ನಮ್ಮದೊಂದು ಚಿಕ್ಕ ವಾಕಿಂಗ್‌ಕ್ಲಬ್ ಇದೆ. ಅದಕ್ಕೆ ಆರು ಜನರು ಮಾತ್ರ ಮೆಂಬರ್‌ಗಳು. ಶ್ರೀ ರಾಂಚಂದ್ ಬಜಾಜ್,-ಒಬ್ಬ ಹಿರಿಯ ಲ್ಯಾಂಡ್‌ಡೆವೆಲಪರ್ ಮತ್ತು ಲೇವಾದೇವಿಗಾರ(ಸಿಂಧಿ) ಕ್ಯಾಪ್ಟನ್ ರಾಮಕೃಷ್ಣನ್,-ಓರ್ವ ನಿವೃತ್ತ ಆರ್.ಬಿ.ಐ. ಅಧಿಕಾರಿ (ಮಲಬಾರ್ ಮೂಲದವರು) ಶ್ರೀಮತಿ ವಿನ್ನಿಫ್ರೆಡ್ ರಾಮಕೃಷ್ಣನ್,-(ಕ್ಯಾಪ್ಟನ್ ರಾಮಕೃಷ್ಣನ್ ಅವರ ಹೆಂಡತಿ) ನಿವೃತ್ತ ಆರ್.ಬಿ.ಐ. ಅಧಿಕಾರಿಣಿ, ಸಮಾಜ ಸೇವಾಕರ್ತೆ (ಆಂಗ್ಲೋ-ಇಂಡಿಯನ್). ಮೇಜರ್ ಸೇತುರಾಮನ್,-ಎಮ್.ಈ.ಜಿ.ಯ ನಿವೃತ್ತ ಎಂಜಿನೀಯರ್(ಮೈಸೂರು ಐಯ್ಯರ್) ಶ್ರೀ ಸತ್ಯನಾರಾಯಣನ್,-ನಿವೃತ್ತ ಸಿವಿಲ್ ಎಂಜಿನೀಯರ್ (ಮಲೆಯಾಳಿ) ಮಧುಸೂದನ್ ಪೆಜತ್ತಾಯ,-ಅಂದರೆ ನಾನು. (ಕರ್ನಾಟಕದ ವೃತ್ತಿಪರ ಕಾಫಿ ಬೇಸಾಯಗಾರ)

ನಮ್ಮ ಗುಂಪಿನವರು ಪ್ರತಿದಿನ ಬೆಂಗಳೂರಿನ ಹಳೆಯ ಕಂಟೋನ್ಮೆಂಟಿನ ಕೂಕ್‌ಟೌನ್ ಏರಿಯಾದ ಮಿಲ್ಟನ್ ಪಾರ್ಕ್‌ನಲ್ಲಿ ಸುಮಾರು ಒಂದು ಗಂಟೆಯ ಕಾಲ ವಾಕ್ ಮಾಡುತ್ತೇವೆ. ನಮ್ಮ ವಾಕಿಂಗ್‌ನಲ್ಲಿ ವಾಕಿಂಗ್ ಸೆಕೆಂಡರಿ ಆಗಿರುತ್ತೆ..! ಮುಖ್ಯವಾಗಿ ಮಾತು..! – ಅದು ನಮ್ಮ ಕುಶಲೋಪರಿ ನಂತರ, ಪಟ್ಟಣದ ಆಗು-ಹೋಗುಗಳು, ವಿಶೇಷವಾದ ಮನೋರಂಜನಾ ಕಾರ್ಯಕ್ರಮಗಳು, ನಗರದಲ್ಲಿ ನಡೆಯುವ ಡಿಸ್ಕೌಂಟ್ ಸೇಲ್‌ಗಳು, ಎಗ್ಜಿಬಿಶನ್‌ಗಳು, ಕ್ರಿಕೆಟ್, ಗಾಲ್ಫ್, ಸ್ವಲ್ಪಸ್ವಲ್ಪ ರಾಜಕಾರಣ, ಬೆಂಗಳೂರಿನ ವಿವಿಧ ಭಾಗಗಳ ವಸತಿ ಸೈಟುಗಳ ಮತ್ತು ಫ್ಲಾಟ್‌ಗಳ ಕ್ರಯ, ಒಳ್ಳೆಯ ಸಿನಿಮಾಗಳು ಯಾವುವು, ಒಳ್ಳೆಯ ರೆಸ್ಟುರಾಂಟ್‌ಗಳಾವುವು ಮತ್ತು ಅವುಗಳ ಟ್ಯಾರಿಫ್ ಹೇಗಿವೆ? ಮೊದಲಾದ ವಿಚಾರಗಳ ಬಗ್ಗೆ ನಮ್ಮ ಚರ್ಚೆ ವಿಷದವಾಗಿ ನಡೆಯುತ್ತದೆ. ಬೆಳಗಿನ ವಾಕ್ ಮುಗಿಸಿ ಮನೆಗೆ ಮರಳುವಾಗ ನಾವು ಈ ಎಲ್ಲ ವಿಚಾರಗಳಲ್ಲಿ ಅಂದಿನ ಮಟ್ಟಿಗೆ ಅಪ್-ಡೇಟ್ ಆಗಿರುತ್ತೇವೆ. ಈ ಕಾರಣಗಳಿಂದ, ನಾವು ನಮ್ಮ ಸಮಾಜದಲ್ಲಿ ತಿಳುವಳಿಕೆಯುಳ್ಳ ಸಿಟಿಜನ್ಸ್ ಆಫ್ ದ ಟೌನ್ ಎನ್ನಿಸಿಕೊಂಡಿದ್ದೇವೆ.

