತು ಜ್ಞಾನದ ಮೂಲಕ ನಡೆಸಿದ ಈ ಅನುಸಂಧಾನದಲ್ಲಿ ಮಾನವೀಯ ಪರವಾದ ನಿಲುವುಗಳು ಪ್ರಕಟವಾಗಿವೆ. ಮೌಲ್ಯಯುತವಾದ ಜೀವನದಿಂದ ನೆಮ್ಮದಿ ಪಡೆಯಬಹುದೆಂಬ ಆಶಯವು ಪ್ರಕಟವಾಗಿದೆ.

ಪುರಂದರದಾಸರ ಕೀರ್ತನೆಗಳಲ್ಲಿ ಕಾಣುವ ಮತ್ತೊಂದು ಗುಣವೆಂದರೆ ಸ್ಥಗಿತ ವ್ಯವಸ್ಥೆಯನ್ನು ಚಲನೆಗೊಳಿಸಬೇಕೆಂಬ ಅಭೀಪ್ಸೆ ಯಥಾವಾದಿಯಾಗಿ ಪುರಂದರು ಎಲ್ಲೂ ಕಾಣುವುದಿಲ್ಲ. ಸಾಹಿತ್ಯದ ಈ ಗುಣ ನಿಷ್ಠುರತೆಯೇ ಆಗಿದೆ. ಅದು ಸ್ಥಗಿತ ಸ್ಥಿತಿಯನ್ನು ಎಂದೂ ಬೆಂಬಲಿಸುವುದಿಲ್ಲ. ಪುರಂದರರು ತನ್ನ ಕಾಲದ ವೈರುಧ್ಯಗಳನ್ನು ಲಕ್ಷಣಗಳನ್ನು ಬಿಡದೆ ತಮ್ಮ ರಚನೆಯೊಳಗೆ ತಂದು ತಮ್ಮ ನಿಲುವೇನೆಂದೂ ಪ್ರಕಟಿಸಿದ್ದಾರೆ.

ಉದರ ವೈರಾಗ್ಯವಿದು ನಮ್ಮ ಪದುಮನಾಭನಲಿ
ಲೇಶ ಭಗುತಿಯಿಲ್ಲದ
ತನುವ ನೀರೊಳಗದ್ದಿ ಫಲವೇನು
ಮನದಲ್ಲಿ ದೃಢವಿಲ್ಲದ ಮನುಜರು

ಆಷಾಢಭೂತಿತನ, ವಂಚನೆ, ಕಪಟವನ್ನು ಸ್ವಕೀಯರಿಂದ ನಡೆದರೂ ಸಹಿಸದೆ ಅದನ್ನು ನಿಷ್ಠುರವಾಗಿ ಖಂಡಿಸುವ ಪ್ರಯತ್ನವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

ಗೋಟು ನಾಮವ ಹೊಡೆದು ಗುಂಡು ತಂಬಿಗೆ ಹಿಡಿದು
ಗೋಟಂಚು ಧೋತರ ಮಡಿಯನ್ನುಟ್ಟು
ದಾಟುಕಾಲಿಡುತ್ತ ನಾ ಧರೆಯೊಳಗೆ ಬರಲೆನ್ನ
ಬೂಟಕತನ ನೋಡಿ ಭ್ರಮಿಸದಿರಿ ಜನರೇ

ತನ್ನನ್ನೇ ನಿಮಿತ್ತ ಮಾಡಿಕೊಂಡು ಸಮಾಜದ ಜನರಿಗೆ ಮೋಸ ಹೋಗದಂತೆ ಎಚ್ಚರಿಸುವ ಪುರಂದರರು ಇಂಥಾ ಕೀರ್ತನೆಗಳನ್ನು ವೇಷಧಾರಿಯಾದ ಮಾಧ್ವ ಮತದ ಢೋಂಗಿ ದಾಸರುಗಳನ್ನು ವ್ಯಂಗ್ಯವಾಡಿದ್ದಾರೆ. ತನ್ನ ಕಾಲದಲ್ಲಿ ಏನು ನಡೆಯುತ್ತಿತ್ತು ಎಂಬುದರ ಚಿತ್ರಣವನ್ನು ನೀಡಿದ್ದಾರೆ.

