ಹೃತಿಕ್ ರೋಷನ್, ಸಲ್ಮಾನ್ ಖಾನ್, ಸಂಜಯ್ ದತ್, ಅಕ್ಷಯ್ ಕುಮಾರ್, ಅಮೀರ್ ಖಾನ್ ಇವರಿಗೆಲ್ಲ ಅಗಲವಾದ ಭುಜ, ಹುರಿಗಟ್ಟಿದ ತೋಳು, ಗಟ್ಟಿ ಎದೆ, ಚಿಕ್ಕ ಸೊಂಟ ಸಾಮಾನ್ಯವಾಗಿರುವುದನ್ನು ಕಾಣುತ್ತೇವೆ.  ಹೀಗಾಗಲು ಅವರು ಯಾರೂ   ವರ್ಷಗಟ್ಟಲೆ ಖಂಡಿತ ಕಷ್ಟಪಟ್ಟಿಲ್ಲ (ಅವರೆಲ್ಲಾ ಸಿನಿಮಾಕ್ಕೆ ಬಂದ ಪ್ರಾರಂಭದಲ್ಲಿ ಹೇಗಿದ್ದರು ನೆನಪಿಸಿಕೊಳ್ಳಿ).  ಅದಕ್ಕೆ ಬದಲು ಟೆಸ್ಟೋಸ್ಟೆರಾನ್‌ನ ಮೊರೆ ಹೋಗಿದ್ದಾರೆ.

ಟೆಸ್ಟೋಸ್ಟೆರಾನ್ ಅಡ್ರಿನಲ್ ಗ್ರಂಥಿಯಲ್ಲಿ ಸ್ರವಿಸುತ್ತದೆ.  ಅದು ಹೆಂಗಸರಲ್ಲಿ ೪೦ರಿಂದ ೬೦ ನ್ಯಾನೋಗ್ರಾಂ, ಗಂಡಸರಲ್ಲಿ ೩೦೦ರಿಂದ ೧೩೦೦ ನ್ಯಾನೋಗ್ರಾಂನಷ್ಟು ಸ್ರವಿಸುತ್ತದೆ.  ೧೯೩೫ರಲ್ಲಿ ಟೆಸ್ಟೋಸ್ಟೆರಾನ್ ಬಗ್ಗೆ ಸಂಶೋಧನೆ ಪ್ರಕಟವಾಗಿ ಅದನ್ನು ಪ್ರತ್ಯೇಕಗೊಳಿಸಲಾಯಿತು.  ಇದರಿಂದಾಗಿ ಕೃತಿಕ ಟೆಸ್ಟೋಸ್ಟೆರಾನ್ ಉತ್ಪಾದನೆ ಪ್ರಾರಂಭವಾಯಿತು.

ಟೆಸ್ಟೋಸ್ಟೆರಾನ್ ರಸ ಭ್ರೂಣಾವಸ್ಥೆಯಲ್ಲಿ, ಮಗು ಹುಟ್ಟಿದ ಕೆಲವು ತಿಂಗಳಲ್ಲಿ ಹಾಗೂ ಹರೆಯದಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತದೆ.  ಹರೆಯದಲ್ಲಿ ಟೆಸ್ಟೋಸ್ಟೆರಾನ್ ಉತ್ಕಂಠ ಸ್ಥಿತಿಯಲ್ಲಿದ್ದು ಮುಖ, ಮೈಮೇಲೆ ರೋಮ, ಧ್ವನಿ ಬದಲಾವಣೆ ಮುಂತಾದ ದೈಹಿಕ ಬದಲಾವಣೆಯನ್ನುಂಟುಮಾಡುತ್ತದೆ.  ಟೆಸ್ಟೋಸ್ಟೆರಾನ್ ಮಿದುಳಿನ ಮೇಲೂ ಪರಿಣಾಮ ಬೀರುತ್ತದೆ.

