ಬಹುತೇಕ ಭಾರತೀಯ ಧರ್ಮ ಮತ್ತು ಸಾಹಿತ್ಯಗಳ ಮೂಲ ದ್ರವ್ಯ ಭಗವಂತ, ಭಕ್ತಿ, ಹಾಗೂ ಬದುಕು. ಶಿವಶರಣರ ವಚನ ಸಾಹಿತ್ಯ, ದಾಸರ ಹರಿದಾಸ ಸಾಹಿತ್ಯಗಳ ಮೂಲ ಸೆಲೆ ‘ಭಕ್ತಿ‘ಯಾದರೂ, ಆ ಭಕ್ತಿಯನ್ನು ಸಮಾಜ ಮುಖಿಯಾಗಿಸಿಕೊಂಡ ಶ್ರೇಯಸ್ಸು ಅವರದು. ಭಕ್ತಿಗೆ ತನ್ನದೇ ಆದ ಇತಿಹಾಸವಿದೆ. ಭಕ್ತಿ ಸಾಗರಕ್ಕೆ ನಾನಾ ಧರ್ಮ, ಮತ, ಸಿದ್ಧಾಂತ, ಪಂಥಗಳ ಹೊಳೆ-ಹಳ್ಳಗಳ ಪ್ರವಾಹಗಳು ಸೇರಿಕೊಂಡಿವೆ. ಋಗ್ವೇದದಲ್ಲಿ ಹಲವು ದೇವತೆಗಳ ವಿವರಗಳಿದ್ದರೂ, “ಇಂದ್ರಂ ಮಿತ್ರ ವರುಣಮಗ್ನಿ….. ಏಕಂ ಸದ್ವಿಪ್ರಾ ಬಹುಧಾ ವದಂತಿ” (ಋಗ್ವೇದ ೧-೧೯೪-೪೬) ಎಂಬ ಶ್ಲೋಕವು ಭಗವಂತ ನಾನಾ ಶಕ್ತಿಗಳ ರೂಪದಲ್ಲಿದ್ದರೂ ಇರುವ ಶಕ್ತಿಯು ಒಂದೇ ಎಂಬ ಸತ್ಯವನ್ನು ಸ್ಪಷ್ಟಪಡಿಸುವುದು ಆ ಕಾಲದ ವೈಚಾರಿಕ, ದೂರದೃಷ್ಟಿಯ ಸಂಕೇತ. ‘ಅನೇಕತೆಯಲ್ಲಿ ಏಕತೆ’ ಭಕ್ತಿಯ ಪ್ರಮುಖ ಸತ್ವ, ತತ್ವ.

ವಚನಕಾರರು ಸಾಮಾಜಿಕ ನೆಲೆಗಟ್ಟಿನಲ್ಲಿ ‘ಭಕ್ತಿ’ ಯನ್ನು ಚಳುವಳಿಯ ರೂಪಕ್ಕೆ ತಂದರೆ, ದಾಸರು ವ್ಯಕ್ತಿಯ ವೈಯಕ್ತಿಕ, ಮಾನಸಿಕ ಪರಿವರ್ತನೆಯ ಮುಖಾಂತರ ಉತ್ತಮ ಮೌಲ್ಯಗಳ ಪುನರುಜ್ಜೀವನಕ್ಕೆ ಪ್ರಯತ್ನಿಸಿದರು. ಪ್ರಕೃತಿಯಲ್ಲಿರುವ ಯಾವುದೇ ವಸ್ತು ಸಾಮಾನ್ಯ, ‘ಅಸಾಮಾನ್ಯ’ ಎಂಬ ಎರಡು ಗುಣಗಳನ್ನು ಹೊಂದಿರುತ್ತದೆ. ಸಾಮಾನ್ಯಗುಣ ಬಹಿರಂಗವಾಗಿದ್ದರೆ ಅಸಾಮಾನ್ಯ (ವಿಶೇಷ) ಗುಣವು ಆಂತರಿಕವಾಗಿರುವುದು. ಈ ಅಸಾಮಾನ್ಯ ಅಥವಾ ವಿಶೇಷ ಗುಣವನ್ನು ಜಾಗೃತಗೊಳಿಸುವುದೇ ಹರಿದಾಸರ ಭಕ್ತಿಯ ಪ್ರಮುಖ ಗುರಿಯಾಗಿತ್ತು. ಮಾನವ ‘ಸಮಾಜಜೀವಿ’. ಸಮಾಜದಲ್ಲಿದ್ದುಕೋಂಡೇ ಶ್ರೇಷ್ಠತೆಯ ಸಾಧನೆಯ ಗೆಲುವನ್ನು ಸೂಸುವ ಸಾಧನೆಯೇ ದಾಸರ ಭಕ್ತಿಯ ಒಳ ಆಶಯವಾಗಿತ್ತು.

