ನಾನು ಹೇಳುತ್ತಿರುವ ಚರಿತ್ರೆ ಸುಮಾರು ಒಂದು ಶತಮಾನದ ಹಿಂದಿನ ಕಥೆ ಇರಬಹುದು. ಕಳಸದ ಊರಿನಲ್ಲಿ ರಾಜಾ ರಂಗ ಹೆಬ್ಬಾರರು ಎಂಬ ಒಬ್ಬ ಗಣ್ಯವ್ಯಕ್ತಿ ಇದ್ದರಂತೆ. ಅವರ ಭಾವಚಿತ್ರ ನನ್ನಲ್ಲಿ ಇದೆ. ಅವರು ಸುಮಾರು ಆರೂವರೆ ಅಡಿ ಎತ್ತರದ ಗೌರವರ್ಣದ ಆಜಾನುಬಾಹು ಆಳು. ಅವರನ್ನು ಕಂಡ ವ್ಯಕ್ತಿಗಳಾರೂ ಈಗ ಜೀವಿಸಿಲ್ಲ. ಒಂದು ಲೆಕ್ಕದಲ್ಲಿ ನೋಡಿದರೆ, ಈ ಬರಹಕ್ಕೆ ಆಧಾರವಾಗಿ ಇರುವುದು, ಇಂದು ಅವರ ಬಗ್ಗೆ ನಮ್ಮೂರಿನ ಜನರು ಇಂದಿಗೂ ಆಡುವ ಬಾಯಿಮಾತಿನ ಕತೆಗಳು ಮಾತ್ರ. ಅವರ ಬಗ್ಗೆ ನನ್ನ ಪೂಜ್ಯ ಅತ್ತೆಯವರು ಇಪ್ಪತ್ತು ವರ್ಷಗಳ ಹಿಂದೆ ಹೇಳಿದ ವಿಚಾರಗಳನ್ನು ಇಲ್ಲಿ ಉದ್ಧರಿಸಿ ಬರೆಯುತ್ತಿದ್ದೇನೆ.

ಶ್ರೀ ರಂಗ ಹೆಬ್ಬಾರರು ನನ್ನ ಮಾವನವರಾದ ದಿವಂಗತ ರಘುಪತಿ ಹೆಬ್ಬಾರರಿಗೆ ತಂದೆಯ ಕಡೆಯ ಸಂಬಂಧದಿಂದ ದೊಡ್ಡ ಅಜ್ಜ ಅನ್ನಿಸಿದ್ದರಂತೆ. ಶ್ರೀ ರಂಗ ಹೆಬ್ಬಾರರು ಆ ಕಾಲದಲ್ಲೇ ವಿದ್ಯಾವಂತ ಎನ್ನಿಸಿಕೊಂಡಿದ್ದರಂತೆ. ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯವಿತ್ತಂತೆ. ಅವರ ಪತ್ನಿಗೆ ಕೂಡಾ ಇಂಗ್ಲೀಷ್ ಭಾಷೆಯಲ್ಲಿ ಓದಿ ಬರೆಯಲು ಮತ್ತು ಸಮರ್ಥವಾಗಿ ಮಾತನಾಡಲು ಬರುತ್ತಿತ್ತಂತೆ.

ಶ್ರೀ ರಂಗ ಹೆಬ್ಬಾರರು ಕಳಸದ ಊರಿನ ಗಣ್ಯವ್ಯಕ್ತಿ. ವರುಷಕ್ಕೆ ಆ ಕಾಲದಲ್ಲಿ ಅಂದಾಜಿನಲ್ಲಿ ಇಪ್ಪತ್ತೈದು ಸಾವಿರ ಎಕರೆಗಳಿಗೆ ಕಂದಾಯ ಕಟ್ಟುತ್ತಿದ್ದ ವ್ಯಕ್ತಿಯಂತೆ. ಕಳಸದ ನಾಡಿನ ಮೇರ್ತಿಕಾನು, ಮಲ್ಲೇಶನಗುಡ್ಡ, ಕಲ್ಮುಡಿ, ಜಕ್ಕಾನು, ಕಚ್ಚಿನ ಹಕ್ಕಲು ಮೊದಲಾದ ಜಾಗಗಳಲ್ಲಿ ಅವರು ಕಾಫಿ ತೋಟ ಮಾಡಿದ್ದರಂತೆ. ಅವರ ಕಾಲದಲ್ಲಿ ಮೈಸೂರು ಮಹಾರಾಜರು ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ, ಶೃಂಗೇರಿ ಮತ್ತು ಕಳಸದ ಸೀಮೆಗೆ ಸರ್ಕೀಟುಬಂದಾಗ,  ಅಂಬಿನ ಕುಡಿಗೆ ಎಂಬಲ್ಲಿ ಶ್ರೀ ರಂಗ ಹೆಬ್ಬಾರರು ವಾಸುತ್ತಿದ್ದ ಬಂಗಲೆಗೆ ಬಂದು ಮೊಕ್ಕಾಮ್ ಹೂಡುತ್ತಿದ್ದರಂತೆ. ಅಂಬಿನ ಕುಡಿಗೆ ಎಂಬ ಜಾಗದಲ್ಲಿ ಭದ್ರಾನದಿಯ ಕಣಿವೆಯಲ್ಲಿ, ಭದ್ರಾನದಿಯ ಪಕ್ಕದಲ್ಲಿ ಇದ್ದ ಒಂದು ದಿಬ್ಬದ ಮೇಲೆ ಶ್ರೀ ರಂಗ ಹೆಬ್ಬಾರರ ಭಾರೀ ಬಂಗಲೆ ಇತ್ತಂತೆ. ಈ ದೊಡ್ಡ ಬಂಗಲೆಯ ತನಕ ಸಾರೋಟು ಓಡುವ ದಾರಿ ಇತ್ತಂತೆ. ಮನೆಯ ಮೇಲ್ಗಡೆಯ ರಸ್ತೆಯಲ್ಲಿ ಬಂದರೆ, ಅವರ ಸ್ಟುಡೆಬೇಕರ್ ಕಂಪನಿಯಲ್ಲಿ ತಯಾರಾದ ಜೋಡಿ ಕುದುರೆಯ ವಿಲಾಯತೀ ಸಾರೋಟು ನೇರವಾಗಿ ಮನೆಯ ಉಪ್ಪರಿಗೆಯ ತಾರಸಿಗೆ ಬಂದುನಿಲ್ಲುವ ಏರ್ಪಾಡು ಇದ್ದಿತ್ತಂತೆ. ಅವರ ಬಂಗಲೆಗೆ ಸರಿಕಟ್ಟುವ ಇನ್ನೊಂದು ಬಂಗಲೆ ಚಿಕ್ಕಮಗಳೂರು ಜಿಲ್ಲೆಯಲ್ಲೇ (ಆಗಿನ ಕೊಪ್ಪ ಕಡೂರು ಜಿಲ್ಲೆ) ಇರಲಿಲ್ಲವಂತೆ.

