(ಪರದೆಯ ಮೇಲೆ ಬರೆದ ಕಾಡಿನ ಚಿತ್ರ, ಅದರ ಮುಂದೆ ಮೇಳ.)

ಮೇಳ : ಕಾಡಿಗೇ ಕೈಕಾಲು ಮೂಡಿ
ನಾಡು ಮೂಡಿತು ನೆರಳಿನಲ್ಲಿ
ಕಾಡು ನಾಡು ತಾಯಿ ಮಕ್ಕಳು
ಬೇರೆ ಹೋಲಿಕೆ ಸಲ್ಲದು.

ಚಿಗುರು ಹೂಗಳ ತೊಟ್ಟಿಲಲ್ಲಿ
ಚಿಕ್ಕೆ ತಾರೆಯ ಗಿಲಕಿ ಹಿಡಿದು
ಹಕ್ಕಿಗೊರಳಲಿ ಹಾಡಿ ಜೋಗುಳ
ತಾಯಿ ಕೂಸನು ಪೊರೆವಳು.

ತುಂಟ ಕೂಸು ತಂಟೆ ಮಾಡಿ
ದಡ್ಡತನದಲಿ ಕಡ್ಡಿಗೀರಿ
ತಾಯ ಕರುಳಿಗೆ ಸುರಿದು ಬೆಂಕಿಯ
ಆತ್ಮಹತ್ಯೆಗೆ ನಲಿವುದು.

ಅಂಥ ಸಮಯದಿ ಮುಗಿಲ ಸ್ವಾಮಿ
ಮಳೆಯ ಸೊಳ್ಳೆಯ ಪರದೆಯಲ್ಲಿ
ತಾಯಿ ಮಕ್ಕಳ ಕೂಡಿ ಮಲಗಿಸಿ
ಹರಸುವನು ಸಂತಸದಲಿ.

ಕಾಡು ನೋಡದ ತಬ್ಬಲಿಗಳೇ
ಸಿಡುಕಬ್ಯಾಡಿರಿ ಸಿನಕ ಜನರೇ
ನಮ್ಮ ನಾಟಕ ನೋಡಿ ಕಲಿಯಿರಿ
ಕಾಡ ನೋಡುವ ಪರಿಯನು.
ಆಗಲೂ ಅದು ಸಾಧ್ಯವಾಗದೆ
ಹೋದರೂ ಮೈ ಪರಚಬೇಡಿರಿ
ಕಾಡು ಕಂಡವರಂತೆ ನಟಿಸಿರಿ
ಭಾರಿ ಬೆಲೆಯಿದೆ ನಟನೆಗೆ.

ಸೂತ್ರಧಾರ : ಓಂಪ್ರಥಮದಲ್ಲಿ ಆದಿಗಾಧಾರವಾದ ಸಾವಳಗಿ ಶಿವಲಿಂಗ ದೇವರ ನೆನೆದು, ಸತ್ಯ ದೇವತೆಗಳನ್ನ ಚಿತ್ತದಲ್ಲಿ ಸ್ಮರಿಸಿ, ಉಚಿತವಾದ ಉಕ್ತಿಗಳಿಂದ ಕಥೆ ಮಾಡತೀವಿ, ಚಿತ್ತಗೊಟ್ಟು ನೋಡಬೇಕ್ರೀ, ಶಿವಾ. ಪರಿಸರ ರಕ್ಷಣೆ ಅಂತಾ ನೀವು ಕೇಳಿದ್ದೀರಿ…

ಮೇಳ : ಓದಿದ್ದೀರಿ.

ಸೂತ್ರಧಾರ : ಆದಿಕಾಲದಲ್ಲೂ ಈ ಬಗ್ಗೆ ಕಾಳಜಿ ಮಾಡಿದ್ದರು ಶಿವಾ. ಅಂಥಾದ್ದೊಂದು ಕಥೆ ಹೇಳತೀವಿ.

ಮೇಳ : ಹೇಳು ಗುರುವೆ.

