ಸೂತ್ರಧಾರ : ಈಗ ನೋಡ್ರಿ ಶಿವ, ನಮ್ಮ ಕಥೆ ಅರಮನೆಯಲ್ಲಿ ಚಿಗುರಿಕೊಳ್ತಾಯಿದೆ. ರಾಜನ ರಾಣಿ ಮಹಾರಾಣಿ. ದಡೀಸೀರೆಯ ಒಡತಿ. ಸಿಂಗಾರದ ನಿರಿಗೆ ಒದ್ದು, ಕಡಗದ ಕೈ ತಿರುವಿ ಅರಮನೆಯಂಗಳದಲ್ಲಿ ಕುಂತಾಳ್ರೀ. ಮುಂದೇನಪಾ ತಮ್ಮಾ.

ಮೇಳ : ಅದೇ ಗಿಣಿ ಗಿಡುಗನ ಆಟ.

ಸೂತ್ರಧಾರ : ಕಾಡಿನ ಥರಾವರಿ ಹಕ್ಕಿ ಪಕ್ಷಿಗಳನ್ನ ಹಿಡಿಸಿ ಅವುಗಳನ್ನು ಕೆಳಗಡೆಯಿಂದ ಹಾರಿಬಿಟ್ಟು ಟರಮನೆ ಮ್ಯಾಲಿಂದ ಗಿಡುಗನನ್ನು ಬಿಡೋದು-ಗಿಡುಗ ಪುಟ್ಟ ಪುಟ್ಟ ಹಕ್ಕಿಗಳ ಮ್ಯಾಲೆ ಎರಗಿ, ಕೊಕ್ಕಿನಿಂದ ಕುಕ್ಕಿ ಸೊಕ್ಕಿದ ಬೇಟೆ ಆಡುತ್ತಿದ್ದರೆ,
ಮಹಾರಾಣಿ ಹಾ ಅಂತ ಆನಂದಪಡುತ್ತಿದ್ದಳು. ಕಂದಾ, ನಿನ್ನ ಹಕ್ಕಿ ಬಿಟ್ಟೆಯಾ? ನನ್ನ ಗಿಡುಗ ರೆಡಿ.

(ಮೇಳದವರು ಗಿಳಿ ಗಿಡುಗರಾಗಿ ಅಭಿನಯಿಸುವರು)

ಮೇಳ : ಬ್ಯಾಡ ಬ್ಯಾಡ ಹೋಗಬ್ಯಾಡ
ನಮ್ಮ ಗುರಿ| ಗೂಡಬಿಟ್ಟು ಹೋಗಬ್ಯಾಡ
ಕಟ್ಟಿದಾವ ದಟ್ಟ ಮೋಡ
ಮೋಡದಾಗ| ತೂಗ್ಯಾಡತಾವ ಕರಿ ನೆರಳ||

ಮ್ಯಾಲ ನೋಡ ಹಾಳ ಗಿಡುಗ
ಗಿಡುಗನ ಕಣ್ಣು ಹರಿದಾಡತಾವ ನಿನ್ನ ಮ್ಯಾಗ

(ಹಾಡು ಮುಗಿಯುವಷ್ಟರಲ್ಲಿಅಂತಃಪುರ ಮಹಾರಾಣಿ ಮತ್ತು ವಿನಯೆಗುಣವಂತನ ಪ್ರವೇಶ)

ಗುಣವಂತ : ಮಹಾರಾಣಿಗೆ ಜಯವಾಗಲಿ.

ಮಹಾರಾಣಿ : ಯಾರದು? ನೀನು ನಮ್ಮ ತಂದೆಯ ನಿಷ್ಠಾವಂತ ಸೇವಕನಾಗಿದ್ದ ಗುಣವಂತ ಅಲ್ಲವೆ?

ಗುಣವಂತ : ಹೌದು ಮಹಾರಾಣಿ.

ಮಹಾರಾಣಿ : ಏನು ಬಂದೆ?

ಗುಣವಂತ : ವಿಷಯ ಗೊತ್ತಾಯಿತೆ ಮಹಾರಾಣಿ?

ಮಹಾರಾಣಿ : ಗೊತ್ತಾಗದೇನು? ಮಹಾರಾಜರು ಉಪವನದಿಂದ ಬರುತ್ತಿದ್ದಾರೆ, ಸರಿತಾನೆ?

ಗುಣವಂತ : ಅಷ್ಟೇ ಅಲ್ಲ.

ಮಹಾರಾಣಿ : ವೈರಿಗಳನ್ನು ಸದೆಬಡಿದು ಜಯಶಾಲಿಗಳಾಗಿ ಬರುತ್ತಿದ್ದಾರೆ. ಸರಿತಾನೆ?