ಶ್ರೀ ರಂಗ ಹೆಬ್ಬಾರರ ಮನೆಯಲ್ಲಿ ಅಷ್ಟೈಶ್ವರ್ಯಗಳು ತುಂಬಿ ತುಳುಕುತ್ತಾ ಇದ್ದುವಂತೆ. ಸಾಕ್ಷಾತ್ ಮೈಸೂರಿನ ಮಹಾರಾಜರೇ ಅವರ ಅತಿಥಿಯಾಗಿ ಉಳಿಯುತ್ತಿದ್ದ ಆ ಕಾಲದಲ್ಲಿ, ಕಳಸದ ಸೀಮೆಗೆ ಬರುವ ಎಲ್ಲಾ ಪ್ರಮುಖ ವ್ಯಕ್ತಿಗಳೂ ಬಂದು, ಅವರನ್ನು ಕಂಡು ಗೌರವ ಸಲ್ಲಿಸಿ, ಅವರ ಆತಿಥ್ಯ ಮತ್ತು ಉಪಚಾರ ಪಡೆದು ಹೋಗುತ್ತಿದ್ದರಂತೆ. ಶ್ರೀ ರಂಗ ಹೆಬ್ಬಾರರಿಗೆ ಕಾಫಿಯ ಜಮೀನುಗಳು ಅಲ್ಲದೇ ಅಸಂಖ್ಯ ಅಡಿಕೆಯ ತೋಟಗಳು ಮತ್ತು ಭತ್ತದ ಗದ್ದೆಗಳು ಇದ್ದುವಂತೆ. ಅವುಗಳಲ್ಲಿ ಮುಖ್ಯವಾದ ಅಡಿಕೆತೋಟಗಳನ್ನು ಮತ್ತು ಗದ್ದೆಗಳನ್ನು ತಾನೇ ಆಳು ಇರಿಸಿ ಸ್ವಂತ ಸಾಗುವಳಿ ಮಾಡಿಸುತ್ತಿದ್ದರಂತೆ. ಉಳಿದ ಅಸ್ತಿಯನ್ನು ಗೇಣಿದಾರರಿಗೆ ನೀಡಿ, ಗೇಣಿ ಒಕ್ಕಲುಗಳ ಮೂಲಕ ಸಾಗು ಮಾಡಿಸುತ್ತಿದ್ದರಂತೆ. ಶ್ರೀ ರಂಗ ಹೆಬ್ಬಾರರ ಹತ್ತಿರ ಖಾಯಂ ಕೆಲಸಗಾರರ ಒಂದು ದೊಡ್ಡ ದಂಡೇ ಇತ್ತಂತೆ. ಇವರಲ್ಲದೆ ಅಸಂಖ್ಯ ಗೇಣಿದಾರ ಒಕ್ಕಲುಗಳ ಸಮೂಹ ಅವರು ಕರೆದಾಗ ಬಂದು, ಅವರ ಕೆಲಸ ಬೊಗಸೆಗಳಲ್ಲಿ ನೆರವಾಗುತ್ತಿದ್ದರಂತೆ. ಶ್ರೀ ರಂಗ ಹೆಬ್ಬಾರರು ಎಷ್ಟು ಶ್ರೀಮಂತರೋ ಅಷ್ಟೇ ವಿನಯವಂತರು ಎಂದು ಹೆಸರು ಗಳಿಸಿ ಕೊಂಡಿದ್ದರಂತೆ. ಬಡಬಗ್ಗರಿಗೆ ಕೈಲಾದ ಸಹಾಯಮಾಡಿ, ಕಾಪಾಡುವ ದೊಡ್ಡಗುಣ ಅವರಲ್ಲಿತ್ತಂತೆ. ಊರಿನ ದೇವಸ್ಥಾನಗಳಲ್ಲಿ ನಿಯಮಿತವಾಗಿ ಪ್ರತಿವರ್ಷ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದ ಧರ್ಮಾತ್ಮರು ಎಂದು ಕೂಡಾ ಅನ್ನಿಸಿಕೊಂಡಿದ್ದರಂತೆ. ಅಷ್ಟು ಶ್ರೀಮಂತರಾದರೂ, ಸದಾ ಏನಾದರೂ ಕೆಲಸದಲ್ಲಿ ತಲ್ಲೀನರಾಗಿದ್ದು, ಸಮಯ ಸಿಕ್ಕಾಗ ಮನೆಯ ಕೆಲಸಗಳು ಮತ್ತು ತೋಟದ ಕೆಲಸಗಳಿಗೆ ಕೈಜೋಡಿಸುತ್ತಿದ್ದರಂತೆ.