ಸೂತ್ರಧಾರ : ಒಂದಾನೊಂದು ಕಾಲದಲ್ಲಿ ಜಂಬೂದ್ವೀಪದ ದಕ್ಷಿಣ ಕ್ಷೇತ್ರ. ಅಲ್ಲಿ ಸಹ್ಯಾದ್ರಿ ಕಾಡು, ಸದರಿ ಕಾಡು ಆಳ ಮತ್ತು ಅಗಲ ಮತ್ತು ಸದಾ ತುಂಬಿ ಹರಿವ ನದಿಗಳಿಂದ ಕೂಡಿತ್ತು. ಎತ್ತರ ಮತ್ತು ಸದಾ ಹಸಿರಾದ ಗುಡ್ಡ ಬೆಟ್ಟಗಳಿಂದ ಶೋಭಾಯಮಾನವಾಗಿತ್ತು. ಆ ಕಾಡಿನಲ್ಲಿ ತರುಮರಾದಿಗಳಿದ್ದವು.

ಮೇಳ : ತರುಮರಾದಿಗಳ ತಂಪು ನೆರಳಿನಲ್ಲಿ ಹಸಿರು ಹುಲ್ಲು. ಹುಲ್ಲಿನ ಮ್ಯಾಲೆಚೌರ್ಯಾಂಸಿಲಕ್ಷ ಜೀವರಾಶಿ ಚೆನ್ನಾಟವಾಡ್ತ ಇವೆ ಶಿವಾ.

ಸೂತ್ರಧಾರ : ಕಾಡಿಗಂಟಿ ನಾಡಿದೆ.

ಮೇಳ : ಅಂದರೆ ನಾಡಿಗಂಟೆ ಕಾಡಿದೆ. ತಾಯಿ ಮಕ್ಕಳಿದ್ದ ಹಾಗೆ, ಗಂಡ ಹೆಂಡತಿ ಹಾಗೆ.

ಸೂತ್ರಧಾರ : ಕಾಡಿಗೆ ಋತುಮಾನ ಬಂದರೆ ನಾಡಿಗೆ ಬಣ್ಣವೇರುತ್ತಿತ್ತು.

ಮೇಳ : ನಾಡು ತನ್ನ ಪಾಡಿಗೆ ತಾನು ಕೈಬಿಟ್ಟು ಆಡಿದರೆ ಕಾಡು ನಿರುಮ್ಮಳ ಮಲಗಿರುತ್ತಿತ್ತು.

ಸೂತ್ರಧಾರ : ಕಾಡಿನ ಮೂಗುತಿಯ ಹಾಗೆ ಅಲ್ಲಿ ನೋಡ್ರಿ ಒಂದು ಪಟ್ಟಣ. ಅದ್ಯಾವ ಪಟ್ಟಣ ಕಂದಾ?

ಮೇಳ : ಬೆಂಕಿ ಪೊಟ್ಟಣ ಗುರುವೆ.

ಸೂತ್ರಧಾರ : ಅಲ್ಲವೋ ಕಂದಾ, ಅದು ಶಿವಾಪುರ ಪಟ್ಟಣ. ಎತ್ತರದ ಬೆಟ್ಟದಲ್ಲಿ ಚಿತ್ತಾರದ ಅರಮನೆ. ಬೆಳ್ದಿಂಗಳಲ್ಲಿ ಬೆಳ್ಳಿ ಅರಮನೆ, ಬಿಸಿಲಿದ್ದರೆ ಬಂಗಾರದ ಅರಮನೆ. ಕೈ ಜಾರುವಂಥ ಕಲ್ಲಿನಲ್ಲಿ ಕಟ್ಟಿಸಿದ ಸಾವಿರದೆಂಟು ಕಂಬಗಳು ಆ ಅರಮನೆಗೆ, ಅವುಗಳ ಮ್ಯಾಲೆ ಚಂದ್ರ ನಿವಾಸ. ಅದರ ಮ್ಯಾಲೆ ಹದಿನೆಂಟು ರತ್ನದಕಳಸ. ಶಿವಾಪುರ ಪಟ್ಟಣಕ್ಕೆ ಧರೆಗೆ ದೊಡ್ಡವನಾದ ಸೋಮರಾಯನ ಒಡೆತನ. ಕಾಡಿಗೂ ರಾಜ, ನಾಡಿಗೂ ರಾಜ.

ಮೇಳ : ರಾಣಿಗೂ ರಾಜ.

ಸೂತ್ರಧಾರ : ಎಲ್ಲಾ ರಾಜನಂತೆ ಇವನೂ…

ಮೇಳ : ವೀರ ಧೀರ ಶೂರ ಮಾರ….