ನಮ್ಮ ವಾಕಿಂಗ್ ಗುಂಪು ಪಾರ್ಕಿನಲ್ಲಿ ನಗುನಗುತ್ತಾ, ಹರಟುತ್ತಾ ನಿಧಾನಗತಿಯಿಂದ ಸಾಗುತ್ತಿದ್ದರೆ, ದಿನಾ ಬೆಳಗ್ಗೆ ಬುಸುಗುಡುತ್ತಾ ಬ್ರಿಸ್ಕ್ ವಾಕ್ ಮಾಡುವ ನಮ್ಮ ಸಮಾನ ವಯಸ್ಸಿನ ಮಹನೀಯರು ಮತ್ತು ಮಹಿಳೆಯರು ನಮ್ಮನ್ನು ನೋಡಿ ಮುಗುಳ್ನಗು ಸೂಸುತ್ತಾ, ನಮ್ಮನ್ನು ಓವರ್ ಟೇಕ್ ಮಾಡಿ ಮುಂದಕ್ಕೆ ಸಾಗುತ್ತಾರೆ.

ನಮ್ಮ ವಾಕಿಂಗ್/ಟಾಕಿಂಗ್ ಸಮಯ ದಿನಾ ಬೆಳಗ್ಗೆ ಆರೂ ಮುಕ್ಕಾಲರಿಂದ ಎಂಟೂಕಾಲು ಗಂಟೆಯ ತನಕ. ನಾವು ವಾಕಿಂಗ್‌ಗೆ ವ್ಯಾಲಿಡ್ ರೀಸನ್ ಇಲ್ಲದೇ ತಪ್ಪಿಸಿಕೊಳ್ಳುವ ಹಾಗಿಲ್ಲ. ಕೆಲಸದ ಮೇಲೆ ಬೇರೆ ಊರುಗಳಿಗೆ ಹೋಗುವುದಿದ್ದರೆ ಹೊರಡುವುದಕ್ಕೆ ಮೊದಲೇ ಇತರರಿಗೆ ತಿಳಿಸಿ ಹೊರಡಬೇಕು. ಆಕಾಸ್ಮಾತ್, ಹೇಳದೆ ಗೈರುಹಾಜರಾದರೆ, ನಾವು ಪೆನಾಲ್ಟಿ ತೆರಬೆಕಾಗಿತ್ತೆ. ಪೆನಾಲ್ಟಿ ಏನೆಂದರೆ, ತಪ್ಪಿತಸ್ಥನು ಹಿಂತಿರುಗಿ ಬಂದ ಮೇಲೆ, ನಮ್ಮ ಪಕ್ಕದ ಬಡಾವಣೆಯಾದ ಕಾಕ್ಸ್‌ಟೌನ್‌ನ ಕೋಮಲಾ ರೆಸ್ಟೋರಂಟ್‌ನಲ್ಲಿ ಎಲ್ಲರಿಗೂ ಬೆಳಗಿನ ಉಪಹಾರ ಕೊಡಿಸಬೇಕು. ಈ ಉಪಹಾರ ಅಂತಹಾ ದೊಡ್ಡ ದುಬಾರಿ ವಿಚಾರವೇನಲ್ಲ. ತಲಾ ಒಂದೊಂದು ಇಡ್ಲಿ, ವಡಾ, ಮಸಾಲೆದೋಸೆ ಮತ್ತು ಒಂದು ಸಕ್ಕರೆ ಹಾಕದ ಕಾಫಿ ಅಷ್ಟೆ!. ಆದರೆ.., ಅದಕ್ಕೆ ಸಂಬಂಧಿಸಿದ ವಸೂಲಾತಿ ಕಾರ್ಯಕ್ರಮ, ಗೈರುಹಾಜರಾದವರ ಉರುಟಣೆ, ಲೇವಡಿ ಮತ್ತು ಉಪಹಾರದ ಪೂರ್ವನಿಯೋಜನೆ ಇವುಗಳಲ್ಲೇ ಎರಡುದಿನ ಕಳೆದುಹೋಗಿ, ಕೊನೆಗೆ ನಮ್ಮ ಪೆನಾಲ್ಟಿ ಕಾರ್ನರ್ ದಿನ ನಿಶ್ಚಯವಾಗುತ್ತವೆ.

