ಭಕ್ತ ಭೃಂಗಿ

ಅಗಾವ ನಿಮಗೊಂದು ಲಗಾಮ ಹಾಕಿದ ಬಿಗಿಯ ಹಿಡಿದು ಹೇಳುವೆ ನಿಂತಾ
ಕುರಿಯು ಹುಟ್ಟಿದ ಪರಿಯ ತಿಳಿಸುವ ಹಿರಿಯರೆಲ್ಲ ಕೇಳರಿ ಕುಂತಾ
ಕೈಲಾಸದೊಳಗ ಶಿವಪಾರ್ವತಿಯರು ಕೂಡಿ ಕೂತಿದ್ದರು ಒಂದು ದಿನಾ
ಭೃಂಗಿ ಎಂಬವನು ಕುಣಿಯುತ ಹೋಗಿ ಸಾಂಬಶಿವಗ ಮಾಡಿದ ಶರಣ
ಶರಣು ಮಾಡಿದ್ದು ನೋಡಿ ಪಾರ್ವತಿ ಭೃಂಗಿಯನ್ನು ಕೇಳ್ಯಾಳ ಪೂರ್ಣ
ಸಾಂಬಶಿವಗ ಸಾಷ್ಟಾಂಗ ಹಾಕಿದಿ ನನಗ ಯಾಕ ಮಾಡಲಿಲ್ಲ ಶರಣ
ಪಾರ್ವತಿ ಮಾತಿಗೆ ಭೃಂಗಿ ಹೇಳತಾನ ಜಗದ್ಭರಿತ ಜಗಪಾಲಕನಾ
ಅಣುರೇಣುದಲ್ಲಿ ತುಂಬಿ ತುಳಕತಾನು ಏಕೋದೇವ ಶಂಕರ ತಾನಾ
ಏಕೋದೇವ ಪರಬ್ರಹ್ಮ ಅನಿಸಿದಾನು ವೇದವಂದಿತ ಮುಕ್ಕಣ್ಣಾ
ಅವನ ಬಿಟ್ಟು ಇನ್ನ್ಯಾವ ದೇವರಾ ಭಕ್ತಿಯಿಂದ ಹಿಡಿಯೆ ಚರಣಾ
ಮಹಾದೇವಿ ನೀನು ಮಾಯಾಸ್ವರೂಪಿ ನಿಮ್ಮ ಗೊಡವಿಯು ನಮಗಿಲ್ಲಾ
ನಿನ್ನ ಪಾದ ಹಿಡಿಯಲಾರೆನು ಖಂಡತುಂಡ ನಿಷ್ಠುರ ವಚನ
ನಿಷ್ಠುರ ವಚನ ಕೇಳಿ ಪಾರ್ವತಿ ಸಿಟ್ಟಿನಿಂದ ಹಾಕ್ಯಾಳ ಶವತಾ
ಕೋಪದಿಂದ ನುಡಿದಾಳೊ ಪಾಪಿ ಭೃಂಗಿ ಪಾರಾಗೋ ಇನ್ನ
ಆಡುತಾಡುತ ಕೂಡಿದ ಸಭೆಯೊಳು ಮಾಡಿದಿ ನೀ
ಶಿವಾ ಶಕ್ತಿ ಏರಡಂಶ ಕೂಡಿದಾಗ ನಿನ್ನ ಶರೀರ ಆತು ಉತ್ಪನ್ನ
ನನ್ನ ಅಂಶವನು ನನಗೆ ಕೊಟ್ಟು ಬಿಡು ಶಿವ ಬಂದು ಉಳಿಸಲಿ ನಿನ್ನ
ಶಕ್ತಿ ಅಂಶದ ರಕ್ತಮಾಂಸವನು ತಗದು ಒಗಿದಾನೋ ಶಿವಶರಣಾ
ಅಸ್ತಿಚರ್ಮ ಬರೇ ನರಾ ಉಳಿದಾವೋ ಭೃಂಗಿ ತಾಳಿದ ಬದಲಿ ರೂಪವನಾ
ಇಷ್ಟ ಅದರ ಪ್ರಾಣ ಹೋಗಲಿಲ್ಲ ಇಟ್ಟ ಅವನ ಮ್ಯಾಲ ಶಿವ ಕರುಣ
ಭೃಂಗಿ ಪ್ರಾಣ ಹರಣ ಮಾಡುದಕ ಪಾರ್ವತಿ ತೆಗೆದಾಳೋ ಹೊಸ ರಚನಾ
