ಮೇಳ : ಕೋಪದ ಬೆಂಕಿಯ ಮಾಡಿದಳು ರಾಣಿ
ಶಾಪದ ಸೀಮೆಎಣ್ಣೆಯ ಸುರಿದಳು
ಬುದ್ಧಿ ವಿವೇಕದ ಕೈಕಾಲು ಕಟ್ಟಿ
ಬೆಂಕಿಗೆ ಚೆಲ್ಲಿ ಸಂತಸಪಟ್ಟಳು!!
ಮಹಾರಾಣಿ : ಸವತಿ ಮತ್ಸರದಿಂದ ನನ್ನ ಆತ್ಮ ಸುಡುತ್ತಿದೆ. ಪುಷ್ಪರಾಣಿ ಅರಮನೆ ಪ್ರವೇಶಿಸಿ ದಾಗಿನಿಂದಲೂ ನನ್ನ ಕಣ್ಣುರೆಪ್ಪೆಯ ಕಡೆಗೆ ನಿದ್ದೆ ಸುಳಿಯದಾಗಿದೆ. ಅವಳ ಮದ್ದು ಮಾಟದ ಕೋಟೆ ದಾಟಿ ಮಹಾರಾಜರನ್ನು ಹಿಡಿಯಬೇಕೆಂಬ ನನ್ನ ಆಸೆಗಳೂ ತಲೆಬಾಗಿ ಹಿಂದಿರುಗುತ್ತಿವೆ.
(ವಿನಯೆ ಪ್ರವೇಶಿಸುವಳು)
ವಿನಯೆ : ಮಹಾರಾಣಿ, ನಾಳೆಯ ಗಿಳಿ-ಗಿಡುಗನ ಆಟಕ್ಕೆ ರಣಹದ್ದು ಸಿದ್ಧವಾಗಿದೆಯಂತೆ, ಒಂದು ಬಾರಿ ತಾವು ನೋಡುತ್ತೀರಾ ಎಂದು ಗುಣವಂತ ಕೇಳುತ್ತಿದ್ದಾನೆ.
ಮಹಾರಾಣಿ : ಅಗತ್ಯವಿಲ್ಲ. ಈ ದಿನ ರಣಹದ್ದು ಉಪವಾಸವಿರಲೆಂದು ಹೇಳು.
ವಿನಯೆ : ಆದರೆ ಮಹಾರಾಣಿ ತಮ್ಮ ನಿನ್ನೆಯ ಆಜ್ಞೆಯಂತೆ ಅದಕ್ಕಾಗಲೇ ಅವನು ಒಂದು ಹಾವು ಬಡಿದು ಹಾಕಿದ್ದಾಗಿದೆ.
ಮಹಾರಾಣಿ : ಸರಿ ಬಿಡು. ಆ ನಿನ್ನ ಕಾಡುಮೃಗ ಎಲ್ಲಿ?
ವಿನಯೆ : (ತಿಳಿಯದೆ) ಮಹಾರಾಣಿ,
ಮಹಾರಾಣಿ : ಅಂದರೆ ಚಿಕ್ಕರಾಣಿ ಎಲ್ಲಿದ್ದಾಳೆ?
ವಿನಯೆ : ಗೊತ್ತಿಲ್ಲ ಮಹಾರಾಣಿ.
ಮಹಾರಾಣಿ : ಈಗ ಎಲ್ಲಿದ್ದಾಳೆ ಅವಳು? ಮಹಾರಾಜರ ಹೃದಯ ಪಂಜರದಲ್ಲೋ? ಅರಮನೆಯ ನೆಲದ ಮೇಲೋ?
(ನಗುತ್ತಿರುವಾಗ ಕನಿಷ್ಠಾ ಬರಿದಾದ ಪಂಜರ ತಂದು ರಾಣಿಯ ಮುಂದಿರಿಸುವಳು)
ಮಹಾರಾಣಿ : ಏನೇ ಅದು ಕನಿಷ್ಠಾ? ಖಾಲಿ ಪಂಜರ ತರುತ್ತಿದ್ದೀಯಾ. ಗಿಳಿಮರಿ ಏನಾಯ್ತು?