ಮನುಷ್ಯ ಒಂದು ಯಂತ್ರವೆಂದುಕೊಂಡರೆ ಟೆಸ್ಟೋಸ್ಟೆರಾನ್ ವಿದ್ಯುತ್ ಇದ್ದ ಹಾಗೆ. ಅದು ಪುರುಷನಿಗೆ ಶಕ್ತಿ ಬಲ ಹಾಗೂ ಲೈಂಗಿಕ ಚಾಲನೆ ನೀಡುತ್ತದೆ.  ಕ್ರೀಡೆಗಳಲ್ಲಿ ಮತ್ತು ಬಲಪ್ರದರ್ಶನದ ಸಮಯದಲ್ಲಿ ಈ ರಸ ತನ್ನ ಅಗೋಚರ ಶಕ್ತಿಯನ್ನು ತೋರಿಸುತ್ತದೆ.  ಮಹಿಳೆಯರಲ್ಲೂ ಬಲ, ಹೋರಾಟ ಮನೋಭಾವ ಮತ್ತು ಕಷ್ಟಸಹಿಷ್ಣುತೆಯನ್ನು ಈ ರಸ ಹೆಚ್ಚಿಸುತ್ತದೆ.  ಇದರಿಂದಾಗಿ ಕ್ರೀಡಾಪಟುಗಳು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿರುವ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ೧೦೦ ನ್ಯಾನೋಗ್ರಾಂಗಿಂತಲೂ ಅಧಿಕವಾಗಿರುತ್ತದೆ.

ಕಾರ್ಮಿಕರು, ರೈತರು, ಸೈನಿಕರು, ಕರಾಟೆ ಮುಂತಾದ ಸಮರ ಕಲಾ ಪರಿಣತರಲ್ಲಿ ಟೆಸ್ಟೋಸ್ಟೆರಾನ್ ಪ್ರಮಾಣ ಹೆಚ್ಚು.  ಅಂತೆಯೇ ದೈಹಿಕ ಶ್ರಮಪಡದ ಕೆಲಸಗಾರರಲ್ಲಿ ಟೆಸ್ಟೋಸ್ಟೆರಾನ್ ಪ್ರಮಾಣ ೩೦೦ರಿಂದ ೫೦೦ ನ್ಯಾನೋಗ್ರಾಂನಷ್ಟಿರುತ್ತದೆ.

ಪ್ರಾಯಶಃ ಹೀಮ್ಯಾನ್ ಥರ ತೋರಲಿಚ್ಛಿಸುವವರು ಕೃತಕವಾಗಿ ಟೆಸ್ಟೋಸ್ಟೆರಾನ್ ತೆಗೆದುಕೊಳ್ಳಬಯಸುತ್ತಾರೆ.  ಕ್ರೀಡಾಪಟುಗಳು, ವೇಟ್‌ಲಿಫ್ಟರ್‌ಗಳು, ಸಿನಿಮಾನಟರು, ಮಾಡೆಲ್‌ಗಳು ಟೆಸ್ಟೋಸ್ಟೆರಾನ್‌ನಿಂದ ತಮ್ಮ ದೈಹಿಕ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ.  ನಿಜವಾಗಿ ನೋಡಿದರೆ ಟೆಸ್ಟೋಸ್ಟೆರಾನ್‌ನಿಂದ ದುಷ್ಪರಿಣಾಮಗಳೇ ಹೆಚ್ಚು.  ಹೃದಯದ ಕಾಯಿಲೆಗಳು, ಸ್ನಾಯುಸೆಳೆತ, ರಕ್ತನಾಳಗಳ ಸಿಡಿತ ಸಾಮಾನ್ಯವಾಗಿ ಕಂಡುಬಂದರೆ, ವಯಸ್ಸಾದವರಲ್ಲಿ ಪ್ರಾಸ್ಪೇಟ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

