ಮೇಳ : ಮತ್ತೆ ಮತ್ತೆ ದೌಡಾಯಿಸಿ ನಡೆದರು
ಮರ ಇರುವ ಕಡೆಗೆ
ಬಂದು ನೋಡಿದರೆ ಮಗನ ತಬ್ಬಿಕೊಂಡಿದ್ದಳು ಮಹಾರಾಣಿ.
ಮಹಾರಾಣಿ : ಬನ್ನಿ ಪ್ರಭು. ನನ್ನ ದುಷ್ಟತನಕ್ಕೆ ಬಲಿಯಾಗಿ ಪುಷ್ಪರಾಣಿ ಮರವಾಗಿದ್ದಾಳೆ. ನಾಲ್ಕನೆಯ ಕಲ್ಲು ಎಲ್ಲಿ ಎಸೆದೆನೆಂದು ತಿಳಿಯುತ್ತಿಲ್ಲ. ನಿಮ್ಮನ್ನು ಯುದ್ಧಕ್ಕೆ ಅಟ್ಟಿದವಳು ನಾನೇ. ಪುಷ್ಪರಾಣಿಯನ್ನು ಬಲಿ ತೆಗೆದುಕೊಂಡವಳೂ ನಾನೇ. ಈ ಪಾಪಕೃತ್ಯಕ್ಕೆ ಕೊನೆಯ ಪಕ್ಷ ಗಲ್ಲು ಶಿಕ್ಷೆಯಾದರೂ ಆಗಬೇಕು. ಇಗೋ ಸಾವಿನ ಕಡೆಗೆ ಹೋಗುತ್ತಿದ್ದೇನೆ. ದಯಮಾಡಿ ನೀವು ಮತ್ತು ಪುಷ್ಪರಾಣಿ ನನ್ನನ್ನು ಕ್ಷಮಿಸಬಿಡಿ.
ಮಹಾರಾಜ : ತಡೆ ಮಹಾರಾಣಿ, ನಾಲ್ಕನೆಯ ಕಲ್ಲು ಇಲ್ಲಿದೆ. ಇದನ್ನು ನೀನೇ ಎಸೆಯಬೇಕು.
ಮಹಾರಾಣಿ : ದೇವರ ದಯೆ. ನಾನೀಗ ಸಣ್ಣ ತೃಪ್ತಿಯಿಂದಲಾದರೂ ಸಾಯಬಹುದು. ಕೊಡಿ ಪ್ರಭು.
(ಕಲ್ಲು ಕೊಡುವನು. ಮಹಾರಾಣಿ ನಾಲ್ಕನೆಯ ಕಲ್ಲನ್ನು ಮರದ ಮೇಲೆ ಎಸೆಯುವಳು)
ಮೇಳ : ನೋಡ ನೋಡುತಲೆ ಕಣ್ಣೆದುರಲ್ಲೆ
ಮರದ ರೂಪವಡಗಿ
ಅವತರಿಸಿದಳೈ ಕಾನನದೇವಿ
ಉಘೇ ಉಘೇ ತಾಯಿ
ಋತುಮಾನಗಳ ಕೈಗೆ ಕೈ ಇಟ್ಟು
ನಡೆಯ ಕಲಿಸಿದಾಕೆ
ಚಿಗುರು ಹಸಿರಿಗೆ ಪುಷ್ಪವಾಗುವ
ಗುಟ್ಟು ಹೇಳಿದಾಕೆ
ಹೂವಿನೆದೆಯ ಪರಿಮಳದ ಧೂಳಿಗೆ
ಕೆರಳತಾವ ದುಂಬಿ
ಪ್ರೀತಿಗೆ ಯಾಕೆ ಬೇಕು ಪೀಠಿಕೆ
ಬರಲಿ ಹೃದಯ ತುಂಬಿ.
(ಪುಷ್ಪರಾಣಿ ಮಗು ಸಮೇತ ಪ್ರತ್ಯಕ್ಷಳಾಗುವಳು)
ಪುಷ್ಪರಾಣಿ : ಅಕ್ಕಾ, ಪ್ರಭು, ಇವನು ನಮ್ಮ ಕಂದ.
ಮಹಾರಾಜ : ಇದಕ್ಕೆಲ್ಲ ಕಾರಣಳಾದ ಮಹಾರಾನಿಗೆ ಶಿಕ್ಷೆಯಾಗಲೇಬೇಕು.
ಮಹಾರಾಣಿ : ಹೌದು ಪ್ರಭು.
ಮಗು : ಅಮ್ಮಾ.
ಸೂತ್ರಧಾರ : ಪ್ರಭು, ಇವನು ಮಹಾರಾಣಿಯ ಮಗ. ಯಾಕೆಂದರೆ ಆಕೆಗೇ ಇವನು ಪ್ರಪ್ರಥಮವಾಗಿ ಕನಸಿನಲ್ಲಿ ‘ಅಮ್ಮಾ’ ಅಂದದ್ದು. ತಾಯಿ ಮಕ್ಕಳನ್ನು ಅಗಲಿಸ ಬಾರದು ಪ್ರಭು.
ಪುಷ್ಪರಾಣಿ : ಹೌದು ಪ್ರಭು. ತಾಯಿಗೆ ಮಗ, ನನಗೆ ಅಕ್ಕ ಮತ್ತು ನೀವು ಸಿಕ್ಕ ಸಂದರ್ಭದಲ್ಲಿ ದಂಡ ಶಿಕ್ಷೆ ಯಾಕೆ ಬೇಕು?
ಮಹಾರಾಣಿ : ನನ್ನನ್ನು ಧನ್ಯಳಾಗಿಸಿದೆ ತಂಗಿ.
ಮಹಾರಾಜ : ದೇವಿ, ನಿನ್ನ ಮತ್ತು ನಮ್ಮ ಮಗುವಿನ ಜೀವ ಕಾಪಾಡಿದ ಈ ಪಕ್ಷಿಗಳಿಗೆ ಹ್ಯಾಗೆ ಕೃತಜ್ಞತೆ ಹೇಳಲಿ?
ಪುಷ್ಪಾರಾಣಿ : ಅವುಗಳ ಪಾಡಿಗೆ ಅವನ್ನು ಬಿಟ್ಟು ಬಿಡಿ ಪ್ರಭು. ನೀವು ಅರಣ್ಯನಾಶ ಮಾಡದೆ ಹೋದರೆ ಸಾಕು. ನಿಮಗೂ ಅವು ಕೃತಜ್ಞವಾಗಿರುತ್ತವೆ.
ಎಲ್ಲರೂ : ಶರಣು ಶರಣು ಶರಣಾರ್ಥಿ ಕಾಡಿಗೂ
ಕಾಡ ಪಕ್ಷಿಗಳಿಗೂ
ಕಾಡನಪ್ಪುವ ರಾಜ ಪ್ರಜರಿಗೂ
ಮಕ್ಕಳಿಗೂ ಶರಣು.
Leave A Comment