ಬೆಂಗಳೂರು ದಂಡು (ಕಂಟೋನ್ಮೆಂಟ್) ಪ್ರದೇಶದಲ್ಲಿ ವಾಸಿಸುವ ನಾನು ಬಹಳ ಸಂಭ್ರಮದಿಂದ ಈ ವರುಷದ ದೀವಳಿಗೆ ಹಬ್ಬದ ಜತೆಗೆ ನಮ್ಮ ರಾಜ್ಯೋತ್ಸವದ ಹಬ್ಬವೂ ಬಂದಿದೆ..! ಎಂದುಕೊಳ್ಳುತ್ತಾ ಮುಂಜಾನೆ ಬೇಗನೆ ಎದ್ದೆನು.

ನಮ್ಮ ಮನೆಯ ವಾಡಿಕೆಯಂತೆ, ಕನ್ನಡದ ಹಬ್ಬವನ್ನು ಕನ್ನಡಪುಸ್ತಕಗಳ ಪೂಜೆಮಾಡಿ, ಈ ದಿನದ ಹಬ್ಬದ ಜತೆಗೆ ಆಚರಿಸೋಣ ಎಂದುಕೊಳ್ಳುತ್ತಾ, ಆಗಲೇ ಅಡುಗೆಮನೆಯನ್ನು ಪ್ರವೇಶಿಸಿದ್ದ ನಮ್ಮ ಮನೆಯ ಯಜಮಾನತಿಯನ್ನು ಪೂಜೆಗೆ ಏನೇನು ಸಾಮಾನು ತರಲಿ? ಎಂದು ಕೇಳಿದೆ. ಆಕೆ, ಇಂದಿನ ಪೂಜೆಗೆ ಮತ್ತು ವಿಶೇಷ ಅಡುಗೆಯ ಬಗ್ಗೆ ಎಲ್ಲಾ ವಸ್ತುಗಳನ್ನು ಮೊನ್ನೆಯೇ ತಂದೆ. ಇಂದು ಹೂ ಮತ್ತು ಬಾಳೆಹಣ್ಣು ಮಾತ್ರ ಕೊಂಡುತನ್ನಿ ಎಂದಳು.

ನಾವು ವಾಸವಾಗಿ ಇರುವುದು ಬಿ.ಎಲ್.ರೈಸ್ ನಗರ(ಹಿಂದಿನ ಹೆಸರು ಕೂಕ್‌ಟೌನ್).  ನಮ್ಮ ಬಡಾವಣೆಯಲ್ಲಿ ಮಾರುಕಟ್ಟೆ ಇಲ್ಲ. ಆದ್ದರಿಂದ, ಪಕ್ಕದ ಪುಲಿಕೇಶಿ ನಗರ (ಹಿಂದಿನ ಫ್ರೆಜರ್ ಟೌನ್) ಅಥವಾ ಅದರ ಪಕ್ಕದ ಸರ್ವಜ್ಞ ನಗರ (ಕಾಕ್ಸ್‌ಟೌನ್)ಕ್ಕೆ ಹೋಗಿ ಹೂಹಣ್ಣುಗಳನ್ನು ಕೊಂಡು ಬರೋಣ ಎಂದು ಕಾರು ಹೊರಡಿಸಿದೆ.