ವಾಯುದೇವನ ವಶಾಮಾಡಿಕೊಂಡು ಗಾಳಿ ಎಬ್ಬಿಸ್ಯಾಳೋ ಸಂಪೂರ್ಣ
ಪ್ರಚಂಡವಾದ ಗಾಳಿ ಹೊಡತಕ್ಕ ಅಲ್ಲಕಲ್ಲೋಲ ಆದಿತ ಜನಾ
ಹುಡಿಯ ಅಡರಿ ದುಮ್ಮಕಾರ ಹಿಡದೀತು ಪೊಡವಿಯೆಲ್ಲಾ ನಡಗೂತ
ಧರಿಯ ಮ್ಯಾಲ ಇರುವ ಗಿರಿಯು ಮರಗಳು ಗಾಳಿಗೆ ಆದಾವೋ ಬುಡಮೇಲಾ
ಗಾಳಿಹೋಗಿ ಕೈಲಾಸ ಹೊಕ್ಕಿತು ದೇವತೆಗಳು ಕಿಸಿದಾರ ಹಲ್ಲಾ
ದೇವಗಣಾ ಮುನಿಗಳು ಅನ್ನುವರು ಗಾಳಿ ಅಲ್ಲ ಇದು ಕೆಡಗಾಲಾ
ಹಾರಿ ಕೈಲಾಸ ತೂರಿ ತೂಗ್ಯಾಡತೈತಿ ಇದರ ಒಳಗ ಉಳಿಯುವದಿಲ್ಲ
ಇಂಥ ಗಾಳಿಯೊಳು ನಿಂತಾನ ಸುಮ್ಮನೆ ಭಕ್ತ ಭೃಂಗಿಗೇನಾಗಿಲ್ಲ
ಭಕ್ತಭೃಂಗಿಗೆ ಜೋಪಾನ ಮಾಡಕ ಸಾಂಬಶಿವ ಇದ್ದ ಬೆನ್ನಮ್ಯಾಲಾ
ಬೆನ್ನಿಗೆ ತ್ರಿಶೂಲ ಹಚ್ಚಿ ನಿಲ್ಲಿಸ್ಯಾನು ದಯಾದೃಷ್ಟಿಯಿಂದ ಜಗಪಾಲಾ
ದಿಟ್ಟ ಭೃಂಗಿ ಗಟ್ಟಿಯಾಗಿ ನಿಂತಾನೋ ಪಾರ್ವತಿ ಆಟೇನು ನಡಿಲಿಲ್ಲ
ಬೀಸಿಬೀಸಿ ಗಾಳಿ ಶಾಂತ ಆದೀತು ಪಾರ್ವತಿಗೆ ಬಂದಿತು ಸೋಲಾ
ಶಿವನ ಭಕ್ತ ಶ್ರೀ ಭೃಂಗಿ ಆದ ಬಲಾ ಒಣಗಿತು ಪಾರ್ವತಿಯ ಮುಖಕಮಲಾ
ತೆಳಗ ಮಾರಿ ಮಾಡಿನಿಂತಾಳೊ ಪಾರ್ವತಿ ನೋಡ್ಯಾರ ಕೂಡಿದ ಸುರರೆಲ್ಲ
ಗರುಡ ಗಂಧರ್ವ ಸಿದ್ಧ ಸಾಧ್ಯರು ಕೈ ಹೊಡೆದು ಎಬ್ಬಿಸ್ಯಾರು ನಕಲಾ
ಕುಚೇಷ್ಟೆ ಮಾಡುವ ಕಂಡು ಪಾರ್ವತಿ ಶಾಪ ಕೊಟ್ಟಾಳೊ ಬಿಡಲಿಲ್ಲ
ನನ್ನ ಮಾರಿ ನೋಡಿ ನಕ್ಕವರೆಲ್ಲ ಕುರಿಯಾಗಿ ಹುಟ್ಟಲಿ ಧರಿಯ ಮ್ಯಾಲಾ
ಕುರಿಯಾಗಿ ಹುಟ್ಟಲಿ ಧರಿಯ ಮ್ಯಾಲಾ ಇಂದಿನ ವರೆಗೆ ಅದರ ಫಲ
ಚಂದ ಗ್ರಾಮ ಕುಳಗೇರಿ ಸಿದ್ಧನ ಪಾದಹಿಡಿದು ಹಾಡತೀವಿ ಆತನ ಲೀಲಾ

* * *

 

