ಪುರಂದರದಾಸರ ಪೂರ್ವಾಶ್ರಮದ ಕುರಿತು ಸೊಗಸಾದ ಕಥೆಯೊಂದಿದೆ. ದಾಸರ ಮೊದಲ ಹೆಸರು ಶ್ರೀನಿವಾಸ. ಚಿನಿವಾರ ವೃತ್ತಿಯ ಶ್ರೀನಿವಾಸ ಕಡು ಜಿಪುಣ. ಒಂದು ದಿನ ಕೃಷ್ಣ ಪರಮಾತ್ಮ ಬ್ರಾಹ್ಮಣ ವೇಷದಲ್ಲಿ ಚಿನಿವಾರದ ಅಂಗಡಿಗೆ ಬಂದು ತನ್ನ ಮಗನ ಉಪನಯನಕ್ಕೆ ಸಹಾಯಯಾಚಿಸುತ್ತಾನೆ. ಪ್ರತಿ ಸಲವು ನಾಳೆ ಕೊಡುವುದಾಗಿ ಹೇಳಿ ಶ್ರೀನಿವಾಸ ಜಾರಿಕೊಳ್ಳುತ್ತಾನೆ. ಕೆಲದಿನಗಳ ನಂತರ ಬೇಸರಗೊಂಡ ಬ್ರಾಹ್ಮಣ ಶ್ರೀನಿವಾಸ ಶ್ರೀನಿವಾಸನ ಮನೆಗೆ ಹೋಗಿ ಅವನ ಹೆಂಡತಿ ಸರಸ್ವತಿಯ ಬಳಿ ತನ್ನ ಬೇಡಿಕೆಯನ್ನು ಸಲ್ಲಿಸುತ್ತಾನೆ. ಅವನ ದೈನ್ಯೆತೆಗೆ ಕರಗಿದ ಅವಳು ತನ್ನ ಮೂಗಿನಲ್ಲಿ ಧರಿಸಿದ್ದ ನತ್ತನ್ನೇ ಕೊಟ್ಟುಬಿಡುತ್ತಾಳೆ. ಅಂಗಡಿಗೆ ಮಾರಲು ತಂದ ನತ್ತು ತನ್ನ ಹೆಂಡತಿಯದೆಂದು ಅನುಮಾನಿಸಿ ಶ್ರೀನಿವಾಸ ಮನೆಗೆ ಹೋಗಿ ನೋಡಿದರೆ ಅವಳ ಮೂಗು ಬರಿದಾಗಿದೆ! ನತ್ತನ್ನು ಕಾಣಿಸಿದ ಹೊರತು ತಾನು ಜಾಗದಿಂದ ಕದಲುವುದಿಲ್ಲವೆಂದು ಶ್ರೀನಿವಾಸ ಮನೆಯ ಜಗಲಿಯ ಮೇಲೆ ಕೂತುಬಿಡುತ್ತಾನೆ. ನಿರುಪಾಯಳೂ ಅಸಹಾಯಕಳೂ ಆದ ಸರಸ್ವತಿ ಬೇರಿ ದಾರಿ ಕಾಣದೆ ಬಟ್ಟಲಲ್ಲಿ ವಿಷ ಹಾಕಿಕೊಂಡು ಮಲಗುವ ಕೋಣೆಯ ಬಾಗಿಲಿಕ್ಕಿ ಕುಡಿಯುತ್ತಿದ್ದಾಗ ಬಟ್ಟಲಲ್ಲಿ ನತ್ತು ಕಾಣಿಸುತ್ತದೆ! ಸಾವಿನ ಬಾಗಿಲು ತಟ್ಟಿದ ಹೆಂಡತಿಯ ಕೈಗೆ ನತ್ತು ಮರಳಿ ಬಂದಿದೆ. ಬ್ರಾಹ್ಮಣ ನೀಡಿದ ನತ್ತು ತನ್ನ ಜೇಬಿನಿಂದ ಕಣ್ಮರೆಯಾಗಿದೆ. ಈ ಪವಾಡದಿಂದ ಶ್ರೀನಿವಾಸನಿಗೆ ಅಂಗಡಿಗೆ ಬಂದು ಪದೆ ಪದೆ ಯಾಚಿಸಿದ ಬ್ರಾಹ್ಮಣ ಸಾಕ್ಷಾತ ಪರಮಾತ್ಮನೆಂದು ಮನದಟ್ಟಾಗುತ್ತದೆ. ಹೆಂಡತಿ ಸಂತತಿ ಸಾವಿರವಾಗಲಿ/ದಂಡಿಗೆ ಚಿತ್ತ ಹಿಡಿಸಿದಳಯ್ಯ ಎಂದು ವೈರಾಗ್ಯಕ್ಕೆ ಕಾರಣಳಾದ ಪತ್ನಿಯನ್ನು ಅತ್ಯಂತ ಗೌರವದಿಂದ ಸ್ಮರಿಸುತ್ತ ಕೀರ್ತಿಸುತ್ತಾರೆ ಪುರಂದರದಾಸರು.

