ಪುರಂದರದಾಸರ ‘ಕೀರ್ತನೆ’ಗಳನ್ನು ಬಾಲ್ಯದಿಂದಲೂ ‘ಪದ’ಗಳೆಂದು ಕೇಳಿದ್ದೇನೆ ಮತ್ತು ನಮ್ಮ ಪರಿಸರದ ಜನಮಾನಸದಲ್ಲಿ ಈ ಪದಗಳೂ, ಪದಗಳ ಸಾಲುಗಳೂ ಸಾಂದರ್ಭಿಕವಾಗಿ ಬೇರೆ ಬೇರೆ ಅರ್ಥ-ಆಯಾಮಗಳಲ್ಲಿ ಬಳಕೆಗೊಳ್ಳುತ್ತಿದ್ದುದ್ದನ್ನೂ ಅನುಭವಿಸಿದ್ದು ಉಂಟು. ಆದಾಗ್ಯೂ ಈ ಸಾಹಿತ್ಯವನ್ನು ಕುರಿತಂತೆ ನಾನು ವಿಶೇಷ ಆಸಕ್ತಿ ತಳೆದು ಅಧ್ಯಯನ ನಡೆಸಿದ್ದು ಇಲ್ಲ. ಇಂಥ ಹೊತ್ತಿನಲ್ಲಿ ಈ ವಿಷಯವನ್ನು ಕುರಿತು ಉಪನ್ಯಾಸ ನೀಡುವಂತೆ ಕೇಳಿದಾಗ ಒಪ್ಪಿಕೊಂಡಿದ್ದಕ್ಕೆ ಬಹುಶಃ ಸುಪ್ತವಾಗಿ ಇದ್ದ ಆಸಕ್ತಿಯೇ ಕಾರಣವಾಗಿರಬೇಕು. ಜೊತೆಗೆ ಆಳವಾದ ಅಧ್ಯಯನಕ್ಕೆ ಈ ನೆಪದಲ್ಲಾದರೂ ಒಂದು ಅವಕಾಶವಾದಿತೆಂಬ ಭಾವನೆ ಕೂಡ.

ಅಂತೂ ಈ ನಿಟ್ಟಿನಲ್ಲಿ ಪುರಂದರದಾಸರನ್ನು ಕುರಿತು ಯೋಚಿಸುವಂತಾದಾಗ ನನಗೆ ಥಟ್ಟನೆ ನೆನಪಾದುದು ಜೈನ ಕಥಾನಕಗಳಲ್ಲಿ ಬರುವ ಮಹಾಪುರುಷರ ಜೀವನ. ಭೋಗದ ತುತ್ತತುದಿಯಲ್ಲಿ ಇರುವವರಿಗೆ, ಹಠಾತ್ತನೇ ಯಾವುದೊ ಗಳಿಗೆ ಯಾವುದೊ ಒಂದು ನೆವದಿಂದ ವೈರಾಗ್ಯ ಉಂಟಾಗಿ ಸರ್ವ ಸಂಗ ಪರಿತ್ಯಾಗಿಗಳಾಗಿ ಕಾಡಿಗೆ ಹೊರಡುತ್ತಾರಲ್ಲ. “ಅಸಾರಂ ಈ ಸಂಸಾರ” ಅಂತ, ಅದು! ಪುರಂದರದಾಸರದೂ ಸರಿಸುಮಾರು ಅದೇ ಕಥೆ. ಆದರೆ ಇವರು ಮಾತ್ರ ಕಾಡಿಗೆ ಹೋಗಲಿಲ್ಲ. ಕಾಡತೊಡಗಿದ ದೈವವನ್ನು ಅರಸುತ್ತ ನಾಡಲ್ಲೆಲ್ಲ ಅಲೆದರು. (ಎತ್ತ ಪೋದನಮ್ಮ ವಿಪ್ರನ ಎಲ್ಲಿ ಹುಡುಕಲಮ್ಮ-ಕೀರ್ತನೆಯೂ ಬಹುಶಃ ಇದನ್ನು ಸೂಚಿಸುತ್ತದೆ) ದಾಸರನ್ನು ಕುರಿತು ಇರುವ ಐತಿಹ್ಯಗಳಲ್ಲಿಯಾದರೊ ಅವರ ಪೂರ್ವಜೀವನದ ಶ್ರೀಮಂತಿಕೆ-ಜಿಪುಣತನಗಳ ವೈಭವೀಕರಣವಿದ್ದಷ್ಟು ಭೋಗ ಜೀವನದ ಚಿತ್ರಣ ಬರುವುದಿಲ್ಲವಾದರೂ ವಿಜಯದಾಸರ ಕೀರ್ತನೆಯಲ್ಲಿ ’ಪರಿಪರಿ ಸೌಖ್ಯವನ್ನು ಅನುಭವಿಸುತ್ತಿದ್ದರು’ ಎಂಬ ಮಾತಂತೂ ಇದೆ.

