ಸೂತ್ರಧಾರ : ಆಯಿತಲ್ಲಪ್ಪಾ ಕಂದಾ. ಕಾಡಿನ ಪ್ರಾಣಿ ಪಕ್ಷಿಗಳು ಈಗ ಅರಮನೆಯ ಸುತ್ತ
ಘೇರಾವೋ ಮಾಡಿವೆ. ಒಳಗಿದ್ದವರು ಹೊರಕ್ಕೆ ಹೋಗುವ ಹಾಗಿಲ್ಲ; ಹೊರಗಿದ್ದವರು ಒಳಕ್ಕೆ ಹೋಗುವ ಆಗಿಲ್ಲ.
ಮೇಳ : ಗೃಹಬಂಧನ ಅನ್ನಿ.
ಸೂತ್ರಧಾರ : ಅರಮನೆಯಲ್ಲಿ ಮಹಾರಾಜರಿಲ್ಲ. ಪಟ್ಟಣದಲ್ಲಿ ಮಂತ್ರಿ ಸೇನಾಪತಿ ಸೈನಿಕರಿಲ್ಲ. ಅಂದರೆ ಒಳಗೂ ಹೊರಗೂ ಹೇಳಕೇಳವ್ರು ಯಾರೂ ಇಲ್ಲ. ಮಹಾರಾಣಿ ಇದ್ದರೂ ಆಕೆಯ ಮಾತು ಕೇಳೋದಕ್ಕೆ ಪಶುಪಕ್ಷಿ ತಯಾರಿಲ್ಲ. ಈಗ ಕಥೆ ಹ್ಯಾಗಪ್ಪ ಮುಂದುವರಿಸೋದು?
ಮೇಳ : ಅದೂ ನಿಜವೇ. ಗುರುವೆ, ನೀವೇ ಹೋಗಿ ಅವುಗಳಿಗೆ ಬುದ್ಧಿ ಹೇಳಬಹುದಲ್ಲ?
ಸೂತ್ರಧಾರ : ಹೌದಪ್ಪ, ಪುಷ್ಪರಾಣಿಯನ್ನು ಮರಮಾಡಿ ಹೋಗುವಾಗ ನೀವ್ಯಾಕೆ ಸುಮ್ಮನಿದ್ದಿರಿ ಅಂದರೆ?
ಮೇಳ : ನಾವೆಲ್ಲಿ ಸುಮ್ಮನಿದ್ದೆವು? ಕರುಳು ಕಿತ್ತು ಬರುವ ಹಾಗೆ ಹಾಡು ಹೇಳಿದೆವಲ್ಲ?
ಸೂತ್ರಧಾರ : ನೀನು ಹಾಡು ಹೇಳೋದರಿಂದ ಮರವಾದ ಪುಷ್ಪರಾಣಿ ಮನುಷ್ಯಳಾಗಲಿಲ್ಲವಲ್ಲ?
ಮೇಳ : ಅದು ನಮ್ಮ ಕೈಯಲ್ಲಿ ಇಲ್ಲವಲ್ಲ ಗುರುವೇ?
ಸೂತ್ರಧಾರ : ಹಾಗಾದರೆ ಹಿಂದೆ ಸರಿ.
ಮೇಳ : ಹಾಗೂ ಪಶು ಪಕ್ಷಿಗಳು ನಮ್ಮನ್ನು ಬಿಡಬೇಕಲ್ಲ ಗುರುವೆ? ನಮ್ಮನ್ನೇ ತಿನ್ನುವ ಹಾಗೆ ನೋಡ್ತಾ ಇವೆ!
ಸೂತ್ರಧಾರ : ಇರು ಇರು. ಒಂದು ಗಿಳಿಮರಿ ಸಂಧಾನಕ್ಕಾಗಿ ನಮ್ಮ ಕಡೆ ಬರುವಂತಿದೆ. ಏನು ಹೇಳುವುದೋ ಕೇಳೋಣ.
(ಗಿಳಿಮರಿಯ ಪ್ರವೇಶ)
ಗಿಳಿಮರಿ : ನಮಸ್ಕಾರ. ಪುಷ್ಪರಾಣಿಗೆ ನೀವು ಸಂಬಂಧಪಟ್ಟವರಾ?
