ಇಂದು ನಾವು ಸ್ವತಂತ್ರರು. ನಮ್ಮದು ಸ್ವತಂತ್ರದೇಶ. ಪ್ರಜೆಗಳೇ ಇಂದು ಇಲ್ಲಿನ ಪ್ರಭುಗಳು. ಪ್ರಜಾಪ್ರಭುತ್ವದ ತತ್ವಕ್ಕೆ ಅನುಗುಣವಾಗಿ ಇಲ್ಲಿ ಚುನಾವಣೆಗಳು ನಡೆಯುತ್ತವೆ. ಜನರ ಬಹುಮತ ಪಡೆದು ಬಂದವರು ಸರಕಾರ ರಚಿಸುತ್ತಾರೆ.

ವ್ಯಾಪಾರಕ್ಕೆ ಬಂದು ಪ್ರಭುಗಳಾದ ಇಂಗ್ಲೀಷರು

ಆದರೆ ಹಿಂದೆ ಹೀಗಿರಲಿಲ್ಲ. ನಾವೆಲ್ಲ ಗುಲಾಮರಾಗಿದ್ದೆವು. ಸರಕಾರದವರು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ನಾವು ಹೇಳುವಂತೆ ಇರಲಿಲ್ಲ. ಏಕೆಂದರೆ ಸರಕಾರ ನಮ್ಮದಾಗಿರಲಿಲ್ಲ. ಇಲ್ಲಿ ಅಧಿಕಾರದಲ್ಲಿದ್ದ ಜನ ನಮ್ಮವರಾಗಿರಲಿಲ್ಲ. ದೂರದ ಇಂಗ್ಲೆಂಡಿನವರು ನಮ್ಮ ದೇಶವನ್ನು ಆಳುತ್ತಿದ್ದರು. ಸಾವಿರಾರು ಮೈಲಿ ದೂರದಿಂದ ಸಮುದ್ರ ದಾಟಿ ಇಂಗ್ಲೀಷರು ಭಾರತಕ್ಕೆ ಬಂದರು. ಇವರು ಇಲ್ಲಿಗೆ ಬಂದುದು ವ್ಯಾಪಾರ ಮಾಡಲೆಂದೇ. ಹಾಗೆಂದೇ ಅಲ್ಲಲ್ಲಿ ವ್ಯಾಪಾರೀ ಕೋರಿಗಳನ್ನು ಕಟ್ಟಿಕೊಂಡು ವ್ಯಾಪಾರವನ್ನೂ ಮಾಡಲಾರಂಭಿಸಿದರು. ಜೊತೆಗೆ ಏನೇನೋ ಕುತಂತ್ರಗಳನ್ನೂ ನಡೆಸಿದರು. ವ್ಯಾಪಾರಕ್ಕೆ ಎಂದು ಬಂದವರು ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಭಾರತವನ್ನು ಆಳಲು ಆರಂಭಿಸಿದರು. ನಮಗೆ ತಿಳಿಯದಂತೆಯೇ ನಾವು ಗುಲಾಮರಾದೆವು. ಇದು ನೂರಾರು ವರ್ಷಗಳವರೆಗೆ ನಡೆದುಕೊಂಡು ಬಂದಿತು.

ನಮ್ಮ ಜನರಿಗೆ ಕಷ್ಟದ ದಿನಗಳು ಆರಂಭವಾದವು. ಇಲ್ಲಿರುವ ಸಂಪತ್ತು ಇಂಗ್ಲೆಂಡಿಗೆ ಹೋಯಿತು. ಇಲ್ಲಿರುವ ಜನರಿಗೆ ಬಡತನವೇ ಗತಿಯಾಯಿತು. ದೇಶದಲ್ಲಿ ದೊಡ್ಡ ಶಾಲೆಗಳಿಲ್ಲ, ಕಾರ್ಖಾನೆಗಳಿಲ್ಲ. ಇಲ್ಲಿ ಬೆಳೆದ ಹತ್ತಿ ಇಂಗ್ಲೆಂಡಿಗೆ ಹೋಯಿತು. ಅಲ್ಲಿಂದ ಅದು ಬಟ್ಟೆಯಾಗಿ ತಿರುಗಿ ಬಂದಿತು. ನಮ್ಮ ನೇಯ್ಗೆಗಾರರು ಕೈಕಟ್ಟಿ ಕುಳಿತರು. ನಮ್ಮ ಜನರಿಗೆ ನಮ್ಮ ದೇಶದಲ್ಲೇ ಗೌರವವಿರಲಿಲ್ಲ. ಪ್ರಾಣಿಗಳ ಹಾಗೆ ಅವರು ನಮ್ಮವರನ್ನು ಕಾಣುತ್ತಿದ್ದರು.

ಸ್ವಾತಂತ್ರ್ಯದ ಬಯಕೆ

ನಾವು ಹೀಗೆ ಗುಲಾಮರಗಿರಿಯಲ್ಲೇ ಇರಬೇಕೆ ಎಂದು ಕೆಲವರು ಹಿರಿಯರು ಯೋಚಿಸಲಾರಂಭಿಸಿದರು. ಇಂಗ್ಲೀಷರನ್ನು ಈ ದೇಶದಿಂದ ಓಡಿಸಬೇಕು, ಇಲ್ಲಿಯ ಆಡಳಿತ ನಮ್ಮ ವಶದಲ್ಲೇ ಇರಬೆಕು, ಇಲ್ಲಿರುವ ಸಂಪತ್ತನ್ನು ನಾವು ಉಪಯೋಗಿಸಿಕೊಳ್ಳಬೇಕು ಎಂದು ಇವರು ನಿರ್ಧಾರ ಮಾಡಿದರು. ಹಾಗೂ ಇಂಗ್ಲೀಷರ ಸರಕಾರದ ವಿರುದ್ಧ ದೊಡ್ಡ ಹೋರಾಟವನ್ನು ಆರಂಭಿಸಿದರು.

ಸುಮಾರು ಇನ್ನೂರು ವರ್ಷಗಳ ಹಿಂದೆ ಇಂಗ್ಲೀಷರ್ ವಿರುದ್ಧ ಹೋರಾಟಗಳು ಆರಂಭವಾದವು. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಜನ ಈ ಹೋರಾಟಗಳನ್ನು ಆರಂಭಿಸಿದರು. ರೈತರು, ಕಾರ್ಮಿಕರು, ಸಿಪಾಯಿಗಳು ಸರಕಾರದ ವಿರದ್ಧ ದಂಗೆ ಎದ್ದರು. ಆದರೆ ಈ ಎಲ್ಲ ದಂಗೆಗಳಲ್ಲೂ ಒಂದು ವ್ಯವಸ್ಥೆ ಇರಲಿಲ್ಲ. ಹೀಗಾಗಿ ದಂಗೆ ಎದ್ದ ಜನ ಸೋಲಬೇಕಾಯಿತು. ಅನಂತರ ವ್ಯವಸ್ಥಿತ ರೀತಿಯಲ್ಲಿ ಸ್ವಾತಂತ್ರ್ಯಚಳುವಳಿ ಆರಂಭವಾಯಿತು. ಈ ಚಳುವಳಿ ಎರಡು ರೀತಿಯದಾಗಿತ್ತು.

ಎರಡು ಮಾರ್ಗಗಳು

ಇಂಗ್ಲೀಷರ್ ವಿರುದ್ಧ ಅಹಿಂಸೆಯಿಂದ ಹೋರಾಡೋಣ ಎಂದರು ಕೆಲವರು. ಅವರ ಕಾನೂನುಗಳನ್ನು ಮುರಿಯೋಣ, ಗಂಧದ ಮರ ಕಡಿಯೋಣ, ಉಪ್ಪನ್ನು ಜನ ತಯಾರು ಮಾಡಕೂಡದು ಎಂದು ಅವರ ನಿಯಮ, ನಾವು ತಯಾರು ಮಾಡೋಣ, ಅವರು ಬಂಧಿಸಿದಾಗ ನಗು ನಗುತ್ತಾ ಜೈಲಿಗೆ ಹೋಗೋಣ. ಅವರು ಎಷ್ಟೇ ಕಷ್ಟ ಕೊಡಲಿ, ಹೊಡೆಯಲಿ, ಬಡಿಯಲಿ ಅವರ ಮೆಲೆ ಕೈ ಎತ್ತುವುದು ಬೇಡ. ಹೀಗೆ ಅಹಿಂಸೆಯಿಂದ ಅವರ ಮನಸ್ಸನ್ನು ಒಲಿಸಿಕೊಳ್ಳೋಣ. ಸ್ವರಾಜ್ಯವನ್ನು ಪಡೆಯೋಣ ಎಂದರು ಇವರು.

ಈ ಅಹಿಂಸೆಯ ದಾರಿ ಬೇಡ ಎಂದು ಇನ್ನೂ ಕೆಲವರು ಹಠ ಹಿಡಿದರು. ಇಂಗ್ಲೀಷರ್ ಕೈಯಲ್ಲಿ ಕತ್ತಿ ಇದೆ. ಬಂದೂಕು, ಮದ್ದು ಗುಂಡುಗಳಿವೆ. ಅವರ ಬಳಿ ಸೈನ್ಯವಿದೆ. ನಾವೂ ಕತ್ತಿ ಹಿಡಿಯೋಣ. ಮದ್ದುಗುಂಡು ಸಂಗ್ರಹಸಿಸೋಣ. ಬಂದೂಕುಗಳನ್ನು ಕಲೆ ಹಾಕೋಣ. ನಾವೂ ಒಂದು ಸೈನ್ಯವನ್ನು ಕಟ್ಟೋಣ. ಇಂಗ್ಲೀಷರ ಮೇಲೆ ಯುದ್ಧ ಸಾರಿ ಅವರನ್ನು ಇಲ್ಲಿಂದ ಓಡಿಸೋಣ. ಮುಳ್ಳನ್ನು ಮುಳ್ಳಿನಿಂದ ತೆಗೆಯೋಣ. ಇದು ಅವರ ಅಭಿಪ್ರಾಯವಾಗಿತ್ತು.

ಹೀಗೆ ಕೆಲವರು ಶಾಂತಿಯ ಮೂಲಕ ಸ್ವಾತಂತ್ರ್ಯಪಡೆಯಲು ತೀರ್ಮಾನಿಸಿದರು. ಇನ್ನೂ ಕೆಲವರು ಕ್ರಾಂತಿಯ ಮೂಲಕ ಸ್ವಾತಂತ್ರ್ಯ ಪಡೆಯುತ್ತೇವೆ ಎಂದರು. ಕ್ರಾಂತಿಯನ್ನು ಮಾಡಿಯೇ ಸ್ವಾತಂತ್ರ್ಯ ಪಡೆಯೋಣ ಎಂದವರು ಕ್ರಾಂತ್ರಿಕಾರಿಗಳು ಎನಿಸಿಕೊಂಡರು. ಈ ಕ್ರಾಂತಿಕಾರಿಗಳಲ್ಲಿ ಪುಲಿನ್‌ಬಿಹಾರಿದಾಸ್‌ಪ್ರಮುಖರು.

ಕುಟುಂಬ

ಢಾಕ್ಕ ಇಂದಿನ ಬಾಂಗ್ಲಾ ದೇಶದ ಸುಂದರ ರಾಜಧಾನಿ. ಅಂದು ಬಾಂಗ್ಲಾ ದೇಶ ಅಖಂಡವಾಗಿತ್ತು. ಬಂಗಾರದ ಬಾಂಗ್ಲಾ ಎಂದು ಕವಿಗಳು ಅದನ್ನು ಕರೆಯುತ್ತಿದ್ದರು. ಅನಂತರ ಬಾಂಗ್ಲಾ ದೇಶವನ್ನು ಎರಡನ್ನಾಗಿ ಒಡೆಯಲಾಯಿತು. ಭಾರತ-ಪಾಕಿಸ್ತಾನಗಳ ರಚನೆಯಾದ ಮೇಲೆ ಒಂದು ತುಂಡು ಭಾರತದಲ್ಲಿ., ಇನ್ನೊಂದು ತುಂಡು ಪಾಕಿಸ್ತಾನದಲ್ಲಿ ಸೇರಿಹೋಯಿತು. ಪಾಕಿಸ್ತಾನದೊಡನೆ ಸೇರಿಕೊಂಡ ಬಾಂಗ್ಲಾದೇಶ ಕೆಲ ವರ್ಷಗಳ ಹಿಂದೆ ಸ್ವತಂತ್ರವಾಯಿತು. ಈ ಸ್ವತಂತ್ರ ಬಾಂಗ್ಲಾದ ರಾಜಧಾನಿಯೇ ಢಾಕ್ಕಾ.

