(ಉದ್ಯಾನ. ಪುಷ್ಪರಾಣಿ ರಾಜನಿಗೆ ಹಕ್ಕಿ ಮತ್ತು ಮರಗಳನ್ನು ಪರಿಚಯಿಸುತ್ತ ಬರುವಳು)
ಪುಷ್ಪರಾಣಿ : ಅದು ಪರಪುಟ್ಟ, ನನ್ನ ಸ್ನೇಹಿತ. ಚೆನ್ನಾಗಿ ಹಾಡುತ್ತಾನೆ. ನಿಮಗೆ ಶುಭವಾಗಲಿ ಎನ್ನುತ್ತಿದ್ದಾನೆ.
ಮಹಾರಾಜ : ಆಶ್ಚರ್ಯ! ಹಾಗಾದೆ ನಿನ್ನ ಸ್ನೇಹಿತನಿಗೆ ನನ್ನ ವಂದನೆ ಹೇಳು.
ಪುಷ್ಪರಾಣಿ : ಪ್ರಭು ಇವಳು ಪಂಚರಂಗಿ.
ಪಂಚರಂಗಿ : (ಕೂಗುತ್ತದೆ)
ಪುಷ್ಪರಾಣಿ : ಯಾಕೆ ಹಾಗೆ ಹೇಳುತ್ತಿರುವೆ?
ಪಂಚರಂಗಿ : (ಕೂಗುತ್ತದೆ)
ಪುಷ್ಪರಾಣಿ : ಅರಮನೆಯ ಸೆರೆಮನೆಯಲ್ಲಿದ್ದಳಂತೆ. ಅಕ್ಕನ ಬಗ್ಗೆ ನನ್ನಲ್ಲಿ ತಕರಾರು ಹೇಳುತ್ತಿದ್ದಾಳೆ.
ಪಂಚರಂಗಿ : (ಕೂಗುತ್ತದೆ)
ಪುಷ್ಪರಾಣಿ : ಇನ್ನು ಮೇಲೆ ಯಾರನ್ನೂ ಸೆರೆಯಲ್ಲಿಡಬಾರದಂತೆ. ಹಾಗಂತ ನಿಮ್ಮಲ್ಲಿ ವಿನಂತಿಯಂತೆ.
ಮಹಾರಾಜ : ವಿನಂತಿಯಲ್ಲ, ಆಜ್ಞೆಯಾಗಿ ಸ್ವೀಕರಿಸಿದ್ದೇನೆಂದು ಹೇಳು ದೇವಿ.
ಪುಷ್ಪರಾಣಿ : ಪ್ರಭು, ಅಲ್ಲಿ ನೋಡಿ ಹುಣಸೇಮರ. ಅಷ್ಟು ದೂರ ಇದ್ದರೂ ಇಲ್ಲಿ ನನ್ನ ಬಾಯಲ್ಲಿ ನೀರೂರುತ್ತಿದೆ. ಬನ್ನಿ ಅಲ್ಲಿರೋ ತಿಳಿಹಸಿರೆ ಕರೆಯುತ್ತಿದೆ.
(ಹೋಗುವರು)
ಪುಷ್ಪರಾಣಿ : ಲೇ ತಿಳಿಹಸಿರೆ, ಒಬ್ಬಳೇ ಕೂತ್ಕೊಂಡು ಏನು ಮಾಡ್ತಾ ಇದ್ದೀಯಾ?
ಗಿಳಿ : (ಕೂಗುತ್ತದೆ)
ಪುಷ್ಪರಾಣಿ : ನನಗೊಂದು ಹಣ್ಣು ಎಸೀತೀಯಾ?
ಗಿಳಿ : (ಕೂಗುತ್ತದೆ)
ಪುಷ್ಪರಾಣಿ : ಪ್ರಭು ಇದು ನನ್ನ ಗೆಳತಿ, ತಿಳಿಹಸಿರೆ. ಹುಣಸೇಹಣ್ಣು ತಿನ್ನೋದಕ್ಕೆ ಇಲ್ಲೀತನಕ ಬಂದಿದೆ. ನಿಮಗೆ ಅಭಿನಂದನೆ ಹೇಳುತ್ತಿದ್ದಾಳೆ.
ಮಹಾರಾಜ : ಅಭಿನಂದನೆ? ಯಾಕಾಗಿ ಹೇಳ್ತಾ ಇದ್ದಾಳೆ?
ಗಿಳಿ : (ಕೂಗುತ್ತದೆ ಪುಷ್ಪರಾಣಿ ನಾಚಿ ಮುಖ ಮುಚ್ಚಿಕೊಳ್ಳುತ್ತಾಳೆ)
ಮಹಾರಾಜ : ದೇವಿ. ಗಿಳಿ ಏನು ಹೇಳಿತು?
ಪುಷ್ಪರಾಣಿ : ಹೋಗಿ ಪ್ರಭು ನನಗೆ ನಾಚಿಕೆ.
ಮಹಾರಾಜ : ವಿಷಯವೇನೇಂಬುದೇ ತಿಳಿಯಲಿಲ್ಲವಲ್ಲ.