ಇಂತಹ ಪುರಂದರರಿಗೆ ಪತ್ನಿಯೆ ಕಾರಣವಾಗಿ ವೈರಾಗ್ಯ ಒದಗಿ ಇದುವರೆಗೆ ವ್ಯಾಮೋಹದಿಂದ ನಿಷ್ಕರುಣೆಯಿಂದ ಗಳಿಸಿದ್ದನ್ನೆಲ್ಲ ಹಠಾತ್ತನೆ ’ಕೃಷ್ಣಾರ್ಪಣ’ ಮಾಡಿ ’ದಾಸದೀಕ್ಷೆ’ ತೊಟ್ಟು ಮಧುಕರ ವೃತ್ತಿಯನ್ನು ಹಿಡಿದರು. ಇದು ’ನಾಟಕೀಯ’ವೆನ್ನಿಸಿದರೂ ಅಂತರಂಗದಲ್ಲಿ ಮಾತ್ರ ಅದ್ಭುತ ಪರಿವರ್ತನೆಯೇ ಆಗಿರಬೇಕು. ಆಂತರ್ಯದ ಈ ಸ್ಥಿತ್ಯಂತರ ಅನಾದೃಶ್ಯ ಅಸಾಮಾನ್ಯವೇ ಸರಿ. ನವರತ್ನ ವ್ಯಾಪಾರದ, ನವಕೋಟಿ ನಾರಾಯಣ ಎಂಬ ಬಿರುದಾಂಕಿತ ಧಾರ್ಮಿಕ ಕಟ್ಟುನಿಟ್ಟಿನ ಆಚರಣೆಯ ಮನೆತನದ ಇವರ ಕಣ್ಣು ತೆರೆಸಿದ್ದು ಒಂದು ಹೆಣ್ಣು! ಬರೀ ಕಣ್ಣನ್ನಲ್ಲ; ಹೃದಯವನ್ನು! ಫಲವಾಗಿ, ಇಷ್ಟುದಿನ ಕೇವಲ ಬೌದ್ಧಿಕ – ಭೌತಿಕ ಲೆಕ್ಕಾಚಾರದಲ್ಲಿ ನಡೆಯುತ್ತಿದ್ದ ದಾಸರ, ಥಟ್ಟನೆ ತೆರೆದ ಹೃದಯದ ಬಾಗಿಲಿನಿಂದ ವೈವಿಧ್ಯಮಯ ಭಾವಪ್ರವಾಹವು ’ಪದ’ಗಳಾಗಿ ಪ್ರವಹಿಸುವಂತಾಯಿತು. ಇಷ್ಟು ದಿನ ಧನವಂತರಾಗಿದ್ದುಕೊಂಡು, ಯಾರೊಬ್ಬರಿಗೂ ನೆರವಾಗದೆ ಮೆರೆಯುತ್ತಿದ್ದ ವ್ಯಕ್ತಿಯೊಬ್ಬ ಭಿಕ್ಷೆಗೆ ಬಂದಾಗ, ಜನ ಅನಾದರದಿಂದ ಕಾಣದಿರುವುದುಂಟೆ? ಅದನ್ನು ಅನುಭವಿಸಿದ ದಾಸರೇ ಹಾಡಿದ್ದಾರಲ್ಲ ‘ಇಕ್ಕವಾರೆ ಕೈ ಎಂಜಲು ಚಿಕ್ಕ ಮಕ್ಕಳು ಅಳುತಾವೆ ಹೋಗೋ ದಾಸಯ್ಯ’ ಮತ್ತು ‘ಕದವ ಮುಚ್ಚಿದಳೀಕೆ ಮೂಳೆ ಗಯ್ಯಾಳಿ’ ಇವು ಸಾಂಕೇತಿಕವೆ ಇರಬಹುದು. ಇಂಥ ಪ್ರತಿಕ್ರಿಯೆ ಅನಾದರಗಳನ್ನು ಕುಗ್ಗದ ಸಮಾಹಿತ ಮನಸ್ಸಿನಿಂದ ದಾಸರು ಸ್ವೀಕರಿಸಿದರು. ಭಗವಂತನ ಸಾಕ್ಷಾತ್ಕಾರದ ಸಾಧನೆಗೆ ಮೊದಲ ಮೆಟ್ಟಿಲೆ ಇದಾಯಿತು ಮತ್ತು ಅದೇ ಅವರ ಬಹುತೇಕ ಕೀರ್ತನೆಗಳ ಹಿಂದಿನ ಸ್ಥಾಯಿ ಸಹ. ’ಅಪಮಾನವಾದರೆ ಒಳಿತು ಅಪರೂಪದ ಹರಿನಾಮ ಜಪಿಸುವುದೇಕೆ’ ಎಂಬ ಹಾಡಿನಲ್ಲಿ ಈ ಮನೋಸ್ಥಿತಿ ಚೆನ್ನಾಗಿ ಬಿಂಬಿತವಾಗಿದೆ. ಬಹುಶಃ ಇದುವರೆಗೆ ಅವರು ಇಟ್ಟುಕೊಂಡ ನಂಬುಗೆ, ಆಚಾರ-ವಿಚಾರ-ಜೀವನ ತತ್ವಗಳೇ ಈ ಸಮಸ್ಥಿತಿಗೆ ಅವರ ಮನಸ್ಸನ್ನು ಸಜ್ಜುಗೊಳಿಸಿರಬಹುದು. ಹೀಗಾಗಿಯೇ ಮುಂದೆ ಕ್ರಮೇಣ ವೈಯಕ್ತಿಕತೆಯನ್ನು ನೀಗುತ್ತ ಸಂಗೀತ-ನೃತ್ಯಗಳಿಗೆ ತಕ್ಕ ತಾಳ-ಮೇಳದೋಪಾದಿಯ ಆಶು ಕವಿತೆಗಳಾಗಿ ದಾಸರ ಭಾವನೆ-ಅನುಭಾವಗಳು ಅಭಿವ್ಯಕ್ತಿಗೊಳ್ಳುವುದು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲೆ ಹುಟ್ಟಿದ್ದು ದಾಸರ ಪದಗಳು.