ಮಾರ್ಕಂಡೆಯಮುನಿ

ಮಾರ್ಕಾಂಡೆ ಮುನಿ ಸಾವಿರ ವರ್ಷದಿನ
ತಪಾದಿಂದ ಕುಳಿತದ್ದು ಕರೆ
ಅಸ್ತು ಅಡ ಅವನು ಸುತ್ತ ವೃಕ್ಷವು
ಹುತ್ತ ಮ್ಯಾಲೆ ಬೆಳೆದದ್ದು ಕರೆ

ದೇಹದನ್ನ ಕೂದಲಾ ಬೇರು ಬಿಟ್ಟಾ
ಭೂಮಿಗಿಳಿದದ್ದು ಕರೆ
ತಿಳಿದು ಈಶ್ವರಾ ಇಳಿದು ಬಂದನೋ
ಭೂಮಿಯಲ್ಲಿ ಮುಳಗಿದ್ದು ಕರೆ

ಕಮಂಡಲಾದನ್ನ ಉದಕ ಒಗೆದನು
ಮುನಿಯೆದ್ದು ಬಂದದ್ದು ಕರೆ
ಮಾರ್ಕಂಡ ನಿನ್ನ ಮನಾದಿಚ್ಚೆ
ಇದ್ದದ್ದು ಬೇಡು ಅಂದದ್ದು ಕರೆ

ಚರಣಕೆರಗಿ ಮತ್ತೇನ ಹೇಳಿದನು
ಪುತ್ರನ ಕೊಡು ಅಂದದ್ದು ಕರೆ
ಶ್ಯಾಣ್ಯಾ ನಿಪುಣಾ ಗುಣದವ ಕೊಡುವೆ
ಹದಿನಾಲ್ಕ ವರ್ಷ ಆಯುಶ್ಯ ಕರೆ

ಜ್ಞಾನವಿಲ್ಲದ ಮಗ ಹುಟ್ಟಿದರ
ಸಾವಿರ ವರ್ಷ ಇರುವುದು ಕರೆ
ಜ್ಞಾನವಿಲ್ಲದವನೇನ ಮಾಡುವದು
ಶ್ಯಾಣ್ಯಾನ ಕೊಡು ಅಂದದ್ದು ಕರೆ

ಕೊಟ್ಟವಚನ ಹೊಂಟಾನೋ ಈಶ್ವರ
ನಿಷ್ಟದವನು ಹುಟ್ಟಿದ್ದು ಕರೆ
ಆತ್ಮಕ್ಕೆ ವೈರಾಗ್ಯ ತಾಳಿದಾಕ್ಷಣಾ
ಲಿಂಗಪೂಜೆಗೆ ಹೊಂಟದ್ದು ಕರೆ

ಕಾಲಮೃಗವದಾ ಮಾಡುವ ಕಾಡಿಣಿ
ಹಗ್ಗಾ ಆದದ್ದು ಕರೆ
ಲಿಂಗಪೂಜೆ ನಿರ್ಮಳ ಮುಗಿಸಿದ
ಮತ್ತು ಸ್ತೋತ್ರ ಮಾಡಿದ್ದು ಕರೆ

ದೇವರಿಗೆ ದೇವರಿಗೆ ಎನ್ನ ನೀ
ಕಾಪಾಡಬೇಕು ಅಂದಿದ್ದು ಕರೆ
ನಿತ್ಯ ಲಿಂಗ ಪೂಜೆ ನಡೆಸಿದ್ಹ
ನ್ನೆರಡು ವರ್ಷ ಮುಗದದ್ದು ಕರೆ

ಇನ್ನೆರಡು ವರುಷಕ ಇವನ ಮರಣವು
ಹತ್ತವಗೆ ಚಿಂತೆಯದು ಕರೆ
ದಿನಾ ಹೋದಂಗ ಮನ ತಡಿಯದು

ಪ್ರಳಾಪದಿ ಅಳುವುದು ಕರೆ

ದುಶಿನ್ನಾ ನೀವು ದುಃಖಮಾಡುವ
ಕಾರಣೆಂದು ಕೇಳಿದ್ದು ಕರೆ
ತಪಾಮಾಡಿ ನಿನ್ನ ಪಡದ ಯಾಳ್ಯಾಕ
ಈಶ್ವರನು ಹೇಳಿದ್ದು ಕರೆ

