ಶನಿದೇವ

ಗುರುವೆ ನಿನ್ನನು ಮೊದಲಿಗೆ ನೆನೆಯುವೆ
ಸಭಾದಾಗ ಕಾಯೊ ಎನ ಮಾನಾ
ನಾಗಪುರದ ಶರಣಬಸವನ
ಸ್ತುತಿಸುತ ಪದವನು ಹೇಳುವೆನಾ

ನಿತ್ಯನೇಮದಿ ಸತ್ಯತನದಿಂದ
ಪೃಥ್ವಿ ತಿರುಗುತಾ ಬರುತಿಹನಾ
ಕತ್ತಲು ಕಳೆಯುತಾ ಬೆಳಕನು ಬೀರುತಾ
ಮೂಡಣದೊಳು ಮೂಡುವನಾ

ಮೂಡಣದೊಳು ಮೂಡಿ ಸೂರ‍್ಯದೇವನು
ಪಡುವಣ ಪಾವಟಿ ಇಳಿಯುವನಾ
ಪಡುವಣ ಪಾವಟಿ ಇಳಿಯುವನಾ
ಜಗತ್ತಿನ ಜನಕ ಅನಿಸಿದನಾ

ಸರ್ವರಿಗೆ ಸರಿಯಾಗಿ ನಡೆಯುವ ಸೂರ‍್ಯಗ
ಹೆಳವ ಮಗ ಒಬ್ಬ ಜನಸಿದಾ
ಸರ್ವ ಆಭರಣ ಕಿರೀಟ ಕುಂಡಲ
ನೀಲಿ ವರ್ಣದ ಶನಿದೇವನಾ

ಕಪೋತಮಥನ ರಥಕ ಹೂಡಿಕೊಂಡು
ಪೃಥ್ವಿಯ ತುಂಬೆಲ್ಲಾ ತಿರುಗುವನಾ
ದೃಷ್ಟಿಗೆ ಬಿಡ್ದಂತಾ ಜೀವರಾಶಿಗಳ
ಜರ್ಜರ ಮಾಡಿ ಬಿಡುತಿಹನಾ

ತೆತ್ತಿಸಕೋಟಿ ದೇವಾನುದೇವತೇರ
ತತ್ತರಗೊಳಿಸಿ ಅಳಸಿದನಾ
ಈರೇಳು ಲೋಕದಾಗ ತಿರುಗುತ ಶನಿದೇವ
ಭೂಮಿಗೆ ಬಂದು ಇಳಿದಿಹನಾ

ಚಿಕ್ಕಂದದಲಿ ತಿರುಗುತ ಶನಿದೇವ
ಚಪ್ಪನ್ನ ದೇಶ ನೋಡಿದನಾ
ಮುಸ್ಕರವಿಲ್ಲದೆ ಕಿಷ್ಕಿಂದೆ ಹತ್ತಿರ
ಆಕಸ್ಮಾತ ಗವಿಯೊಳು ಕಂಡಾನಾ

ಆ ಗವಿಯೊಳು ಮಾರುತಿರಾಯನು
ರಾಮಭಜನೆಯ ನಡೆಸಿದನಾ
ಭಜನೆಯ ಶಬ್ದ ಕೇಳಿ ಶನಿದೇವ
ಗವಿಬಾಗಿಲಿಗೆ ಬಂದಾನಾ

ಭಜನೆಯ ಮಾಡುತ ಹನುಮನ ಕಂಡು
ತನ್ನಯ ದೃಷ್ಟಿಯ ಬೀರಿದನಾ
ಮೊದಲಿಗೆ ಗೊತ್ತಾಗಿ ಮಾರುತಿರಾಯನು
ಬಾಲಕ ಅಪ್ಪಣೆ ಮಾಡಿಹನಾ

