ಬಿಳಗೂರು ಕಿಟ್ಟುಶೆಟ್ಟರ ಪೂರ್ಣ ನಾಮಧೇಯ ಬಿಳಗೂರು ಕೃಷ್ಣ ಶೆಟ್ಟಿ ಎಂಬುದಾಗಿತ್ತು. ಆದರೆ, ಅವರನ್ನು ಊರವರು ಬಿಳಗೂರು ಕಿಟ್ಟು ಶೆಟ್ಟರು ಎಂದೇ ಸಂಬೋಧಿಸುತ್ತಿದ್ದರು. ನಾನು ಕಂಡಂತೆ ಅವರು ನಮ್ಮೂರಿನ ಅತೀ ಹಿರಿಯರಲ್ಲಿ ಒಬ್ಬರು.

ನಾನು ಅವರನ್ನು ಮೊದಲಬಾರಿ ನೋಡಿದಾಗಲೇ ಅವರಿಗೆ ಸುಮಾರು ಎಪ್ಪತ್ತು ವರ್ಷ ಪ್ರಾಯವಾಗಿತ್ತು. ಅವರು ನನ್ನ ಮಾವನವರಾದ ದಿವಂಗತ ರಘುಪತಿ ಹೆಬ್ಬಾರರ ಬಾಲ್ಯದ ದೋಸ್ತಿಯಂತೆ. ಪ್ರಾಯ ಎಪ್ಪತ್ತು ಕಳೆದಿದ್ದರೂ, ಕಿಟ್ಟು ಶೆಟ್ಟರು ಗಟ್ಟಿಮುಟ್ಟಾಗಿದ್ದರು. ವಾರಕ್ಕೆರಡು ದಿನ, ಅಂದರೆ ಮಂಗಳವಾರ ಮತ್ತು ಶುಕ್ರವಾರ, ಅವರು ತಮ್ಮ ಮನೆಯಿಂದ ನಾಲ್ಕು ಮೈಲು ದೂರದ ಬಾಳೆಹೊಳೆಗೆ ಕಾಲ್ನಡಿಗೆಯಲ್ಲಿಯೇ ಹೋಗಿ ಬರುವ ಕಾರ್ಯಕ್ರಮವನ್ನು ಕರಾರುವಾಕ್ಕಾಗಿ ಪರಿಪಾಲಿಸುತ್ತಿದ್ದರು. ಅವರ ಮನೆಯಲ್ಲಿ ಜೀಪ್ ಇದ್ದರೂ ಅವರು ಅದನ್ನು ಉಪಯೋಗಿಸುತ್ತಿದ್ದುದು ಬಹಳ ಕಡಿಮೆ. ಈ ಕಾಲ್ನಡಿಗೆಯಲ್ಲಿ ಅವರಿಗೆ ಒಂದು ಉದ್ದೇಶವೂ ಇತ್ತು. ಅದು ಅವರಿಗೆ ಅಗತ್ಯವಾದ ವ್ಯಾಯಾಮ ನೀಡುತ್ತಿತ್ತು. ಅದಲ್ಲದೆ, ಅವರು ನಮ್ಮೂರಿನ ಶ್ರೀ ದುರ್ಗಾ ಪರಮೇಶ್ವರಿಯ ದರ್ಶನಕ್ಕೆ ನಡೆದೇ ಬರುವ ಕ್ರಮವನ್ನು ಪಾಲಿಸುತ್ತಿದ್ದರು. ದೂರದ ಮಂಗಳೂರಿಗೋ, ಶಿವಮೊಗ್ಗಕ್ಕೋ ಅಥವಾ ಚಿಕ್ಕಮಗಳೂರಿಗೋ ಕಾರ್ಯನಿಮಿತ್ತ ಹೋಗಲೇಬೇಕಿದ್ದಾಗ ಮಾತ್ರ ಅವರ ಜೀಪು ಹೊರಬರುತ್ತಿತ್ತು. ಅವರು ಮನೆಯಿಂದ ಹೊರಟು ಎರಡು ಮೈಲು ದೂರದಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿಯ ದರ್ಶನ ಮಾಡುತ್ತಿದ್ದರು.  ಅಲ್ಲಿಂದ ಬಾಳೆಹೊಳೆಗೆ ಹೋಗುವಾಗ ದಾರಿಯಲ್ಲೇ ನಮ್ಮ ತೋಟ ಸಿಗುತ್ತಿತ್ತು. ನಮ್ಮಲ್ಲಿಗೆ ಬಂದು, ನಮ್ಮನ್ನೆಲ್ಲಾ ಮಾತನಾಡಿಸಿಕೊಂಡು ಬಾಳೆಹೊಳೆಗೆ ಹೊರಡುವುದು ಅವರ ರೂಢಿ. ಅವರು ಬಿಳಿಬಣ್ಣದ ಪಂಚೆ ತೊಟ್ಟು ಅದರ ಮೇಲೆ ಆಕಾಶನೀಲಿ ಬಣ್ಣದ ಅರ್ಧಕೈಯ್ಯಿನ ಶರ್ಟು ಧರಿಸುತ್ತಿದ್ದರು. ಅವರ ಶರ್ಟಿನಲ್ಲಿ ಮೂರು ಬಂಗಾರದ ಗುಂಡಿಗಳು ಮಿಂಚುತ್ತಿದ್ದವು. ಕಾಲಿಗೆ ಕೆಂಪು ಕುಚ್ಚು ಇರುತ್ತಿದ್ದ ಹಳೇಕಾಲದ ರೀತಿಯ ಘಟ್ಟದ ಚಡಾವು ಮೆಟ್ಟುತ್ತಿದ್ದರು. ಅವರು ತನ್ನ ಆ ಗಿರಕಿ ಜೋಡುಗಳಿಗೆ ಚೆನ್ನಾಗಿ ಎಣ್ಣೆ ಬಿಟ್ಟು ಹದಗೊಳಿಸಿದ್ದರೂ,  ಅವರು ನಡೆಯುವಾಗ ಆ ಚಡಾವುಗಳು ಜೀಕ್ ಜೀಕ್ ಎಂದು ಶಬ್ದ ಮಾಡುತ್ತಿದ್ದುವು.