ನಿಯತಕಾಲಿಕವಾಗಿ ನಮ್ಮ ಇನ್ನೊಂದು ಕಾರ್ಯಕ್ರಮ ಇದೆ. ಅದೇನೆಂದರೆ, ಪ್ರತೀ ತಿಂಗಳಿಗೆ ಒಬ್ಬ ಮೆಂಬರ್ ತನ್ನ ಕಾರು ತಂದು, ನಮ್ಮ ಗ್ರೂಪ್‌ನವರನ್ನು ಸಿಟಿಯ(ಅಂದರೆ ಕಾಕ್ಸ್‌ಟೌನ್, ಕೂಕ್‌ಟೌನ್, ಫ್ರೇಜರ್‌ಟೌನ್ ಇವುಗಳಿಂದ ದೂರದ) ಯಾವುದಾದರೂ ಒಳ್ಳೆಯ ರೆಸ್ಟೋರೆಂಟ್‌ನಲ್ಲಿ ಮೇಲೆ ಹೇಳಿದ ರೀತಿಯ ಉಪಹಾರ ಕೊಡಿಸಬೇಕು. ಈ ಕಾರ್ಯಕ್ರಮಗಳಿಗೆ ಶ್ರೀಮತಿ ವಿನ್ನಿ ರಾಮಕೃಷ್ಣನ್ ಹಾಜರಾಗುವುದಿಲ್ಲ. ಆಕೆಗೆ ಬೆಳಗಿನ ಹೊತ್ತು ತನ್ನ ಮನೆಯ ಕೆಲಸಗಳು ಇರುವುದರಿಂದ, ಅವರ ಪಾಲಿನ ಉಪಹಾರ ಕಟ್ಟಿಸಿ ತಂದುಕೊಡುತ್ತೇವೆ. ಹೀಗೆ ಮಾಡಲು ಇನ್ನೊಂದು ಕಾರಣ ಕೂಡಾ ಇದೆ, ಅದೇನೆಂದರೆ, ಒಂದು ಕಾರಿನಲ್ಲಿ ಐದು ಜನರಿಗಿಂತ ಹೆಚ್ಚು ಮಂದಿ ಪ್ರಯಾಣ ಮಾಡುವುದು ಕಷ್ಟವಾಗಿರುತ್ತೆ.., ಯಾಕೆಂದರೆ ನಾವು ಯಾರೂ ಕೃಶಕಾಯದವರಲ್ಲ.

ಅಪರೂಪಕ್ಕೊಮ್ಮೆ ಈ ಉಪಹಾರ ಕಾರ್ಯಕ್ರಮದಲ್ಲಿ ಒಂದು ಪ್ಲೇಟ್ ಕೇಸರಿಭಾತ್ ತರಿಸಿ, ಎಲ್ಲರೂ ಹಂಚಿಕೊಂಡು ತಿನ್ನುವುದೂ ಉಂಟು. ಹೀಗೆ ಹಂಚಿಕೊಳ್ಳುವುದಕ್ಕೆ ಕಾರಣ ಏನೆಂದರೆ – ನಮ್ಮ ಗ್ರೂಪಿನ ಎಲ್ಲರಿಗೂ ಸ್ವೀಟ್ ಪಥ್ಯ ಇದೆ..!