ಬಾಲದಂಡವು ಬೆಳೆಯುತಾ ಬೆಳೆಯುತಾ
ಸುತ್ತ ಹಾಕಿತೊ ಶನಿದೇವನಾ
ಗರಗರ ತಿರುಗುವ ಶನಿದೇವನ
ನೋಡಿ ಮಾರುತಿ ನಗುತ್ತಿದನಾ

ದೇವಾದಿದೇವ ಮಹಾನುಭಾವ
ನೀನಾರೆದು ಕೇಳಿದನಾ
ಸೂರ‍್ಯನ ಸುತನಾದ ಶನಿದೇವ ನಾನು
ನಿನ್ನಯ ಕಾಡಲು ಬಂದಿಹೆನಾ

ಬಹಳ ಕಾಡುವದಿಲ್ಲ ಗಳಿಗೀ ಕಾಡುವೆನು
ನಿನ್ನಯ ಅನುಮತಿ ಕೇಳುವೆನಾ
ನನ್ನಯ ಕಾಡುವ ಮನಸಿದ್ರ ದೇವಾ
ನಾಳಿಗೆ ಕಾಡೆಂದು ಹೇಳಿದನಾ

ನಾಳಿಗೆ ಅನ್ನುದಕ್ಕ ಪ್ರಮಾಣವೇನೆಂದು
ಹನುಮನ ಶನಿದೇವ ಕೇಳಿದನಾ
ನಿನ್ನನು ಕಾಡಲು ನಾಳಿಗೆ ಬರುವೆನಂತ
ಗೋಡೆಯ ಮೇಲೆ ಬರಿಯೆಂದನಾ

ಹನುಮನ ನುಡಿ ಕೇಳಿ ಶನಿಮಹಾರಾಯನು
ಅದರಂತ ಗ್ವಾಡಿಮ್ಯಾಲ ಬರಿದಾನಾ
ಇಷ್ಟ ಹೇಳಿ ತಾ ಅಬ್ಬರದಿಂದಲಿ ತಾನು
ಮನದೊಳು ಉಬ್ಬಿ ನಡೆದಾನಾ

ಅದೇ ವ್ಯಾಳೇಕ ಮರುದಿನ ಬಂದು
ನಿನ್ನನು ಕಾಡುವೆನೆಂದಾನಾ
ವಿಚಾರಮಾಡಿ ಮಾರುತಿ ಅಂತಾನ
ಬರೆದಿದ್ದ ಬರಹ ನೋಡೆಂದಾನಾ

ಗ್ವಾಡಿಯ ಮೇಲಿನ ಬರಹವ ನೋಡಿ
ಶನಿದೇವ ಗಾಬರಿಯಾದಾನಾ
ನಿನ್ನನು ಕಾಡಲು ನಾಳಿಗಿ ಬರತೇನಂತ
ಬಾಯಿಲಿ ಗುಟ್ಟ್ಯಾಗಿ ನುಡಿದಾನಾ

ಬಾಯಿಲಿ ಬಂದ ವಿಚಾರ ಕೇಳಿ
ನಾಳಿಗೆ ಬಾರೆಂದ ಮಾರುತನಾ
ಮತ್ತೆ ಶನಿದೇವ ಮರುದಿನ ಬರಲಾಗಿ
ಅದೇ ಉತ್ತರ ಅವ ಕೊಟ್ಟಾನಾ

ಅದರಂತೆ ಶನಿದೇವ ಎಂಟು ವರ್ಷಗಳ
ಎಡತಾಕಿ ಎಡತಾಕಿ ಸತ್ತಾನಾ
ಒಂದಾನೊಂದು ದಿನ ಶನಿದೇವ ಮನದೊಳು
ಕಾಡುವ ನಿರ್ದಾರ ಮಾಡಿದನಾ

ಮರುದಿನ ಶನಿದೇವ ಮಾರುತಿ ಬಳಿಗೋಗಿ
ಈ ಹೊತ್ತು ಕಾಡದೆ ಬಿಡಲಾರೆನಾ
ಹಸನ ಮನದಿಂದ ನಗೆಯ ಮುಖದಿಂದ
ಮಾರುತಿ ಗಹಗಹಿಸಿ ನಕ್ಕಾನಾ