ಟೆಸ್ಟೋಸ್ಟೆರಾನ್ ಹೆಚ್ಚಿನ ಪ್ರಮಾದಲ್ಲಿರುವ ಶೇ. ೮೯ರಷ್ಟು ಜನ ಕ್ರೂರಿಗಳಾಗಿರುತ್ತಾರೆ.  ಹಿಂದುಮುಂದು ನೋಡದೆ ಯಾವುದೇ ಕೆಲಸಕ್ಕಾದರೂ ಕೈಹಾಕುತ್ತಾರೆ.  ಸುಳ್ಳು ಹೇಳುತ್ತಾರೆ.  ಮುಖದಲ್ಲಿ ಒರಟುತನ ಹೆಚ್ಚಿರುತ್ತದೆ.  ಲೈಂಗಿಕ ಸ್ಥಿರತೆ ಇರುವುದಿಲ್ಲ.  ಈ ಎಲ್ಲಾ ಅವಗುಣಗಳೂ ಟೆಸ್ಟೋಸ್ಟೆರಾನ್ ಸ್ವಾಭಾವಿಕವಾಗಿ ಹೆಚ್ಚು ಉತ್ಪತ್ತಿಯಾಗುವವರಲ್ಲಿ ಮತ್ತು ಟೆಸ್ಟೋಸ್ಟೆರಾನ್‌ಅನ್ನು ಕೃತಕವಾಗಿ ತೆಗೆದುಕೊಳ್ಳುವವರಲ್ಲಿ ಸಮಾನವಾಗಿರುತ್ತದೆ.

೧೯೯೩ರಲ್ಲಿ ಆಂಡ್ರಯೂ ಸಲಿವಾನ್ ನಡೆಸಿದ ಸಮೀಕ್ಷೆ ಪ್ರಕಾರ ವಿಶ್ವದಾದ್ಯಂತ ಸ್ತ್ರೀಯರು ಸುಂದರ, ಸಭ್ಯಪುರುಷನನ್ನು ಮದುವೆಯಾಗಲು ಬಯಸುತ್ತಾರೆ ಮತ್ತು ಸದೃಢ ಮೈಕಟ್ಟಿನ, ಆಕ್ರಮಣಶೀಲ ಪುರುಷನೊಂದಿಗೆ ಕೇವಲ ಗೆಳೆತನ ಬಯಸುತ್ತಾರೆ.  ಅದರಲ್ಲೂ ಭಾರತೀಯ ಮಹಿಳೆಯರು ತಮ್ಮ ಪತಿ ಹಾಗೂ ಗೆಳೆಯ ಇಬ್ಬರೂ ಸುಂದರ, ಮೃದು ಮನಸ್ಸಿನವರಾಗಿರಲಿ ಎಂದು ಬಯಸುತ್ತಾರೆ ಎಂದಿದ್ದಾರೆ.

ರೀಡರ್ಸ್ ಡೈಜೆಸ್ಟ್‌ನ ಇತ್ತೀಚಿನ ವರದಿಯಂತೆ, ಎಚ್‌ಐವಿ ಪಾಸಿಟವ್ ಇರುವ ವ್ಯಕ್ತಿಯೊಬ್ಬರು ತೂಕ ಕಳೆದುಕೊಳ್ಳತೊಡಗಿದಾಗ, ಟೆಸ್ಟೋಸ್ಟೆರಾನ್‌ ಪ್ರಮಾಣವನ್ನು ಪರೀಕ್ಷೆ ಮಾಡಿಸಿದರು.  ತಮ್ಮ ವಯಸ್ಸಿಗೆ ಟೆಸ್ಟೋಸ್ಟೆರಾನ್‌ ಕಡಿಮೆ ಇದ್ದದ್ದು ತಿಳಿದುಕೊಂಡು, ದಿನಂಪ್ರತಿ ಟೆಸ್ಟೋಸ್ಟೆರಾನ್‌ ಅನ್ನು ತೆಗೆದುಕೊಳ್ಳತೊಡಗಿದರು.  ’ಇದರಿಂದ ತೂಕ, ಸದೃಢ ಮೈಕಟ್ಟು, ಶಕ್ತಿ, ದೈಹಿಕ ಮತ್ತು ಮಾನಸಿಕ ಬಲವನ್ನು ಹೆಚ್ಚಿಸಿಕೊಂಡಿದ್ದೇನೆ.  ನಾನೊಬ್ಬ ರೋಗಿ ಎನ್ನುವ ಚಿಂತೆಯಿಂದ ಹೊರಬಂದು ಜೀವನೋತ್ಸಾಹ ಹೊಂದಿದ್ದೇನೆ’ ಎಂದಿದ್ದಾರೆ ಅವರು.

ಒಟ್ಟಿನಲ್ಲಿ ಪುರುಷರ ಜೀವನದಲ್ಲಿ ಟೆಸ್ಟೋಸ್ಟೆರಾನ್‌ ಆಟ ದೊಡ್ಡದು.