ಮೇಳ : ಯುದ್ಧ ಗೆದ್ದರೂ ಸಂತಸವಾಗದೆ
ಮಹಾರಾಜ ಬಂದ
ಎದುರುಬದುರಿನಲಿ ಮಾವ ಭಾವರು
ಯಾಕಿದ್ದರು ಎಲ್ಲ||

ನಡುವೆ ದಾರಿಯಲಿ ಸುದ್ಧಿ ಬಂದಿತೋ
ಶಿವಾಪಟ್ಣದಿಂದ
ಮರೆಯಾಗಿರುವಳು ಕಿರಿಯ ರಾಣಿ
ಇನ್ನೆಲ್ಲಿ ಇರುವಳೆಂದ||

ಮಹಾರಾಜ : ನೀನು ಹೇಳುತ್ತಿರುವುದೇನು?

ಸೇವಕ : ಹೌದು ಪ್ರಭು. ಚಿಕ್ಕರಾಣಿಯವರು ಅರಮನೆಯಲ್ಲಿ ಇರಲಿಲ್ಲ. ವಿಚಾರಿಸಲಾಗಿ ಉಪವನಕ್ಕೆ ಹೊಗಿದ್ದಾರೆಂದು ತಿಳಿಯಿತು.

ಮಹಾರಾಜ : ಯುದ್ಧಕ್ಕೆ ಹೋದರೆ ಮಹಾರಾಣಿಯ ತಂದೆ, ಸಹೋದರರೇ ಎದುರು ನಿಂತು ಕಾದಾಡಿದರು! ಅರಮನೆಯಲ್ಲಿ ಪುಷ್ಪರಾಣಿ ಇಲ್ಲ. ಎಲ್ಲವೂ ವಿಚಿತ್ರವಾಗಿದೆ. ಮಂತ್ರಿಗಳೇ ನೀವು ಸೈನ್ಯ ಸಮೇತ ಅರಮನೆಗೆ ಹೊರಡಿ. ನಾವು ಉಪವನಕ್ಕೆ ಹೋಗಿ ಬರುತ್ತೇವೆ.

ಮಂತ್ರಿ : ಹಾಗೇ ಆಗಲಿ ಪ್ರಭು.

ಮೇಳ : ದೌಡ ದೌಡ ದೌಡಾಯಿಸಿ ನಡೆದರು
ಉದ್ಯಾನದ ಕಡೆಗೆ|
ತಾಯಿಗಿಳಿಯೊಂದು ಮ್ಯಾಲೆ ಹಾರಿ
ಬರುತ್ತಿತ್ತು ತನ್ನ ಜೊತೆಗೆ||

ಮಹಾರಾಜ : ಇದೇನಿದು? ಈ ಗಿಳಿ ಒಂದೇ ಸುಮ್ಮನೆ ಕೂಗುತ್ತಾ ನನ್ನ ಜೊತೆಗೇ ಹಾರಿ ಬರುತ್ತಿದೆ. ಅಥವಾ ಆ ದಿನ ಹುಣಸೇ ಮರದಲ್ಲಿ ಕೂತು ನನಗೆ ಅಭಿನಂದನೆ ಹೇಳಿದ ಗಿಳಿ ಇದೇ ಇರಬಹುದೆ? ಹಾಗಿದ್ದರೆ ನನಗೆ ಇದೇನನ್ನೋ ಕೂಗಿ
ಹೇಳುತ್ತಿದೆ. ಅದರ ಕೂಗಿನ ಅವಸರ ಮತ್ತು ತೀವ್ರತೆ ನೋಡಿದರೆ ಯಾವುದೋ ಆತಂಕದ ವಿಷಯವನ್ನು ಅದು ಹೇಳುತ್ತಿರುವಂತಿದೆ.

ಮೇಳ : ಮತ್ತೆ ಮತ್ತೆ ದೌಡಾಯಿಸಿ ನಡೆದರು
ಉದ್ಯಾನದ ಕಡೆಗೆ
ಗಿಳಿಯು ಹಾರಿಬರುತ್ತಿತ್ತು ಜೊತೆಯಲ್ಲಿ
ಸಂದೇಶದ ಜೊತೆಗೆ||