ಬಡವರಿಗೆ ಕರಗದೆ ಲೋಬಿಯಾದ ತನ್ನ ಕಣ್ತೆರಿಸಿದ ಸಂಸಾರದಲ್ಲಿ ತೊಡಗಿಸಿಕೊಂಡು ತ್ಯಾಗಿಯಾದ ಹೆಂಡತಿಯನ್ನು ಮರಳಿ ಬದುಕಿಗೆ ತಂದ ಕೃಷ್ಣ ಕಂಡೂ ಕಾಣದಂತಾಗಿ ವೈರಾಗ್ಯಕ್ಕೆ ಆ ಮೂಲಕ ಭಕ್ತಿಗೆ ಕಾರಣವಾಗಿರುವುದು ಅತ್ಯಂತ ನಾಟಕೀಯ ಪ್ರಸಂಗವಾಗಿದೆ. ಹೆಂಡತಿ ಸಂಸಾರದ ಮಾಯೆಯಾಗಿ ಭಕ್ತಿಗೆ ಅಡ್ಡಬರಲಿಲ್ಲ. ಬದಲಾಗಿ ತನ್ನ ದಾನದಲ್ಲಿ ದೇವರ ದರ್ಶನ ನೀಡುತ್ತಾಳೆ. ದಯೆಯಿಲ್ಲದ ದಾರಿಯಲ್ಲಿ ಪ್ರತ್ಯಕ್ಷ ಕಂಡರೂ ಗುರುತಿಸಲಾರದೆ ಕಣ್ಮರೆಯಾದ ಪರಮಾತ್ಮನನ್ನು ಹುಡುಕುತ್ತ ಶ್ರೀನಿವಾಸ ದಾಸನಾಗಿ ಲೋಕ ಸಂಚರಿಸಿದ್ದು ಭಕ್ತಿ ಪಂಥದ ಅಪರೂಪದ ದೃಷ್ಟಾಂತವಾಗಿದೆ. ಮನಷ್ಯರೂಪದಲ್ಲಿಯೇ ದೇವರು ಪ್ರತ್ಯಕ್ಷವಾಗುವುದು ಭಕ್ತಿಗೆ ದೊರೆತ ಸಗುಣ ಮತ್ತು ಆಕಾರವುಳ್ಳ ಅಸ್ತಿತ್ವಕ್ಕೆ ಸಾಕ್ಷಿಯಾಗಿದೆ. ಹೆಣ್ಣು ಮತ್ತು ಹೆಣ್ಣನ್ನು ಮಾಯೆಯಾಗಿ ಕಾಡಿದ ಸಂಸಾರ ದೈವ ದರ್ಶನಕ್ಕೆ ಒಂದು ಸಂದರ್ಭವಾಗಿ ಬಿಡುತ್ತದೆ. ದಾಸರಿಗೆ ದೇವರು ನಾನಾ ರೂಪಗಳಿಂದ ಸಗುಣಗೊಂಡ ಸಾಕಾರ ವ್ಯಕ್ತಿ ಭಕ್ತಿ ಅನುಭವವಾಗಿ ವೇದ್ಯವಾಗಲು ಪದಾರ್ಥ ಪ್ರಪಂಚ ಅಗತ್ಯವಾಗಿದೆ. ಆದ್ದರಿಂದ ದ್ವೈತ ಸಿದ್ಧಾಂತ ಪ್ರೇರಿತವಾದ ದಾಸರಿಗೆ ಜಗತ್ತು ವಿಥ್ಯವಲ್ಲ. ಪರಮಾತ್ಮ ಮತ್ತು ಜೀವಾತ್ಮ ಒಂದೇ ಅಲ್ಲ. ಈ ಭಿನ್ನತೆಯ ಆಯ್ಕೆಯಲ್ಲಿ ಭಕ್ತಿ ಮತ್ತು ಅವನು ಆರಾಧಿಸುವ ದೇವರು ಇಹದಲ್ಲೇ ಭೇಟಿಯಾಗಬಹುದಾಗಿದೆ. ಸದಾ ಭಗವಂತನ ಸಾಮಿಪ್ಯ ಸಾನ್ನಧ್ಯ ಬಯಸುವ ದಾಸರಿಗೆ ಮುಕ್ತಿಗಿಂತ ಕೊನೆಗಾಲದವರೆಗೆ ಅವನೊಂದಿಗೆ ಭಕ್ತವಾಗಿರುವುದೇ ಹೆಚ್ಚು ಮಹತ್ವದ ಸಂಗತಿಯಾಗುತ್ತದೆ. ಸಂಸಾರದ ಸಹಜ ಪಾಪ ತಪ್ಪುಗಳನ್ನು ನಿತ್ಯವೂ ತೊಳೆದುಕೊಳ್ಳಲು ಭಕ್ತಿಯ ಸ್ನಾನಬೇಕು. ಭಕ್ತಿ ಮಹೆಮೆ ಅದೆಷ್ಟು ಅಪಾರವೆಂದರೆ ಭಕ್ತ ದೇವರನ್ನು ಮರೆಸಬಲ್ಲ. ಪರಮಹಂಸರು ಹೇಳಿದ ರಾಮಾಯಣದ ಸೇತುವೆ ನಿರ್ಮಾಣದ ಸಂಧರ್ಬದ ಕಥೆ ಭಕ್ತಿಯ ಅಗಾಧ ಶಕ್ತಿಯ ಕುರಿತು ಹೇಳುತ್ತದೆ. ಸಾಕ್ಷಾತ್ ದೇವರಾದ ಶ್ರೀರಾಮನಿಗೆ ಒಬ್ಬ ಸಾಮಾನ್ಯ ಮನುಷ್ಯನಂತೆ ಮಣ್ಣು ಕಲ್ಲುಗಳಿಂದ ಲಂಕೆಗೆ ಕ್ರಮಿಸಲು ಸೇತುವೆ ನಿರ್ಮಿಸುವುದು ಅನಿವಾರ್ಯವಾಯಿತು. ಆದರೆ ಶ್ರೀರಾಮನ ಭಕ್ತನಾದ ಹನುಮಂತನಿಗೆ ಜಿಗಿದು ಸಮುದ್ರದಾಟಲು ಸಾಧ್ಯವಾಯಿತು! ಇಂಥ ಜಿಗಿತದಿಂದ ಭವಸಾಗರವನ್ನು ದಾಟಲು ಭಕ್ತಿಯ ರೆಕ್ಕೆಗಳು ಸಾಕೆಂದು ತಿಳಿಸಿದರು ದಾಸರು.

ಸಂಸಾರದಲ್ಲಿ ತೊಡಗಿಕೊಂಡೂ ಅದಕ್ಕಂಟಿಕೊಳ್ಳದೆ ಸಾರ್ಥಕವಾಗಿ ಬದುಕಲು ಭಕ್ತಿಯನ್ನು ದಾಸರು ಹೇಗೆ ಬಳಸಿದರೆಂಬುದಕ್ಕೆ ಪರಮಹಂಸರು ಹೇಳಿದ ಮತ್ತೊಂದು ಕಥೆ ಉತ್ತಮ ಉದಾಹರಣೆಯಾಗಬಲ್ಲದು. ಮಳೆಗಾಲದ ಆರಂಭದಿಂದಲೇ ಹಲಸಿನ ಹಣ್ಣುಗಳ ಸುಗ್ಗಿ ಬರುತ್ತದೆ. ರಸವತ್ತಾದ ಹಣ್ಣಿನ ಬಣ್ಣದ ತೊಳೆಗಳು ತಿನ್ನಲು ಬಲುರುಚಿಕಟ್ಟಾಗಿರುತ್ತವೆ. ಆದರೆ ತೊಳೆಗಳನ್ನು ಬಿಡಿಸಲು ಹೋದರೆ ಬೆರಳಿಗೆ ಮೇಣ ಅಂಟಿಕೊಳ್ಳುವ ಆತಂಕ ಕಾಡುತ್ತದೆ. ಲೌಕಿಕದ ಜಾಣರು ಮೇಣವನ್ನು ಅಂಟದಂತೆ ಹುಡುಕಿಕೊಂಡಿರುತ್ತಾರೆ. ತೆಂಗಿನ ಎಣ್ಣೆಯನ್ನು ಬೆರಳಿಗೆ ಸವರಿಕೊಂಡರೆ ಮೇಣ ಅಂಟಿಕೊಳ್ಳಲಾರದು. ಸಂಸಾರದ ಅರಿಷಡ್ವರ್ಗದ ಮೇಣಕ್ಕೆ ಭಕ್ತಿಯೇ ಎಣ್ಣೆ. ಇದು ದಾಸರ ದಾರಿಯೂ ಹೌದು.