ಕೆಲವೂಮ್ಮೆ ಕ್ರಿಕೆಟ್‌ಮ್ಯಾಚ್, ಫುಟ್‌ಬಾಲ್‌ಮ್ಯಾಚ್ ಇವುಗಳ ಸಂದರ್ಭಗಳಲ್ಲಿ ನಮ್ಮೊಳಗೆ ಯಾರಾದರೂ ಬೆಟ್ ಕಟ್ಟಿ ಸೋತರೆ, ಅವರು ನಮ್ಮ ಕೋಮಲಾ ರೆಸ್ಟೋರಂಟ್‌ನಲ್ಲಿ ಒಂದು ಎಕ್ಸ್‌ಟ್ರಾ ರೌಂಡ್ ಉಪಹಾರ ಕೊಡಿಸಬೇಕಾಗುತ್ತೆ..! ಈ ತೊಂದರೆ ಇರುವುದು ಬೆಟ್ ಕಟ್ಟುವ ಅಭ್ಯಾಸವಿರುವ ಕ್ಯಾಪ್ಟನ್, ಮೇಜರ್ ಮತ್ತು ಬಜಾಜ್ ಇವರುಗಳಿಗೆ ಮಾತ್ರ. ಉಳಿದ ಮೂವರಾದ ನಮಗೆ ಬೆಟ್ ಕಟ್ಟುವ ಹವ್ಯಾಸವೇ ಇಲ್ಲ! ಆದರೆ, ಸೋತವರು ಕೊಡುವ ಉಪಹಾರಕ್ಕೆ ಮಾತ್ರ ನಾವು ಹಾಜರಾಗುತ್ತೇವೆ.

ಇಂದಿನ ಮಾಸಿಕ ಉಪಹಾರದ ಸರದಿ ನನ್ನದು. ಬೆಂಗಳೂರಿನಲ್ಲಿ ಪ್ರಖ್ಯಾತವಾದ ಗಾಂಧೀ ಬಜಾರಿನ ಉಪಹಾರ ದರ್ಶಿನಿಗೆ ನಾವು ಹೋಗುವ ತೀರ್ಮಾನವಾಯಿತು.             ಇದು ಬೆಂಗಳೂರಿನಲ್ಲೇ ಮೊಟ್ಟ ಮೊದಲು ಶುರುವಾದ, ದರ್ಶಿನಿ ರೆಸ್ಟೋರೆಂಟ್. ದರ್ಶಿನಿ ಎಂಬ ಹೊಸ ಆಯಾಮದ ರೆಸ್ಟೋರೆಂಟ್‌ಗಳಿಗೆ ಇದು ಮೊದಲಿಗ. ಇಂದಿಗೂ ಇದನ್ನು ಬೀಟ್ ಮಾಡುವ ದರ್ಶಿನಿ ಬೆಂಗಳೂರಲ್ಲಿ ಇಲ್ಲ. ರುಚಿ, ಶುಚಿ ಮತ್ತು ಪೈಪೋಟಿಯ ಸೋವಿ ರೇಟಿಗೆ ಈ ದರ್ಶಿನಿ ಇಂದಿಗೂ ಹೆಸರಾಗಿದೆ. ಇವತ್ತಿಗೆ ಕೂಡಾ ಒಂದು ಪಿಂಗಾಣಿ ಕಪ್ ತುಂಬಾ ಘಮಘಮಿಸುವ ಡಿಕಾಕ್ಷನ್ ಕಾಫಿಗೆ ಇಲ್ಲಿ ಬರೇ ಮೂರು ರೂಪಾಯಿ..! ಈ ಉಪಹಾರ ಮಂದಿರದ ತಿಂಡಿಯ ದರಗಳು ಅದೆಷ್ಟು ಆಕರ್ಷಕವಾಗಿವೆ ಎಂದರೆ ಈ ದರದಲ್ಲಿ ಅವರು ಕೊಡುವ ತಿಂಡಿಗಳನ್ನು ನಮ್ಮ ಮನೆಗಳಲ್ಲಿ ಕೂಡಾ ತಯಾರಿಸುವುದು ಸಾಧ್ಯವಿಲ್ಲವಂತೆ! ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಬಿಸಿ ಇರುವಾಗಲೇ ಬಡಿಸುವುದರಿಂದ ಈ ದರ್ಶಿನಿಗೆ ಗ್ರಾಹಕರು ಮುಗಿದು ಬೀಳುತ್ತಾರೆ. ಈ ದರ್ಶಿನಿಯ ವ್ಯಾಪಾರದ ಟರ್ನ್‌ಓವರ್ ದೊಡ್ಡದಾಗಿ ಇರುವುದರಿಂದ ಅಷ್ಟು ಕಡಿಮೆ ದರದಲ್ಲಿ ಉಪಹಾರ ಕೊಡಲು ಅವರಿಗೆ ಸಾಧ್ಯವಾಗುತ್ತಿದೆಯಂತೆ. ಇಲ್ಲಿ ಸ್ವಸಹಾಯ ಪದ್ಧತಿ ಚಾಲ್ತಿಯಲ್ಲಿರುವುದರಿಂದ, ಅವರಿಗೆ ಸರ್ವರುಗಳ ಸಂಬಳ ಉಳಿತಾಯವಾಗುತ್ತದೆ.