ಢಾಕ್ಕಾದ ಲೋನಾಸಿಂಘ ಎಂಬಲ್ಲಿ ಕಾಯಸ್ಥ ಜನಾಂಗಕ್ಕೆ ಸೇರಿದ ಒಂದು ಕುಟುಂಬ ವಾಸಿಸುತ್ತಿತ್ತು. ಈ ಕುಟುಂಬದ ಅನೇಕರು ಡೆಪ್ಯೂಟಿ ಕಲೆಕ್ಟರುಗಳಾಗಿದ್ದರು. ಈ ಕಾರಣದಿಂದಾಗಿ ಈ ಕುಟುಂಬಕ್ಕೆ “ಡೆಪ್ಯೂಟಿಗಳ ಕುಟುಂಬ” ಎಂಬ ಅಡ್ಡ ಹೆಸರೂ ಇತ್ತು. ತುಂಬಾ ಗೌರವ ಪಡೆದಿದ್ದ ಈ ಕುಟುಂಬದಲ್ಲಿ ಪುಲಿನ ಬಿಹಾರಿದಾಸ್‌ರ ಜನನವಾಯಿತು. ಇವರ ತಂದೆಯ ಹೆಸರು ನಬಕುಮಾರ್. ತಾಯಿ ಸ್ವರ್ಣಕುಮಾರಿ ದಾಸ್. ಪುಲಿನ ಬಿಹಾರಿದಾಸ್‌ರು ಹುಟ್ಟಿದ್ದು ೧೮೭೭ನೇ ಇಸವಿ ಜನವರಿ ೨೮ ರಂದು.

ತಾಯಿಯ ಶಿಕ್ಷಣ

ಪುಲಿನನ ತಾಯ ಸ್ವರ್ಣಕುಮಾರಿಗೆ ಹಿಂದೂ ಧರ್ಮ ಸಂಪ್ರದಾಯಗಳಲ್ಲಿ ತುಂಬಾ ಶ್ರದ್ಧೆ. ಪ್ರತಿಯೊಂದು ಆಚರಣೆಯನ್ನೂ ಅರ್ಥ ಮಾಡಿಕೊಂಡು ಅನುಸರಿಸುತ್ತಿದ್ದಳು. ಮಗನನ್ನು ಕೂಡ ತಾಯಿ ಹಾಗೆಯೇ ಬೆಳೆಸಿದಳು. ಧರ್ಮ ಸಂಪ್ರದಾಯಗಳ ಬಗ್ಗೆ ಗಮನಲ್ಲಿ ಅಭಿಮಾನ ಭಕ್ತಿ ಬೆಳೆಯುವಂತೆ ನೋಡಿಕೊಂಡಳು. ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ಭಾರತ ನಮ್ಮ ಜನ್ಮಭೂಮಿ. ಈ ಜನ್ಮಭೂಮಿಯನ್ನು ನಾವು ಪ್ರೀತಿಸಬೇಕು. ಈ ಎಲ್ಲ ವಿಚಾರಗಳನ್ನೂ ಸ್ವರ್ಣಕುಮಾರಿ ತನ್ನ ಮಗನಿಗೆ ಹೇಳಿಕೊಟ್ಟಳು. ದೇವರಲ್ಲಿ, ಧರ್ಮದಲ್ಲಿ ಭಕ್ತಿಯನ್ನು ಬೆಳೆಸಿದಳು.

ಪುಲಿನ ಬೆಳೆದು ದೊಡ್ಡವನಾದಂತೆ ತಾಯಿ ಅವನಿಗೆ ನಮ್ಮ ದೇಶದ ಎಲ್ಲ ಪುರಾಣ ಪುರುಷರ ಕತೆಗಳನ್ನೂ ಹೇಳಿದಳು. ಅಭಿಮನ್ಯು, ಭಕ್ತ ಮಾರ್ಕಂಡೇಯ, ಏಕಲವ್ಯರ ವಿಷಯ ಪುಲಿನನಿಗೆ ಚಿಕ್ಕಂದಿನಲ್ಲೇ ತಿಳಿಯಿತು. ಶಿವಾಜಿಯ ಕತೆಯನ್ನೂ ಆಕೆ ಮಗನಿಗೆ ತಿಳಿಸಿ ಹೇಳಿದಳು.

ಪುಲಿನನ ಎಳೆ ಮನಸ್ಸಿನ ಮೇಲೆ ಅಭಿಮನ್ಯುವಿನ ಧೈರ್ಯ, ಏಕಲವ್ಯನ ಶ್ರದ್ಧೆ, ಮಾರ್ಕಂಡೇಯನ ಬುದ್ಧಿವಂತಿಕೆ ಮತ್ತು ಭಕ್ತಿ ಪ್ರಭಾವ ಬೀರಿದವು.

ಬಾರಿಸಾಲ್ ಎಂಬಲ್ಲಿನ ಶಾಲೆಯಲ್ಲಿ ಪುಲಿನ ತನ್ನ ಪ್ರಾರಂಭದ ವಿದ್ಯಾಭ್ಯಾಸವನ್ನು ಮುಗಿಸಿದನು. ಅನಂತರ ಫರೀದ್‌ಪುರ ಜಿಲ್ಲೆಯ ಶಾಲೆಯಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣನಾದನು. ಕೂಚ್ ಬಿಹಾರ್ ಕಾಲೇಜಿನ ವಿದ್ಯಾರ್ಥಿಯಾಗಿ ಎಫ್‌.ಎ. ಪರೀಕ್ಷೆಯಲ್ಲಿ ಉತ್ತೀರ್ಣನಾದಾಗ ಆತನಿಗೆ ೨೧ ವರ್ಷ.

ಸ್ವಾತಂತ್ರ್ಯದ ಚಳುವಳಿ

ಇದೇ ಸಮಯದಲ್ಲಿ ರಾಷ್ಟ್ರದಲ್ಲಿ ಸ್ವಾತಂತ್ರ್ಯ ಚಳುವಳಿ ಆರಂಭವಾಗಿತ್ತು. ಎಲ್ಲೆಲ್ಲೂ ಸಭೆ ಸಮಾರಂಭಗಳು ನಡೆಯುತ್ತಿದ್ದವು. ಜನ ಬ್ರಿಟಿಷ್ ಸರಕಾರದ ವಿರುದ್ಧ ಹಲವು ರೀತಿಯ ಹೋರಾಟಗಳನ್ನು ಆರಂಭಿಸಿದ್ದರು. ಚಳುವಳಿಯ ನಾಯಕರು ಜನರನ್ನು ಭಾಷಣಗಳ ಮೂಲಕ ಹುರಿದುಂಬಿಸುತ್ತಿದ್ದರು. ಸತ್ಯಾಗ್ರಹಗಳು ನಡೆಯುತ್ತಿದ್ದವು. ವಿದೇಶಿ ವಸ್ತ್ರಗಳನ್ನು ಬಹಿರಂಗವಾಗಿ ಸುಡಲಾಗುತ್ತಿತ್ತು. ಕಾಯಿದೆ ಕಾನೂನುಗಳನ್ನು ಮುರಿದು ಜನ ಸೆರೆಮನೆಗೆ ಹೋಗಲಾರಂಭಿಸಿದರು.

ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಗೆ ಬೆಂಬಲ ನೀಡಲು ಹಲವು ಪತ್ರಿಕೆಗಳು ಹುಟ್ಟಿಕೊಂಡವು. ಈ ಪತ್ರಿಕೆಗಳು ಜನರಲ್ಲಿ ಸ್ವಾತಂತ್ರ್ಯಾಭಿಮಾನ ಹುಟ್ಟುವಂತಹ ಲೇಖನಗಳನ್ನು ಬರೆದು ಪ್ರಕಟಿಸಲಾರಂಭಿಸಿದವು. ಗುಲಾಮಗಿರಿಯಿಂದ ನಮಗಾಗುವ ಕೇಡೇನು, ಸ್ವಾತಂತ್ರ್ಯದಿಂದ ನಮಗೆ ಸಿಗುವ ಫಲವೇನು ಎಂಬ ವಿಷಯಗಳ ಬಗ್ಗೆ ಪತ್ರಿಕೆಗಳು ಲೇಖನಗಳನ್ನು ಪ್ರಕಟಿಸಲಾರಂಭಿಸಿದವು. ಆದರೆ ಸರಕಾರ ಪತ್ರಿಕೆಗಳು ಹೀಗೆಲ್ಲಾ ಬರೆಯಬಾರದೆಂದಿತು. ಪತ್ರಿಕೆಯ ಸಂಪಾದಕರನ್ನು ಬಂಧಿಸಿತು. ಚಳುವಳಿಗಾರರ ಮೇಲೆ ಉಗ್ರವಾದ ಕ್ರಮ ತೆಗೆದುಕೊಳ್ಳಲು ಸರಕಾರ ಪ್ರಾರಂಭಿಸಿತು. ಬ್ರಿಟಿಷ್ ಸರಕಾರ ತಾನು ಕತ್ತಿ ಹಿಡಿದು ಗುಂಡು ಹಾರಿಸಿ ಈ ಎಲ್ಲ ಚಳುವಳಿಗಳನ್ನು ತುಳಿಯುವುದಾಗಿ ಸಾರಿತು.

೧೮೯೮ರಲ್ಲಿ ವೈಸರಾಯ್ ಆಗಿದ್ದ ಎಲ್ಗಿನ್ ಎಂಬುವವನು ಬಹಿರಂಗವಾಗಿಯೇ ಹೇಳುತ್ತಿದ್ದ “ಭಾರತವನ್ನು ಕತ್ತಿಯ ಸಹಾಯದಿಂದ ಪಡೆದೆವು: ಅದನ್ನು ಕತ್ತಿಯ ಮೂಲಕವೇ ಉಳಿಸಿಕೊಳ್ಳುತ್ತೇವೆ.” ಸರಕಾರ ಕೂಡ ಈ ದಾರಿಯಲ್ಲೇ ಮುಂದುವರಿಯಿತು.

ಪ್ರಭಾವಗಳು

ಪುಲಿನನಿಗೆ ಆಗ ಇಪ್ಪತ್ತೊಂದು ವರ್ಷ ವಯಸ್ಸು. ಸುತ್ತಲೂ ನಡೆಯುತ್ತಿರುವುದನ್ನು ಕಣ್ಣು ತೆರೆದು ನೋಡುವುದನ್ನು ಆತ ಕಲಿತಿದ್ದ. ಕಿವಿಗೆ ಬೀಳುವ ಎಲ್ಲ ಮಾತುಗಳನ್ನೂ ಗಮನವಿಟ್ಟು ಕೇಳುತ್ತಿದ್ದ. ನಗರದಲ್ಲಿ ನಡೆಯುತ್ತಿದ್ದ ಎಲ್ಲ ಸಮಾರಂಭಗಳಿಗೂ ತಪ್ಪದೆ ಹಾಜರಾಗುತ್ತಿದ್ದ. ಕೈಗೆ ಸಿಕ್ಕ ಎಲ್ಲ ರಾಷ್ಟ್ರೀಯ ಪತ್ರಿಕೆಗಳನ್ನೂ ಓದುತ್ತಿದ್ದ.

ಬ್ರಿಟಿಷರು ಭಾರತದ ಜನರ ಮೇಲೆ ಕತ್ತಿ ಹಿರಿದು ನಿಂತಿದ್ದು ನಿಜವಾಗಿತ್ತು. ಸರಕಾರ ಪೊಲೀಸರಿಗೆ ಹೆಚ್ಚು ಅಧಿಕಾರವನ್ನು ಕೊಟ್ಟಿತು. ಈ ಅಧಿಕಾರದ ಬಲದಿಂದ ಪೊಲೀಸರು ಸಣ್ಣಪುಟ್ಟ ಚಳುವಳಿಗಳನ್ನು ಹಿಮ್ಮೆಟ್ಟಿಸತೊಡಗಿದರು. ಇದನ್ನೆಲ್ಲ ನೋಡಿ ಪುಲಿನನಂತಹ ಯುವಕರು ರೊಚ್ಚಿಗೆದ್ದರು. ಈ ಯುವಕರ ರಕ್ತ ಬಿಸಿಯಾಯಿತು.

