ಮಹಾರಾಜ : ವನಪಾಲಕ

ವನಪಾಲಕ : ಪ್ರಭು

ಮಹಾರಾಜ : ಪುಷ್ಪರಾಣಿ ಎಲ್ಲಿ?

ವನಪಾಲಕ : ಅರಮನೆಯಲ್ಲಿ. ಯಾಕೆ ಪ್ರಭು ನನ್ನ ಮಗಳು ಅಲ್ಲಿಲ್ಲವೆ?

ಮಹಾರಾಜ : ತೌರಿಗೆ ಬಂದಿರುವಳಂತೆ.

ವನಪಾಲಕ : (ಕಣ್ಣೀರು ಸುರಿಸುತ್ತ) ಉಪವನದ ಮರಗಳು ಬಾಡಿದಾಗಲೇ ಇಂಥದೇನೋ ಅನಾಹುತ ಆಗಿದೆ-ಅಂತ ನನಗೆ ಗೊತ್ತಾಯ್ತು. ಪುಷ್ಪರಾಣಿ ಖಂಡಿತವಾಗಿಯೂ ಬರಲಿಲ್ಲ. ಪ್ರಭು, ಹೃದಯದಲ್ಲಿಟ್ಟುಕೊಂಡು ಕಾಪಾಡುತ್ತೇನೆ ಅಂತ ಹೇಳಿದ್ದಿರಿ.

ಮಹಾರಾಜ : ಖಂಡಿತ ಇಲ್ಲೇನೊ ದ್ರೋಹ ನಡೆದಿದೆ. ನಾನೂ ಈ ದ್ರೋಹಕ್ಕೆ ಗುರಿಯಾಗಿದ್ದೇನೆ. ಏನು ಮಾಡಲಿ ವನಪಾಲಕಾ?

ವನಪಾಲಕ : ತಾವು ಯುದ್ಧಕ್ಕೆ ಹೋದಾಗಿನಿಂದಲೂ ಈ ರಾಜ್ಯದಲ್ಲಿ ಅಪಶಕುನಗಳಾಗುತ್ತಿವೆ ಪ್ರಭು. ಹೆದರಿದ ಹಾಗೆ ಮೋಡಗಳು ಓಡುತ್ತಿವೆ. ಕೆರೆ ಬಾವಿಗಳು ಬತ್ತುತ್ತಿವೆ. ಹಕ್ಕಿ ಪಕ್ಷಿಗಳು ಅಸಹಜ ದನಿಯಲ್ಲಿ ಕಿರುಚುತ್ತ ಹಾರಾಡುತ್ತಿವೆ ಪ್ರಭು.

ಮಹಾರಾಜ : ವನಪಾಲಕಾ, ಈ ಗಿಳಿ ಮಾತ್ರ ನಾನು ಯುದ್ಧದಿಂದ ಹಿಂದಿರುಗಿ ಬಂದಾಗಿ

ನಿಂದಲೂ ಕೂಗುತ್ತಾ ನನ್ನನ್ನು ಹಿಂಬಾಲಿಸುತ್ತಿದೆ. ಇದರ ಭಾಷೆ ನಿನಗೆ ಅರ್ಥವಾಗುತ್ತದೆಯೆ?

ವನಪಾಲಕ : ಸ್ವಲ್ಪ ಸ್ವಲ್ಪ. ಮಗಳು ಅಷ್ಟಿಷ್ಟು ಹೇಳಿಕೊಟ್ಟಿದ್ದಳು.

ಮಹಾರಾಜ : ಕೇಳು.

(ಗಿಳಿ ಕೂಗುತ್ತದೆ. ವನಪಾಲಕ ಲಕ್ಷ್ಯವಿಟ್ಟು ಕೇಳಿಸಿಕೊಳ್ಳುತ್ತಾನೆ)

ವನಪಾಲಕ : (ಆಘಾತ ಹೊಂದಿ) ಘಾತವಾಯಿತು ಪ್ರಭು. ಮಹಾರಾಣಿಯವರು ಮೋಸಮಾಡಿ ನನ್ನ ಮಗಳನ್ನು ಮರವಾಗಿ ಪರಿವರ್ತಿಸಿದ್ದಾರೆ. ಸಾಲದ್ದಕ್ಕೆ ಮರಕಟುಕರನ್ನು ಕಳಿಸಿದ್ದರಂತೆ. ಆದರೆ ಪಕ್ಷಿಗಳು ಅವರನ್ನೋಡಿಸಿ ಪುಷ್ಪರಾಣಿಯ ಜೀವ ಕಾಪಾಡಿಕೊಂಡಿವೆ ಪ್ರಭು. ಮಹಾರಾಣಿ ನಾಲ್ಕನೇ ಕಲ್ಲನ್ನು ಪುಷ್ಪರಾಣಿಯ ಮೇಲೆ ಎಸೆಯದೆ ಬೇರೆ ಕಡೆ ಎಸೆದುಹೋದರಂತೆ. ದೇವರ ದಯೆ ಈ ಗಿಳಿ ಈ ಕಲ್ಲನ್ನು ಕಚ್ಚಿಕೊಂಡು ಓಡಾಡುತ್ತಿದೆ.

(ಗಿಳಿ ಕೂಗುತ್ತದೆ)
ಹಾಗಾದರೆ ಕೊಡು ತಾಯಿ.
(ಉಡಿ ಒಡ್ಡುತ್ತಾನೆ, ಉಡಿಯಲ್ಲಿ ಚಿಕ್ಕ ಕಲ್ಲು ಬೀಳುತ್ತದೆ)
ತಾಯಿ, ಮರ ಎಲ್ಲಿದೆಯೆಂದು ತೋರಿಸುತ್ತೀಯಾ?
ತಾಯಿಗಿಳಿ ಕೂಗುತ್ತದೆ
ಬನ್ನಿ ಪ್ರಭು.

(ಇಬ್ಬರೂ ಓಡುತ್ತಾರೆ)