ನಕ್ಕದ್ದು ನೋಡಿ ಶನಿಮಹಾರಾಯನು
ಕೋಪದಿ ಕಿಡಿಕಿಡಿ ಆದಾನಾ
ಕೋಪದಿ ಕಿಡಿಕಿಡಿ ಆದಾಗಾ
ಕಣ್ಣಲಿ ಕೆಂಡವ ಕಾರಿದಾನಾ

ಕೆಂಡವ ಕಾರುವ ಶನಿಯನು ನೋಡಿ
ಮಾರುತಿ ವಿನಯದಿಂದ ನುಡಿದಾನಾ
ನಿನ್ನ ಲಿಪಿಯ ನೀನು ಅಲ್ಲಗಳೆದರೆ
ವಚನ ಭಾದೆ ಬರುವದೆಂದಾನಾ

ಮಗನ ಮಾರುತಿ ಬೇಡಿದ್ದನು ಕೊಡುವೆನು
ವರಗಳ ಹಿಡಿಯೋ ನೀನಾ
ವಿನಯದಿ ಬಾಗುತು ಕರಗಳ ಮುಗಿಯುತ
ಇಂತೆಂದು ಮಾರುತಿ ಬೇಡಿದನಾ

ಕಲಿಯುಗದೊಳು ನಿನ್ನ ವಾರದ ದಿನ
ಭಕ್ತರು ದರ್ಶನಕ ಬರಲೆಂದಾನಾ
ಭೂತ ಪಿಶಾಚಿರೋಗಗಳು ಭಕ್ತರಿಗೆ
ಇಲ್ಲದಂತೆ ಮಾಡೆಂದಾನಾ

ತಥಾಸ್ತು ಎಂದು ಶನಿದೇವ ತಾನು
ಅಲ್ಲಿಂದ ತಾನು ಮಾಯವಾದಾನಾ
ಶನಿವಾರ ದಿನ ಭಕ್ತರೆಲ್ಲರು
ತೆಗೆದುಕೊಳ್ಳುವದು ಮಾರುತಿ ದರ್ಶನಾ

ಚಿಂತೆ ಕಂಟಕ ಬೈಲ ಮಾಡುವನು
ಶ್ರೀರಾಮ ಭಕ್ತ ಮಾರುತನಾ
ಶನಿವಾರ ದಿನದಲ್ಲಿ ಭಕ್ತರು ನೆನೆದರು
ಮುಕ್ತಿಯ ಪಥವ ಕೊಡುತಿಹನಾ

ಅಂಥ ಗುರುವರ ಮಾರುತಿರಾಯನು
ಬಿಡದಲಿ ನೆನೆಯಿರಿ ನೀವಿನ್ನಾ
ಅಂಥ ಕಥೆಯನು ಹೇಳಿ ಕೇಳಿದರ
ಪ್ರಸನ್ನಾಗುವನು ಶನಿದೇವನಾ

ಪ್ರಸನ್ನಾಗುವ ಶನಿದೇವನಾ
ಹರುಷದಿ ಇಡುವನ ನಿಮ್ಮನ್ನಾ
ರವಿ ಕಿರಣದಂಗ ಹರಡಿದ ಯಮನೂರ
ದೂರ ದೂರ ಇರುವದು ವಾಹಿನಾ

ನಾಗರಹಳ್ಳಿಯ ಶರಣಬಸವ ಶಿಷ್ಯ
ಯಲ್ಲಣ್ಣ ಕವಿಗಾರ ಇರತಾನ

* * *

 