ಪ್ರಸ್ತುತ ಮತ್ತು ಅಪ್ರಸ್ತುತ

ವ್ಯಾಸರಾಯರ ಕಾಲದಲ್ಲಿ ಹುಟ್ಟಿಕೊಂಡ ದಾಸಪರಂಪರೆಯ ಎರಡು ಕವಲುಗಳೆಂದರೆ ವ್ಯಾಸಕೂಟ ಹಾಗೂ ದಾಸಕೂಟ. ಪುರಂದರರ ಪ್ರವೇಶದಿಂದಾಗಿಯೇ ಎರಡು ಪಂಥಗಳನ್ನು ಸೃಷ್ಟಿಮಾಡಿದಂತೆ ಕಾಣುತ್ತದೆ. ಆವರೆಗೂ ಇದ್ದ ರೀತಿ ಯಾವುದೆಂದರೆ ವ್ಯಾಸಕೂಟವೆ. ಮಾದ್ವಮತ ತತ್ವ ರೂಪಣ ಮತ್ತು ಅದನ್ನು ಅನುಷ್ಠಾನ ಮಾಡುವ ಪಂಡಿತವರ್ಗ. ಇದು ಪುರೋಹಿತವರ್ಗದ ಸ್ಥಾನಮಾನ ಪಡೆದುಕೊಂಡು ಅನುಷ್ಠಾನ-ಅಧಿಷ್ಠಾನ, ಯಮ, ನಿಯಮನ-ಮುಂತಾದವುಗಳ ಹೊಣೆಯನ್ನು ಹೊರುತ್ತಿದ್ದಿತು. ಆದರೆ, ಭಕ್ತಿ ಮತ್ತು ಮತ ತತ್ವವನ್ನು ಸರಳವಾಗಿ ಜನರ ಬಳಿಗೆ ಕೊಂಡೊಯ್ಯುವ ಕಾರಣದಿಂದಲೇ ಪುರಂದರ ಮತ್ತು ಕನಕದಾಸರಂತವರಿಗೆ ದಾಸದೀಕ್ಷೆ ನೀಡಿದ್ದು ಎಂದು ತೋರುತ್ತದೆ. ಕೀರ್ತನೆಗಳಲ್ಲಿ ಪ್ರಸ್ತಾಪವಾಗಿರುವ ಅನೇಕ ಸಂಗತಿಗಳನ್ನು ಗಮನಿಸಿದರೆ ಈ ಎರಡರ ನಡುವೆ ತಾತ್ವಿಕ ಹೊಂದಾಣಿಕೆ ಸಾಧ್ಯವಾಗದ ನಿತ್ಯ ಸಂಘರ್ಷವಿದ್ದಂತೆ ತೋರುತ್ತದೆ. ಶ್ರೇಷ್ಠ ಕನಿಷ್ಠಗಳ ಈ ಮೇಲಾಟದ ಅನುಭವ ಪುರಂದರರಿಗೆ ಆದಂತೆ ಕಾಣುತ್ತದೆ.

ವ್ಯಾಸಕೂಟ ಮಾಧ್ವಮತದ ಸಿದ್ಧಾಂತಗಳನ್ನು ರೂಪಿಸುತ್ತಾ ಅದಕ್ಕೆ ಬದ್ಧವಾಗುತ್ತಾ ಸದಾಕಾಲ ಅದನ್ನು ಪ್ರಸ್ತುತಗೊಳಿಸುವ ಹೊಣೆಯನ್ನು ಹೊತ್ತಂತೆ ತೋರಿತು. ಅದು ಅದರ ಕರ್ಮಠತನದಿಂದ ಜನವಿದೂರವಾಗಿ ಅಪ್ರಸ್ತುತತವಾಗುತ್ತಿತ್ತೇ ವಿನಾಃ ಪ್ರಸ್ತುತಗೊಳ್ಳುತ್ತಿರಲಿಲ್ಲ. ವಿಧಿ ವಿಷೇಧ, ಆಚಾರ, ನಡವಳಿಕೆಗಳೆಂಬ ಆದೇಶಗಳನ್ನು ಪ್ರಭುತ್ವದ ನಿಲುವಿನಿಂದ ಅನುಷ್ಠಾನಗೊಳಿಸುತ್ತಲೆ ಅದು ಪ್ರಸ್ತುತವಾಗಲು ಕಾರಣವಾದರೆ, ದಾಸರು ಕೀರ್ತನೆಗಳಲ್ಲಿ ಅದೇ ತತ್ವವನ್ನು ಪ್ರಸ್ತುತಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಈ ಸಂವೇದನೆಗೆ ಸ್ವಚ್ಛಂದತೆ ಇದ್ದುದರಿಂದ ಹಾಗೂ ಸಾಹಿತ್ಯದ ಮಾಧ್ಯಮವಿದ್ದುದರಿಂದ ಸದಾ ಮಾನವೀಯ ಪರವಾಗಿರಲು ಯತ್ನಿಸುತ್ತಿತ್ತು. ವ್ಯಾಸಕೂಟದ ಕಪಟತೆಯನ್ನು ಡಾಂಭಿಕತೆಯನ್ನು ಪುರಂದರರು ಈ ಕಾರಣಕ್ಕೆ ಒಪ್ಪುತ್ತಿರಲಿಲ್ಲವೆಂಬುದನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು.