ಭಕ್ತಿಯ ಅಪಾರ ಮಹಿಮೆಯಿಂದಾಗಿ ಮದ್ವ ಸಿದ್ಧಾಂತದ ವ್ಯಾಸಕೂಟವನ್ನು ದಾಸರು ತಮ್ಮ ಕೀರ್ತನೆಯ ಮೂಲಕ ದಾಟಿ ಹೆಚ್ಚು ವಿಸ್ತಾರವಾದ ಜಗತ್ತನ್ನು ಸಂಚರಿಸಿದರು. ವೈದಿಕ ಪರಂಪರೆಯಿಂದ ಆರಂಭವಾದ ಕೀರ್ತನೆ ಅನ್ಯ ಜಾತಿಯ ಪುರಂದರದಾಸರೂ ಮತ್ತು ಕನಕದಾಸರು ಸೇರ್ಪಡೆಯಿಂದ ಹೆಚ್ಚು ಮುಕ್ತವಾದ ರೀತಿಯಲ್ಲು ಜೀವಪರವಾಯಿತು. ಭಕ್ತಿರಸ ಪಡೆದ ಕೀರ್ತನೆಗಳು ತಿಳಿಗನ್ನಡದಲ್ಲಿ ಪ್ರಕಟಗೊಂಡು ಲೋಕಪ್ರೀಯತೆಯನ್ನು ಸಾಧಿಸಿದವು. ಸಂಗೀತ ಸಂಗೋಪನೆಯಿಂದ ದಾಸರ ಪದಗಳು ಅಪೂರ್ವ ಪ್ರೇಮ ತುಂಬಿದ ಗಾನಗಳಾದವು. ಲೋಕೋತ್ತರ ಜ್ಞಾನ ಮೀಮಾಂಸೆಗಳು ರೋಚಕ ಪುರಾಣ ಕಥನಗಳಾಗಿ ಜನಸಾಮಾನ್ಯರ ನಿತ್ಯ ಜೀವನದ ಅರಿವಿನ ಬೆಳಕಾಗಿ ನೀಡಿದ ಕೀರ್ತಿ ಪುರಂದರದಾಸರಿಗೆ ಬಹುಪಾಲು ಸಂದಾಯವಾಗುತ್ತದೆ.

ಪುರಂದರದಾಸರು ಕೃಷ್ಣನನ್ನು ಭಿನ್ನ ಭಾವ ಭಂಗಿಯಲ್ಲಿ ಕಡೆದು ನಿಲ್ಲಿಸಿದ್ದಾರೆ. ನಾರದ ಮುನಿಗಳ ಭಕ್ತಿ ಸ್ತೋತ್ರದ ಹನ್ನೊಂದು ರೂಪಗಳು ಕೀರ್ತನೆಗಳಲ್ಲಿ ಮೂರ್ತಿವೆತ್ತಿವೆ. ಅವರ ಹಲವು ಕೀರ್ತನೆಗಳು ಕೃಷ್ಣನ ಬಾಲ್ಯಲೀಲೆಯನ್ನು ಚಿತ್ರಿಸುತ್ತವೆ. ಹುಲುಮಾನವ ಬಾಲಕನಾಗಿ ಧರೆಯೊಳಿರುವ ಕೃಷ್ಣನ ಸುತ್ತ ದೈವಿಕ ಪ್ರಭೆ ಕಟ್ಟುವ ಪೌರಾಣಿಕ ಅವತಾರದ ಪವಾಡದ ಗಾದೆ ಹೆಣೆದುಕೊಂಡಿರುತ್ತದೆ. ಮೂಲಾವತಾರದ ಅತಿಮಾನುಷ್ ಲೀಲೆಗಳು ಕಂದನ ಮುದ್ದು ಆಟ ವಿನೋದಗಳಲ್ಲಿ ಸಹಜವಾಗಿ ಪ್ರಕಟವಾಗುತ್ತವೆ. ಮಗುವಿನ ಮುಗ್ಧ ಇರುವಿಕೆಯೇ ಒಂದು ದೈವಿಕ ಸ್ಥಿತಿಯನ್ನಾಗಿ ಪರಿಭಾವಿಸಲಾಗಿದೆ. ಆದ್ದರಿಂದ ಪುರಂದರದಾಸರಿಗೆ ಬಾಲ್ಯ ಕಾಲವೇ ಕೃಷ್ಣಣ ಲೀಲೆಗೆ ಸೂಕ್ತವೆನಿಸಿರಬೇಕು. ಅಂಬೆಗಾಲಿಕ್ಕುತಲಿ ಬಂದ ಗೋವಿಂದನ ಹಿಂದೆ ಪುರಂದರರು ದಶಾವತಾರದ ವಿರಾಟ ರೂಪವನ್ನು ತೋರಿಸುತ್ತಾರೆ. ಕೊಳಲನೂದುತ ಬಂದ ಗೋಪಿಯ ಕಂದನ ಕಂಸ ಸಂಹಾರದ ಕಥೆಯೊಂದಿಗೆ ಅವನ ಶೃಂಗಾರದ ವರ್ಣನೆಯೂ ಜತೆಯಲ್ಲೆ ಸಾಗುತ್ತದೆ. ಪುಟ್ಟ ಕಂಬಳಿ ಕೊಳಲು ಕೋಲು ಹಿಡಿದ ರಂಗ ಹಳ್ಳಿಯ ಓಣಿಯ ಮಕ್ಕಳಂತೆ ಆಣ್ಣೆಕಲ್ಲು ಗೋಲಿ ಗಜಂಗ ಚಿಣ್ಣಿಕೋಲು ಚೆಂಡು ಬುಗುರಿ ಕಣ್ಣು ಮುಚ್ಚಾಲೆ ಆಟವಾಡುತ್ತಲೇ ಫಣಿಯ ಮೆಟ್ಟಿ ಬಾಲದ ಕೈಯಲಿ ಹಿಡಿದು ಕಾಲ ನಾಟ್ಯವನ್ನು ಆಡುತ್ತಾನೆ. ಭೌತಿಕ ಪಾತಳಿಯಿಂದ ಅತೀಂದ್ರಿಯದತ್ತ ಜಿಗಿಯುವ ಕ್ಷಣದಲ್ಲಿ ಭಕ್ತಿಯ ಬೆರಗು ಹೊಳೆದು ಹೋಗುತ್ತದೆ. ಭವದ ಬೀದಿಯಿಂದ ದಿವ್ಯಕ್ಕೆ ಏರುವ ಮಗು ದೇವರಾಗುವ ದೇವರು ಮಗುವಾಗುವ ವಿಸ್ಮಯವನ್ನು ಕಾಣುತ್ತೇವೆ.