ಪುರಂದರರ ಕೀರ್ತನೆಗಳು ವಸ್ತು ವೈವಿಧ್ಯ-ಲೋಕದರ್ಶನ ಮತ್ತು ಚಿಂತನಾ ಲಹರಿಗಳ ನೆಲೆಯಲ್ಲಿ ಬಹುಮುಖವಾಗಿವೆ. ಅವರ ಹಾಡುಗಳು ಸಾಂದರ್ಬಿಕ ಅಥವಾ ಆ ಕ್ಷಣದ ಮನಸ್ಥಿತಿಯ ಪ್ರತಿಕ್ರಿಯೆ ಎಂಬಂತೆ ತೋರಿದರೂ ಅವುಗಳ ಹಿಂದಿನ ಮನಸ್ಸು ಒಂದೇ. ಆದುದರಿಂದ ಒಂದೊಂದು ಪದವೂ ಸ್ವಯಂಪೂರ್ಣವಾಗಿದ್ದರೂ ಅವೆಲ್ಲವುಗಳ ನಡುವೆ ಪರಸ್ಪರ ಸೂಕ್ಷ್ಮ ಸಂಬಂಧವಿದೆ. ಈ ದೃಷ್ಟಿಯಿಂದಲೇ ನಾವು ಅವುಗಳನ್ನು ವಿಶ್ಞೇಷಿಸಬೇಕಾಗುತ್ತದೆ.

ಧರ್ಮ-ಭಕ್ತಿ ಮತ್ತು ಅನುಭಾವಗಳು ಮುಪ್ಪುರಿಗೊಂಡು ಈ ಕೀರ್ತನೆಯಲ್ಲಿ ಪ್ರಕಟವಾಗಿವೆ. ಈ ಒಂದೊಂದು ನೆಲೆಯಲ್ಲೂ ಅವರು ರಚಿಸಿದ ಕೀರ್ತನೆಗಳು ಇದ್ದು ಒಂದೊಂದು ಸಲ ಅವುಗಳ ಮಧ್ಯೆ ಪರಸ್ಪರ ವಿರೋಧ ಕಂಡು ಬಂದರೂ ಆ Paradoxನ ಮೂಲಕವೆ ಅನೇಕ ಸಂದರ್ಭಗಳಲ್ಲಿ ದಾಸರ ಆಶಯವು ವ್ಯಕ್ತವಾಗುತ್ತದೆ.

ಅಂತೂ ಒಟ್ಟು ತಮ್ಮ ಅನುಭವವನ್ನೋ, ಭಕ್ತಿಯನ್ನೊ ಪ್ರಕಟಗೊಳಿಸುವಲ್ಲಿ ದಾಸರು ಅಭಿವ್ಯಕ್ತಿಯ ತಂತ್ರಗಳನ್ನು ವಿಷಯಾನುಸಾರಿಯಾಗಿ ಕಂಡುಕೊಂಡರು. ಅಷ್ಟಕ್ಕೂ ಅಭಿವ್ಯಕ್ತಿಯ ತಂತ್ರವೆನ್ನುವುದು ಹೊರಗಿನದಲ್ಲ. ಬೇಂದ್ರೆಯವರು ಹೇಳಿದಂತೆ ಇದು ಪಾಡನ್ನು ಹಾಡಾಗಿದುವ ಪ್ರಕ್ರಿಯೆ, ಅಥವಾ ವ್ಯಕ್ತಿನಿಷ್ಠ ಅನುಭವವನ್ನು ಸಾಧಾರಣೀಕರಣಗೊಳಿಸುವ ವೈಖರಿ. ಅಂತೂ ಹೀಗೆ ಪುರಂದರರು ಕಂಡುಕೊಂಡ ಅಭಿವ್ಯಕ್ತಿ ತಂತ್ರದಲ್ಲಿ ವಿಡಂಬನೆಗೆ ಮಹತ್ವದ ಸ್ಥಾನವಿದೆ. ಇದು ಅವರ ಕೀರ್ತನೆಗಳ ಉದ್ದಕ್ಕೂ ಪ್ರವಹಿಸುವ ಶೈಲಿಯಾಗಿದ್ದು, ಮೊದಲು ತನ್ನನ್ನೂ ನಂತರ ತನ್ನನ್ನೂ ಕೆರಳಿಸಿದ ಸ್ವಭಾವ, ಸಮಾಜಗಳನ್ನು ನಂತರ ಕಾಡಿದ ದೈವವನ್ನೂ ಒಳಗೊಂಡಿದೆ.