ಗಡ್ಡ ಮೀಸೆ ಬೋಳಿಸಿಕೊಂಡು ಗೊಡ್ಡುನಾಮವ ತೀಡಿಕೊಂಡ
ಅಡ್ಡಾದಿಡ್ಡಿ ಮುದ್ರೆಗಳ ಬಡಿದುಕೊಂಡು
ದೊಡ್ಡ ದೊಡ್ಡ ಮಾತುಗಳಾಡಿ ದೊಡ್ಡವರೆಂದೇಳಿಕೊಂಬ
ಬಡ್ಡಿ ಧಗಡೀ ಮಕ್ಕಳಿಗಿನ್ನು ವೈಷ್ಣವ ಸಲ್ಲುವುದೇ

ಎಂದು ವಿಷಾದಿಸಿರುವುದು ಉಂಟು. ಪ್ರಾಯಶಃ ದಾಸ ಕೂಟವಿರದಿದ್ದರೆ ದಾಸ ಸಾಹಿತ್ಯ ಜನಾನುರಾಗಿಯಾಗುವ, ಸಾಧ್ಯತೆಗಳು ತೀರ ವಿರಳವಾಗಿರುತ್ತಿದ್ದವೆಂಬುದನ್ನು ಗಮನಿಸಬೇಕು. ಈ ಪರಂಪರೆಯಲ್ಲಿ ಬಂದ ಅನೇಕ ದಾಸರು ಈ ಮತತತ್ವವನ್ನು ಪುನಃ ಕೀರ್ತನೆಗಳಲ್ಲಿ ತಂದುಕೊಂಡು ಅವುಗಳನ್ನು ಸದಾ ಪ್ರಸ್ತುತವಾಗಿರಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಪುರಂದರರ ಕೀರ್ತನೆಗಳಲ್ಲಿ ಭಾವಾವೇಶ (ಅದು ಭಕ್ತಿಯ ನಿರ್ಭರತೆಯಲ್ಲಿ ಸದಾ ಉಕ್ಕಿ ಬಂದಂತೆ ಕಾಣುತ್ತದೆ. ಕೆಲವೊಮ್ಮೆ ವಿವೇಕಶಾಲಿಗಳಂತೆ ಅವರು ಕಂಡರೆ ಮತ್ತೆ ಕೆಲವು ಕಡೆ ಅವರ ಸಾಹಿತ್ಯದಲ್ಲಿ ಭಾವಾವೇಶ ಉತ್ಕಟವಾಗಿ ಹರಿದುಬಿಟ್ಟಿದೆ.

ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೊ ಭ್ರಷ್ಟನ ಬಾಯೊಳಗೊಂದು ಕೆರ
ನಿಷ್ಠೆಯೊಳು ಹರಿದಾಸರು ಸೇವಿಸದ ಕನಿಷ್ಠನ ಬಾಯೊಳಗೊಂದು ಕೆರ
ಹರಿ ಹರಿ ಎಂಬೋರು ಸಿರಿವಂತರಾಗುವರು
ಹರಹರ ಎಂಬೋರು ಹತರಾಗುವರು
ಕೀರ್ತನೆ ಮಾತ್ರದಿ ಕಲಿಯುಗದಲ್ಲಿ
ಮುಕುತಿಯನ್ನಿವ ಪುರಂದರ ವಿಠಲ

ಇಂಥಾ ಕೀರ್ತನೆಗಳಲ್ಲಿ ಕಾಣುವ ಪುರಂದರರ ಸಂವೇದನೆಯ ಬಗೆಗೆ ಆಶ್ಚರ್ಯವಾಗುತ್ತದೆ. ಮತತತ್ವ ಪ್ರಸಾರದ ಆವೇಶದಲ್ಲಿ ಇತರೆ ಮತಗಳನ್ನು ಹಳಿಯುವುದಾಗಲಿ, ತುಂಬ ನಿಕೃಷ್ಟ ಮಾತುಗಳಲ್ಲಿ ಮತ ನಿಷ್ಠೆಯನ್ನು ಪೊರೆಯುವುದಾಗಲಿ, ಕಟ್ಟಾ ಮತವಾದಿಯೊಬ್ಬನು ಮಾಡುವ ಪ್ರಯತ್ನದಂತೆ ತೋರುತ್ತದೆ. ಅವರು ಗಳಿಸಿದ ಜ್ಞಾನ, ವಿವೇಕದ ಸ್ವರೂಪದ ಬಗ್ಗೆ ಸಂದೇಹಗಳು ಮೂಡುತ್ತವೆ.

ಭಕ್ತಿಯ ಸಾಧನೆಯ ಮುಖೇನ ಜ್ಞಾನ ಸಂಪಾದಿಸಿ ಪರಾವೃತ್ತಿಯನ್ನು ಪಡೆದು ಬಂದ ದಾಸರ ಜ್ಞಾನಸ್ವರೂಪದ ಬಗ್ಗೆ. ಪುರಂದರದಾಸರಿಗೆ ಕೆಟ್ಟ ಹೆಸರನ್ನು ತರಲು ಅನಂತರದ ಕಾಲದಲ್ಲಿ ಅವರ ಅಂಕಿತದಲ್ಲಿ ಬೇರೆ ಯಾರಾದರೂ ಸೇರ್ಪಡೆ ಮಾಡಿದ್ದರೂ ಆಶ್ಚರ್ಯವಿಲ್ಲ.

ಕೃಷ್ಣದೇವರಾಯನ ಹಿನ್ನಡೆಯೊಂದಿಗೆ ಪುರಂದರದಾಸರ ಹಿನ್ನಡೆಯೂ ಆರಂಭವಾದಂತೆ ತೋರುತ್ತದೆ. ಯಾವ ತತ್ವಕ್ಕಾಗಿ ಇಡೀ ಬದುಕಿನ ಉದ್ದಕ್ಕೂ ಸಾಧನೆ ಮಾಡಲಾಯಿತೋ ಅದೇ ಮತವು ಪುರಂದರರ ಕಣ್ಣ ಮುಂದೆಯೇ ರೂಢಿಗೆಬಿದ್ದಂತೆ ಕಾಣುತ್ತದೆ. ಭಕ್ತಿ, ಜ್ಞಾನ ಪಡೆದ ಪುರಂದರರು ಒಂದು ಸಮತ್ವವನ್ನು ನಿರ್ಲಿಪ್ತತೆಯನ್ನು ಕಾಯ್ದುಕೊಂಡು ಬರಲಾರದವರೇ ಎಂಬ ಬಗ್ಗೆ ಸಂಶಯ ಮೂಡುತ್ತದೆ. ಇದು ಪುರಂದರರಿಗಾದ ಭ್ರಮನಿರಶನವೆಂದು ಕರೆಯಬಹುದೋ? ಅಧವಾ ಧರ್ಮ ಜ್ಞಾನಿಯೆಂದು ಕರೆಯಬಹುದೋ ?

