ತಪ್ಪೊಪ್ಪಿಕೊಂಡಾಗ ಮನಸ್ಸು ಹಗುರ ಎನಿಸುತ್ತದೆ. ಮನುಷ್ಯನಾಗಿ ಹುಟ್ಟಿದ ಮೇಲೆ ತಪ್ಪುಗಳನ್ನು ಎಸಗುವುದು ಸಹಜ. ದೊಡ್ಡ ದೊಡ್ಡ ತಪ್ಪುಗಳನ್ನು ಮಾಡಿದಾಗ ನ್ಯಾಯಾಲಯದಲ್ಲಿ ಆ ತಪ್ಪಿಗೆ ತಕ್ಕ ಶಿಕ್ಷೆಗಳು ಸಿಗುತ್ತವೆ. ಮನುಷ್ಯ ಎಸಗುವ ಚಿಕ್ಕಚಿಕ್ಕ ತಪ್ಪುಗಳಿಗೆ ಪಶ್ಚಾತ್ತಾಪವೇ ಪರಿಹಾರ. ಈ ರೀತಿಯ ಪಶ್ಚಾತ್ತಾಪ ಮತ್ತು ದೇವರ ಕ್ಷಮೆ ಬೇಡುವ ವಿಧಿಗಳನ್ನು ಎಲ್ಲಾ ಧರ್ಮಗಳೂ ಸಮರ್ಥಿಸುತ್ತವೆ. ಹಲವು ಸಲ ಬರೇ ಪಶ್ಚಾತ್ತಾಪ ಪಡುವುದರಿಂದಲೇ ಮನಸ್ಸಿಗೆ ಸಮಾಧಾನ ಸಿಕ್ಕುವುದಿಲ್ಲ. ತಾನು ಮಾಡಿದ ಪುಟ್ಟ ತಪ್ಪನ್ನು ಯಾರೊಡನಾದರೂ ಹೇಳಿಕೊಂಡು, ಅದಕ್ಕೆ ನಾನು ಪಶ್ಚಾತ್ತಾಪ ಪಟ್ಟಿದ್ದೇನೆ ಅಂದರೆ ಮಾತ್ರ ಕೆಲವರ ಮನಸ್ಸಿಗೆ ಸಮಾಧಾನ. ಆ ಪೈಕಿ ನಾನೂ ಒಬ್ಬ.

ಕ್ರೈಸ್ಥಧರ್ಮದಲ್ಲಿ ಇದಕ್ಕೆ ಕನ್ಫೆಶನ್ ಎನ್ನುತ್ತಾರೆ. ಇದು ಆಯಾ ವಲಯದ ಧರ್ಮಗುರುವಿನ ಸಮ್ಮುಖದಲ್ಲಿ ನಡೆಯುತ್ತದೆ. ಎಷ್ಟೇ ಪುಟ್ಟ ತಪ್ಪಾಗಲೀ, ಅದನ್ನು ಒಪ್ಪಿಕೊಂಡು, ಪಶ್ಚಾತ್ತಾಪವನ್ನು ಧರ್ಮಗುರುಗಳ ಎದುರು ವ್ಯಕ್ತಪಡಿಸಿ, ದೇವರ ಕ್ಷಮೆಯನ್ನು ಬೇಡಲು ತಪ್ಪುಮಾಡಿದವರಿಗೆ ಅಪಾರವಾದ ಮನಸ್ಥೈರ್ಯ ಬೇಕಾಗುತ್ತದೆ. ಈ ಉತ್ತಮ ಧರ್ಮಪದ್ಧತಿಯು ಉದಾತ್ತ ವ್ಯಕ್ತಿತ್ವ ಬೆಳೆಸಲು ಸಹಾಯಕವಾಗುತ್ತದೆ.

ಅದೇರೀತಿ ನಮ್ಮ ಹಿಂದೂ ಧರ್ಮದಲ್ಲಿ ಕೂಡಾ ದೈನಂದಿನ ಜಪಕಾರ್ಯದಲ್ಲಿ ತಾನು ಕಾಯಾ, ವಾಚಾ, ಮನಸಾ ತಿಳಿದೋ, ತಿಳಿಯದೆಯೋ, ಎಸಗಿದ ತಪ್ಪುಗಳಿಗೆ ಆ ಕರುಣಾಮಯಿ ಭಗವಂತನ ಕ್ಷಮೆಬೇಡುವ ವಿಧಿ ಇದೆ. ಇದನ್ನು ನಾವು ಪ್ರತಿನಿತ್ಯವೂ ಮಾಡಬೇಕೆನ್ನುವ ಪದ್ಧತಿಯೂ ಇದೆ. ಆದರೆ, ಸ್ವಬುದ್ಧಿಯುಳ್ಳ ಮನುಷ್ಯನು ತಾನುಮಾಡುವ ತಪ್ಪುಗಳ ಅರಿವಿದ್ದರೂ, ಪುನಃ ಅವನ್ನು ಮಾಡಿ, ಪ್ರತಿನಿತ್ಯ ತಪ್ಪು, ಒಪ್ಪು ಮತ್ತು ಕ್ಷಮಾಯಾಚನೆ ಇವನ್ನು ಮಾಡಿದರೆ, ಆ ಅಪರಾಧಗಳು ಖಂಡಿತವಾಗಿ ಕ್ಷಮಿಸಲ್ಪಡುವುದಿಲ್ಲ. ಈಗ ನಾನು ಇಂದು ಮಾಡಿದ ಅಪರಾಧದ ಬಗ್ಗೆ ನಿಮಗೆ ಸ್ವಲ್ಪ ಹೇಳುತ್ತೇನೆ.