ದಾಸರಲ್ಲಿ ಧರ್ಮ-ಭಕ್ತಿ-ಅನುಭಾವಗಳ ಮುಪ್ಪುರಿ ಇದ್ದರೂ ಪ್ರಧಾನವಾಗಿ ಭಕ್ತಿ-ಅನುಭಾವಗಳೇ ಅವರ ಬಹುಪಾಲು ರಚನೆಗಳನ್ನು ರೂಪಿಸಿವೆ. ಆದ್ದರಿಂದಲೇ ದಾಸರಲ್ಲಿ ಮೊಟ್ಟ ಮೊದಲು ಕಾಣಿಸಿಕೊಳ್ಳುವುದು ಆತ್ಮ ನಿರೀಕ್ಷಣಾ ರೂಪದ ವಿಡಂಬನೆ. ನಂತರ ಅದರ ವಲಯ ವಿಸ್ತಾರಗೊಳ್ಳುತ್ತ ಹೋಗುತ್ತದೆ. ಇಲ್ಲಿ ವಿಡಂಬನೆ ಎಂಬುದು ಸಂಕುಚಿತಾರ್ಥದಲ್ಲಿ ನಾವು ವಿಡಂಬನ ಸಾಹಿತ್ಯ ಎಂದು ಗುರುತಿಸುತ್ತೇವಲ್ಲ ಅದು ಅಲ್ಲ. ಬದಲಾಗಿ ದಾಸರ ಒಟ್ಟು ಅಭಿವ್ಯಕ್ತಿಯ ಆಂತರ್ಯದಲ್ಲಿ ಪ್ರವಹಿಸುವ ’ಲಘು ಅನುಕರಣ’ದ ಧಾಟಿ ಅಥವಾ Law menitic style. ನಮ್ಮ ಆಧುನಿಕ ಕಥನ ಸಾಹಿತ್ಯದಲ್ಲಿ ಇಂತಹ ಶೈಲಿ ಎಷ್ಟು ಸಶಕ್ತವಾಗಿ ಮತ್ತು ಆರೋಗ್ಯಕಾರಿಯಾಗಿ ಬಳಕೆಗೊಂಡಿದೆ ಎಂಬುದನ್ನು ತಿಳಿದವರಿಗೆ ಅದರ ಮಹತ್ವ ಅರ್ಥವಾದೀತು.

ಲೆಕ್ಕಾಚಾರದಲ್ಲಿ ದಾಸರ ಪದಗಳು ಶುದ್ಧ ಸಾಹಿತ್ಯಿಕ ಅಲ್ಲ; ಸಂಗೀತ-ನೃತ್ಯಕ್ಕೆ ಪೂರಕವಾಗಿ ಅವು ಆಶುಕವಿತೆಗಳಾಗಿ ಬಳಕೆಗೊಂಡಿವೆ ಎಂಬುದೊಂದು ಸಿದ್ಧಾಂತವಿದೆ. ಇದು ದಾಸರ ಕೀರ್ತನೆಗಳ ಹೆಗ್ಗಳಿಕೆಯಂತೆ ಮಿತಿಯೂ ಹೌದು! ಇದರೊಟ್ಟಿಗೆ ಕೀರ್ತನೆಗಳು ಒಂದು ನಿರ್ದಿಷ್ಟ ಧಾರ್ಮಿಕ ಪರಂಪರೆಯ ವ್ಯಾಖ್ಯಾನವೆಂಬ ಧೋರಣೆ ಕೂಡ ಈ ’ಕೀರ್ತನೆ’ಗಳ ಸ್ವರೂಪವನ್ನು ನಿರ್ಧರಿಸುವ ’ಕಟ್ಟು’ ಆಗಿ ಕೆಲಸ ಮಾಡಿತು. ಆದರೆ ಆ ’ಸಿದ್ಧಾಂತ’ ಈ ಕಟ್ಟುಗಳು ’ಅರ್ಧಸತ್ಯ’ ಎಂಬುದನ್ನು ಮನಗಂಡಾಗ ಮಾತ್ರ ಇವುಗಳ ಸಾಹಿತ್ಯಿಕ ಸ್ವರೂಪವನ್ನು ’ಮುಕ್ತ’ವಾಗಿ ವಿಶ್ಲೇಷಿಸುವುದು ಸಾಧ್ಯ ಎಂಬ ಮಾತು ಇಲ್ಲಿ ಅಪ್ರಸ್ತುತ ಆಗಲಾರದು.

