ಮೇಳ : ಪಂಜರದ ಗಿಳಿಯೊಂದು ರಾಮ ರಾಮಾ ಎಂದು
ಒದರಿತ್ತು ಪಟಪಟ ರೆಕ್ಕೆ ಬಡಿದು
ಸೂರಿನಲಿ ಸುಳಿದಿತ್ತು ಸೀಳು ನಾಲಗೆ ಚಾಚಿ
ಹಸಿದಂಥ ಕಾಳಘಟಸರ್ಪವೊಂದು||

ಕಣ್ಣನೋಟದಲೇನೊ ಜೇಡಬಲೆ ಹೆಣೆದಿತ್ತು
ಹಲ್ಲಿ ಲೊಚಗುಡುತ್ತಿತ್ತು ಹೆದರಿಕೆಗೆ
ಉಸಿರುಗಟ್ಟಿದ ಗಾಳಿ ದೀಪ ಅಲುಗಿರಲಿಲ್ಲ
ಕಣ್ಣೊಳಗೆ ಬರೆದಿತ್ತು ಖಾಲಿ ಸೊನ್ನೆ||

ಪುಷ್ಪರಾಣಿ : ಅಕ್ಕಾ ಮಹಾರಾಜರಿಂದ ಏನೂ ಸುದ್ದಿ ಬರುತ್ತಿಲ್ಲ. ನನಗೆ ತುಂಬಾ ಚಿಂತೆಯಾಗಿದೆ.

ಮಹಾರಾಣಿ : ಚಿಂತೆ ಮಾಡುತ್ತ ಕೂತರೇನು ಬಂತು? ಮಹಾರಾಜರು ಗೆಲ್ಲೋದರಲ್ಲಿ ಸಂದೇಹವೇ ಇಲ್ಲ. ಕನಿಷ್ಠಾ ವಿನಯೇ ನೀವಿಬ್ಬರೂ ತಂಗಿಯೊಡನೆ ಆಟ ಆಡಿ ಏನಾದರೂ ಮನರಂಜನೆ ಮಾಡಬಾರದೆ?

ಕನಿಷ್ಠಾ : ಅವರು ಯಾವುದಕ್ಕೂ ಒಪ್ಪುತ್ತಿಲ್ಲ ಮಹಾರಾಣಿ.

ಮಹಾರಾಣಿ : ತಂಗಿ ನೀನು ಬಯಸಿದಾಗ ಮರವಾಗುತ್ತೀಯಂತೆ, ಹೂಬಿಡುತ್ತೀಯಂತೆ. ಆ ಆಟವನ್ನಾದರೂ ನಮಗೆ ತೋರಿಸಬಾರದೆ?

ಪುಷ್ಪರಾಣಿ : ಬನ್ನಿ ತೋರಿಸುತ್ತೇನೆ.

(ಮುಂದೆ ನಡೆಯುತ್ತಿರುವ ಪುಷ್ಪರಾಣಿಗೆ ಮೇಳ ಅಡ್ಡ ಬಂದು)

ಮೇಳ : ನೀಲಿಗಿಂತಾ ಹೆಚ್ಚು ನೀಲಿಯಾಗಿದೆ ಬಾನು
ಒಂದ್ಯಾಕೆ ಹೀಗೆಂದು ತಿಳಿಯಲಿಲ್ಲ|
ಬಿಳಿಚಿಕೊಂಡಿದೆ ಹಸಿರು ಭಾರವಾಗಿದೆ ನೆರಳು
ಹೋಗಬ್ಯಾಡಿರಿ ತಾಯಿ ಇಂದು ಮಾತ್ರಾ||

ಮಹಾರಾಣಿ : ತುಂಬು ಗರ್ಭಿಣಿಯಾದ ನನ್ನ ತಂಗಿಯ ಸುಂದರ ಮುಖ ನೋಡಿ ಮುಗಿಲು ನೀಲಿಯೇರಿದೆ. ಎಳೆ ಬಿಸಿಲಿಗೆ ಹಸಿರು ಬಿಳಿಚಿಕೊಂಡಿದೆ. ಆದ್ದರಿಂದ ಹಾಗೆ ಕಾಣುವುದು ಸಹಜ. ಇವರ ಮಾತೇನು ಕೇಳುವುದು? ನಡೆ ತಂಗಿ ಹೋಗೋಣ.

