ಮೇಳ : ಹಿಂದೆ ಸಾವಿರ ಮುಂದೆ ಸಾವಿರ
ದಂಡು ದಳ ಸೇರಿ|
ಕದನಕೆ ಹೊರಟಳು ನೂರು ಗೌಡಳಿಕೆ|
ಮಾಂಡಳಿಕರು ಸೇರಿ||

ಕೊಂಬು ಕಹಳೆ ನೌಬತ್ತು ನಗಾರಿ|
ಹುರುಪಿನಿಂದ ಒದರಿ|
ಹೊಡೆದರು ಬಡಿದರು ಘೋರ ಕಾಳಗ
ಕೂಗು ಮುಗಿಲು ಮುಟ್ಟಿ||

ಗುರಿ ತಪ್ಪದ ಸಾವಿರ ಬಾಣ
ರಾಜ ತೆಗೆದುಕೊಂಡ||

ಬೆಟ್ಟದಂಥ ಬಿಳಿ ಕುದುರೆಯೇರಿ
ಬರುತಿರಲು ಹೊಯ್ಯ ಕಂಡ||

(ರಾಜ, ಮಂತ್ರಿ ಸಮೇತ ರಭಸದಿಂದ ಕಾಡಿನಲ್ಲಿ ಹೊರಟಿದ್ದಾಗ ಹುಡುಗಿ ಅತ್ತದ್ದು ಕೇಳಿಸುತ್ತದೆ. ಇಬ್ಬರೂ ಕುದುರೆಗಳಿಂದ ಇಳಿದು ನೋಡುತ್ತಾರೆ, ಯಾರೂ ಇಲ್ಲ. ಮತ್ತೆ ಬಿಕ್ಕು ಕೇಳಿಸುತ್ತದೆ.)

ಮಹಾರಾಜ : ಯಾರದು ಅಳುತ್ತಿರೋದು? ಯಾರಲ್ಲಿ?

(ವನಪಾಲಕ ಮರದ ಮರೆಯಿಂದ ಹೊರಗೆ ಬರುವನು)

ಮಂತ್ರಿ : ಯಾರದು?

ವನಪಾಲಕ : ಕ್ಷಮಿಸಬೇಕು. ನಾನು ಮಹಾಪ್ರಭುಗಳ ವನಪಾಲಕ.

ಮಂತ್ರಿ : ಏನಯ್ಯ ಯುದ್ದಕ್ಕೆ ಹೆದರಿ ಇಲ್ಲಿ ಅಡಗಿಕೊಂಡಿದ್ದೀಯಾ?

ವನಪಾಲಕ : ನನ್ನ ಮಗಳ ರಕ್ಷಣೆಗೆ ನಿಂತುಕೊಂಡಿದ್ದೆ ಸ್ವಾಮಿ.

ಮಂತ್ರಿ : ಮಗಳು ಎಲ್ಲಿದ್ದಾಳೆ?

ವನಪಾಲಕ : ವೈರಿ ಸೈನಿಕರಿಗೆ ಹೆದರಿ ಮರವಾಗಿದ್ದಾಳೆ ಸ್ವಾಮಿ.

ಮಹಾರಾಜ : ಮನುಷ್ಯರು ಮರವಾಗುವುದುಂಟೆ? ಕಟ್ಟು ಕಥೆ ಹೇಳುತ್ತಿದ್ದೀಯಾ?

ವನಪಾಲಕ : ಕಥೆಯಲ್ಲ, ಸತ್ಯಪ್ರಭು.

ಮಂತ್ರಿ : ಹ್ಯಾಗೆ ನಂಬುವುದು?

ವನಪಾಲಕ : ಇಗೋ ನೀವೇ ನೊಡಿ.

(ವನಪಾಲಕ ಕೈಲಿದ್ದ ಒಂದು ಚಿಕ್ಕ ಕಲ್ಲನ್ನು ಒಂದು ಎಳೆಯ ಮರದ ಮೇಲೆ ಎಸೆಯುತ್ತಾನೆ. ಮರ ಹೋಗಿ ಅದು ಹುಡುಗಿಯಾಗುತ್ತದೆ)