ಸತ್ಯವಂತರಿಗೆ ಇದು ಕಾಲವಲ್ಲ
ದುಷ್ಟ ಜನರಿಗೆ ಸುಭಿಕ್ಷ ಕಾಲ
ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಧರ್ಮ ಮಾಡುವವಗೆ ನಿರ್ಮೂಲವಾಗುವ ಕಾಲ
ಕರ್ಮಪಾತಕರಿಗೆ ಬಹು ಸೌಖ್ಯ ಕಾಲ

ವಿಜಯನಗರದ ರಾಜಕೀಯ ವಿಪ್ಲವದ ದಿನಗಳನ್ನು ನಿರೀಕ್ಷಿಸಿಯೇ ಇಂಥ ಮಾತುಗಳನ್ನು ಆಡಿದರೋ ಅಥವಾ ಅವರು ಅವಜ್ಞೆಗೆ ಒಳಗಾದರೋ ಅಥವಾ ತಮ್ಮ ಕಣ್ಣೆದುರೆ ಮೌಲ್ಯಗಳು ದಿಕ್ಕು ತಪ್ಪಿ ಹೋಗತೊಡಗಿದವೋ ಅಂತು ಪುರಂದರದಾಸರ ಕೊನೆಯ ಕೀರ್ತನೆಗಳಲ್ಲಿ ಒಂದು ಬಗೆಯ ಮಾನಸಿಕ ತೊಳಲಾಟ ಕಾಣುತ್ತಿದೆ.

ಕೀರ್ತನ ಸಾಹಿತ್ಯ ಸಂಕೀರ್ತನೆಯ ಮಾಧ್ಯಮವನ್ನಾಗಿ ಮನುಷ್ಯ ತನ್ನೆಲ್ಲ ಬಂಧನಗಳಿಂದ ಬಿಡುಗಡೆಗೊಳಿಸಿಕೊಳ್ಳಲು ಇರುವ ಮಾಧ್ಯಮವೆಂಬ ನಿಲುವಿನಿಂದಲೇ ರಚಿಸಲ್ಪಟ್ಟವು. ಅವುಗಳ ಉದ್ದೇಶ ವಿಠಲನನ್ನು ಒಳಗೊಳ್ಳುವುದೇ ಆಗಿದೆ. ಅದಕ್ಕೆ ಸಾಧ್ಯವಾಗುವ ಸಾಧನ ಮಾರ್ಗದ ಸಾಹಿತ್ಯವಾಗಿರುವುದರಿಂದ ಸೃಜನಶೀಲ ರಚನೆಗಳಲ್ಲಿ ಕಂಡುಕೊಳ್ಳುವ ಸಾಹಿತ್ಯ ತತ್ವವನ್ನು ಈ ಹಿನ್ನೆಲೆಯಲ್ಲಿಯೆ ರೂಪಿಸಿಕೊಳ್ಳಬೇಕಾಗುತ್ತದೆ. ಕಾವ್ಯ ರಚನೆಯ ರೀತಿ, ವಸ್ತು, ಅಲಂಕಾರ, ಉಪಮೆ, ಭಾಷೆ-ಈ ಎಲ್ಲವೂಗಳನ್ನು ಕೀರ್ತನೆಗಳ ರಚನೆಯಲ್ಲಿ ಸಮರ್ಪಕವಾಗಿ ಬಳಸಿಕೊಂಡು ಆ ಮೂಖೇನ ಸ್ನೇಹ ಮತ್ತು ಭಾವವನ್ನೇ ಸ್ಥಾಯಿಯಾಗಿರಿಸಿಕೊಂಡ ರಚನೆಗಳು ಭಕ್ತಿಯನ್ನೆ ಮುಕ್ತಿ ಮಾರ್ಗವೆಂದು ನಂಬಿಕೊಂಡಿವೆ. ಒಂದು ಸಮುದಾಯವನ್ನು ಹಾಗೆ ನೆಚ್ಚಿಸಿವೆ ಕೂಡ.