ತಾಯಿ ಮಗುವಿನ ಮೃಣ್ಮಯ ಸಂಬಂಧ ಎಲ್ಲರ ಮನೆಯ ಮಾತೆಯರ ಪ್ರೇಮದ ಪ್ರತೀಕವೂ ಆಗುತ್ತದೆ. ಕೃಷ್ಣ ಹೊಟ್ಟೆಯ ಕೂಸಾಗಿ ಹುಟ್ಟು ಬರುತ್ತಾನೆ. ದೇವರನ್ನು ಹಡೆದ ಧನ್ಯತೆ ಉಂಟಾಗುವ ತಾಯಿಗೆ ಅವನು ಜಗದ ಸೃಷ್ಠಿಕರ್ತನೆಂಬ ತನ್ನಿಂದ ಜಗದೋದ್ಧಾರಕ ದೂರಾಗುವನೆಂಬ ಆತಂಕ ಕಾಡಿದೆ. ಆಡಹೋಗಲು ಬೇಡವೊ ರಂಗಯ್ಯ ಎಂದು ಬೇಡಿಕೊಳ್ಳುವ ತಾಯಿಗೆ ಭಕ್ತರು ವಿರಾಟ್ ಅವತಾರ ತೋರಿಸೆಂದು ಕಾಡುವರು. ತನ್ನ ಪುಟ್ಟ ಮಗುವಿಗೆ ಇವೆಲ್ಲ ಬೇಡ ಎನ್ನುವ ಪ್ರಕೃತಿ ಸಹಜ ಮಮತೆ ಅಡ್ಡಬಂದಿದೆ. ಸರ್ವವ್ಯಾಪಿಯಾದ ಅಪ್ರೇಮೇಯವಾದ ಭಗವಂತನನ್ನು ಆಡಿಸಿದ ಯಶೋದೆಯ ಮಾತೃತ್ವ ಎಲ್ಲ ಸ್ತ್ರೀಯರಿಗೂ ಸಾಧ್ಯವೆಂಬ ಸತ್ಯವನ್ನು ಪುರಂದರು ಸಾರುತ್ತಾರೆ. ಆಳದೆತಿಯ ಮೇಲೆ ಮಲಗದ ಶಿಶುವನ್ನು ತೊಟ್ಟಿಲಲ್ಲಿಟ್ಟು ತೂಗುತ್ತಾ ಜೋ ಜೋ ಹಾಡುವ ಮಹಾತಾಯಿಗೆ ಯಾರ ರತ್ನವೊ ನೀನಾರ ಮಾಣಿಕವೊ/ಸೇರಿತು ಎನಗೊಂದು ಚಿಂತಾಮಣಿಯೊಂದು/ಪೋರ ನಿನ್ನನ್ನು ಪಾಡಿ ತೂಗುವೆನಯ್ಯಾ ಎಂಬ ಅರಿವಿದೆ. ಬಾಲಕ ಕೃಷ್ಣ ಎಲ್ಲ ತಾಯಿಂದರ ಶಿಶುವಾಗಲು ಹಾಡು ಸಾಕು. ಹಾಡಿಗೆ ದೇವರು ವಶವಾದಾನು ದೇವರೂ ಮಗುವಾದಾನು ಎಂಬ ವಿವೇಚನೆ ಪುರಂದರರ ಶಬ್ಧ ಮತ್ತು ನಾದ ಶಕ್ತಿಯ ಮೇಲಿನ ನಂಬಿಕೆಯನ್ನು ತಿಳಿಸುತ್ತದೆ. ದೇವರು ಸ್ವಯಂಭುವಾದರೂ ಕೃಷ್ಣನು ಸೃಷ್ಠಿಕರ್ತ ಬ್ರಹ್ಮನ ತಂದೆಯಾದರೂ ಜಗದ ತಾಯಿಯ ಹೊಟ್ಟೆಯಲ್ಲಿ ಹುಟ್ಟಿಬರುವ ಮಗುವನ್ನಾಗಿ ಭಾವಿಸುವುದು ನಿಜವೆನಿಸುವದರಿಂದ ದಾಸರಿಗೆ ಮಾನವ ಜನ್ಮ ದೊಡ್ಡದು.

ತಾಯಿಯ ವಾತ್ಸಲ್ಯದ ಕಣ್ಣಿಗೆ ಪೂತನಿಯ ಕೊಂದ, ಕಾಳಿಂಗನನ್ನು ಮರ್ಧಿಸಿದ, ಕಿರುಬೆರಳಲ್ಲಿ ಬೆಟ್ಟವನೆತ್ತಿದ ಕೃಷ್ಣನ ಪರಕ್ರಮದ ಬದಲು ಅದರಿಂದ ಒದಗಿದ ನೋವಿನಿಂದಾಗಿ ಅಳುತ್ತಿರುವುದು ಕಾಣಿಸುತ್ತದೆ. ಅಸಾಮಾನ್ಯ ಸಾಹಸವನ್ನು ಸಾಮಾನ್ಯಗೊಳಿಸುತ್ತ ದೇವರನು ಮಣ್ಣಿನ ಮಗುವಾಗಿಸುವ ಮತ್ತು ಮಕ್ಕಳ ರೀತಿಯ ಮೂಲಕ ದೇವರನ್ನು ಜನರ ನಡುವೆ ನಿಲ್ಲಿಸುವ ಪರಿಯನ್ನು ಪುರಂದರದಾಸರ ಹಲವು ಕೀರ್ತನೆಗಳಲ್ಲಿ ನೋಡಬಹುದು. ಪುರದ ಜನರು ಯಶೋಧೆಗೆ ಎಂಥಾ ಪುಣ್ಯವೆ ಗೋಪಿ ಎಂಥಾ ಭಾಗ್ಯವೆ ನಿನ್ನ ಇಂಥಾ ಮಗನ ಕಾಣೆವೆ ಎಂದು ಕೊಂಡಾದಿದರೆ, ಅವಳು ಏನು ಮಾಡಲೊ ಮಗನೆ ಯಾಕೆ ಬೆಳಗಾಯಿತೋ ಏನು ಮಾಡಲೊ ರಂಗಯ್ಯ/ ಎಂದು ಚಿಂತಿಸುತ್ತಾಳೆ. ಆದರೆ ಮಂದಿರಗಳ ಸಂದುಗೊಂದಿನಲಿ ಗೋಸಬಾಲರ ವೃಂದದಲಿ ಸುಂದರಿಯರ ಹಿಂದು ಮುಂದಿನಲಿ ಯೋಗ ಯೋಗದಲಿ ಯಾಗ ಯಾಗದಲಿ, ಭೋಗ ಭೋಗದಲಿ, ರಾಗರಾಗದಲಿ, ಸರ್ವಾಂತರ್ಯಾಮಿಯಾದ ಕೃಷ್ಣನನ್ನು ಹದ್ದುಬಸ್ತಿನಲ್ಲಿಡುವುದು ಹೇಗೆ? ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ/ ಭಾಗವತರು ಕಂಡ ರೆತ್ತಿಕೊಂಡಯ್ಯರೊ ಎಂದು ಹೆದರಿಸುತ್ತಾಳೆ. ಬಾಲಕೃಷ್ಣ ತೊದಲು ನುಡಿಯಲಿ ಗುಮ್ಮನ ಕರೆಯದಿರೆ ಅಮ್ಮ ನೀನು/ಸುಮ್ಮನೆ ಇದ್ದೇನು ಅಮ್ಮಿಯ ಬೇಡನು/ನುಮ್ಮುವಿಣ್ಣುತ್ತೇನೆ ಅಮ್ಮ ಅಳುವುದಿಲ್ಲ/ ಎಂದು ಹೇಳುತ್ತ ತಾಯಿಯ ಹೃದಯವನ್ನು ಗೆದ್ದುಬಿಡುತ್ತಾನೆ. ಹೀಗೆ ತುಂಟ ಮಗ ಮತ್ತು ಸಹನಶೀಲ ತಾಯಿಯ ಸಂಸಾರಿಕ ಸಂಭಾಷಣೆಯಲ್ಲಿ ಬಾಲ್ಯವೆ ಒಂದು ದೇವಲೋಕವಾಗಿ ಪರಿವರ್ತನೆಯಾಗಿ ಬಿಡುತ್ತದೆ. ಪುರಂದರದಾಸರ ತೊದಲು ನುಡಿಯ ಪ್ರಯೋಗ ಆಪ್ತವೆನಿಸುತ್ತದೆ.