ಮೇಳ : ನೋಡ ನೋಡುತಲೆ ಕಣ್ಣೆದುರಲ್ಲೆ
ಮರದ ರೂಪವಡಗಿ|

ಅವತರಿಸಿದಳೈ ಕಾನನದೇವಿ
ಉಘೇ ಉಘೇ ತಾಯಿ||

ಋತುಮಾನಗಳ ಕೈಗೆ ಕೈ ಇಟ್ಟು
ನಡೆಯ ಕಲಿಸಿದಾಕೆ||

ಚಿಗುರು ಹಸಿರಿಗೆ ಪುಷ್ಪವಾಗುವ
ಗುಟ್ಟು ಹೇಳಿದಾಕೆ|

ಪಕ್ಷಿಕೋಟಿಗೆ ಸಾಮಗಾನ ಸಂ
ಗೀತ ಕಲಿಸಿದಾಕೆ|

ಮನದ ಕಾಳಿಕೆಯ ತೊಳೆದು ಹೊಳೆವ
ಬಿಳಿ ನಗೆಯ ನಗುವ ತಾಯೆ||

(ರಾಜ ಮತ್ತು ಮಂತ್ರಿಗೆ ಆಶ್ಚರ್ಯವಾಗುತ್ತದೆ)

ಮಂತ್ರಿ : ಏನಯ್ಯಾ ಇದು ಭೂತಚೇಷ್ಟೆಯೋ? ಮಂತ್ರಗಾರಿಕೆಯೊ?

ವನಪಾಲಕ : ಭೂತಚೇಷ್ಟೆಯೂ ಅಲ್ಲ, ಮಂತ್ರಗಾರಿಕೆಯೂ ಅಲ್ಲ ಸ್ವಾಮಿ. ಈಕೆ ನನ್ನ ಮಗಳು. ಪುಷ್ಪರಾಣಿ ಅಂತ ಹೆಸರು. ಈಕೆ ತನಗೆ ಬೇಕಾದಾಗ ಮರವಾಗ ಬಲ್ಲಳು. ಬೇಡವಾದರೆ ಹೀಗೆ ಹುಡುಗಿಯೂ ಆಗಬಲ್ಲಳು. ವೈರಿ ಸೈನಿಕರ  ಕಣ್ಣಿಗೆ ಬೀಳದಿರಲೆಂದು ಹೀಗೆ ಮರವಾಗಿದ್ದಳು.

ಮಹಾರಾಜ : ನಿಜ ಹೇಳು, ಈಕೆ ನಿನ್ನ ಮಗಳೋ?

ವನಪಾಲಕ : ನಾನ್ಯಾಕೆ ಹೇಳಲಿ? ಕಾಡಿನಲ್ಲಿ ಸಿಕ್ಕ ಕೂಸನ್ನೇ ಮಗಳೆಂದು ಭಾವಿಸಿ ಸಾಕಿದೆ ಪ್ರಭು. ಆಮೇಲೆ ತಿಳಿಯಿತು, ಈಕೆ ವನದೇವತೆಯ ಮಗಳೆಂದು. ಅವಳೇ ನಾಲ್ಕು ಚೆಕ್ಕಕಲ್ಲು ಕೊಡುತ್ತಾಳೆ. ಒಂದೊಂದನ್ನೇ ಅವಳ ಮೇಲೆ ಎಸೆಯುತ್ತಾ ಹೋದರೆ ಒಂದರಿಂದ ಮರವಾಗುತ್ತಾಳೆ. ಇನ್ನೊಂದನ್ನೆಸೆದರೆ ಹೂ ಬಿಡುತ್ತಾಳೆ. ಮೂರನೆಯದರಿಂದ ಹೂ ಉದುರಿಸುತ್ತಾಳೆ. ನಾಲ್ಕನೆಯ ಕಲ್ಲು ಎಸೆದರೆ ಹೀಗೆ ಪುನಃ ಹುಡುಗಿಯಾಗುತ್ತಾಳೆ ಪ್ರಭು.

ಮಹಾರಾಜ ; ಈ ಪವಾಡವನ್ನು ನಾವೂ ನೋಡಬಹುದೆ?

ವನಪಾಲಕ : ಅಗತ್ಯವಾಗಿ. ಎಲ್ಲಿ ಪುಷ್ಪರಾಣಿ ನಾಲ್ಕು ಚಿಕ್ಕ ಕಲ್ಲು ಆರಿಸಿಕೊಡಮ್ಮ.