ಒಂದುದಿನ ಮನೆಯ ಪಡಸಾಲೆಯಲ್ಲಿ ಕುಳಿತು ಮೆಟ್ಟುಕತ್ತಿಯಿಂದ ಕೆಸುವಿನ ದಂಟು ಹೆಚ್ಚುತ್ತಾ, ತನ್ನ ಮಡದಿಗೆ ಅಂದಿನ ಅಡುಗೆಯಲ್ಲಿ ಸಹಾಯಮಾಡುತ್ತಾ ಇದ್ದರಂತೆ. ಅದೇ ಸಮಯದಲ್ಲಿ ಮೈಸೂರು ಮಹಾರಾಜರ ಪಡೆಯ ರಾವುತನೊಬ್ಬ ಬಂದು ಮೈಸೂರು ಮಹಾರಾಜರ ಸವಾರಿ ಚಿತ್ತೈಸುತ್ತಿದೆ! ಶ್ರೀಮಾನ್ ಸಾಹುಕಾರ್ ರಂಗ ಹೆಬ್ಬಾರರು ಮನೆಯಲ್ಲಿ ಇದ್ದಾರೆಯೇ? ಈ ವಿಚಾರ ಅವರಿಗೆ ಮುಂಚಿತವಾಗಿ ತಿಳಿಸಲು ರಾವುತನಾದ ನನ್ನನ್ನು ಮುಂದೆ ಕಳುಹಿಸಿದ್ದಾರೆ ಎಂದು ಸಾದಾ ಉಡುಪಿನಲ್ಲಿದ್ದ ಅವರೊಡನೆಯೇ ಹೇಳಿದನಂತೆ. ಸಾದಾ ದಿರಿಸು ತೊಟ್ಟಿದ್ದ ಶ್ರೀ ರಂಗ ಹೆಬ್ಬಾರರನ್ನು ಆ ರಾವುತನು ಗುರುತಿಸಲಿಲ್ಲವಂತೆ!

ಶ್ರೀ ರಂಗ ಹೆಬ್ಬಾರರು ಸಾಹುಕಾರರಿಗೆ ತಿಳಿಸುತ್ತೇನೆ! ಅವರು ಮಹಾರಾಜರನ್ನು ಎದುರುಗೊಳ್ಳಲು ಎರಡು ಮೈಲಿ ದೂರದ ಮುಖ್ಯರಸ್ತೆಯ ಬಳಿಗೆ ಬರುತ್ತಾರೆ ಎಂದು ತಿಳಿಸು! ಎನ್ನುತ್ತಾ, ಲಗುಬಗೆಯಿಂದ ತಮ್ಮ ಉಪ್ಪರಿಗೆಯ ಕೋಣೆಗೆ ಧಾವಿಸಿ, ಜರಿಪೇಟ ಮತ್ತು ಕೋಟು ಧರಿಸಿ, ಪರಿವಾರದವರನ್ನು ಕರೆದುಕೊಂಡು, ಮಹಾರಾಜರನ್ನು ಸಕಲ ಮರ್ಯಾದೆಗಳೊಡನೆ ಇದಿರುಗೊಳ್ಳಲು ಹೋದರಂತೆ…!