ಹದಿನಾಲಕು ನಿನಗೊರಸ ಆಯುಸ
ನಾಳೆ ಮರಣ ಆಗುವದು ಕರೆ
ಇದಯೇನು ಈಶ್ವರನು ಇದ್ದನು
ನೋವ್ಯಾತಕ ಅಂದದ್ದು ಕರೆ

ತನಗು ಈಶ್ವರಗು ಯಾವಸಿಗೊಂಡು
ಕಾಡ್ಗಿ ಹಗ್ಗ ಕಟ್ಟಿದ್ದು ಕರೆ
ನೇಮಕ ಸರಿ ಯಮನ ಹುಕಮು ಆಗುವುದು
ದೂತರಾಗಿ ಬಂದದ್ದು ಕರೆ

ಹೋಗಿ ತಿರುಗಿ ಹಿಂದಾದ ವಚನವು
ಮತ್ತು ಯಮಗ ಹೇಳಿದ್ದು ಕರೆ
ಬಿಡಬ್ಯಾಡರಿ ಅವ ನೋಡಿರಿ ಅಂದನು
ನೂರುಮಂದಿ ಕಳವಿದ್ದು ಕರೆ

ಆಜ್ಞೆಕ ಸರಿ ಅವರೊಂಟಿ ನೆಡೆದರು
ಹುಲಿವರದ ಉರಿ ಆದದ್ದು ಕರೆ
ಅಂಜಿದಾರೊ ನಮ್ಮಿಂದಾಗದು
ಎಂದು ಎಮಗೆ ಹೇಳಿದ್ದು ಕರೆ

ವಿರಸದಿಂದ ಯಮ ಕೋಣ ಏರದನು
ಒಳ್ಳೆಯದೆಂದು ಹೊರಟದ್ದು ಕರೆ
ಮುನ್ನೂರು ಅರವತ್ತು ರೋಗ ಕೈಯೊಳು
ದಾರುಣಾಗಿ ಬಂದದ್ದು ಕರೆ

ಕೋಪದಿಂದ ಕುಂತವನ ಕೊರಳಿಗೆ
ಪಾಸಿ ಹಗ್ಗ ಒಗದದ್ದು ಕರೆ
ಶಕ್ತಿಲಿಂದ ಕುಂತವನ ಎಳೆಯತಾನು
ಹತಿಜಲ್ಮ ಆದದ್ದು ಕರೆ

ಸಂತಾಪ ಸಂಕಟ ತಡಿಯದೆ
ಶಂಕರನೇ ಅಂದದ್ದು ಕರೆ
ಕೋಟಿಸಿಡಲು ಧರಣಿಗ ಬಿದ್ದಂಗ
ಈಶ್ವರನು ಎದ್ದದ್ದು ಕರೆ

ವಿರಸದಿಂದ ಯಮನ ಹೊಟ್ಟೆ ಹರಿವಂಗ
ತ್ರಿಶೂಲದಲೆ ಹೊಡೆದದ್ದು ಕರೆ
ಬಿದ್ದದರೊಳಗೆ ಬಿದ್ದು ಸೈರಿಸಿ
ಕೈಯ ಮುಗಿದು ನಿಂತದ್ದು ಕರೆ

ಇಂತ ಶರಣರ ಇನ್ನು ಮುಟ್ಟಬೇ
ಡೆಂದು ಯಮನ ಬಿಟ್ಟಿದ್ದು ಕರೆ
ಶ್ಯಾರ ಕುಂದಗೋಳ ಶಂಬುಲಿಂಗ ಎಂದು
ಶಿವಬಸವ ಹೇಳಿದ್ದು ಕರೆ

* * *

 

ಕಾಮದಹನ

ರತಿದೇವಿ ಮುಂದ ಕುಂತು ಪರಮಾತ್ಮ ಹೇಳತಾನ
ಪತಿ ಸತ್ತನೆಂದು ಮಾಡಬ್ಯಾಡ ಚಿಂತಿ
ಧರಿಯಲ್ಲಿ ನೀವು ಹೋಗಿ ನರಜಲ್ಮ ತಾಳಿದಾಗ
ಮಾಡಿದಂಥ ದೋಸನಾಶ ಆಗತೈತಿ

ಭೂಮಿಯೊಳು ಅಧಿಕವಾದ ಕಾಮನಕಟ್ಟಿ ಎಂಬುವಂಥಾ
ಗ್ರಾಮದೊಳು ಬ್ರಾಹ್ಮಣರ ಮನಿ ಐತಿ
ಬ್ರಾಹ್ಮಣರ ಮನಿಯಲ್ಲಿ ರಾಮನೆಂಬ ನಾಮದಿಂದ
ಮನ್ಮಥನು ಆಗತಾನ ಉತ್ಪತ್ತಿ