ಆದಾಗ್ಯೂ ಪ್ರಸ್ತುತ ವಿಡಂಬನೆಯ ವಿಚಾರಕ್ಕೆ ಬಂದಾಗ ದಾಸರ ಅಭಿವ್ಯಕ್ತಿಯ ಭಿನ್ನ ಸಾಧ್ಯತೆಗಳು ಅರಿವಿಗೆ ಬರುತ್ತವೆ. ಉದಾರಣೆಗೆ ’ಸತ್ತವರ ನೆರಳು’ ನಾಟಕಕ್ಕಾಗಿ ವಿಡಂಬನ ಧಾಟಿಯಲ್ಲಿ ಕೀರ್ತನೆಗಳನ್ನು ಬಳಸಿಕೊಂಡ ಪರಿ ಇದು ಒಂದು ಸಾಧ್ಯತೆಯಷ್ಟೇ. ಹಾಗೆಯೆ ಶ್ರೀರಂಗರ ಅನೇಕ ನಾಟಕಗಳ ಶೀರ್ಷಿಕೆ ಕೂಡ ಈ ’ಪದಗಳ’ ವಿಡಂಬನಾ ಸಾಮರ್ಥ್ಯವನ್ನೂ ಧ್ವನಿಸುತ್ತವೆ. ಅಂತೂ ಪುರಂದರದಾಸರ ’ಪದ’ಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಬಳಸಿಕೊಳ್ಳುವ ಅವಕಾಶವಂತೂ ಇದೆ.

ಅವರ ಮೊದಲನೆಯದೆನ್ನವಾದ ಪದ
ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ||
ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಬಾಗಿ ನಾಚುತ್ತಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ

ಇಡೀ ಕೀರ್ತನೆಯ ಧಾಟಿಯು ಆತ್ಮವಿಮರ್ಶೆಯ ಲಘು ವೈನೋದಿಕಕ್ಕೆ ಉತ್ತಮವಾದ ಉದಾಹರಣೆಯಾಗಿದೆ. ಇಲ್ಲಿ ಬಳಸಿದ ಪದಗಳು ಸ್ಥಿತ್ಯಂತರ ಮತ್ತು ಆತ್ಮವಿಕಾಸ ಸಂದರ್ಭದ ಮನೋಸ್ಥಿತಿಯನ್ನು ಸೂಚಿಸುತ್ತವೆ. ಹಾಗೆಯೇ ಈ ಕೀರ್ತನೆಗಳ ಜೊತೆಗೇನೆ ಹೆಂಡತಿಯನ್ನು ಕುರಿತು ಅವರು ಹಾಡಿದ ಇತರ ಕೀರ್ತನೆಗಳನ್ನೂ ಜೊತೆಗಿಟ್ಟು ನೊಡಿದಾಗ ಉಂಟಾಗುವ Paradox ಅನ್ನೂ ಗಮನಿಸಬಹುದು.