ಪುರಂದರರು ಕೃಷ್ಣನನ್ನು ಅತ್ಯಂತ ಸಿರಿ ಸಂಭ್ರಮ ರೂಪದಲ್ಲಿ ಸಾಕ್ಷತ್ಕಾರ ಮಾಡಿಕೊಂಡಿದ್ದಾರೆ. ಯಾವ ಲೌಕಿಕ ಪ್ರಪಂಚದ ಸಂಪತ್ತನ್ನು ವೈರಾಗ್ಯದಲ್ಲಿ ದಾಸರು ತ್ಯಜಿಸಿದ್ದರೊ, ಅದನ್ನೇ ಕೃಷ್ಣ ಮೂರ್ತಿಯನ್ನು ಕಣ್ಣಮುಂದೆ ನಿಲ್ಲಿಸಲು ಬಳಸಿಕೊಳ್ಳಲಾಗಿದೆ. ಮಾಣಿಕ್ಯದ ಕಿರೀಟ ಕಸ್ತೂರಿ ತಿಲಕ ಹೊನ್ನುಂಗರ ಪೀತಾಂಬರ ಸಕಲಾಭರಣಗಳ ಬೆಡಗೂ ಬಿಂಕವನ್ನು ದೇವರಿಗೆ ಅರ್ಪಿಸಲಾಗಿದೆ. ಕೃಷ್ಣನ ದೇಹವನ್ನು ಶೃಂಗರಿಸಿದ ವಸ್ತ್ರಾಭರಣಗಳ ಸುಂದರ ಆಕರ್ಷಣೆ ಮೋಹವಾಗುವುದೇ ಇಲ್ಲ. ಮೈಮೇಲಿನ ದೃಗ್ಗೋಚರ ಸೌಂದರ್ಯನುಭೂತಿಯ ಮೂಲಕವೇ ಭಕ್ತಿಪರವಶತೆಯ ಪರಮಾನಂದ ಸಾದ್ಯ ಎಂಬುದು ಸೂಚಿತವಾಗಿದೆ. ದೇವರಿಗೆ ಕೊಟ್ಟ ಐಶ್ವರ್ಯ ತನ್ಮಯತೆಗೆ ಅಡ್ಡ ಬರುವುದಿಲ್ಲ. ಏಕೆಂದರೆ ಸಿರಿ ಶೃಂಗಾರ ಮೂರುತಿಗೆ ಅಂಟಿಕೊಳ್ಳದೆ ಅದು ತ್ಯಾಗಕ್ಕೆ ಮಾತ್ರ ತೆರೆದುಕೊಳ್ಳುತ್ತದೆ. ದಾಸರ ರೂಪಾಸಕ್ತಿ ಉಪಯಾಸಕ್ತಿ ಆಗಲಾರದು.

ದೇವರ ಶಕ್ತಿ ಭಕ್ತರು ಅವನನ್ನು ಕರೆಯುವ ಹೆಸರಿನಲ್ಲಡಗಿದೆ ಎಂದು ಪುರಂದರರು ನಂಬಿದ್ದಾರೆ. ಕೃಷ್ಣ ಭಕ್ತರು ಕೊಂಡಾಡಿ ಕರುಣಿಸಿದ ಅಸಂಖ್ಯೆ ನಾಮಗಳಿಂದ ಸೃಷ್ಠಿಯಾದ ಮಾಯೆ ದೇವರ ದೇಹವೇ ಶಬ್ದ, ಅದರ ನಾದಮಯ ಗಾನವೇ ಚೇತನ. ನಾಮಧರಿಸಿದ ದೇವರು ಅಮೂರ್ತವಾಗಿರಲಾರ. ಭಕ್ತರು ಹೆಣೆದ ಸಮಜಾಲದಲ್ಲಿ ಕೃಷ್ಣ ಪ್ರತ್ಯಕ್ಷನಾಗಲೇಬೇಕು. ದೇವರು ತನ್ನ ಹೆಸರಿಗೆ ಅಧೀನನಾದವನು ನೀನ್ಯಾಕೊ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ ಎಂದು ಹರಿಯನ್ನು ನಿಂದಿಸುತ್ತ ದ್ರೌಪದಿ, ಅಜಾಮಿಳ, ಪ್ರಹ್ಲಾದ, ಧ್ರವರನ್ನು ಕಾಪಾಡಿದ್ದು ನಾಮಸ್ಮರಣೆ ಎಂದು ದೃಷ್ಟಾಂತ ನೀಡುತ್ತಾರೆ. ಸಂತೆಯ ಸರಕಿನ ಪರಿಭಾಷೆಯಲ್ಲಿ ಕೃಷ್ಣ ನಾಮವನ್ನು ಕಲ್ಲುಸಕ್ಕರೆಗೆ ಹೋಲಿಸಿ ಅದರ ಸವಿಯನ್ನು ಕೊಂಡಾಡಿದ ಪರಿ ಅಪೂರ್ವವಾಗಿದೆ. ಲೌಕಿಕ ಪ್ರತಿಮೆಗಳ ಮೂಲಕ ದೌವಿಕ ವ್ಯಾಪಾರವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಸವಿಯಾದ ಗೋದಿ ಪಾಯಸದ ಅಡವಿಗೆ ತಯಾರಿಸಿ ಚಪ್ಪರಿಸುವಂತೆ ರಾಮನಾಮವನ್ನು ವರ್ಣಿಸಿದ ವಿಧಾನ ಅಸಾಮಾನ್ಯ ಕಲ್ಪನೆಗೆ ಸಾಕ್ಷಿಯಾಗಿದೆ. ಈ ಜಗತ್ತಿನ ಬಣ್ಣ ಬೆಳಕು ದನಿ ರುಚಿಯ ಸಾರಸಂಗ್ರಹವಾದ ನಶ್ವರ ಶರೀರದ ಮೂಲಕವೇ ಮುಕ್ತಿ ಮಾರ್ಗ ಸಾಗುವುದನ್ನು ಚಿತ್ರಿಸುವ ಪುರಂದರರ ಕಾವ್ಯ ಪ್ರಜ್ಞೆ ವಿಶಿಷ್ಟವಾಗಿದೆ.

ಪುರಂದರರಿಗೆ ಪರಮಾತ್ಮ ಈ ಕ್ಷಣ ಈ ಜನ್ಮದ ಜತೆಗೊಡಿ ನಡೆಯುವ ಗೆಳೆಯ ಸಮಾನ ಒಡನಾಡಿ ಎನಗೂ ಆಣೆರಂಗ ನಿನಗೊ ಆಣೆ/ಎನಗು ನಿನಗೂ ಇಬ್ಬರಿಗೂ ಭಕ್ತರಾಣೆ/ ಎಂದು ವಾದಿಸುತ್ತಾರೆ. ಇಲ್ಲಿ ಭಕ್ತನಿಗೆ ದೇವರಲ್ಲಿ ಜಗಳವಾಡುವಷ್ಟು ಸಲಿಗೆ ಸಾಧ್ಯವಾಗಿದೆ. ತಮ್ಮ ತಮ್ಮ ಕರ್ತವ್ಯದ ನಿಯಮಗಳನ್ನು ಪಾಲಿಸಬೇಕಾದ ಕಟ್ಟುಪಾಡಿಗೆ ಇಬ್ಬರೂ ಒಳಗಾಗಿದ್ದಾರೆ. ಮನುಷ್ಯನಂತೆ ದೇವರು ಸತ್ಯಶೀಲನೂ ಪ್ರಾಮಾಣಿಕನೂ ನಿಷ್ಠಾವಂತನೂ ಆಗಿರಬೇಕೆಂದು ಕೀರ್ತನೆಯ ಸಾಲುಗಳು ಆಗ್ರಹಿಸುತ್ತವೆ. ಇಂಥಾದ್ದೊಂದು ಸಾಪೇಕ್ಷ ಬಂಧನದಿಂದ ಭಕ್ತ ಪರಮಾತ್ಮನೊಂದಿಗೆ ಸದಾ ಇರಬಲ್ಲ.