ಈ ದರ್ಶಿನಿಯ ವಿಸ್ತಾರ ಕೂಡಾ ಅತಿಚಿಕ್ಕದು. ಇಲ್ಲಿರಿಸಿರುವ ಎತ್ತರದ ಎರಡು ರೌಂಡ್ ಟೇಬಲ್‌ಗಳನ್ನು ಕೆಲವು ಮಂದಿ ಗ್ರಾಹಕರು ನಿಂತು ಉಪಹಾರ ಮಾಡಲು ಬಳಸಿದರೆ, ಉಳಿದ ಗ್ರಾಹಕರು ಎಲ್ಲಾದರೂ ಆ ಇಕ್ಕಟ್ಟಿನ ಉಪಹಾರ ಗೃಹದ ಒಳಗೆ, ಇಲ್ಲವೇ ಆ ಉಪಹಾರ ದರ್ಶಿನಿಯ ಹೊರಗಣ ಬೀದಿಬದಿಯ ಜಾಗದಲ್ಲಿ ನಿಂತುಕೊಂಡು ತಮ್ಮ ಉಪಹಾರವನ್ನು ಸೇವಿಸುತ್ತಾರೆ.

ಸಾಯಂಕಾಲದ ಹೊತ್ತು ಆಸುಪಾಸಿನಲ್ಲಿ ವಾಸಿಸುವ ಗೃಹಿಣಿಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಇಲ್ಲಿ ಉಪಹಾರ ಮಾಡಿಸುವುದು ಸಾಮಾನ್ಯ ದೃಶ್ಯ. ಆ ಮಹಿಳೆಯರನ್ನು ಹೀಗೇಕೆ? ಎಂದು ವಿಚಾರಿಸಿದರೆ, ಇಷ್ಟು ವೈವಿಧ್ಯದ ತಿಂಡಿಗಳನ್ನು ಶುಚಿರುಚಿ ಮತ್ತು ಆರೋಗ್ಯಕರವಾಗಿ ಮನೆಯಲ್ಲಿ ತಯಾರಿಸಲು ದುಬಾರಿ ಖರ್ಚಾಗುವುದು, ಆದರಿಂದ ಮಕ್ಕಳನ್ನು ಇಲ್ಲಿಗೇ ಕರೆದುಕೊಂಡು ಬಂದು, ಅವರಿಗೆ ಇಷ್ಟವಾದ ತಿಂಡಿಗಳನ್ನು ಇಲ್ಲಿಯೇ ಕೊಡಿಸುತ್ತೇವೆ. ಪ್ರತೀ ತಿಂಡಿಯನ್ನೂ ನಮ್ಮ ಮುಂದೆಯೇ ತಯಾರುಮಾಡಿ ಇಲ್ಲಿ ಬಡಿಸುತ್ತಾರೆ. ಇಲ್ಲಿಯ ತಿಂಡಿಗಳು ಮನೆಯ ತಿಂಡಿಗಳಷ್ಟೇ ಆರೋಗ್ಯಕರ! ಎನ್ನುತ್ತಾರೆ. ಬಹಳಷ್ಟು ಜನ ಆಫೀಸ್‌ಗಳಿಗೆ ಹೋಗುವ ಯುವಕ ಯುವತಿಯರು ತಮ್ಮ ಮಧ್ಯಾಹ್ನದ ಲಂಚ್ ಈ ದರ್ಶಿನಿಯಿಂದ ಕಟ್ಟಿಸಿಕೊಂಡು ಹೋಗುತ್ತಾರೆ. ಇವರಿಗಾಗಿಯೇ ಬೆಳಗಿನ ಹೊತ್ತು, ಘೀರೈಸ್, ಪೊಂಗಲ್, ಬಿಸಿಬೇಳೆಭಾತ್ ಮುಂತಾದ ಯಾವುದಾದರೂ ಒಂದು ರೈಸ್ ಐಟಮ್ ಒಂದನ್ನು ಈ ದರ್ಶಿನಿ ತಯಾರಿಸಿರುತ್ತದೆ. ಇಲ್ಲಿಯ ಮಸಾಲೆದೋಸೆ, ಮಲೆನಾಡಿನ ಕಡುಬು, ಶಾವಿಗೆಭಾತ್, ಸೆಟ್‌ದೋಸೆಗೆ ಜನ ಮುಗಿದುಬೀಳುತ್ತಾರೆ. ಇಲ್ಲಿ ಸದಾ ಕಾಲ ಹೇಳತೀರದ ರಶ್ ಇರುತ್ತೆ. ನಿಂತುಕೊಂಡು ತಿನ್ನಲು ಕೂಡಾ ಜಾಗ ಸಿಗುವುದು ಕಷ್ಟ!