ಗುಣವಂತ : ಅಷ್ಟೇ ಅಲ್ಲ.

ಮಹಾರಾಣಿ : ಇನ್ನೇನು? ನನಗೋಸ್ಕರ ಗಿಳಿಮರಿ ಹಿಡಿದು ತರುತ್ತಿದ್ದಾರೆಯೇ?

ಗುಣವಂತ : ಇಕೋ ನಾನೇ ತಮದಿದ್ದೇನೆ ಮಹಾರಾಣಿ. ಇದು ಸಾಮಾನ್ಯ ಹಸಿರು ಗಿಳಿಯಲ್ಲ, ಪಂಚರಂಗಿ ಗಿಳಿ. (ಕೊಡುವನು)

ಮಹಾರಾಣಿ : ಅಬ್ಬ! ಎಷ್ಟು ಚೆನ್ನಾಗಿದೆ. ಇದಿನ್ನೂ ಮರಿ ಅಲ್ಲವೇ?

ಗುಣವಂತ : ಹೌದು ಮಹಾರಾಣಿ, ಇದಿನ್ನೂ ದೊಡ್ಡದಾಗಬೇಕು. ಅಂದರೇನೇ ಇದರ ಬೇಟೆ ಚೆಂದ.

ಮಹಾರಾಣಿ : ಇದರ ಜೊತೆ ಇದೇ ವಯಸ್ಸಿನ ಗಿಡುಗ ಸಿಕ್ಕಿದ್ದರೆ ಚೆನ್ನಾಗಿತ್ತು. ಕೆಳಕ್ಕೆ ಬಣ್ಣದ ಚಿಟ್ಟೆಯಂತೆ ಇದು ಹಾರಬೇಕು. ಮೇಲಿನಿಂದ ಕೇಳಕ್ಕೆ, ಇದರ ಮೇಲಕ್ಕೆ ಗಿಡುಗ ಎಗರಿ ಬೇಟೆಯಾಡುತ್ತಿದ್ದರೆ ನೋಡುವುದಕ್ಕೆ ಎಷ್ಟು ಚೆನ್ನಾಗಿರುತ್ತದೆ!

ಗುಣವಂತ : ಇದು ಬಾರೀ ಬೆರಿಕಿಪಕ್ಷಿ ಮಹಾರಾಣಿ. ಒಮ್ಮೊಮ್ಮೆ ಗಿಡುಗನನ್ನೇ ಎದುರಿಸುತ್ತದೆ.

ಮಹಾರಾಣಿ : ಹಾಗಿದ್ದರೆ ಇನ್ನೂ ಒಳ್ಳೆಯದಾಯಿತಲ್ಲಾ, ಪರಸ್ಪರ ಬೇಟೆಯಾಡುವ ದೃಶ್ಯ!

ಗುಣವಂತ : ಹಾಗಲ್ಲ ಮಹಾರಾಣಿ. ಈ ಹಕ್ಕಿಗೆ ರಣಹದ್ದು ವೈರಿ. ಇದರ ಮೈ ಬಣ್ಣ ದೂರದ ಅದರ ಕಣ್ಣಿಗೆ ಹಸಿ ಮಾಂಸದಂತೆ ಕಾಣುವುದಂತೆ.

ಮಹಾರಾಣಿ : ಅದಕ್ಕೇನಂತೆ? ರಣಹದ್ದಿನಿಂದಲೇ ಬೇಟೆ ಆಡಿಸಿದರಾಯ್ತು. ವಿನಯೆ-(ವಿನಯೆ ಬರುವಳು) ಇದನ್ನು ಒಯ್ದು ಪಂಜರದಲ್ಲಿಡು. ಅದಾಗಲೇ ಕತ್ತು ಚೆಲ್ಲಿದೆ. ಹಸಿದಿದೆಯೋ ಏನೋ? ಕೂಡಲೆ ಹಣ್ಣು ಹಾಲು ಉಣ್ಣಿಸು. ಗುಣವಂತಾ ಇದಕ್ಕೊಂದು ರಣಹದ್ದಿನ ವ್ಯವಸ್ಥೆಯಾಗಲಿ. ಗಿಳಿಮರಿ ತಂದುದಕ್ಕೆ ಇಕೋ ಬಹುಮಾನ.

(ಆತನ ಕಡೆಗೆ ಎಸೆಯುವಳು. ಅವನು ಹಣ ತೆಗೆದುಕೊಂಡು ಹಾಗೇ ನಿಲ್ಲುವನು.)

ಮಹಾರಾಣಿ : ಇನ್ನೇನಾದರೂ ಹೇಳಲಿಕ್ಕೆ ಇದೆಯೇ ಗುಣವಂತಾ?