ಪುಷ್ಪರಾಣಿ : (ನಾಚಿಕೆಯಿಂದ) ಪ್ರಭು ನೀವು ಕೆಲವೇ ತಿಂಗಳಲ್ಲಿ ಯುವರಾಜನ ತಂದೆಯಾಗುತ್ತೀರಂತೆ.
ಮಹಾರಾಜ : ಹೌದೆ? ನನಗೆ ಯಾಕೆ ಹೇಳಲಿಲ್ಲ ನೀನು?
ಪುಷ್ಪರಾಣಿ : ನನಗೂ ಗೊತ್ತಿರಲಿಲ್ಲ. ಗಿಳಿ ಹೆಳಿದ್ದರಿಂದಲೇ ಗೊತ್ತಾಯಿತು. (ಪುನಃ ನಾಚಿಕೊಳ್ಳುವಳು. ರಾಜ ಅವಳನ್ನು ಪ್ರೀತಿಯಿಂದ ಕರೆದೊಯ್ಯುವನು. ಇಲ್ಲೀಯತನಕ ಅಡಗಿ ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಮಹಾರಾಣಿ ಹೊರಬರುವಳು)
ಮಹಾರಾಣಿ : ಅಯ್ಯೋ ಅಯ್ಯೋ ಅಯ್ಯೋ! ಕೂದಲು ಕಿತ್ತುಕೊಳ್ಳಲೆ? ತಲೆಬುರುಡೆ ಜಜ್ಜಿಕೊಳ್ಳಲೆ? ಇನ್ನಿವಳನ್ನು ಹಿಡಿಯುವವರುಂಟೆ? ಮೊದಲೇ ಮದ್ದು ಮಾಟದ ಚೆಲುವೆ? ಇದೂ ಸಾಲದೆಂದು ನನ್ನ ಹೊಟ್ಟೆ ಉರಿಸೋಕೆ ಗರ್ಭಿಣಿ ಬೇರೆ
ಆಗಿಬಿಟ್ಟಳು. ಇನ್ನೂ ಕೇಳಬೇಕೆ? ಅಯ್ಯೋ ಅಯ್ಯೋ!
(ಕೈಯಲ್ಲಿಯ ಹೂವಿನ ಮಾಲೆಯನ್ನು ಹಿಸುಕಿ ಎಸೆಯುತ್ತಾಳೆ.)
ಸೂತ್ರಧಾರ : ಹಿಸುಕಬಾರದು ಹೂವ ಹಿಂಡಬಾರದು ದಂಡೆ. ದೇವರು ನಿಮಗೂ ಒಳ್ಳೆಯದನ್ನೂ ಮಾಡಲಿ ಮಹಾರಾಣಿ.
ಮಹಾರಾಣಿ : ದೇವರು ಇಂಥವಳಿಗೂ ಒಳ್ಳೆಯದನ್ನು ಮಾಡುತ್ತಾನೆಂದರೆ ನನಗವನ ಒಳ್ಳೆಯ ತನವೇ ಬೇಡ.
ಸೂತ್ರಧಾರ : ಏನೆಂದೆ ಮಹಾರಾಣಿ?
ಮಹಾರಾಣಿ : ಮನುಷ್ಯನಿಗೆ ಬರುವ ರೋಗಗಳೆಲ್ಲಾ ಇವಳ ಗರ್ಭಕ್ಕೆ ಬರಲಿ.
ಸೂತ್ರಧಾರ : ಶಾಂತಳಾಗು. ಕೋಪದಲ್ಲಿ ವಿವೇಕವನ್ನು ಸುಟ್ಟುಹಾಕಬೇಡ ತಾಯಿ.
ಮಹಾರಾಣಿ : ತಾಯಿ?
ಸೂತ್ರಧಾರ : ಹೌದು ತಾಯಿ. ಶಾಂತಳಾಗು ತಾಯಿ.
ಮಹಾರಾಣಿ : ಇನ್ನೆಲ್ಲಿಯ ಶಾಂತಿ. ದೇವರು ಮಾಡಿದ ಈ ಅನ್ಯಾಯವನ್ನು ನಾನಾದರೂ
ಸರಿಪಡಿಲೇಬೇಕು.
(ಹೊರಡುವಳು)
ಮೇಳ : ಅಂದರೆ ಮಹಾರಾಣಿಯವರ ಸಿಟ್ಟಿನ್ನೂ ಕಡಿಮೆಯಾಗಿಲ್ಲವೆ?
ಸೂತ್ರಧಾರ : ಅದಾಗಲೇ ದೊಡ್ಡ ಪ್ರಾಣಿಯಾಗಿ ಬೆಳೆದು ಬೇಟೆಗೆ ಸಿದ್ದವಾಗಿದೆ. ಯಾರ್ಯಾರ ರಕ್ತ ಹೀರಲಿದೆಯೊ…..
ಮೇಳ : ಅಲ್ಲೀತನಕಾ ಬೇಕಾದಷ್ಟು ಸಮಯವಿದೆ. ಬನ್ನಿ.
Leave A Comment