ಸೂತ್ರಧಾರ : ಹಿಂದೆ ಸಾವಿರ ದಂಡು, ಮುಂದೆ ಸಾವಿರ ದಂಡು, ಗೌಡಳಿಕೆ ಪಾಳೇಗಾರರ ನ್ನಿಟ್ಟುಕೊಂಡು ಸಕಲಸೌಭಾಗ್ಯ ಅಷ್ಟೈಶ್ವರ್ಯ ಐಭೋಗದಿಂದ ದರ್ಬಾರವನ್ನಾ ಳುವಾತ. ಚಂದ್ರ ನಿವಾಸದ ಮೇಲುಪ್ಪರಿಗೆಯಲ್ಲಿ ಕುಂತು ಕಿಡಕಿಗಳಿಂದ ನದಿ ಹಳ್ಳ ಕೊಳ್ಳ ಕಾಡು ಉಪವನ ಉದ್ಯಾನಗಳ ನೋಡುವುದರಲ್ಲಿ ಸುದೈವ ಕಂಡಾತ. ಸೂರ್ಯ ನಾರಾಯಣಸ್ವಾಮಿ ಹೆಚ್ಚು ಉದಾರವಾಗಿ ಇಲ್ಲಿಯ ಜನ ದನ ಸಸ್ಯಾದಿಗಳಿಗೆ ಹೆಚ್ಚಿನ ಚೇತನ ನೀಡುತ್ತಿದ್ದ. ರೈತರ ಹೊಲಗಳಲ್ಲಿ ಒಂದೊಂದು ಜೋಳದ ದಂಟಿಗೆ ಐದೈದು ತೆನೆ ಬಿಡುತ್ತಿದ್ದವು. ತೆನೆಗೊಂದು ಹಕ್ಕಿ ತೂಗಿ ತಿಂದರೂ, ಒಂದೊಂದು ತೆನೆಯಿಂದ ಮೊರದ ತುಂಬ ಚಿನ್ನದ ಧಾನ್ಯ ಉಳೀತಿದ್ದವು.

ಮೇಳ : ಮುಂದೇನಾಯ್ತು ಗುರುವೆ?

ಸೂತ್ರಧಾರ : ಹಿಂಗಿರಲಾಗಿ ಕಂದಾ, ಒಂದು ದಿನ ರಾಜನ ಉದ್ಯಾನ ಉಪವನದ ಮರ ಗಳನ್ನು ವೈರಿ ಸೈನಿಕರು ಕಡಿಯೋಕೆ ಸುರುಮಾಡಿದರು……

ಮೇಳ : ಎಲಾ ಇವರ! ಒಂದಾನೊಂದು ಕಾಲದಲ್ಲೂ ಕಾಡು ಕಡಿಯುತ್ತಿದ್ದರೇನು ಶಿವಾ?

ಸೂತ್ರಧಾರ : ಹೌಂದಪಾ ಕಂದಾ.

ಮೇಳ : ಒಂದಾನೊಂದು ಕಾಲದಲ್ಲೂ ಆತ್ಮಹತ್ಯೆ ಮಾಡಿಕೊಳ್ತಿದ್ದರೇನು ಶಿವಾ?

ಸೂತ್ರಧಾರ : ಹೌಂದಪಾ ಕಂದಾ, ಮುಂದೆ ಕೇಳು. ಸೂರ್ಯದೇವರು ಮೂಡಣದಲ್ಲಿ ಆಗಷ್ಟೇ ಮೂಡುತ್ತಿರಬೇಕಾದರೆ ಕರಿ ಹಸ್ತದ ಮೂರಾರು ಸೈನಿಕರು ಉಕ್ಕಿನ ಕೊಡಲೀ ಸಮೇತ ಕಾಡು ಹೊಕ್ಕು ಎಳೆಯ ಮರ ಕಡಿಯತೊಡಗಿದರು.