ಹನುಮಪ್ಪ ನಸುನಕ್ಕ

ಅಡ್ಡನೇಳ ಅಡಮಾರಗದಾಗ
ನಾಗರ‍್ಹಾಂವನೊಂದ ಕಂಡೇನ

ನಾಗರ‍್ಹಾಂವಿನ ಕುಲದವ ಬಾನನ
ಕರಣ ಕುಂಡಲ ಕರಿಹನುಮ
ಕರಿಹನುಮಪನೆಂದರೂ
ಹಾರ‍್ಯಾನು ಲಂಕಿ ಪಟ್ಟಣಕ

ಸಾಲ ಸಾಲ ಎರಡ ಮೇಲಮಾಳಿಗೆ
ಸೀತವ್ವನಿರುವ ಅರಮನೆಯ
ಸೀತವ್ವನಿರುವ ಅರಮನೆಗೆ ಹೋಗಿ
ಸೀತೆದುಂಗುರ ಚಲ್ಲುವನ

ಸುತ್ತಮುತ್ತಲಿ ನೋಡುತಲಯ್ದಳ
ಮ್ಯಾಲಕ ನೋಡುತ್ತೈದಾಳೊ
ಮ್ಯಾಲಕ ನೋಡುತೈದಳು ಸೀತವ್ವ
ಸಣ್ಣ ಬಾಲಕ ಕಂಡಾನೊ

ಹಂತ ಹಿಂತ ಕಾವಲುದಾಗ ನೀ
ಹ್ಯಾಂಗ ಬಂದಿಯೋ ಮಗನೆಂದಾಳೊ
ಹ್ಯಾಂಗನಾದರು ಬಂದೆನು ತಾಯಿ
ಹೊಟ್ಟೆಗಳು ಬಾಳ ಹಸುವಾಗ್ಯಾವು

ಹೊಟ್ಟೆಗಳು ಬಾಳ ಹಸುವಾದರ ಮಗನೆ
ಕಾಸಿಬಾಯಿಯ ತೋಟೇಳು ಮಗನೆ
ಕಾಸಿಬಾಯಿಯ ತೋಟದೊಳಗ
ಹಣ್ಣುಹಂಪಲ ತಿನ್ಹೋಗೊ

ತೋಟದೊಳಗ ಹೊಕ್ಕಾನು ಹನುಮಪ್ಪ
ಬಾಲಾ ಸುತ್ತಿ ಗಿಡ ಕಿತ್ತಾನೊ
ಬಾಲ ಸುತ್ತಿ ಗಿಡ ಕಿತ್ತಾನು ಹನುಮಪ್ಪ
ಸಿಡಿಬಿದ್ದ ಹಣ್ಣನೊಂದು ತಿನ್ನುವನೊ

ಕೆಟ್ಟಕಪಿ ಬಂದು ಕೇಡು ಮಾಡತೈತಿ
ಹಿಡಕೊಂಡು ಬಾ ಎಂದ ರಾವಣನು
ಹಿಡಿದುಕೊಂಡು ಬಂದು ಅಕಾ ಕೊಳ್ಳಾಗ
ಗುದ್ದಿಕಟ್ಟಿ ಬಿಡಿಸಿಕೊಂಬುವರಾರುಂಟರೊ

ಬಿಡಿಸಿಕೊಂಬುವರ‍್ಯಾರುಂಟ ಸುದ್ದಿ ಕೇಳಿ
ಕಡಿಗ್ಯಾನ ಹನುಮಪ್ಪ ನಸುನಕ್ಕಾನೊ
ಕಡಿಗ್ಯಾನ ಹನುಪ್ಪ ನಸುನಕ್ಕ ಸುದ್ದಿಕೇಳಿ
ದಸಮುಕ ರಾವಣ ಬೆಸೆಗೊಂಡನೊ

ದಸಮುಕ ರಾವಣ ಬೆಸಗೊಂಡರಂದರು
ಎಲೋ ತಮ್ಮ ನಿನ್ನ ಹೆಸರೇನೊ
ರಾಜರಾಜರ ಗಂಡ ಲೋಕದ ಮಿಂಡ
ನನ್ನ ಹೆಸರು ಹನುಮಂತನೊ