ಪುರಂದರರು ಚಿತ್ರಿಸುವ ವಾತ್ಸಲ್ಯಾಸಕ್ತಿ ಧ್ವಂದ್ವದಿಂದ ಕೂಡಿದೆ. ದೇವರು ತನ್ನ ತಂದೆ ತಾಯಿಯಂತೆಯೂ ನಾನು ದೇವರ ತಂದೆ ತಾಯಿಯಂತಲೂ ಕಲ್ಪಿಸಿಕೊಳ್ಳಲು ಸಾಧ್ಯವಾಗಿದೆ. ಮಾನವ ಶಿಶುವಾಗಿ ಜನಿಸಿ ದೈವತ್ವಕ್ಕೆ ಏರುವುದು ಒಂಡೆಡೆಯಾದರೆ ದೇವರಾಗಿ ಅವತರಿಸಿ ಮನುಷ್ಯನಾಗಿ ಜೀವಿಸುವುದು ಮತ್ತೊಂದೆಡೆ ಗೋಚರಿಸುತ್ತದೆ. ಈ ಮಣ್ಣಿಗೆ ಈ ಎರಡೂ ರೀತಿಯ ಚಲನೆ ಸಾಧ್ಯವಾಗಿದೆ ಎಂದಪ್ಪಿಕೊಂಡು ರಂಗಯ್ಯನ ಎಂದೆನ್ನುವ ದಾಸರು ತಂದೆತಾಯಿಯೂ ನೀನೆ ಬಂದುಬಳಗವು ನೀನೆ ಎಂದು ಹಾಡಬಲ್ಲರು. ಭಕ್ತಿಯ ಭವ್ಯ ದರ್ಶನಕ್ಕಾಗಿಯೆ ಲೌಕಿಕ ಆರೋಹನಾ ಮತ್ತು ದೈವಿಕ ಅವರೋಹಣದ ನಾಟಕ ಜಗತ್ತಿನಲ್ಲಿ ನಿರಂತರ ನಡೆಯುತ್ತಿರುತ್ತದೆ ಎನ್ನುವುದು ಪುರಂದರ ಗ್ರಹಿಕೆ.

ತಾನು ಸತಿ. ಪರಮಾತ್ಮ ಪತಿ ಎಂಬ ಕಾಂತಾಸಕ್ತಿಯ ಕೀರ್ತನೆಗಳಲ್ಲಿ ಪುರಂದರರು ತೋರಿಸುವ ಕೃಷ್ಣನ ಮೋಹಕ ರೂಪವೇ ಬೇರೆ. ಇಲ್ಲಿ ವ್ಯಕ್ತವಾದ ಸೇವೆ ಪತಿಯ ಭಾವ ಸಂಸಾರದಂಟಿಗೆ ಸಿಲುಕಿಕೊಳ್ಳುವಂಥಾದ್ದಲ್ಲ. ಭೋಗದಲ್ಲಿ ಮುಳುಗಿದವರ ಮನೆಯಿಂದ ಬಿಡುಗಡೆಗೊಳಿಸಿ ಮುಕ್ತಿಯ ಕೃಪೆ ದಯಪಾಲಿಸುವ ಯಾಚನೆ ಅದು ಅತ್ತಿಗೆ ಬತ್ತಿ ಹೊಸೆವಾಗ, ಅತ್ತೆ ಪುರಾಣದಲ್ಲಿ ಮುಳುಗಿದಾಗ, ಮಾವ ಅವಿಶ್ವಾಸಿಯಾದಾಗ, ಗಂಡ ಉದಾಸಿಯಾದಾಗ, ರಂಗನನ್ನು ಗರತಿ ಕರೆಯುತ್ತಾಳೆ. ತನ್ನ ಶಾಶ್ವತ ಮನೆಯ ಸಾವಿಲ್ಲದ ಗಂಡನನ್ನು ಸೇರಲ್ಲ. ಸದ್ದು ಮಾಡಲು ಬೇಡವೊ ನಿನ್ನ ಕಾಲಿಗೆ ಬಿದ್ದು ಬೇಡಿಕೊಂಬೆ. ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂದಿದ್ದು ಕಂಡನೆಂಬದೋ ರಂಗಾ ಎಂದು ಪ್ರೇಯಸಿ ಗುಟ್ಟಾಗಿ ಪಿಸುದನಿಯಲ್ಲಿ ಬೇಡಿಕೊಳ್ಳುತ್ತಾಳೆ.

ವಿರಹ ಮನುಷ್ಯನ ಪ್ರೇಮವನ್ನು ಆರ್ದ್ರವಾಗಿಸಿದ ಶೃಂಗರಿಸಿದ ಭಾವ ಮಾತ್ರವಾಗಿರದೆ ದೇವರನ್ನು ನಿರಂಕಾರವಾಗಿ, ಉತ್ಕಟವಾಗಿ ಕಾಯುವ ಯಾತನೆಯನ್ನು ಅನುಭವಿಸುವ ದೈನಿಕ ಹಸಿವಿನ ಅನಂತ ತಳಮಳವೂ ಹೌದು. ಪರಮಾತ್ಮನ ಧ್ಯಾನದಲ್ಲಿರುವ ಭಕ್ತನಿಗೆ ಅವನನ್ನು ಕ್ಷಣಮಾತ್ರವೂ ಅಗಲಿರಲಾರದ ವಿರಹ ಅಭಾವ ಕಾಡುತ್ತಲಿರುತ್ತದೆ. ಈ ದೈನಿಕ ಉದ್ರೇಕದಲ್ಲಿ ಪರಮಾತ್ಮನನ್ನು ಒಲಿಸಿಕೊಳ್ಳಲು ಪರವಶತೆಯಿಂದ ಭಕ್ತ ಕುಣಿಯುತ್ತಾನೆ. ಯಾಕೆ ಕಡೆಗಣ್ಣಿಂದ ನೋಡುವ ಕೃಷ್ಣ ಕರುಣಾಕರನಲ್ಲವೇ ಎಂದು ಆರ್ತನಾದ ಪ್ರತೀಕ್ಷಿಸುತ್ತಾನೆ. ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ಎಂದು ಪರಿಪರಿಯಾಗಿ ಕೇಳುತ್ತಾನೆ. ಲೌಕಿಕ ವಿಷಯಗಳಲ್ಲಿ ಸಹಜವಾಗಿ ಜರಗುವ ತನ್ಮಯತೆ ಪರಮಾತ್ಮನ ಆರಾಧನೆಯಲ್ಲಿ ಸಾಧ್ಯವಾದರೆ ದೇವರ ದರ್ಶನ ಖಂಡಿತವೆಂಬ ನಂಬಿಕೆ ದಾಸರದ್ದು.

