ಮೇಳ : ( ಹಾಡನ್ನು ಮರಕಟುಕರು ಅಭಿನಯಿಸುತ್ತಾರೆ)

ಕೊಡಲಿ ಹಿಡಿದು ಕಡಿಯ ಬಂದರೋ
ಮರಕಟುಕರು ಓಡಿ
ಕಿಡಿಯ ಕಾರಿದರು ಕಣ್ಣೊಳಗಿಂದ
ಹಸಿರು ಮರವ ನೋಡಿ||

ಕೊಡಲಿಯ ಝಳಪಿಸಿ ಗುರಿಯ ಹಿಡಿದರೊ
ಮರವ ಕಡಿಯಲಿಕ್ಕೆ
ಎಲ್ಲೆಲ್ಲಿದ್ದವೋ ಹಕ್ಕಿ ಸಾವಿರ
ಬಂದವು ಹಿಂಡಾಗಿ||

ಕುಕ್ಕತಾವ ಮ್ಯಾಲೆರಗತಾವ ಅರೆ
ಮರಕಟುಕರ ನೆತ್ತಿ
ಹೊಂಚತಾವ ಹೊಡಮರಳಿ ನೋಡಿ
ಮ್ಯಾಲಕ್ಕೆ ಕೆಳಗೆ ಹಾರಿ

(ಅಂತಃಮಹಾರಾಣಿ, ಮರಕಟುಕರು ಓಡಿ ಬರುತ್ತಾರೆ)

ಮರಕಟುಕ ೧ : ಮಹಾರಾಣಿ, ಮಹಾರಾಣಿ ಕಾಪಾಡಬೇಕು, ಕಾಪಾಡಬೇಕು.

ಮಹಾರಾಣಿ : ಯಾರದು?

ಮರಕಟುಕ ೨ : ಮಹಾರಾಣಿ ಕಾಪಾಡಬೇಕು. ನೀವು ಹೇಳಿದ ಮರ ಕಡಿಯಲಿಕ್ಕೆ ಹೋದೊಡನೆ ಸಾವಿರಾರು ಕ್ರೂರ ಪಕ್ಷಿಗಳು ಬಂದು ನಮ್ಮ ನೆತ್ತಿಯನ್ನು ಕುಕ್ಕುತ್ತಿವೆ. ಮ್ಯಾಲಕ್ಕೆ ಏರಿ ವಿಚಿತ್ರ ಶಬ್ದ ಮಾಡುತ್ತ ನಮ್ಮನ್ನು ಸಿಕ್ಕಸಿಕ್ಕಲ್ಲಿ ಗಾಯ ಮಾಡುತ್ತಿವೆ.

ಮರಕಟುಕ ೧ : ಮರದಡಿ ಕಾಡಿನ ಕ್ರೂರ ಪ್ರಾಣಿಗಳೆಲ್ಲ ಕೂಡಿ, ಅದರ ಸಮೀಪಕ್ಕೆ ನಾವು ಬರದ ಹಾಗೆ ಹೆದರಿಸುತ್ತಿವೆ. ಓಡಿ ಆಸರೆಯ ಮರೆಗೆ ನಿಂತರೆ, ದೂರದಲ್ಲಿ ನಿಂತು ಎರಗುವುದಕ್ಕೆ ಹೊಂಚುತ್ತಿವೆ. ಮರ ಕಡಿಯುವದಿರಲಿ ಅರಮನೆಗೆ ಓಡಿ ಬರುವುದೇ ಕಷ್ಟಕರವಾಯಿತು. ನೀವೇ ಕಾಪಾಡಬೇಕು.

ಮಹಾರಾಣಿ : ಹಕ್ಕಿಗಳಿಗೆ ಹೆದರುವಂಥವರು ನೀವೆಂಥ ಮರಕಟುಕರು?

ಮರಕಟುಕ ೧ : ಪಕ್ಷಿಗಳು ನಮ್ಮನ್ನು ಜೀವಂತವಾಗಿ ಬಿಡುವ ಹಾಗೆ ಕಾಣೆವು ಮಹಾರಾಣಿ. ನಾವು ಅವುಗಳ ವೈರಿಗಳೆಂಬಂತೆ ಕ್ರೂರವಾಗಿ ಕೊಕ್ಕು ತೆರೆದು ಇರಿಯುವ ದೃಷ್ಟಿಗಳನ್ನು ಬೀರಿ ನಮ್ಮನ್ನು ಹೆದರಿಸುತ್ತಿವೆ. ಕಾಪಾಡಬೇಕು. ನಮ್ಮನ್ನು ಹೊರಕ್ಕೆ ತಳ್ಳಿ ನಮ್ಮ ಜೀವದ ಜೊತೆ ಆಟವಾಡಬೇಡಿ ತಾಯಿ.

ಮಹಾರಾಣಿ : ಪುಕ್ಕಲು ಹೃದಯಿಗಳು ನೀವು. ಮರಕಡಿಯದೆ ಹೇಡಿಗಳಾಗಿ ಓಡಿಬಂದನಿಮಗೆ ಆಸರೆ ನೀಡುವುದು ಅರಮನೆಗೆ ಅವಮಾನ. ಹೊರಡಿ.

(ಮರಕಟುಕರು ಹೋಗುವರು)