ಕಿಟ್ಟುಶೆಟ್ಟರು ಸುಮಾರು ಐದಡಿ ಹತ್ತು ಇಂಚು ಎತ್ತರದ ಗೌರವರ್ಣದ ಗಟ್ಟಿಮುಟ್ಟಾದ ಆಳು. ಅವರ ಕಿವಿಯಲ್ಲಿ ಬಿಳಿಯ ಹರಳಿನ ಹತ್ತು ಕಡಕು ಮಿಂಚುತ್ತಿದ್ದುವು. ಈ ತರಹದ ಕರ್ಣಾಭರಣಕ್ಕೆ ಅವರ ಸ್ವಂತ ಊರಾದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂಟಿ ಎಂದು ಕರೆಯುತ್ತಾರೆ. ಅವರು ತನ್ನ ತಲೆಯಲ್ಲಿ ಕೂದಲುಗಳನ್ನು ಉದ್ದ ಬೆಳೆಯಲು ಬಿಡದೆ ನೀಟಾಗಿ ಕ್ಲೋಸ್ ಕ್ರಾಪ್ ಮಾಡಿಸುತ್ತಿದ್ದರು. ಅಷ್ಟು ಪ್ರಾಯವಾಗಿದ್ದರೂ, ಶುಭ್ರವಸನಗಳನ್ನು ಧರಿಸಿ, ಪ್ರತಿದಿನ ನೀಟಾಗಿ ಮುಖಕ್ಷೌರ ಮಾಡಿಕೊಳ್ಳುತ್ತಿದ್ದರು. ಬಲಗೈಯ್ಯಲ್ಲಿ ಗಟ್ಟಿಮರದಿಂದ ಮಾಡಿದ ಊರುದೊಣ್ಣೆ ಹಿಡಿದು, ತಮ್ಮ ಎಡಗೈಯಲ್ಲಿ ಸೂರ್ಯಮಾರ್ಕಿನ ಜೆಂಟ್ಸ್ ಕೊಡೆಯನ್ನು ಯಾವಾಗಲೂ ಹಿಡಿದೇ ಅವರು ತಿರುಗಾಡುತ್ತಿದ್ದರು.

ಅವರು ಸುಮಾರು ನಲವತ್ತು ಎಕರೆಯಷ್ಟು ಜಮೀನು ಹೊಂದಿದ್ದರು. ಅವರು ಸುಮಾರು ಹದಿನೈದು ಎಕರೆ ಗದ್ದೆ ಸಾಗುಮಾಡುತ್ತಿದ್ದರು. ಉಳಿಕೆಯದು ಅಡಿಕೆತೋಟ ಮತ್ತು ರೋಬಸ್ಟಾ ಕಾಫಿಯ ತಾಕುಗಳು ಆಗಿದ್ದುವು.