ಕೀರ್ತನೆಗಳು ಭಕ್ತಿ ಆರಾಧನೆ ಭಾಗವಾಗಿರುವುದರ ಜೊತೆಯಲ್ಲಿ ಸಾಹಿತ್ಯವು ಕಥಿಸುವ ಮನುಷ್ಯನ ಮನಸ್ಸಿನ ಒಳತೋಟಿಗಳನ್ನು ಹಿಡಿಯುವ ಯತ್ನವನ್ನು ಮಾಡುತ್ತಲೆ ಆ ಮನಸ್ಸುಗಳಿಗೆ ಒಂದು ನೈತಿಕತೆಯನ್ನು ಒದಗಿಸಿ ಒಂದು ಮೌಲ್ಯ ಪ್ರಪಂಚವನ್ನು ಸೃಷ್ಟಿಸುತ್ತದೆ. ಡಾ. ಜಿ. ಎಚ್. ನಾಯಕರು ಹೇಳುವಂತೆ “ಆ ವಿನಯದ ಆದರ್ಶ ಯಾವಾಗಲೂ ಸಾಧಿಸಬೇಕಾದ ಗುರಿಯಾಗಿರುತ್ತವೆಯೆ ಹೊರತು ಸಾಧಿಸಲ್ಪಟ್ಟು ಸಂಗತಿಯಾಗಿರುವದಂತೂ ಸಾಧ್ಯವಿಲ್ಲ” ಎಂಬ ಮಾತು ಮೌಲ್ಯಾವಸ್ಥೆಯೊಂದರ ಮುಂದುವರಿಕೆಯಾಗಿ ಕಾಣುತ್ತದೆ. ಒಂದು ಕಾಲದ ಸಮಾಜ ನಂಬಿಕೊಂಡು ಬಂದ ಮೌಲ್ಯಗಳನ್ನು ಬರಹಗಾರ ಪ್ರಶ್ನಿಸದೆ ಅವುಗಳನ್ನು ವೈಭವೀಕರಿಸುವ, ಕೀರ್ತಿಸುವ ಹಂತಕ್ಕೆ ಇಳಿಯುವುದು ಬಹುಸಂಖ್ಯಾತ ಸಮಾಜದ ಮೆಚ್ಚುಗೆ ಗಳಿಸಲೆಂಬುದು ನಿಜವೆ. ಈ ಸ್ವೀಕೃತ ಮೌಲ್ಯಗಳನ್ನು ಶೋಧಿಸುವ ಯತ್ನಕ್ಕೆ ಸಂವೇದನಾಶೀಲನಾದ ಬರಹಗಾರ ಕೈ ಹಾಕುತ್ತಾನೆ. ವಚನಗಳು ನಮಗೆ ಹೀಗೆ ಪ್ರಸ್ತುತವೊ ಮೌಲ್ಯ ವಿವೇಚಕರಿಗೆ ಪ್ರೇರೇಪಣೆಗಳೂ ಆಗಿ ನಿಂತಂತೆ ಕೀರ್ತನೆಗಳು ನಿಲ್ಲದಿರಲು ಇದೇ ಕಾರಣವಾಗಿರುತ್ತದೆ. ಕೀರ್ತನೆಗಳಲ್ಲಿ ವಿವೃತ ತತ್ವವನ್ನು ಹೊಂದಿರುವ ರಚನೆಗಳೂ ಕೂಡ ಸಿದ್ಧ ಸಾಮಾಜಿಕ ಮೌಲ್ಯಗಳನ್ನು ಉದಾರವಾದಿ ನೆಲೆಯಿಂದ ನೋಡುವುದಾಗಿವೆಯೆಂದೂ ಅನ್ನಿಸುತ್ತದೆ.

ಕನ್ನಡ ಭಾಷೆಯನ್ನು ಮತತತ್ವ ಪ್ರಸಾರಕ್ಕೆ ಸಮರ್ಥವಾಗಿ ಬಳಸಿಕೊಂಡು ಸರ್ವಜನಕ್ಕೆ ಪ್ರಿಯವಾಗುವ ಬಗೆಯಲ್ಲಿ ಭಕ್ತಿ ನಿವೇದನೆಯನ್ನು ಮಾಡಲು ಸಾಹಿತ್ಯವನ್ನು ಒಂದು ಮಾಧ್ಯಮವನ್ನಾಗಿ ಬಳಸಲು ಅವರು ಪ್ರಯತ್ನಿಸಿದ ರೀತಿ ಅವರಿಗೆ ಸಾಕಷ್ಟು ಮನ್ನಣೆಯನ್ನು ತಂದದ್ದು ನಿಜ, ಈಗಿರುವ ಅವುಗಳ ಜನಪ್ರಿಯತೆಗೆ ಸಂಗೀತದ ಸಹಚರ‍್ಯೆಯೆ ಕಾರಣವಾಗಿದೆಯೆಂದೂ ಭಾವಿಸಬಹುದು.