ಮೇಳ : (ಅಭಿನಯಿಸುತ್ತ)

ಮರವ ಕಡಿದರೋ| ಹಸಿರು
ತಂಪು ಕಡಿದರೋ
ಮುಂಜಾನೆಯ ಮಂಜಿನಲ್ಲಿ
ಅದ್ದಿ ಒದ್ದೆಯಾದ ಹೂವ
ಚಿಗುರ ಒದ್ದು ತುಳಿದು ನಕ್ಕರೋ|
ರೆಕ್ಕೆ ಬಲಿಯದೆಷ್ಟೋ ಹಕ್ಕಿ
ಟೊಂಗೆಯಿಂದ ಜಾರಿ ಬಿದ್ದು
ಪಟ ಪಟಪಟ ಪುಟ್ಟ ರೆಕ್ಕೆ
ಬಡಿದು ಚೀರಿ ಉರುಳಿ ಬಿದ್ದವೋ|

ಸೂತ್ರಧಾರ : ಈ ಕಡೆ ರಾಜರ ಅರಮನೆಯಲ್ಲಿ ಏನು ನಡೀತಿತ್ತಪ ಅಂದರೆ, ರಾಜನ ಸಮಸ್ತ ಪರಿವಾರ ದರ್ಬಾರು ಸೇರಿ ಮರಪರ್ವ ಆಚರಿಸುಲ್ಲಿ ವನಪಾಲಕ ಓಡಿಬಂದ. (ರಾಜರ ದರ್ಬಾರು, ವನಪಾಲಕ ಓಡಿಬರುತ್ತಾನೆ)

ವನಪಾಲಕ : ಕಾಪಾಡಬೇಕು ಪ್ರಭೂ ಕಾಪಾಡಬೇಕು.

ಮಂತ್ರಿ : ಯಾರದು?

ವನಪಾಲಕ : ನಾನು ವನಪಾಲಕ ಸ್ವಾಮಿ; ನೆರೆ ರಾಜ್ಯದ ಸೈನಿಕರು ಪ್ರಭುಗಳ ಉಪವನದ ಮರಗಳನ್ನು ಕಡಿದುಹಾಕುತ್ತಿದ್ದಾರೆ, ಕಾಪಾಡಬೇಕು.

ಮಹಾರಾಜ : ಹೌದು ಪ್ರಭು, ವೈರಿ ಸೈನಿಕರು ಇಂದು ಮುಂಜಾನೆ ಆಯುಧ ಸಮೇತ ತಮ್ಮ ಉಪವನದಲ್ಲಿ ನುಗ್ಗಿ ಎತ್ತರವಾದ, ನೀಳವಾದ ಮರಗಳನ್ನೆಲ್ಲ ಕಡಿದು ಹಾಕುತ್ತಿ ದ್ದಾರೆ. ಪ್ರತಿಭಟಿಸಿದೆ. ದಯಮಾಡಿ ಇಂಥ ಅಕಾರ್ಯ ನಿಲ್ಲಿಸಿ ಎಂದೆ. ಕೇಳಿ ಅಟ್ಟಹಾಸದಿಂದ ನಕ್ಕು ನನ್ನನ್ನು ತಳ್ಳಿ ತುಳಿದು ಮತ್ತೆ ಕಡಿಯಲಾರಂಭಿಸಿದರು. ತಾವು ಕಾಳಜಿಯಿಂದ ಬೆಳಸಿದ ಒಂದೊಂದು ಮರ ಉರುಳುವಾಗಲೂ ಪಕ್ಷಿಗಳು ಒದರಿ ಹಾರಾಡುತ್ತಿದ್ದವು. ವನ್ಯಜೀವಿ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿಹೋದವು. ಆ ದೃಶ್ಯ ನೋಡಲಾಗುತ್ತಿರಲಿಲ್ಲ ಪ್ರಭು.

ಸೇನಾಪತಿ : ಇದೆಲ್ಲ ಕಾಲು ಕೆದರಿ ಜಗಳ ತೆಗಯುವ ಉಪಾಯವೇ ಸರಿ. ತಾವು ಅಪ್ಪಣೆ ಕೊಟ್ಟರೆ…

ಮಹಾರಾಜ : ಇದಕ್ಕೂ ಅಪ್ಪಣೆ ಬೇಕೆ? ಬೇಗ ಹೋಗಿ ಅವರಿಗೆ ಸರಿಯಾದ ಶಿಕ್ಷೆ ಕೊಡಿ; ನಾವೂ ಹಿಂದಿನಿಂದ ಬರುತ್ತೇವೆ.

(ಸೇನಾಪತಿ ಹೊರಡುವನು, ಮೇಳ ಬರುವುದು)