ನನ್ನ ಮಾವ, ಅಂದರೆ ನನ್ನ ಹೆಂಡತಿಯ ತಂದೆಯವರಾದ ದಿವಂಗತ ಶ್ರೀ ರಘುಪತಿ ಹೆಬ್ಬಾರರು ಮತ್ತು ಕಿಟ್ಟುಶೆಟ್ಟರು ಸಮಪ್ರಾಯದವರು ಮತ್ತು ಬಾಲ್ಯದ ಒಡನಾಡಿಗಳಂತೆ. ಕಳೆದ ಶತಮಾನದ ಮೊದಲ ಭಾಗದಲ್ಲಿ ಅವರಿಬ್ಬರೂ ಕೆಳಭಾಗ ಎಂಬ ಜಾಗದಲ್ಲಿ, ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದರಂತೆ. ಬಾಲ್ಯದಿಂದಲೂ, ಜತೆಗೇ ಆಡಿ, ಜತೆಗೇ ಬೆಳೆದು, ಜತೆಗೇ ದುಡಿಯಲು ಶುರುಮಾಡಿದ ವ್ಯಕ್ತಿಗಳು ಅವರಿಬ್ಬರಂತೆ. ಇಬ್ಬರೂ ತರುಣರಿಗೂ ಕೆಲಸದಲ್ಲಿ ಯಾವಾಗಲೂ ಪೈಪೋಟಿಯಂತೆ. ಗದ್ದೆಗಳ ಬದುಕಡಿಯುವುದು, ಬಿತ್ತುವುದು, ಭತ್ತದ ನೇಜಿ(ಅಗೆ) ಹೊರುವುದು, ಭತ್ತದ ಪೈರು ಹೊರುವುದು, ಭತ್ತದ ಕಣ ಮಾಡುವುದು, ಕೊನೆಯಲ್ಲಿ ಅಕ್ಕಿಯ ಮುಡಿ (ನಲ್ವತ್ತೆರಡು ಸೇರು ಅಕ್ಕಿಗೆ ಒಂದು ಮುಡಿ ಎಂಬ ಲೆಕ್ಕ) ಕಟ್ಟುವುದು, ಎಲ್ಲದರಲ್ಲೂ ಪೈಪೋಟಿಯಂತೆ.

ನನ್ನ ಮಾವನವರ ಪಿತ್ರಾರ್ಜಿತ ಆಸ್ತಿ ಮತ್ತು ಕಿಟ್ಟುಶೆಟ್ಟರು ಗೇಣಿಗೆ ಸಾಗುವಳಿ ಮಾಡುತ್ತಿದ್ದ ಜಮೀನೂ ಪಕ್ಕಪಕ್ಕದಲ್ಲೇ ಇದ್ದುದರಿಂದ, ಇಬ್ಬರು ಮಿತ್ರರೂ ಜತೆಯಾಗಿಯೇ ದುಡಿಯುವ ಪದ್ಧತಿಯನ್ನು ಇಟ್ಟುಕೊಂಡಿದ್ದರಂತೆ.

ಆ ಕಾಲದಲ್ಲಿ ಈ ಇಬ್ಬರೂ ಭತ್ತ ಮಾತ್ರ ಬೆಳೆಯುತ್ತಿದ್ದರಂತೆ. ಮೊದಲು ಒಬ್ಬರ ಗದ್ದೆಯ ಕೆಲಸ, ನಾಟಿ ಮುಗಿಸಿಕೊಂಡು, ಇನ್ನೊಬ್ಬರ ಗದ್ದೆಗೆ ಇಬ್ಬರೂ ಜತೆಯಾಗೇ ಸಾಗಿ ದುಡಿಯುತ್ತಿದ್ದರಂತೆ. ಈ ತರುಣ ಮಿತ್ರರಿಬ್ಬರೂ ಬೆಳಗ್ಗೆ ಗದ್ದೆಗೆ ಇಳಿದವರು, ಸಾಯಂಕಾಲದ ತನಕ ಎಡೆಬಿಡದೆ ಕೆಲಸ ಮಾಡುತ್ತಿದ್ದರಂತೆ.  ಭತ್ತದ ಮೊದಲ ಬೆಳೆಯ ಸಮಯ ಮಧ್ಯಾಹ್ನದ ಹೊತ್ತಿಗೆ ತಮ್ಮ ಮನೆಗಳಿಗೆ ಹೋಗಿ ಊಟಮಾಡಿ ಬರುವಷ್ಟು ಸಮಯವನ್ನು ಕೂಡಾ ವ್ಯರ್ಥ ಮಾಡದೆ, ಹತ್ತಿರದ ಮರಗಳಲ್ಲಿನ ಹಲಸಿನಹಣ್ಣು ಕೊಯ್ದು, ಪಂಥ ಕಟ್ಟಿ, ಗಬಗಬನೆ ತೊಳೆಗಳನ್ನು ತಿನ್ನುತ್ತಿದ್ದರಂತೆ. ಈ ಹಲಸಿನಹಣ್ಣು ತಿನ್ನುವ ಪಂದ್ಯಗಳಲ್ಲಿ ಹೆಚ್ಚಾಗಿ ಕಿಟ್ಟುಶೆಟ್ಟರು ಗೆಲ್ಲುತ್ತಿದ್ದರಂತೆ. ಅದರೆ, ಗದ್ದೆಯ ಕೆಲಸಗಳಲ್ಲಿ ಮಿತ್ರರಿಬ್ಬರೂ ಸರಿಸರಿಯಾಗಿ ದುಡಿಯುತ್ತಿದ್ದರಂತೆ.