(ಪುಷ್ಪರಾಣಿ ರಾಜನ ಕೈಗೆ ನಾಲ್ಕು ಚಿಕ್ಕ ಕಲ್ಲು ಆರಿಸಿಕೊಟ್ಟು ಮರಗಳಿಲ್ಲದಲ್ಲಿಗೆ ಹೋಗಿ ನಿಂತುಕೊಳ್ಳುತ್ತಾಳೆ. ರಾಜ ಮೆಲ್ಲಗೆ ಅವಳ ಮೇಲೆ ಒಂದು ಕಲ್ಲು ಎಸೆಯುತ್ತಾನೆ. ಮುಂದೆ ಹಾಡಿನಲ್ಲಿದ್ದಂತೆ ಅಭಿನಯಿಸಬೇಕು)

ಮೇಳ : ಕನ್ಯೆ ಇದ್ದವಳು ಕರಗಿ ಸಣ್ಣಮರ
ನಿಂತಿತಣ್ಣ ಎದುರ|

ಶಿವಲೋಕದ ತಂಗಾಳಿ ಬೀಸತಾವ
ತೂಗತಾವ ಹಸಿರ||

ರೆಂಬೆ ನೋಡದರ ಕೊಂಬಿ ನೊಡು
ಒಡಮುರಿಯತಾವ ಚಿಗುರ|

ಹಾರಿ ಬಂದ ಮರಿಹಕ್ಕಿ ಚಿಲಿಪಿಲಿ
ಹಾಡತಾವ ಮಧುರ||

ಮಂತ್ರಿ ; ಆಶ್ಚರ್ಯ!

ಮಹಾರಾಜ : ಪರಮಾಶ್ಚರ್ಯ. ಈ ಪರಿ ಹಸಿರಾದ ಹಸಿರನ್ನ ನಾನು ಇದುವರೆಗೆ ಕಂಡಿರಲಿಲ್ಲ!

ಮಂತ್ರಿ : ಎಲ್ಲಿ ಪ್ರಭು. ಬೇಗ ಎರಡನೆಯ ಕಲ್ಲು ಎಸೆಯಿರಿ.

(ರಾಜ ಇನ್ನೊಂದು ಕಲ್ಲು ಎಸೆಯುತ್ತಾನೆ. ಮೇಳದ ಹಾಡಿನ ಅಭಿನಯವಾಗಬೇಕು)

ಮೇಳ : ಅರಳಿದವಣ್ಣ ಸಾವಿರ ಹೂವ
ಮರದ ಮೈಯ ತುಂಬಾ|
ಸಾವಿರ ದೀಪ ಹಗಲ ದೀವಟಗಿ
ಅಗೋ ಚೈತ್ರ ಬಂದಾ||

ಹೂವಿನೆದೆಯ ಪರಿಮಳದ ಧೂಳಿಗೆ
ಕೆರತಾವ ದುಂಬಿ|
ಪ್ರೀತಿಗೆ ಯಾಕೆ ಬೇಕು ಪೀಠಿಕೆ
ಬರಲಿ ಹೃದಯ ತುಂಬಿ||

ಮಹಾರಾಜ : ನಿಜ ಹೇಳುತ್ತೇನೆ-ನನ್ನ ಹೃದಯದಲ್ಲಿ ಅಮೃತದ ಮಳೆಯಾಗುತ್ತಿದೆ!

ಮಂತ್ರಿ : ಆಶ್ಚರ್ಯದಿಂದ ಒದ್ದಾಡುವ ಹೃದಯ ಬಿಟ್ಟು ನನಗೆ ಬೇರೇನೂ ತಿಳಿಯುತ್ತಿಲ್ಲ. ಪ್ರಭೂ, ಬೇಗ ಮೂರನೆ ಕಲ್ಲು ಎಸೆಯಿರಿ.

ಮಹಾರಾಜ : ಇಗೋ

(ಮೂರನೆಯ ಕಲ್ಲು ಎಸೆಯುವನು)

ಮೇಳ : ಆಕಾಶದ ಮರ ಅಲುಗಿ ತಾರೆ
ಧರೆಗುರುಳಿದಂತೆ ಆಗಿ|

ಹೂಗಳುದುರಿದವು ಮಾಗಿಯ ಚಳಿಗೆ
ಹಣ್ಣೆಲೆಗಳು ನಡುಗಿ||

ನಮ್ಮ ಹಸಿರಿಗೆ ಅರಳಿದ ಹೂವ
ಯಾರೋ ಹರಿದರಲ್ಲ|

ನಮ್ಮ ಕಥೆಗೆ ಅರಳಿದ ಹಾಡನು
ಯಾರೋ ಕಿತ್ತರಲ್ಲ||

ಮಂತ್ರಿ : ಈಗ ಆ ತಾಯಿಯನ್ನು ಕಣ್ಣಾರೆ ಕಾಣುವುದು ಕಣ್ಣಿಗೆ ಹಿತ. ಪ್ರಭು ನಾಲ್ಕನೆಯ ಕಲ್ಲನ್ನು ಎಸೆಯಿರಿ.

