ಮಹಾರಾಜ : ಪುಷ್ಪರಾಣಿ ಮಹಾರಾಣಿಯ ಗಿಳಿಮರಿಯನ್ನು ನೀನು ಹಾರಿಸಿ ಬಿಟ್ಟಿದ್ದು ತಪ್ಪಲ್ಲವೇ?

ಪುಷ್ಪರಾಣಿ : ಇದರಲ್ಲಿ ತಪ್ಪೇನಿದೆ ಪ್ರಭು? ಅದು ಅವಾಚ್ಯ ಶಬ್ದಗಳಿಂದ ನಿಮಗೂ ಅಕ್ಕನಿಗೂ ಶಾಪ ಹಾಕುತ್ತಿತ್ತು. ಅದರ ಮಾತು ತಿಳಿದಿದ್ದರೆ ನೀವು ಅದನ್ನು ಒಂದು ಕ್ಷಣವೂ ಅರಮನೆಯಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ.

ಮಹಾರಾಜ : ಅಂದರೆ? ಆ ಗಿಳಿ ನಿನಗೆ ಗೊತ್ತೆ?

ಪುಷ್ಪರಾಣಿ : ಹೌದು. ಅದು ನಮ್ಮ ಉಪವನದ ಗಿಳಿಮರಿ. ಅದರ ತಾಯಿಯೂ ನನಗೆ ಗೊತ್ತು. ಅಲ್ಲಿ ಉಪವನದಲ್ಲಿ ತಾಯಿಹಕ್ಕಿ, ಇಲ್ಲಿ ಮರಿಹಕ್ಕಿ ಇದ್ದರೆ ಹ್ಯಾಗೆ? ತಾಯಿಮಕ್ಕಳನ್ನು ಅಗಲಿಸಬಾರದು ಪ್ರಭು.

ಮಹಾರಾಜ : ಹೋಗಲಿ. ಪಂಜರ ತರಿಸಿಕೊಡುತ್ತೇನೆ. ಇನ್ನೊಂದು ಗಿಳಿಯನ್ನು ಹಿಡಿದು ಕೊಡುತ್ತೀಯಾ?

ಪುಷ್ಪರಾಣಿ : ಪಂಜರ ಯಾಕೆ ಬೇಕು ಪ್ರಭು? ನೀವು ಬಯಸಿದಾಗ ಅದೇ ನಿಮ್ಮಲ್ಲಿಗೆ ಬಂದು ಹಾಡಿ ಹೋಗುತ್ತದೆ. ಸಾಲದೆ? ಇವತ್ತು ಬೆಳಿಗ್ಗೆ ನಿನ್ನೆ ಬಿಟ್ಟ ಮರಿ  ಮತ್ತು ತಾಯಿಹಕ್ಕಿ ಎರಡೂ ಬಂದಿದ್ದವು. ಮರಿಯಂತೂ ಆಗಲೇ ಭತ್ತದ ತೆನೆ ಬಗ್ಗೆ ಒಂದು ಹಾಡು ಕಟ್ಟಿತ್ತು. ಅದನ್ನು ಕೇಳಿ ಎಷ್ಟು ಆನಂದವಾಯ್ತು ಅಂದರೆ…………

ಮಹಾರಾಜ : ನಿನಗೆ ಪಕ್ಷಿಗಳ ಭಾಷೆ ಅರ್ಥವಾಗುವುದೇ ದೇವಿ?

ಪುಷ್ಪರಾಣಿ : ಹೌದು.

ಮಹಾರಾಜ : ಒಂದು ದಿನ ನನಗೂ ಕೇಳಿಸುತ್ತೀಯಾ?

ಪುಷ್ಪರಾಣಿ : ಖಂಡಿತ.

(ಹೊರಡುವರು.)