ಹತ್ತೊಂಬತ್ತನೆಯ ಶತಮಾನದ ಉತ್ತರಭಾಗದಲ್ಲಿ, ಪಶ್ಚಿಮದ ಆಕ್ರಮಣಕಾರೀ ನಾಗರಿಕತೆಯ ಪ್ರತಿನಿಧಿಯಾದ ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರಸ್ಥಾನವೂ ಶಿಕ್ಷಣಕೇಂದ್ರವೂ ಆಗಿದ್ದ ಕಲ್ಕತ್ತಾ ನಗರಕ್ಕೆ ಸಮೀಪದ ದಕ್ಷಿಣೇಶ್ವರದ ಕಾಳೀ ದೇವಾಲಯದಲ್ಲಿ, ಬಂಗಾಳದ ಹಳ್ಳಿಗಾಡಿನಿಂದ ಬಂದು ನೆಲೆ ನಿಂತು, ಸಾಮಾನ್ಯನಂತೆ ತೋರುವ ವ್ಯಕ್ತಿಯೊಬ್ಬಾತ, ಒಂದು ಯುಗಪರಿವರ್ತನೆಯ ಮಹಾಶಕ್ತಿಯಾಗಿ ಮೂರ್ತೀಭವಿಸಿ ಇಡೀ ಜಗತ್ತನ್ನೇ ಚಕಿತಗೊಳಿಸಿದ ಪರಮಾಶ್ಚರ್ಯವೊಂದು ಸಂಭವಿಸಿತು. ಈ ಆಶ್ಚರ್ಯದ ಪ್ರತಿಮಾ ಸ್ವರೂಪರಾದ ವ್ಯಕ್ತಿಯೇ, ಈ ಯುಗದ ಸಂತಶ್ರೇಷ್ಠರಾದ ಶ್ರೀರಾಮಕೃಷ್ಣ ಪರಮಹಂಸರು.

ಈ ವ್ಯಕ್ತಿ ಈ ಲೋಕ ಭೂಮಿಕೆಯಲ್ಲಿ ಬದುಕಿದ್ದು ಕೇವಲ ಐವತ್ತು ವರ್ಷಗಳು ಮಾತ್ರ. ಆದರಲ್ಲಿಯೂ ಅವರ ಮಹಿಮಾನ್ವಿತವಾದ ವ್ಯಕ್ತಿತ್ವದ ಅಯಸ್ಕಾಂತ ಕೇಂದ್ರದೊಳಕ್ಕೆ ಬಹುಸಂಖ್ಯೆಯ ಭಕ್ತರೂ ಅವರ ಅಂತರಂಗದ ಶಿಷ್ಯರೂ ಬಂದು ಕೂಡಿಕೊಂಡದ್ದು, ಅವರೊಂದಿಗೆ ಶ್ರೀರಾಮ ಕೃಷ್ಣರು ಹಗಲಿರುಳೂ ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಕುರಿತು ಮಾತನಾಡಿದ್ದು, ತಮ್ಮ ಧಾರ್ಮಿಕ ನಿಲುವು ಹಾಗೂ ಚಿಂತನೆಗಳಿಂದ ಶಿಷ್ಯರ ಅಂತರಂಗದಲ್ಲಿ ಅಪೂರ್ವವಾದ ಜಾಗ್ರತಿಯನ್ನು ತಂದದ್ದು-ಕೊನೆಯ ಐದಾರು ವರ್ಷಗಳ ಕಾಲ ಮಾನದಲ್ಲಿ ಮಾತ್ರ. ಒಂದು ವೇಳೆ ಇತರ ಎಷ್ಟೋ ಸಾಧು ಸಂತರಂತೆ ಅವರೂ ನಿರ್ಜನ ಪರ್ವತಾರಣ್ಯಗಳನ್ನು ಪ್ರವೇಶಿಸಿ ಗುಹಾವಾಸಿಯಾಗುವ ಮನಸ್ಸು ಮಾಡಿದ್ದರಂತೂ ಈ ಜಗತ್ತು ಖಂಡಿತವಾಗಿಯೂ ಮಹಾನಷ್ಟಕ್ಕೆ ಒಳಗಾಗುತ್ತಿತ್ತು. ಅವರ ಅನುಗ್ರಹ ಮತ್ತು ಆಧ್ಯಾತ್ಮಿಕ ಚಿಂತನೆಗಳಿಂದ ಅಧ್ಯಾತ್ಮದ ಅರ್ಥವೇ ಅಭೂತ ಪೂರ್ವವಾದ ಬದಲಾವಣೆಯನ್ನು ಪಡೆದುಕೊಂಡು ಲೋಕಹಿತಕ್ಕೆ ಹೇಗೆ ವಿನಿಯೋಗವಾಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.

ಶ್ರೀರಾಮಕೃಷ್ಣರ ಜೀವನ, ಅದರ ಅದ್ಭುತವೂ ವೈವಿಧ್ಯಮಯವೂ ಆದ ಯೌಗಿಕ ಅನುಭವಗಳಿಂದಾಗಿ ಯಾರಿಗೂ ಗ್ರಹಿಸಲು ಅಸಾಧ್ಯವಾಗಿದೆ. ಅವರಾಗಿಯೇ ತಮ್ಮ ಮಾತುಕತೆಗಳಿಂದ, ಕ್ವಚಿತ್ತಾಗಿ ಅಂತರಂಗ ಶಿಷ್ಯರೆದುರು ತೋಡಿಕೊಂಡ ವಿಶಿಷ್ಟಾನುಭವಗಳಿಂದ, ಅವರ ಆತ್ಮೀಯ ಶಿಷ್ಯರು ಹಿಡಿದಿರಿಸಿಕೊಂಡ ಹಾಗೂ ವ್ಯಾಖ್ಯಾನಿಸಿರುವ ನೆನಪುಗಳಿಂದ, ಎಲ್ಲಕ್ಕೂ ಮಿಗಿಲಾಗಿ, “ಮ” ಎಂಬ ಅಕ್ಷರದ ಮರೆಯಲ್ಲಿ ಹುದುಗಿಕೊಂಡ ಮಹೇಂದ್ರನಾಥ ಗುಪ್ತರ ಅಪೂರ್ವ ದಾಖಲೆಯಾದ “ಶ್ರೀರಾಮಕೃಷ್ಣ ವಚನವೇದ”ದಿಂದ, ಶ್ರೀರಾಮಕೃಷ್ಣರ ವ್ಯಕ್ತಿತ್ವದ ಅಲ್ಪ ಸ್ವಲ್ಪ ಪರಿಚಯ ಜಗತ್ತಿಗೆ ಲಭ್ಯವಾಗಿದೆ. ಈ ದಾಖಲೆ ಕೂಡಾ ಫೆಬ್ರುವರಿ ೧೮೮೨ ರಿಂದ ಏಪ್ರಿಲ್ ೧೮೮೬ರವರೆಗಿನ, ಸುಮಾರು ನಾಲ್ಕು ವರ್ಷಗಳ  ಕಾಲಮಾನದಲ್ಲಿ, ಶ್ರೀರಾಮಕೃಷ್ಣರ ಸಹವರ್ತಿಯಾಗಿ, ತನ್ನ ಬಿಡುವಿನ ವೇಳೆಗಳಲ್ಲಿ ತಾನು ಕಂಡು ಕೇಳಿದ “ಶ್ರೀರಾಮಕೃಷ್ಣ ಲೀಲಾಪ್ರಸಂಗ”ಕ್ಕೆ ಲಿಪಿಕಾರನಾದ ಮಾಸ್ಟರ್ ಮಹಾಶಯನ ಕೊಡುಗೆಯಾಗಿದೆ. ಈ ಕುರಿತು “ನಾನೊಂದು ಅಮೃತ ಸಮುದ್ರದ ತಡಿಯಲ್ಲಿ ಕೂತು, ಕೇವಲ ಒಂದು ಬಿಂದಿಗೆಯಷ್ಟನ್ನು ತುಂಬಿಟ್ಟು ಕೊಂಡಿದ್ದೇನೆ” ಎಂಬ ಮಾಸ್ಟರ್ ಮಹಾಶಯನ ವರ್ಣನೆ ಶ್ರೀರಾಮಕೃಷ್ಣರ ವ್ಯಕ್ತಿತ್ವದ ಮಹತ್ತನ್ನೂ ಮತ್ತು ಅಗಮ್ಯತೆಯನ್ನೂ ಸೂಚಿಸುತ್ತದೆ.