ನಾನೊಬ್ಬ ಸಕ್ಕರೆಕಾಯಿಲೆಯ ವ್ಯಕ್ತಿ. ಇಂದು ಸಿಹಿ ತಿನ್ನುವ ಆಸೆ ತಡೆಯಲಾರದೆ, ನಮ್ಮ ಮನೆಯ ಫ್ರಿಡ್ಜ್‌ನಿಂದ ಎರಡು ತುಂಡು ಸಿಹಿತಿಂಡಿ ತೆಗೆದು ತಿಂದಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಈ ವಿಚಾರ ಹೇಳಿದರೆ, ಅವರು ನನ್ನನ್ನು ಸ್ವಲ್ಪ ಗದರಿ ನಿಮಗೆ ಆರೋಗ್ಯದ ಬಗ್ಗೆ ಕಾಳಜಿಯಿಲ್ಲ ಎನ್ನುತ್ತಾರೆ.

ನಾನು ಈ ಸಂಗತಿಯನ್ನು ನನ್ನಂತೆ ಸಕ್ಕರೆ ಕಾಯಿಲೆಯ ಮಿತ್ರರೊಬ್ಬರಿಗೆ ತಿಳಿಸಿ, ನನ್ನ ಪಶ್ಚಾತ್ತಾಪ ವ್ಯಕ್ತಪಡಿಸಿದೆ. ಅದಕ್ಕವರು ಪೆಜತ್ತಾಯರೇ, ನಾನು ಕೂಡಾ ನಿಮ್ಮಂತೆಯೇ ಈ ರೀತಿಯ ತಪ್ಪುಗಳನ್ನು ಆಗಾಗ ಮಾಡುತ್ತಿರುತ್ತೇನೆ. ನನ್ನ ಪ್ರಕಾರ ಇದೊಂದು ದೊಡ್ಡ ಅಪರಾಧವಲ್ಲ! ಎಂದರು.

ಮನುಷ್ಯ ಬದುಕಿರುವ ತನಕ ಈ ರೀತಿ ಜಿಹ್ವಾ ಚಾಪಲ್ಯದಿಂದ ಸಿಹಿತಿಂಡಿ ಎಗರಿಸಿ ತಿನ್ನುವುದು ಅಪರಾಧವಲ್ಲವೇ? ಎಂದು ನಾನೇ ನನ್ನನ್ನು ಕೇಳಿಕೊಳ್ಳುತ್ತೇನೆ. ಇದಕ್ಕೆ ನನ್ನ ಮನಸ್ಸು ಈ ತೀರ್ಮಾನ ಹೇಳಿತು. ನೀನು ಮಾಡಿದ ಈ ಅಪರಾಧವು ನಿಜವಾಗಿಯೂ ಒಂದು ಅಪರಾಧ! ಇದಕ್ಕೆ ಶಿಕ್ಷೆ ಕೂಡಾ ಖಂಡಿತವಾಗಿ ಸಿಗುತ್ತೆ. ನಿನ್ನ ಕಾಯಿಲೆಯ ಮೇಲೆ ನಿನಗೆ ಬೇಗ ನಿಯಂತ್ರಣ ಸಿಕ್ಕುವುದಿಲ್ಲ. ಇದುವೇ ನಿನಗೆ ಸಿಗತಕ್ಕ ಶಿಕ್ಷೆ!

ಜಿಹ್ವಾ ಚಾಪಲ್ಯದಿಂದ ಮಾಡಿದ ಈ ಚಿಕ್ಕತಪ್ಪಿಗೆ, ಸರಿಯಾದ ಶಿಕ್ಷೆಯನ್ನು ಒಬ್ಬ ಸಕ್ಕರೆ ಕಾಯಿಲೆಯ ರೋಗಿ ಪಡೆದೇ ತೀರಬೇಕು!. ಇದೇ ನನಗೆ ಇಂದಿನ ತಪ್ಪೊಪ್ಪಿಗೆಯಲ್ಲಿ ಸಿಕ್ಕಿದ ಉತ್ತರ.

* * *