ಜಗನ್ನಾಥನ ಗಾಲಿ ಕಣ್ಣುಗಳಲ್ಲಿ ಕಂಡೆ : ವಿಸ್ತಾರ-
ವಾದ ಸೂರ್ಯಕಾಂತಿಯ ಹೊಲದ ವೈಭವವನ್ನು,
ಹಗಲು-ರಾತ್ರಿಗಳನ್ನು ಒಟ್ಟಿಗೆ ಹಿಡಿದು, ಅಯ-
ಸ್ಕಾಂತ ಕೇಂದ್ರಬಿಂದುವಿಗೆ ತಂದ ಕೌಶಲವನ್ನು,

ಉತ್ಕಲದ ಶ್ವೇತ ಸೈಕತವೇಲೆಯುದ್ದಕ್ಕೂ
ಹಬ್ಬಿರುವ ಕಡುನೀಲಿ ಕಡಲ ಆಳಗಳನ್ನು,
ದಯಾನದಿಯ ನೀರನ್ನೆಲ್ಲ ಕೆಂಪಾಗಿಸಿದ ಆ
ಕಳಿಂಗ ಮಹಾಯುದ್ಧ ರಂಗದ ನೆನಪುಗಳನ್ನು,

ಅನಂತರ ಕವಿದ ಪಶ್ಚಾತ್ತಾಪ ದಗ್ಧ ಶಾಂತಿ-
ಯನ್ನು, ಅಶೋಕ ಚಕ್ರದ ಚಂದ್ರಕಾಂತಿಯನ್ನು,
ಕೋನಾರ್ಕದೆತ್ತರದ ಸೂರ್ಯರಥ ಮಂದಿರದ
ಸ್ತಬ್ದ ನಿಶ್ಶಬ್ದ ಚಕ್ರಗಳ ಚಲನೆಯನ್ನು,

ನಿಬಿಡಾರಣ್ಯದೊಳನಾಡುಗಳ ಗಿರಿಜನಸ್ಮೃತಿಯೊ-
ಳಡಗಿರುವ ಜಾನಪದ ಮಾಟ-ಮಂತ್ರಗಳನ್ನು,
ಸೃಷ್ಟಿಪೂರ್ವದ ಗೂಢ ಮೌನವನ್ನು, ಭೂತ ಭವಿ-
ಷ್ಯದ್ವರ್ತಮಾನಗಳ ನಿರಂತರ ಪರಿಭ್ರಮಣವನ್ನು.