ಹೊಲಗೇರ‍್ಯಾಗ ಹುಟ್ಟಿ ನೀನು ಹೋಳಿ ಎಂಬ ಹೆಸರಿನಿಂದ
ಸೋಳಾ ವರ್ಷ ಆಗಿ ಪ್ರಾಯ ಬರತೈತಿ
ನೇಮದಿಂದ ನಿನ್ನ ಮ್ಯಾಲ ಕಾಮದೃಷ್ಟಿ ಇಡತಾನ
ಪ್ರೇಮ ಪ್ರೀತಿ ಇಬ್ಬರಿಗೂ ಕೂಡತೈತಿ

ಇಷ್ಟ ಹೇಳಿ ಸಾಂಬ ವರವ ಕೊಟ್ಟು ಮ್ಯಾಲ ಶಾಂತ ಆಗಿ
ನೇಮದಿಂದ ಮುಂದೆ ಹುಟ್ಟಿವ ರತಿಪತಿ
ಮನ್ಮಥನು ಪ್ರತಿ ಜಲ್ಮವನ್ನು ತಾಳಿ
ಕ್ಷಿತಿಯಲ್ಲಿ ಕಾಮನ ಜನನಾಗೇತಿ

ಚಾಲ

ಜನನಾಗಿ ಬೆಳದಾನ ಕಾಮ ಪ್ರಾಯಬಂತು ನೇಮ ಕೇಳಿ ವಿಸ್ತಾರ
ವರ್ಷ ಆಗಿದ್ದವು ಹದಿನಾರು ಹೊಲಗೇರಿಯಲ್ಲಿ
ರತಿದೇವಿ ಹುಟ್ಟಿದಾಳ ಚಲುವೆ ದೇಶ ಸುಂದರಾ
ಕರದ್ರೋ ಹೋಳಿ ಎಂಬ ಹೆಸರಾ ದೇವಲೋಕದ ಹೆಣ್ಣಾ
ತೇಟ ಪದ್ಮಜಾತ ರೂಪ ಶೃಂಗಾರ ಕಾಮ ಇಟ್ಟ ಇಕಿಮ್ಯಾಲ ನೆದರಾ
ಜಾತಿ ನೀತಿ ಎಂಬುವಂಥ ಅರಿಯದೆ ಹೊಲಗೇರಿಯಲ್ಲಿ ಹೊಕ್ಕಾ
ಹೋಳಿಯನ್ನು ಕೂಡಿಕೊಂಡು ನಡತಿ ಅನುದಿನಾ
ಕಾಲಾಂತರ ಮ್ಯಾಲ ತೀರಿಹೋಯಿತು ಮನಿಯೊಳಗಿನ ಹಣಾ
ಎಂತ ಬಡತನ ಜ್ಯಾತಿಯಿಂದ ದೂರ ಇಟ್ಟಾಗ ಊರೊಳಗಿನ ಜನಾ
ಕಾಮನ ಮೈಯೊಳಗ ಬಡಿದಾವ ಉಷ್ಣ ಶರೀರ ಆತ ಸಣ್ಣಾ
ಪ್ರಾಣ ಹೋಗುವ ಕಾಲ ಸಮೀಪಕ್ಕೆ ಬಂದೀತ ಪೂರ್ಣ
ಕರಿಸಿಕೊಂಡ ತನ್ನ ಗೆಳೆಯರನ್ನಾ ಮಾಡಿದಾನ ಶರಣಾ