ಹರಿದಾಸರದು ಭಾಗವತ ಪಂಥ. ಇಲ್ಲಿ ಧರ್ಮ, ಜಾತಿ, ಮತ, ಪಂಥ, ಪಂಗಡ, ಸಿದ್ಧಾಂತ, ಹೆಣ್ಣು, ಗಂಡು, ಶ್ರೇಷ್ಠ, ಕನಿಷ್ಠ, ಬಡವ, ಬಲ್ಲಿದ, ಇವೆಲ್ಲವುಗಳಿಗಿಂತ ಮೀರಿದ್ದು, ಕೇವಲ ಭಗವಂತ ಮತ್ತು ಭಕ್ತಿಯ ಮೇಲಿರುವ ವಿಶ್ವಾಸ ಮಾತ್ರ. ಈ ಕಾರಣಕ್ಕಾಗಿಯೇ ಭಕ್ತಿ ಪಂಥ ಸಾರ್ವಕಾಲಿಕ, ಸಾರ್ವತ್ರಿಕವಾದದ್ದು, ಧಾರ್ಮಿಕ, ಮತ, ಸಿದ್ಧಾಂತ, ಪ್ರಚಾರಕ್ಕಾಗಿ, ಇಲ್ಲವೆ ತಮ್ಮ ಆತ್ಮಾನಂದಕ್ಕಾಗಿ ಭಕ್ತಿಯನ್ನು ರೂಢಿಸಿಕೊಂಡು, ಸೃಷ್ಟಿಗೊಂಡ ಸಾಹಿತ್ಯ ಎನ್ನುವ ಕಾರಣವನ್ನು ಆಲೋಚನಾ ದೃಷ್ಟಿಯನ್ನಿಟ್ಟುಕೊಂಡು ದಾಸ ಸಾಹಿತ್ಯಕ್ಕೂ, ಸಮಾಜ ಹಾಗು ಬದುಕಿಗೂ ಯಾವ ಸಂಬಂಧವೂ ಇಲ್ಲ ಎಂದು ಕೈ ಜೊಡಿಸಿಕೊಳ್ಳುವುದು ಸಾಹಿತ್ಯ ವಿಮರ್ಶೆಯ ಯೋಗ್ಯ ದೃಷ್ಟಿಯಲ್ಲ. ಈ ಸಂದರ್ಭದಲ್ಲಿ ಖ್ಯಾತ ವಿಮರ್ಶಕ ಡಾ. ಕುರ್ತಕೋಟಿಯವರ ಮಾತನ್ನು ನೆನಪಿಸಿಕೊಳ್ಳಬಹುದಾದರೆ, “ಸಾಹಿತ್ಯ ಎಷ್ಟೇ ಸ್ವಾಂತ ಸುಖಾಯ ಎಂದು ಹೇಳಿಕೊಂಡರೂ ಅದಕ್ಕೆ ಸಾಮಾಜಿಕ ಜವಾಬ್ದಾರಿ ಇದ್ದೆ ಇರುತ್ತದೆ”. “ಸಾಹಿತ್ಯ ಆಯಾಕಾಲದ ಮಹತ್ವದ ಘಟನೆ ಮತ್ತು ಅನುಭಗಳ ದಾಖಲೆ” (ಎಸ್.ಶಿವಾನಂದ) ಎನ್ನುವ ಹಿನ್ನಲೆಯಲ್ಲಿ ಅಧ್ಯಯನಕ್ಕೆ ತೊಡಗಿದಾಗ ಆಯಾ ಸಾಹಿತ್ಯದ ವಿಶಿಷ್ಟ ಯೋಚನಾ ಕ್ರಮಗಳು ನಮ್ಮನ್ನು ಮುಟ್ಟಲು ಸಾಧ್ಯವಿದೆ. ಬರಗೂರು ರಾಮಚಂದ್ರಪ್ಪನವರ ಪ್ರಕಾರ “ಕೇವಲ ಕಮಿಟೆಡ್ ಬರವಣಿಗೆಯಿಂದ ಕ್ರಾಂತಿಯಾಗುವುದು ಎಂದು ಯಾರೂ ಭಾವಿಸಬೇಕಾಗಿಲ್ಲ. ಇಂಡಿಯಾ ದೇಶದಲ್ಲಿ ಸಾಹಿತ್ಯದ ಮಿತಿಗಳು ನಮಗೆ ಗೊತ್ತಿವೆ. ಸಾಮಾಜಿಕ ಕಳಕಳಿಯ ಹಿನ್ನಲೆಯಲ್ಲಿ ಈ ಬದ್ಧತೆ ಅಗತ್ಯ” ಎಂಬ ಮಾತು ಗಮನಾರ್ಹ. ಇಲ್ಲಿ ಬದ್ಧತೆ ಚಳುವಳಿಗಿಂತಲೂ ಮುಖ್ಯವಾದದ್ದು ವಿಚಾರ ಮತ್ತು ಆಚಾರಗಳ ನಡುವಿನ ಸಮನ್ವಯತೆ. ದಾಸರು ಈ ಬದ್ಧತೆಯನ್ನು ಕಾರ್ಯರೂಪಕ್ಕೆ ತಂದರು. ಹೆಣ್ಣು, ಹೊನ್ನು, ಮಣ್ಣು, ಆಕಾರ-ಬದುಕು ಇವೆಲ್ಲ ಅಶಾಶ್ವತ ಎಂದು ಹೇಳುವುದಕ್ಕೂ ಮುನ್ನ ತಾವೇ ಅವುಗಳನ್ನು ಧಿಕ್ಕರಿಸುವ ಮೂಲಕ ತಮ್ಮ ವಿಚಾರಗಳನ್ನು ಆಚರಣೆಗಳಲ್ಲಿ ತಂದರೆಂಬುದು ಅವರಲ್ಲಿರುವ ಸಾಮಾಜಿಕ ಕಳಕಳಿಯ ಪ್ರತೀಕ, ದಾಸರ ಬದುಕು ಹಾಗೂ ಹೇಳಿಕೆಗಳಲ್ಲಿ ಬಿರುಕುಗಳ ಬದಲು ಸಾಮರಸ್ಯವಿದೆ. ಈ ಬದ್ಧತೆ, ಕಳಕಳಿ ಪ್ರಸ್ತುತ ಬದುಕಿಗೆ ಅತ್ಯಂತ ಅಗತ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ದಾಸಸಾಹಿತ್ಯವನ್ನು ಜನಪ್ರಿಯ, ಜನಪರಗೊಳಿಸಿದ ದಾಸರಲ್ಲಿ ಪುರಂದರದಾಸರು ಮತ್ತು ಕನಕದಾಸರು ಬಹು ಮುಖ್ಯರು. “ದಾಸರೆಂದರೆ ಪುರಂದರದಾಸರಯ್ಯ” ಎಂದು ತಮ್ಮ ಗುರು ವ್ಯಾಸರಾಯರಿಂದಲೇ ಪ್ರಮಾಣ ಪತ್ರ ಪಡೆದವರು. ಗೃಹಸ್ಥರಾಗಿ, ೧೪೮೦ರಿಂದ ೧೫೬೪ರವರೆಗೆ ಒಟ್ಟು ೮೪ ವರುಷ ಬದುಕಿದವರು. ಗೃಹಸ್ಥರಾಗಿ, ಕಡುಜಿಪುಣರಾಗಿ, ನವಕೋಟಿ ಸಂಪತ್ತಿನ ಒಡೆಯರಾಗಿ ಒಟ್ಟಿನಲ್ಲಿ ಶ್ರೀಮಂತ ಬದುಕನ್ನು ವ್ಯರ್ಥಗೊಳಿಸದೆ ಅರ್ಥಪೂರ್ಣಗೊಳಿಸಿದವರು. ಇವರ ಧರ್ಮ ಪತ್ನಿ ಸರಸ್ವತಿ ಇವರ ಕಣ್ಣನ್ನು ತೆರೆಸಿದಳು. ಪತ್ನಿಯೇ ಪುರಂದರದಾಸರ ‘ಮೊದಲ ಗುರು’ ಎಂದೇ ಹೇಳಬಹುದು. “ಮನೆಯೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು” ಎಂಬ ಕವಿವಾಣಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಂದಿನ ನಮ್ಮ ಬದುಕಿನ ಅಪಮೌಲ್ಯ, ಅವ್ಯವಸ್ಥೆಗಳಿಗೆ ಮನೆ ಮೊದಲ ಪಾಠಶಾಲೆ ಆಗದಿರುವುದೇ ಕಾರಣವಾಗಿದೆ ಎಂಬ ಸತ್ಯವನ್ನು ನಾವು ಆಲೋಚಿಸುತ್ತಲೇ ಇಲ್ಲ. ಇದು ನಮ್ಮ ದುರಂತ. ಈ ಸತ್ಯವನ್ನು ಪುರಂದರದಾಸರು ಒಪ್ಪಿಕೊಂಡು ತಮ್ಮ ಕೀರ್ತನೆ ಮೂಲಕ ದಾಖಲಿಸುವ ಪ್ರಾಮಾಣಿಕತೆ ತೋರಿಸಿದ್ದಾರೆ.

ಆದದ್ದೆಲ್ಲ ಒಳಿತೆ ಆಯಿತು. ನಮ್ಮ | |
ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು | . .|
ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ
ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
ಭೂಪತಿಯೆಂದು ಗರ್ವಿಸುತಿದ್ದೆ
ಪತ್ನಿ ಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ

ಬಹಿರಂಗವಾಗಿ ಹೆಂಡತಿಯನ್ನು ಹೊಗಳಿದ ಮೊದಲ ‘ಗಂಡ’ ಎಂದರೆ ಪುರಂದರದಾಸರು. ಇದು ಅವರಲ್ಲಿರಬಹುದಾದ ಕೃತ್ರಿಮವಲ್ಲದ ನಿಚ್ಚಳ ಸ್ವಭಾವದ ಲಕ್ಷಣ. ವ್ಯಕ್ತಿಯ ೪೦ನೇ ವಯಸ್ಸು ಅಂದರೆ ಯೌವನಾವಸ್ಥೆ, ಇನ್ನು ಶ್ರೀಮಂತಿಕೆ, ಸಂಸಾರ ಅನುಭವಿಸುವ ತವಕ, ಆಸೆ. ಇಂತಹ ಸಂದರ್ಭದಲ್ಲಿ ಕಡುಜಿಪುಣ, ಸಂಸಾರಿ, ಶ್ರೀಮಂತ ಶ್ರೀನಿವಾಸ ನಾಯಕ ತಾನು ಗಳಿಸಿದ್ದನ್ನೆಲ್ಲ ಕೈಬಿಟ್ಟು, ಕೈಯಲ್ಲಿ ತಂಬೂರಿ, ಭಿಕ್ಷೆಯ ಗೋಪಾಳ ಬುಟ್ಟಿ ಹಿಡಿದು ಹೊರಟಿದ್ದು ದೈವೇಚ್ಛೆ ಎಂದು ಹೇಳಿದರೆ, ಮಾನಮ ಪ್ರಯತ್ನಕ್ಕೆ ಅಪಚಾರ ಮಾಡಿದಂತೆ. ದೈವೇಚ್ಛೆಯ ಸಂಗಡ ಇಲ್ಲಿ ಆಗಿರಬಹುದಾದ ಮಹತ್ವಪೂರ್ಣ ಬದಲಾವಣೆಯೆಂದರೆ ‘ಮಾನಸಿಕ ಪರಿವರ್ತನೆ’. ಇದು ಯಾವುದೇ ಭಕ್ತಿ ಪಂಥದ ಮೂಲ ಆಶಯ. ಈ ಹಿನ್ನಲೆಯಲ್ಲಿ ನಾವು ಪುರಂದರದಾಸರ ಸಾಹಿತ್ಯ ‘ವೈರಾಗ್ಯ ಮತ್ತು ಜೀವನ ಪ್ರೀತಿ’ ಅಂತರ್ ಸಂಬಂಧಗಳ ಕುರಿತಂತೆ ಆಲೋಚಿಸುವುದು ಸೂಕ್ತ ಮತ್ತು ಯೋಗ್ಯ.