ಪುಲಿನನಿಗೆ ಹಿಂದಿನಿಂದಲೂ ಢಾಕ್ಕಾದ ಬಾಲ್ಯಾಶ್ರಮದ ಸಂಪರ್ಕವಿತ್ತು. ಆಧ್ಯಾತ್ಮಿಕ ಗುರುಗಳಾದ ಜೋಗಾನಂದ ಸ್ವಾಮಿ ಹಾಗೂ ತ್ರಿಪುರಲಿಂಗ ಸ್ವಾಮಿಗಳ ಮಾರ್ಗದರ್ಶನ ಪುಲಿನನಿಗೆ ದೊರೆಯಿತು. ಪುಲಿನನ ಸ್ವಭಾವವನ್ನು ಅವರು ಅರ್ಥ ಮಾಡಿಕೊಂಡರು. ಇವನಲ್ಲಿ ಉಕ್ಕಿ ಹರಿಯುತ್ತಿದ್ದ ಹುಮ್ಮಸ್ಸು, ಉತ್ಸಾಹವನ್ನು ಉಪಯೋಗಿಸಿಕೊಳ್ಳಬೇಕೆಂದು ಅವರು ನಿರ್ಧರಿಸಿದರು. ಹಿಂದೂ ಧರ್ಮ ಹಾಗೂ ಭಾರತದ ವಿಷಯವನ್ನು ಇನ್ನಷ್ಟು ತಿಳಿಸಿಕೊಟ್ಟರು. ಅವುಗಳಲ್ಲಿ ಅವನ ಅಭಿಮಾನವನ್ನು ಬೆಳೆಸಿದರು.

ಭಾರತದ ಬಗ್ಗೆ, ಇಲ್ಲಿಯ ಧರ್ಮ ಸಂಸ್ಕೃತಿಯ ಬಗ್ಗೆ ಹೆಚ್ಚು ವಿಷಯಗಳು ಪುಲಿನನಿಗೆ ತಿಳಿದವು. ಇಲ್ಲಿಯ ಮಹಾನ್ ಋಷಿಗಳು, ವೀರ ದೊರೆಗಳು ನ್ಯಾಯ ನೀತಿಗಾಗಿ, ಧರ್ಮಕ್ಕಾಗಿ ನಡೆಸಿದ ಹೋರಾಟಗಳ ಚಿತ್ರ ಅವನ ಕಣ್ಣೆದುರು ಮೂಡಿ ನಿಂತಿತು. ಈ ನೆಲದಲ್ಲಿ ನಡೆದ ಮಹಾಭಾರತದ ಯುದ್ಧ, ರಾಮಾಯಣದ ಯುದ್ಧಗಳೆಲ್ಲ ಧರ್ಮವನ್ನು ಎತ್ತಿ ಹಿಡಿಯಲೆಂದು ನಡೆದದ್ದಲ್ಲವೆ ಎನಿಸಿತು. ಅವನಿಗೆ. ದುಷ್ಟ ಮೃಗಗಳನ್ನು ಮಂತ್ರದಿಂದ ಎದುರಿಸುವುದು ಅಸಾಧ್ಯ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದಾತ ಯೋಚಿಸಿದ. ಅವನ ಈ ಯೋಚನೆಗೆ ಅನುಗುಣವಾಗಿ ಗುರುಗಳಾದ ಜೋಗಾನಂದ ಸ್ವಾಮಿಗಳು ಮತ್ತು ತ್ರಿಪುರಲಿಂಗ ಸ್ವಾಮಿಗಳು ಅವನ ವಿಚಾರಗಳನ್ನು ಬೆಂಬಲಿಸಿದರು. ಅಧ್ಯಾತ್ಮಕತೆಯನ್ನು ಬಿಟ್ಟರೆ ನಮ್ಮ ಬದುಕೇ ಅರ್ಥಹೀನವಾಗುತ್ತದೆ ಅನ್ನುವುದನ್ನು ಅವರು ಸ್ಪಷ್ಟಪಡಿಸಿದರು.

ರಾಷ್ಟ್ರವು ಗುಲಾಮಗಿರಿಯಲ್ಲಿ ಇರುವಾಗ ತರುಣರು ಏನು ಮಾಡಬೇಕು ಎಂಬ ಪ್ರಶ್ನೆಗೆ ಪುಲಿನ ಉತ್ತರವನ್ನು ಹುಡುಕ ಹೊರಟ.

ಕ್ರಾಂತಿಯ ಪಥ

ಇಟಲಿ ದೇಶದ ಮಹಾಶೂರ ಗ್ಯಾರಿಬಾಲ್ಡಿಯ ವಿಷಯ ಪುಲಿನನಿಗೆ ನೆನಪಾಯಿತು. ಅವನಿದ್ದುದು ಹತ್ತೊಂಬತ್ತನೆಯ ಶತಮಾನದಲ್ಲಿ (೧೮೦೭-೧೮೮೨). ಆಗ ಇಟಲಿಯ ದೇಶದಲ್ಲಿ ಪ್ರಜೆಗಳು ಸುಖವಾಗಿರಲಿಲ್ಲ. ಅವರಿಗೆ ಸ್ವಾತಂತ್ರ್ಯವಿರಲಿಲ್ಲ. ಜೀವನದಲ್ಲಿ ಭದ್ರತೆ ಇರಲಿಲ್ಲ. ನೆಮ್ಮದಿ ಇರಲಿಲ್ಲ. ಈ ದೇಶವೂ ಬೇರೊಂದು ದೇಶದ ಗುಲಾಮಗಿರಿಗೆ ಒಳಗಾಗಿತ್ತು. ಅಂತಹ ಸಮಯದಲ್ಲಿ ಗ್ಯಾರಿಬಾಲ್ಡಿ ಎಂಬ ವ್ಯಕ್ತಿ ಅಲ್ಲಿ ಹುಟ್ಟಿದ. ಈತ ಅಲ್ಲಿಯ ಎಲ್ಲ ಜನರಿಗೂ ಆಯುಧಗಳನ್ನು ನೀಡಿದ. ಜನರನ್ನು ಹುರಿದುಂಬಿಸಿದೆ. ಸರಕಾರದೊಡನೆ ಅವರು ಯುದ್ಧ ಮಾಡುವಂತೆ ಪ್ರೇರೇಪಿಸಿದ. ಜನರಿಗೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟ.

ಭಾರತದಲ್ಲಿ ಶಿವಾಜಿ ಕೂಡ ಮಾಡಿದ್ದು ಇದನ್ನೇ. ಜನರಲ್ಲಿ ಧೈರ್ಯವನ್ನೂ ಆತ್ಮವಿಶ್ವಾಸವನ್ನೂ ಬೆಳೆಸಿದ, ಸೈನ್ಯ ಕಟ್ಟಿದ. ಯುದ್ಧ ಸಾರಿದ. ತಾಯ್ನಾಡನ್ನು ಬಂಧಮುಕ್ತಗೊಳಿಸಿದ.

ಇತಿಹಾಸದಲ್ಲಿ ಕತ್ತಿ ಹಿಡಿದು ಯುದ್ಧ ಮಾಡಿ ಜನರು ಗೆದ್ದ ಹಲವು ಉದಾಹರಣೆಗಳು ಸಿಗುತ್ತವೆ. ಭಾರತದ ಸ್ವಾತಂತ್ರ್ಯಕ್ಕೆ ಕೂಡ ಕ್ರಾಂತಿಯ ದಾರಿಯನ್ನೇ ಹಿಡಿಯಬೇಕು, ಕತ್ತಿ ಹಿಡಿಯಬೇಕು, ಬ್ರಿಟಿಷರನ್ನು ಭಾರತದಿಂದ ಓಡಿಸಬೇಕು. ಈಗಿರುವುದು ಇದೊಂದೇ ದಾರಿ, ಬೇರೆ ದಾರಿಯೇ ಇಲ್ಲ ಎಂದು ಪುಲಿನ ನಿರ್ಧರಿಸಿದ.

ಅನುಶೀಲನ ಸಮಿತಿ

ಈ ಕಾಲದಲ್ಲೇ ಬಂಗಾಳದ ಕೆಲ ಕ್ರಾಂತಿಕಾರೀ ಸಂಸ್ಥೆಗಳು ಹುಟ್ಟಿಕೊಂಡಿದ್ದವು. ಈ ಸಂಸ್ಥೆಗಳ ಸದಸ್ಯರಿಗೆ ಶಾಂತಿಯುತ ಹೋರಾಟದಲ್ಲಿ ನಂಬಿಕೆ ಇರಲಿಲ್ಲ. ಹೋರಾಟ ಮಾಡುವುದೇ ಆದರೆ ನೇರವಾಗಿ ಯುದ್ಧವನ್ನೇ ಮಾಡಬೇಕು ಎಂಬುದು ಅವರ ಆದರ್ಶವಾಗಿತ್ತು. “ಸ್ವಾಧೀನ ಭಾರತ”, “ಅನುಶೀಲನ ಸಮಿತಿ” ಮೊದಲಾದ ಸಂಸ್ಥೆಗಳು ರಹಸ್ಯವಾಗಿ ಕೆಲಸ ಮಾಡಲಾರಂಭಿಸಿದ್ದವು. ಈ ಕಾರಣದಿಂದಲೇ ಈ ಸಂಸ್ಥೆಗಳಿಗೆ ಸದಸ್ಯರನ್ನು ಸೇರಿಸಿಕೊಳ್ಳುವಾಗ ಹೆಚ್ಚಿನ ಗಮನ ಕೊಡಲಾಗುತ್ತಿತ್ತು. ಈ ಸಮಿತಿಗಳಲ್ಲೆಲ್ಲ ಅನುಶೀಲನ ಸಮಿಯು ಪ್ರಮುಖವಾಗಿತ್ತು. ಅನುಶೀಲ ಸಮಿತಿಯ ಸ್ಥಾಪಿತವಾದುದು ೧೯೦೨ರಲ್ಲಿ. ಇದರ ಸ್ಥಾಪಕರು ಸತೀಶ ಮುಖರ್ಜಿ ಮತ್ತು ಪಿ. ಮಿತ್ರ ಎನ್ನುವವರು. ಇವರು ರಾಷ್ಟ್ರೀಯ ವಾದಿಗಳಾಗಿದ್ದರು. ಜೊತೆಗೆ ಆಧ್ಯಾತ್ಮವಾದಿಗಳು, ಧಾರ್ಮಿಕ ಮನೋಭಾವದವರು ಆಗಿದ್ದರು. ಪೂರ್ವ ಬಂಗಾಳದಲ್ಲಿ ಅನುಶೀಲನ ಸಮಿತಿಗೆ ಸಾಕಷ್ಟು ಜನ ಸದಸ್ಯರಿದ್ದರು. ಇವರೆಲ್ಲ ಭಾರತಮಾತೆಯ ಬಿಡುಗಡೆಗಾಗಿ ಪಣ ತೊಟ್ಟವರಾಗಿದ್ದರು. ಹಾಗೂ ಈ ಉದ್ದೇಶಕ್ಕಾಗಿ ಕ್ರಾಂತಿಕಾರಿ ಮಾರ್ಗವನ್ನೇ ಹಿಡಿಯಬೇಕೆಂದು ನಿರ್ಧರಿಸಿದ್ದರು.

 

‘ನಿಮ್ಮಂಥಹವರು ನಮ್ಮೊಡನಿದ್ದರೆ ಸ್ವಾತಂತ್ರ್ಯ ದೂರದ ನಕ್ಷತ್ರವಾಗಬಹುದು’

ದೀಕ್ಷೆಯ ಸ್ವೀಕಾರ

೧೯೦೫ರಲ್ಲಿ ಕಲ್ಕತ್ತೆಯ ಅನುಶೀಲನ ಸಮಿತಿಯ ಮುಖ್ಯಸ್ಥರಾದ ಪಿ. ಮಿತ್ರ ಅವರು ಢಾಕ್ಕಾಕ್ಕೆ ಭೇಟಿ ಕೊಟ್ಟರು. ಅಷ್ಟು ಹೊತ್ತಿಗಾಗಲೇ ಪುಲಿನ ಬಿಹಾರಿದಾಸರು ಅಲ್ಲೆಲ್ಲ ಸಾಕಷ್ಟು ಪರಿಚಿತರಾಗಿದ್ದರು. ಅವರ ವ್ಯಕ್ತಿತ್ವ ಎಲ್ಲರ ಗಮನವನ್ನೂ ಸೆಳೆದುಕೊಳ್ಳುವಂತಿತ್ತು. ಅವರ ಒಳ್ಳೆಯ ನಡತೆಗೆ ಎಲ್ಲರೂ ತಲೆಬಾಗುತ್ತಿದ್ದರು. ಅವರ ದೈವಭಕ್ತಿ, ದೇಶಭಕ್ತಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಈ ವಿಷಯ ತಿಳಿದಿದ್ದ ಪಿ.ಮಿತ್ರ ಅವರು ಪುಲಿನ ಬಿಹಾರಿದಾಸ್ ಅವರಲ್ಲಿಗೆ ಬಂದರು. ಅನುಶೀಲನ ಸಮಿತಿಯ ತತ್ವಗಳನ್ನು ಅವರಿಗೆ ವಿವರಿಸಿ ಹೇಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಯ ಪಥ ಹಿಡಿಯಲೇಬೇಕು ಎನ್ನುವುದು ಒತ್ತಿ ಹೇಳಿದರು.