ಮಹಾರಾಜರು ಅವರ ಬಂಗಲೆಯಲ್ಲಿ ಮೊಕ್ಕಾಂ ಮಾಡಿದ ಒಂದು ಸಂದರ್ಭದಲ್ಲಿ, ಮಹಾರಾಜರು ಕುದುರೆಮುಖ ಪರ್ವತ ಮತ್ತು ಗಂಗಾಮೂಲಗಳನ್ನು ನೋಡಬೇಕು! ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದರಂತೆ. ಆ ಕಾಲದಲ್ಲಿ ಕಳಸದ ಪೇಟೆಯವರೆಗೆ ಮಣ್ಣಿನ ರಸ್ತೆ ಇದ್ದಿತಂತೆ. ಆ ನಂತರ ಕುದುರೆಮುಖ ಪರ್ವತಕ್ಕೆ ಒಂದು ಸರಿಯಾದ ಕಾಲ್ದಾರಿ ಕೂಡಾ ಇರಲಿಲ್ಲವಂತೆ. ಅಲ್ಲಿಂದ ಮುಂದಕ್ಕೆ ಇರುವ ಗಂಗಾಮೂಲದ ಕಡೆಗೆ ಕುದುರೆಮುಖದಿಂದ ಬರೇ ದಟ್ಟವಾದ ಕಾಡು ಮಾತ್ರ ಇದ್ದು, ಅಲ್ಲಿಗೆ ಹೋಗಲು ದಾರಿಯೇ ಇರಲಿಲ್ಲವಂತೆ. ಹಾಗಾದರೆ, ನಾಡಿದ್ದು ಬೆಳಗ್ಗೆ ಕುದುರೆಯ ಮೇಲೆ ಈ ಸ್ಥಳಗಳಿಗೆ ಹೋಗಿ ಬರೋಣ! ಎಂದು ರಂಗ ಹೆಬ್ಬಾರರು ಮಹಾರಾಜರಿಗೆ ಹೇಳಿದರಂತೆ. ಅಲ್ಲಿಗೆ ಹೋಗಲು ದಾರಿಯೇ ಇಲ್ಲವಂತಲ್ಲಾ? ರಸ್ತೆ ಮಾಡಿಸಲು ವಾರಗಟ್ಟಳೆ ಸಮಯ ಬೇಕಾಗಬಹುದು ಎಂದು ನಮ್ಮ ಪರಿವಾರದವರು ಹೇಳಿದರು! ಎಂದು ಮಹಾರಾಜರು ಮರು ಪ್ರಶ್ನೆಹಾಕಿದರಂತೆ.

ಆಗ ಶ್ರೀ ರಂಗ ಹೆಬ್ಬಾರರು ಮುಗುಳ್ನಗುತ್ತಾ, ಮಹಾರಾಜರ ಅಪ್ಪಣೆಯಾಗಿ ಇಪ್ಪತ್ತನಾಲ್ಕು ಗಂಟೆಗಳಲ್ಲಿಯೇ ರಸ್ತೆ ತಯಾರಾಗುತ್ತೆ! ನಾಡಿದ್ದು ಖಂಡಿತವಾಗಿಯೂ ಹೊರಡೋಣ! ಎಂದರಂತೆ. ಮಹಾರಾಜರ ಇಚ್ಛೆ ತಿಳಿದ ಆ ಕ್ಷಣದಲ್ಲೇ, ಶ್ರೀ ರಂಗ ಹೆಬ್ಬಾರರು ತಮ್ಮ ಒಕ್ಕಲುಗಳನ್ನು, ಕೂಲಿ ಆಳುಗಳನ್ನು, ಸೇರೆಗಾರರನ್ನು ಮತ್ತು ತಮ್ಮ ಆಪ್ತರನ್ನು ಒಟ್ಟು ಸೇರಿಸಿ ಆ ಕೆಲಸಕ್ಕೆ ಕಳುಹಿಸಿಯೂ ಆಗಿತ್ತಂತೆ! ಹೇಳಿದ ಸಮಯಕ್ಕೆ ಸರಿಯಾಗಿ ಶ್ರೀ ರಂಗ ಹೆಬ್ಬಾರರು ಮತ್ತು ಮಹಾರಾಜರು ಮತ್ತು ಅವರ ಪಟಲಾಂ ಕುದುರೆಗಳ ಮೇಲೆ ಕುಳಿತು ಕುದುರೆಮುಖಕ್ಕೆ ಹೊರಟರಂತೆ. ಕಳಸದಿಂದ ಕುದುರೆಮುಖಕ್ಕೆ, ಅಲ್ಲಿಂದ ಗಂಗಾಮೂಲಕ್ಕೆ, ಕುದುರೆಗಳು ಸಲೀಸಾಗಿ ಹೋಗುವಂತಹಾ ಅಂದಾಜು ಮೂವತ್ತು ಮೈಲಿಗಳ ಕುದುರೆ ಸಾಗುವ ದಾರಿ ಹೊಸದಾಗಿ ನಿರ್ಮಾಣವಾಗಿತ್ತಂತೆ..! ಆ ದಾರಿಯನ್ನು ನಿರ್ಮಿಸಿದ ಸಾವಿರಾರು ಜನರು ಆ ಕೆಲಸವನ್ನು ಮಾಡಿಕೊಟ್ಟು, ಮಹಾರಾಜರ ಕಣ್ಣಿಗೆ ತಾವು ಬೀಳದಂತೆ ಒಳಹಾದಿಗಳಲ್ಲಿ ಸಾಗಿ, ಆಗಲೇ ಅವರವರ ಮನೆಗಳನ್ನು ಸೇರಿಬಿಟ್ಟಿದ್ದರಂತೆ…!