ಅಂತೂ ದಾಸರು ತಾವು ಗಳಿಸಿದ ಸಂಪತ್ತನ್ನು ತ್ಯಜಿಸಿ ಉಳಿಸಿಕೊಂಡಿದ್ದ ಆಚಾರ, ವಿಚಾರ, ಧರ್ಮ ಶ್ರದ್ಧೆಗಳ ಬಲದಿಂದ ಬಯಲಿಗೆ ಬಂದರೆ ಕಾಣುವುದೇನು ? ಆ ತತ್ವಗಳು, ಆಚಾರ-ವಿಚಾರಗಳು ಅಪಮೌಲ್ಯಗೊಳ್ಳುತ್ತವೆ. ಅಥವಾ ಡಾಂಭಿಕಗೊಳ್ಳುತ್ತಿವೆ, ದುರುಪಯೋಗಗೊಳ್ಳುತ್ತಿವೆ. ಆದರ್ಶ-ವಾಸ್ತವಗಳ ನಡುವೆ, ವಿಚಾರ-ಆಚಾರಗಳ ನಡುವೆ ಅಪಾರ ಅಂತರವಿದೆ. ಇದು ಪುರಂದರದಾಸರನ್ನು ತೀವ್ರ ತಲ್ಲಣಗೊಳಿಸಿರಬೇಕು. ಇದು ಸಾವು ನಂಬಿದ ತತ್ವ ಅಥವಾ ಧರ್ಮದ ಸೋಲು ಅಲ್ಲ; ಬದಲಾಗಿ ಆ ತತ್ವ-ನಂಬಿಕೆಗಳ ಕಡು ವಿರೋಧಿ, ಅಂದರೆ ಇಂಥ ಆಚಾರ-ನಂಬಿಕೆಗಳನ್ನು ಅಪಮೌಲ್ಯಗೊಳಿಸುವ ಮಂದಿ ಎಲ್ಲ ಕಾಲಕ್ಕೂ ಇರುವವರೆ. ಅಂಥವರನ್ನು ತಿವಿದು ಎಚ್ಚರಿಸಲು ದಾಸರು ಈ ವಿಡಂಬನಾಸ್ತ್ರವನ್ನು ಅದರೆಲ್ಲ ಸೂಕ್ಷ್ಮತೆ ಸಾಧ್ಯತೆಗಳೊಂದಿಗೆ ಬಳಸಿಕೊಂಡಿದ್ದಾರೆ. ಇದಕ್ಕೆ ’ವಿಬಾವ’ ಭಕ್ತಿ ಮತ್ತು ಅನುಭಾವದ ಅಂಶಗಳೇ ಆಗಿವೆ. ಪುರಂದರದಾಸರು ಮತೀಯ ಅಥವಾ ಧಾರ್ಮಿಕ ’ಪದ’ಗಳನ್ನು ಬರೆದಿದ್ದಾರೆ. ಈ ಧಾರ್ಮಿಕತೆಯೇ ಒಟ್ಟು ಅವರ ಜೀವನ ಸಂದರ್ಭದಲ್ಲಿ ತಾತ್ವಿಕತೆಯನ್ನು ರೂಪಿಸಿದೆ. ಆದರೆ ತತ್ವ ಪ್ರಸಾರವನ್ನು ಮೆರೆದ ದಾಸರ ಸಹಜ ಹೃದಯವಂತಿಕೆಯ ಹಾಡುಗಳು ಆಧ್ಯಾತ್ಮ ಮತ್ತು ಭಕ್ತಿಭಾವದ ನೆಲೆಯಲ್ಲೆ ಅರಳಿವೆ. ಈ ನೆಲೆಯಿಂದಲೇ ಅವರು ವಿಡಂಬನೆಯನ್ನು ಶಕ್ತವಾಗಿ ಬಳಸಿದ್ದಾರಾದರೂ ಎಲ್ಲ ಸಂದರ್ಭದಲ್ಲೂ ಅದು ಒಂದೇ ತೆರನಾಗಿಲ್ಲ ಎಂಬುದನ್ನೂ ಗಮನಿಸಬೇಕು. ಯಾರು ಯಾರಿಗೆ ಹೇಗೆ ಹೇಗೆ ಹೇಳಬೇಕೆಂಬ ತಾರತಮ್ಯ ಜ್ಞಾನ ದಾಸರಲ್ಲಿ ಸ್ಪಷ್ಟವಾಗಿದೆ. ಹೀಗಾಗಿಯೆ ಎಲ್ಲ ಸಮಯದಲ್ಲೂ ಲಘು ವೈನೋದಿಕ ಶೈಲಿ ಫಲಿಸುವುದಿಲ್ಲ. ಅಂಥ ಹೊತ್ತಿನಲ್ಲಿ ಅವರು ಶೈಲಿಯನ್ನು, ಶಬ್ದಗಳನ್ನು,ಶಬ್ದ ಪ್ರಯೋಗದ ಪರಿಯನ್ನು ಬದಲಿಸುತ್ತಾರೆ; ರಾಗ ಮತ್ತು ಕುಣಿತದ ಗತಿಗೆ ತಕ್ಕಂತೆ, ಈಗ ಮೊದಲು ಲಘು ವೈನೋದಿಕ ಶೈಲಿಗೆ ಉದಾಹರಣೆಯಾಗಿ ಕೆಲವು ಕೀರ್ತನೆಗಳನ್ನು ಪರಿಶೀಲಿಸೋಣ.

ಮಾಯಾದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು
ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು

ಈ ಕೀರ್ತನೆಯಲ್ಲಿ ಮುಂದೆ ಬರುವ ಭಾವಿಸಿದ್ದೆಲ್ಲವು ಭೂಮಿ ಪಾಲಾದದ್ದು’ ಸೇವಿಸಿದ ಗಣಪ ಮಂಗನಾದದ್ದು’ ಒತ್ತಿ ಹಿಡಿದ ಕಂಬ ವ್ಯರ್ಥವಾದುದು ’ತೋಡುವ ಬಾವಿ ಬೇತಾಳ ಹೊರಟಿದ್ದು’ ಇತ್ಯಾದಿ ಪದಗಳ ಜೊತೆಗೆ ಹಾಡಿನ ಉದ್ದಕ್ಕೂ ಮಂತ್ರದೋಪಾದಿ ಬರುವ ಇನ್ನೇನಿನ್ನೇನು ಇವು ಈ ಧಾಟಿಯನ್ನು ಅಪೂರ್ವವಾಗಿ ರೂಪಿಸಿವೆ.

ಅದೇ ಬಗೆಯಲ್ಲಿ

. ಸುಮ್ಮನೆ ವೈಷ್ಣವನೆಂಬಿರೆಪರಿ
ಬ್ರಹ್ಮ ಸುಜ್ಞಾನವರಿಯದ ಮನುಜನ

. ಎಲ್ಲವನು ಬಲ್ಲೆನೆನ್ನುವಿರಲ್ಲ
ಸಲ್ಲದ ಗುಣ ಬಿಡಲಿಲ್ಲ

. ಪಿಂಡಾಂಪದೊಳಗಿನ ಗಂಡನ ಕಾಣದೆ
ಮುಂಡೆಯರಾದರು ಪಂಡಿತರೆಲ್ಲ

ದೇಹ-ಜೀವಗಳ ನಡುವೆ ನಡೆಯುವ ಆಪ್ತ ಸಂಭಾಷಣೆಯ ’ಜೀವ ಸಂಬೋಧನೆ’