ಶ್ರೀರಾಮಕೃಷ್ಣರು ಮರ್ತ್ಯದ ಸೀಮಿತ ಬುದ್ಧಿಗೆ ಅಗ್ರಾಹ್ಯವಾಗುವಂಥ ವ್ಯಕ್ತಿಯಾಗಿದ್ದರೂ, ಮಾನುಷ್ಯದ ಮಿತಿಯಲ್ಲಿ ಅತ್ಯಂತ ಸರಳರೂ ಮುಗ್ಧರೂ ಪ್ರಿಯರೂ ಆಗಿ, ನೋಡಿದವರಲ್ಲಿ ಒಂದು ಬಗೆಯ ಆತ್ಮೀಯತೆಯನ್ನು ಹುಟ್ಟಿಸುವಂತಿದ್ದರು. “ಶ್ರೀರಾಮಕೃಷ್ಣರು ಯಾವ ವಿಧದ ಪರಮಹಂಸರು? ಅವರು ಕಾಷಾಯವಸ್ತ್ರವನ್ನು ಉಡುತ್ತಾರೆಯೇ?” ಎಂದು ಈಶ್ವರಚಂದ್ರ ವಿದ್ಯಾಸಾಗರರು ಮಾಸ್ಟರನ್ನು ಕೇಳಿದಾಗ, ಮಾಸ್ಟರ್ ಹೇಳುತ್ತಾರೆ: “ಇಲ್ಲ, ಅವರೊಬ್ಬರು ಅದ್ಭುತ ಪುರುಷರು. ಕೆಂಪು ಅಂಚಿನ ಪಂಚೆ ಉಡುತ್ತಾರೆ. ಷರಟು ತೊಟ್ಟುಕೊಳ್ಳುತ್ತಾರೆ. ಪಾಲೀಷ್ ಹಾಕಿದ ಸ್ಲಿಪ್ಪರ್ ಮೆಟ್ಟುತ್ತಾರೆ. ರಾಣಿ ರಾಸಮಣಿಯ ಕಾಳೀ ದೇವಾಲಯದ ಕೊಠಡಿಯಲ್ಲಿ ವಾಸವಾಗಿದ್ದಾರೆ. ಅವರ ಕೊಠಡಿಯಲ್ಲಿ ಮಂಚ ಹಾಕಿದೆ. ಅದರ ಮೇಲೆ ಸುಪ್ಪತ್ತಿಗೆಯಿದೆ. ಸೊಳ್ಳೆಪರದೆ ಕಟ್ಟಿದೆ. ಅದರ ಮೇಲೇ ಅವರು ಮಲಗುವುದು. ಸಂನ್ಯಾಸಿಯ ಯಾವ ಬಾಹ್ಯ ಚಿಹ್ನೆಯೂ ಕಾಣಬರುತ್ತಿಲ್ಲ. ಆದರೆ ಅವರಿಗೆ ಭಗವಂತನ ಹೊರತು ಬೇರೆ ಏನೂ ಗೊತ್ತಿಲ್ಲ. ಅಹರ್ನಿಶಿ ಭಗವಂತನ ಚಿಂತೆಯಲ್ಲಿ ಕಾಲ ಕಳೆಯುತ್ತಾರೆ.”

ಇಂಥ ಅದ್ಭುತ ವ್ಯಕ್ತಿಯ ಪದತಲದಲ್ಲಿ ಅಂದಿನ ಕಲ್ಕತ್ತೆಯ ಸುಶಿಕ್ಷಿತ ಜಗತ್ತು ಕೂತು ಅವರಾಡುವ ನೇರವಾದ, ಸರಳವಾದ, ಉಪದೇಶಗಳನ್ನು ಕೇಳಿ ಧನ್ಯವಾಯಿತು. ಅಷ್ಟೆ ಅಲ್ಲ; ಅಂದಿನ ಸಮಾಜದ ವಿವಿಧ ಸ್ತರಗಳವರು- ಪಂಡಿತರು, ಕಲಾವಿದರು, ಭಕ್ತರು, ಸಂತರು, ಪತ್ರಿಕೆಯವರು, ವ್ಯಾಪಾರಿಗಳು, ತರುಣರು, ಮುದುಕರು, ಮಕ್ಕಳು, ಹೆಂಗಸರು, ಬ್ರಾಹ್ಮಸಮಾಜದವರು, ಮಹಮ್ಮದೀಯರು, ಕೆಸ್ತರು, ಎಲ್ಲರೂ ನೆರೆದು, ದಿನದ ಇಪ್ಪತ್ತುನಾಲ್ಕು ಘಂಟೆಗಳಲ್ಲಿ ಸುಮಾರು ಹದಿನೈದು-ಇಪ್ಪತ್ತು ಘಂಟೆಗಳ ಕಾಲ ತಮ್ಮ ಬಹುಬಗೆಯ ಸಂದೇಹಗಳಿಗೆ ಪ್ರಶ್ನೆಗಳಿಗೆ ಅವರಿಂದ ಸೂಕ್ತವಾದ ಉತ್ತರವನ್ನು ಪಡೆದುಕೊಳ್ಳತೊಡಗಿದರು. ಶ್ರೀರಾಮಕೃಷ್ಣರು ತಾಳ್ಮೆಯಿಂದ, ಪ್ರೀತಿಯಿಂದ ಎಂಥವರಿಗೂ ತಿಳಿಯಲು ಸಾಧ್ಯವಾದ ಆಡುಮಾತುಗಳ ಮೂಲಕ ಅತ್ಯಂತ ಗಹನವಾದ ಆಧ್ಯಾತ್ಮಿಕ ಅನುಭವಗಳನ್ನು ಬಿತ್ತರಿಸಿದರು.