ಮಹಾರಾಜರಿಗೆ ಶ್ರೀ ಹೆಬ್ಬಾರರ ಕಾರ್ಯ ಸಂಘಟನೆಯನ್ನು ಕಂಡು ಮಹದಾಶ್ಚರ್ಯ ಉಂಟಾಗಿ, ಶ್ರೀಮಾನ್ ರಂಗ ಹೆಬ್ಬಾರರೇ! ನಾನು ಮೈಸೂರಿನಲ್ಲಿ ರಾಜನಾದರೆ, ನೀವು ಈ ಊರಿನ ಅನಭಿಷಿಕ್ತ ರಾಜ! ಎಂದು ಉದ್ಗರಿಸಿದರಂತೆ..! ಅಂದಿನಿಂದ ಶ್ರೀ ರಂಗ ಹೆಬ್ಬಾರರ ಹೆಸರು ವಾಡಿಕೆಯಲ್ಲಿ ರಾಜಾ ರಂಗ ಹೆಬ್ಬಾರರು ಎಂದು ಬದಲಾಯಿತಂತೆ. ಈ ಘಟನೆಯ ನಂತರ ಪ್ರಕೃತಿ ಪ್ರೇಮಿಯಾದ ಮಹಾರಾಜರು ಪದೇ ಪದೇ ನಮ್ಮ ಸೀಮೆಗೆ ಬಂದು ರಾಜಾ ರಂಗ ಹೆಬ್ಬಾರರ ಜತೆಯಲ್ಲಿ ಬಹಳ ತಿರುಗಾಟ ಮಾಡಿದರಂತೆ. ರಾಜಾ ರಂಗ ಹೆಬ್ಬಾರರೂ ಆಗಾಗ ಮೈಸೂರಿಗೆ ಹೋಗಿ ಮಹಾರಾಜರನ್ನು ಕಂಡು ಬರುವ ಕ್ರಮ ಇತ್ತಂತೆ.

ಹೀಗಿರಲು, ಒಮ್ಮೆ ಮಹಾರಾಜರು ಚಿತ್ತೈಸಿದಾಗ ಮೇರ್ತಿಕಾನು, ಮಲ್ಲೇಶನಗುಡ್ಡ ಮತ್ತು ಕಲ್ಮುಡಿ ಮತ್ತು ಜಕ್ಕಾನು ಎಂಬ ಜಾಗಳಲ್ಲಿ ರಾಜಾ ರಂಗ ಹೆಬ್ಬಾರರು ಹೊಸದಾಗಿ ಕಾಫಿಗಿಡಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ, ಅಂದರೆ ಯುರೋಪಿಯನ್ ತೋಟಗಾರರ ಕ್ರಮದಂತೆ ಹಾಕಿಸುವ ಹವಣಿಕೆಯಲ್ಲಿದ್ದರಂತೆ. ಬಹಳ ದೊಡ್ಡ ಬಂಡವಾಳದ ಕೆಲಸ ಕೈಗೆತ್ತಿಕೊಂಡಿದ್ದರಿಂದ ಮಂಗಳೂರಿನ ಕಾಫಿ ಮತ್ತು ಏಲಕ್ಕಿ ವ್ಯಾಪಾರಿಗಳಲ್ಲಿ ಮತ್ತು ಆರ್ಬರ್ತ್ ನಾರ್ಡ್ ಮತ್ತು ಕಂಪೆನಿ ಎಂಬ ಹಣಕಾಸು ಸಂಸ್ಥೆಯಲ್ಲಿ ಸಾಲ‌ಎತ್ತಲು ಪ್ರಯತ್ನಮಾಡುತ್ತಿದ್ದರಂತೆ. ಈ ಆರ್ಬರ್ತ್‌ನಾರ್ಡ್ ಸಂಸ್ಥೆಯನ್ನು ಇಂದಿಗೂ ಅರಬಟ್ಟುನಾಡು ಕಂಪನಿ ಎಂದು ಮಲೆನಾಡಿಗರು ಲೇವಡಿ ಮಾಡುತ್ತಾರೆ. ಇವರಲ್ಲಿ ಸಾಲಪಡೆದ ವ್ಯಕ್ತಿಗಳು ಅತೀ ಹೆಚ್ಚಿನ ಬಡ್ಡಿಗೆ ಸೋತು, ಎಂದಿಗೂ ಬಚಾಯಿಸಿಕೊಳ್ಳಲಾರದೇ ದಿವಾಳಿಯಾಗುವುದು ಆಗಿನಕಾಲದಲ್ಲಿ ಸಾಮಾನ್ಯ ಸಂಗತಿ ಆಗಿತ್ತಂತೆ! ಆಗ ಮಹಾರಾಜರು ಹೆಬ್ಬಾರರೇ, ನೀವು ಹಣದ ಬಗ್ಗೆ ಚಿಂತೆ ಮಾಡಬೇಡಿರಿ. ನಿಮಗೆ ಬೇಕಾದ ಹಣವನ್ನು ನಾನು ನಿಮಗೆ ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುತ್ತೇನೆ. ಬೇಕಾದಾಗ ಮೈಸೂರಿಗೆ ಬಂದು ಪಡೆದುಕೊಂಡು ಹೋಗಿ! ಎಂದರಂತೆ. ಮಹಾರಾಜರ ಅಶ್ವಾಸನೆ ಸಿಕ್ಕಿದ್ದೇ ತಡ, ರಾಜಾ ರಂಗ ಹೆಬ್ಬಾರರಿಗೆ ನಿಶ್ಚಿಂತೆಯಾಯಿತಂತೆ. ಹಲವಾರು ಮಾಪಿಳ್ಳೆ ಕಂಟ್ರಾಕ್ಟರುಗಳು ಮತ್ತು ಸೇರೆಗಾರರನ್ನು ನಿಗದಿಮಾಡಿ ತೋಟಗಾರಿಕೆ ಕೆಲಸವನ್ನು ಬಹಳ ಉಮೇದಿನಿಂದ ಶುರುಮಾಡಿದರಂತೆ. ತನ್ನಲ್ಲಿ ಕೆಲಸಮಾಡುತ್ತಿದ್ದ ಸಾವಿರಾರು ಕೆಲಸಗಾರರಿಗೆ ಮುಂಗಡ ಕೊಟ್ಟು ಕೆಲಸ ಶುರುಮಾಡಿಸಿ, ರಾಜಾ ರಂಗ ಹೆಬ್ಬಾರರು ಮೈಸೂರು ಪಟ್ಟಣವನ್ನು ಸೇರಿ, ಮಾಮೂಲಿನಂತೆ ಮಹಾರಾಜರ ಅತಿಥಿಗೃಹದಲ್ಲಿ ತಂಗಿದರಂತೆ.