ಇಂದು ನಮ್ಮ ಕನ್ನಡ ರಾಜ್ಯೋತ್ಸವ! ಆದಷ್ಟು ಅಚ್ಚ ಕನ್ನಡದಲ್ಲೇ ನಾನು ವ್ಯವಹಾರ ಮಾಡಬೇಕು! ಅಂದುಕೊಂಡೆ. ರೈಲಿನ ಸೇತುವೆ ದಾಟಿ ಮುಂದೆ ಹೋಗುತ್ತಲೇ, ಒಂದು ಬಾಳೆಹಣ್ಣಿನ ತಳ್ಳುಗಾಡಿ ಕಾಣಿಸಿತು. ವಾಹನ ಬದಿಗೆ ನಿಲ್ಲಿಸಿ ಅವನ ಕೈಗಾಡಿಯತ್ತ ಸಾಗಿದೆ.                  ನನಗೆ ಇಪ್ಪತ್ತೈದು ಬಾಳೆಹಣ್ಣು ಬೇಕಾಗಿತ್ತು. ಎಷ್ಟು ಕ್ರಯ? ಎಂದು ವಿನಯವಾಗಿ ಕೇಳಿದೆ. ಆತ ನನ್ನನ್ನು ಕೆಕ್ಕರಿಸಿ ನೋಡುತ್ತಾ, ನಿನಗೆ ಎಷ್ಟು ಬೇಕು ಎಂದು ಸರಿಯಾಗಿ ತಮಿಳಿನಲ್ಲಿ ಹೇಳು..! ಎಂದು ಎತ್ತಲೋ ನೋಡತೊಡಗಿದ. ನನಗೆ ತಮಿಳು ಬರುವುದಿಲ್ಲ, ಮಹರಾಯಾ! ಎಂದು ಕನ್ನಡದಲ್ಲೇ ಉತ್ತರಿಸಿದೆ.

ಅದಕ್ಕೆ, ಆ ಗಾಡಿಯಾತ, ನಾನು ತಮಿಳುನಾಡಿನವನು. ಈ ಹಣ್ಣುಗಳು ಕೂಡಾ ತಮಿಳುನಾಡಿನಿಂದಲೇ ಬಂದವುಗಳು. ಬೇಕಾದರೆ ಕೊಳ್ಳು..! ಎಂದ. ನಾನು ಆತನಿಗೆ ಇಂದು ನಮ್ಮ ಕನ್ನಡ ರಾಜ್ಯೋತ್ಸವ..! ನನಗೆ ಕನ್ನಡ ರಾಜ್ಯದ ಬಾಳೆಹಣ್ಣೇ ಬೇಕು! ಎಂದು ಸಿಡಿಮಿಡಿಗೊಳ್ಳದೇ ಹೇಳಿದೆ. ಆತ ಅಸಡ್ಡೆಯಿಂದ ಪೋಯಾ..! ಎಂದ. ಇಪ್ಪತ್ತು ವರುಷಗಳ ಕೆಳಗೆ ನನಗೆ ಯಾರಾದರೂ ಹೀಗೆ ಮಾತನಾಡಿದ್ದರೆ, ಅವರ ಕಪಾಳ ಮೋಕ್ಷ ಮಾಡುತ್ತಿದ್ದೆ.                   ಹೇಗೋ ಸಾವರಿಸಿಕೊಂಡು ಮುಂದಕ್ಕೆ ಹೋಗುವಾಗ, ಇನ್ನೊಬ್ಬ ಬಾಳೆಹಣ್ಣು ಮಾರುವವನ ಗಾಡಿ ಸಿಕ್ಕಿತು. ಆತನಲ್ಲೂ ಬಾಳೆಹಣ್ಣಿನ ಕ್ರಯ ಕೇಳಿದೆ. ಆತನೂ ತಮಿಳಿನಲ್ಲಿ ಮಾತನಾಡು..! ಎಂದ. ನಾನು ತಲೆ ಆಡಿಸುತ್ತಾ ಮುನ್ನಡೆದೆ.

ಸರ್ವಜ್ಞನಗರದ ಗಣಪತಿ ದೇವಸ್ಥಾನದ ಮುಂದಿನ ಹೂವಿನ ಮಾರುಕಟ್ಟೆಗೆ ಹೋದೆ. ಹಲವಾರು ಮಹಿಳೆಯರು ಹೂ ಮಾರುತ್ತಿದ್ದರು. ಹೂ ಮಾರುವವರ ಸಾಲಿನಲ್ಲಿ ಮೊದಲು ಹೂ ಮಾರುತ್ತಿದ್ದ ಇಬ್ಬರು ಮಹಿಳೆಯರು ನನ್ನತ್ತ ತಿರುಗಿ ಎನ್ನಾ ವೇಣು? ಎಂದರು.