ಸೂತ್ರಧಾರ : ಕಂದಾ ಹುಟ್ಟಿದ ಪ್ರೀತಿಯನ್ನ ಯಾರಾದರೂ ತೊಟ್ಟಿಲಲ್ಲಿ ಇಟ್ಟು ಜೋಗುಳ ಹಾಡುತ್ತಾರೇನು?

ಮೇಳ : ಇಲ್ಲರಿ ಗುರುವೆ, ತೊಟ್ಟಲಾಗ ಹಾಕಿದರೂ ಹಾ ಅನ್ನೂದರಾಗ ಎದಿಮಟ ಎತ್ತರ ಬೆಳೆದಿರ್ತದೆ.

ಸೂತ್ರಧಾರ : ಇಲ್ಲೂ ಅದೇ ಆಯ್ತು-

ಮೇಳ : ಏನಂದಿರಿ?

(ರಾಜ ನಾಲ್ಕನೆಯ ಕಲ್ಲನ್ನು ಎಸೆಯುವನು).

ಮೇಳ : ನೋಡ ನೋಡುತಲೆ ಕಣ್ಣೆದುರಲ್ಲೆ
ಮರದ ರೂಪವಡಗಿ
ಅವತರಿಸಿದಳೈ ಕಾನನದೇವಿ
ಉಘೇ ಉಘೇ ತಾಯಿ||

(ಈಗ ಪುಷ್ಪರಾಣಿ ಪುನಃ ರಾಜನ ಎದುರಿಗೆ ನಿಂತಿದ್ದಾಳೆ. ರಾಜನು ಆಶ್ಚರ್ಯದಿಂದ ಹುಚ್ಚನಾಗಿದ್ದಾನೆ. ಓಡಿಬಂದು ವನಪಾಲಕನ ಕೈ ಹಿಡಿದುಕೊಳ್ಳುತ್ತಾನೆ)

ಮಹರಾಜ : ಅಯ್ಯಾ ನನಗೊಂದು ಉಪಕಾರ ಮಾಡುತ್ತೀಯಾ?

ವನಪಾಲಕ : ಪ್ರಭುಗಳಿಗೆ ನನ್ನಂಥ ವನಪಾಲಕ ಮಾಡುವ ಉಪಕಾರ ಏನಿದ್ದೀತು?

ಮಹಾರಾಜ : ಈ ಪುಷ್ಪರಾಣಿಯನ್ನು ನನಗೆ ಮದುವೆ ಮಾಡಿಕೊಡುತ್ತೀಯಾ?

ವನಪಾಲಕ : ಈ ಪ್ರಶ್ನೆಗೆ ನಿಂತ ಕಾಲ ಮೇಲೆ ಹ್ಯಾಗೆ ಉತ್ತರಿಸಲಿ ಪ್ರಭು?

ಮಂತ್ರಿ : ಕೇಳುವವರು ಮಹಾಪ್ರಭುಗಳೇ ಆಗಿರುವಾಗ ಯೋಚಿಸಿ ಹೇಳುವಂಥಾದ್ದೇ ನಿದೆ? ಭಾಗ್ಯ ಬಂದು ಬಾಗಿಲು ತಟ್ಟುವಾಗ ನಾಳೆ ಬಾ ಅಂದವರುಂಟೆ?

ವನಪಾಲಕ : ಸ್ವಾಮೀ ಬೆಳೆದ ಮಗಳನ್ನು ಯೋಗ್ಯ ವರನಿಗೆ ಮದುವೆ ಮಾಡಿಕೊಡಬೇಕಾದ್ದು ನನ್ನ ಕರ್ತವ್ಯ. ಆದರೆ ಇದಕ್ಕೆ ಪುಷ್ಪರಾಣಿಯ ಒಪ್ಪಿಗೆಯೂ ಬೇಕಲ್ಲವೆ?