ನನ್ನ ಮಾವ ರಘುಪತಿ ಹೆಬ್ಬಾರರಿಗೆ ಹದಿನೆಂಟನೇ ವಯಸ್ಸಿನಲ್ಲಿ ಎಂಟು ವರ್ಷ ಪ್ರಾಯದ ನರಸಮ್ಮ ಅವರೊಂದಿಗೆ ಮದುವೆ ಆಯಿತಂತೆ. ನರಸಮ್ಮನವರ ತವರುಮನೆ ನಮ್ಮ ಹೋಬಳಿಗೆ ಸೇರಿದ ಭದ್ರಾನದಿಯ ಆಚೆಗಿನ ಮುನ್ನೂರು ಪಾಲು ಎಂಬ ಮನೆ. ಆಗ ನನ್ನ ಮಾವ ಆರಡಿ ಎರಡು ಇಂಚು ಎತ್ತರದ ಬಲಶಾಲಿ ಹುಡುಗ. ನಮ್ಮ ಅತ್ತೆ ಮೂರು ಅಡಿ ಎತ್ತರದ ಮಗು..! ನನ್ನ ಮಾವನವರ ತಾಯಿಯವರು ಆಗಲೇ ತೀರಿಕೊಂಡಿದ್ದುದರಿಂದ ಮಾವನವರ ಮನೆಯಲ್ಲಿ ಹೆಂಗಸರಾರೂ ಇರಲಿಲ್ಲವಂತೆ. ಆಗ ನಮ್ಮ ಮಾವನವರು ತಮ್ಮ ವೃದ್ಧ ತಂದೆ ಅಣ್ಣಯ್ಯ ಹೆಬ್ಬಾರರ ಜತೆಯಲ್ಲಿ ಒಂದು ಚಿಕ್ಕ ಸೋಗೆಯ ಮನೆಯಲ್ಲಿ ವಾಸ ಮಾಡುತ್ತಿದ್ದರಂತೆ. ಎಂಟು ವರ್ಷದ ಚಿಕ್ಕಮಗು ಆಗಿದ್ದರೂ, ಗಂಡನ ಮನೆಯ ಕೆಲಸದಲ್ಲಿ ಸಹಾಯವಾಗುವ ಜವಾಬ್ದಾರಿ ನನ್ನ ಅತ್ತೆಯವರಿಗೆ ತಾನಾಗಿ ಒದಗಿ ಬಂತಂತೆ.

ಮದುಮಗಳು(ಮದುವೆ ಆದ ಮಗು..!) ಗಂಡನ ಮನೆಗೆ ಹೊರಟು ಬರುವಾಗ ಇದುರಾದ ಭದ್ರಾನದಿಯನ್ನು ನೋಡಿ ಅಂಜಿದರಂತೆ! ನವವಧುವನ್ನು ಕರೆದುಕೊಂಡು ಬರುವ ಸಮಯ ಬಾಳೆಹೊಳೆಯ ಕಡವಿನಲ್ಲಿ ಬೇಸಿಗೆಕಾಲ ನದಿಯಲ್ಲಿ ನೀರು ಬತ್ತಿದೆ ಎಂದು ದೋಣಿ ಓಡಿಸುತ್ತಾ ಇರಲಿಲ್ಲವಂತೆ. ಎಲ್ಲರೂ ಎರಡೂವರೆ ಅಡಿಗಳಷ್ಟು ಆಳ ಇದ್ದ ನದಿಯನ್ನು ದಾಟಿ ಬರಬೇಕಿತ್ತಂತೆ. ನದಿಯನ್ನು ತಾನಾಗಿ ದಾಟಲಾರದ ಮದುಮಗಳನ್ನು ಆಗ ಕಿಟ್ಟುಶೆಟ್ಟರು ಎತ್ತಿ ತನ್ನ ಹೆಗಲಮೇಲಿಟ್ಟು ಕೊಂಡು ನದಿ ದಾಟಿಸಿದರಂತೆ. ಆ ಮೇಲೆ ಕೂಡ, ನಡೆಯಲು ಕಷ್ಟಪಡುತ್ತಿದ್ದ ಮದುಮಗುವನ್ನು ನಾಲ್ಕು ಮೈಲಿ ದೂರದ ಕೆಳಭಾಗದ ಅಣ್ಣಯ್ಯ ಹೆಬ್ಬಾರರ ಮನೆಯ ತನಕ ಅವರು ಹೊತ್ತುಕೊಂಡೇ ಬಂದರಂತೆ…! ಅಂತೂ, ಈ ತೆರದಲ್ಲಿ ನವವಧು ಶ್ರೀಮತಿ ನರಸಮ್ಮನವರ ಗೃಹಪ್ರವೇಶ ಶಾಸ್ತ್ರ ಆಯಿತಂತೆ..!