ಮೇಳ : ಹೌದು. ನಾವೇ ಆಕೆಯ ಕಥೆ ಹೇಳುವ ಕಥೆಗಾರರು.
ಗಿಳಿಮರಿ : ಹಾಗಿದ್ದರೆ ಕೇಳಿ: ಪುಷ್ಪರಾಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸಂಬಂಧಪಟ್ಟವರಿಗೆ ತಿಳಿಸಿ.
ಸೂತ್ರಧಾರ : ಸಿಹಿ ತಿಂದಷ್ಟು ಸಂತೋಷವಾಯಿತಪ್ಪ ಗಿಣಿರಾಮ. ಕಂದಾ ಕಥೆಗಾರರಾದ ನಮಗೇ ಇಷ್ಟು ಸಂತೋಷವಾಗಬೇಕಾದರೆ, ರಾಜ ರಾಣಿಯರಿಗೆ ಎಷ್ಟು ಸಂತೋಷವಾಗಬೇಡ! ಪ್ರಜೆಗಳಿಗೆಷ್ಟು ಸಂತೋಷವಾಗಬೇಡ!
ಮೇಳ : ಇಲ್ಲೇ ನೀವು ತಪ್ಪೋದು ಗುರುವೆ. ಈ ಸಂತೋಷ ಯಾರಿಗೂ ಬೇಡ ಅಂತ ತಾನೇ ಮಹಾರಾಣಿ ಪುಷ್ಪರಾಣಿಯನ್ನು ಮರ ಮಾಡಿದ್ದು?
ಸೂತ್ರಧಾರ : ಆದರೆ, ಮಹಾರಾಣಿಯೂ ಹೆಂಗಸಲ್ಲವೇನಪ್ಪ?
ಮೇಳ : ಅದಕ್ಕೇ ಸವತಿ ಮತ್ಸರ ಬಂದಿರೋದು.
ಸೂತ್ರಧಾರ : ಆಕೆಯೂ ತಾಯಿ ಅಲ್ವೇನಪ್ಪ?
ಮೇಳ : ಅದಲ್ಲದ್ದಕ್ಕೇ ಇಷ್ಟೆಲ್ಲಾ ಕಥೆ ನಡೆದಿರೋದು.
ಸೂತ್ರಧಾರ : ಕಂದಾ-ನಮ್ಮ ಕಥೆ ತಪ್ಪು. ಆಕೆ ಬಂಜೆತನದಿಂದ ಮೇಲೆ ತಾಯಿತನದ ಅಪೇಕ್ಷೆ ಆಕೆಯಲ್ಲಿ ಎರಡು ಪಟ್ಟು ಇರುತ್ತದೆ.
ಮೇಳ : ಅದು ಎರಡು ಪಟ್ಟು ಕೆರಳಿಯೇ ನಿಮ್ಮ ಕಥೆ ಹೀಗಾಯಿತು.
ಸೂತ್ರಧಾರ : ಕಂದಾ, ಇಲ್ಲಿಯತನಕ ಆಕೆಯಲ್ಲಿ ಸವತಿ ಮತ್ಸರ ಮಾತ್ರ ಕೆರಳಿತ್ತು. ಈಗ ಎರಡು ಪಟ್ಟು ತಾಯ್ತನ ಕೆರಳಿಸಬೇಕು.
ಮೇಳ : ಅಂದರೆ ಆಕೆಗೆ ಜವಳಿ ಮಕ್ಕಳಾಗಬೇಕು?
ಸೂತ್ರಧಾರ : ಕೊಡೋನು ಶಿವಲಿಂಗಸ್ವಾಮಿ. ನಾವು ಅವನ ಸೀಮೆ ಪ್ರವೇಶ ಮಾಡೋದು ಬೇಡ. ನಾವು ಒಂದು ಟ್ರಿಕ್ ಮಾಡೋಣ. ಪುಷ್ಪರಾಣಿಯ ಮಗನನ್ನೇ ಆಕೆ ತನ್ನ ಮಗ ಎಂದು ಒಪ್ಪಿಕೋಬೇಕು.