ಮಿತ್ರರು ಪುಲಿನ ಬಿಹಾರಿದಾಸರಿಗೆ “ನಿಮ್ಮಂತಹ ಯುವಕರು, ಧೈರ್ಯವಂತರು ಈ ಸಮಿತಿಯಲ್ಲಿ ಇದ್ದರೆ ಸ್ವಾತಂತ್ರ್ಯ ನಮಗೆ ದೂರದ ನಕ್ಷತ್ರವಾಗಲಾರದು. ನೀವು ನಮ್ಮ ಸಮಿತಿಯ ಸದಸ್ಯರಾಗುವಂತೆ ಒಪ್ಪಿಸಬೇಕು” ಎಂದರು. ದಾಸರು ಮಿತ್ರ ಆಹ್ವಾನವನ್ನು ಸ್ವೀಕರಿಸಿದರು. ಹಾಗೂ ಅನುಶೀಲನ ಸಮಿತಿಗಾಗಿ ದುಡಿಯಲು ಒಪ್ಪಿಕೊಂಡರು.

ಮೊದಲೇ ಹೇಳಿದಂತೆ ಸಾಮಾನ್ಯ ವ್ಯಕ್ತಿಗಳು ಅನುಶೀಲನ ಸಮಿತಿಯ ಸದಸ್ಯರಾಗಲು ಸಾಧ್ಯವಿರಲಿಲ್ಲ. ತಕ್ಕ ದೇಹಸೌಷ್ಠವ, ದೇಶಭಕ್ತಿ, ಧರ್ಮನಿಷ್ಠೆ, ಎಂತಹ ಕಠಿಣ ಸನ್ನಿವೇಶವನ್ನೂ ಎದುರಿಸಬಲ್ಲೆನೆಂಬ ಧೈರ್ಯ, ಅಪಾಯದ ಕೆಲಸಗಳನ್ನೂ ನಿರ್ವಹಿಸುವ ಎದೆಗಾರಿಕೆ, ಯಾವ ಸಮಯದಲ್ಲೂ ಸಮಿತಿಯ ಗುಟ್ಟನ್ನು ಹೊರಗೆ ಹಾಕದ ಬಿಗಿಮನಸ್ಸು – ಇವೆಲ್ಲವಿದ್ದರೆ ಮಾತ್ರ ಆತ ಅನುಶೀಲನ ಸಮಿತಿಯ ಸದಸ್ಯನಾಗಲು ಯೋಗ್ಯ ಎನಿಸಿಕೊಳ್ಳುತ್ತಿದ್ದ. ಮತ್ರಿ ಅವರು ಈ ಎಲ್ಲ ಗುಣಗಳನ್ನೂ ಪುಲಿನರಲ್ಲಿ ಕಂಡರು, ಹಾಗೆಂದೇ ಅವರು ಪುಲಿನರನ್ನು ಅನುಶೀಲನ ಸಮಿತಿಯ ಸದಸ್ಯರನ್ನಾಗಿ ಮಾಡಿಕೊಳ್ಳಲು ಮುಂದಾದರು.

ಈ ಸಮಿತಿಯ ಸದಸ್ಯತ್ವದ ದೀಕ್ಷೆಯನ್ನು ಪಡೆಯುವುದು ಕೂಡ ಒಂದು ಕಠಿಣ ಸಾಧನೆಯಾಗಿತ್ತು.

ಹೊಸಬರಿಗೆ ಸದಸ್ಯತ್ವದ ದೀಕ್ಷೆ ಕೊಡುವ ದಿನ ಅನುಶೀಲನ ಸಮಿತಿಯ ಪ್ರಮುಖ ಸದಸ್ಯರು ಕೆಲವರು ಸ್ಮಶಾನದಲ್ಲೋ, ಕಾಳಿಕಾದೇವಿಯ ಗುಡಿಯಲ್ಲೋ ಸೇರುತ್ತಿದ್ದರು. ಸದಸ್ಯನಾಗಬಯಸುವ ವ್ಯಕ್ತಿ ಅವರ ನಡುವೆ ನಿಲ್ಲಬೇಕಾಗುತ್ತಿತ್ತು. ಭಗವದ್ಗೀತೆಯನ್ನು ಹಾಗೂ ಒಂದು ಖಡ್ಗವನ್ನು ಆತ ತನ್ನ ತಲೆಯ ಮೇಲಿಟ್ಟು ಕೊಳ್ಳುತ್ತಿದ್ದ, ಹಾಗೂ ಧಾರ್ಮಿಕ ಗ್ರಂಥಗಳಿಂದ ಕೆಲ ಶ್ಲೋಕಗಳನ್ನು ಹೇಳುತ್ತಿದ್ದ. ಹೀಗೆ ಪ್ರತಿಜ್ಞೆ ಕೈಕೊಂಡ ವ್ಯಕ್ತಿಯು ಸಮಿತಿಗೆ ನಿಷ್ಠನಾಗಿ ಇರಬೇಕಾಗುತ್ತಿತ್ತು.

ಸಮಿತಿಯಲ್ಲಿ ನಾಲ್ಕು ಉಪಸಮಿತಿಗಳಿದ್ದವು. ಎಲ್ಲ ಸದಸ್ಯರ ವೈಯಕ್ತಿಕ ಪ್ರತಿಭೆಯನ್ನು ಮೊದಲೇ ಗಮನಿಸಲಾಗುತ್ತಿತ್ತು. ಹೆಚ್ಚಿನ ಪ್ರತಿಭೆ ಇರುವವರನ್ನೇ ಮೂಲ ಸಮಿತಿಯ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿತ್ತಿತ್ತು. ಉಳಿದವರನ್ನು ಅವರವರ ಪ್ರತಿಭೆಗೆ ತಕ್ಕಂತೆ ಉಳಿದ ಸಮಿತಿಗಳಲ್ಲಿ ಸೇರಿಕೊಳ್ಳುತ್ತಿದ್ದರು. ಪುಲಿನ ಬಿಹಾರಿ ದಾಸರು ಅನುಶೀಲನ ಸಮಿತಿಯ ಅಗ್ರಹಣ್ಯ ಸದಸ್ಯರಾದರು. ಸಮಿತಿಯ ಪ್ರಗತಿಗಾಗಿ ಕಾರ್ಯನಿರತರಾದರು.

ಪುಲಿನ ಬಿಹಾರಿದಾಸ್ ಅಚಿಡಮಾನಿನ ಸೆರೆಮನೆಯಲ್ಲಿ.

ಅನುಶೀಲ ಸಮಿತಿಯು ತನ್ನ ಸದಸ್ಯರಿಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಲು ಬೇಕಾದ ತರಬೇತಿಯನ್ನೂ ನೀಡುತ್ತಿತ್ತು. ರಿವಾಲ್ವರುಗಳಿಂದ ಗುಂಡು ಹಾರಿಸುವುದು, ಮದ್ದು ಗುಂಡುಗಳನ್ನು ತಯಾರಿಸುವುದು, ಕ್ರಾಂತಿಗೆ ಸಹಾಯಕವಾಗುವ ಸಾಹಿತ್ಯವನ್ನು ಪ್ರಕಟಿಸುವುದು, ಈ ಸಾಹಿತ್ಯವನ್ನು ಗುಪ್ತವಾಗಿ ಎಲ್ಲರಿಗೂ ಹಂಚುವುದು, ಜನ ಬ್ರಿಟಿಷ್ ಸರಕಾರದ ವಿರುದ್ಧ ತಿರುಗಿ ಬೀಳುವಂತೆ ಪ್ರೇರೇಪಿಸುವುದು ಮೊದಲಾದ ಕಾರ್ಯಗಳಲ್ಲಿ ಅನುಶೀಲನ ಸಮಿತಿಯು ತೊಡಗಿತ್ತು.

ಸಮಿತಿಗೆ ಹೊಸ ಶಕ್ತಿ

ಪುಲಿನ ಬಿಹಾರಿದಾಸ್ ಅವರ ಪ್ರವೇಶದ ನಂತರ ಅನುಶೀಲನ ಸಮಿತಿಗೆ ಹೊಸ ಹುರುಪು ಬಂದಿತು. ಪುಲಿನರು ಹೆಚ್ಚಿನ ನಿಷ್ಠೆಯಿಂದ, ಆಸಕ್ತಿಯಿಂದ ಕೆಲಸ ಮಾಡಲಾರಂಭಿಸಿದರು. ಪೂರ್ವ ಬಂಗಾಳದಲ್ಲಿ ಹಗಲು ರಾತ್ರಿ ಎನ್ನದೆ ಪುಲಿನರು ಸಮಿತಿಗಾಗಿ ಓಡಾಡಲಾರಂಭಿಸಿದರು. ತರುಣರನ್ನು ಭೇಟಿ ಮಾಡಿದರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಸಮಿತಿಯ ಉದ್ದೇಶಗಳನ್ನು ವಿವರಿಸಿದರು. ಕ್ರಾಂತಿಯ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಸಾಧ್ಯ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ಈ ಉದ್ದೇಶಕ್ಕಾಗಿ ಯುವಕರು ದೈಹಿಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಲಾಠಿ ಬೀಸುವುದನ್ನು, ಕತ್ತಿವರಸೆ ಮಾಡುವುದನ್ನು ಕಲಿಯಬೇಕು ಎಂದರು. ಪುಲಿನರ ಪ್ರಭಾವೀ ವ್ಯಕ್ತಿತ್ವಕ್ಕೆ ತರುಣರು ಮಾರು ಹೋದರು. ದೇಶಕ್ಕಾಗಿ ದುಡಿಯಲು ಈ ಮೂಲಕ ಅವರಿಗ ಒಂದು ದಾರಿ ಕಂಡಂತೆ ಆಯಿತು. ಕೆಲವೇ ದಿನಗಳಲ್ಲಿ ಪುಲಿನರು ಪೂರ್ವ ಬಂಗಾಳದಲ್ಲಿ ಸುಮಾರು ೫೦೦ ಅನುಶೀಲನ ಸಮಿತಿಯ ಉಪಶಾಖೆಗಳನ್ನು ತೆರೆದರು. ಸುಮಾರು ಮೂವತ್ತು ಸಾವಿರ ಜನ ಈ ಸಮಿತಿಯ ಸದಸ್ಯರಾಗಿ ಪ್ರತಿಜ್ಞಾವಿಧಿಗಳನ್ನು ಸ್ವೀಕರಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಹುರುಪು ಬಂದಿತ್ತು. ಬಂಗಾಳದ ಎಲ್ಲ ತರುಣರೂ ಕ್ರಾಂತಿಯ ಕಹಳೆ ಹಿಡಿದು ನಿಂತಿದ್ದರು. ಆದರೆ ಕ್ರಮೇಣ ಅಲ್ಲಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ಸರ್ಕಾರ ಅಯಶಸ್ವಿಗೊಳಿಸಿತ್ತು. ಜನತೆಯನ್ನು ಕತ್ತಲೆಯಿಂದ ಬೆಳಕಿಗೆ ಕರೆತರಲು ಪತ್ರಿಕೆಗಳು ಯತ್ನಿಸುತ್ತಿದ್ದವು. ಇಂತಹ ಪತ್ರಿಕೆಗಳನ್ನು ಜನ ಕಾದುನಿಂತು ಪಡೆದು ಓದುತ್ತಿದ್ದರು. ಇಂತಹ ಪತ್ರಿಕೆಗಳಿಂದ ಸ್ಫೂರ್ತಿ ಪಡೆಯುತ್ತಿದ್ದರು. ಆದರೆ ಸರಕಾರ ಈ ಪತ್ರಿಕೆಗಳನ್ನು ನಿಲ್ಲಿಸಿತು. ಪತ್ರಿಕಾರ ಸಂಪಾದಕರನ್ನು ಬಂಧಿಸಿತು. ಆಗಿನ ಬ್ರಿಟಿಷ್ ಸರ್ಕಾರಕ್ಕೆ ಕಾಣುವಂತೆ ಯಾವುದೇ ಕೆಲಸ ಮಾಡುವುದು ಸಾಧ್ಯವಿರಲಿಲ್ಲ. ಸಭೆ ಸೇರಿದರೆ ಲಾಠಿ ಏಟು. ಪತ್ರಿಕೆಗೆ ಬರೆದರೆ ಸೆರೆಮನೆ. ಪತ್ರಿಕೆಯನ್ನು ಮುದ್ರಿಸಿದರೆ ಶಿಕ್ಷೆ. ಭಾಷಣ ಮಾಡಿದರೆ ಜೈಲುವಾಸ. ದೇಶದಲ್ಲಿ ಎಲ್ಲೆಲ್ಲೂ ಈ ಪರಿಸ್ಥಿತಿ ಉದ್ಭವಿಸಿತ್ತು. ಹೀಗಾಗಿ ಸ್ವಾತಂತ್ರ‍್ಯ ಹೋರಾಟವು ಕ್ರಮೇಣ ತನ್ನ ಬಿಸಿಯನ್ನು ಕಳೆದುಕೊಳ್ಳಲು ಆರಂಭಿಸಿತು.