ಮಾರನೇ ದಿನ ಮಹಾರಾಜರನ್ನು ಭೆಟ್ಟಿಯಾಗಲು ಅರಮನೆಗೆ ಹೋದಾಗ,  ಮಹಾರಾಜರ ಸವಾರಿ ವಿದೇಶಕ್ಕೆ ಹೋಗಿರುವುದಾಗಿ ತಿಳಿಯಿತಂತೆ. ಮಹಾರಾಜರು ಹಿಂತಿರುಗುವಾಗ ತಿಂಗಳುಗಟ್ಟಲೆ ಸಮಯವಾಗುವುದು ಖಚಿತ ಎಂಬ ಸಮಾಚಾರ ಕೂಡಾ ಅವರಿಗೆ ತಿಳಿದು ಬಂದಿತಂತೆ! ಶ್ರೀ ರಂಗ ಹೆಬ್ಬಾರರು ದಿವಾನರನ್ನು ಕಂಡು ತಾವು ಬಂದ ವಿಚಾರವನ್ನು ಅವರಿಗೆ ನಿವೇದನೆ ಮಾಡಿದರಂತೆ. ದುರದೃಷ್ಟವಶಾತ್, ದಿವಾನ್ ಅವರು ಈ ವ್ಯವಹಾರದ ಬಗ್ಗೆ ಅಥವಾ ತಮ್ಮ ಬರುವಿಕೆಯ ಬಗ್ಗೆ, ಶ್ರೀಮನ್ ಮಹಾರಾಜರು ನಮಗೆ ಯಾವ ತಿಳುವಳಿಕೆಯನ್ನೂ ಕೊಟ್ಟಿಲ್ಲ. ಆದ್ದರಿಂದ, ತಾವು ಕೇಳುವ ಮೊತ್ತವನ್ನು ಕೊಡಲು ನನಗೆ ಆಗುವುದಿಲ್ಲ! ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರಂತೆ.

ದುಡ್ಡಿಲ್ಲದೇ ರಂಗ ಹೆಬ್ಬಾರರು ಊರಿಗೆ ಹಿಂತಿರುಗುವ ಹಾಗೆಯೇ ಇರಲಿಲ್ಲ. ಹಣವಿಲ್ಲದೆ ಊರಿಗೆ ಹಿಂತಿರುಗಿದರೆ ಮರ್ಯಾದೆ ಹೋಗುತ್ತಿತ್ತು! ಅಭಿಮಾನಧನರಾದ ಶ್ರೀ ರಂಗ ಹೆಬ್ಬಾರರಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಬೇರೆ ಯಾವ ದಾರಿಯೂ ಕಾಣದಾಯಿತಂತೆ! ಅಂದೇ ರಾತ್ರಿ ಸದ್ದಿಲ್ಲದೆ ವಿಷ ಸೇವಿಸಿ, ರಾಜಾ ರಂಗ ಹೆಬ್ಬಾರರು ಮಹಾರಾಜರ ಅತಿಥಿಗೃಹದಲ್ಲಿ ತೀರಿಕೊಂಡರಂತೆ.

ಮುಂದಿನ ಕಥೆ ಬಹಳ ಚಿಂತಾಜನಕ ಕಥೆ! ರಂಗ ಹೆಬ್ಬಾರರಿಗೆ ಮಕ್ಕಳು ಇರಲಿಲ್ಲ. ಅವರ ಆಸ್ತಿಗಳನ್ನು ಸರಕಾರವು ಹರಾಜು ಹಾಕಿ, ದಾವೆ ಹೂಡಿದ ಬಾಕಿದಾರರಿಗೆ ಹಣಕೊಟ್ಟಿತಂತೆ.  ಅವರ ಅಪಾರ ಆಸ್ತಿಯು ಆಗ ಚಾಲ್ತಿಯಲ್ಲಿದ್ದ ಎಕರೆಗೆ ನಾಲ್ಕು ಆಣೆಗಳ ವಾರ್ಷಿಕ ಕಂದಾಯ ಬಾಕಿಗೆ ಕಂದಾಯ ಬಾಬ್ತಿನ ಹಣಕ್ಕೇ ಹರಾಜು ಆಗಿ ಹೋಯಿತಂತೆ. ಮೇರ್ತಿಕಾನು, ಕಚ್ಚಿನ ಹಕ್ಕಲು ತೋಟಗಳನ್ನು ಯೂರೋಪಿಯನ್ ದೊರೆಗಳು ಹರಾಜಿನಲ್ಲಿ ಪಡೆದರಂತೆ. ಮಲ್ಲೇಶನ ಗುಡ್ಡ, ಕಲ್ಮುಡಿ ಮತ್ತು ಜಕ್ಕಾನು ತೋಟಗಳನ್ನು ಉದಕಮಂಡಲದ ಮುಸ್ಲಿಮ್‌ಸೇಟ್ ಒಬ್ಬರು ಹರಾಜಿನಲ್ಲಿ ಹಿಡಿದರಂತೆ. ಉಳಿಕೆ ಗದ್ದೆ ಮತ್ತು ತೋಟಗಳನ್ನು ರಂಗ ಹೆಬ್ಬಾರರ ದೊಡ್ಡ ಮಡದಿ ಮತ್ತು ಚಿಕ್ಕ ಮಡದಿಯರು ಕೈಗೆ ಬಂದ ಕ್ರಯಕ್ಕೆ ಮಾರಿ, ಕೆಲಸಗಾರರ ಬಾಕಿ ತೀರಿಸಿ ಋಣಮುಕ್ತರಾದರಂತೆ!