ನಾನು ಕಂಡಂತೆ ನಮ್ಮ ಅತ್ತೆಯವರಿಗೆ ಬಿಳಿಗೂರು ಕಿಟ್ಟು ಶೆಟ್ಟರನ್ನು ಕಂಡರೆ, ಅದೇ ಚಿಕ್ಕಂದಿನ ಭಯಮಿಶ್ರಿತ ಮರ್ಯಾದೆ. ನಮ್ಮ ಅತ್ತೆಯವರು ಕೆಳಭಾಗದ ಮನೆಯಲ್ಲಿ ಗೃಹಕೃತ್ಯ ನಡೆಸುತ್ತಿದ್ದಾಗ ಕಿಟ್ಟು ಶೆಟ್ಟರು, ನಾನು ಸಾಮಾನ್ಯನಲ್ಲ! ಒಳಗಿನಿಂದ ನನಗೆ ತಿನ್ನಲು ಒಂದು ಗೊನೆ ಬಾಳೆಹಣ್ಣು ಮತ್ತು ಒಂದು ತಂಬಿಗೆ ತುಂಬಾ ಹಾಲು ತಂದುಕೊಡಿ, ಇಲ್ಲದಿದ್ದರೆ ನಿಮ್ಮನ್ನು ಗುಳುಂ ಎಂದು ನುಂಗಿಬಿಡುತ್ತೇನೆ…! ಎಂದು ತಮ್ಮ ಕಣ್ಣುಗಳನ್ನು ದೊಡ್ಡದು ಮಾಡಿ ಹೆದರಿಸುತ್ತಿದ್ದರಂತೆ! ನನ್ನ ಅತ್ತೆಯವರು ಅವರಿಗೆ ಹೆದರಿ, ಕಿಟ್ಟುಶೆಟ್ಟರು ಕೇಳಿದಷ್ಟು ಹಾಲು ಮತ್ತು ಹಣ್ಣು ತಂದು ಅವರ ಎದುರಿಗೆ ಇಟ್ಟು ಒಳಗೆ ಓಡಿ ಹೋಗುತ್ತಿದ್ದರಂತೆ! ನಾನು ಕಂಡಂತೆ ಕೂಡಾ, ನನ್ನ ಅತ್ತೆಯವರಿಗೆ ಕಿಟ್ಟುಶೆಟ್ಟರನ್ನು ಕಂಡರೆ ಅದೇ ಹಿಂದಿನ ಕಾಲದ ಭಯಭಕ್ತಿ. ಕಿಟ್ಟು ಶೆಟ್ಟರು ಮನೆಗೆ ಬರುವುದರೊಳಗೆ, ಅವರಿಗೆ ಒಂದು ದೊಡ್ಡಲೋಟದಲ್ಲಿ ಕಾಫಿ ಮತ್ತು ವೀಳ್ಯದ ಹರಿವಾಣ ಅವರ ಎದುರಿಗೆ ತಾನೇ ತಂದು ಇಡುತ್ತಿದ್ದರು.

ಅತ್ತೆಯವರನ್ನು ನಾನು ಮೊದಲು ನೋಡಿದಾಗ ಅವರ ಬಂಗಲೆಯಲ್ಲಿ ಹತ್ತಾರು ಜನ ಕೆಲಸದವರಿದ್ದರು. ಆದರೆ ಕಿಟ್ಟುಶೆಟ್ಟರು ಬಂದಾಗ ತಾನೇ ಅವರಿಗೆ ಕೈಯ್ಯಾರೆ ಬಾಯಾರಿಕೆ ತಂದು ಕೊಡುತ್ತಿದ್ದರು. ನನ್ನ ಅತ್ತೆ ಶ್ರೀಮತೀ ನರಸಮ್ಮ ರಘುಪತಿ ಹೆಬ್ಬಾರರು ಸುಳಿಮನೆ, ಹಾರ್ಮಕ್ಕಿ, ಗದ್ದೆಮನೆ ಮತ್ತು ಕೋಲ್ಮಕ್ಕಿ ಕಾಫಿತೋಟಗಳ ಸಾಹುಕಾರ್ತಿ ಅನ್ನಿಸಿರುವ ಕಾಲದಲ್ಲೂ,  ಅವರಿಗೆ ನಮ್ಮ ಬಿಳಗೂರು ಕಿಟ್ಟುಶೆಟ್ಟರನ್ನು ಕಂಡರೆ ಅದೇ ಹಿಂದಿನ ರೀತಿಯ ಭಯಭಕ್ತಿ. ನನ್ನ ಅತ್ತೆಯವರು ನಾಲ್ಕು ಅಡಿ ಎಂಟಿಂಚು ಎತ್ತರದ ಸುಲಕ್ಷಣವಾದ ಹೆಂಗಸು. ನನ್ನ ಮಾವನವರು ಕಳಸದ ಸೀಮೆಯಲ್ಲೇ ಕಟ್ಟುಮಸ್ತಾದ ಅತೀ ಎತ್ತರದ ವ್ಯಕ್ತಿ. ನನ್ನ ಮಕ್ಕಳು ಇಂದಿಗೂ ಅವರಿಬ್ಬರ ಫೋಟೋ ನೋಡಿ, ಅವರ ಜತೆಯನ್ನು ಅಮಿತಾಭ್ ಬಚ್ಚನ್ ಜಯಾ ಬಾಧುರಿ ಜೋಡಿ! ಎನ್ನುತ್ತಾ ನಗುತ್ತಾರೆ. ಆಕಾರದಲ್ಲಿ ಸಮತೆ ಕಾಣದಿದ್ದರೂ, ನನ್ನ ಅತ್ತೆ ಮಾವನವರದು ಅನುಕೂಲ ಸಂಸಾರವಂತೆ. ಇಬ್ಬರಿಗೂ ಎಡೆಬಿಡದೆ ದುಡಿಯುವ ಸ್ವಭಾವವಂತೆ. ಅದೇ ಆ ದಂಪತಿಗಳ ಯಶಸ್ಸಿನ ಗುಟ್ಟು ಎಂದು ಅವರನ್ನು ಬಲ್ಲವರು ಹೇಳುತ್ತಾರೆ.