ಆದರೆ ಕ್ರಾಂತಿಕಾರಿಗಳ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ವಿಶೇಷವಾಗಿ ಪುಲಿನ ಬಿಹಾರಿದಾಸರ ಅನುಶೀಲನ ಸಮಿತಿಯ ಯಾವ ಬೆದರಿಕೆಗೂ ಜಗ್ಗಲಿಲ್ಲ. ತನ್ನ ಕೆಲಸ ಕಾರ್ಯಗಳನ್ನು ನಿಲ್ಲಸಲಿಲ್ಲ.

ಶಿಕ್ಷಣ

ಪತ್ರಿಕೆಗಳ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ದರಿಂದ ಅವುಗಳ ಪ್ರಕಟಣೆ ನಿಂತುಹೋಗಿತ್ತು. ಪುಲಿನರೇ ಗುಪ್ತವಾಗಿ ಕೆಲವೊಂದು ವಿಷಯಗಳನ್ನು ಮುದ್ರಿಸಿ ಹಂಚುವ ವ್ಯವಸ್ಥೆ ಮಾಡಿದರು. ಸ್ವಾತಂತ್ರ್ಯವನ್ನು ಹೊಂದಲು ಏನು ಮಾಡಬೇಕು. ಜನ ಹೇಗೆ ಸಂಘಟಿತರಾಗಬೇಕು ಎಂಬ ವಿಷಯಗಳ ಬಗ್ಗೆ ಹಲವು ಕರಪತ್ರಗಳು ಹೊರಬಿದ್ದವು. ಕತ್ತಲು ಕವಿದು ಬೆಳಕು ಹರಿಯುವಷ್ಟರಲ್ಲಿ ಸಾವಿರಾರು ಕರಪತ್ರಗಳು ಬಾಂಗ್ಲಾದೇಶದ ತುಂಬಾ ಹರಡಿಕೊಳ್ಳುತ್ತಿದ್ದವು. ಭಾರತದ ಇತರ ಪ್ರದೇಶಗಳಿಗೂ ಈ ಕರಪತ್ರಗಳು ಹೋಗಿ ತಲುಪುತ್ತಿದ್ದವು. ಜನತೆಗೆ ಮಾರ್ಗದರ್ಶನ ನೀಡುತ್ತಿದ್ದವು.

ಅನುಶೀಲ ಸಮಿತಿಯ ಸದಸ್ಯರು ಇತರ ಕ್ರಾಂತಿಕಾರಿಗಳಿಗೆ ರಿವಾಲ್ವರುಗಳನ್ನು ಸರಬರಾಜು ಮಾಡುತ್ತಿದ್ದರು. ಮದ್ದು ಗುಂಡುಗಳನ್ನು ಒಯ್ದು ಮುಟ್ಟಿಸುತ್ತಿದ್ದರು. ಅನುಶೀಲನ ಸಮಿತಿಯಲ್ಲಿ ಬಾಂಬುಗಳನ್ನು ತಯಾರಿಸಬಲ್ಲ ತರುಣರಿದ್ದರು. ಇದನ್ನು ಇತರ ಸದಸ್ಯರಿಗೂ ಕಲಿಸಲಾಗುತ್ತಿತ್ತು. ಶ್ರೀರಾಂಪುರೆಯ ಮರತಾಜಾ ಸಾಹೇಬ್ ಎಂಬುವವರಿಂದ ಸಮಿತಿಯ ಎಲ್ಲ ಸದಸ್ಯರೂ ಲಾಠಿ ಬೀಸುವುದನ್ನು ಕಲಿತರು. ಈ ವಿದ್ಯೆಯಲ್ಲಿ ಪುಲಿನ ಬಿಹಾರಿದಾಸ್ ಕೂಡ ಪ್ರಾವಿಣ್ಯತೆಯನ್ನು ಪಡೆದಿದ್ದರು. ಆ ಕಾಲದ ಸಮರ್ಥ ಲಾಠೀ ವಿದ್ಯಾ ಪ್ರವೀಣರೆಂಬ ಹೆಸರು ಪಡೆದರು.

ಹಣ ಬೇಕಲ್ಲ!

ಒಂದಲ್ಲ ಒಂದು ದಿನ ಕ್ರಾಂತಿಯ ಮೂಲಕ ನಮ್ಮದಲ್ಲದ ಈ ಸರ್ಕಾರವನ್ನು ಬುಡಮೇಲು ಮಾಡಬೇಕು. ಕತ್ತಿ ಹಿಡಿದ ಕೈಯನ್ನು ಕತ್ತಿಯಿಂದಲೇ ಕತ್ತರಿಸಬೇಕು. ವಿದೇಶದ ಹಿಡಿತದಿಂದ ಭಾರತವನ್ನು ಬಿಡಿಸಬೇಕು. ಇದು ಪುಲಿನರ ದೃಢ ನಿರ್ಧಾರವಾಗಿತ್ತು. ಈ ಉದ್ದೇಶಕ್ಕಾಗಿ ಅವರು ದುಡಿಯಲಾರಂಭಿಸಿದರು. ಆದರೆ ಈ ಕಾರ್ಯಕ್ಕೆ ಹೇರಳವಾದ ಹಣ ಬೇಕಿತ್ತು. ನೇರವಾಗಿ ಇದಕ್ಕಾಗಿ ಹಣ ಕೊಡಿ ಎಂದು ಜನರನ್ನು ಕೇಳುವಂತಿರಲಿಲ್ಲ. ಹಣವಂತರು ಅನುಶೀಲನ ಸಮಿತಿಯನ್ನು ಬೆಂಬಲಿಸಲು ಹೆದರುತ್ತಿದ್ದರು. ಹಣ ಇಲ್ಲವೆಂದು ಈ ಕಾರ್ಯವನ್ನು ನಿಲ್ಲಿಸಬಾರದು ಎಂದು ಪುಲಿನರು ತೀರ್ಮಾನಿಸಿದರು. ದೇಶ ಗುಲಾಮಗಿರಿಯಲ್ಲಿದೆ. ಬ್ರಿಟಿಷರ್ ನೊಗ ಹೊತ್ತ ನಮ್ಮ ಜನರ ಬೆನ್ನು ಬಗ್ಗಿದೆ. ಜನ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇವರನ್ನು ಬಿಡುಗಡೆ ಮಾಡಬೇಕು. ಬಿಡುಗಡೆ ಮಾಡಬೇಕಾದರೆ ಕ್ರಾಂತಿಯ ಬಾಗಿಲನ್ನು ತೆರೆಯಬೇಕು. ಜನ ಕತ್ತಿ ಹಿಡಿಯಬೇಕು. ಗುಂಡು ಹಾರಿಸಬೇಕು. ಆದರೆ ಇದೆಲ್ಲಕ್ಕೂ ಹಣ ಬೇಕು. ಹಣವನ್ನು ಎಲ್ಲಿಂದ ತರುವುದು? ಹೇಗೆ ತರುವುದು?

ಕೊನೆಯಲ್ಲಿ ಪುಲಿನರಿಗೆ ಒಂದು ದಾರಿ ಗೋಚರಿಸಿತು. ಹಣವಂತರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ಒಡವೆ ವೈಢೂರ್ಯಗಳನ್ನು ಅವರು ಧರಿಸಿಕೊಂಡು ಮೆರೆಯುತ್ತಾರೆ. ಶ್ರೀಮಂತಿಕೆಯಲ್ಲಿ ಓಲಾಡುತ್ತಾರೆ. ಅವರು ಒಳ್ಳೆಯ ಮಾತಿನಲ್ಲಿ ಕೇಳಿದರಂತೂ ಹಣವನ್ನು ಕೊಡುವುದಿಲ್ಲ. ಇನ್ನು ಅವರನ್ನು ದರೋಡೆ ಮಾಡಿ ಹಣವನ್ನು ಪಡೆದು ತಮ್ಮ ಉದ್ದೇಶಕ್ಕಾಗಿ ಏಕೆ ಬಳಸಿಕೊಳ್ಳಬಾರದು? ಅವರು ಈ ಬಗ್ಗೆ ಬಹಳಷ್ಟು ಯೋಚಿಸಿದರು. ದರೋಡೆ ಮಾಡುವುದು ಸರಿಯೆ ಎಂದು ಮತ್ತೆ ಮತ್ತೆ ಪ್ರಶ್ನಿಸಿಕೊಂಡರು. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಹಣ ವಿನಿಯೋಗವಾಗುವುದಿಲ್ಲವೆ? ಅದೂ ತುಂಬಾ ಹಣ ಇರುವವರಿಂದ ತಾನೆ ಇದನ್ನು ತೆಗೆದುಕೊಳ್ಳುವುದು? ಕೊನೆಗೆ ಅವರಿಗೆ ಈ ದಾರಿ ಸರಿ ಎನಿಸಿತು. ಅವರು ಕ್ರಾಂತಿಯ ಯಶಸ್ವಿಯಾಗಲೆಂದು ದರೋಡೆಗೆ ಬೆಂಬಲ ಕೊಟ್ಟರು.

ಸೆರೆಮನೆ

ಪುಲಿನ ಬಿಹಾರಿದಾಸರ ಎಲ್ಲ ಚಟುವಟಿಕೆಗಳ ಮೇಲೂ ಸರಕಾರದ ಗಮನ ಇದ್ದೇ ಇತ್ತು. ದೇಶದಲ್ಲಿ ಕ್ರಾಂತಿಕಾರಕ ಚಟುವಟಿಕೆ ದಿನದಿನಕ್ಕೂ ಹೆಚ್ಚತೊಡಗಿತ್ತು. ಬಾಂಬುಗಳು ಸಿಡಿಯುವುದು, ಸರಕಾರಿ ಅಧಿಕಾರಿಗಳನ್ನು ಕೊಲ್ಲುವುದು, ಬ್ರಿಟಿಷ್ ಅಧಿಕಾರಿಗಳು ಗುಂಡೇಟಿಗೆ ಗುರಿಯಾಗುವುದು, ರೈಲಿನ ಹಳಿ ಕೀಳುವುದು, ಟಪಾಲು ಸುಡುವುದು ಮೊದಲಾದ ಕೃತ್ಯಗಳು ನಡೆದಿದ್ದವು. ಈ ಎಲ್ಲ ಕೃತ್ಯಗಳ ಹಿಂದೆಯೂ ಪುಲಿನರಿರುವಂತೆ ಸರಕಾರಕ್ಕೆ ಕಂಡಿತು. ಪುಲಿನರ ಹಿಂಬಾಲಕರು ಎಲ್ಲಿ ಯಾವಾಗ ಯಾರ ಪ್ರಾಣವನ್ನು ತೆಗೆಯುತ್ತಾರೊ, ಎಲ್ಲಿ ಬಾಂಬು ಸಿಡಿಸುತ್ತಾರೋ ಎಂದು ಸರಕಾರ ಭೀತಿಪಟ್ಟಿತು. ಅಂತೆಯೇ ೧೯೦೮ರ ಡಿಸೆಂಬರ್ ತಿಂಗಳಿನಲ್ಲಿ, ಯಾವುದೋ ಒಂದು ಕಾರಣವನ್ನು ಮುಂದೆ ಮಾಡಿಕೊಂಡು ಸರಕಾರ ಪುಲಿನ ಬಿಹಾರಿದಾಸರನ್ನು ಬಂಧಿಸಿತು. ಹಾಗೂ ಇವರನ್ನು ಪಂಜಾಬಿನ ಮೌಂಟ್ ಗೋಮರಿ ಜೈಲಿನಲ್ಲಿ ಸೆರೆಯಾಳಾಗಿ ಇರಿಸಿತು.

