ಸೂತ್ರಧಾರ : ಕಂದಾ ಮುಂದೇನಾಯ್ತಪಾ ಅಂದರೆ-

ಮೇಳ : ಗೊತ್ತಾಯ್ತು ಬಿಡಿ,

ಸೂತ್ರಧಾರ : ಏನು ಗೊತ್ತಾಯ್ತು?

ಮೇಳ : ಯುದ್ಧ ಆಗಲಿಲ್ಲ.

ಸೂತ್ರಧಾರ : ಅಂದ್ರೆ?

ಮೇಳ : ಹೌದು ಗುರುವೆ. ಮಗಳು ತಂದೆಗೆ ಕಾಗದಾ ಬರೆದು ಗಂಡನ ಮೇಲೆ ದಂಡೆತ್ತಿ ಬಾ ಅಂದರೆ ಯಾವ ದಡ್ಡ ತಂದೆ ಬರತಾನೆ?

ಸೂತ್ರಧಾರ : ಹೌದೇನಪಾ?

ಮೇಳ : ಇಷ್ಟು ತಿಳಿಯೋಲ್ವೆ ಗುರುವೆ? ಗಂಡನ ಮೇಲೆ ದಂಡೆತ್ತಿ ಬಾ ಅಂತ ಯಾವ ಹೆಂಡತಿ ಹೇಳ್ತಾಳೆ? ಅವರಪ್ಪಾ ಅಂದುಕೊಳ್ಳುತ್ತಾನೆ; ಗಂಡಾ ಹೆಂಡಿರು ಜಗಳಾಡಿದ್ದಾರೆ. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ. ಅಂದರೆ ಈ ಪತ್ರ ಕೈಸೇರಿರೋ ಹೊತ್ತಿಗೆ ಇಬ್ರೂ ಉಂಡು ಮಲಗಿರ್ತಾರೆ. ಜಗಳ ಮರೀತಾರೆ ಅಂದು ನಗಾಡ್ತಾನೆ ಅಷ್ಟೇ.

ಸೂತ್ರಧಾರ : ಕಂದಾ ಹಂಗಾಗಲಿಲ್ಲಪ್ಪಾ. ತಂದೆ ಮಗಳ ಪತ್ರ ಓದಿದ. ಮಗಳಿಗಾದ ಅನ್ಯಾಯ ನೆನೆದ. ಕರಂ ಕರಂ ಹಲ್ಲು ಕಡಿದ, ದವಡೆ ತಿಂದ, ಗೌಡಳಿಕೆ ಪಾಳೆಯಗಾರರು ಮಾಂಡಳಿಕ ಮಾನ್ಯರನ್ನು ಕರೆದ. ನಡೀರಯ್ಯಾ ಯುದ್ಧಕ್ಕೆ ಅಂದ. ಅಂದು ತಾನೂ ಬಂದೇಬಿಟ್ಟ.

ಮೇಳ : ಗುರುವೆ ಇದಕ್ಕೆ ನನ್ನ ತೀವ್ರವಾದ ವಿರೋಧ ಇದೆ ಅಂತ ಮಹಾರಾಣಿಯ ತಂದೆಗೆ ಹೇಳಲೇಬೇಕು.

ಸೂತ್ರಧಾರ : ನೀನು ಹೇಳೋದರಿಂದ ಅವನು ವಾಪಸ್ ಹೋಗೋದಿಲ್ಲಪ್ಪಾ.

ಮೇಳ : ಹಾಗಾದರೆ ಕೊನೆ ಪಕ್ಷ ನನ್ನ ವಿರೋಧವನ್ನು ನಿಮ್ಮ ಕಥೆಯಲ್ಲಿ ದಾಖಲಾದ್ರೂ ಮಾಡಿಕೋಬೇಕು. ಐ ವಾಂಟ್ ಜಸ್ಟೀಸ್.

ಸೂತ್ರಧಾರ : ಆಯ್ತಪಾ ಮಾಡಿಕೊಳ್ಳೋಣ. ಮುಂದಿನ ಕತೆ ಕೇಳು. ಈ ಕಡೆ ಶಿವಾಪಟ್ಟಣದ ಮಹಾರಾಜರಿಗೆ ಆಶ್ಚರ್ಯವಾಗಿದೆ. ಎಲಾ ಮಂತ್ರಿ-

ಮೇಳ : ಮಹಾಪ್ರಭೂ.

ಸೂತ್ರಧಾರ : ಯಾವ ಸುಳಿವೂ ನೀಡದೆ ಮಾಂಡಲೀಕರು ಹೀಗೆ ದಂಡೆತ್ತಿ ಬರಬಹುದೇನಯ್ಯಾ ಮಂತ್ರಿ?