ಮಂತ್ರಿ : ಎನಮ್ಮಾ ಪುಷ್ಪರಾಣಿ ಮಹಾರಾಜರ ರಾಣಿಯಾಗುವುದು ನಿನಗೆ ಒಪ್ಪಿಗೆಯಾ
ತಾಯಿ?

(ಪುಷ್ಪರಾಣಿ ಹುಂ ಎಂದು ನಾಚಿಕೊಂಡು ವನಪಾಲಕನ ಹಿಂದೆ ಅಡಗುವಳು)

ಮಂತ್ರಿ : ಇದು ಸಾಲದೆ ವನಪಾಲಕಾ?

ವನಪಾಲಕ : ಆದರೆ ಪುಷ್ಪರಾಣಿ ಅರಿಯದ ಅನೇಕ ವಿಷಯಗಳಿವೆ ಸ್ವಾಮಿ. ಅವಳು ತುಂಬಾ ಮರದು ಸ್ವಭಾವದವಳು. ನಗರದ ನಾಗರಿಕತೆ ಅರಿಯದವಳು. ಅರಮನೆಯ ಶಿಷ್ಟಾಚಾರ ಅವಳಿಗೆ ಗೊತ್ತಿಲ್ಲ. ಅಲ್ಲದೆ ಮಹಾಪ್ರಭುಗಳಿಗಾಗಲೇ
ಮಹಾರಾಣಿಯವರಿದ್ದಾರೆ. ಸವತಿ ಅಂದರೇನೆಂಬುದನ್ನಾದರೂ ಅವಳಿಗೆ ತಿಳಿಸಿ ಹೇಳಬೇಕಲ್ಲವೆ?

ಮಹಾರಾಜ : ಚಿಂತೆ ಬೇಡ. ಇಲ್ಲಿಯತನಕ ಈಕೆ ಕಾಡಿನಲ್ಲಿದ್ದಳು. ಇನ್ನು ಮೇಲೆ ನನ್ನ ಹೃದಯದಲ್ಲಿರುತ್ತಾಳೆ. (ಪಕ್ಕದ ಬಳ್ಳಿಯಿಂದ ಒಂದು ಹೂಕಿತ್ತು ಪುಷ್ಪರಾಣಿಗೆ ಕೊಡುತ್ತ) ಇಕೋ ಈ ಹೂವು ಮತ್ತು ನನ್ನ ಹೃದಯಗಳನ್ನ ನಿನಗೆ ಅರ್ಪಿಸುತ್ತೇನೆ. ಅರ್ಪಿಸಿಕೋ ದೇವಿ.

(ಪುಷ್ಪರಾಣಿ ನಾಚಿ ಮುಖ ಮುಚ್ಚಿಕೊಳ್ಳುತ್ತಾಳೆ)

ಮಂತ್ರಿ : ಚಿಂತಿಸಬೇಡ ವನಪಾಲಕಾ. ನಮ್ಮ ಪ್ರಭುಗಳು ಪುಷ್ಪರಾಣಿಯ ತುಟಿಯಲ್ಲಿ ಅರಳಿದ ನಗೆಹೂವು ಎಂದೂ ಬಾಡದ ಹಾಗೆ ನೋಡಿಕೊಳ್ಳುತ್ತಾರೆ. ನೀನು ಒಪ್ಪಿದರೆ ನಾವೆಲ್ಲ ಬಹುಮಾನಿತರಂತೆ ಆನಂದಗೊಳ್ಳುತ್ತೇವೆ.

ವನಪಾಲಕ : (ದುಃಖ ತಡೆಯದೆ) ನನ್ನ ಹೃದಯದಲ್ಲಿ ನೆಟ್ಟಿರುವ ಈ ಪುಷ್ಪವನ್ನು ಕಷ್ಟಪಟ್ಟು ಕಿತ್ತುಕೊಡುತ್ತಿದ್ದೇನೆ. ಪ್ರಭು, ಗಾಯವಾದ ನನ್ನ ಹೃದಯಕ್ಕೆ ಇನ್ನುಮೇಲೆ ಸಾವಿನಲ್ಲೇ ಶಾಂತಿ ಸಿಗಬೇಕು.