ಪುಲಿನರಂತಹ ಕ್ರಾಂತಿಕಾರೀ ನಾಯಕರನ್ನು ಸೆರೆಯಲ್ಲಿ ಇಟ್ಟರೆ ಕ್ರಾಂತಿಯ ತಣ್ಣಗಾಗುವುದಿಲ್ಲ ಅನ್ನುವುದು ಸರಕಾರಕ್ಕೆ ಗೊತ್ತಿತ್ತು. ಆದ್ದರಿಂದಲೇ ಬ್ರಿಟಿಷ್ ಸರಕಾರ ಒಂದು ವಿಶೇಷ ಪ್ರಕಟಣೆಯನ್ನು ಹೊರಡಿಸಿತು. ಈ ಪ್ರಕಟಣೆಯಂತೆ ಸರಕಾರ ಎಲ್ಲ ಕ್ರಾಂತಿಕಾರೀ ಪಕ್ಷಗಳನ್ನು ಬಹಿಷ್ಕರಿಸಿತ್ತು. ಈ ಎಲ್ಲ ಸಂಸ್ಥೆಗಳ ಚಟುವಟಿಕೆಗಳೂ ಕಾನೂನುಬಾಹಿರ ಎಂದು ಸಾರಿತು. ಬಹಿಷ್ಕರಿಸಲ್ಪಟ್ಟ ಸಂಸ್ಥೆಗಳ ಪಟ್ಟಿಯಲ್ಲಿ ಅನುಶೀಲನ ಸಮಿತಿಯ ಹೆಸರು ಕೂಡ ಇತ್ತು.

ಈ ಆಜ್ಞೆ ಹೊರಬಿದ್ದ ಒಂದು ತಿಂಗಳ ನಂತರ ಪುಲಿನರ ಬಿಡುಗಡೆಯಾಯಿತು. ಪುಲಿನರು ಎದೆಗೆಡಲಿಲ್ಲ. ಕರ್ತವ್ಯ ಮರೆತು ಕುಳಿತುಕೊಳ್ಳಲಿಲ್ಲ. ಸರಕಾರದ ಕಣ್ಣಿಗೆ ಬೀಳದಂತೆ ಅವರು ಭೂಗತರಾದರು.  ಎಂದಿನಂತೆಯೇ ಅವರ ಕೆಲಸ ಕಾರ್ಯಗಳು ನಡೆಯಲಾರಂಭಿಸಿದವು. ಅವರಲ್ಲಿ ಇನ್ನೂ ಹೆಚ್ಚಿನ ಕೆಚ್ಚು ಮೂಡಿತ್ತು.

ಸರಕಾರದ ಕಣ್ಣು ತಪ್ಪಿಸಿ

ಸರಕಾರದ ಕ್ರಮಗಳು ಬಿಗಿಯಾಗಿದ್ದವು. ಹಲವರನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಆದರೆ ತರುಣರ ಉತ್ಸಾಹವನ್ನು ಅದುಮಿ ಇಡಲು ಸಾಧ್ಯವಾಗಿರಲಿಲ್ಲ. ದೊಡ್ಡವರು ಹಿಡಿದ ದಾರಿಯನ್ನು ತಪ್ಪಿಸಲು ಆಗಿರಲಿಲ್ಲ. ರಾಷ್ಟ್ರದಲ್ಲಿ ಎಲ್ಲೆಲ್ಲೂ ಪಿತೂರಿಗಳು, ಹೋರಾಟಗಳು ನಡೆದೇ ಇದ್ದವು.

ಕ್ರಾಂತಿಕಾರಿಗಳಾದ ಖುದೀರಾಮ ಬೋಸ ಮತ್ತು ಪ್ರಫುಲ್ಲ ಚಕ್ಕಿ ಎಂಬ ಯುವಕರು ಒಬ್ಬ ಜಿಲ್ಲಾ ನ್ಯಾಯಾಧೀಶನ ಪ್ರಾಣವನ್ನು ತೆಗೆಯುವ ಯತ್ನ ಮಾಡಿದರು. ಇಂತಹ ಹಲವು ಪ್ರಯತ್ನಗಳು ಅಡೆತಡೆ ಇಲ್ಲದೆ ನಡೆದಿದ್ದವು. ಪುಲಿನ ಬಿಹಾರಿದಾಸರು ಈ ಬಗೆಯ ಎಲ್ಲ ಕೃತ್ಯಗಳಿಗೂ ಬೆಂಬಲ ಪ್ರೋತ್ಸಾಹ ನೀಡುತ್ತಿದ್ದರು. ಭಾರತದ ಮೂವತ್ತು ಕೋಟಿ ಜನ ದಬ್ಬಾಳಿಕೆಯನ್ನು ನಿಲ್ಲಿಸಲು ತಮ್ಮ ಅರವತ್ತು ಕೋಟಿ ಕೈಗಳನ್ನು ಮೇಲೆತ್ತಬೇಕು, ಬಲವನ್ನು ಬಲದಿಂದಲೇ ತಡೆಯಬೇಕು, ಎಂದು ಪುಲಿನರು ನಂಬಿದ್ದರು. ಅಂತೆಯೇ ನಡೆಯುತ್ತಿದ್ದರು.

ಅಂಡಮಾನಿನ ನರಕ

ಈ ವಿಷಯವೇ ಬ್ರಿಟಿಷರ ಪಾಲಿಗೆ ತೊಡಕಾಗಿತ್ತು. ಪುಲಿನರನ್ನು ಬಂಧಿಸಿ ದೀರ್ಘ ಕಾಲದವರೆಗೆ ಸೆರೆಮನೆಗೆ ಕಳುಹಿಸಲು ಅವರು ಯತ್ನಿಸಿದರು. ಇದೇ ಸಮಯದಲ್ಲಿ ದೇಶದಲ್ಲಿ ನಡೆದ ಒಂದು ಕಾನೂನುಬಾಹಿರ ಒಳಸಂಚಿನಲ್ಲಿ ಪುಲಿನರ ಪಾತ್ರವಿರುವಂತೆ ಸರಕಾರಕ್ಕೆ ಕಂಡಿತು. ಸರಕಾರ ಅವರನ್ನು ಬಂಧಿಸಿತು. ವಿಚಾರಣೆಗೆ ಗುರಿಪಡಿಸಿತು. ಕೆಳಕೋರ್ಟು ಪುಲಿನರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿತು. ಕೇಸನ್ನು ಮೇಲಿನ ಕೋರ್ಟಿಗೆ ಒಯ್ಯಲಾಯಿತು. ಹೈಕೋರ್ಟು ಮರು ವಿಚಾರಣೆ ನಡೆಸಿತು. ಜೀವಾವಧಿ ಸೆರೆಮನೆ ವಾಸದ ಬದಲು ಏಳು ವರ್ಷಗಳ ಸೆರೆಮನೆ ವಾಸವನ್ನು ಕೋರ್ಟು ವಿಧಿಸಿತು. ಪುಲಿನ ಬಿಹಾರಿದಾಸರನ್ನು ಅಂಡಮಾನಿಗೆ ಶಿಕ್ಷೆಯನ್ನು ಅನುಭವಿಸಲು ಕಳುಹಿಸಲಾಯಿತು.

ಅಂಡಮಾನ್ ಅನ್ನುವುದು ಬಂಗಾಳಕೊಲ್ಲಿಯಲ್ಲಿರುವ ಸಣ್ಣದೊಂದು ದ್ವೀಪ. ರಾಜಕೀಯ ಖೈದಿಗಳನ್ನು ಈ ದ್ವೀಪದಲ್ಲಿ ಇರುವ ಜೈಲಿನಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿದ್ದರು. ಅಪರಾಧಿಗಳನ್ನು ಕಲ್ಕತ್ತೆಯಿಂದ ಹಡಗಿನಲ್ಲಿ ತುಂಬಿ ಇಲ್ಲಿಗೆ ತಂದು ಬಿಡಲಾಗುತ್ತಿತ್ತು. ಅಂಡಮಾನಿನ ಈ ಶಿಕ್ಷೆಯನ್ನು ಕರನೀರಿನ ಶಿಕ್ಷೆ ಎಂಬುದಾಗಿಯೂ ಕರೆಯುತ್ತಿದ್ದರು. ಸುತ್ತಲೂ ಆಳವಾದ ಸಮುದ್ರದ ನೀರು ಕಪ್ಪಗೆ ಕಾಣುತ್ತಿದ್ದುದರಿಂದ ಈ ಹೆಸರು ಬಂದಿತು. ಸಮುದ್ರದ ನಡುವಣ ಕಲ್ಲು ಕಟ್ಟಡಗಳಲ್ಲಿ ಆಪಾದಿತರು ವಾಸಿಸಬೇಕಿತ್ತು. ಇವರಿಂದ ಎಲ್ಲ ಬಗೆಯ ಕೆಲಸಗಳನ್ನು ಮಾಡಿಸುತ್ತಿದ್ದರು.

೧೮೫೭ ರಲ್ಲಿ ನಮ್ಮ ದೇಶದಲ್ಲಿ ಮೊಟ್ಟ ಮೊದಲು ಸ್ವಾತಂತ್ರ್ಯ ಚಳುವಳಿ ನಡೆಯಿತು. ಈ ಚಳುವಳಿಯನ್ನು ಸೈನಿಕ ಕ್ರಾಂತಿ ಎಂಬುದಾಗಿ ಕರೆಯಲಾಗಿದೆ. ಈ ಚಳುವಳಿಯಲ್ಲಿ ಭಾಗವಹಿಸಿದವರನ್ನು ಪ್ರಥಮವಾಗಿ ಅಂಡಮಾನಿನ ಜೈಲಿಗೆ ತಂದು ಹಾಕಿದರು. ಅನಂತರ ಬ್ರಿಟಿಷ್ ಸರಕಾರಕ್ಕೆ ಅಪಾಯಕಾರಿಗಳೆಂದು ಕಂಡುಬಂದವರನ್ನೂ ಹಾಗೂ ದೀರ್ಘವಾದ ಶಿಕ್ಷೆಗೆ ಒಳಗಾದವರೆಲ್ಲರನ್ನೂ ಅಂಡಮಾನಿನ ಜೈಲಿಗೆ ಕಳುಹಿಸಲಾರಂಭಿಸಿದರು. ಹೀಗೆ ಬಂದವರಲ್ಲಿ ಪುಲಿನ ಬಿಹಾರಿದಾಸರೂ ಒಬ್ಬರು.

ಬ್ರಿಟಿಷ್ ಸರಕಾರ ಅಂಡಮಾನಿನ ಖೈದಿಗಳನ್ನು ಕರುಣೆ ಇಲ್ಲದೆ ಕಾಣುತ್ತಿತ್ತು.

ಬಂಧಿಗಳನ್ನು ಎಣ್ಣೆಯ ಗಾಣಕ್ಕೆ ಹೂಡಿ, ಗಾಣ ತಿರುಗಿಸಿ ಎಣ್ಣೆ ತೆಗೆಯಿಸುತ್ತಿದ್ದರು. ಬಂಧಿಗಳು ತೆಂಗಿನ ನಾರು ತೆಗೆಯಬೇಕಿತ್ತು. ಪ್ರತಿದಿನ ಕೆಲವು ಗಂಟೆಗಳವರೆಗೆ ಬಂಧಿಗಳು ಗೋಡೆಗೆ ಮುಖಮಾಡಿ ಕೈಗೆ ಬೇಡಿ ಹಾಕಿಕೊಂಡು ನಿಲ್ಲಬೇಕಿತ್ತು. ಹೊರಗೆ ಬಿಸಿಲೇ ಇರಲಿ ಮಳೆಯೇ ಇರಲಿ ಅದರಲ್ಲಿ ನಿಂತೇ ಊಟ ಮಾಡಬೇಕಿತ್ತು. ಅವರು ಕೊಟ್ಟಿದ್ದು ಸಾಲದಿದ್ದರೆ ಕೇಳುವಂತಿಲ್ಲ. ಕುಡಿಯಲು ಕೆಟ್ಟವಾಸನೆಯ ನೀರು. ಮಲಗಲು ದುರ್ನಾತದಿಂದ ಕೂಡಿರುವ ಕತ್ತಲೆಯ ಕೋಣೆ. ನೌಕರರು ಕೂಡ ಸ್ವಲ್ಪವೂ ಕರುಣೆ ತೋರಿಸುವವರಲ್ಲ. ಖೈದಿಯ ಅಂತಸ್ತು, ವಿದ್ಯಾಭ್ಯಾಸವನ್ನು ನೋಡಿ ಅವನಿಗೆ ದೇಹಕ್ಕೆ, ಮನಸ್ಸಿಗೆ ಅತ್ಯಂತ ನೋವಾಗುವ ಶಿಕ್ಷೆಯನ್ನು ಅವರು ತಪ್ಪದೆ ನೀಡುತ್ತಿದ್ದರು.