ಶ್ರೀರಾಮಕೃಷ್ಣರು ತಾನಿದ್ದಲ್ಲಿಗೆ ಎಲ್ಲರೂ ಬರಬೇಕೆಂದು ನಿರೀಕ್ಷಿಸಿ ಪಟ್ಟಕ್ಕೆ ಕೂತವರಲ್ಲ. ಎಲ್ಲೆಲ್ಲಿ ಭಗವತ್‌ಪರವಾದ ಸತ್ಸಂಗ ಗೋಷ್ಠಿಗಳೂ ಉತ್ಸವಗಳೂ ನಡೆಯುತ್ತಿದ್ದವೋ ಅಲ್ಲಿಗೆ, ಭಕ್ತಾದಿಗಳ ಹಾಗೂ ಪಂಡಿತರ ಮನೆಗಳಿಗೆ ತಾವಾಗಿಯೇ-ಕೆಲವು ವೇಳೆ ಮುಂದಾಗಿ ತಿಳಿಸದೆಯೇ- ಹೋಗುವ ಸರಳತೆಯನ್ನು ಪ್ರಕಟಿಸುತ್ತಿದ್ದರು. ಒಂದೊಂದು ಸಲ ಸರ್ಕಸ್ ಮತ್ತು ನಾಟಕಗಳಿಗೂ ಶಿಷ್ಯರ ಸಮೇತ ಹೋಗಿ ಬರುತ್ತಿದ್ದರು! ಒಮ್ಮೆ ಸರ್ಕಸ್‌ಗೆ ಹೋಗಿಬಂದ ನಂತರ ಮಾಸ್ಟರಿಗೆ ಹೇಳಿದರು: “ಓಡುವ ಕುದುರೆಯ ಮೇಲೆ ಒಂಟಿಕಾಲಲ್ಲಿ ನಿಂತ ಆ ಮಹಿಳೆಯ ಸಾಹಸವನ್ನು ನೋಡಿದೆಯಾ?… ಅದು ಎಂಥ ಕಷ್ಟಕರವಾದ ಕಾರ್ಯ! ಆಕೆ ಬಹಳ ಕಾಲ  ಆಭ್ಯಾಸ ಮಾಡಿರಬೇಕು. ಒಂದು ಸ್ವಲ್ಪವೇನಾದರೂ ಅಜಾಗರೂಕಳಾದರೂ ಕೈಕಾಲು ಮುರಿಯುವ ಸಂಭವ; ಪ್ರಾಣವೂ ಹೋಗುವ ಸಂಭವ. ಸಂಸಾರಿಯ ಜೀವನವೂ ಇದೇ ರೀತಿಯಾಗಿ ಕಠಿಣವಾದದ್ದು. ಎಲ್ಲೋ ಕೆಲವರು ಮಾತ್ರ ಭಗವಂತನ ಕೃಪೆಯಿಂದ ಮತ್ತು ತೀವ್ರಸಾಧನೆ ಭಜನೆಯ ಬಲದಿಂದ ಜಯಶೀಲರಾಗುತ್ತಾರೆ. ಆದರೆ ಆಧಿಕಾಂಶ ಜನರಿಗೆ ಇದು ಸಾಧ್ಯವಿಲ್ಲ.” ಸರ್ಕಸ್ಸಿನ ಒಂದು ದೃಶ್ಯ, ಅವರ ಉಪದೇಶದೊಳಗೆ ದೃಷ್ಟಾಂತವಾಗಿ ಸೇರಿಕೊಂಡದ್ದು ಹೀಗೆ. ಅವರ ಭಕ್ತನಾದ ಗಿರೀಶ್‌ಚಂದ್ರ ಘೋಷ್ ಬಂಗಾಲದ ಬಹುದೊಡ್ಡ ನಾಟಕಕಾರ. ಆತನೇ ಬರೆದು ಪ್ರದರ್ಶಿಸಿದ, ಶ್ರೀಚೈತನ್ಯದೇವನನ್ನು ಕುರಿತ ನಾಟಕವನ್ನು ರಾಮಕೃಷ್ಣರು ಶಿಷ್ಯರ ಜತೆ ಹೋಗಿ ನೋಡಿ ಬಂದರು. ಸಾಮಾನ್ಯವಾಗಿ, ಸಂನ್ಯಾಸಿಗಳಾದವರು ತಮಗೆ ತಾವೇ ವಿಧಿಸಿಕೊಳ್ಳುವ ವಿಧಿ-ನಿಷೇಧಗಳೊಂದೂ ರಾಮಕೃಷ್ಣರಿಗೆ ಇರಲಿಲ್ಲ; ಯಾಕೆಂದರೆ ಅವರು ಜನರು ಸಾಮಾನ್ಯವಾಗಿ ಅರ್ಥೈಸುವ ಸನ್ಯಾಸಿಯಂತಿರಲಿಲ್ಲ. ಮದುವೆ-ಯಾಗಿದ್ದರೂ ದಾಂಪತ್ಯದ ಸಾಂಪ್ರದಾಯಿಕ ನೆಲೆಯನ್ನು ದಾಟಿದ ಹಾಗೂ ದಾಂಪತ್ಯ ಜೀವನಕ್ಕೊಂದು ಹೊಸ ಆದರ್ಶವನ್ನು ಕೊಟ್ಟ, ದೇವಸ್ಥಾನದಲ್ಲಿದ್ದೂ, ದೇವಸ್ಥಾನದ ಗಡಿಯನ್ನು ಮೀರಿದ ಪ್ರಜ್ಞೆಯುಳ್ಳ, ಸಾಕಾರದ ಮೂಲಕ ನಿರಾಕಾರದ ನೆಲೆಯನ್ನು ತಲುಪಿದ, ಹಾಗೂ ಸಾಕಾರ ನಿರಾಕಾರಗಳೆರಡೂ ಸತ್ಯವೆಂದು ಸಾರಿ, ಅಧ್ಯಾತ್ಮ ಮತ್ತು ಲೌಕಿಕದ ನೆಲೆಗಳಲ್ಲಿ- ಲೀಲಾಜಾಲವಾಗಿ ವಿಹರಿಸುವ ಹಂಸಯೋಗದಲ್ಲಿ ಬದುಕಿದವರು ಶ್ರೀರಾಮಕೃಷ್ಣರು.