ನಿನ್ನ ಹೆಸರು ಹನುಮಂತನಾದರ
ಸೀತಾನ ತರುವಾಗೆಲ್ಲಿದ್ದ್ಯೊ
ಸೀತಾನ ತರುವಾಗ ನಾನಿದ್ದದ್ದೆ ನಿಜವಾದರ
ಗುದ್ದಿ ಚೆಲ್ಲುವೆ ನಿಮ್ಮ ರಥದಾಗ

ಸೀತಾನ ತಂದು ಕದ್ದು ಬಂದೆನಂತ
ಬುದ್ಧಿವಂತನಾಗಿರು ಹೋಗೊ

* * *

 

ಕುಂಭಕರ್ಣನ ಮರಣ

ಕೇಳಿರಿ ಸುಜನರು ಮನಸಿನಿಂದಲಿ ಹೇಳುವ ಸರಸದ ಕಥೆಯನ್ನಾ
ಗದ್ದಲ ಮಾಡದೆ ಕೇಳಬೇಕಂತ ಸರ್ವರಿಗೆ ಮಾಡುವೆ ಶರಣಾ
ಯುದ್ಧಖಂಡದೂಳು ಅದ್ಭುತವಾಯಿತೋ ಇದು ಒಂದು ಕೇಳರಿ ಚಮತ್ಕಾರ
ರಾಮರಾವಣರ ಲಡಾಯಿಲಿಂದ ಕುಂಭಕರ್ಣ ಅದ ಸಂಹಾರಾ
ಹಿಂದಕ ರಾವಣ ಸೀತಾನ ಒಯ್ಯುವಾಗ ವಿಧಿಯು ಬಂದು ಹೊಕ್ಕಿತೊ ಲಂಕಾ
ಪಾಪವೆಂಬುದು ಪಣಿಯ ತುಂಬಿತೋ ಆಗತಿತ್ತೊ ಮುಂದಿನ ಮಹಿಮಾ
ರಾಮನ ದಂಡು ಮಂಗನ ಹಿಂಡು ಅಷ್ಟ ಕೋಟಿ ಪದ್ಮದ ಲೆಕ್ಕಾ
ಎಪ್ಪತ್ತೆಂಟುಕೋಟಿ ಸಿಂಹಕರಡಿಗಳು ಹುಲಿಯು ಬಂದವೋ ಲಢಾಯಕ
ನಳಾ ನೀಳಾ ಸುಗ್ರೀವ ಜಾಂಬುವಂತ ಹೊಕ್ಕು ಹೊಡಿದರೋ ದೈತ್ಯರನ
ರಾವಣ ಕಳಿಸಿದ ರಾಕ್ಷಸರೆಲ್ಲ ಸತ್ತುಹೋದರೊಬ್ಬರುಳಿಯಲಿಲ್ಲಾ
ಕೈಯಕಾಲ ಶಿರಹರಿದು ಸತ್ತರೋ ರಕ್ತದ ಹೊಳಿಯಲಿ ಒದ್ದಾಡಿ
ಎಪ್ಪತ್ತೆಂಟು ಕೋಟಿ ದೈತ್ಯರೆಲ್ಲಾ ತಿಕ್ಕಿ ಹಿಟ್ಟು ಮಾಡಿದರೊ ಕೈಯಲ್ಲಿ
ಆಗ ನೋಡರಿ ಕುಂಭಕರ್ಣನು ಮುರ್ಚ ಬಂದು ಬಿದ್ದಾನೋ ಭೂಮಿಮ್ಯಾಲ
ಕಾದಿಟ್ಟ ದಂಡಕರದ ರಾವಣ ಹೇಳತಾನು ಕುಂಭಕರ್ಣನೆಬ್ಬಿಸಿರಂತ