ಮಹಾರಾಜ : ಹಾಗೆನ್ನಬೇಡ ವನಪಾಲಕಾ, ಪುಷ್ಪರಾಣಿ ಸಮೇತ ನಮ್ಮೆಲ್ಲರನ್ನು ನಿನ್ನ ಹೃದಯ ದಲ್ಲಿ ಇಟ್ಟುಕೋ. ಅಲ್ಲಿ ನಾವೆಲ್ಲ ಸುರಕ್ಷಿತರಾಗಿರುತ್ತೇವೆ.

(ಪುಷ್ಪರಾಣಿ ಕಣ್ಣೀರು ಸುರಿಸುತ್ತ ವನಪಾಲಕನನ್ನು ತಬ್ಬಿಕೊಂಡು)

ಪುಷ್ಪರಾಣಿ : ಅಂದರೆ ನಾನು ಈಗಲೇ ತಂದೆಯನ್ನು ಬಿಟ್ಟು ಹೊರಡಬೇಕೆ?

ಮಂತ್ರಿ : ಹೌದು ತಾಯಿ.

ಪುಷ್ಪರಾಣಿ : ಹೌದು. ಹೆಣ್ಣಿಗೆ ತೌರುಮನೆ ಕೊನೆಯಲ್ಲ ಮಗಳೆ. ಆಗಲೇ ದೊಡ್ಡವಳಾಗಿದ್ದೀ. ಮಹಾರಾಜರ ಅರಮನೆಗೆ ಬೆಳಕಾಗಿ, ಅವರ ವಂಶ ವಿಸ್ತರಿಸಿ, ಉದ್ಧಾರ ಮಾಡು. ನೀನು ವನದೇವತೆಯ ಮಗಳಾದ್ದರಿಂದ ಹ್ಯಾಗೂ ಬೆಳೆದು ದೊಡ್ಡವ
ಲಾಗುತ್ತಿದ್ದೆ. ಆದರೆ ನಿನಗೆ ತಂದೆ ತಾಯಿ ಆಗುವ ಎರಡು ಭಾಗ್ಯಗಳನ್ನು ನನಗೆ ದಯಮಾಡಿ ಕೊಟ್ಟೆ ತಾಯಿ. ನೀನು ನನ್ನ ಕಾಳಜಿ ಬಿಟ್ಟು ಅರಮನೆಯಲ್ಲಿ ಸುಖವಾಗಿರು. ನನಗೆ ಜೊತೆಗಾರನಾಗಿ ಈ ಹಸಿರಿದೆ. ನಿನ್ನ ಅಗಲಿಕೆಯ ಕಣ್ಣೀರಿವೆ.

(ಪುಷ್ಪರಾಣಿ ದುಃಖ ಒತ್ತರಿಸಿ)

ಪುಷ್ಪರಾಣಿ : ನನ್ನ ಪ್ರೀತಿಯ ಮರಗಳೇ, ಪ್ರಾಣಿಗಳೇ, ಪಕ್ಷಿಗಳೇ, ನನ್ನ ವೃದ್ಧತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನನ್ನ ಕಣ್ತುಂಬ ಕಂಡಲ್ಲದೆ ಬಾಯಲ್ಲಿ ನೀರು ಕೂಡ ಹಾಕುತ್ತಿರಲಿಲ್ಲ. ನನ್ನ ನೆನಪೇ ಅವನಿಗೆ ಸಂಜೀವಿನಿ. ಆದ್ದರಿಂದ ಅವನಿಗೆ ದಿನಾ ನನ್ನ ಯೋಗಕ್ಷೇಮದ ವರದಿ ಒಪ್ಪಿಸಿ. ಬೆಳಗಿನ ಚಳಿಗೆ ಅವನ ಪಕ್ಕ ಮರೆಯದೆ ಒಂದಿಷ್ಟು ಬೆಂಕಿ ಮಾಡಿಕೊಡಿ.

ಮೇಳ : ತೌರಮನೆ ಎಂಬುವುದು ನಾರಿಗೆ ಕೊನೆಯಲ್ಲ
ವಾರಿಗೆ ಪತಿಪುರುಷನೊಲಿದು| ಬಂದಾಗ
ಎರವಾದೆ ಮಗಳೆ ತೌರಿಗೆ||

ಹೆತ್ತಂತ ತೌರಿಗೆ ಏನಂತ ಹರಸಲಿ
ಹಸಿರು ನಗುತಿರಲಿ ಅನವರತ| ನಿನ ಹಾಡು
ತುಳುಕಿರಲಿ ನಾಡಿನ ತನಕ.