ಮೇಳ : ಹ್ಯಾಗೆ?
ಸೂತ್ರಧಾರ : ಹೀಗೆ: ಮಹಾರಾಣಿ ಒಂದು ಸುಂದರವಾದ ಕನಸು ಕಾಣೋ ಹಾಗೆ ಮಾಡೋಣ. ಕನಸಿನಲ್ಲಿ ಆಕೆಗೆ ಇಷ್ಟವಾದ ಗಿಳಿಗಿಡುಗನ ಆಟ ಆಡಲಿ. ಗಿಣಿರಾಮ ಆಕೆಯ ಕನಸಿನಲ್ಲಿ ನಿನಗೂ ಒಂದು ಪಾತ್ರ ಇದೆ, ಮರೆಯಬೇಡಪ್ಪಾ.
ಗಿಳಿಮರಿ : ಓಹೊ.
ಸೂತ್ರಧಾರ : ಕನಸಿನಲ್ಲಿ ಮಹಾರಾಣಿಯ ತಾಯ್ತನ ಕೆರಳುವ ಹಾಗೆ ಮಾಡಬೇಕು. ಕಂದಾ ರಾತ್ರಿಯಾಯ್ತು ಮಹಾರಾಣಿಯವರು ಮಲಗಿರುವರೋ ನೊಡು.
ಮೇಳ : (ನೋಡಿ) ಓಹೊ.
ಸೂತ್ರಧಾರ : ಈಗ ಗಿಳಿಗಿಡುಗ ನಾಟಕದ ಕನಸು-ಸುರು ಮಾಡಿ………….
ಮೇಳ : ಬ್ಯಾಡ ಬ್ಯಾಡ ಹೋಗಬ್ಯಾಡ| ನಮ್ಮ ಮರಿ|
ಗೂಡ ಬಿಟ್ಟು ಹೋಗಬ್ಯಾಡ
ಕಟ್ಟಿದಾವ ದಟ್ಟ ಮೋಡ| ಮೋಡದಾಗ|
ತೂಗ್ಯಾಡತಾವ ಕರಿನೆರಳ
ಮ್ಯಾಲನೋಡ ಹಾಳ ಗಿಡುಗ| ಗಿಡುಗನ ಕಣ್ಣು|
ಹರಿದಾಡತಾವ ನಿನ್ನ ಮ್ಯಾಗ.
(ಅರಮನೆಯಂಗಳ–ಮಹಾರಾಣಿ, ಕನಿಷ್ಠಾ)
ಕನಿಷ್ಠಾ : ಮಹಾರಾಣಿ ಮಹಾರಾಣಿ, ಅದೋ ನೋಡಿ ಅಂಗಳದಲ್ಲಿ ರೆಕ್ಕೆ ಬಲಿಯದ ಎರಡು ಗಿಳಿಮರಿ ಹಾರಲಿಕ್ಕೆ ಕಲಿಯುತ್ತಿವೆ.
ಮಹಾರಾಣಿ : ಅಗೋ ಮ್ಯಾಲೆ ನೋಡೇ, ಗಿಡುಗ ನೀಲಿ ಆಕಾಶದಲ್ಲಿ ಮೊರದಂಥ ರೆಕ್ಕೆ ಕೆದರಿ ಹೊಂಚುತ್ತ ಹಾರುತ್ತಿದೆ.
ಕನಿಷ್ಠಾ : ತಾಯಿ ಗಿಳಿ ಮತ್ತು ಉಳಿದ ಹಕ್ಕಿಗಳು ಮರಿಗಳನ್ನು ಕಾಪಾಡಲಿಕ್ಕಾಗದೆ ಗಿಡುಗನನ್ನು ಎದುರಿಸಲಿಕ್ಕೂ ಆಗದೆ, ಹತಾಶೆಯಿಂದ ಹ್ಯಾಗೆ ಕಿರುಚುತ್ತಿವೆ ನೋಡೇ!
ಮಹಾರಾಣಿ : ಅಗೋ ಅಗೋ ಎರಗುತ್ತಿದೆ!
ಕನಿಷ್ಠಾ : ಅಗೋ ಎರಗಿತು!