ನಮಗೆ ತೋರುವ ಮಟ್ಟಿಗೆ ಶ್ರೀರಾಮಕೃಷ್ಣರ ವ್ಯಕ್ತಿತ್ವವು ಪುರಾಣ, ವಾಸ್ತವ ಮತ್ತು ಅತೀತಗಳ ಒಂದು ಅಪೂರ್ವ ಸಂಯೋಗ ಎನ್ನಬಹುದು. “ಪುರಾಣ” ಎಂದರೆ, ಭಾಗವತಾದಿ ಹದಿನೆಂಟು ಪುರಾಣಗಳು ಎಂದಲ್ಲ; ಶ್ರೀರಾಮಕೃಷ್ಣರ ಬದುಕಿನಲ್ಲಿ ಸಂಭವಿಸಿದ ಎಷ್ಟೋ ಘಟನೆಗಳು ಪುರಾಣಸದೃಶವಾಗಿವೆ ಅನ್ನುವುದು ಒಂದರ್ಥವಾದರೆ, “ಪುರಾಣ” ಅನ್ನುವ ಪದಕ್ಕೆ “ಪ್ರಾಚೀನ” ಎಂಬ ನಿಜವಾದ ಅರ್ಥವೂ ಇರುವುದರಿಂದ, ಶ್ರೀರಾಮಕೃಷ್ಣರ ಅನುಭವಗಳಲ್ಲಿ ಈ ಭಾರತದ ಪರಂಪರೆಯನ್ನು ರೂಪಿಸಿರುವ ವೇದ-ಶಾಸ್ತ್ರ-ಪುರಾಣಾಗಮಗಳ ಸತ್ವವೂ ಹೇಗೆ ಪುನರನುಭೂತವಾಗಿ, ಪುನರಭಿನಯಿತವಾಗಿ, ಪುನರ್ ವ್ಯಾಖ್ಯಾನಗೊಂಡಿದೆ ಎನ್ನುವುದನ್ನು ನಾವು ಗುರುತಿಸಬಹುದಾಗಿದೆ. ಹಾಗೆಯೇ “ವಾಸ್ತವ” ಅಂದರೆ, ಈಗಾಗಲೇ ಪ್ರಸ್ತಾಪಿಸಿದ ಹಾಗೆ ಈ ವಾಸ್ತವ ಭೂಮಿಕೆಯಲ್ಲಿ ಮಾನುಷ್ಯದ ಮಿತಿಯನ್ನು ಗೌರವಿಸುತ್ತ ಸರಳ ಸಾಧಾರಣರಂತೆ ನಡೆದುಕೊಂಡ ಕ್ರಮ ಎಂದಷ್ಟೆ ಅಲ್ಲದೆ, ತಮ್ಮ ಬದುಕಿನ ಕಾಲಮಾನಕ್ಕೆ ಅವರು ಸ್ಪಂದಿಸಿದ ಹಾಗೂ ನಡೆಯಿಸಿದ ವಿವಿಧ ಪ್ರಯೋಗಗಳ ಮತ್ತು ತಮ್ಮ ಉಪದೇಶಗಳ ಮೂಲಕ ಭಕ್ತರನ್ನೂ ಶಿಷ್ಯರನ್ನೂ ನೂತನ ಆಧ್ಯಾತ್ಮಿಕ ಜಾಗ್ರತಿಗೆ ತಂದ ಅವರ ದಿವ್ಯಜೀವನದ ಪ್ರಸಂಗಗಳು -ಎಂದು ಅರ್ಥ. ಹಾಗೆಯೇ “ಅತೀತ” ಎಂದರೆ, ಅವರು ತಮ್ಮ ಆಧ್ಯಾತ್ಮಿಕ ಸಾಧನೆಯ ಮೂಲಕ ಯಾವ ಒಂದು ಅದ್ವೆ ತದ ನೆಲೆಗೆ ಏರಿದರೋ, ಆ ಒಂದು ನೆಲೆಯನ್ನು ನಿರಂತರವಾಗಿ ತಮ್ಮ ಅಸ್ತಿತ್ವದ ಒಂದು ಭಾಗವನ್ನಾಗಿಸಿಕೊಂಡು ಬದುಕಿದ ಒಂದು ಅವಸ್ಥಾವಿಶೇಷ ಎನ್ನಬಹುದು.

ಶ್ರೀರಾಮಕೃಷ್ಣರಿಗೆ ತಾವು ಬಾಲಕರಾಗಿದ್ದಾಗ ಆದ ಅತೀತದ ಮೊಟ್ಟಮೊದಲ ಅನುಭವ, ದಟ್ಟವಾದ ಕಪ್ಪುಮೋಡಗಳ ಹಿನ್ನೆಲೆಯಲ್ಲಿ ಹಾರಿದ ಬೆಳ್ಳಕ್ಕಿಗಳ ಪಂಕ್ತಿಯೊಂದನ್ನು ಕಂಡಾಗ ಸಂಭವಿಸಿದ್ದು. ಇದು ಮೂಲತಃ ಸೌಂದರ್ಯದ ಉತ್ಕಟವಾದ ಪ್ರಭಾವವೊಂದು, ಅದರ ಮೂಲಸತ್ವವಾದ ಭಗವಂತನ ಕಡೆಗೆ ಕವಿ-ಕಲೆಗಾರರನ್ನು ಸೆಳೆಯುವ ಕ್ರಮ. ಈ ಅರ್ಥದಲ್ಲಿ ಶ್ರೀರಾಮಕೃಷ್ಣರು ಜನ್ಮಜಾತ ಕಲೆಗಾರರು. ಎರಡನೆಯ ಬಾರಿಗೆ ಅವರಿಗೆ ಆದ ಅತೀತಾನುಭವ, ತಮ್ಮ ಎಳೆಯಂದಿನಲ್ಲಿ ಶಿವರಾತ್ರಿಯ ದಿನದಂದು, ರಂಗಸ್ಥಲದ ಮೇಲೆ, ಶಿವನ ವೇಷಧಾರಿಯಾದ (ಇಲ್ಲೂ ನಟ ಅಥವಾ ಕಲೆಗಾರನೇ) ಸಮಯದಲ್ಲಿ ಸಾಕ್ಷಾತ್ ಶಿವನೊಂದಿಗೆ ಪಡೆದ ತಾದಾತ್ಮ್ಯಾನುಭವದ ಸಂದರ್ಭದ್ದು. ಮೂರನೆಯದು, ದಕ್ಷಿಣೇಶ್ವರದ ಕಾಳೀದೇವಸ್ಥಾನದಲ್ಲಿ ತಾಯಿಯ ಸಾಕ್ಷಾತ್ಕಾರಕ್ಕಾಗಿ ಹಂಬಲಿಸಿ, ತಾಯಿಯ ದರ್ಶನವಾಗದಿದ್ದಮೇಲೆ, ಈ ಜೀವ ಬದುಕಿದ್ದೂ ವ್ಯರ್ಥವೆಂದು, ತಮ್ಮ ಬದುಕನ್ನು ತಾವೇ ಕೊನೆಗಾಣಿಸಲು ತೀರ್ಮಾನಿಸಿದಾಗ ಆದ ಅತೀತದ ಅನುಭವ. ಆದರೆ ನಾಮ, ರೂಪ, ಗುಣಗಳನ್ನು ಮೀರಿದ “ಅತೀತಾನುಭವ”ವನ್ನು ಪಡೆಯಲು, ಮಹಾ ಅದ್ವೆ ತಯೋಗಿಯಾದ ತೋತಾಪುರಿ ಬರುವವರೆಗೂ ಅವರು ಕಾಯಬೇಕಾಯಿತು; ಆಗ ನಿರ್ವಿಕಲ್ಪಸ್ಥಿತಿಯ ಅತೀತಾನುಭವವನ್ನು ಅವರು ತಮ್ಮದನ್ನಾಗಿ ಮಾಡಿಕೊಂಡರು.