ಪುರಂದರರು ಪರಮಾತ್ಮನನ್ನು ಒಡೆಯನೆಂದು ಒಪ್ಪಿ ತಾನು ಆತನ ದಾಸನೆಂದು ಸರ್ವಸ್ವವನ್ನು ಅರ್ಪಿಸಿಕೊಂಡಿದ್ದಾರೆ. ದಾಸನ್ನ ಮಾಡಿಕೋ ಮಧುಕರ ವೃತ್ತಿಯಲ್ಲಿ ಸಂಚರಿಸುತ್ತ, ಭಿಕ್ಷೆತಂದವರ ಮನೆಯವರ ಬಾಗಿಲು ಮೇಲೆ ಕೃಷ್ಣನನ್ನು ಕಡೆದು ನಿಲ್ಲಿಸಿದ ಪುರಂದರರು, ಸ್ವತಃ ದಾಸರು ತನ್ನ ಕರುಣೆಯ ಕವಚದಿಂದ ಭಕ್ತರನ್ನು ಪೊರೆವ ಕೃಷ್ಣನೂ ದಾಸನೇ. ದೇವರು ಭಕ್ತನ ವೇಷಧರಿಸುವ ಭಕ್ತ. ದೇವರ ಆವೇಶ ಪಡೆಯುವ ನಾಟಕೀಯತೆ ಪುರಂದರರ ಕೀರ್ತನೆಗಳಲ್ಲಿ ಮತ್ತೆ ಮತ್ತೆ ಸಂಭವಿಸುತ್ತದೆ. ಊರಿಗೆ ಬಂದ ದಾಸಯ್ಯನನ್ನು, ಕೇರಿಗೆ ಬಂದವನನ್ನು ಸದನಕ್ಕೆ ಮಣಿಸರವನ್ನು ಕೊಟ್ಟು ಕರೆಯುವಲ್ಲಿ ಇಹಪರದ ನಡುವೆ ಒಂದು ಸೇತುವೆ ನಿರ್ಮಾಣವಾಗಿ ಬಿಡುತ್ತದೆ.

ಆತ್ಮನಿವೇದನಾಸಕ್ತಿಯ ಕೀರ್ತನೆಯಲ್ಲಿ ಪುರಂದರರು ಚತುರೋಕ್ತಿಯ ತರ್ಕವನ್ನು ಮಂಡಿಸುತ್ತಾರೆ. ನಾನ್ಯಾಕೆ ಬಡವನು ನಾನ್ಯಾಕೆ ಪರದೇಶಿ/ಶ್ರೀನಿಧಿ ಹರಿ ಎನಗೆ ನೀನಿರುವ ತನಕ/ಎಂದು ಹಾಡುತ್ತ ಜಗದೊಡೆಯ ಸಿರಿಹರಿಯನ್ನು ತನ್ನ ಹೃದಯ ಮಂದಿರದೊಳಗೆ ತುಂಬಿಕೊಳ್ಳುವ ಭಕ್ತ ದರಿದ್ರನಾಗುವುದು ಹೇಗೆ ಸಾಧ್ಯ? ಭೌತಿಕ ಸಂಪತ್ತನ್ನು ತೊರೆದು ಭಕ್ತಿಪೂರ್ವಕವಾಗಿ ತನ್ನನ್ನು ದೇವರಿಗೆ ಸಂಪೂರ್ಣ ಅರ್ಪಿಸಿಕೊಂಡ ಭಕ್ತ ಪರಮಾತ್ಮನ ಪ್ರೇಮ ಪ್ರಕಾಶಮಾನನಲ್ಲವೆ? ಎಂಬ ಪ್ರಶ್ನೆಗಳು ಚತುರ ತರ್ಕಗಳನ್ನು ಮೀರಿ ಗಾಢ ಭಕ್ತಿಗೆ ಸಂಕ ಹಾಡುತ್ತವೆ. ಭಗವಂತನ ಗುಣ ಕೀರ್ತನೆ ಮತ್ತು ಪೂಜಾಸಕ್ತಿಯ ಪದ್ಯಗಳೂ ಇವೆ.

ಹರಿಯ ಮಾಯಾಸ್ತ್ರೀ ರೂಪದ ಮೋನಿಯ ನಿಂದಾಸ್ತುತಿಯನ್ನು ಪುರಂದರರ ಕೀರ್ತನೆಯಲ್ಲಿ ಕಾಣಬಹುದು. ಸಮುದ್ರ ಮಂಥನದ ಕಾಲಕ್ಕೆ ಅಮೃತವನ್ನು ಹಂಚುವಾಗ ಭಸ್ಮಾಸುರನಿಂದ ಶಿವನನ್ನು ರಕ್ಷಿಸುವಾಗ ಮದುವೆಯಾಗುವ ಮುನ್ನ ಬ್ರಾಹ್ಮಣನನ್ನು ಹೆತ್ತ ಹರಿಯ ಮೋಹಿಸಿ ಅವತಾರವನ್ನು ವ್ಯಂಗ್ಯಭಾವದಲ್ಲಿ ಚಿತ್ರಿಸಲಾಗಿದೆ.

ಹರಿಯ ಪತ್ನಿ ಅಂಬುಜಾಕ್ಷಿಗೆ ಅವಳ ನಿಜವಾದ ತಮ್ಮ ತಮ್ಮ ಕಲ್ಪನೆಗನುಗುಣವಾಗಿ ಭಿನ್ನ ಭಿನ್ನ ದೇಶಕಾಲದಲ್ಲಿ ವಿಧಿವಿಧಿವಾಗಿ ನಾಮರೂಪಗಳನ್ನು ಬಣ್ಣಿಸಿಕೊಂಡಿದ್ದಾರೆ. ಮಹಾಲಕುಮಿಯೆ ನೀನು ವಧುವಾದೇ? ಎಂದು ಪ್ರಶ್ನಿಸಿ ಪೇಚಿಗೆ ಸಿಲುಕಿಸಿದ್ದಾರೆ. ನೀನು ವಧುವಾದದ್ದು ಶರಧಿ ಬಂಧನ ರಾಮಚಂದ್ರ ಮೂರುತಿಗೋ, ಸಿರಿಯನಂತ ಪದ್ಮನಾಭನಿಗೋ, ಎರಡು ಹೊಳೆಯ ರಂಗಪಟ್ಟಣ ವಾಸಗೋ, ಬೇಲೂರು ಚನ್ನಿಗರಾಯನಿಗೋ, ಕೆಳದಿ ಕೃಷ್ಣರಾಯನಿಗೊ, ಬದರಿ ನಾರಾಯಣಗೋ ಇತ್ಯಾದಿ ಒಂದೊಂದು ಹೆಸರಿಗೊ ಪ್ರತ್ಯೇಕ ಕಥೆ. ಭಕ್ತರು ಹರಿಯನ್ನು ಅಗಣಿತ ರೂಪ ಚಮತ್ಕಾರಗಳಲ್ಲಿ ಕಂಡು ಲಕ್ಷ್ಮೀಯನ್ನು ನೀಡಿಸುತ್ತಿದ್ದಾರೆ.