ಕನಿಷ್ಠಾ : ಅದನ್ನೇ ಹೇಳುವುದಕ್ಕೆ ಬಂದೆ ಮಹಾರಾಣಿ. ಚಿಕ್ಕರಾಣಿಯವರು ಹುಲ್ಲೆಮರಿ ಥರಾ ನೆಗೆಯುತ್ತಾ ಪಂಜರದ ಬಳಿಗೆ ಬಂದರು. ಗಿಳಿಮರಿಯನ್ನು ನೋಡಿದ್ದೆ -“ನೀನು ಉಪವನದಲ್ಲಿರೊ ಪಂಚರಂಗಿ ಮಗಳು ಹಣ್ಣು ಕುಟುಕಿ ಅಲ್ಲವೇನೆ”
ಅಂದರು. ಅದೇನೊ ಹೇಳ್ತು. ಆವಾಗಿವರು “ಲೇ ಹಣ್ಣು ಕುಟುಕಿ ನಿಮ್ಮಮ್ಮ ನಿನ್ನೆಯಷ್ಟೆ ಸಿಕ್ಕಿದ್ದಳು. ದಿನಾ ನಿನ್ನ ನೆನಸಿಕೊಂಡು ಅಳುತ್ತಾಳೆ” ಅಂತಂದಾಗ ಅದೂ ಅಳುವುದಕ್ಕೆ ಶುರುಮಾಡಿತು. ಇವರು ಸಮಾಧಾನ ಮಾಡಿದಷ್ಟೂ ಅದರ ಅಳು ಜೋರಾಯ್ತು. ಆಮೇಲೆ ಇಬ್ಬರೂ ಏನೇನೋ ತುಂಬ ಹೊತ್ತು ಮಾತಾಡಿಕೊಂಡರು. ಗಿಳಿಮರಿ ನಾಳೆಯ ಗಿಳಿ ಮತ್ತು ಗಿಡುಗನ ಆಟದ ವಿಷಯ ಹೇಳಿತೆಂದು ತೋರುತ್ತದೆ. ಆಗಂತೂ ಚಿಕ್ಕರಾಣಿ ಅಸಮಾಧಾನದಿಂದ ಇದೆಂಥಾ ಅನಾಗರಿಕ ಆಟವೆ ಅಂದರು.
ಮಹಾರಾಣಿ : ಏನು, ಅನಾಗರಿಕ ಆಟ ಅಂದಳೆ?
ಕನಿಷ್ಠಾ : ಹೌದು, ಮಹಾರಾಣಿ.
ಮಹಾರಾಣಿ : ಈ ಆಟ ಆಡಿಸುವವಳು ನಾನು ಮಹಾರಾಣಿ ಅಂತ ಹೇಳಲಿಲ್ಲವೆ?
ಕನಿಷ್ಠಾ : ಹೇಳಬೇಕೆಂದು ಮುಂದೆ ಬಂದೆ. ಆದರೆ ಅವರಿಬ್ಬರ ಸಂಭಾಷಣೆಯಲ್ಲಿ ನನಗೆ ಪ್ರವೇಶ ಸಿಕ್ಕಲಿಲ್ಲ. ಯಾಕೆಂದರೆ ನನಗೆ ಅವರ ಮಾತಿನ ಸ್ವಲ್ಪಾಂಶ ಮಾತ್ರ ಅರ್ಥವಾಯ್ತು.
ಮಹಾರಾಣಿ : ಸರಿ ಮುಂದೆ ಹೇಳು.
ಕನಿಷ್ಠಾ : ಆಮೇಲೆ ಚಿಕ್ಕರಾಣಿ ಪಂಜರದ ಬಾಗಿಲು ತೆಗೆದು ಮರಿಗಿಳಿಯನ್ನು ಹಾರಿಸಿ ಬಿಟ್ಟರು.
ಮಹಾರಾಣಿ : ಎಲಾ ಇವಳ ದುರಹಂಕಾರವೆ? ನನ್ನ ಆನಂದಗಳನ್ನು ಅರಮನೆಯಿಂದ ಹಾರಿಸಲಿಕ್ಕೆ ಇವಳ್ಯಾರು? ಇದು ಅತಿಯಾಯ್ತು. ಅರಮನೆಯಲ್ಲಿ ಅವಳಿರ ಬೇಕು ಇಲ್ಲಾ ನಾನಿರಬೇಕು. (ಪಂಜರ ಒದೆಯುವಳು) ಈಗ ಮಹಾರಾಜರೆಲ್ಲಿ?
(ಹೊರಡುವಳು)
Leave A Comment