ಶ್ರೀವತ್ಸ ಜೋಶಿಯವರ ಅತ್ತೆಮಾವಂದಿರಾದ ಶ್ರೀ ಕೇ.ಸಿ. ಭಟ್ ದಂಪತಿಗಳ ಮನೆಗೆ ನಿನ್ನೆಯ ದಿನ ಸರೋಜಮ್ಮ ಮತ್ತು ನಾನು ಹೋಗಿದ್ದೆವು. ಕಳೆದ ತಿಂಗಳು ಇಪ್ಪತ್ತೊಂದನೇ ತಾರೀಕು ಶ್ರೀವತ್ಸ ಜೋಶಿಯವರ ಸಂಸಾರ ಅಮೇರಿಕೆಗೆ ಹೊರಟ ಮೇಲೆ ಅವರಲ್ಲಿಗೆ ನಾವು ಹೋಗಿರಲಿಲ್ಲ. ಈ ಹಿರಿಯ ದಂಪತಿಗಳನ್ನು ಒಂಟಿತನ ಕಾಡುತ್ತಿದೆ. ನಾವು ಅವರ ಮನೆಯಲ್ಲಿ ಸುಮಾರು ಎರಡು ಗಂಟೆಗಳನ್ನು ಕಳೆದೆವು.

ಮಾತುಕತೆ ಹೆಚ್ಚಾಗಿ ಅವರ ಮೊಮ್ಮಗ ಸೃಜನ ಜೋಶಿಯ ಸುತ್ತಮುತ್ತವೇ ತಿರುಗುತ್ತಿತ್ತು. ಶ್ರೀಮತಿ ಭಟ್ಟರು ನಮಗೆ ಹೂರಣದ ಹೋಳಿಗೆ ಬಡಿಸಿ ಉಪಚರಿಸಿದರು. ಇಂದು ಏನು ವಿಶೇಷ? ಎಂದು ಸರೋಜಮ್ಮ ಪ್ರಶ್ನಿಸಿದರು. ಅದಕ್ಕೆ ಶ್ರೀಮತಿ ಭಟ್ಟರು ಇಂದೇಕೋ ಹೋಳಿಗೆ ಮಾಡಬೇಕೆಂದು ಅನ್ನಿಸಿತು. ಹೋಳಿಗೆ ಮಾಡುತ್ತಿರುವಾಗ ಯಜಮಾನರೊಡನೆ ‘ಇಂದು ಯಾರೋ ನಮಗೆ ಬಹಳ ಇಷ್ಟವಾದ ಅತಿಥಿಗಳು ಬರುತ್ತಾರೆ ಅಂದಿದ್ದೆ. ಈಗ ನನ್ನ ಮಾತು ನಿಜವಾಯಿತು, ನೋಡಿ..! ಅಂದರು.

ಈ ಮಾತುಗಳನ್ನು ಕೇಳಿದಾಗ ಸ್ವರ್ಗಸ್ಥರಾದ ನನ್ನ ತಾಯಿಯ ನೆನಪಾಯಿತು. ಅವರು ಬದುಕಿದ್ದಾಗ ಇದೇ ತರಹ ಮಾತನಾಡುತ್ತಿದ್ದರು. ಇಂತಹಾ ಸಜ್ಜನಿಕೆ ಈಗಲೂ ಈ ಲೋಕದಲ್ಲಿ ಮುಂದುವರೆಯುತ್ತಿರುವ ಕಾರಣ ಸೂರ್ಯಚಂದ್ರರು ಸಮಯಕ್ಕೆ ಸರಿಯಾಗಿ ಮೂಡುತ್ತಿದ್ದಾರೆ! ಎನ್ನಿಸಿತು.

ಮಾತೃ ವಾತ್ಸಲ್ಯವು ಅಮರ.

ಈ ವಿಚಾರ ತಿಳಿಸುತ್ತಾ ಶ್ರೀಮತಿ ತ್ರಿವೇಣಿರಾವ್ ಅವರಿಗೆ ಈಮೈಲ್ ಕಳುಹಿಸಿದೆ. ಇಲ್ಲಿದೆ ನೋಡಿ, ೧೮/೦೯/೨೦೦೫ರಂದು ಶ್ರೀಮತಿ ತ್ರಿವೇಣಿಯವರು ಬರೆದ ಉತ್ತರ;

ಪೆಜತ್ತಾಯರೇ,

ಶ್ರೀ ಕೇ.ಸಿ. ಭಟ್ಟರ ಮನೆಯಲ್ಲಿ ನಿಮಗಾದ ಮಾತೃವಾತ್ಸಲ್ಯ ಅನುಭವ ಬಹಳ ಹೃದಯಸ್ಪರ್ಶಿಯೆನಿಸಿತು. ಪತ್ರ ಬರೆದು ಅದನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ತುಂಬ ಸಂತೋಷವಾಯಿತು. ನೀವು ಈಗಾಗಲೇ ಆ ದಂಪತಿಗಳ ಅತಿಥಿ ಸತ್ಕಾರ, ಸೌಜನ್ಯಪೂರ್ಣ ವರ್ತನೆಯ ಬಗ್ಗೆ ತಿಳಿಸಿದ್ದರಿಂದ ಇದೇನೂ ಹೊಸದು ಅನ್ನಿಸಲಿಲ್ಲ. ಇಂತಹ ಸಜ್ಜನರ ಸಹವಾಸದಲ್ಲಿರುವ ನೀವೇ ಧನ್ಯರು.

ಒಂದು ಗುಟ್ಟಿನ ಪ್ರಶ್ನೆ ; (ಸರೋಜಮ್ಮನವರಿಗೆ ಕೇಳಿಸದಂತೆ)- ನೀವು ಎಷ್ಟು ಹೋಳಿಗೆ ತಿಂದಿರಿ…?:-)

-ತ್ರಿವೇಣಿ

* * *