ಮಹಾರಾಣಿ : ಅಬ್ಬಾ! ನಾವು ಸಾಕಿದ ಗಿಡುಗ ಕೂಡಾ ಇಷ್ಟು ರಭಸ ಮತ್ತು ವೀರಾವೇಶದಿಂದ ಎರಗುತ್ತಿರಲಿಲ್ಲ.
ಮಹಾರಾಣಿ : ಗಿಡುಗ ಯಾಕೆ ಇನ್ನೂ ಗಿಳಿಮರಿಯನ್ನು ಹಿಡಿಯುತ್ತಿಲ್ಲ?
ಕನಿಷ್ಠಾ : ಎರಡು ಮರಿ ಇರೋದರಿಂದ ಯಾವುದನ್ನು ಮೊದಲು ಹಿಡಿಯಬೇಕೆಂದು ಅದಕ್ಕೂ ಗೊಂದಲವಾಗಿದೆ. ಅಗೋ ಮರಿಗಳು ನಿಮ್ಮ ಕಡೆಗೇ ಬರುತ್ತಿವೆ. ನೋಡಿ, ನೋಡಿ, ಬಂದೇಬಿಟ್ಟವು.
(ಗಿಳಿಮರಿಗಳೆರಡೂ ಮಹಾರಾಣಿಯ ತೊಡೆಯ ಮೇಲೇರುತ್ತವೆ.)
ಮಹಾರಾಣಿ : ಅರೆ, ಎರಡೂ ಬಂದು ನನ್ನ ತೊಡೆಯ ಮೇಲೇ ಕೂತವಲ್ಲೆ!
ಕನಿಷ್ಠಾ : ಮಹಾರಾಣಿ ಅದೋ ಗಿಡುಗ ದೂರದಲ್ಲಿ ಕೂತು ಹೊಂಚುತ್ತಿವೆ. ನೀವೇ ಒಂದೊಂದನ್ನೇ ಹಿಡಿದು ಗಿಡುಗನತ್ತ ಎಸೆಯಿರಿ.
ಮಹಾರಾಣಿ : ಹೌದು, ಇಗೋ.
(ಅವಳು ಎಸೆಯಬೇಕೆನ್ನುವಷ್ಟರಲ್ಲಿ)
ಗಿಳಿ ೧ : ಅಮ್ಮಾ!
ಮಹಾರಾಣಿ : ಏನು?
ಗಿಳಿ ೨ : ಅಮ್ಮಾ!
ಮಹಾರಾಣಿ : ಆಶ್ಚರ್ಯ!
ಗಿಳಿ ೧ : ಅಮ್ಮಾ ನಮ್ಮನ್ನು ಕಾಪಾಡು ತಾಯಿ.
ಗಿಳಿ ೨ : ಅಮ್ಮಾ ನಮ್ಮನ್ನು ಈ ಗಿಡುಗನಿಂದ ಕಾಪಾಡವ್ವ.
ಮಹಾರಾಣಿ : ಆಶ್ಚರ್ಯ! ಮಕ್ಕಳ ಹಾಗೆ ತೊದಲಿ ನನಗೇ‘ಅಮ್ಮಾ’ ಎನ್ನುತ್ತಿವೆ. ಕೇಳಿದೆಯೇನೆ ಕನಿಷ್ಠಾ?
ಕನಿಷ್ಠಾ : ನನಗೆ ಕೇಳಿಸಲೇ ಇಲ್ಲವಲ್ಲ?
ಮಹಾರಾಣಿ : ನಿನ್ನ ಹೃದಯ ಬತ್ತಿ ಹೋಗಿದೆಯೇನೆ? ಕೇಳು.
ಗಿಳಿ : ಅವ್ವಾ ನಮ್ಮನ್ನು ಕಾಪಾಡುತಾಯಿ.
ಕನಿಷ್ಠಾ : ಅರಮನೆ ಸಹವಾಸದಿಂದ ಮನುಷ್ಯರ ಮಾತು ಕಲಿತಿವೆ. ಅಗೋ ಗಿಡುಗ ಹೊಂಚಿ ಹೊಂಚಿ ನಿರಾಶೆ ಹೊಂದಿ ಹಾರಿ ಹೋಗುವ ಮೊದಲೇ ಮತ್ತೆ ಆಟ ಶುರು ಮಾಡಿ ಮಹಾರಾಣಿ.