ಮಕ್ಕಳಿಲ್ಲ ಎಂಬ ಕಾರಣಕ್ಕೆ ರಾಜಾ ರಂಗ ಹೆಬ್ಬಾರರಿಗೆ ಚಿಕ್ಕಪ್ರಾಯದ ಎರಡನೇ ಹೆಂಡತಿಯನ್ನು ಮೊದಲ ಹೆಂಡತಿಯೇ ಗೊತ್ತು ಮಾಡಿ ಮದುವೆ ಮಾಡಿಸಿದ್ದರಂತೆ.  ಆದರೆ, ಆಕೆಗೂ ಮಕ್ಕಳ ಯೋಗ ಇರಲಿಲ್ಲ. ಮೊದಲನೇ ಹೆಂಡತಿ ದುಃಖಾತಿಶಯದಿಂದ ಕಾಯಿಲೆ ಹಿಡಿದು ಸ್ವಲ್ಪ ಸಮಯದಲ್ಲೇ ತೀರಿಕೊಂಡರಂತೆ. ಅವರ ಎರಡನೇ ಹೆಂಡತಿಯೂ ದೊಡ್ಡ ಬಂಗಲೆ ಖಾಲಿಬಿಟ್ಟು ದೂರಹೋಗಿ ನೆಲೆಸಿದರಂತೆ. ಮೊದಲನೇ ಹೆಂಡತಿಯ ಮರಣದ ನಂತರ ಅವರ ಅಂಬಿನಕುಡಿಗೆಯ ಮಹಾಬಂಗಲೆ ಪಾಳುಬಿದ್ದುಹೋಯಿತಂತೆ. ರಾಜದೃಷ್ಟಿ ಬಿದ್ದುದರಿಂದ ರಾಜಾ ರಂಗ ಹೆಬ್ಬಾರರ ವಂಶ ನಾಶವಾಯಿತು! ಎಂದು ನಮ್ಮೂರಿನ ಜನ ಇಂದಿಗೂ ಹೇಳುತ್ತಾರೆ. ರಾಜಾ ರಂಗ ಹೆಬ್ಬಾರರ ಎರಡನೇ ಹೆಂಡತಿ ಆ ದೊಡ್ಡಮನೆ ಬಿಟ್ಟು,  ಬೇರೆ ಮನೆ ಮಾಡಿ, ಸ್ವಲ್ಪ ಕಾಲ ಬದುಕಿ, ಅವರೂ ತೀರಿಕೊಂಡರಂತೆ. ಅವರು ಒಬ್ಬ ಸಾಕು ಮಗನಿಗೆ ಉಳಿದ ಕೆಲವೇ ಎಕರೆ ಆಸ್ತಿಯನ್ನು ಬಿಟ್ಟುಹೋದರಂತೆ. ಇಲ್ಲಿಗೆ ರಂಗ ಹೆಬ್ಬಾರರ ಕಥೆ ಪೂರ್ತಿ ಮುಗಿದಂತೆ ಆಯಿತು. ನನ್ನ ಮಾವನಾದ ಶ್ರೀ ರಘುಪತಿ ಹೆಬ್ಬಾರರಿಗೆ ಅವರ ತಂದೆಯ ದಾಯಾದಿ ಸಂಬಂಧಲ್ಲಿ ದೊಡ್ಡಜ್ಜ ಎನ್ನಿಸಿಕೊಂಡಿದ್ದ ರಾಜಾ ರಂಗ ಹೆಬ್ಬಾರರ ಉಳಿದ ಆಸ್ತಿಯ ಒಂದು ಇಂಚೂ ಪಿತ್ರಾರ್ಜಿತವಾಗಿ ಹರಿದು ಬಂದಿರಲಿಲ್ಲ. ರಾಜಾ ರಂಗ ಹೆಬ್ಬಾರರ ಅಳಿದುಳಿದ ಆಸ್ತಿಯು ಅವರ ಕಿರೇ ಹೆಂಡತಿಯ ಸಾಕುಮಗನ ಕಡೆಯವರಿಗೆ ಹೋದುವಂತೆ. ಆದರೆ, ರಂಗ ಹೆಬ್ಬಾರರನ್ನು ಹೋಲುವ ಭವ್ಯವಾದ ಆಳುತನ ಮತ್ತು ವ್ಯಕ್ತಿತ್ವ ನನ್ನ ಮಾವ ರಘುಪತಿ ಹೆಬ್ಬಾರರಿಗೆ ಹಿರಿಯರಿಂದ ಹರಿದು ಬಂದಿತ್ತು.