ನಮ್ಮ ಬದುಕಿನ ಮೂಲ ಉದ್ದೇಶವೇನು? ಇರುವಷ್ಟು ಕಾಲ ಸಂತೋಷ, ನೆಮ್ಮದಿ, ಆನಂದ, ಸಂತೃಪ್ತಿಯಿಂದ ಬದುಕಬೇಕೇಂಬುದು. ಈ ವಿಚಾರ ಹಿಂದೆ ಮಾತ್ರವಲ್ಲ ಇಂದಿಗೂ ಇದೆ. ನಮ್ಮ ಓದು, ಉದ್ಯೋಗ ಇವೆಲ್ಲವುಗಳ ಹಿಂದೆ ಇರುವ ಬಯಕೆ ಒಂದೇ ಒಂದು. ನಾನು ಮತ್ತು ನನ್ನ ಕುಟುಂಬ ಸಂತೋಷದಿಂದ ಬದುಕಬೇಕೆಂಬ ಅಭಿಲಾಷೆ. ಇಚ್ಛೆ. ಈ ಸುಖದ ಕಲ್ಪನೆಯೇ ವಿಚಿತ್ರವಾದುದು. ಇತರರು ಏನಾದರೂ ಹಾಳಾಗಲಿ, ಹೇಗೇ ಇರಲಿ. ನಾನು, ಬಹಳವಾದರೆ ನನ್ನ ಹೆಂಡತಿ, ಮಕ್ಕಳು ಮಾತ್ರ ಸುಖವಾಗಿದ್ದರೆ ಸಾಕು ಎಂಬುದು ಒಂದು. ಈ ಸುಖವನ್ನು, ಬಯಕೆಯನ್ನು ಸಂಕುಚಿತ ಇಲ್ಲವೆ, ‘ದುರಾಸೆಯ’ ಧೋರಣೆ ಎಂದು ಗುರುತಿಸಲಾಗುತ್ತದೆ. ಇಂದಿನ ನಮ್ಮ ಬದುಕಿನಲ್ಲಿ ಭ್ರಷ್ಟಾಚಾರ, ಜಾತೀಯತೆ, ಅಧಿಕಾರ ವ್ಯಾಮೋಹ, ಅಧಿಕಾರ ದುರುಪಯೋಗ, ಶೋಷಣೆ, ಕ್ರೌರ್ಯ, ದುರ್ವಿಚಾರ, ದುರ್ನಡತೆಗಳು ಹೆಚ್ಚಾಗಿವೆ ಎಂಬುದು ಬಹಿರಂಗ ಸತ್ಯ. ಈ ಸತ್ಯವನ್ನು ದಾಸರು ಎಂದೋ ಅರಿತಿದ್ದರು. ಈ ಅರಿವೇ ಬಾಳಿನ ದುರಾಸೆಗೆ ಕಡಿವಾಣ ಹಾಕುವ ಕ್ರಮಕ್ಕೆ ನಾಂದಿ ಹಾಡಿತ್ತು. ಇದೇ ದಾಸ ಸಾಹಿತ್ಯದ ಜೀವ ತಂತುವಾಯಿತು. ಸಾಹಿತ್ಯದ ಮಂತ್ರವಾಯಿತು. ಹೊರನೋಟಕ್ಕೆ, ‘ವೈರಾಗ್ಯ’ ಮತ್ತು ‘ಜೀವನ ಪ್ರೀತಿ’ಗಳು ವಿರೋಧಿ ಶಬ್ದಗಳೆನ್ನಿಸಿದರೂ ಇವೆರಡನ್ನು ಒಂದೇ ತೆಕ್ಕೆಗೆ ತೆಗೆದುಕೊಂಡು ಒಪ್ಪಿಕೊಂಡು, ಅಪ್ಪಿಕೊಂಡು ಸಾಧಿಸುವ ಪ್ರಯತ್ನ ಮಾಡಿದ್ದು ದಾಸ ಸಾಹಿತ್ಯ. ‘ಭಕ್ತಿ’ ಎಂದರೆ ಒಂದರ್ಥದಲ್ಲಿ ಸತ್ಯದ ಅನ್ವೇಷಣೆ, “ಕೂಡಿ ಹುಟ್ಟಿಸಿದೆ ಹಿತ-ಅಹಿತಗಳೆಂಬೆರಡನು” ಎಂದು ಹೇಳುತ್ತಾರೆ ನಿಜಗುಣ ಶಿವಯೋಗಿಗಳು. ಈ ಹಿತಾಹಿತಗಳ ‘ವಿವೇಚನೆ ಶಕ್ತಿ’ ಇರುವುದು ‘ವಿವೇಕಕ್ಕೆ’ ಮಾತ್ರ. “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ” ಇದು ಕವಿ ಬೇಂದ್ರೆಯವರ ಬದುಕಿನ ಗ್ರಹಿಕೆ. “ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ”-ಇದು ಶರಣರ ಬದುಕಿನ ನಂಬಿಕೆ. ದ್ವ್ಯತ್ ಸಿದ್ಧಾಂತದ ಪ್ರತಿಪಾದನೆಯ ಕುರಿತಂತೆ ಇರುವ-“ಶ್ರೀಮನ್ಮದ್ವಮತೆ” ಎನ್ನುವ ಮೂಲ ಶ್ಲೋಕದಲ್ಲಿ ‘ಮುಕ್ತಿ ನೈಜ ಸುಖಾನುಭೂತಿ’ ಎಂದು ಸೂಚಿಸಲಾಗಿದೆ. ‘ಸ್ವಾತಂತ್ರ್ಯ’ವೆಂದರೆ ‘ಸ್ವೇಚ್ಛಾಚಾರ’ ಎಂಬುದನ್ನು ನಿಗ್ರಹಿಸಲು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಎಂಬ ನಾಲ್ಕು ಪುರುಷಾರ್ಥಗಳನ್ನು ರೂಪಿಸಲಾಗಿತ್ತು. ಆಯಾ ಅವಧಿಯಲ್ಲಿ ಕರ್ತವ್ಯಗಳನ್ನು ನೀಡಲಾಗಿತ್ತು. ವಾನಪ್ರಸ್ಥ, ಸನ್ಯಾಸಗಳೆರಡು ಆಶ್ರಮಗಳು ಲೌಕಿಕದ ನಿರಶಕ್ತಿಯ ಸಂಕೇತವಾಗಿದ್ದವು. ಇದೇ ವಿಚಾರವನ್ನು ದ್ವ್ಯೆತಸಿದ್ಧಾಂತದ ಪ್ರಮೇಯವು ಮಾನವ ಬದುಕಿನ ಅಂತಿಮ ಬಯಕೆ ‘ಮುಕ್ತಿ’ ಎಂದು ಹೇಳಿದ್ದರೂ, ಈ ಮುಕ್ತಿ ಒಂದು ಲೋಕವಲ್ಲ, ಅದು “ನೈಜ ಸುಖಾನುಭೂತಿ” ಎಂದು ಹೇಳುತ್ತದೆ. ನಿಜವಾದ ಸುಖದ ಪರಿಕಲ್ಪನೆ ಏನು? ಇದೇ ಅಂತರಂಗ ದರ್ಶನ. ಈ ಅಂತರಂಗ ದರ್ಶನ ಸಾಧಿಸುವುದು ಹೇಗೆ? ನಮ್ಮಲ್ಲಿರುವ ಅತಿಯಾದ ಸುಖದ ಬಯಕೆಯ ನಿರಾಕರಣೆಯಿಂದ. ಈ ಅತಿಯಾದ ಬಯಕೆಗಳನ್ನು ನಿಯಂತ್ರಿಸುವ ಶಕ್ತಿ ಯಾವುದು? ನಮ್ಮ ಮನಸ್ಸು ಹಾಗೂ ಇಂದ್ರಿಯಗಳು. ಕೊನೆಗೆ ನಾವು ಮುಖಮಾಡುವುದು ನಮ್ಮ ಕಡೆಗೆ. ಬುದ್ಧಿಯನ್ನು ನಿಯಂತ್ರಿಸುವ ಬಗೆ ಯಾವುದು? ಇದಕ್ಕೆ ದಾಸಸಾಹಿತ್ಯ ಪ್ರೇರಕವಾಯಿತು. ಅತಿಯಾದರೆ ಅಮೃತವು ವಿಷವೇ. ಆಸೆಗಳು ಬದುಕಿನ ದುರಂತ, ದುಃಖಕ್ಕೆ ಕಾರಣ. ಇದನ್ನರಿತೇ ಭಗವಾನ್ ಬುದ್ಧ “ಆಸೆಯೇ ದುಃಖಕ್ಕೆ ಕಾರಣ” ಎಂಬ ಸತ್ಯ ಸಾರಿದ್ದು. ಧರ್ಮ ಯಾವುದಾದರೇನು ಮೂಲ ಶಕ್ತಿ ಒಂದೇ. ಈ ಆಸೆ ದುರಾಸೆಗೆ ಕಾರಣರು ಯಾರು? ಮತ್ಯಾರು? ನಾವೇ. ಹಾಗಾದರೆ ನಮ್ಮಿಂದಾಗಿರುವ ತಪ್ಪನ್ನು ನಾವೇ ಸರಿ ಪಡಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಬಂದು ನಿಂತೆವು ಎಂಬುದು ಸ್ಪಷ್ಟ. ಎಲ್ಲಿ ಕಳೆದುಕೊಂಡಿದ್ದೆವೆಯೋ ಅಲ್ಲೇ ಹುಡುಕಬೇಕು ಎಂಬ ಪರಿಸ್ಥಿತಿ. ಯಾಕೆ ಹೀಗಾಗುತ್ತಿದೆ? ಇದರ ಹುಡುಕಾಟ, ದರ್ಶನ, ನಿದರ್ಶನವೇ ವೈರಾಗ್ಯ ಮತ್ತು ‘ಜೀವನ ಪ್ರೀತಿ‘ಯ ಅಂತರ ಸಂಬಂಧ, ಭಗವಂತ, ಭಕ್ತಿ, ಬದುಕಿನ ತಾಕಲಾಟದ ನಡುವೆಯೇ ಈ ಸಂಬಂಧ ಹುಟ್ಟಿಕೊಂಡಿದೆ. ಪುರಂದರದಾಸರ ಸಾಹಿತ್ಯದಲ್ಲಿ ಅಂದರೆ ಅವರ ಆಲೋಚನಾ ಕ್ರಮದಲ್ಲಿ ‘ವೈರಾಗ್ಯ’ ಮತ್ತು ‘ಬದುಕಿನ’ ಪ್ರೀತಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ದಾಸರ ಪ್ರಕಾರ, ವೈರಾಗ್ಯವೆಂದರೆ ಹೇಡಿಯಾಗಿ ಬದುಕನ್ನು ಬಿಟ್ಟು ಓಡುವುದಲ್ಲ. ಪ್ರಕೃತಿ ನೀಡಿರುವ ಅದಮ್ಯ ಚೈತನ್ಯ, ಉತ್ಸಾಹ, ಶ್ರೇಷ್ಠ ಶಕ್ತಿಯನ್ನು ಉದ್ದೀಪನಗೊಳಿಸುತ್ತ, ಮಾನವ ಪ್ರಯತ್ನದಿಂದ ಹಣ, ಅಧಿಕಾರ, ಹೆಸರು, ಕೀರ್ತಿಗಳಿಗೆ ಮಾಡುವ ಸತತ ಪ್ರಯತ್ನ. ಸಾಧನೆಯಂತೆ ಇಂದ್ರಿಯ ನಿಗ್ರಹ ಶಕ್ತಿಗೂ ಸಾಧನೆ ಅವಶ್ಯ ಎಂಬುದು ದಾಸರ ವಿಚಾರ. ಈ ಕುರಿತಂತೆ ಕಠೋಪನಿಷತ್ ನಲ್ಲಿ ಬಹು ಸುಂದರವಾದ ಕಲ್ಪನೆ ಇದೆ. “ಶರೀರವೆ ರಥ, ಆತ್ಮನೇ ರಥದ ಒಡೆಯ, ಬುದ್ಧಿಯೇ ಸಾರಥಿ, ಮನಸ್ಸೇ ಕಡಿವಾಣ, ಇಂದ್ರಿಯಗಳೇ ವಿಷಯಗಳು. ವಿಷಯಗಳ ಬಯಕೆಗಳೇ ದಾರಿ. ಯಾರು ಅವಿವೇಕಿಯಾಗಿರುವರೋ ಅವರಿಗೆ ಇಂದ್ರಿಯಗಳೆಂಬ ಕುದುರೆಗಳು ತುಂಟಾಟವಾಡಿಸಿ ದಾರಿ ತಪ್ಪಿಸುತ್ತವೆ. ಯಾವನು ವಿವೇಕಿಯೋ, ಅವನು ಇಂದ್ರಿಯಗಳೆಂಬ ಕುದುರೆಗಳನ್ನು, ಮನಸ್ಸೆಂಬ ಕಡಿವಾಣದ ಮೂಲಕ ತನ್ನ ವಶದಲ್ಲಿಟ್ಟುಕೊಳ್ಳುತ್ತಾನೆ” ಇಂದ್ರಿಯಗಳ ಅತಿಬಯಕೆ, ದುರಾಸೆಗಳನ್ನು ಹತ್ತಿಕ್ಕಬೇಕೆಂಬುದೇ ಪುರಂದರದಾಸರ ವೈರಾಗ್ಯ ಕಲ್ಪನೆಯ ಹಿಂದಿರುವ ಆಶಯವೆಂಬುದು ಅವರ ಸಾಹಿತ್ಯದ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.

