(ರಾತ್ರಿ ಅಂತಃಪುರ. ಮಹಾರಾಣಿ ಹೊಟ್ಟೆಕಿಚ್ಚಿನಿಂದ ಉರಿಯುತ್ತಿದ್ದಾಳೆ. ವಿನಯೆಯ ಮುಖದಲ್ಲೂ ಆತಂಕವಿದೆ)

ವಿನಯೆ : ಎಂದಿನಂತೆ ನಿಮ್ಮ ಮುಖ ಇಂದುಮಂಡಲದಂತೆ ಕಾಣುವುದಿಲ್ಲ.

ಮಾಹಾರಾಣಿ : ವಿಕಾರವಾಗಿದ್ದೇನೆಂದು ತಾನೆ ನೀನು ಹೇಳುವುದು? ದೀಪ ಚಿಕ್ಕದು ಮಾಡು.

ವಿನಯೆ : (ದೀಪ ಸಣ್ಣದು ಮಾಡುತ್ತ) ಇತ್ತೀಚಿಗೆ ನೀವು ಚೆನ್ನಾಗಿ ಊಟವನ್ನೇ ಮಾಡುತ್ತಿಲ್ಲ. ಹೀಗೆ ನಿಮ್ಮಲ್ಲಿ ನೀವೆ ಸಣ್ಣಗಾದರೆ ಹ್ಯಾಗೆ, ಮಹಾರಾಣಿ?

ಮಹಾರಾಣಿ : ಪುಷ್ಪರಾಣಿ ಗರ್ಭಿಣಿಯಾದಾಗಿನಿಂದ ನನ್ನ ಹಸಿವೆಯಷ್ಟೇ ಅಲ್ಲ, ನಿದ್ದೆಕೂಡ ಹಾರಿಹೋಗಿದೆ.

ವಿನಯೆ : ದೇವರು ಕಣ್ಣು ತೆರೆದರೆ ತಾವೂ ಕೂಡ-

ಮಹಾರಾಣಿ : ಅವನು ಕಣ್ಣು ತೆರೆಯೋತನಕ ಕಾಯೋಳಲ್ಲ ನಾನು. ಅವನ ಕಣ್ಣಿಗೆ ಈಗಲೇ ಬೆಂಕಿ ಸುರಿಯುತ್ತೇನೆ. ಅಗೊ ಕನಿಷ್ಠಾ ಬಂದಳೆಂದು ಕಾಣುತ್ತದೆ. ಬಂದನೇನೆ?

ಕನಿಷ್ಠಾ : (ಬಂದು) ಹೌದು ಮಹಾರಾಣಿ. (ಗುಣವಂತ ಬರುವನು)

ಮಹಾರಾಣಿ : ನೀನು ನಮ್ಮ ತಂದೆಯ ನಿಷ್ಠಾವಂತ ಸೇವಕನಾಗಿದ್ದೆ. ಸರಿತಾನೆ?

ಗುಣವಂತ : ಹೌದು ಮಹಾರಾಣಿ.

ಮಹಾರಾಣಿ : ಆದ್ದರಿಂದಲೇ ನಾನು ಹೆಣೆಯುತ್ತಿರುವ ಬಲೆಯಲ್ಲಿ ಒಂದು ಗಂಟಾಗುವ ಅವಕಾಶವನ್ನು ನಿನಗೆ ಕೊಡುತ್ತಿರೋದು.

ಗುಣವಂತ : ಸೇವಕ ಸಿದ್ಧನಿದ್ದೇನೆ ಮಹಾರಾಣಿ.

(ಮಹಾರಾಣಿ ಸನ್ನೆ ಮಾಡುವಳು. ವಿನಯೆ, ಕನಿಷ್ಠಾ ಹೋಗುವರು)

ಮಹಾರಾಣಿ : ಇದು ಗುಪ್ತ ವಿಚಾರ. ಗುಟ್ಟು ಕಾಪಾಡಬೇಕು. ಯಾರಿಗಾದರೂ ತಿಳಿದರೆ ತಲೆದಂಡ ತೆರಬೇಕಾಗುತ್ತದೆ.

ಗುಣವಂತ : ತಾವು ನನ್ನನ್ನು ನಂಬಬಹುದು, ಮಹಾರಾಣಿ.

ಮಹಾರಾಣಿ : ಇವತ್ತೇ ನನ್ನ ತಂದೆಯ ಬಳಿಗೆ ಹೋಗು. ಸ್ನೇಹಿತ ರಾಜರನ್ನು ಸೇರಿಸಿ ಈ ರಾಜ್ಯದ ಮೇಲೆ ದಂಡೆತ್ತಿ ಬಾ ಅಂತ ಹೇಳು.

ಗುಣವಂತ : (ಆಶ್ಚರ್ಯದಿಂದ) ಆದರೆ, ಮಹಾರಾಣಿ-

ಮಹಾರಾಣಿ : ಚಿಕ್ಕರಾಣಿ ಗರ್ಭಿಣಿಯಾದಾಗಿನಿಂದ ರಾಜನು ನನ್ನನ್ನು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಅವಳ ಮಾತು ಕೇಳಿಕೊಂಡು ನನ್ನನ್ನು ನೀರಿಗೆ ತಳ್ಳುವ ಯೋಚನೆ ಕೂಡ ಮಾಡುತ್ತಿದ್ದಾರೆಂದು ಹೇಳು. ತಡ ಮಾಡಿದರೆ ನನ್ನ ಹೆಣ ಕೂಡ
ತಂದೆತಾಯಿಗಳಿಗೆ ಸಿಕ್ಕಲಾರದು ಅಂತ ಹೇಳು.

ಗುಣವಂತ : ಆದರೆ,

ಮಹಾರಾಣಿ : ಹೆದರಿಕೆಯೋ? ತಗೊ. (ಹಣದ ಚೀಲವನ್ನು ಎಸೆಯುವಳು). ಇದು ನಿನಗೆ ಬೇಕಾದಷ್ಟು ಧೈರ್ಯ ಕೊಡುವುದು. ಕೆಲಸವಾದ ಮೇಲೆ ಇನ್ನೂ ಬಹುಮಾನ ಇದೆ.

ಗುಣವಂತ : ರಾಜ್ಯದ ಮೇಲೆ ದಂಡೆತ್ತಿ ಬಂದರೆ ಏನು ಪ್ರಯೋಜನ ಎಂದು ರಾಜರು ಕೇಳಿದರೆ-

ಮಹಾರಾಣಿ : ಪ್ರಯೋಜನ ಏನು ಮತ್ತು ಅದನ್ನು ಹ್ಯಾಗೆ ಪಡೆಯಬೇಕೆಂದು ನನಗೆ ಗೊತ್ತು. ಇದರಲ್ಲಿ ಎಲ್ಲಾ ಬರೆದಿದ್ದೇನೆ. ಇದನ್ನ ತೆಗೆದುಕೊಂಡು ಹೋಗು.

(ಪತ್ರಕೊಡುವಳು. ಗುಣವಂತ ಹೋಗುವನು)