ಅಂಡಮಾನಿನ ಕ್ರೂರ ಶಿಕ್ಷೆಗಳಿಂದ ಪುಲಿನರಿಗೇನೂ ವಿನಾಯಿತಿ ಸಿಗಲಿಲ್ಲ. ಏಳು ವರ್ಷಗಳ ಕಾಲ ಅವರು ಆ ನರಕದಲ್ಲಿದ್ದರು. ಏಳು ವರ್ಷಗಳ ನಂತರ ಅವರು ಭಾರತದ ನೆಲದ ಮೇಲೆ ಕಾಲಿಟ್ಟರು. ದೈಹಿಕವಾಗಿ ಅವರು ಸೋತಿದ್ದರು. ಆದರೆ ಮಾನಸಿಕವಾಗಿ ಅವರು ಇನ್ನೂ ಗಟ್ಟಿಯಾಗಿದ್ದರು. ಹೋರಾಟವನ್ನು ಮುಂದುವರಿಸುವ ಪಣ ತೊಟ್ಟಿದ್ದರು.

ಗಾಂಧೀಜಿಯ ಸಲಹೆ

ಇಷ್ಟು ಹೊತ್ತಿಗೆ ದೇಶದಲ್ಲಿ ಕೆಲವು ಬದಲಾವಣೆಗಳು ಆಗಿದ್ದವು. ಗಾಂಧೀಜಿಯವರು ದಕ್ಷಿಣ ಆಫ್ರಿಕದಲ್ಲಿನ ಭಾರತೀಯರಿಗಾಗಿ ಕೆಲವೊಂದು ಹೋರಾಟಗಳನ್ನು ನಡೆಸಿದ್ದರು. ಅಲ್ಲಿ ಅವರು ನಡೆಸಿದ್ದ ಸತ್ಯಾಗ್ರಹಕ್ಕೆ ಒಳ್ಳೆಯ ಫಲ ಸಿಕ್ಕಿತು. ಗಾಂಧೀಜಿಯವರು ಭಾರತಕ್ಕೆ ಹಿಂತಿರುಗಿದಾಗ ಇಲ್ಲಿಯೂ ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಅವರೇ ಹೋರಾಟದ ನಾಯಕತ್ವವನ್ನು ವಹಿಸಿಕೊಂಡರು. ಹಾಗೂ ಅಹಿಂಸೆ, ಸತ್ಯಾಗ್ರಹಗಳ ಮೂಲಕ ಸ್ವಾತಂತ್ರ್ಯ ಪಡೆಯೋಣ ಎಂದು ಹೇಳಲಾರಂಭಿಸಿದರು.

ನಮಗೆ ಸ್ವಾತಂತ್ರ್ಯ ಬೇಕೆಬೇಕು. ಆದರೆ ಇದಕ್ಕಾಗಿ ರಕ್ತಪಾತವಾಗಬಾರದು. ಯಾರ ಜೀವಕ್ಕೂ ಹಾನಿಯಾಗಬರದು. ಪ್ರೀತಿಯಿಂದ, ವಿಶ್ವಾಸದಿಂದ ಬ್ರಿಟಿಷರ ಮನಸ್ಸನ್ನು ಒಲಿಸಿಕೊಳ್ಳೋಣ, ಆ ಮೂಲಕ ಸ್ವಾತಂತ್ರ್ಯ ಪಡೆಯೋಣ ಎಂದು ಗಾಂಧೀಜಿ ಹೇಳಲಾರಂಭಿಸಿದರು. ಈ ಉದ್ದೇಶಕ್ಕಾಗಿ ಜನರನ್ನು ತಿದ್ದಲು ಪ್ರಾರಂಭಿಸಿದರು.

ಪುಲಿನ ಬಿಹಾರಿದಾಸ್ ಮತ್ತು ಗಾಂಧೀಜಿ.

ಆಗ ಸಹಜವಾಗಿ ಗಾಂಧೀಜಿಯವರ ದೃಷ್ಟಿ ಇಲ್ಲಿಯ ಕ್ರಾಂತಿಕಾರಿ ವ್ಯಕ್ತಿಗಳ ಮೇಲೆ ಬಿದ್ದಿತು. ಅನುಶೀಲನ ಸಮಿತಿಯಂತಹ ಸಂಘಗಳು ಏನು ಮಾಡುತ್ತಿವೆ ಅನ್ನುವುದನ್ನು ಅವರು ಅಭ್ಯಾಸ ಮಾಡಿದರು. ಪುಲಿನ ಬಿಹಾರಿದಾಸರ ಕಾರ್ಯ ಚಟುವಟಿಕೆಗಳನ್ನು ಅವರು ಗಮನಿಸಿದರು. ಗಾಂಧೀಜಿಯವರು ಪುಲಿನರನ್ನು ಭೇಟಿ ಮಾಡಿ “ಕ್ರಾಂತಿಯ ದಾರಿ ಬಿಡಿ” ಎಂದು ಹೇಳಿದರು.

“ಕೊಲೆಗಳಿಂದ ಯಾರನ್ನು ಸ್ವತಂತ್ರಗೊಳಿಸುವ ವಿಚಾರ ಬೇಡ. ಇದರಿಂದ ರಾಷ್ಟ್ರಕ್ಕೆ ಸುಖ ಸಿಗುವುದಿಲ್ಲ” ಎಂಬುದಾಗಿ ಗಾಂಧೀಜಿಯವರು ಎಲ್ಲ ಕ್ರಾಂತಿಕಾರಿಗಳಿಗೂ ಕೇಳಿಕೊಂಡರು.

ಕ್ರಾಂತಿಪಥವೆ ನನಗಿರಲಿ

ಪುಲಿನರು ಮತ್ತೊಮ್ಮೆ ವಿಚಾರ ಮಾಡಬೇಕಾಯಿತು. ಒಂದು ಅರ್ಥದಲ್ಲಿ ಗಾಂಧೀಜಿಯವರು ಹೇಳುವುದೆಲ್ಲಾ ಸರಿಯೆ, ಸತ್ಯವೆ. ಆದರೆ ಭಾರತವನ್ನು ಆಳಲು ಬಯಸುವ ಬ್ರಿಟಿಷರು ದಯೆ, ಅಹಿಂಸೆ, ಶಾಂತಿಗಳ ಅರ್ಥವನ್ನು ಅರಿಯಬಲ್ಲರೆ? ಸತ್ಯಾಗ್ರಹಿಗಳ ಮೇಲೆ ಬ್ರಿಟಿಷರು ಗುಂಡು ಹಾರಿಸುತ್ತಿಲ್ಲವೆ? ಲಾಠಿ ಪ್ರಹಾರ ಮಾಡುತ್ತಿಲ್ಲವೆ? ಕುದುರೆಗಳನ್ನೇರಿ ಬಂದು ಹೊಡೆಯುತ್ತಿಲ್ಲವೆ? ಪುಲಿನರು ಗಾಂಧೀಜಿಯವರ ಮಾತನ್ನು ಒಪ್ಪಲಿಲ್ಲ. ಅವರ ಕಣ್ಣೆದುರು ಛತ್ರಪತಿ ಶಿವಾಜಿಯ ಆದರ್ಶವಿತ್ತು. ಇಟಲಿಯ ಮಹಾಶೂರ ಗ್ಯಾರಿಬಾಲ್ಡಿಯ ಉದಾಹರಣೆ ಇತ್ತು. ಹೊರ ದೇಶಗಳಲ್ಲಿ ನಡೆದ ಹಲವು ಕ್ರಾಂತಿಕಾರಿ ಹೋರಾಟಗಳ ವಿಷಯವನ್ನು ಅವರು ಅರಿತಿದ್ದರು. ಅಲ್ಲೆಲ್ಲ ಕ್ರಾಂತಿಗೆ ಜಯ ಲಭಿಸಿತ್ತು. ಇಲ್ಲೂ ಜಯ ಲಭಿಸಬಾರದು ಎಂದಿದೆಯೇ? ಈಗಾಗಲೇ ಬ್ರಿಟಿಷರು ಹೆದರಿಕೊಂಡಿದ್ದಾರೆ. ಈ ಹಿಂದೆ ನಡೆದಿರುವ ಹಲವು ಕ್ರಾಂತಿಗಳಿಂದ ಸರಕಾರ ಪಾಠ ಕಲಿತಂತಿದೆ. ಹೊರದೇಶದಿಂದ ಬಂದು ನಮ್ಮನ್ನಾಳುತ್ತಿರುವವರ ವಿರುದ್ಧ ಕ್ರಾಂತಿಯನ್ನು ಮುಂದುವರಿಸಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಪುಲಿನ ಬಿಹಾರಿ ದಾಸರು ನಿರ್ಧರಿಸಿದರು. ಮಹಾತ್ಮ ಗಾಂಧಿಯವರ ಸಲಹೆಯನ್ನು ಅವರು ಕೈಬಿಟ್ಟರು. ಅವರು ಕ್ರಾಂತಿಕಾರಿಗಳಾಗಿಯೇ ಉಳಿದರು.

ಪುಲಿನರು ಮಹಾತ್ಮಗಾಂಧಿಯವರು ತಾವು ಆರಿಸಿದ ದಾರಿಯಲ್ಲಿ ಅವರ ಪಾಡಿಗೆ ನಡೆಯಲು ಬಿಟ್ಟಿದ್ದರು. ತಾವು ತಮ್ಮ ದಾರಿಯಲ್ಲೇ ಮುಂದುವರಿದರು. ಅವರಿಗೆ ಜನರನ್ನು ಕ್ರಾಂತಿಯ ಮಾರ್ಗದಲ್ಲಿ ನಡೆಸಲು ಕೆಲ ಪತ್ರಿಕೆಗಳು ಬೇಕೆನಿಸಿತು. ಅವರು “ಸ್ವರಾಜ್ಯ” ಎಂಬ ಪತ್ರಿಕೆಯೊಂದನ್ನು ಆರಂಭಿಸಿದರು. ನಂತರ “ಶಂಖ” ಎಂಬ ಇನ್ನೊಂದು ಪತ್ರಿಕೆಯನ್ನೂ ಆರಂಭಿಸಿದರು. ಆದರೆ ಈ ಎರಡು ಪತ್ರಿಕೆಗಳೂ ಬಹಳ ದಿನ ನಡೆಯಲಿಲ್ಲ.

ಪುಲಿನ ಬಿಹಾರಿದಾಸ್ ಅವರು ಸದಾ ಸರಳ ಜೀವನವನ್ನು ನಡೆಸುತ್ತಿದ್ದರು. ಎಲ್ಲರನ್ನೂ ಆತ್ಮೀಯತೆಯಿಂದ ಕಂಡು ಮಾತನಾಡುತ್ತಿದ್ದರು. ಎಲ್ಲರನ್ನೂ ಆತ್ಮೀಯತೆಯಿಂದ ಕಂಡು ಮಾತನಾಡುತ್ತಿದ್ದರು. ಯಾರ ಬಗ್ಗೆಯೂ ಮೇಲು ಕೀಳು ಎಂಬ ಭಾವನೆಯನ್ನು ಅವರು ತೋರಿಸುತ್ತಿರಲಿಲ್ಲ. ಆಹಾರದ ವಿಷಯದಲ್ಲಿ ಅವರು ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸುತ್ತಿದ್ದರು. ಆದರೆ ಉಳಿದ ವಿಷಯಗಳಲ್ಲಿಎಲ್ಲರೊಡನೆ ಸೇರುತ್ತಿದ್ದರು. ಮಡಿ ಮೈಲಿಗೆ ಅವರಿಗ ಇರಲಿಲ್ಲ.