ಒಂದು ಪುರಾಣಸ್ಮರಣೆ, ಒಂದು ಹಾಡಿನ ಚರಣ, ಯಾವುದೋ ಒಂದು ದೃಶ್ಯ ಥಟ್ಟನೆ ಅವರನ್ನು “ವಾಸ್ತವ”ದಿಂದ “ಅತೀತ”ದ ನೆಲೆಗೆ ಏರಿಸುವ ಎಷ್ಟೋ ಸಂದರ್ಭಗಳನ್ನು ಮಾಸ್ಟರ್ ಮಹಾಶಯ “ಶ್ರೀರಾಮಕೃಷ್ಣವಚನವೇದ”ದಲ್ಲಿ ದಾಖಲಿಸಿರುವುದನ್ನು ಯಾರಾದರೂ ಗಮನಿಸಬಹುದು. ಹಾಗೆ ನೋಡಿದರೆ, ಪುರಾಣ-ವಾಸ್ತವ- ಅತೀತಗಳು ಶ್ರೀರಾಮಕೃಷ್ಣರ ಇಡೀ ವ್ಯಕ್ತಿತ್ವದಲ್ಲಿ ಏಕಕಾಲಕ್ಕೆ ಕಾಣಿಸಿಕೊಳ್ಳುವ ಮತ್ತು ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲವೆಂಬಂಥ ಬದುಕು ಅವರದು ಎನ್ನಬಹುದು.

ಶ್ರೀರಾಮಕೃಷ್ಣರ ಜೀವನವನ್ನೂ ಅವರ ಆಧ್ಯಾತ್ಮಿಕ ಅನುಭವಗಳ ಕಥನವನ್ನೂ ನಾವು ಓದುತ್ತಿದ್ದರೆ, ನಾವು ವಾಸ್ತವವೆಂದು ತಿಳಿದುಕೊಂಡ ಈ ಜಗತ್ತು ಎಷ್ಟೊಂದು ಅತಿವಾಸ್ತವವೂ ಪೌರಾಣಿಕವೂ ಎಂಬಂಥ ಘಟನೆಗಳಿಂದ ಕೂಡಿದೆ ಎಂಬುದು ನಮ್ಮನ್ನು ಚಕಿತಗೊಳಿಸುತ್ತದೆ. ಶ್ರೀರಾಮಕೃಷ್ಣರ ಜನನಪೂರ್ವದಲ್ಲಿ ಅವರ ತಂದೆ ತಾಯಂದಿರಿಗೆ ಆದ ಅನೇಕ ದರ್ಶನಗಳೂ, ದೈವೀವಾಣಿಯ ಆಶ್ವಾಸನೆಗಳೂ ಮತ್ತು ರಾಮಕೃಷ್ಣರಿಗೆ ಆದ ಸಾಕ್ಷಾತ್ಕಾರಗಳೂ, ಕಣ್ಣೆದುರಿಗೆ ಪ್ರತ್ಯಕ್ಷವಾಗುವ ಕಾಣ್ಕೆಗಳೂ ಅವರು ತಮ್ಮ ಹಿಂದೆ ಇರುವ ಅಜ್ಞಾತವಾದ ಪ್ರಾಚೀನಪರಂಪರೆಯೊಂದಕ್ಕೆ ಸಂಬಂಧಿಸಿದವರೆಂಬ ಪ್ರಜ್ಞೆಯಿಂದಲೇ ಸಂಭವಿಸಿದಂತೆ ತೋರುತ್ತದೆ. ಕಾಳಿ ದೇವಾಲಯದಿಂದ, ಒಂದು ಬೆಳ್ದಿಂಗಳಿರುಳಿನಲ್ಲಿ, ಮಹಾಮಾತೆ ಕಾಳಿಯು, ಕಾಲಿನ ಗೆಜ್ಜೆಯ ಝಣತ್ಕಾರದೊಂದಿಗೆ ಮೆಟ್ಟಿಲೇರಿ ಉಪ್ಪರಿಗೆಯ ಮೇಲೆ ನಿಂತು, ತನ್ನ ಬಿಡು ಮುಡಿಯನ್ನು ಬೆನ್ನಮೇಲೆ ಹರಹಿಕೊಂಡು ಕಲ್ಕತ್ತದ ಕಡೆ ನೋಡುತ್ತಿದ್ದುದನ್ನು ಕಂಡೆನೆಂದು ಹೇಳುವ ಉಕ್ತಿಯಾಗಲಿ, ಒಂದು ದಿನ ಪಂಚವಟಿಯ ಕಡೆಯಿಂದ ಮಹಾಪ್ರಭು ಚೈತನ್ಯದೇವನ ಸಂಕೀರ್ತನೆಯ ತಂಡವೊಂದು ತಮ್ಮ ಎದುರಿಗೇ ಹೋಯಿತೆಂಬ ಮಾತಾಗಲೀ, ಬುದ್ಧ, ರಾಮ, ಏಸು, ಪೈಗಂಬರ್ ಮೊದಲಾದ ಪ್ರಾಚೀನ ಮಹಾವ್ಯಕ್ತಿಗಳು ಅವರವರನ್ನು ಸಾಕ್ಷಾತ್ಕರಿಸಿಕೊಂಡ ಸಂದರ್ಭದಲ್ಲಿ ವಾಸ್ತವವೆಂಬಂತೆ ಕಾಣಿಸಿಕೊಂಡು ತಮ್ಮೊಳಗೆ ಪ್ರವೇಶಿಸಿದರೆಂಬ ವರ್ಣನೆ- ಯಾಗಲೀ-ಇವು ಶ್ರೀರಾಮಕೃಷ್ಣರು ಹೇಗೆ ಪುರಾಣ ಅಥವಾ ಪ್ರಾಚೀನದೊಂದಿಗೆ, ವಾಸ್ತವದ ನೆಲೆಯಲ್ಲೇ ಅನುಸಂಧಾನ ನಡೆಯಿಸಬಲ್ಲ ಸಾಮರ್ಥ್ಯವನ್ನು ಪಡೆದು- ಕೊಂಡಿದ್ದರೆಂಬುದರ ಕೆಲವು ನಿದರ್ಶನಗಳಾಗಿವೆ.