(ಮುಂದೆ ನಾಲ್ಕು ಹೆಜ್ಜೆ ಬರುವರು)

ಮೇಳ : ಗುರಿ ತಪ್ಪಿಸುವ ದಾರಿ ಕೈಮಾಡಿ ಕರೆಯುವದು
ನಿಟ್ಟುಸಿರು ಬಿಡುತಾವೆ ಗಾಳಿ|
ಮರಿ ಹಕ್ಕಿ ಇಂದ್ಯಾಕೋ ಅಡ್ಡ ಬರತಿದೆ ಕಿರುಚಿ
ಹೋಗಬ್ಯಾಡಿರಿ ತಾಯಿ ಮುಂದೆ||

ಮಹಾರಾಣಿ : ಮನಸು ವಕ್ರ ಇದ್ದವರಿಗೆ ದಾರಿ ಗುರಿ ತಪ್ಪಿಸುತ್ತದೆ. ತಾಯಿ ಹಕ್ಕಿ ಇನ್ನೂ ಬಂದಿಲ್ಲವಾದ್ದರಿಂದ ಮರಿ ಹಕ್ಕಿ ಕಿರುಚುತ್ತಿದೆ. ಇವರ ಮಾತೇನು ಕೇಳುವುದು? ನಡಿ ತಂಗಿ ಹೋಗೋಣ.

(ನಾಲ್ಕು ಹೆಜ್ಜೆ ಮುಂದೆ ಬರುವಳು)

ಮೇಳ : ನಮಗೆ ಬೇಕಾದಷ್ಟು ಗಾಯವಾಗಿದೆ ಎಂದು
ನಿಮಗೆ ಹೇಳಿರುವರೇ ಯಾರಾದರೂ|
ಈಗಲಾದರೂ ಕಾಡು ದಯಮಾಡಿ ಕಳುಹಿಸಲಿ
ಔಷಧಿಯ ಗಾಳಿಗಳ ನಾಲ್ಕು ಐದು||

(ಮುಂದೆ ಬರುವರು. ಮೇಳ ಹಿಂದೆ ಸರಿಯುವುದು)

ಪುಷ್ಪರಾಣಿ : ಅಕ್ಕಾ ನಿನ್ನ ಕೈಗೆ ನಾಲ್ಕು ಹರಳು ಕೊಟ್ಟಿರುತ್ತೇನೆ. ಅವುಗಳಲ್ಲಿ ಒಂದನೇ ಕಲ್ಲನ್ನು ಎಸೆದರೆ ನಾನು ಮರವಾಗುತ್ತೇನೆ. ಎರಡನೆಯದನ್ನು ಎಸೆದರೆ ಮರ ಹೂ ಬಿಡುತ್ತದೆ. ಮೂರನೆಯದನ್ನು ಎಸೆದರೆ ಹೂಗಳು ಉದುರುತ್ತವೆ. ನಾಲ್ಕನೆಯದನ್ನು ಎಸೆದರೆ ಪುನಃ ನಿನ್ನ ತಂಗಿಯಾಗುತ್ತೇನೆ.

ಮಹಾರಾಣಿ : ಎಲ್ಲಿ ನೋಡೋಣ

(ಪುಷ್ಪರಾಣಿ ದೂರದಲ್ಲಿ ನಿಲ್ಲುತ್ತಾಳೆ. ಮಹಾರಾಣಿ ಅವಳ ಮೇಲೊಂದು ಕಲ್ಲು ಎಸೆಯುತ್ತಾಳೆ. ಈಗ ಮೇಳ ಹಿಂದೆ ಹಾಡಿದ ಹಾಡನ್ನೇ ದುಃಖದಿಂದ ಹಾಡುತ್ತದೆ)

ತಾಯಿ ಆದವಳು ಕರಗಿ ಸಣ್ಣ ಮರ
ನಿಂತಿತಣ್ಣ ಎದುರು
ಶಿವಲೋಕದ ತಂಗಾಳಿ ಬೀಸತಾವ
ತೂಗತಾವ ಹಸಿರು||

ರೆಂಬೆ ನೋಡದರ ಕೊಂಬೆ ನೋಡ
ಒಡಮುರಿಯುತಾವ ಚಿಗುರ
ಹಾರಿಬಂದ ಮರಿ ಹಕ್ಕಿ ಚಿಲಿಪಿಲಿ
ಹಾಡತಾವ ಮಧುರ||

ಕನಿಷ್ಠಾ : ನೋಡಿದಿರಾ ಮಹಾರಾಣಿ ಎಂಥಾ ಮದ್ದುಮಾಟದ ಚೆಲುವೆ.

ವಿನಯೆ : ಇಷ್ಟು ಸುಂದರವಾದ ಮರವನ್ನು ನಾನು ಇದುವರೆಗೆ ನೋಡಿಲ್ಲ. ಎಲ್ಲಿ ಮಹಾರಾಣಿ ಎರಡನ್ನೇ ಕಲ್ಲನ್ನು ಎಸೆಯಿರಿ.