ಲೌಕಿಕ ಪರಿಭಷೆಯಲ್ಲಿ ಪರಮಾತ್ಮನನ್ನು ತರಾಟೆ ತೆಗೆದುಕೊಳ್ಳಲು ಪುರಂದರರು ಹಿಂಜರಿಯಲಿಲ್ಲ. ಹರಿ ಎಂಬ ಹೆಸರು ಬಿಟ್ಟು ಸ್ವಂತದ್ದೆಂಬುದು ದೇವರಿಗೇನಿದೆ ಎಂದು ಚರಿತ್ರೆಯನ್ನು ಕೆದಕುತ್ತ ವಿಡಂಬಿಸುವ ರೀತಿ ಸುಸಂಗತವಾಗಿದೆ. ದೇವರಿಗೆ ದೇಶಕೋಶಗೊಳದ್ದಿದ್ದರೆ ಕ್ಷೀರ ರಾಶಿಯೊಳಗೆ ಮನೆ ಕಟ್ಟುವ ಅಗತ್ಯವಿರುತ್ತಿರಲಿಲ್ಲ. ಹಾಸಿಗೆಯಿದ್ದಿದ್ದರೆ ಶೇಷನ ಬೆನ್ನಮೇಲೇಕೆ ಮಲಗಬೇಕಿತ್ತು? ಬುದ್ಧಿ ಹೇಳುವ ತಂದೆಯಾದ್ದಿದ್ದರೆ ಜೋರಾಗುತ್ತಿರಲಿಲ್ಲ. ಸ್ವಂತ ವಾಹನವಿದ್ದಿದ್ದರೆ ಗರುಡನ ಮೇಲೆ ಸವಾರಿ ಮಾಡುತ್ತಿರಲಿಲ್ಲ. ಮಡದಿಯಿದ್ದಿದ್ದರೆ ಅಡವಿ ಹುಡುಗಿಯರ ಸಂಗ ಮಾಡುತ್ತಿರಲಿಲ್ಲ. ಸಿರಿಯಿದ್ದಿದ್ದರೆ ಬಲಿಯ ಬಾಗಿಲ ಕಾಯ್ದು ಧರೆಯ ದಾನಕ್ಕೆ ಕೈ ಒಡ್ಡುತ್ತಿರಲಿಲ್ಲ. ದೊರೆಯಾಗುವದಿದ್ದರೆ ಅರ್ಜುನನ ಸಾರಥಿಯಾಗುತ್ತಿರಲಿಲ್ಲ. ಹೀಗೆ ನಿಂದಿಸುತ್ತ ಸಾಗಿ ತುದಿಯಲ್ಲಿ ಪರದೈವವೆಂದು ಸಾಭೀತು ಮಾಡುವ ಜಾಣತನ ಜರುಗುತ್ತದೆ.

ಅನೇಕ ವಿಷಯಗಳಲ್ಲಿ ಪರಮಾತ್ಮನಿಗಿಂತ ಭಕ್ತನೇ ಭಾಗ್ಯವಂತನೆಂದು ಪುರಂದರರು ವಾದಿಸುತ್ತಾರೆ. ನಿನ್ನಂಥ ದೇವರು ತಂದೆ ದೊರೆ ತಾಯಿ ದಾಸನಾದ ತನಗುಂಟು ಆದರೆ ನಿನಗಿಲ್ಲ. ಆದ್ದರಿಂದ ನೀನು ಪರದೇಶೀ. ನಾನು ಸ್ವದೇಶಿ. ಹೀಗಿದ್ದೂ ವಿರೋಧಾಭಾಸದ ಇನ್ನೊಂದು ನೆಲೆಯಲ್ಲಿ ಹರಿ ಮೆಚ್ಚುವಂತೆ ಪೂಜಿಸುವುದು ಸುಲಭವಲ್ಲ ಎಂಬ ಪ್ರತಿವಾದವಿದೆ. ಕೋಟೆ ನಾಮಗಳಲ್ಲಿ ಯಾವುದನ್ನು ಹೇಗೆ ಹೇಳುವುದು ಪಾದತೊಳೆಯಲು ಹೋದರೆ ಪಾವನ ಗಂಗೆ ಪಾದದಲ್ಲಿ ಉದ್ಭವಿಸಿದ್ದಾಳೆ. ಅರ್ಪಿಸೋಣವೆಂದರೆ ಹೊಕ್ಕಳಿಂದ ಹಣ ಹುಟ್ಟಿದೆ. ದೀಪಬೆಳಗಲು ದೇವರ ಕಣ್ಣುಗಳಲ್ಲಿ ಸಪ್ತದ್ವೀಪಗಳನ್ನು ಬೆಳಗುವ ಪ್ರಕಾಶವಿದೆ. ಕಾಣಿಕೆ ನೀಡೋಣವೆಂದರೆ ಸಿರಿರಾಣಿ ಪಕ್ಕದಲ್ಲಿದ್ದಾಳೆ. ಒಬ್ಬರು ಮತ್ತೊಬ್ಬರನ್ನು ಗೆಲ್ಲುವ ಶರಣಾಗುವ ಆಟ ಚೆಲುವಾಗಿದೆ. ಸಾಧು ಸಜ್ಜನರಿಗೆ ಕರಿರಾಜ ಕರೆದಾಗ ತ್ವರಿತವಾಗಿ ಹತ್ತಿರದಿಂದ ಬಂದ ನಲ್ಲವೆ? ಪ್ರಹ್ಲಾದನನ್ನು ರಕ್ಷಿಸಲು ತಕ್ಷಣ ಕಂಬದಿಂದ ಬರಲಿಲ್ಲವೇ? ಭಕ್ತರನ್ನು ಪೊರೆಯಲು ದೇವರು ಸದಾ ಹತ್ತಿರದಲ್ಲಿರುತ್ತಾನೆಂದು ಸಾಧಿಸುವ ವಿದ್ಯಾ ಬೆರಗು ಹುಟ್ಟಿಸುವಂತಿದೆ.

ಸಂಕಟ ಕಾಲದಲ್ಲಿ ಸಾವಿನ ಸನಿಹದಲ್ಲಿರುವಾಗ ಮನುಜನ ಜತೆಗಿರುವವನು ದೇವರ ಮಾತ್ರವೆಂದು ದಾಸರು ನಂಬಿದ್ದಾರೆ. ಬಂಧುಬಾಂಧವರು ಅಸಹಾಯಕರಾಗುತ್ತಾರೆ. ಹಲವು ವರ್ಷಗಳಿಂದ ದೇಹದ ಜತೆಗೆ ಸ್ನೇಹದಿಂದಿದ್ದ ಜೀವವೂ ಒಂದು ದಿನ ಇದ್ದಕ್ಕಿದ್ದಂತೆ ಹೇಳದೆ ಹೊರಟು ಹೋಗುತ್ತದೆ. ಕೃಷ್ಣನ ಕೃಪೆಯಿಲ್ಲದ ಲೋಕದಲ್ಲಿ ಮನುಷ್ಯನ ಪಾಡು ಏನಾದೀತು? ಗೋಡೆಗೆ ಬರೆದ ಹುಲಿಯ ಚಿತ್ರ ಗರ್ಜಿಸುತ್ತ ತಿನ್ನಲು ಬರಬಹುದು. ಕಲಸಿಟ್ಟ ಅವಲಕ್ಕಿಯನ್ನು ಕಲ್ಲು ಪರಾಟೆ ನುಂಗಿ ಬಿಡಬಹುದು. ಕತ್ತತಿಯು ಕರಡಿಯಾಗಿ ಕಚ್ಚಲು ಬರಬಹುದು. ಕಣ್ಣಿನೊಳಗಿನ ಬೊಂಬೆಗಳು ಕಚ್ಚಡಬಹುದು. ಪುರಂದರ ಕೃಷ್ಣ ತಿಳಿಗನ್ನಡದ ಕಣ್ಮಣಿ. ಸಂಗೀತ ಮಯಿ ಸಮುದಾಯದ ಸಮಾನತೆಯ ಹರಿಕಾರ. ಪುರಾಣದಿಂದ ಅವಸರಗಳಿಂದ ಕರೆತಂದು ಮನೆಮನೆಯ ಮಗುವಾಗಿ ನಿಲ್ಲಿಸಿದ ಪುರಂದರರು ದಾಸರಲ್ಲಿ ಅಗ್ರಗಣ್ಯರು.