ಮಹಾರಾಣಿ : ಆಟ ಶುರು ಮಾಡು ಅಂತೀಯಾ?
ಗಿಳಿ : ಅಮ್ಮಾ,
ಮೇಳ : ಅಮ್ಮಾ ತಾಯಿ ಹಡೆದಮ್ಮ
ಮಕ್ಕಳು ನಮ್ಮ ಪೊರೆಯಮ್ಮ
ಮಹಾರಾಣಿ : ಗಿಳಿಮರಿಗಳ ನುಡಿಗಳಿಗೆ ನನ್ನ ಹೃದಯದ ಮೊಗ್ಗರಳಿ ಹೂವಾದ ಅನುಭವವಾಗುತ್ತಿದೆ. ಗಿಳಿಮರಿಗಳ ಹಸಿರಾದ ಹಾಡಿನಲ್ಲಿ ನಾನು ಮುಳುಗಿ ಹೋಗುತ್ತಿದ್ದೇನೆಂದು ಅನ್ನಿಸುತ್ತಿದೆ
ಮೇಳ : ಅಮ್ಮಾ ತಾಯಿ ಹಡೆದಮ್ಮ
ಮಕ್ಕಳು ನಮ್ಮ ಪೊರೆಯಮ್ಮ
ಮಹಾರಾಣಿ : ನನ್ನ ಮೇಲೆ ಆನಂದದ ಮಳೆ ಸುರಿಯುತ್ತಿದೆ! ಹೂತು ಹೋದದ್ದು ಹೊರಬಂದು ಗೋಚರವಾಗುತ್ತಿದೆ. ಹೋದ ಜನ್ಮದಲ್ಲಿ ಇವು ನನ್ನ ಮಕ್ಕಳಾಗಿದ್ದುವೇ? ಎಂದು ಅನುಮಾನ ಬರುತ್ತಿದೆ!
ಮೇಳ : ಅಮ್ಮಾ ತಾಯಿ ಹಡೆದಮ್ಮ
ಮಕ್ಕಳು ನಮ್ಮ ಪೊರೆಯಮ್ಮ
ಮಹಾರಾಣಿ : ನೀವು ಯಾರ ಮಕ್ಕಳೇ?
ಗಿಳಿ ೨ : ಅಮ್ಮಾ
ಮಹಾರಾಣಿ : ಹೌದು ನನ್ನ ಮಕ್ಕಳೇ. ನನಗೆ ‘ಅಮ್ಮಾ’ ಎನ್ನುತ್ತಿವೆ. ಇದೇನು ಹಕ್ಕಿಗಳು ನನ್ನ ಕಡೆ ಹೀಗೆ ನೋಡುತ್ತಿವೆ. ಇಲ್ಲ, ಇಲ್ಲ. ಈ ಮರಿಗಳನ್ನು ನಾನು ಗಿಡುಗನಿಗೆ ಕೊಡೋದಿಲ್ಲ, ಹೆದರಬೇಡಿ.
ಹಕ್ಕಿಗಳು : ಅಮ್ಮಾ ತಾಯಿ ಹಡೆದಮ್ಮಾ
ಮಕ್ಕಳು ನಮ್ಮ ಪೊರೆಯಮ್ಮಾ
ಮಹಾರಾಣಿ : ಅಯ್ಯೋ ದೇವರೇ! ಹಕ್ಕಿಗಳು ಈ ಪರಿ ಸಂತೋಷ ಪಡುವುದನ್ನು ನಾನು ಕಂಡೇ ಇರಲಿಲ್ಲ. ಹಕ್ಕಗಳೇ, ಇಕೋ ನಿಮ್ಮ ಮರಿಗಳನ್ನು ತೆಗೆದುಕೊಳ್ಳಿ.
ಗಿಳಿ ೧ : ನಾನೇನೋ ಹಕ್ಕಿಯೇ ಸರಿ. ಆದರೆ ಆ ಮರಿ ನಿಮ್ಮ ಮಗು ತಾಯಿ!