ಅಣ್ಣಯ್ಯ ಹೆಬ್ಬಾರರ ಮರಣದ ನಂತರ, ನನ್ನ ಅತ್ತೆ ಮತ್ತು ಮಾವನವರು ಕೆಳಭಾಗದ ಜಮೀನು ಮತ್ತು ಮನೆಯನ್ನು ತಮ್ಮ ದಾಯಾದಿಗಳಿಗೆ ಮುಫತ್ತಾಗಿ ಬಿಟ್ಟು ಕೊಟ್ಟು, ಸುಳಿಮನೆ ಎಂಬ ಹೊಸಜಾಗಕ್ಕೆ ಬಂದು ಗೇಣಿ ಒಕ್ಕಲುಗಳಾಗಿ ಸುಮಾರು ಐವತ್ತು ಎಕರೆ ವಿಸ್ತಾರದ ಜಮೀನನ್ನು ಸಾಗುವಳಿ ಮಾಡಲು ತೊಡಗಿದರಂತೆ.

ಅತ್ತ, ಕಿಟ್ಟುಶೆಟ್ಟರು ಕೂಡಾ ಬಿಳಗೂರು ಎಂಬ ಜಾಗದಲ್ಲಿ, ಮಲ್ಲೇಶನಗುಡ್ಡ ತೋಟದ ಸಾಹುಕಾರ ಉದಕಮಂಡಲದ ಅಬ್ದುಲ್ ರಹೀಮ್ ಸೇಟ್ ಎಂಬವರಿಗೆ ಸೇರಿದ ಸುಮಾರು ನಲ್ವತ್ತು ಎಕರೆ ಜಮೀನನ್ನು ಗೇಣಿಗೆ ಪಡೆದು ಸಾಗುವಳಿ ಮಾಡಲು ಶುರುಮಾಡಿದರಂತೆ. ಸುಳಿಮನೆ ಮತ್ತು ಬಿಳಗೂರಿಗೆ ನಾಲ್ಕು ಮೈಲು ದೂರ. ಹೀಗಿದ್ದರೂ. ಗದ್ದೆ ಸಾಗುವಳಿಮಾಡುವ ಸಮಯ ಬಂದಾಗ ಕಿಟ್ಟುಶೆಟ್ಟರು ಮತ್ತು ರಘುಪತಿ ಹೆಬ್ಬಾರರು ಜತೆ ಜತೆಯಾಗೇ ಇಬ್ಬರ ಜಮೀನುಗಳಲ್ಲೂ ಹಿಂದಿನ ರೀತಿಯಲ್ಲೇ ಸರಿಸಮವಾಗಿ ಕೆಲಸ ಮಾಡುತ್ತಾ ಇದ್ದರಂತೆ. ಕಷ್ಟಪಟ್ಟು ದುಡಿಯುವವರಿಗೆ ಜಯ ಕಟ್ಟಿಟ್ಟ ಬುತ್ತಿ ಎಂಬ ನಾಣ್ಣುಡಿ ಸುಳ್ಳಾಗಲಿಲ್ಲ. ಕಷ್ಟಪಟ್ಟು  ದುಡಿಯುವ ಛಲದ ಈ ಇಬ್ಬರು ವ್ಯಕ್ತಿಗಳೂ, ಮುಂದಕ್ಕೆ ಒಳ್ಳೆಯ ದಿನಗಳನ್ನು ಕಂಡರಂತೆ! ಕ್ರಮೇಣ ತಮ್ಮ ಗೇಣಿ ಜಮೀನುಗಳನ್ನು ತಾವೇ ಕ್ರಯಕ್ಕೆ ಕೊಂಡು, ಸ್ವಂತ ಸಾಗುವಳಿದಾರರು ಅನ್ನಿಸಿಕೊಂಡರಂತೆ. ಇಬ್ಬರೂ ಅಜೀವಪರ್ಯಂತ ಗೆಳೆಯರಾಗಿಯೇ ಮುಂದುವರೆದರು. ನಮ್ಮ ಅತ್ತೆಯವರಿಗೆ ಬಿಳಿಗೂರು ಕಿಟ್ಟುಶೆಟ್ಟರ ಪತ್ನಿ ಆತ್ಮೀಯ ಗೆಳತಿಯಾಗಿದ್ದರು. ಇದು ಎರಡು ಸಂಸಾರಗಳ ಸುಂದರ ಸ್ನೇಹದ ವೃತ್ತಾಂತ.