ಅವರ ಸಮಕಾಲೀನ ವಾಸ್ತವಕ್ಕೆ ಸೇರಿದ ಸಂತರೂ ಪಂಡಿತೋತ್ತಮರೂ,  ಶಿಷ್ಯರೂ ಅವರನ್ನು ಪರಿಭಾವಿಸುವುದು ಹಾಗೂ ವರ್ಣಿಸುವುದೂ ಪುರಾಣದ ಪರಿಭಾಷೆಯಲ್ಲೇ. ಗೌರೀಪಂಡಿತ ಮತ್ತು ವೈಷ್ಣವಚರಣ ಮೊದಲಾದ ಶಾಸ್ತ್ರವೇತ್ತರು, “ಯಾರ ಅಂಶದಿಂದ ಯುಗಯುಗವೂ ಅವತಾರಪುರುಷರು ಲೋಕ ಕಲ್ಯಾಣಕ್ಕಾಗಿ ಬರುವರೋ, ಯಾರ ಶಕ್ತಿಯಿಂದ ಅವರು ಈ ಕೆಲಸವನ್ನು ಸಾಧಿಸುವರೋ, ಆ ಸತ್ಯವೇ ನೀವಾಗಿರುವಿರಿ”- ಎಂದು ಶ್ರೀರಾಮಕೃಷ್ಣರನ್ನು ವರ್ಣಿಸುತ್ತಾರೆ. ಶ್ರೀರಾಮಕೃಷ್ಣರ ಕೊನೆಯ ದಿನಗಳಲ್ಲಿ ಒಮ್ಮೆ ಕಾಶೀಪುರದ ತೋಟದಲ್ಲಿ, ಅವರ ಪರಮ ಭಕ್ತನಾದ ಗಿರೀಶ್‌ಚಂದ್ರ ಘೋಷನು ಅವರೆದುರು ಮಂಡಿಯೂರಿ, ಕೈಜೋಡಿಸಿ ಗದ್ಗದ ಸ್ವರದಿಂದ “ವ್ಯಾಸ-ವಾಲ್ಮೀಕಿಗಳು ಕೂಡ ಯಾರ ವೈಭವವನ್ನು ಅಳೆಯಲಾರದೆ ಹೋದರೋ, ಅಂಥವರ ಬಗ್ಗೆ ನಾನೇನು ಹೇಳಲು ಸಾಧ್ಯ?” ಎಂದು ಸ್ತುತಿಸುತ್ತಾನೆ. ಭೈರವಿ ಬ್ರಾಹ್ಮಣಿಯು ಪಂಡಿತರ ಮಹಾಸಭೆಯೊಂದನ್ನು ಕರೆದು, ಶಾಸ್ತ್ರಗಳ ಆಧಾರದಿಂದ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಅನುಭವಗಳನ್ನು ವಿಶ್ಲೇಷಿಸಿ ಶ್ರೀರಾಮಕೃಷ್ಣರು ಒಬ್ಬ ಅವತಾರಪುರುಷರೆಂದು ಘೋಷಿಸುತ್ತಾಳೆ. ಸ್ವಾಮಿ ವಿವೇಕಾನಂದರು, “ಶಂಕರಾಚಾರ್ಯರ ನಿಶಿತಮತಿ, ಚೈತನ್ಯ ಮತ್ತು ರಾಮಾನುಜಾಚಾರ್ಯರ ಉದಾರಹೃದಯವಂತಿಕೆ – ಇವುಗಳು ಮೇಳೈಸಿದ ಮಹಾವ್ಯಕ್ತಿ ಶ್ರೀರಾಮಕೃಷ್ಣರು” ಎಂದು ಪ್ರಶಂಸಿಸಿದ್ದಲ್ಲದೆ, ಅವರನ್ನು “ಅವತಾರ ವರಿಷ್ಠ” ಎಂದು ಸ್ತುತಿಸಿ, ಶ್ರೀರಾಮಕೃಷ್ಣರ ವ್ಯಕ್ತಿತ್ವ ಹೇಗೆ ಪ್ರಾಚೀನತೆಯ ಅಥವಾ ಪುರಾಣದ ಪುನರಾವಿರ್ಭಾವವಾಗಿದೆ ಎಂಬುದನ್ನು ಗುರುತಿಸುತ್ತಾರೆ.

ಶ್ರೀರಾಮಕೃಷ್ಣರ ಹಿಂದೆ ಪ್ರಸ್ತುತ ವರ್ತಮಾನದ ನಿರ್ಲಕ್ಷ ಕ್ಕೆ ಗುರಿಯಾದ ಪುರಾಣ ಅಥವಾ ಪ್ರಾಚೀನ ಭಾರತವೂ, ಪಶ್ಚಿಮದ ಪ್ರಭಾವದಿಂದ ತನ್ನ ವ್ಯಕ್ತಿತ್ವವನ್ನೇ ಮರೆತು, ಸಂದೇಹ-ಗೊಂದಲ ಹಾಗೂ ಕೀಳರಿಮೆಗೊಳಗಾದ “ವಾಸ್ತವ”ವೂ ಇತ್ತು. ಇಂಥ ಕಾಲದಲ್ಲಿ ಪುರಾಣ ಅಥವಾ ಪ್ರಾಚೀನ ಭಾರತವನ್ನು ತಮ್ಮ ಸ್ವಾನುಭವದ ಸಾಧನೆಯ ಬೆಳಕಿನಲ್ಲಿ ಪ್ರಯೋಗ-ಪರೀಕ್ಷೆಗಳಿಗೆ ಗುರಿಪಡಿಸಿ ಅದರೊಳಗಿನ ಮೌಲಿಕಾಂಶಗಳನ್ನು ಜಗತ್ತಿಗೆ ತೋರಿಸುವ ಜವಾಬ್ದಾರಿಯನ್ನು ಶ್ರೀರಾಮಕೃಷ್ಣರು ವಹಿಸಿಕೊಂಡರು.

ಸ್ವಾರಸ್ಯದ ಸಂಗತಿ ಎಂದರೆ ಅವರು ಆಧುನಿಕ ಯುಗದ ಈ ಸವಾಲನ್ನು ಅಂಗೀಕರಿಸಿದ್ದು, “ಹಣ ಗಳಿಸಿಕೊಡುವ ವಿದ್ಯೆಯ” ನಿರಾಕರಣೆಯಿಂದ! “ನನಗೆ ಹಣಸಂಪಾದನೆಯ ವಿದ್ಯೆ ಬೇಡ. ಯಾವುದರಿಂದ ಮನುಷ್ಯ ನಿಜವಾದ ಜ್ಞಾನವನ್ನು ಪಡೆದು ಕೃತಾರ್ಥನಾಗುತ್ತಾನೋ ಅಂಥ ವಿದ್ಯೆ ನನಗೆ ಬೇಕು” ಎಂದು ಘೋಷಿಸಿ ನಿಜವಾದ ವಿದ್ಯೆಯ “ಭಗವಂತನನ್ನು ಅರಿಯುವಿಕೆಯೇ ಜ್ಞಾನ. ಅರಿಯದಿರುವಿಕೆಯೇ ಅಜ್ಞಾನ” ಎಂಬ ತಿಳಿವಳಿಕೆಯ-ಮೂಲನಿಧಿಯಾದ ಅಧ್ಯಾತ್ಮ ಸಾಧನೆಗೆ ತೊಡಗಿ ಅತೀತದ ಅಮೃತ ಸಮುದ್ರಾನುಭವದ ದರ್ಶನವನ್ನು ಸಾಕ್ಷಾತ್ಕರಿಸಿಕೊಂಡರು. ಹಿಂದೂಧರ್ಮದ ವಿವಿಧ ಪಂಥಗಳ ಸಾಧನೆಯನ್ನು ಕೈಗೊಂಡು ಅವುಗಳೆಲ್ಲವುಗಳ ಗುರಿ ಒಂದೇ ಎಂಬುದನ್ನು ಕಂಡುಕೊಂಡರು. ಅಷ್ಟೇ ಅಲ್ಲ, ಜಗತ್ತಿನ ಬೇರೆ ಬೇರೆ ಧರ್ಮಗಳ-ಮುಸ್ಲಿಂ, ಕ್ರೈಸ್ತ -ಸಾಧನೆಗಳನ್ನೂ ಕೈಕೊಂಡು ಅವುಗಳ ಸತ್ಯವನ್ನು ಸಾಕ್ಷಾತ್ಕರಿಸಿ ಕೊಂಡರು. ಹೀಗೆ ವಿವಿಧ ಧರ್ಮಗಳ, ಹಾಗೂ ವಿವಿಧ ಯೌಗಿಕ ಪಥಗಳ ಅನುಭವಗಳನ್ನು ಒಂದಾದ ಮೇಲೊಂದರಂತೆ ಕರಗತಮಾಡಿಕೊಂಡ ಶ್ರೀರಾಮಕೃಷ್ಣರ ಸಾಧನೆಗಳು ಯಾರನ್ನಾದರೂ ಬೆರಗುಗೊಳಿಸುವ ಸಾಹಸಗಳಂತಿವೆ.

