ಇವನಿಗೆ ಕಣ್ ಸಾವಿರ, ಕೈ ಸಾವಿರ, ಕಾಲ್ ಸಾವಿರ,
ತಲೆ ಸಾವಿರ, ನವ ಭಾರತ ಪುರುಷ !
ಎದ್ದು ನಿಂತಿದ್ದಾನೆ ಇಗೋ ಇವನು
ನೆಲದಿಂದ ಆ ಮುಗಿಲ ತನಕ !

ಕಾಲಡಿಯಲ್ಲಿ ತೊದಲುವ ಕಡಲು; ತಲೆಯಲ್ಲಿ
ಹಿಮಶಿಖರಗಳ ಧೀರ ಮೌನ.
ದೇಹಾದ್ಯಂತ ವಿವಿಧ ಜನಪದ ; ನರನಾಡಿಯಲಿ
ಮಿಡಿವ ನೆತ್ತರಿನಲ್ಲಿ ಒಂದೆ ಹೃದಯ.

ಇವನ ಕೈ ಅಲ್ಲಿ ಒತ್ತುವುದು ಶಿಖರಗಳ,
ಧುಮ್ಮಿಕ್ಕುವಳು ಗಂಗೆ ನೆಲದುದ್ದ ಹರಿದು !
ಇವನುಸಿರು ಪರಿಮಳ ತಾಗಿ ಮೊಳೆವುದು ಮಣ್ಣು,
ಕೆಚ್ಚಲುಗಳಲಿ ತುಂಬುವುದು ಹಾಲು !

ಇವನು ಕಣ್ ತೆರೆದು ಸಾವಿರ ದೀಪ ಮನೆ ಮನೆಗೆ
ಸ್ನೇಹ-ವಿಶ್ವಾಸ-ಕರುಣೆ ಪ್ರೀತಿ.
ಚಿಕ್ಕೆಯಕ್ಷರಗಳಲಿ ಇವನ ಮಂತ್ರದ ವಾಣಿ,
ಕೆಳಗೆ ಎಡವಿದರೂನು ಇಲ್ಲ ಭೀತಿ.

ಇವನ ಚಂದ್ರನ ಕಿರಣ ಸೋಂಕಲು, ದನಿ ಚಿಗುರಿ
ವೀಣೆ ತಂಬೂರಿ, ಕವಿಗೆ ಸ್ಫೂರ್ತಿ !
ಇವನ ಭ್ರೂಭಂಗದಿಂದ ರಾಜ್ಯಕ್ರಾಂತಿ
ಪತ್ರಿಕೆಯ ಪುಟಗಳಲಿ ಅದರ ಕೀರ್ತಿ !

ಇವನ ಕೊರಳೆಚ್ಚರಿಸುತಿದೆ ಬೆಟ್ಟಗಳ ಘಟ್ಟಗಳ,
ಸಿಡಿದೊಡೆಯುತಿದೆ ಶತಮಾನಗಳ ಲೋಹನಿದ್ರೆ !
ಭೋರ್ಗರೆವ ಹೊಳೆಗಳನು ಅಣೆಕಟ್ಟುಗಳ ಬೆರಳಿನಲಿ
ನಿಲ್ಲಿಸಿದೆ ಇವನ ಕಣ್ ಸನ್ನೆ !

ಜಲಪಾತಗಳಲ್ಲಿ ಧುಮ್ಮಿಕ್ಕುವುದು ಇವನ ನಗೆ,
ಮಿಂಚುದೀಪದ ತುಟಿಯ ಮಂದಹಾಸ !
ನೂರು ರೇಡಿಯೊಗಳಲಿ ಇವನ ರಾಗದ ಮೋಡಿ,
ನೂರು ಹೆಜ್ಜೆಗಳಲ್ಲಿ ಇವನ ಗೆಜ್ಜೆ !

ಯಂತ್ರಾಟ್ಟಹಾಸಗಳಲ್ಲಿ ಇವನ ಪೌರುಷ, ಮೊಳಗು ;
ಎದ್ದ ಕಟ್ಟಡಗಳಲಿ ಇವನ ಹೆಸರು !
ಸಂಶೋಧನಾಲಯದ ಮೌನ ಸಾಧನೆಗಳಲಿ
ಲಾಳಿಯಾಡುವುದಿವನ ಸ್ಫೂರ್ತಿಯುಸಿರು !

ಗಡಿಯಾರ ತಿರುಗುವುದು ಇವನಿಂದ ; ನೌಕೆ
ಎದೆಯುಬ್ಬಿ ತೇಲುವುದು ಇವನಿಂದ ;
ಗಡಿಕಾಯ್ವ ಕಣ್ಣಿಗೆಚ್ಚರಿಕೆ ಇವನಿಂದ ;
ವಿಮಾನದ ರೆಕ್ಕೆ ಹಾರುವುದು ಇವನಿಂದ.

ಇವನಿಗೆ ಕಣ್ ಸಾವಿರ, ಕೈ ಸಾವಿರ, ಕಾಲ್ ಸಾವಿರ,
ತಲೆ ಸಾವಿರ, ನವಭಾರತ ಪುರುಷ
ಒಬ್ಬೊಬ್ಬನೆದೆಯಲ್ಲು ಎದ್ದು ನಿಂತಿದ್ದಾನೆ ಇವನು
ನೆಲದಿಂದ ಆ ಮುಗಿಲ ತನಕ !