೧೯೬೭ರಲ್ಲಿ ನನ್ನ ಮಾವ ತೀರಿಕೊಂಡರಂತೆ. ಆಗ ಶ್ರೀ ಕಿಟ್ಟುಶೆಟ್ಟರು ಅನ್ನನೀರು ಮುಟ್ಟದೆ ಬಹಳ ದಿನ ಕೊರಗಿದರಂತೆ. ಮಾವನವರು ತೀರಿಕೊಂಡ ಮೇಲೆ ಕಿಟ್ಟುಶೆಟ್ಟರು ವಾರಕ್ಕೆರಡು ದಿನ ತಪ್ಪದೆ ಸುಳಿಮನೆಗೆ ಬಂದು, ಚಿಕ್ಕ ಬಾಲಕಿಯಾದ ನನ್ನ ಪತ್ನಿ ಸರೋಜಮ್ಮಳನ್ನು ಮಾತನಾಡಿಸಿಕೊಂಡು ಮನೆಯವರ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರಂತೆ. ನನ್ನ ಮಾವನವರು ತೀರಿಕೊಂಡ ನಂತರ ದುಃಖಾತಿಶಯದಿಂದ ಕಿಟ್ಟುಶೆಟ್ಟರ ಕೂದಲೆಲ್ಲಾ ಒಮ್ಮೆಗೇ ಹಣ್ಣಾಗಿ, ತೀರಾ ಮುದುಕನಂತೆ ಕಾಣಿಸತೊಡಗಿದರಂತೆ. ನನ್ನನ್ನು ಕಂಡಾಗ ಅವರು, ಮಗೂ! ನೀವೂ ಕಷ್ಟಪಟ್ಟು ದುಡಿದು ನಿಮ್ಮ ಮಾವನಂತೆ ಒಳ್ಳೆಯ ಹೆಸರು ಪಡೆಯಬೇಕು! ಎಂದು ಹಾರೈಸುತ್ತಿದ್ದರು. ಅವರ ಕಾಲದ ಕಷ್ಟಸುಖಗಳನ್ನು ನನ್ನಲ್ಲಿ ವಿಷದವಾಗಿ ಹೇಳಿಕೊಳ್ಳುತ್ತಿದ್ದರು. ಇಂದಿಗೂ ಕಿಟ್ಟುಶೆಟ್ಟರ ಸಂಸಾರದವರು ಮತ್ತು ನಾವು ಆತ್ಮೀಯರಾಗಿಯೇ ಇದ್ದೇವೆ. ನನ್ನ ಮದುವೆಯಾದಾಗ ನನ್ನ ಮಾವ ಶ್ರೀ ರಘುಪತಿ ಹೆಬ್ಬಾರರು ತೀರಿಕೊಂಡು ನಾಲ್ಕು ವರ್ಷವಾಗಿತ್ತು. ನನ್ನ ಪತ್ನಿ ಸರೋಜಮ್ಮಗೆ ಅಣ್ಣತಮ್ಮಂದಿರು ಇಲ್ಲದ ಕಾರಣ, ನಾನು ಸುಳಿಮನೆಯಲ್ಲಿಯೇ ನಿಂತು ಅವಳ ಪಾಲಿನ ಜಮೀನನ್ನು ರೂಢಿ ಮಾಡಬೇಕಾಯಿತು.