ಶ್ರೀ ರಘುಪತಿ ಹೆಬ್ಬಾರರು ತನಗೆ ಒದಗಿಬಂದ ಸ್ವಲ್ಪವಾದ ಪಿತ್ರಾರ್ಜಿತ ಆಸ್ತಿಯನ್ನು ತನ್ನ ದಾಯಾದಿಗಳಿಗೆ ಬಿಟ್ಟು ಕೊಟ್ಟು, ಸ್ವ-ಪ್ರಯತ್ನದಿಂದ ಮೊದಲಿಗೆ ಗೇಣಿ ಒಕ್ಕಲಾಗಿ ದುಡಿದು, ನಂತರ ಸ್ವಂತ ಆಸ್ತಿಗಳನ್ನು ಕೊಂಡು, ಉಚ್ಛ್ರಾಯ ಸ್ಥಿತಿಗೆ ಬಂದ ವ್ಯಕ್ತಿ. ಅವರನ್ನು ಸಾವಿರ ಎಕರೆ ಸರದಾರ ಎಂದು ಊರವರು ಕರೆಯುತ್ತಿದ್ದರಂತೆ. ಶ್ರೀ ರಘುಪತಿ ಹೆಬ್ಬಾರರನ್ನು ಕಳಸದ ಸೀಮೆಯಲ್ಲಿ ಇಂದಿಗೂ ಎರಡನೇ ರಂಗ ಹೆಬ್ಬಾರರು ಎಂದು ಕಳಸದ ಸೀಮೆಯವರು ನೆನಪಿಸಿಕೊಳ್ಳುವುದು ಉಂಟು. ನಾನು ನನ್ನ ಮಾವನವರನ್ನು ಮೊಕ್ತಾ ನೋಡಿಲ್ಲ. ಅವರ ವ್ಯಕ್ತಿತ್ವದ ಒಂದು ಅಂಶವನ್ನು ನನ್ನ ಪತ್ನಿ ಸರೋಜಮ್ಮಳಲ್ಲಿ ಕಂಡಿದ್ದೇನೆ. ಸರೋಜಮ್ಮ ರಘುಪತಿ ಹೆಬ್ಬಾರರ ಕಿರಿಯ ಮಗಳು.

ನನ್ನ ಮಾವನವರ ಹತ್ತಿರ ಇದ್ದ ರಾಜಾ ರಂಗ ಹೆಬ್ಬಾರರ ಭಾವಚಿತ್ರ ಇಂದು ನಮ್ಮಲ್ಲಿ ಇದೆ. ಅದನ್ನು ನಾವು ಜಾಗ್ರತೆಯಿಂದ ಇಟ್ಟುಕೊಂಡಿದ್ದೇವೆ. ಅವರ ಬಂಗಲೆಯಿದ್ದ ಜಾಗ ಬಾಳೆಹೊಳೆಯ ಇನ್ನೊಂದು ದಡದಲ್ಲಿ ಇದೆ. ಈಗ ಆ ಜಾಗ ಒಂದು ಮಣ್ಣಿನ ದಿಣ್ಣೆಯಂತೆ ಕಾಣುತ್ತಿದೆ. ಹಳೇ ರಸ್ತೆಗಳ ಕುರುಹು ಈಗಲೂ ಇವೆ. ಆ ರಸ್ತೆಯ ಇಕ್ಕೆಲಗಳನ್ನು ಕಲ್ಲು ಕಟ್ಟೆಗಳನ್ನು ಕಟ್ಟಿ ಆ ಕಾಲದಲ್ಲಿ ಗಟ್ಟಿ ಮಾಡಿರುವುದರಿಂದ, ಆ ಬಂಗಲೆಯ ಕಡೆಗೆ ಸಾಗುತ್ತಿದ್ದ ಆ ರಸ್ತೆಗಳು ಈಗಲೂ ಚೆನ್ನಾಗಿಯೇ ಇವೆ. ರಾಜಾ ರಂಗ ಹೆಬ್ಬಾರರ ಬಂಗಲೆಯ ಅಡಿಪಾಯ ಇದ್ದ ಜಾಗದಲ್ಲಿ ಹುಡುಕಿದರೆ, ಈಗಲೂ ಬಣ್ಣದ ಇಟಾಲಿಯನ್ ಗ್ಲೇಜ್ಡ್ ನೆಲಹಾಸಿನ ಇಟ್ಟಿಗೆಗಳ ಚೂರುಗಳು ಸಿಗುತ್ತವೆ. ಅಲ್ಲಲ್ಲಿ ಬೆಲ್ಜಿಯಮ್ ತಯಾರಿಕೆಯ ಬಣ್ಣದ ಚಿತ್ತಾರದ ಕಿಟಿಕಿಯ ಗಾಜುಗಳ ಚೂರುಗಳೂ ಸಿಗುತ್ತವೆ. ಆ ಬೃಹತ್ ಮನೆಯ ಅಡಿಪಾಯದ ಜಾಗದ ಸುತ್ತಮುತ್ತ ಈಗ ಗಿಡಗಂಟಿ ಬೆಳೆದಿವೆ. ಮಾನ್ಯ ರಾಜಾ ರಂಗ ಹೆಬ್ಬಾರರು ಇಂದಿಗೂ ನಮ್ಮ ಕಳಸದ ಸೀಮೆಯಲ್ಲಿ ಒಂದು ದಂತಕಥೆಯಾಗಿ ಬದುಕಿದ್ದಾರೆ!

* * *