ಮೇಳ : ಗಂಧದ ವಾಸನೆ ಗಮ್ಮಂತ ಬಂದಾವು
ಬೀದಿಯಲಿ ಬರುವವರು ಯಾರು?
ಹಂಬಲದ ಹೂವುಗಳ ಜಡೆ ತುಂಬ ಮುಡಿದಾಕೆ
ಪುಷ್ಪರಾಣಿಯು ಹೌದೆ ಇವಳು?
ಹವಳದ ಹಲ್ಲೋಳು ಗಿಳಿಬಾಯ ತುಟಿಯವಳು
ದ್ವಾರಕ್ಕೆ ಬಂದವರು ಯಾರು?
ಸಾಲುಮುಖ ಮೊಗ್ಗರಳಿ ಹೂವಾಗಿ ನಗುತಾವೆ
ಪುಷ್ಪರಾಣಿಯು ಹೌದೆ ಇವಳು?

(ಹಾಡು ಮುಗಿಯುವಷ್ಟರಲ್ಲಿ ರಾಜ ಪರಿವಾರ ಸಮೇತ ಪುಷ್ಪರಾಣಿಯನ್ನ ಕರೆದುಕೊಂಡು ಅರಮನೆಯ ಮುಖ್ಯ ದ್ವಾರಕ್ಕೆ ಬರುವನು. ಮಹಾರಾಣಿ ದಾಸಿಯರ ಸಮೇತ ಎದುರುಗೊಳ್ಳಲು ಬಂದಿದ್ದಾಳೆ.)

ಮಹಾರಾಜ : ಮಹಾರಾಣಿ ನಿನಗೊಬ್ಬ ತಂಗಿಯನ್ನು ತಂದಿದ್ದೇನೆ.

(ಮಹಾರಾಣಿ ಎದುರುಗೊಳ್ಳುತ್ತ ಶಾಸ್ತ್ರ ಮಾಡುವಳು. ಪುಷ್ಪರಾಣಿಯನ್ನು ಒಳಕ್ಕೆ ಕರೆದೊಯ್ಯುವಳು)

ಮೇಳ : ಹೂವಿನ ರಾಣಿಯು ಸಂತೋಷಪಟ್ಟರೆ
ಅರಮನೆಗೆ ಜೀವ ಬಂತಲ್ಲ!
ಕಿರುಬೆವರು ಸೂಸುವ ಮುಖ ಎತ್ತಿ ನಕ್ಕರೆ
ಅರಮನೆ ಬೆಳಕಾಯಿತಲ್ಲ!

(ಅರಮನೆ ನೋಡಿ ಪುಷ್ಪರಾಣಿಗೆ ಭಾರೀ ಆಶ್ಚರ್ಯವಾಗಿದೆ. ಮುಗ್ಧ ಬೆರಗಿನಿಂದ ದಾಸಿಯರ ಸೀರೆ ಒಡವೆಗಳನ್ನು ಪರೀಕ್ಷಿಸುತ್ತಾಳೆ. ಆನಂದಪಡುತ್ತಾಳೆ. ಮಹಾರಾಣಿ ದೂರದಲ್ಲಿ ತನ್ನಷ್ಟಕ್ಕೇ ತಾನು ಮಾತಾಡಿಕೊಳ್ಳುತ್ತಾ ನಿಂತಿದ್ದಾಳೆ. ದಾಸಿಯರು ಪುಷ್ಪರಾಣಿಯ ಪೆದ್ದುತನಕ್ಕೆ ನಗುತ್ತಿದ್ದಾರೆ)

ಪುಷ್ಪರಾಣಿ : (ಕನಿಷ್ಠಳ ಆಭರಣ ತೋರಿಸಿ) ನನಗೂ ಇದನ್ನ ಕೊಡೆ.

ಕನಿಷ್ಠಾ : ಅಯ್ಯಯ್ಯೋ ಇದೆಲ್ಲ ದಾಸಿಯರು ಧರಿಸುವಂಥಾದ್ದು, ನಿಮಗಲ್ಲ.