ಶ್ರೀಪಾದರಾಯರು ಹೇಳುವಂತಿ “ಭಕ್ತಿ ಬೇಕು, ವಿರಕ್ತಿ ಬೇಕು, ಮುಂದು ಮುಕ್ತಿಯ ಬಯಸುವವಗೆ” ಇಲ್ಲಿ ವಿರಕ್ತಿ, ಎಂದರೆ ಅತಿ ವ್ಯಾಮೋಹ, ಅತಿ ಆಸೆಗಳಿಂದ ಮುಕ್ತನಾಗುವುದು. ಇದೇ ಮುಕ್ತಿ. ಈ ಹಿಂದೆಯೇ ಹೇಳಿದಂತೆ, ‘ಮುಕ್ತಿ’ ಎಂದರೆ ಬದುಕಿನ ‘ನೈಜ ಆನಂದ’ ಸ್ವರೂಪ. ಪುರಂದರದಾಸರ ಸಾಹಿತ್ಯವನ್ನು ಅವಲೋಕಿಸಿದಾಗ ‘ವೈರಾಗ್ಯ’, ‘ಜೀವನ ಪ್ರೀತಿ’ ಒಂದಕ್ಕೊಂದು ಪೂರಕವಾಗಿವೆ. ಬದುಕನ್ನು ಕಟ್ಟುವಲ್ಲಿ ವೈರಾಗ್ಯ ಸಹಕಾರಿ ಮಾತ್ರವಲ್ಲ ಬದುಕಿನ ಶ್ರೇಷ್ಠತೆಗೆ ವೈರಾಗ್ಯ ಗುಣ ಅನಿವಾರ್ಯ.