ಏರು

ಮಿತ್ರರನ್ನು ಕೂಡಿಕೊಂಡು ವ್ರತದಿಂದ ಹೇಳತಾನ
ಮೃತ್ಯುಕಾಲ ಬಂತ ಇದು ನಿರ್ಧಾರಾ
ಕೋಪದಿಂದ ಮಹಾದೇವ ಶ್ಯಾಪಕೊಟ್ಟು ಮನ್ಮಥಗ
ಲೋಪವಾಗಿ ಸುಟ್ಟುಹೋದ ಹರಿಕುವರಾ
ಅಣ್ಣತಮ್ಮರಿಲ್ಲ ನನಗ ನನ್ನ ಪ್ರಾಣ ಹೋಗ್ತದ
ಮಾನ ಅಪಮಾನ ನಿಮ್ಮ ಸ್ವಾಧೀನಾ
ಬಹಳ ಕುಳ್ಳುಗಳ ಒಟ್ಟಿ ಹೋಳಿ ಹೊತಕೊಂಡು
ಬಂದು ಕುಳ್ಳ ತಳದಾಗ ಹಾಕಿ ಸುಡಬೇಕ
ನನ್ನ ಪ್ರಿಯ ಮಿತ್ರರಿಗೆ ಹೇಳಿ ಕೈಮ್ಯಾಲ ಕೈ ಇಟ್ಟ
ಕ್ರಿಯಾ ಕೊಟ್ಟ ಮ್ಯಾಲ ಬಿಟ್ಟ ಪ್ರಾಣವನಾ
ಕುಳ್ಳ ಯಾರು ಕೊಡಲಿಲ್ಲ ಕೊಳ್ಳಲಿಕ್ಕೆ ರೊಕ್ಕಯಿಲ್ಲ
ಕಳ್ಳರಾಗಿ ಒಡದಾರ ಕುಳಬಾನ
ಕಾಮ ಸತ್ತನೆಂದು ಗ್ರಾಮದೊಳು ಸುದ್ದಿ ಆತು
ಫಲ್ಗುಣ ಮಾಸ ಹುಣ್ಣುವಿ ದಿನಾ
ಅದೇ ವಾರದೊಳಗ ಒಬ್ಬ ದೇವಪುರುಷ ಸಾಧು ಇದ್ದ ತ್ರಿಕಾಲ ಜ್ಞಾನ
ಇತ್ತ ಸಂಪೂರ್ಣ ಪೂರ್ವದಲ್ಲಿ ಆದ ಕತಿ ಸರ್ವರಿಗೆ ಹೇಳಲಾಕ
ಸಾಮಾನ್ಯ ನರನಲ್ಲೋ ಕಾಮಣ್ಣಾ ವಿಷ್ಣುವಿನ ಮಗಾ
ಇವ ಸುಟಕೊಂಡ ತನ್ನ ದೇಹ ಸರ್ವಲೋಕ ಮಾಡಿದಾನು ಉದ್ದರಣಾ

ವಚನ

ಹೀಂಗಂತ ಶ್ರುತಿ ಸಾರತೈತಿ ತಾರಕನ ಕತಿಕೇಳಿ ಪರಿಪೂರ್ಣ
ಹೌದೆಂದು ನಂಬಿದಾರ ಜನಾ
ಕಾಮ ಸತ್ತ ಠಿಕಾಣಕ ಹೋಗಿ ಭಕ್ತಿಯಿಂದ ಭಜನಾ ಮಾಡಿ ಶರಣಾ
ಪೂಜಿ ಮಾಡತಾರ ಆತನ ಚರಣ ಮೋಜು ಮಜಲ ಒಳೆ ಶೃಂಗಾರ
ಮಾಡಿ ಸಡಗರ ಮೆರೆಸಿ ಆತ್ನ ಮಾಡ್ಯಾರ ಮಂಗಳಾರತಿಯನ್ನ

ಪದ್ಯ

ಗೆಳೆಯರು ಕೊಟ್ಟ ವಚನ ಪ್ರಕಾರ ಕಾಮನ ಬಳಿಯಲ್ಲಿ
ತಂದು ಒಗೆದಾರು ಹೋಳಿಯನ್ನ
ಹೋಳಿದು ತವರಮನಿ ಹೊಲಗೇರಿ ಆದಕಾರಣ
ಹೊಲಗೇರಿಯಿಂದ ಬೆಂಕಿ ತಂದ ಮಾಡಿದಾರ ಕಾಮದಹನಾ
ಬಸರಿ ಬೇವ ಅಂದ್ರ ತುರಾಯಿ ಆದಕಾರಣ ತಂದ ಇಡತಾರ ಪೂರ್ಣ
ಲೋಕೋಪಕಾರ ಮೂರ್ತಿಯು ಸ್ವರ್ಗವಾಸಿ ಆದನೆಂದು
ಕಸಿವಿಸಿ ಆಗಿ ಹೊಯಕೊಳ್ಳುವರೋ ಜನಾ
ಮೂರು ದಿವ್ಸ ಕಾಮ ಅಂದ್ರ ಪಾವನಾ
ಮೂರ್ತಿಯೆಂದು ಆತನನ್ನು ಸುಟ್ಟು ಬೂದಿಯನ್ನು ಸರ್ವರು ಧರಿಸಿಕೊಂಡಾರ
ಅದನ್ನ ಕ್ಷಿತಿಯೊಳು ಹುಲಕುಂದ ಪತಿ ರಾಮೇಶ್ವರ ಭಕ್ತ ಸಿದ್ಧರಾಯನ ಅಕ್ಷರಾ
ಇಲ್ಲಿಗೆ ಒಂದು ಸಂದೇಳಗುರವೆ ಹಾಡಿದವರ ಪದ ಮುಂದ್ಕೇಳೋ

