(ಅಂತಃಪುರವಿನಯೆ, ಕನಿಷ್ಠಾ)

ವಿನಯೆ : ಚಿಕ್ಕರಾಣಿ ಎಂಥಾ ಮುಗ್ಧರಪ್ಪಾ. ಏನು ಅಂದರೆ ಏನೂ ತಿಳಿಯುವುದಿಲ್ಲ ಅವರಿಗೆ. ಕೂಸಿನ ಕನವರಿಕೆ ಹಾಗೆ ಏನೇನೋ ಮಾತಾಡುತ್ತಾರೆ. ಕೇಳೋದಕ್ಕೆ ಆನಂದವಾಗುತ್ತದೆ, ಆದರೆ ಅರ್ಥವೇ ಆಗುವುದಿಲ್ಲ. ಅವರು ನಡೆದಾಡುವಾಗ
ಕೂಡ ಯಾವುದೋ ಹಾಡಿಗೆ ಕುಣಿತದ ಹೆಜ್ಜೆ ಹಾಕಿದಂತೆ ಇರುತ್ತದೆ.

ಕನಿಷ್ಠಾ : ಚಿಕ್ಕರಾಣಿಯ ನುಡಿ ಗಿಳಿಯಂತೆ. ನಡೆ ಹಂಸದಂತೆ, ನಿಂತರೆ ನವಿಲಂತೆ, ಕೂತರೆ ಕರಡಿಯಂತೆ-ಇದೇ ತಾನೇ ನೀನು ಹೇಳೋದು? ಈ ಎಲ್ಲ ನಯನ ಅಭಿನಯದ ಹಿಂದೆ ಯಾವುದೋ ಮಾಯೆ ಇದೆ ಕಣೆ.

ವಿನಯೆ : ಅದೇನು ಮಾಯೆ ಕಂಡಿಯೇ ಮಾರಾಯಳೆ?

ಕನಿಷ್ಠಾ : ಮಾಯೆ ಅಲ್ಲದಿದ್ದರೆ ಜಡೆ ಹಾಕಲಿಕ್ಕೂ ಬಾರದ ಕಾಡು ಹುಡುಗಿ ರಾಣಿಯಾಗು ವುದು ಸಾಧ್ಯವಿತ್ತೆ ಹೇಳು? ಮದ್ದು ಮಾಟ ಅನ್ನೋದು ಅದಕ್ಕೇ. ನಾನಿನ್ನೂ ನೋಡಿಲ್ಲ ನಿಜ. ಆದರೆ ಚಿಕ್ಕರಾಣಿ ಬಯಸಿದಾಗ ಮರವಾದುದನ್ನು ಮಂತ್ರಿಗಳೇ
ಕಣ್ಣಾರೆ ಕಂಡರಂತೆ. ಇನ್ನೂ ಏನೇನಾಗುತ್ತಾಳೋ.

ವಿನಯೆ : ಓಹೋ ಅದಕ್ಕೇ ಇರಬೇಕು ಪುಷ್ಪರಾಣಿ ಎಲ್ಲೇ ಹೋಗಲಿ, ಕೂರಲಿ, ನಿಂತಿರಲಿ, ಮಹಾರಾಣಿ ದೂರದಲ್ಲಿ ಅಡಗಿ ನಿಂತು ಗಮನಿಸುತ್ತಾರೆ. ಒಬ್ಬರ ಬಗ್ಗೆ ಅನುಮಾನ ಬಂದರಾಯಿತು. ಅವರಿಗೆ ಕೋರೆಹಲ್ಲು, ಕೊಂಬು, ಮೂಡಿದಂತೆಯೇ ಕಾಣಿಸುತ್ತದೆ. ಅದಕ್ಕೇ ನನಗೆ ಭಯವಾಗುವುದು.

ಕನಿಷ್ಠಾ : ಹಾಗೆ ಇದ್ದಿರಲೂಬಹುದನ್ನು. ಊಟದ ಮಧ್ಯೆ ಯಾರೋ ನಿನ್ನ ತಟ್ಟೆ ಕದ್ದೊಯ್ದರೆ ನಿನಗೇನಾಗುತ್ತದೆ ಹೇಳು?

ವಿನಯೆ : ಹಾಗಂತ ಅಷ್ಟು ದೊಡ್ಡವರು ತಾಳ್ಮೆ ಕಳೆದುಕೊಳ್ಳಬಹುದೇನೆ?

ಕನಿಷ್ಠಾ : ಅದು ನಿನ್ನ ಭ್ರಮೆ. ಮಹಾರಾಣಿಯವರು ಒಮ್ಮೆಯಾದರೂ ತಾಳ್ಮೆ ಕಳೆದು ಕೊಂಡಿದ್ದನ್ನು ನೋಡಿದ್ದೀಯಾ?

ವಿನಯೆ : ಚಿಕ್ಕರಾಣಿ ಕಣ್ಣ ಮುಂದೆ ಇದ್ದಾಗ ತಾಳ್ಮೆ ಕಳೆದುಕೊಂಡಿಲ್ಲಾ ನಿಜ. ಆದರೆ ದೂರದಿಂದ ಚಿಕ್ಕರಾಣಿಯನ್ನು ಕಂಡಾಗಗೆಲ್ಲ ತಮ್ಮ ವಸಡು ತಾವೇ ತಿನ್ನುತ್ತಾರೆ. ಬೈದರೂ ಬೈಗುಳೊಂದೂ ಚಿಕ್ಕರಾಣಿಗೆ ತಿಳಿಯೋದಿಲ್ಲವಲ್ಲಾ. ತಿಳಿಯದ್ದಕ್ಕೆ ನಗುತ್ತಾರೆ. ಮಹಾರಾಣಿ ಅಣಕಿಸಿ ನಕ್ಕರೆ ನಿಜವಾದ ನಗೆ ಅಂತಲೇ ನಂಬಿ ಅದಕ್ಕೆ ಚಿಕ್ಕರಾಣಿ ಸಂತೋಷ ಪಡುತ್ತಾರೆ. ನನಗಂತೂ ಅವರನ್ನು ಕಂಡು ಅಯ್ಯೋ ಪಾಪ ಅನಿಸುತ್ತದೆ.

ಕನಿಷ್ಠಾ : ನನಗೂ ಮಹಾರಾಣಿಯನ್ನು ಕಂಡು ಅಯ್ಯೋ ಅನಿಸುತ್ತದೆ. ಮಹಾರಾಣಿಯವರಲ್ಲಿ ಇಲ್ಲದ ಯಾವ ವಿಶೇಷ ಚಿಕ್ಕರಾಣಿಯಲ್ಲಿದೆ ಹೇಳು; ಮದ್ದು ಮಾಟಾ ಬಿಟ್ಟರೆ. ಒಂದು ನಯವೇ? ಒಂದು ವಿನಯವೇ? ಒಂದು ಸಂಗೀತವೇ? ಒಂದು ಸಂಸ್ಕೃತಿಯೇ? ಯಾವುದರಲ್ಲಿ ಚಿಕ್ಕರಾಣಿ ಮಹಾರಾಣಿಗೆ ಸಮ ಹೇಳು?

ವಿನಯೆ : ಮಾತಿನಲ್ಲಿ ವಿವೇಕವಿರಲಿ ಕನಿಷ್ಠಾ. ಸದ್ಯಕ್ಕೆ ಇಬ್ಬರು ರಾಣಿಯವರನ್ನೂ ದೇವರು ಮತ್ತು ಮಹಾರಾಜರು ಕಾಪಾಡಲಿ. (ಹೋಗುವರು)