ನನ್ನ ಮಾವನವರನ್ನು ನಾನು ಕಣ್ಣಾರೆ ಕಾಣದಿದ್ದರೂ, ಹಿರಿಯರಾದ ಕಿಟ್ಟುಶೆಟ್ಟರ ಸಹವಾಸದಲ್ಲಿ ನಾನು ಅವರ ವ್ಯಕ್ತಿತ್ವವನ್ನು ಕಂಡೆ. ಕಾಫಿ ಮತ್ತು ಅಡಿಕೆ ಕೃಷಿಯಲ್ಲಿ ಕಿಟ್ಟುಶೆಟ್ಟರಿಗೆ ಇದ್ದ ಅಪಾರ ಅನುಭವದ ಲಾಭವನ್ನು ಪಡೆದೆ. ಮಾರ್ಚ್‌ಏಪ್ರಿಲ್ ತಿಂಗಳಲ್ಲಿ ಕಾಫಿತೋಟಕ್ಕೆ ಹೂವಿನ ಮಳೆಯಾದಾಗ, ಕಿಟ್ಟುಶೆಟ್ಟರು ನಮ್ಮಲ್ಲಿ ಹಾಜರಾಗುತ್ತಿದ್ದರು. ಈಗಿನಂತೆ ನಮಗೆ ಆಗ ಟೆಲಿಫೋನ್ ಇರಲಿಲ್ಲ. ಕಿಟ್ಟುಶೆಟ್ಟರು ನಮ್ಮಲ್ಲಿಗೆ ಬಂದವರೇ, ಎಷ್ಟು ಮಳೆಯಾಯಿತೆಂದು ಕೇಳುತ್ತಿದ್ದರು. ನಾನು, ಅಳೆದ ಮಳೆ ವಿವರ ಹೇಳುತ್ತಿದ್ದೆ. ಆಗವರು, ನಿಮ್ಮ ಮಳೆ ಅಳತೆಯ ವಿವರ ಸಿಕ್ಕಿತು! ಈಗ ನಿಮ್ಮ ಕಾಫಿತೋಟ ಏನುಹೇಳುತ್ತೆ ನೋಡೋಣ ಎನ್ನುತ್ತ ನನ್ನನ್ನು ಕರೆದುಕೊಂಡು ನಮ್ಮ ತೋಟವಿಡೀ ಸುತ್ತುತ್ತಿದ್ದರು. ಅಲ್ಲಲ್ಲಿ ತನ್ನ ವಾಕಿಂಗ್‌ಸ್ಟಿಕ್‌ನಿಂದ ಅಗೆದು, ಮಳೆ ನೀರು ಎಷ್ಟು ಆಳಕ್ಕೆ ಹೀರಲ್ಪಟ್ಟಿದೆ ಎಂದು ತೋರಿಸುತ್ತಾ, ನನಗೆ ಆ ಬಗ್ಗೆ ತಿಳುವಳಿಕೆ ಕೊಡುತ್ತಿದ್ದರು. ತೋಟ ತಿರುಗಿ ಮನೆಗೆ ಬಂದೊಡನೆ ನನ್ನ ಅತ್ತೆಯವರನ್ನು ಅದೇ ೧೯೨೦ರ ಧಾಟಿಯಲ್ಲಿ ಕರೆಯುತ್ತಾ ಎಲ್ಲಿ? ಅಮ್ಮ! ಈಗ ಬರಲಿ ಸಕ್ಕರೆಹಾಕಿದ ಹಾಲು! ನಿಮ್ಮ ತೋಟಕ್ಕೆ ಹೂವಿನಮಳೆ ಚೆನ್ನಾಗಿ ಆಗಿದೆ! ಬರಲಿ ಬೆಳ್ಳಿಲೋಟದಲ್ಲಿ ಸಕ್ಕರೆ ಹಾಕಿದ ಹಾಲು, ತಟ್ಟೆ ತುಂಬಾ ಹಣ್ಣು ಎನ್ನುತ್ತಿದ್ದರು. ನನ್ನ ಅತ್ತೆಯವರು ಕೊಟ್ಟ ಹಾಲುಹಣ್ಣು ಸ್ವೀಕರಿಸಿ, ನನ್ನ ಅತ್ತೆಯವರಿಗೆ ಕೈಮುಗಿದು, ನಮ್ಮನ್ನು ಅಭಿನಂದಿಸಿ, ಕಿಟ್ಟುಶೆಟ್ಟರು ತಮ್ಮ ಬಿಳಗೂರುತೋಟದ ಕಡೆಗೆ ಹೊರಡುತ್ತಿದ್ದರು. ಹೊರಡುವ ಮೊದಲು ಸರೋಜಮ್ಮಳನ್ನು ಉದ್ದೇಶಿಸಿ, ಮಗೂ, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ! ಎಂದು ಆಶೀರ್ವಾದ ಮಾಡುತ್ತಿದ್ದರು. ಈಗ ನಮ್ಮ ಅತ್ತೆಯವರೂ ತೀರಿಕೊಂಡಿದ್ದಾರೆ. ಕಿಟ್ಟುಶೆಟ್ಟರು ಹಾಗೂ ಅವರ ಪತ್ನಿ ಇಂದು ಜೀವಂತವಿಲ್ಲ. ಪ್ರತಿವರ್ಷ ಹೂವಿನ ಮಳೆ ಬಂದಾಗ ನಾವು ಆ ಹಿರಿಯರನ್ನು ನೆನಪಿಸಿ ಅವರಿಗೆ ಮನದಲ್ಲೇ ವಂದಿಸುತ್ತೇವೆ.

* * *