ಬದುಕಿನಲ್ಲಿ ಗಳಿಸಿದ ಸಂಪತ್ತನ್ನೇ ತ್ಯಜಿಸಿದ ಪುರಂದರದಾಸರಿಗೆ ಸಂಸಾರ, ಸಮಾಜ ತ್ಯಜಿಸುವದೇನೊ ದೊಡ್ಡ ಮಾತಾಗಿರಲಿಲ್ಲ. ತಮ್ಮ ವೈಯಕ್ತಿಕ ಸಾಧನೆಯೆ ಮುಖ್ಯವಾಗಿದ್ದದ್ದೇ ಆದರೆ ಗುಡ್ಡ, ಬೆಟ್ಟಗಳಿಗೆ ಹೋಗಿ ತಪಸ್ಸು ಮಾಡುತ್ತ ಬಾಳನ್ನು ಕಳೆಯಬಹುದಾಗಿತ್ತು. ಇದು ಪಲಾಯನವಾದ. ಮಾನವ ಜನ್ಮದ ಶ್ರೇಷ್ಠತೆಯ ಅರಿವಿನ ಸಂಗಡವೇ, ತಮ್ಮ ಜವಾಬ್ದಾರಿಯ ಅರಿವೂ ಅವರಿಗಿತ್ತು. ತಾವು ಕಂಡುಕೊಂಡ ಸತ್ಯವನ್ನು ಸಮಾಜಕ್ಕೆ ಮುಟ್ಟಿಸುವ, ಆ ಮೂಲಕ ಜನರ ಬದುಕನ್ನು, ಜೀವನವನ್ನು ಹಸನು ಗೊಳಿಸುವ ತವಕ, ಜನಪರ ಕಾಳಜಿಯನ್ನು ಗುರುತಿಸದಿದ್ದರೆ ಅವರ ವ್ಯಕ್ತಿತ್ವ ಸಾಹಿತ್ಯಕ್ಕೆ ನಾವು ಅನ್ಯಾಯ ಮಾಡಿದಂತೆ. ಹೊಲವನ್ನು ಹಸನು ಮಾಡಿದ ರೈತ, ಹೊಲದಲ್ಲಿ ಧಾನ್ಯಗಳ ಬೀಜ ಬಿತ್ತುತ್ತಾನೆ. ಆದರೆ ಬೆಳೆಯೊಂದಿಗೆ ಕಳೆಯೂ ಬೆಳೆಯುತ್ತದೆ. ಕಳೆಯ ಬೀಜ ಅವನು ಬಿತ್ತಿರುವುದಿಲ್ಲ ಎಂಬುದೂ ಸತ್ಯ. ಆದರೂ ಕಳೆ ಬೆಳೆಯುತ್ತದೆ. ಕೈಚೆಲ್ಲಿ ಕೂಡುವುದಿಲ್ಲ. ಎಡೆ ಹೊಡೆಯುತ್ತಾನೆ, ಈ ಕಳೆ ಕೀಳಿಸುತ್ತಾನೆ, ಬೆಳೆ ಉಳಿಯುತ್ತದೆ, ಕಳೆ ಹೋಗುತ್ತದೆ. ಇದೇ ಪುರಂದರದಾಸರು ಅನುಸರಿಸಿದ ಮಾರ್ಗ, ದುರ್ಗುಣ, ದುರ್ವಿಚಾರ, ದುರಾಸೆಗಳೆಂಬ ಕಳೆಯನ್ನು ಕಿತ್ತಿದಾಗ ಮಾತ್ರ ಬಾಳಿಗೆ ಬದುಕಿಗೆ ಜೀವನಕ್ಕೆ ಹೊಸ ಖಳೆ. ಈ ಸರಳ ಸೂತ್ರಕ್ಕೆ ದೊಡ್ಡ ದೊಡ್ಡ ತತ್ವಜ್ಞಾನ, ಶಾಸ್ತ್ರ, ಗ್ರಂಥಗಳ ಅವಶ್ಯಕತೆ ಇಲ್ಲ. ಇದು ಸಾಮಾನ್ಯ ಜ್ಞಾನ. ಜನಸಾಮಾನ್ಯರ ಬದುಕನ್ನು ಕಂಡ ಪುರಂದರದಾಸರಿಗೆ ಇದು ಅರಿವಿಗೆ ಬಂದಿದ್ದರಲ್ಲಿ ಆಶ್ಚರ್ಯ ಪಡಬೇಕಾದದ್ದಿಲ್ಲ.

‘ಜೀವನ ಪ್ರೀತಿ’ಯ ಕುರಿತಂತೆ, ಪುರಂದರದಾಸರ ಎರಡು ಕೀರ್ತನೆಗಳು ಬಹು ಜನಪ್ರಿಯವಾಗಿವೆ.