ಗುಣವಂತ : ಹೌದು ಮಹಾರಾಣಿ. ಆಘಾತದ ಸುದ್ದಿ. ಮಹಾರಾಜರು ಕಾಡಿನಲ್ಲಿ ಸಿಕ್ಕ ಒಂದು ಹುಡುಗಿಯನ್ನು ಗಾಂಧರ್ವ ವಿಧಿಯಿಂದ ಮದುವೆ ಮಾಡಿಕೊಂಡರು.

ಮಹಾರಾಣಿ : (ಆಗಾತಹೊಂದಿ) ಏನೆಂದೆ? ನೀನು ಹೇಳುತ್ತಿರುವುದು ನಿಜವೆ?

ಗುಣವಂತ : ನಿಜ ಹೇಳುತ್ತಿದ್ದೇನೆ ಮಹಾರಾಣಿ. ಚಿಕ್ಕರಾಣಿಯವರ ಹೆಸರು ಪುಷ್ಪರಾಣಿಯಂತೆ. ಮಾಯ ಮಾಟ ಬಲ್ಲವರಂತೆ. ಬೇಕು ಬೇಕಾದಾಗ ಮರವಾಗುತ್ತಾರೆ; ಹೂವಾಗಿ ಬೀಗುತ್ತಾರೆ! ಬೇಡವಾದಾಗ ಪುನಃ ಹುಡುಗಿಯಾಗುತ್ತಾರೆ!

ಮಹಾರಾಣಿ : ಇದನ್ನೆಲ್ಲ ನಿನಗೆ ಯಾರು ಹೇಳಿದರು? ಮಹಾರಾಜರು ಯುದ್ಧಕ್ಕೆ ಬರಲಿಲ್ಲವೆ?

ಗುಣವಂತ : ನಾವು ಹೋಗಬೇಕಾದ ಅಗತ್ಯ ಬೀಳಲಿಲ್ಲ ಮಹಾರಾಣಿ. ಮರ ಕಡಿಯುತ್ತಿದ್ದ ವೈರಿ ಸೈನಿಕರನ್ನು ನಮ್ಮವರು ಸುಲಭವಾಗಿ ಓಡಿಸಿದರು. ಮಧ್ಯೆ ಉಪವನದಲ್ಲಿ ಹೊಸರಾಣಿಯವರ ಕಥೆ ನಡೆದುಹೋಯಿತು. ಹೊಸರಾಣಿಯ ಸ್ವಾಗತದ ಸಿದ್ಧತೆಯಾಗಲೆಂದು ತಮಗೆ ತಿಳಿಸಲು ಮಹಾರಾಜರು ನನ್ನನ್ನು ಅಟ್ಟಿದ್ದಾರೆ.

ಮಹಾರಾಣಿ : ಇಲ್ಲಿಗೂ ಬಂತೆ ನನ್ನ ದುರ್ದೈವ! ಈ ದುಃಖವನ್ನು ಯಾರೆದುರು ತೋಡಿ ಕೊಳ್ಳಲಿ? ಈ ಬಗ್ಗೆ ಇನ್ನೊಬ್ಬರ ಮುಂದೆ ಆಡಿಕೊಳ್ಳುವುದಕ್ಕೂ ನನಗೆ ನಾಚಿಕೆ ಆಗುತ್ತದೆ. ಯಾಕೆಂದರೆ ನಾನು ಮತ್ತು ನನ್ನ ಆಸೆ ಇಬ್ಬರೂ ಬಂಜೆಯರು. ಇವಳ್ಯಾರೋ ಕೊಂಚದವಳಲ್ಲ. ಮದ್ದು ಮಾಟಾ ಮಾಡಿ ಮಹಾರಾಜರನ್ನು ವಶೀಕರಣ ಮಾಡಿಕೊಂಡಿದ್ದಾಳೆ ಎಂದಾಯ್ತು. ಇಲ್ಲಿಯತನಕ ಬಂಜೆತನದ ಒಂದೇ ಸಂಕಟವಾಗಿತ್ತು. ಈಗ ಇವಳು ಬೇರೆ ಸೇರಿಕೊಂಡಳು. ವಿನಯೆ, ಕನಿಷ್ಠಾ-

(ಇಬ್ಬರು ಸೇವಕಿಯರ ಪ್ರವೇಶ)

ಮಹಾರಾಜರು ಅದ್ಯಾವಳೋ ಮಾಯಾವಿಯನ್ನು ಕಟ್ಟಿಕೊಂಡು ಬರುತ್ತಿದ್ದಾರಂತೆ, ಸ್ವಾಗತದ ಸಿದ್ಧತೆಯಾಗಲಿ.

(ಇಬ್ಬರೂ ಸೇವಕಿಯರ ನಿರ್ಗಮನ)