* * *

 

ಜಮದಗ್ನಿಯ ಶಾಪ

ಋಷಿಪತಿ ಜಮದಗ್ನಿಗೆ ಸತಿಯಾದಳು
ಏಳು ಕೊಳ್ಳದ ಎಲ್ಲಮ್ಮ ತಾಯಿ
ಪತಿಯ ಸೇವೆಯ ಮಾಡುತ ತಾಯಿ
ಮತಿವಂತಿಯಾಗಿ ಬಾಳಿದಳು

ನಸುಕಲಿ ಏಳಂತ ರೇಣುಕ ತಾಯಿ
ನದಿಯಲಿ ಸ್ನಾನ ಮಾಡುವಳು
ಪರಿಪರಿ ಹೂ ಮಡಿನೀರನು
ತರುವಳು ಪತಿಯ ಪಾದಪೂಜೆಗೆ

ಕುಮಾರಿಯೆಂದು ಮರೆತಾಳ ರೇಣುಕ
ಮಾಡುತ ಋಷಿಯ ಸೇವೆಯನು
ಪತಿಯ ಸೇವೆ ಮಾಡುತಾ ತಾಯಿ
ಗರತಿಯ ಮಗಳಾಗಿ ಬಾಳಿದಳು

ಶನಿಯ ನೋಟಕೆ ಸಿಕ್ಕಳು ರೇಣುಕೆ
ಕಾಲಕೂಟದಲಿ ತಾ ಬಿದ್ದಳು
ಜೀವಕ ಬಂದಿತು ವಿಪರೀತ ಕಾಟ
ಹರಕತ್ತ ಆದೀತ ಜೀವಕ

ಹೊತ್ತಿಗೆ ಸರಿಯಾಗಿ ಏಳುತ ತಾಯಿ
ಪತಿಯ ಪಾದಕೆ ನಮಿಸಿದಳು
ಹಾವಿನ ಸಿಂಬೆಯ ಇಟ್ಟಳು ತಲಿಮೇಲೆ
ಉಸುಕಿನ ಕೊಡವ ಹೊತ್ತಳು

ಪ್ರಣಯ ಕೇಳಿ ನಡೆದಿತ ಅಲ್ಲಿ
ನದಿಯ ನೀರಿನ ದಡದಲ್ಲಿ
ಪ್ರಣಯ ಜೋಡಿಯ ನೋಡುತ ತಾಯಿ
ಮಾಡ್ಯಾಳು ಮನದಲಿ ಚಿಂತೆಯನು

ಕೊರಗುತ ನಿಂತಳು ಮನದಾಗ ತಾಯಿ
ಕರುಮದ ಜನ್ಮಕ ಬೈಯುತಲಿ
ಚಿಂತಿಯ ಮಾಡುತ ನಿಂತಾಗ ತಾಯ್ಗೆ
ಪತಿಯ ನೆನಪು ಮೂಡೀತ

ಭೀತಳಾಗಿ ಶಿವ ಘಾತವಾಯಿತೆಂದು
ಆತುರದಿಂದ ತಾಯಿ ಎದ್ದಾಳ
ಪತಿಯನು ನೆನೆಯುತ ಮನದಲಿ ತಾಯಿ
ನದಿಯ ಕಡೆಗೆ ಬಂದಾಳ

ಶಿವಸಮ ಪತಿಗೆ ಆಯಿತ ಅರಿವು
ಭಾವೀಸತಿಯ ಆಸೆಯು
ಜ್ಞಾನದೃಷ್ಟಿಯಿಂದರಿತನು ಋಷಿಯು
ಹೆಂಡತಿಯ ಹಣೆಬರಹವನು

ಉಸುಕಿನ ಕೊಡವು ಒಡೆದಿತು ಆಗ
ಹಾವಿನ ಸಿಂಬಿ ಚದರೀತ
ಕೆರಳುತ ಹಾವು ಬಂದಿತು ಮೇಲೆ
ತಿಳಿಯಿತು ಸತಿಗೆ ಪತಿಮಾಯೆ