ಇಲ್ಲಿ ‘ರಶ್ ಎಷ್ಟು ಇರುತ್ತೆಂದರೆ, ಈ ‘ರಶ್ನಲ್ಲಿ ನಮ್ಮ ಕೈತುತ್ತು ನಮ್ಮ ಬಾಯಿಗೇ ಹೋಗುತ್ತೆ ಎಂಬ ಗ್ಯಾರೆಂಟಿ ಇಲ್ಲ! ಎಂದು ಒಬ್ಬ ಮಾಮೂಲಿ ಗ್ರಾಹಕರು ನಮ್ಮೊಂದಿಗೆ ಜೋಕ್ ಮಾಡಿದರು.

ನಾವು ಇಂದು ಮುಂಜಾನೆ ಇಡ್ಲಿ-ವಡೆ ಮತ್ತು ಸೆಟ್‌ದೋಸೆ ತಿಂದು ಕಾಫಿಕುಡಿದೆವು. ಐದುಜನರ ಬಿಲ್ಲು ಕೇವಲ ತೊಂಬತ್ತಾರು ರೂಪಾಯಿ ಮಾತ್ರ! ಕೆಲವು ದುಬಾರಿ ಉಪಹಾರ ಗೃಹಗಳಲ್ಲಿ ಇಷ್ಟಕ್ಕೇ ರೂಪಾಯಿ ನಾಲ್ಕು ನೂರರರ ತನಕ ನಾವು ಕೊಟ್ಟಿದ್ದೂ ಇದೆ. ಇಲ್ಲಿನ ಉಪಹಾರದ ರುಚಿ ಬೇರಾವ ಉಪಹಾರ ಗೃಹದಲ್ಲಿಯೂ ನಾವು ಕಂಡಿಲ್ಲ. ತಿಂಡಿಯ ರುಚಿಯನ್ನು ಹೊಗಳುತ್ತಾ ಶ್ರೀಮತಿ ವಿನ್‌ಫ್ರೆಡ್ ರಾಮಕೃಷ್ಣರಿಗೆ ಉಪಹಾರ ಕಟ್ಟಿಸಿಕೊಂಡು ವಾಪಸಾದೆವು. ಪ್ರತಿಯೊಬ್ಬರಿಗೂ ಈ ದಿನ ಬೆಳಗಿನ ಉಪಹಾರಕ್ಕಾಗಿ ನಾವು ಹದಿನಾಲ್ಕು ಕಿ.ಮೀ. ಕ್ರಮಿಸಿದುದು ‘ವರ್ಥ್ ಇಟ್! ಅನ್ನಿಸಿತು.

***

(ತಾರೀಖು : 13-5-2004)

* * *