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸಂಸಾರದಲ್ಲಿ ಆಸೆ ಲೇಶ ಇಡದಹಾಗೆ

ಎಂಬ ಒಂದು ಕೀರ್ತನೆ. ಮೂರು ನುಡಿಗಳ ಈ ಚಿಕ್ಕ ಕೀರ್ತನೆಯು ಆಕಾರದಲ್ಲಿ ವಾಮನ. ಅರ್ಥದಲ್ಲಿ ತ್ರಿವಿಕ್ರಮ. ಸಂಸಾರವು ಸಂತಸವಾಗಿರಬೇಕೆಂಬುದು ಎಲ್ಲರ ಆಕಾಂಕ್ಷೆ. ಮಾಳಿಗೆ ಏರಬೇಕೆಂಬ ಗುರಿ ಇರುವವನು ಮೇಲೇರುವ ಸಾಧನೆಯ ಮೆಟ್ಟಿಲು ಹುಡುಕಬೇಕು. ಇರದಿದ್ದರೆ ಪರ್ಯಾಯ ಯೋಜನೆ ರೂಪಿಸಿಕೊಳ್ಳಬೇಕು. ಅಂದಾಗ ಮಾತ್ರ ಗುರಿ ಮುಟ್ಟಲಿ ಸಾಧ್ಯ. ಕಾರ್ಯಕ್ಕೆ ಒಂದು ಕಾರಣವಿರುವಂತೆ ಉದ್ದೇಶಕ್ಕೆ ತಕ್ಕ ಪ್ರಯತ್ನ ಸಾಧನೆಬೇಕು. ಪ್ರಯತ್ನವಿದ್ದರೂ ಅನೇಕ ಸಲ ತಕ್ಕ ಪ್ರತಿಫಲ ದೊರೆಯುವುದಿಲ್ಲ ಎಂಬುದು ನಿಜ. ಇಲ್ಲಿ ದಾಸರು ಬಳಸಿರುವ ‘ಹೇಸಿಗೆ ಸಂಸಾರ’ ಎಂಬ ಪದವು ‘ಈಸಬೇಕು’ ಎಂಬುದಕ್ಕೆ ಪೂರಕವೇ ಹೊರತು, ನಾವೆಲ್ಲ ಸಾಮಾನ್ಯವಾಗಿ ಮಾಡುವ ಶಬ್ದಾರ್ಥದಂತೆ ಜೀವನವನ್ನು ದಿಕ್ಕರಿಸುವ, ತಿರಸ್ಕರಿಸುವ ಪದಗಳಲ್ಲ. ಈ ‘ಹೇಸಿಗೆ ಸಂಸಾರ’ ಪದಕ್ಕೆ ಧ್ವನ್ಯಾರ್ಥವನ್ನು ಸ್ವೀಕರಿಸಬೇಕು. ಪರಿಶ್ರಮ ಇದ್ದಾಗಲೂ ತಕ್ಕ ಪ್ರತಿಫಲ ದೊರಕದಿದ್ದಾಗ ಜೀವನದಲ್ಲಿ ಜಿಗುಪ್ಸೆ ಬರುತ್ತದೆ. ಜಿಗುಪ್ಸೆ-ನಿರಾಸೆಯಾಗಿ ಪರಿವರ್ತಿತವಾಗುತ್ತಿದೆ. ನಿರಾಸೆ ಅತಿಯಾದಾಗ ಜೀವನ ಪ್ರೀತಿ, ಬದುಕುವ ಆಸೆ ಕಡಿಮೆಯಾಗುತ್ತದೆ. ಬದುಕು ಬೇಡವೆನ್ನಿಸಿದಾಗ ವ್ಯಕ್ತಿ ಅಸಹಾಯಕನಾಗಿ ಸಾವನ್ನು ಪ್ರೀತಿಸುತ್ತಾನೆ. ಇಂದು ನಾವು ಕಾಣುವ, ಅನುಭವಿಸುವ, ಯುವಕರು, ಯುವತಿಯರು, ವೃದ್ಧರು, ರೈತರ ಆತ್ಮಹತ್ಯೆಗಳಿಗೆ ಮೂಲಕಾರಣ ಇದೇ ಆಗಿದೆ. ದುಃಖ, ದುಮ್ಮಾನ ನಿರಾಸೆಗಳೇ ‘ಹೇಸಿಗೆ ಸಂಸಾರ’ ಎಂಬ ಧ್ವನಿ ಇಲ್ಲಿದೆ. ಸಂಸಾರ ‘ಹೇಸಿಗೆ’ ಎಂದಾಗದೆ ‘ಪ್ರೀತಿಸುವಂತಾಗಬೇಕಾದರೆ ಆಸೆ ಲೇಶ ಇಡದ’ ರೀತಿಯ ಜೀವನ ವಿಧಾನದ ರೀತಿಯೇ ಈ ಸಮಸ್ಯೆಗೆ ಪರಿಹಾರ ಎಂಬುದು ಪುರಂದರದಾಸರ ವಿಚಾರ. ಇದಕ್ಕವರು ಮೂರು ಉದಾಹರಣೆಗಳನ್ನು ಕೊಡುತ್ತಾರೆ.

೧.”ತಾಮರಸ ಜಲದಂತೆ-ಪ್ರೇಮವಿಟ್ಟು ಭವದೊಳು” ಕಮಲದ ಹೂ ನೀರಿನಲ್ಲಿದ್ದರೂ ನೀರನ್ನು ಅಂಟಿಸಿಕೊಳ್ಳದಂತೆ

೨. “ಗೇರುಹಣ್ಣಿನಲ್ಲಿ ಬೀಜ ಸೇರಿದಂತೆ, ಸಂಸಾರದಿ” ಹಣ್ಣು ರುಚಿಗೆ, ಆರೋಗ್ಯಕ್ಕೆ ಒಳ್ಳೆಯದು. ಅದರಂತೆ ಸಂಸಾರವೂ ರುಚಿಕರ, ಮೇಲ್ನೋಟಕ್ಕೆ ಅಂದ, ಚಂದ. ಅಂದ ನೋಡಿ ಅಥವಾ ಹೋರಾಡಿ ಗೆಲ್ಲುವೆನೆಂದು ಒಳ ಹೋದರೆ, ‘ಚಕ್ರವ್ಯೂಹ‘ದ ಕೋಟೆ, ಹೊರಲಾರ. ಗೇರುಹಣ್ಣಿನ ಬೀಜ ಹಣ್ಣಿನ ಒಳಗಿರದ ಹೊರಭಾಗದ ತುದಿಯಲ್ಲಿ ಅಂಟಿಕೊಂಡಿರುವ ರೀತಿಯಲ್ಲಿ ಅಂಟಿದ್ದರೂ ಒಳಸಿಲುಕದೆ ಹೊರಗಿರಬೇಕು. ಸಂಸಾರದ ಭ್ರಮೇಗೆ ಒಳಗಾಗಬಾರದು.

೩. “ಮಾಂಸದಾಸೆಗೆ ಮತ್ಸ್ಯಸಿಲುಕಿ ಹಿಂಸೆ ಪಟ್ಟ ಪರಿಯಂತೆ” ಮೀನುಗಾರ ತನ್ನ ಬಲೆಯ ತುದಿಯ ಕೊಂಡಿಗೆ ಮಾಂಸದ ಚೂರು, ಎರೆಹುಳುವನ್ನು ಸಿಕ್ಕಿಸಿ ನೀರಿನಲ್ಲಿ ಬಿಟ್ಟಾಗ ಆ ಮಾಂಸದಾಸೆಗೆ ಮೀನುಗಳು ಬಂದು ತಾವೇ ದಾರದ ಕೊಂಡಿಗೆ ಬಾಯಿ ಹಾಕಿ ಸಿಕ್ಕಿಕೊಂಡು ಬಂಧನಕ್ಕೆ ಒಳಗಾಗಿ ಸಾಯುವಂತೆ ದುರಾಸೆಯಿಂದ ಬದುಕು ದುರಂತವಾಗುತ್ತದೆ.

ದೈನಂದಿನ ಜೀವನದಲ್ಲಿ ಕಷ್ಟ, ಕಾರ್ಪಣ್ಯ, ದುಃಖ, ದುಮ್ಮಾನ, ನಿರಾಶೆಗಳು ಅನಿವಾರ್ಯ. ಜೀವನ ಸುಖದ ಸುಪ್ಪತ್ತಿಗೆಯಲ್ಲ. ಅದೊಂದು ಸಾಗರ. ದೋಣಿಯಿಂದ ಸಾಗರ ದಾಟಿವಾಗ ದೋಣಿಯಲ್ಲಿ ಯೋಗ್ಯ ಭಾರವಿದ್ದರೆ ದಂಡೆಗೆ, ಭಾರ ಅತಿಯಾದರೆ ಸಮುದ್ರದ ತಳಕ್ಕೆ. ನೊಂದವರಿಗೆ, ನಿರಾಶರಾದವರಿಗೆ ಧೈರ್ಯ, ಆತ್ಮಸ್ಥೈರ್ಯದ ಜೀವನ ಪ್ರೀತಿಯ ಉಪಾಯವನ್ನು ಪುರಂದರದಾಸರು ಈ ಕೀರ್ತನೆಯ ಮೂಲಕ ನೀಡುತ್ತ ಬದುಕಿಗೆ ಬಲ ಬೆಂಬಲವನ್ನು ಒದಗಿಸುತ್ತಾರೆ. ಪುರಂದರದಾಸರ ಇನ್ನೊಂದು ರಚನೆ:

ಮಾನವ ಜನ್ಮ ದೊಡ್ಡದು, ಇದ
ಹಾನಿ ಮಾಡುವ ಬೇಡಿ ಹುಚ್ಚಪ್ಪಗಳಿರಾ

ನಾಲ್ಕು ಸಾಲುಗಳುಳ್ಳ, ಮೂರು ನುಡಿಯ ಒಟ್ಟು ೧೨ ಸಾಲುಗಳನ್ನು ಹೊಂದಿದ ಈ ಕೀರ್ತನೆಯು ಪುರಂದರದಾಸರು ಮಾನವ ಜನ್ಮಕ್ಕೆ ನೀಡಿದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಮಾನವ ಪ್ರೀತಿ, ಮಾನವರ ಬಗ್ಗೆ ಇರುವ ಅಪಾರ ಕಾಳಜಿಯನ್ನು ಈ ರಚನೆಯಲ್ಲಿ ಹಿಡಿದಿಟ್ಟಿದ್ದಾರೆ. ಭೂಮಿಯ ಮೇಲಿರುವ ಲಕ್ಷಾಂತರ ಜೀವಿಗಳಲ್ಲಿ ಮನುಷ್ಯನೂ ಒಂದು ಜೀವಿ ಎಂಬುದನ್ನು ಸಮಾಜಶಾಸ್ತ್ರ ಹೇಳುತ್ತಿದೆ. ಆತನೊಬ್ಬ ಸಮಾಜ ಜೀವಿ. ತನ್ನ ಬುದ್ಧಿ, ವಿವೇಕ, ವಿವೇಚನೆ ಗುಣಗಳಿಂದಾಗಿ ಆತ ಇತರ ಪ್ರಾಣಿಗಳಿಗಿಂಗ ಭಿನ್ನನಾದ. ದೈಹಿಕ, ಮಾನಸಿಕ, ಸಾಮಾಜಿಕವಾಗಿ ವಿಕಾಸಗೊಂಡು ಇಂದಿನ ಸ್ಥಿತಿಗತಿಗೆ ಬಂದಿದ್ದಾನೆ.

ಸಹಿ ಪ್ರಜ್ಞಾನೇನ ಸಂಪನ್ನ ತಮಃ
ವಿಜ್ಞಾತಂ ವದತಿ, ವಿಜ್ಞಾತಂಪಶ್ಯತಿ….”

“ಉಳಿದ ಪ್ರಾಣಿಗಳಿಗಿಂತ ಮನುಷ್ಯ ಬೌದ್ಧಿಕವಾಗಿ ಸಿರಿವಂತನಾಗಿದ್ದಾನೆ. ಅವನು ವಿಚಾರಮಾಡಿ ಮಾತನಾಡುತ್ತಾನೆ. ಆಲೋಚಿಸುತ್ತಾನೆ, ನಾಳೆಯ ಅರಿವಿದೆ. ಲೋಕಾ ಲೋಕಗಳನ್ನು ತಿಳಿದಿದ್ದಾನೆ. ನಶ್ಚರದಿಂದ ಶಾಶ್ವತ ಲೋಕವನ್ನು ಬಯಸುತ್ತಾನೆ” ಎಂಬುದಾಗಿ ಉಪನಿಷತ್ತು ಅಂದೇ ಮಾನವ ಮಾಹಿತಿಯನ್ನು ಸಾರಿದೆ, ಗುರುತಿಸಿದೆ.

“ನನ್ನ ಸೃಷ್ಠಿಯಲ್ಲಿ ಮಾನವ ಸೃಷ್ಟಿಯು ನನಗೆ ಪ್ರಿಯವಾದುದಾಗಿದೆ. ಕಾರಣವೆಂದರೆ ಈ ಮಾನವ ಸೃಷ್ಠಿ ತನ್ನ ಸೃಷ್ಠಿಕರ್ತನನ್ನು ಅನ್ವೇಷಿಸುತ್ತದೆ”. ಇದು ಭಾಗವತದಲ್ಲಿರುವುದು ಮಾತ್ರ ಇದಕ್ಕಾಗಿಯೇ “ದುರ್ಲಭಂ ಮಾನುಷ್ಯಜನ್ಮಂ” ಎಂದು ಶಾಸ್ತ್ರಸಾರಿದೆ. “ತನ್ನ ತಾನರಿತರೆ ತನ್ನರಿವೆಯೇ ಗುರು” ಎಂಬುದು ಶರಣರವಾಣಿ. ಇಂತಹ ಶ್ರೇಷ್ಠ ಮಾನವ ಜನ್ಮವನ್ನು ಪಡೆದೂ ಸಹಿತ, ಅದನ್ನು ವ್ಯರ್ಥ ಮಾಡಿಕೊಳ್ಳುವ ಜನರ ಹುಚ್ಚಿನ ಬಗ್ಗೆ ದಾಸರು ಕನಿಕರಿಸಿದ್ದಾರೆ. ಎಚ್ಚರಿಕೆಯನ್ನೂ ನೀಡುತ್ತಾರೆ. ‘ಹುಚ್ಚಪ್ಪಗಳಿರಾ’ ಎಂಬ ಸಂಬೋಧನೆ ದೂಷಣೆಯಲ್ಲ, ಕಾರುಣ್ಯದ ನುಡಿ. ಇಲ್ಲಿ “ಹಾನಿ” ಎಂಬ ಶಬ್ಧ ದುರ್ವಿನಿಯೋಗವಾಗುವುದಕ್ಕೆ ಸಂಬಂಧಿಸಿದ್ದಾಗಿದೆ. ಸದ್ವಿನಿಓಗವಾಗಬೇಕಾಗಿತ್ತು. ಅದರ ಬದಲು ದುರ್ವಿನಿಯೋಗವಾಗುತ್ತಿದೆ ಮಾತ್ರವಲ್ಲ ಇಡೀ ಆಯುಷ್ಯವನ್ನೇ ವ್ಯರ್ಥವಾಗಿಸುತ್ತಿರುವ ಬಗ್ಗೆ ಅನುಕಂಪವೂ ಇದೆ. ಒಂದು ದಿನ ಕಳೆಯಿತೆಂದರೆ ಮನುಷ್ಯ “ಒಂದು ದಿನ ಸಾವಿಗೆ ಹತ್ತಿರವಾದ” ಎಂಬ ಮಾತು ನಮ್ಮಲ್ಲಿದೆ. “ಹೊತ್ತು ಹೋದರೆ ಮತ್ತೆ ಬಾರದು” ಎಂಬ ಗಾದೆಯ ಮಾತೂ ಜನಸಾಮಾನ್ಯರ ನಾಲಗೆಯ ಮೇಲಿದೆ. Man is an architect of his own life ಎಂಬುದಾಗಿ ಆಂಗ್ಲ ಗಾದೆ ಹೇಳುತ್ತದೆ. ‘ವ್ಯಕ್ತಿ ತನ್ನನ್ನು ತಾನೇ ರೂಪಿಸಿಕೊಳ್ಳುವ ಒಬ್ಬ ಶಿಲ್ಪಿ‘. ಇಂದು ನಾವು ಉನ್ನತ ವ್ಯಾಸಂಗದಲ್ಲಿ, ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ‘ವ್ಯಕ್ತಿತ್ವ ವಿಕಾಸ‘ದ ಶಿಬಿರ, ಭಾಷಣಗಳನ್ನು ಮಾಡಿಸುತ್ತಿದ್ದೇವೆ. ಇದೇ ಚಿಂತನೆಯನ್ನು ಪುರಂದರದಾಸರು ಆರು ನೂರು ವರುಷಗಳ ಹಿಂದೆಯೇ ಮಾಡಿದ್ದರೆಂಬುದು ಅವರ ದೂರದೃಷ್ಟಿ ಹಾಗೂ ವ್ಯಕ್ತಿತ್ವಕ್ಕೆ ಅವರು ಕೊಟ್ಟ ಮಹತ್ವ. ಅವರು ಕೊಡುವ ನಿದರ್ಶನಗಳು ನಿತ್ಯದ ಬದುಕಿನ ಪ್ರಸಂಗಗಳೇ ಆಗಿರುವುದು ಅತ್ಯಂತ ಸೋಜಿಗ.

ಕಣ್ಣು, ಕಿವಿ, ಕೈ, ಕಾಲು, ನಾಲಿಗೆ ಇತ್ಯಾದಿ ಕರ್ಮೇಂದ್ರಿಯಗಳು ಇರುವುದು ಕೇವಲ ಕೆಟ್ಟಕಾರ್ಯಗಳಿಗಾಗಿ, ತಿಂದುಂಡು ಸುಖಿಸಲು ಅಲ್ಲ. ಹೆಣ್ಣು, ಮಣ್ಣುಗಳು, ಸ್ಥಿರವೂ ಅಲ್ಲ.