ಸರಳ, ಸೌಜನ್ಯ ಸ್ವಭಾವ

ಉಡಿಗೆ ತೊಡಿಗೆಯಲ್ಲಿ ಸರಳತೆ, ಜೀವನ ವಿಧಾನದಲ್ಲಿ ಸರಳತೆ ಅವರ ಆದರ್ಶವಾಗಿತ್ತು. ಎಂದೂ ಅವರು ತಮ್ಮ ಕರ್ತವ್ಯವನ್ನು ಕಡೆಗಣಿಸುತ್ತಿರಲಿಲ್ಲ. ಅದು ಎಷ್ಟೇ ಶ್ರಮದ ಕೆಲಸವಿರಲಿ, ಎಂತಹ ಆಪತ್ತನ್ನು ಬೇಕಾದರೂ ಎದುರಿಸಬೇಕಾಗಿ ಬರಲಿ ಅವರು ಆ ಕೆಲಸವನ್ನು ಮಾಡಿಯೇ ತೀರುತ್ತಿದ್ದರು. ಅವರು ತಮ್ಮ ಈ ಗುಣದಿಂದಲೇ ತರುಣರ ಪಾಲಿಗೆ ಗುರುವಾದರು, ಮಾರ್ಗದರ್ಶಿಯಾದರು. ಎಷ್ಟೋ ಜನ ತರುಣರು ಅನುಶೀಲನ ಸಮಿತಿಯ ಸದಸ್ಯರಾಗಿ, ಪುಲಿನರ ಶಿಷ್ಯರಾಗಿ ರಾಷ್ಟ್ರದ ಹೋರಾಟಕ್ಕಾಗಿ ದುಡಿದರು. ವಿಖ್ಯಾತರಾದರು. ಶಿಸ್ತಿನ ಜೀವನವನ್ನು ನಡೆಸಿದರು. ಹಿಂದೂ ಧರ್ಮ ಮತ್ತು ಸಂಸ್ಕೃತಿಗಳ ಅಭಿವೃದ್ಧಿಗೆ ಕಾರಣರಾದರು.

ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಪುಲಿನ ಬಿಹಾರಿದಾಸರಿಗೆ ಗಾಢವಾದ ಒಲವು. ಹಳೆಯದನ್ನು ಅವರು ಗೌರವಿಸುತ್ತಿದ್ದರು. ಹಾಗೆಂದು ಹೊಸದನ್ನು ಅವರೆಂದೂ ಹಳಿಯುತ್ತಿರಲಿಲ್ಲ.

ಪ್ರಗತಿಪಥ

ನಮ್ಮ ರೈತರು ಬೇಸಾಯದಲ್ಲಿ ಹಳೆಯ ರೀತಿಗಳನ್ನು ಅನುಸರಿಸುವುದನ್ನು ಅವರು ಒಪ್ಪುತ್ತಿರಲಿಲ್ಲ. ನಮ್ಮ ರೈತರು ಆಧುನಿಕ ಉಪಕರಣಗಳನ್ನು ಬಳಸಬೇಕು ಎಂದು ಅವರು ಹೇಳುತ್ತಿದ್ದರು. ಹೊಲವನ್ನು ಉಳುವುದೇ ಆಗಲಿ, ಬೀಜ ಬಿತ್ತುವುದೇ ಆಗಲಿ ಹಿಂದಿನಂತೆಯೇ ನಡೆಯಬಾರದು. ಹೊಸ ಹೊಸ ಯಂತ್ರಗಳು ಬಂದಿವೆ. ಅವುಗಳನ್ನು ಉಪಯೋಗಿಸಬೇಕು. ಒಳ್ಳೆಯ ಬೆಳೆಯನ್ನು ಹೆಚ್ಚು ಹೆಚ್ಚಾಗಿ ತೆಗೆಯಬೇಕು ಎಂದು ಪುಲಿನ ಬಿಹಾರಿದಾಸರು ಹೇಳುತ್ತಿದ್ದರು. ಕೈಗಾರಿಕೆ ಬಗ್ಗೆಯೂ ಅವರದು ಇದೇ ಅಭಿಪ್ರಾಯವಾಗಿತ್ತು. ದೇಶದಲ್ಲಿ ಯಂತ್ರಗಳ ಸ್ಥಾಪನೆಯಾಗಬೇಕು, ಯಂತ್ರಾಗಾರಗಳು ಬೆಳೆಯಬೇಕು ಎಂಬುದು ಅವರ ಆಸೆಯಾಗಿತ್ತು. ಲಭಿಸುತ್ತದೆ. ನಾವು ಸಿದ್ಧಪಡಿಸುವ ವಸ್ತುವೂ ಉತ್ತಮವಾಗಿರುತ್ತದೆ. ಈ ಕಾರಣಕ್ಕಾಗಿ ನಮ್ಮ ದೇಶವು ಔದ್ಯೋಗಿಕತೆಯತ್ತ ಹೆಚ್ಚಾಗಿ ವಾಲಬೇಕು ಎಂದು ಅವರು ಹೇಳುತ್ತಿದ್ದರು.

ಜನತೆಯ ಸೇವಕ

ಆ ಕಾಲದಲ್ಲಿ ಆಗಾಗ್ಗೆ ದೇಶದಲ್ಲಿ ಮತೀಯ ಕಲಹಗಳು ಏಳುತ್ತಿದ್ದವು. ಹಿಂದು-ಮುಸ್ಲಿಮರಲ್ಲಿ ಕಲಹಗಳು ಉಂಟಾಗಿ ಸಾವು ನೋವುಗಳಾಗುತ್ತಿದ್ದವು. ಈ ಸಮಯದಲ್ಲಿ ಪುಲಿನರು ಸಲ್ಲಿಸಿದ ಸೇವೆ ಅಪೂರ್ವವಾದುದು. ಮತೀಯ ಗಲಭೆಗಳ ದಾಳಿಗೆ ಒಳಗಾದವರಿಗೆ ಪುಲಿನರು ರಕ್ಷಣೆ ನೀಡಿದರು. ಈ ಗಲಭೆಗೆ ಸಿಲುಕಿಕೊಂಡವರಲ್ಲಿ ಮನೆಮಠಗಳನ್ನು ಕಳೆದುಕೊಂಡವರು ಇದ್ದರು. ತಂದೆತಾಯಿಗಳನ್ನು ಅಗಲಿದ ಮಕ್ಕಳಿದ್ದರು. ಇವರೆಲ್ಲರನ್ನೂ ಪುಲಿನರು ಸಂತೈಸಿ ಸಮಾಧಾನ ಪಡಿಸಿದರು. ಆರೈಕೆ ಮಾಡಿದರು.

ದೈಹಿಕವಾಗಿ ಅವರು ದೃಢಕಾಯರಾಗಿದ್ದರು. ಅವರ ನೈತಿಕ ಗುಣವೂ ನಿಷ್ಕಳಂಕಮಯವಾಗಿತ್ತು. ಹೀಗಾಗಿ ವಿಶ್ವಕವಿ ರವೀಂದ್ರನಾಥ ಠಾಕೂರರು ಕೂಡ ಪುಲಿನ ಬಿಹಾರಿದಾಸ್‌ರವನ್ನು ಮೆಚ್ಚಿಕೊಂಡಿದ್ದರು.

ಬಿಹಾರಿದಾಸರು ಲೇಖಕರೂ ಆಗಿದ್ದರು. ತಮ್ಮ ಆತ್ಮಕತೆಯನ್ನು ಅವರು ಬರೆದಿರಿಸಿದರು. ಲಾಠಿ ಬೀಸುವುದು, ಕತ್ತಿ ವರಸೆಗಳ ಬಗ್ಗೆ ಕರಪತ್ರಗಳನ್ನು ಬರೆದು ಮುದ್ರಿಸಿದರು. ನಮ್ಮ ತರುಣರು ಎಂತಹ ಸಮಯದಲ್ಲೂ ರಾಷ್ಟ್ರದ ರಕ್ಷಣೆಗೆ ಸಿದ್ಧರಾಗಿರಬೇಕೆಂದೂ ಇದಕ್ಕಾಗಿ ಅವರಿಗೆ ತಕ್ಕ ಶಿಕ್ಷಣ ದೊರೆಯಬೇಕೆಂದೂ ಪುಲಿನರು ಅಭಿಪ್ರಾಯ ಪಡುತ್ತಿದ್ದರು. ಆಧುನಿಕ ಬೇಸಾಯ, ಔದ್ಯೋಗಿಕತೆಯ ಬಗ್ಗೆಯೂ ಅವರು ಒಂದೆರಡು ಸಣ್ಣ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಕೇವಲ ಬರಹಗಾರರು ಮಾತ್ರ ಆಗಿರಲಿಲ್ಲ. ಬರೆದುದನ್ನು ಅವರು ಜೀವನದಲ್ಲಿ ಅನುಸರಿಸುತ್ತಲೂ ಇದ್ದರು.

ಪುಲಿನ ಬಿಹಾರಿದಾಸರ ಕ್ರಾಂತಿಕಾರೀ ಜೀವನ ೧೯೪೫ ರಲ್ಲಿ ಮುಗಿಯಿತು. ತೀರಿಕೊಂಡಾಗ ಅವರಿಗೆ ೬೮ ವರ್ಷವಾಗಿತ್ತು.

ಧೀರೋದಾತ್ತ

ಪುಲಿನ ಬಿಹಾರಿದಾಸರು ತೀರಿಕೊಂಡರು. ಎರಡು ವರ್ಷಗಳ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಕೊನೆಗೂ ಬ್ರಿಟಿಷರು ಆಡಳಿತವನ್ನು ನಮಗೆ ಒಪ್ಪಿಸಿ ತಮ್ಮ ದೇಶಕ್ಕೆ ಹೊರಟು ಹೋದರು. ಈ ಸ್ವಾತಂತ್ರ್ಯವನ್ನು ಪಡೆಯಲು ಮಾತ್ರ ನಾವು ದೀರ್ಘವಾದ ಹೋರಾಟವನ್ನು ನಡೆಸಬೇಕಾಯಿತು. ನೂರಾರು ಜನ ಕ್ರಾಂತಿಕಾರಿಗಳು ಗಲ್ಲಿಗೇರಿದರು. ಹುತಾತ್ಮರಾದರು. ಜೈಲುಗಳಲ್ಲಿ ಹಲವರು ನಾನಾ ಬಗೆಯ ಕಷ್ಟಗಳನ್ನು ಸಹಿಸಿದರು. ಭಾರತ ವಿದೇಶಿಯರ ಕೈಯಲ್ಲಿದ್ದು ಭಾರತೀಯರು ಗುಲಾಮರಾಗಿದ್ದಾಗ, ಸ್ವಾತಂತ್ರ್ಯಕ್ಕಾಗಿ ಹಿಂಸೆಯನ್ನು ಬಳಸುವುದು ಅಗತ್ಯ ಎಂದು ಕೆಲವರು ಅಭಿಪ್ರಾಯಪಟ್ಟರು. ಅವರು ಕ್ರಾಂತಿಕಾರಿಗಳಾದರು. ಪ್ರಜಾಪ್ರಭುತ್ವವಿರುವ ಸ್ವತಂತ್ರ ನಾಡಿನಲ್ಲಿ ಹಿಂಸೆಗೆ ಅವಕಾಶವಿಲ್ಲ. ಆದರೆ ಬೇರೆಯ ದೇಶದವರು ಶಕ್ತಿಯ ಬಲದಿಂದ ನಮ್ಮನ್ನು ಆಳುತ್ತಿದ್ದ ಕಾಲದಲ್ಲಿ ಕ್ರಾಂತಿಕಾರರು ತೋರಿಸಿದ ದೇಶಾಭಿಮಾನ, ಬಲಿದಾನದ ಮನೋಭಾವ ಮೆಚ್ಚುವಂತಹವು. ಕ್ರಾಂತಿಕಾರಿಗಳ ಗಂಡೆದೆಯ ಚಟುವಟಿಕೆಗಳು, ಅಹಿಂಸಾವಾದಿಗಳ ಸತ್ಯಾಗ್ರಹಗಳು ಜೊತೆಗೂಡಿ ನಮಗೆ ಸ್ವರಾಜ್ಯವನ್ನು ತಂದುಕೊಟ್ಟವು ಅನ್ನುವ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಪುಲಿನ ಬಿಹಾರಿದಾಸರ ಧೀರೋದಾತ್ತ ವ್ಯಕ್ತಿತ್ವ, ಧಾರ್ಮಿಕ ಶ್ರದ್ಧೆ, ದೇಶಭಕ್ತಿ ಬಂಗಾಳದ ಮುಂದಿನ ಪೀಳಿಗೆಗೆ ಮಾತ್ರವಲ್ಲ ಭಾರತದ ಎಲ್ಲರಿಗೂ ಮಾರ್ಗದರ್ಶಕ.