(ಮಹಾರಾಣಿ ಎರಡನೆಯ ಕಲ್ಲನ್ನು ಎಸೆಯುವಳು)

ಮೇಳ : ಅರಳಿದವಣ್ಣ ಸಾವಿರ ಹೂವ
ಮರದ ಮೈಯ ತುಂಬಾ
ಸಾವಿರ ದೀಪದ ಹಗಲ ದೀವಟಿಗಿ
ಅಕೋ ಚೈತ್ರ ಬಂದಾ||

ಹೂವಿನೆದೆಯ ಪರಿಮಳದ ಧೂಳಿಗೆ
ಕೆರಳತಾವ ದುಂಬಿ
ಪ್ರೀತಿಗೆ ಯಾಕೆ ಬೇಕು ಪೀಠಿಕೆ
ಬರಲಿ ಹೃದಯ ತುಂಬಿ||

ವಿನಯೆ : ಅಬ್ಬಾ ನನ್ನ ಹೃದಯ ಕಾಡು ಹೂಗಳ ಹಾಗೆ ಅರಳಿದೆ. ಮಹಾರಾಣಿ ಮೂರನೆ ಕಲ್ಲು ಎಸೆಯಿರಿ.

(ಮಹಾರಾಣಿ ಮೂರನೆ ಕಲ್ಲನ್ನು ಎಸೆಯುವಳು)

ಮೇಳ : ಆಕಾಶದ ಮರ ಅಲುಗಿ ತಾರೆ
ಧರೆಗುರುಳಿಧಾಂಗ ಆಗಿ|
ಹೂಗಳುದುರಿದುವು ಮಾಗಿಯ ಚಳಿಗೆ
ಹಣ್ಣೆಲೆಗಳು ನಡುಗಿ||

ನಮ್ಮ ಹಸಿರಿಗೆ ಅರಳಿದ ಹೂವ
ಯಾರೊ ಹರಿದರಲ್ಲ|
ನಮ್ಮ ಕಥೆಗೆ ಅರಳಿದ ಹಾಡನು
ಯಾರೊ ಕಿತ್ತರಲ್ಲ||

ವಿನಯೆ : ಆನಂದದಿಂದ ಆತುರ ತಾಳದೆ ಹೇಳುತ್ತಿದ್ದೇನೆ. ಪುಷ್ಪರಾಣಿ ನಮ್ಮನ್ನು ಅಮೃತದ ಕೊಳದಲ್ಲಿ ಅದ್ದಿಬಿಟ್ಟಳು. ಬೇಗನೆ ಕೊನೆಯ ಕಲ್ಲು ಎಸೆಯಿರಿ ಮಹಾರಾಣಿ.

ಮಹಾರಾಣಿ : ನನಗೇ ಆಜ್ಞೆ ಮಾಡುತ್ತೀಯೇನೆ? ಎಲ್ಲಿ ಯವಾಗ ಏನು ಮಾಡಬೇಕೆಂದು ನನಗೆ ತಿಳಿಯದೆ? ಮದ್ದುಮಾಟ ಮಾಡಿ ಮಹಾರಾಜರನ್ನು ವಶೀಕರಣ ಮಾಡಿಕೊಂಡಿದ್ದಳಲ್ಲವೆ? ಅದ್ಯಾರು ಇವಳನ್ನ ಪುನಃ ಪುಷ್ಪರಾಣಿಯನ್ನಾಗಿ ಪರಿವರ್ತನೆ ಮಾಡುತ್ತಾರೋ ನೋಡೋಣ. ಕನಿಷ್ಠಾ ಮರಕಟುಕರನ್ನು ಕರೆಸಿ ಈ ಮರ ಕಡಿಸಿಬಿಡು.

ಮೇಳ : ಚೀರಿದವೊ ಶಿವನೆ ಚೀರಿದವೊ
ಬಿಳಿಚಿದ್ದ ಕಾಡು ಕಿರುಚಿದವೊ
ನಂಬಿಕೆಯ ಮೈಲಿಗೆಗೊಳಿಸಿದ ದುಷ್ಟರಿಗೆ
ಶಿಕ್ಷೆ ಇಲ್ಲವೆ ಎಂದು ಕಿರುಚಿದವೊ||

ಬೀಸಿದವೊ ಗಾಳಿ ಬಿಸಿದವೊ
ನಿಟ್ಟುಸಿರ ಬಿಸಿಗಾಳಿ ಬಿಸಿದವೊ
ಗಾಳಿಯಲಿ ವಿಷಬೆರಸಿ ಕೊಲ್ಲುವ ಮಂದಿಗೆ
ಶಿಕ್ಷೆ ಇಲ್ಲವೆ ಎಂದು ಬಿಸಿದವೊ||

ಕೂಗಿದವೊ ದಿಕ್ಕು ಕೂಗಿದವು
ತಲೆ ಮ್ಯಾಲೆ ಕೈ ಹೊತ್ತು ಶಿವಾ ಎಂದವೊ
ಮಲ್ಲಿಗಿ ಹೂವನ್ನು ಮುಳ್ಳಿನ ಬೇಲಿಯಲಿ
ತುರುಕಿದ್ದು ನ್ಯಾಯವೆ ಹೇಳೆಂದವೊ||