ಪುಷ್ಪರಾಣಿ : ದಾಸಿ ಅಂದರೇನು? (ದಾಸಿಯರು ನಗುವರು)

ಮಹಾರಾಣಿ : (ತನ್ನಲ್ಲಿ ತಿರಸ್ಕಾರದಿಂದ) ಇವಳೇ ಇನ್ನು ಮೇಲೆ ಮಹಾರಾಣಿ!

ಪುಷ್ಪರಾಣಿ : (ವಿನಯೆಯ ಸೀರೆ ತೋರಿಸಿ) ನನಗೂ ಇಂಥಾದ್ದು ಬೇಕು.

ವಿನಯೆ : ಆಹಾ ಇದು ಸೇವಕಿಯರು ಧರಿಸುವಂಥಾದ್ದು ನಿಮಗಲ್ಲ.

ಪುಷ್ಪರಾಣಿ : ಸೇವಕಿ ಅಂದರೇನು? (ದಾಸಿಯರು ನಗುವರು)

ವಿನಯೆ : (ಪುಷ್ಪರಾಣಿಯನ್ನು ತೋರಿಸಿ) ನೀವು ಮಹಾರಾಣಿ (ತನ್ನನ್ನು ತೋರಿಸಿಕೊಳ್ಳುತ್ತ)ನಾನು ಸೇವಕಿ.

(ದಾಸಿಯರು ಭಾರೀ ನಗುವರು)

ಮಹಾರಾಣಿ : (ತನ್ನಲ್ಲಿ) ನಗರೇ, ನಗರೇ ನನಗೆ ಮೋಸಮಾಡಿ ಇಂಥ ಮೃಗವನ್ನು ಕಟ್ಟಿ ಕೊಂಡವರಲ್ಲ ರಾಜರು, ಅವರನ್ನು ನೋಡಿ ನಗಿರಿ. (ಪುಷ್ಪರಾಣಿ ದಾಸಿಯರನ್ನು ಬಿಟ್ಟು ಅರಮನೆಯ ವಿವರಗಳನ್ನು ನೋಡುತ್ತ ಚಲಿಸುತ್ತಿದ್ದಾಳೆ. ನೋಡ ನೋಡುತ್ತ ಮಡಕೆಯ ಅಡಕಲನ್ನು ಬೀಳಿಸಿ ಪೆಚ್ಚಾಗುವಳು. ದಾಸಿಯರು ಇನ್ನೂ ನಗುವರು. ರಾಜ ಪ್ರವೇಶಿಸುವನು)

ರಾಜ : ಅದೇನು ಹಾಗೆ ಕಿವಿಯಿಂದ ಕಿವಿಯತನಕ ನಗುತ್ತಿದ್ದೀರಿ? ಮುಗ್ಧೆಯನ್ನು ಕಂಡು ನಗುವುದು ಅನಾಗರಿಕತೆ ಎಂದು ಗೊತ್ತಾಗುವುದಿಲ್ಲವೆ? ಇವಳು ಈ ರಾಜ್ಯದ ರಾಣಿ ಎನ್ನುವುದು ತಿಳಿಯದಿರಲಿ. ವಿನಯೆ, ಕನಿಷ್ಠಾ. ಪುಷ್ಪರಾಣಿಯನ್ನು ಕರೆದು ಕೊಂಡು ಹೋಗಿ ರಾಣಿಯ ವೇಷಭೂಷಣ ತೊಡಿಸಿ ಅರಮನೆಯ ಶಿಷ್ಟಾಚಾರ ಕಲಿಸಿರಿ. ಹೊರಡಿ.

(ದಾಸಿಯರು ಪುಷ್ಟರಾಣಿಯನ್ನು ಕರೆದೊಯ್ಯುವರು. ರಾಜ ನಿರ್ಗಮಿಸುವನು)

ಮಹಾರಾಣಿ : (ತಿರಸ್ಕಾರದಿಂದ ತನ್ನಲ್ಲೆ) ಮಹಾಮುಗ್ಧತೆ! ಅದರಲ್ಲಿ ತನ್ನೆಲ್ಲ ಮದ್ದುಮಾಟದ ದುರ್ಗುಣ ಮುಚ್ಚಿ ಬೀಗ ಹಾಕಿದ್ದಾಳೆಂದು ನನಗೆ ಗೊತ್ತಿಲ್ಲವೆ? (ಹೋಗುವಳು)