ಶ್ರೀರಾಮಕೃಷ್ಣರು ತಮ್ಮ ಸಾಧನೆಯ ಸಮಯದಲ್ಲಿ ಯಾವ ಯಾವ ಅವಸ್ಥೆಗಳನ್ನು ಪಡೆದರೋ ಅವೆಲ್ಲವೂ ಪ್ರಾಚೀನ ಶಾಸ್ತ್ರಸಮ್ಮತವಾಗಿಯೇ ಇರುವುವೆಂಬುದು ಮಾತ್ರವಲ್ಲ, ಇನ್ನೂ ಶಾಸ್ತ್ರಗಳಲ್ಲಿ ಉಕ್ತವಾಗದ ಅದೆಷ್ಟೋ ಅನುಭವಗಳನ್ನು ಶ್ರೀರಾಮ ಕೃಷ್ಣರು ಪಡೆದುಕೊಂಡಿದ್ದಾರೆ ಎಂದು ಭೈರವಿ ಬ್ರಾಹ್ಮಣಿ, ಗೌರಿಪಂಡಿತ, ವೈಷ್ಣವಚರಣ ಮೊದಲಾದ ಶಾಸ್ತ್ರಜ್ಞರು ಘೋಷಿಸಿದರು. ಅಷ್ಟೇ ಅಲ್ಲ, ಅವರ ನಿರಂತರ ಮಾತು-ಕತೆಗಳ ಕಾಲದಲ್ಲಿ ಪ್ರಾಚೀನ ವೇದೋಪನಿಷತ್ತುಗಳ ಕಾಲದ ತಿಳಿವಳಿಕೆಯೆಲ್ಲ ಹೊಸ ಹೊಸ ಅರ್ಥವಂತಿಕೆಯಿಂದ, ಸರಳವಾದ, ಸ್ವಾದುವಾದ ರೀತಿಯಲ್ಲಿ ಅಭಿವ್ಯಕ್ತ- ವಾಗುತ್ತಿದ್ದುದನ್ನು ಶಿಷ್ಯರೂ ಭಕ್ತರೂ ಬೆರಗಾಗಿ ಕೇಳುತ್ತಿದ್ದರು. ಭಗವಂತ ಸಾಕಾರನೋ ನಿರಾಕಾರನೋ ಎಂಬ ವಿಷಯದ ಬಗ್ಗೆ ಸಾಕಷ್ಟು ಗೊಂದಲವಿದ್ದ ಕಾಲದಲ್ಲಿ, ಶ್ರೀರಾಮಕೃಷ್ಣರು, “ತಿಳಿದುಕೋ. ಸಾಕಾರವೂ ಸತ್ಯ, ನಿರಾಕಾರವೂ ಸತ್ಯ; ನಿನಗೆ ಯಾವುದರಲ್ಲಿ ವಿಶ್ವಾಸವೋ ಅದರಲ್ಲಿ ದೃಢ ಬುದ್ಧಿಯಿಡು” ಎಂದು ಹೇಳಿದಾಗ, ಆಧುನಿಕ ಶಿಕ್ಷಣವನ್ನು ಪಡೆದ ಮಾಸ್ಟರ್ ಮಹಾಶಯನು ತಾನು ಓದಿದ ಪುಸ್ತಕರಾಶಿಯಾವುದೂ ಈ ವಿಷಯವನ್ನು ತಿಳಿಸಿರಲಿಲ್ಲವಲ್ಲ ಎಂದು ಬೆರಗಾಗುತ್ತಾನೆ. ಬ್ರಹ್ಮ ಎಂದರೇನೆಂದು ಹೇಳುವಾಗ, ಅದೊಂದು ಮಹಾಸಮುದ್ರ ಎಂದೂ, ಅದನ್ನು ವಿವರಿಸುವ ಪ್ರಯತ್ನಗಳೇನಿದ್ದರೂ ಉಪ್ಪಿನ ಬೊಂಬೆಯೊಂದು ಸಮುದ್ರದಾಳ-ವನ್ನರಿಯಲು ಪ್ರಯತ್ನಿಸಿದಂತೆ ಎನ್ನುತ್ತಾರೆ. ಈ ಸಮುದ್ರ ಸಮಸ್ತರೂಪಗಳಿಗೂ ಮಾತೃಕೆಯಾದ ಬ್ರಹ್ಮಾನುಭವ. ಭಕ್ತನ ಭಕ್ತಿಯ ಶೈತ್ಯದ ಕಾರಣದಿಂದ  ಈ ಸಮುದ್ರವೇ ಅಲ್ಲಲ್ಲಿ ಘನೀಭವಿಸುತ್ತದೆ; ಇದೇ  ಭಗವಂತ “ಸಾಕಾರ” ಎನ್ನುವುದರ ಅರ್ಥ ಎಂದೂ ಅವರು ಹೇಳುತ್ತಾರೆ. ಸಾಕಾರ-ನಿರಾಕಾರ ಎರಡೂ ಸತ್ಯ ಎನ್ನುವ ಸಂಗತಿಯನ್ನು ಅವರು ಸಮುದ್ರರೂಪಕದ ಮೂಲಕ ಸ್ಪಷ್ಟಪಡಿಸುತ್ತಾರೆ.