ಮೇಳ : ಬಂದಾಯಿತಲ್ಲಾ ಪ್ರಭೂ. ಆದರೆ ಇದು ಮಾಂಡಲೀಕರ ತಲೆ ಅಲ್ಲ. ಅವರ ತಲೆ ಹಿಂದೆ ಇನ್ಯಾರದೊ ತಲೆ ಇದೆ.

ಸೂತ್ರಧಾರ : ದಂಗೆ ಏಳಲಿಕ್ಕೆ ಅವರ ತಲೆ ಕಾರಣವಾಗಿರಲಿ ಇಲ್ಲಾ ಬಾಲ ಕಾರಣವಾಗಿರಲಿ ಈಗ ಯುದ್ಧ ಒಂದೇ ಉಪಾಯ. ಬೇಗನೆ ಸೈನ್ಯ ಸಜ್ಜಾಗಲಿ.

ಮೇಳ : ಆಗಲಿ ಪ್ರಭೂ.

ಸೂತ್ರಧಾರ : ಅಂತಾ ಹೇಳಿ ರಾಜರು ಪುಷ್ಪರಾಣಿಯಲ್ಲಿಗೆ ಹೊರಟು ನಿಂತರು. ಪುಷ್ಪರಾಣಿ ತುಂಬು ಬಸುರಿ. ಅರಮನೆ ಅಂಗಳದಲ್ಲಿ ತಂಗಾಳಿಯಾಗಿ ಆಡುವ ಕಂದ ಇಂದು ಬಂದಾನು ನಾಳೆ ಬಂದಾನು ಅಂತ ಕೂತಿರುವಲ್ಲಿಗೆ ಮಹಾರಾಜರು ಬಂದರು.

(ಅಂತಃಪುರ, ಪುಷ್ಪರಾಣಿ, ಮಹಾರಾಣಿ ಇದ್ದಾರೆ. ಮಹಾರಾಜ ಬರುವನು)

ಮಹಾರಾಜ : ಏಳಬೇಕಾದ ಅಗತ್ಯವಿಲ್ಲ ದೇವಿ. ಮಹಾರಾಣಿ ಇಲ್ಲೇ ಇದ್ದುದು ಅನುಕೂಲವೇ ಆಯ್ತು. ಮಾಂಡಳೀಕರು ನನ್ನ ಮೇಲೆ ದಂಡೆತ್ತಿ ಬಂದಿದ್ದಾರೆ. ಹೋಗಿ ಸದೆ ಬಡಿದು ಬೇಗನೇ ಬರುತ್ತೇನೆ. ಅಲ್ಲಿಯತನಕ ಪುಷ್ಪರಾಣಿಯನ್ನು ನಿಮ್ಮ ಕೈಗೆ ಒಪ್ಪಿಸಿದ್ದೇನೆ. ನಿಮ್ಮ ಜೀವದ ಹಾಗೆ ಇವಳನ್ನು ಕಾಪಾಡಬೇಕು.

ಮಹಾರಾಣಿ : ತಂಗಿಯ ಯೋಗಕ್ಷೇಮವನ್ನು ಅಕ್ಕನಿಗೆ ವಹಿಸಿಕೊಡೋದೇನು ಬಂತು ಪ್ರಭು? ಅದು ನನ್ನ ಕರ್ತವ್ಯ. ತಾವು ನಿಶ್ಚಿಂತರಾಗಿ ಹೋಗಿ.

ಪುಷ್ಪರಾಣಿ : (ಆತಂಕದಿಂದ) ಪ್ರಭು ನೀವು ಯುದ್ಧಕ್ಕೆ ಹೋಗಲೇ ಬೇಕೆ?

ಮಹಾರಾಣಿ : ಅದೇನು ಹಾಗೆ ಆತಂಕಪಡುತ್ತೀ ತಂಗೀ? ನಿನ್ನ ಸೌಭಾಗ್ಯ ಆತಂಕಗಳಲ್ಲಿ
ಭಾಗಿಯಾಗಲು ನಾನಿಲ್ಲವೆ? ಅಥವಾ ನೀನು ಬಯಸಿದರೆ ನಿನ್ನ ತೌರಿಗೂ
ಎರಡು ದಿನ ಹೋಗಿ ಬರಬಹುದು.

ಮಹಾರಾಜ : ಎಲ್ಲಿಗೂ ಹೋಗುವುದು ಬೇಡ. ಒಂದೆರಡು ದಿನಗಳಲ್ಲಿ ಬಂದು ಬಿಡುತ್ತೇನೆ.

(ಕಣ್ಣೀರು ಸೂಸುವ ಪುಷ್ಪರಾಣಿಯನ್ನು ಸಂತೈಸಿ ರಾಜ ಹೊರಡುವನು. ಮಹಾರಾಣಿಯ ಮುಖದಲ್ಲಾಗಲೇ ಗೆಲುವು ಮೂಡಿದೆ.)