ಕುಂಭಕರ್ಣನ ಎಬ್ಬಿಸಲಿಕ್ಕೆ ದೈತ್ಯರೆಲ್ಲರು ಬಂದಾರೋ
ಎಪ್ಪತ್ತೆಂಟು ಕೋಟಿ ದೈತ್ಯರು ಬಂದು ಒದರಿಯಾಡಿದರೇಳಲಿಲ್ಲಾ
ಹರಿಯಗಾಣದ ಕಲ್ಲು ಸಿಕ್ಕಾಂಗ ಬಡಿದರ ಏನು ಮಾಡಿದ್ರ ಮಿಸಿಗ್ಯಾಡವಲ್ಲ
ಸರ್ವದೈತ್ಯರು ಚಿಂತಿಮಾಡುತ ಬ್ರಹ್ಮದೇವರ ಧ್ಯಾನ ಮಾಡಿದರೋ
ಬ್ರಹ್ಮದೇವರು ಬಂದು ಕುಂಭಕರ್ಣಗ ಮಂತ್ರ ಊದಿ ಬಿಟ್ಟರೋ ಮೂಗಿನೊಳಗೆ
ಕುಂಭಕರ್ಣ ನೋಡ್ರಿ ಎದ್ದ ಕುಳಿತಾನು ಆರ್ಭಟಿಸುತ ತನ್ನ ಮನದೊಳಗೆ
ಎಷ್ಟ ಮಾಂಸವನು ಅಳತಿ ಇಲ್ಲದೆ ತಂದು ಒಟ್ಟಿದ್ರೊ ಪರ್ವತದಾಂಗ
ತಿರುಗಿ ನೋಡುತವಾ ತಿಂದು ಕೂತಿದ್ದಾ ನೀಡದಾನು ಒಳಿತಾಗಿ
ಕುರಿಯ ಕೋಣಗಳ ಸೂರೆಂದು ತಿಂದನೋ ನೀರ ಕುಡಿದ ಮಧ್ಯಪಾನದೊಳಗ
ಅರ‍್ಹೇರಯೋಳ್ಹೇರ ಅಡಕಿ ಬಾಯಾಗ ಎಲಿಯ ಲೆಕ್ಕ ಹೇಳಲಿ ಹ್ಯಾಂಗ
ಕುಂಭಕರ್ಣನು ತಯಾರಾದನೋ ಧನುಸ್ಸು ಬಾಣ ಅವನ ಕೈಯಾಗ
ರಾಮಚಂದ್ರನ ಚಂಡು ಬಂದಿತೋ ಕುಳಿತಿದ್ದ ಕಬ್ಬಿಣ ರಥದೊಳಗ
ತ್ವರೆ ಮಾಡಿ ಬಂದು ರಾಮಚಂದ್ರನು ಕುಂಭಕರ್ಣನಿಗ್ಹೇಳಿದನು
ನಾನು ಹೋಡುವತೀನಿ ನೀನು ಹಿಡಿಯೋ ಜಾಣ ಬಿದ್ದು ನೆಲಕ ಕಚ್ಚಿಯೊ ಮಣ್ಣಾ
ತಾಯಿತಂದಿ ನಿಮ್ಮ ಗುರುವಿನ ಶೃತಿಮಾಡೋ ಉಳುವದಿಲ್ಲೋ ನಿನ್ನ ಪ್ರಾಣ
ರಾಮಚಂದ್ರನು ಅವಸರದಿಂದ ಬಾಣ ಹೊಡೆದವೊಂದುತ್ತರಲೇ
ಕುಂಭಕರ್ಣನ ರಥಾ ಸರದಿತೋ ಅಂಜಿಕೊಂಡು ಆ ಕ್ಷಣದಲ್ಲೇ
ಕುಂಭಕರ್ಣನ ಬಿಲ್ಲು ಮುರಿದಾವೋ ತಗೊಂಡು ಬಂದ ತನ್ನ ಕೈಯಲ್ಲಿ