ಆತುರದಿದ ಬಂದಳು ರೇಣುಕೆ
ಹೆದರುತ ನಡುಗುತ ಆಶ್ರಮಕೆ
ಭೀತಳಾಗಿ ಸತಿ ರೇಣುಕ ತಾಯಿ
ಪತಿಯ ಪಾದಕೆ ಬಿದ್ದಳು

ಋಷಿಗೆ ಏರಿತು ಸಿಟ್ಟಿನ ಭರವು
ಶಾಪ ಕೊಟ್ಟನು ರೇಣುಕೆಗೆ
ಸಿಟ್ಟಿನ ಭರದಲಿ ಕೊಟ್ಟನು ಶಾಪ
ಮೈತುಂಬ ಹುಣ್ಣಾಗಲೆಂದು

ರೂಪ, ರಂಭಿ ಸತಿ ರೇಣುಕ ಬಣ್ಣ
ಕರಿಯ ಬಣ್ಣಕ ತಿರುಗಿತ
ಋಷಿಯ ಮಾತು ಆಯಿತು ನಿಜವು
ಜೀವಕ ಬಂದಿತು ಕುತ್ತ

ಮಕ್ಕಳ ಕೂಗಿ ಕರೆದನು ಜಮದಗ್ನಿ
ಹೆಂಡತಿ ಚೆಂಡು ಕಡಿಯಾಕ
ತಾಯಿಯ ಚೆಂಡು ಕಡಿಯಾಕ ಪುತ್ರರು
ಶಂಕಿಸಿ ನೆವ ಹೇಳಿ ಜಾರಿದರು

ಪರುಶರಾಮನ ಕರದಾನ ಜಮದಗ್ನಿ
ಹೆಂಡತಿ ಚೆಂಡ ಕಡಿಯಾಕ
ತಂದೆಯ ಮಾತು ಕೇಳುತ ರಾಮ
ತಾಯಿಯ ಚೆಂಡು ಹಾರಿಸಿದ

ಜಲ್ಲೆಂದು ರಕ್ತ ಚಿಮ್ಮಿತು ಆಗ
ರೇಣುಕ ತಾಯಿ ಕೊರಳಿಂದ
ಮರುಗಿದ ರಾಮನು ತಾಯಿ ಜೀವಕ
ಮನಸಿಲಿ ನಿಶ್ಚಯ ಮಾಡುತಲಿ

ಭಲೆ ಭಲೆ ಎಂದು ಮೆಚ್ಚಿ ಜಮದಗ್ನಿ
ಮಗನ ಕಾರ್ಯವ ಹೊಗಳಿದನು
ಆಶೀರ್ವಾದ ಮಾಡುತ ಮಗನಿಗೆ
ಜಮದಗ್ನಿ ವರಬೇಡವು ಹೇಳಿದನು

ತಂದೆ ನನಗೆ ಹೊನ್ನು ಬೇಡ ತಂದೆ
ನನಗೆ ಮಣ್ಣು ಬೇಡ
ತಂದೆ ನನಗೆ ಹೆಣ್ಣು ಬೇಡ ನನಗೆ
ಬೇಕು ತಾಯಿಯ ಜೀವ

ಕೆಚ್ಚಿನ ಮಗನ ಮಾತಿಗೆ ಮೆಚ್ಚುತ
ಕೊಟ್ಟನು ಕ್ಷಣದಲಿ ವರವನ್ನ
ವರವನು ಕೊಡುತಲಿ ರಾಮನ ತಂದೆ
ರೇಣುಕ ಎದ್ದಳು ನೆಲದಿಂದ

ನನ್ನಯ ಸದ್ದು ನಿನಗೆ ಬೇಡ
ನಿನ್ನಯ ಸದ್ದು ನನಗೆ ಬೇಡ
ಶಾಪವ ಕೊಡುತ ಜಮದಗ್ನಿ ಋಷಿ
ಸತಿಬಿಟ್ಟು ದೂರ ನೆಲೆಸಿದನು

ಒಂಟಿಯಾಗಿ ಎಲ್ಲಮ್ಮ ತಾಯಿ
ಏಳುಕೊಳ್ಳದಾಗ ನೆಲಸಿದಳು
ಏಳುಕೊಳ್ಳದಾಗ ನೆಲೆಸಿದ ತಾಯಿ
ಮಾಯಕಾರ್ತಿಯಾಗಿ ನಿಂತಳು