ಅನುದಿನದಿ ಬಮದು ತನುವ ಸ್ನೇಹವ ಮಾಡಿ
ಎನ್ನ ಬಿಟ್ಟು ಹೋಗುತಿಯಾ ಜೀವವೆ
ಹುಟ್ಟಿದ್ದು ಹೊಲೆಯೂರು ಬೆಳೆದದ್ದು ಮೊಲೆಯೂರು
ಇಟ್ಟಿದ್ದು ಕಾಡೂರಾಯಿತಲ್ಲೊ ಜೀವವೆ

ಈ ಕೀರ್ತನೆಯ ಪದರಚನಾ ವೈಖರಿ ಮತ್ತು ಉತ್ಕರ್ಷದ ಗೀತಶಕ್ತಿ ಇವು ಪುರಂದರರ ಕಾವ್ಯ ದೀಪ್ತಿಗೆ ಸಾಕ್ಷಿಯಾಗಿವೆ. ಇದೇ ಬಗೆಯಲ್ಲಿ ’ಪಿಳ್ಳಂಗೋವಿಯ ಚೆಲ್ವಕೃಷ್ಣನ ಎಲ್ಲಿ ನೋಡಿದಿರಿ! ರಂಗನ ಎಲ್ಲಿ ನೋಡಿದಿರಿ ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು’ ಈ ಕೀರ್ತನೆಯನ್ನು ಬಗೆಯ ಬೇಕು ಇಲ್ಲಿ ಹುದುಗಿರುವ ವ್ಯಂಗ್ಯದ ಸ್ವಾರಸ್ಯವನ್ನು ಡಾ. ಎಚ್. ಎನ್. ಮುರಳೀಧರ ಅವರು ತಮ್ಮ ’ತಂಬೂರಿ ಮೀಟಿದವ’ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿ ತೋರಿಸಿದ್ದಾರೆ.

ಆದರೆ ಈಗಾಗಲೇ ನಾವು ಗುರುತಿಸಿದಂತೆ ಎಲ್ಲ ಸಂದರ್ಭದಲ್ಲೂ ಒಂದೇ ಧ್ವನಿ ಕೇಳಿಸುವುದಿಲ್ಲ. ಕೇಳುವವರು ಯಾರು ಎಂಬುದೂ ಮತ್ತು ಬೀರತಕ್ಕ ಪರಿಣಾಮವೂ ಎಂಥದ್ದು ಎಂಬುದು ಮುಖ್ಯವಾಗುತ್ತದೆ. ಅದಕ್ಕೆ ತಕ್ಕಂತೆ ಧಾಟಿಯೂ ಬದಲಾಗುತ್ತದೆ. ಅಲ್ಲೆಲ್ಲ ಅವರು ನೇರವಾದ ವಿಮರ್ಶೆಗೆ ಇಳಿಯುತ್ತಾರೆ.ಈ ದೃಷ್ಟಿಯಿಂದ ರಚನೆಗೊಂಡ ಅನೇಕ ಪದಗಳಿವೆ. ’ಉದರವೈರಾಗ್ಯವಿದು…..’ ಮಡಿಮಡಿಯೆಂದಡಿಗಡಿಗ್ಹಾರುತಿ…” ’ನಗೆಯು ಬರುತಿದೆ’, ’ಡೊಂಕು ಬಾಲದ ನಾಯಕರೆ……’, ’ಕುರುಡು ನಾಯಿ ತಾ ಸಂತೆಗೆ ಬಂತಂತೆ…’, ’ನಿಂದಕರಿರಬೇಕು’, ’ನಿಂದನೆಮಾಡಲು ಬೇಡ ನೀಚಾತ್ಮ’, ’ಬೇವು ಬೆಲ್ಲದೊಳಿಡಲೇನುಫಲ’ ’ಜಾಲಿಯ ಮರದಂತೆ ಧರೆಯೊಳು ದುರ್ಜನರು’, ’ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ’ ಇಂದ ಇನ್ನೂ ಅನೇಕ ರಚನೆಗಳನ್ನು ಉಲ್ಲೇಖಿಸಬಹುದು. ಕೆಲವರ ಮುಖ ಚಹರೆಯನ್ನು ನೋಡಿದರೆ ಸಾಕು ನಗೆ ಉಕ್ಕುತ್ತದೆ ಅಥವಾ ನಗೆ ಉಕ್ಕಿದಂತೆನಿಸುತ್ತದೆ. ಅಥವಾ ಕಿರಿಕಿರಿ, ಒಂದು ತರಹ ಅಸ್ವಸ್ಥ್ಯ ಉಂಟಾಗುತ್ತದೆ. ಅದೇ ರೀತಿ ಕೆಲವು ಶಬ್ದಗಳ ಜಾಯಮಾನವು ಕೂಡ.ಪುರಂದರರು ಆಡುನುಡಿಯ ಇಂಥ ಅನೇಕ ಪದಗಳ ನಾಡಿಯನ್ನು ಹಿಡಿದು ಪ್ರಯೋಗಿಸುತ್ತಾರೆ. ಉದಾಹರಣೆಗೆ ಗೂಟನಾಮ, ಕುರುಡು ನಾಯಿ ಇತ್ಯಾದಿ.