ಕಾಲನ ದೂಯರು ಕಾಲ್ ಪಿಡಿದೆಳೆವಾಗ
ತಾಳು ತಾಳೆಂದರೆ ತಾಳುವರೆ?’

ಎಂಬುವ ವಾಸ್ತವದ ಚಿಂತನೆಗೆ ತೊಡಗುತ್ತಾರೆ. ಏನು ಗಳಿಸಿದರೂ ಹೋಗುವಾಗ ಒಬ್ಬನೇ ಅದೂ ಬರಿಗೈಯಲ್ಲಿ ಎಂಬ ಸತ್ಯ ದರ್ಶನದಂತೆ ನಮ್ಮನ್ನು ಕರೆದೊಯುತ್ತಾರೆ. ನಮಗಿರುವ ಅಂಗಗಳು ಇನ್ನೊಬ್ಬರನ್ನು ಶೋಷಿಸಿ, ಕೇವಲ ಸಂಪಾದನೆಯಲ್ಲಿ ತೊಡುಗುವುದಕ್ಕೆ ಮಾತ್ರವೇ ಸೀಮಿತವಾದರೆ ಅದು ಮಾನವ ಜನ್ಮದ ಹಾನಿ. ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ. “ಸುಳ್ಳಿನ ಸಂಸಾರಕ್ಕೆ ಸಿಲುಕುವುದಕ್ಕಿಂತ ಧರ್ಮವಗಳಿಸಿರೋ” ಎನ್ನುತ್ತಾರೆ. ಇಲ್ಲಿ ಧರ್ಮವೆಂದರೆ ಉತ್ತಮ ಕಾರ್ಯಗಳು, ಮಾನವ ಸೇವೆ, ಭಗವಂತನ ಸೇವೆ ಒಟ್ಟಾರೆ ಮೌಲಿಕ ಬದುಕು. ಅಶಾಶ್ವತ ಮತ್ತು ಶಾಶ್ವತಗಳ ಮಧ್ಯೆದ ತಿಕ್ಕಾಟವಿದು. “ಜಗತ್ ಸತ್ಯ” ಎಂಬುದಾಗಿ ದ್ವೆತ ಸಿದ್ಧಾಂತ ಹೇಳುತ್ತದೆ. ಆ ಸಿದ್ಧಾಂತವನ್ನು ಪ್ರತಿಪಾದಿಸುವ ಹೊಣೆ ಹೊತ್ತ ದಾಸರೇ “ಸಂಸಾರ-ಬದುಕು ಸುಳ್ಳು” ಎಂದು ಹೇಳುವುದೊಂದು ವಿಪರ್ಯಾಸ. ಜಗತ್ತು ‘ಸತ್ಯ’ವಾದರೂ ಜೀವಿಗಳು ‘ಅಶಾಶ್ವತ’ ಎಂಬ ವಿಚಾರ ಒಂದಾದರೆ ಚಂಚಲ ಮನವನ್ನು ನಿಯಂತ್ರಿಸಲು, ‘ಅಶಾಶ್ವತ’ ಎಂಬ ‘ಭಯ‘ದ ಬೀಜವನ್ನು ಬಿತ್ತುವ ಅನಿವಾರ್ಯತೆಯೂ ಇದಕ್ಕೆ ಕಾರಣವಾಗಿರಬೇಕು. ಸಮಸ್ಯೆಗೆ ಪರ್ಯಾಯ, ಪರಿಹಾರದ ನಿರೂಪಣೆ ಇದೆ. ಭಕ್ತಿ, ಪೂಜೆ, ಇತರ ಎಲ್ಲ ಧಾರ್ಮಿಕ ಆಚರಣೆಗಳ ಹಿಂದಿನ ಮುಖ್ಯ ಉದ್ದೇಶ ಮಾನಸಿಕ ಏಕಾಗ್ರತೆ ಮಾತ್ರ. ಈ ಮೂಲ ಚಿಂತನೆಯನ್ನು ಬಿಟ್ಟು ನಾವು ಬಹುದೂರ ಬಂದಿರುವ ಕಾರಣದಿಂದಲೇ ಆಚರಣೆಗಳಲ್ಲಿ ಶುಷ್ಕತೆ ಬಂದಿರುವುದನ್ನು ಒಪ್ಪಿಕೊಳ್ಳಲೇಬೇಕು.

ದಾಸರು ಹೇಳುವ ಅನೇಕ ಕೀರ್ತನೆಗಳು ಮೇಲ್ನೋಟಕ್ಕೆ ಭಕ್ತಿ ಯುಕ್ತ ಹಾಗೂ ಧಾರ್ಮಿಕ ಎಂದೆನ್ನಿಸಿದರೂ ಅವುಗಳ ಒಡಲಲ್ಲಿ ಬೇರೊಂದು ಅರ್ಥ ಸಾಮಾಜಿಕ ರೀತಿ, ನೀತಿ, ನಿಯಮಗಳು, ಮನದ ಏಕಾಗ್ರತೆ, ಕರ್ತವ್ಯಪ್ರಜ್ಞೆ, ಕೌಟುಂಬಿಕ ಸಂಬಂಧ, ಶುಷ್ಕ ಆಚರಣೆ, ಅವೈಜ್ಞಾನಿಕ, ಅವೈಚಾರಿಕ ನಡೆನುಡಿ-ಇವುಗಳ ಕುರಿತಂತೆ ಚಿಂತನೆಗೆ ಹಚ್ಚುತ್ತವೆ. ಒಟ್ಟಾರೆಯಾಗಿ ವ್ಯಕ್ತಿ ಉತ್ತಮ ಮೌಲ್ಯಗಳನ್ನು ನೇರವಾಗಿ ಹೇಳಿದರೆ ಸಾಮಾಜಿಕ ಉಪದೇಶವಾಗುವ ಭೀತಿ, ಇನ್ನೊಂಡೆದೆ ನಂಬಿದ ಭಗವಂತ ಭಕ್ತಿ ಮತ-ಪಂಥ ಆಚರಣೆಗಳ ಆವರಣ ತೊಡಿಸಿ ಹೇಳುವುದರಿಂದ ಧಾರ್ಮಿಕ ಅನುಯಾಯಿಗಳು ಸ್ವೀಕರಿಸುವರೆಂಬ ರೀತಿ ಕಾರಣವಾಗಿರಬೇಕು.

ಬದುಕು, ಸಂಸಾರ ಅನಿತ್ಯ, ಅಸತ್ಯ ಅಶಾಶ್ವತ ಎನ್ನುವ ಕಲ್ಪನೆಯನ್ನು ಮೂಡಿಸುವ ದಾಸರ ಹಲವು ಹಾಡುಗಳು ಇದೇ ಕಾರಣಕ್ಕಾಗಿ ಬಂದವುಗಳಾಗಿವೆ. ಹಲವು ಉಳಿಯ ಪೆಟ್ಟಿನಿಂದ ಶಿಲ್ಪ ತಯಾರಾಗುವಂತೆಯೇ, ಹೇಳುವ ವಿಚಾರವನ್ನು ಮೇಲಿಂದ ಮೇಲೆ, ಮತ್ತೆ ಮತ್ತೆ ಹೇಳುವುದರಿಂದ ಪರಿಣಾಮ ಅಗಾಧ. ಈ ತಂತ್ರವನ್ನು ದಾಸರು ಅರಿತಿದ್ದಾರೆ. ಈ ಕಾರಣಕ್ಕಾಗಿಯೇ ನೂರಾರು ಕೀರ್ತನೆಗಳು ಬದುಕಿನ ನಶ್ವರತೆಯ ಕುರಿತಂತೆ ರಚಿತವಾಗಿವೆ.