ಅಂದಿನ ಮಹಾ ವಿದ್ವಾಂಸನಾದ ವೈಷ್ಣವಚರಣ ಹೇಳಿದ: “ನೀವು ಆಡುವ ಮಾತುಗಳನ್ನೆಲ್ಲ ಶಾಸ್ತ್ರದಲ್ಲಿ ಕಾಣಬಹುದು, ಆದರೆ ನಾನೇಕೆ ಬರುತ್ತಿದ್ದೇನೆ ಗೊತ್ತೆ? ಅವುಗಳನ್ನು ನಿಮ್ಮ ಬಾಯಲ್ಲಿ ಕೇಳಲು.” ಶ್ರೀರಾಮಕೃಷ್ಣರ ಜೀವನ ಚರಿತ್ರೆಯನ್ನು ಬರೆದ ಫ್ರೆಂಚ್ ಮಹಾಲೇಖಕ ರೊಮೈರೋಲಾ, “ಯಾವುದೇ ಪುಸ್ತಕವನ್ನೋದದ, ತಮ್ಮ ಹೆಸರನ್ನು ರುಜುಮಾಡಲಾರದಷ್ಟು ಅನಕ್ಷರಸ್ಥರಾದ, ಆದರೆ ತಮ್ಮ ಬೌದ್ಧಿಕತೆಯಲ್ಲಿ ವಿಶ್ವವಿದ್ಯಾಲಯದ ವಿದ್ವಾಂಸರನ್ನೂ ಬೆರಗುಗೊಳಿಸಬಲ್ಲ ವ್ಯಕ್ತಿ ಈತ,” ಎಂದು ಶ್ರೀರಾಮಕೃಷ್ಣರನ್ನು ವರ್ಣಿಸುತ್ತಾನೆ. ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದರು: “ಈ ಬಾರಿ ಶ್ರೀರಾಮಕೃಷ್ಣರು ನಿರಕ್ಷರರಾಗಿ ಬಂದಿರುವುದಕ್ಕೆ ಕಾರಣ, ವೇದ ವೇದಾಂತ ಮತ್ತು ಇತರ ಧರ್ಮಗ್ರಂಥಗಳಲ್ಲಿ ಹೇಳಿರುವ ಆಧ್ಯಾತ್ಮಿಕ ಸ್ಥಿತಿಗಳೆಲ್ಲವೂ ಸತ್ಯ ಮತ್ತು ವಾಸ್ತವ ಎಂಬುದನ್ನೂ, ಎಲ್ಲ ಮಾರ್ಗಗಳ ಮೂಲಕ ನಡೆದರೆ ಮನುಷ್ಯನು ಅದೇ ರೀತಿಯ ಸ್ಥಿತಿಯನ್ನು ತಲುಪಬಲ್ಲನೆನ್ನುವುದನ್ನೂ ಪ್ರಮಾಣೀಕರಿಸುವುದಕ್ಕಾಗಿ.”

ಈ ಎಲ್ಲದರಿಂದ ನಿಷ್ಟನ್ನವಾಗುವ ಸಂಗತಿಯೇನೆಂದರೆ, ಶ್ರೀರಾಮಕೃಷ್ಣರ ಇಡೀ ಜೀವನವೇ ಯೋಗವಿಜ್ಞಾನದ ಒಂದು ಮಹಾ ಪ್ರಯೋಗಶಾಲೆಯಂತಿದೆ. ಅವರು ತಮ್ಮ ಪ್ರಯೋಗಗಳ ಮೂಲಕ ವಿವಿಧ ಧರ್ಮಗಳನ್ನು ಪರೀಕ್ಷಿಸಿ, ಅವುಗಳ ಏಕತೆಯನ್ನೂ ಮೌಲಿಕತೆಯನ್ನೂ ಎತ್ತಿ ಹಿಡಿದದ್ದು ವಿಜ್ಞಾನಯುಗದ ಧೋರಣೆಗೆ ಸಮ್ಮತವಾಗಿದೆ. ಅಷ್ಟೇ ಅಲ್ಲ, ತಮಗೆ ಹಿಂದಿನ ಪರಂಪರಾಗತವಾದ ವಿವಿಧ ಯೌಗಿಕ ಅನುಭವಗಳನ್ನು ತಮ್ಮ ಸಾಧನೆಯ ಮೂಲಮಾನದಲ್ಲಿ ಪುನಃ ಪರೀಕ್ಷಿಸಿ, ಅವುಗಳ ಪ್ರಾಮಾಣಿಕತೆಯನ್ನು ದೃಢಪಡಿಸಿಕೊಂಡದ್ದು ವಿಶೇಷದ ಸಂಗತಿಯಾಗಿದೆ. ಇದಲ್ಲದೆ ಆ ಹಿಂದಿನ ಅನುಭವಗಳನ್ನು ದಾಖಲಿಸಿದ ಹಾಗೂ ವ್ಯಾಖ್ಯಾನಿಸಿದ ಶಾಸ್ತ್ರಗಳ ಪ್ರಾಮಾಣ್ಯವನ್ನೂ ತಮ್ಮ ಅನುಭೂತಿಯ ಮೂಲಕ ಪರೀಕ್ಷಿಸಿ ಅವುಗಳ ಇತಿಮಿತಿಗಳನ್ನು ತೋರಿಸಿಕೊಟ್ಟರು. ಇದು ಪುರಾಣ ಅಥವಾ ಪ್ರಾಚೀನವನ್ನು, ಶ್ರೀರಾಮಕೃಷ್ಣರು ತಮ್ಮ ವಾಸ್ತವದ ನೆಲೆಯಲ್ಲಿ ಪರಿಶೋಧಿಸಿದ ಕ್ರಮ. ಅಷ್ಟೇ ಅಲ್ಲ, ಅವರು ತಮ್ಮ ಅನುಭವಗಳು ಪ್ರಶ್ನಾತೀತವೆನ್ನಲಿಲ್ಲ; ಬದಲಿಗೆ “ನನ್ನ ಸಾಕ್ಷಾತ್ಕಾರಗಳನ್ನು ಸಂದೇಹಿಸುವ ಯಾರನ್ನಾದರೂ ಕಳುಹಿಸು” ಎಂದು ತಾಯಿ ಕಾಳಿಯನ್ನು ಬೇಡಿಕೊಂಡರು. “ಷರಾಫರು ನಾಣ್ಯವನ್ನು ಪರೀಕ್ಷಿಸುವಂತೆ, ಪ್ರತಿಯೊಂದನ್ನೂ ಪರೀಕ್ಷಿಸಿ ನೋಡಬೇಕು” ಎಂದು ತಮ್ಮ ಶಿಷ್ಯರಿಗೆ ಹೇಳಿದರು. ಇದು ಪ್ರಯೋಗ ಪರೀಕ್ಷೆಗಳ ಮೂಲಕ ವಸ್ತುಸತ್ಯವನ್ನರಿಯಬೇಕು -ಎಂಬ ವಿಜ್ಞಾನಯುಗದ ನಿಲುವಿಗೆ ಸಮ್ಮತವಾಗಿದೆ, ಅತೀತದ ನೆಲೆಗೇರಿಯೂ ವಾಸ್ತವವನ್ನು ಗೌರವಿಸುವ ಮನೋಧರ್ಮದ ಸಂಕೇತವಾಗಿದೆ.

ಯಾವುದೂ ಸಣ್ಣದಲ್ಲ : ೨೦೦೪