ಇನ್ನು ಕೆಲವು ಸಂದರ್ಭಗಳಲ್ಲಂತೂ ದಾಸರ ವಿಡಂಬನಾತ್ಮಕ ಪ್ರತಿಕ್ರಿಯೆ ಅತ್ಯಂತ ತೀಕ್ಷ್ಣ, ಕಠೋರ,ಉಗ್ರ ಆಗುವುದಿದೆ.

ಗೂಡನಾಮವ ಹೊಡೆದು ಗುಂಡು ತಂಬಿಗೆ ಹಿಡಿದು
ಗೋಟಂಚು ಧೋತರ ಮಡಿಯನುಟ್ಟು
ದಾಟು ಕಾಲಿಡುತ ನಾ ಧರೆಯೊಳು ಬರಲೆನ್ನ
ಬೂಟಕತನ ನೋಡಿ ಭ್ರಮಿಸದಿರಿ ಜನರೆ

ಅದೇ ರೀತಿ

ಇಂಥ ತುಡುಗು ಮುಂಡೇಗಂಡರಿಗಿನ್ನು ವೈಷ್ಣವ ಸಲ್ಲುವುದೆ?
ಗಡ್ಡ ಮೀಸೆ ಬೋಳಿಸಿಕೊಂಡು ಗೊಡ್ಡು ನಾಮವ ತೀಡಿಕೊಂಡು
ಅಡ್ಡಾದಿಡ್ಡಿ ಮುದ್ರೆಗಳ ಬಡಿದುಕೊಂಡಿನ್ನು
ದೊಡ್ಡ ದೊಡ್ಡ ಮಾತುಗಳಾಡಿ ದೊಡ್ಡವರೆಂದ್ಹೇಳಿಕೊಂಬ
ಬಡ್ಡೀ ಧಗಡೀ ಮಕ್ಕಳಿಗಿನ್ನು ವೈಷ್ಣವ ಸಲ್ಲುವುದೆ ?

ಈ ಎರಡೂ ಹಾಡುಗಳಲ್ಲಿ ಅನುಪ್ರಾಸವೂ ಭಾವಪುಷ್ಟಿಗೆ ಪೂರಕವಾಗಿದೆ. ಇಲ್ಲೆಲ್ಲ ಮುಖ್ಯವಾಗಿ ತೋರಿಕೆಗೂ ವಾಸ್ತವಕ್ಕೂ ಇರುವ ಅಂತರ ಅವರನ್ನು ಕೆರಳಿಸುತ್ತದೆ. ಅಂದರೆ ತಾವು ನಂಬಿದ ತತ್ವಕ್ಕೆ ಇಂತು ಅಪಚಾರ ಬಗೆಯುವವರನ್ನು ಕಂಡು ಕೆರಳುತ್ತಾರೆ. ಇದನ್ನೆಲ್ಲ ನೋಡಿದರೆ ಪುರಂದರದಾಸರು ಒಬ್ಬ Critical insider ಆಗಿ ಕಾಣುವರು. ತಮ್ಮ ಮತದ ಬಗ್ಗೆ ಒಂದು ಖಾಚಿತ್ಯ ಮತ್ತು ನಿಷ್ಠೆ ಇದ್ದು ಅಂಥ ಅನೇಕ ಕೀರ್ತನೆಗಳನ್ನು ಬರೆದರೂ ಪುರಂದರರದು ಅನ್ಯಮತ ದೂಷಣೆ-ವಿಡಂಬನೆಗಳು ಅಷ್ಟಾಗಿ ಕಂಡುಬರುವುದಿಲ್ಲ. ಬದಲಾಗಿ ತಮ್ಮೊಳಗಿನಿಂದ ನೋಡುವ ನೋಟ ಮುಖ್ಯವಾಗಿರುತ್ತದೆ.

ಈ ಕೆಲವು ಅಂಶಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಪುರಂದರದಾಸರ ಲೋಕದೃಷ್ಟಿ ಕಾವ್ಯದೃಷ್ಟಿ ಏನೆಂಬುದು ನಿಚ್ಚಳವಾಗುತ್ತದೆ. ಅವರಲ್ಲಿ ಇವೆರಡೂ ಅವಿನಾಭಾವಿಯಾಗಿದ್ದು ಭಗವಂತನ ಸಾಕ್ಷಾತ್ಕಾರಕ್ಕಾಗಿಯೆ ತೆರೆದ ದೃಷ್ಟಿಗಳಿವು. ಆದ್ದರಿಂದ ಒಟ್ಟು ಜೀವನ ಧೋರಣೆ ಮಾನವ ಜನ್ಮವನ್ನು ಸಾರ್ಥಕಗೊಳಿಸುವ ದೃಷ್ಟಿಯನ್ನೇ ಹೊಂದಿದ್ದು,ಈ ಕೀರ್ತನೆಗಳಲ್ಲಿ ವ್ಯಕ್ತಗೊಂಡ ವಿಡಂಬನೆಯ ನೆಲೆಯೂ ಅದೇ ಆಗಿದೆ.