ಮಹಾರಾಣಿ : ನಿಜವಾಗಿಯೂ?
ಗಿಳಿ : ನಿಜವಾಗಿ ಅವನು ನಿಮ್ಮ ಮಗ ತಾಯಿ.
ಮಹಾರಾಣಿ : ಅದು ಹ್ಯಾಗೆ? ಅಕ್ಕಪಕ್ಕ ಯಾರಾದರೂ ದೇವತೆಗಳಿದ್ದರೆ ವಿವರಿಸಿಯಪ್ಪ.
ಸೂತ್ರಧಾರ : ನಿಜ ತಾಯಿ ಅವನು ನಿಮ್ಮ ಮಗ. ಪುಷ್ಪರಾಣಿಯ ಮಗನಾದರೂ, ಈಗಷ್ಟೆ ತೊದಲಿ ಅವನು ನಿಮಗೇ ಪ್ರಪ್ರಥಮವಾಗಿ ಅಮ್ಮಾ ಎಂದಿದ್ದಾನೆ.
ಮಹಾರಾಣಿ : ಅಂದರೆ?
ಸೂತ್ರಧಾರ : ಪುಷ್ಪರಾಣಿ ವನದೇವತೆಯ ಮಗಳು ತಾಯಿ. ಅದಕ್ಕೇ ಅವಳು ಮನಸ್ಸು ಬಂದಾಗ ಮರವಾಗಬಲ್ಲಳು. ಅವಳ ಪುತ್ರನಾದ ಇವನು ಅಜ್ಜಿಯ ಆಶೀರ್ವಾದದಿಂದ ಹೀಗೆ ಹಕ್ಕಿಯಾಗಿ ನಿಮ್ಮ ತೊಡೆಯೇರಿದ್ದಾನೆ.
ಕನಿಷ್ಠಾ : ಇಂತಹ ಅಪರೂಪದ ಅವಕಾಶ ಇನ್ನೊಮ್ಮೆ ಸಿಗಲಾರದು ಮಹಾರಾಣಿ. ಗಿಳಿಮರಿಯ ಕತ್ತು ಹಿಸುಕಿದರೆ ನಿಮ್ಮ ಸಂಕಟಗಳೆಲ್ಲ ಪರಿಹಾರವಾಗುತ್ತವೆ.
ತಡಮಾಡಬೇಡಿ.
(ಮಹಾರಾಣಿ ಎಚ್ಚರಾಗುವಳು)
ಮಹಾರಾಣಿ : ನಿಜ ಕನಿಷ್ಠಾ ಇಂತಹ ಅಪರೂಪದ ಅವಕಾಶ ಇನ್ನು ಸಿಕ್ಕಲಾರದು. (ಎದ್ದು ನಿಂತು) ಪಕ್ಷಗಳೇ, ನನ್ನ ಹೃದಯದಲ್ಲಿ ಕತ್ತಲು ತುಂಬಿ ಏನು ಮಾಡುತ್ತಿದ್ದೇನೆಂದು ಅರಿಯದೇ ಪುಷ್ಪರಾಣಿಯನ್ನು, ಮರವಾಗಿಸಿದ್ದೇನೆ. ನಾಲ್ಕನೆಯ ಕಲ್ಲು ಎಲ್ಲೋ ಎಸೆದಿದ್ದೇನೆ. ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮರವಾಗಿರುವ ನನ್ನ ತಂಗಿಯನ್ನು ಪುನಃ ಮನುಷ್ಯಳಾಗಿ ಪಡೆಯುವ ಉಪಾಯವನ್ನು ನೀವಾದರೂ ಹೇಳಿಕೊಡಿ.
ಸೂತ್ರಧಾರ : ನೀವು ಎಸೆದ ನಾಲ್ಕನೆಯ ಕಲ್ಲು ಗಿಳಿಮರಿಯ ತಾಯಿ ಬಳಿ ಇದೆ. ಅದಿಲ್ಲಿ ಇಲ್ಲ; ಬಾ ತಾಯಿ ಹೋಗೋಣ.
Leave A Comment