ಜೀವನಪ್ರೀತಿ ಮನುಜ ಸಹಜವಾದುದು. ಅದೇರೀತಿ ಹಿಂದುವಾಗಿ ಹುಟ್ಟಿದ ಮೇಲೆ ಪುನರ್ಜನ್ಮದ ಆಸೆಯೂ ಸಹಜ. ಇವೆರಡನ್ನೂ ನೆನಪಿಸುವ ವ್ಯಕ್ತಿಯೊಬ್ಬರನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತೇನೆ.

ಆಗ ನಾನು ಸುಮಾರು ಏಳುವರ್ಷ ವಯಸ್ಸಿನ ಹುಡುಗ. ಅಂದರೆ, ೧೯೫೨ನೇ ಇಸವಿ. ನನ್ನ ಅಜ್ಜನ ಮನೆಯ ಕಂಪೌಂಡಿನಲ್ಲಿ ರಜಾದಿನವೊಂದರ ಮುಂಜಾನೆ ನಾನೊಬ್ಬನೇ ಆಡುತ್ತಿದ್ದೆ. ಕಂಪೌಂಡಿನ ಪಕ್ಕದ ಸರಕಾರೀ ರಸ್ತೆಯಲ್ಲಿ ನೀಳಕಾಯದ ವ್ಯಕ್ತಿಯೊಬ್ಬರು ನಡೆದು ಬರುತ್ತಿದ್ದರು. ಆರಡಿ ಎತ್ತರದ ಸಶಕ್ತ ಕಾಯದ ಆ ವ್ಯಕ್ತಿಗೆ ಸುಮಾರು ಎಂಬತ್ತು ವಯಸ್ಸಿರಬಹುದು. ತಲೆಯ ಮೇಲೆ ಹಳೇಯ ಮೈಸೂರು ಶೈಲಿಯ ಬಿಳಿಯ ಪೇಟಾ ಸುತ್ತಿದ್ದರು. ಸೈಕಲ್‌ಕಚ್ಚೆ ಹಾಕಿ ಧೋತಿ ಧರಿಸಿದ್ದರು. ಆಗಿನ ಕಾಲದಲ್ಲಿ ಸೈಕಲ್‌ಕಚ್ಚೆ ಎಂದರೆ ಈಗಿನ ಪ್ಯಾಂಟ್‌ಗೆ ಪರ್ಯಾಯವಾದ ಉಡುಪು. ಸೈಕಲ್ ಅಥವಾ ಮೋಟರ್‌ಸೈಕಲ್ ಸವಾರಿ ಮಾಡುವ ಭಾರತೀಯರು ಧರಿಸುತ್ತಿದ್ದ ಉಡುಪು ಅದು. ಕಾಲುಗಳನ್ನು ಬಳಸಿ ಕೂರುವ ಈ ಪಂಚೆ ಉಡುವ ರೀತಿ, ಕ್ರಿಯಾಶೀಲ ಭಾರತೀಯ ವ್ಯಕ್ತಿಗಳ ನೆಚ್ಚಿನ ದಿರುಸಾಗಿತ್ತು. ಬಂಗಾರದ ಗುಂಡಿಗಳನ್ನು ಹೊಂದಿಸಿದ ಬಿಳಿ ಶರಟನ್ನು ಸೈಕಲ್ ಕಚ್ಚೆಗೆ ಹೊಂದುವ ರೀತಿಯಲ್ಲಿ ಇನ್ಸರ್ಟ್ ಮಾಡಿ ಧರಿಸಿಕೊಂಡು, ಅದರ ಮೇಲೆ ಕಪ್ಪುಬಣ್ಣದ ಸರ್ಜ್ ಕೋಟ್ ಧರಿಸಿದ್ದರು. ಶರಟಿನ ಮಧ್ಯದ ಬಂಗಾರದ ಗುಂಡಿಯಿಂದ ಒಂದು ಬಂಗಾರದ ಸರಪಳಿ ಚೈನ್ ಹೊರಟು ಅವರ ಕೋಟಿನ ಎದೆಯ ಮೇಲಿನ ವಾಚ್‌ಪಾಕೆಟ್ ಸೇರಿತ್ತು. ಕಣ್ಣಿಗೆ ಕನ್ನಡಕ ಧರಿಸಿದ್ದ ಆ ವ್ಯಕ್ತಿಯು ಕನ್ನಡಕದ ಮೇಲೆ ಕಪ್ಪುಬಣ್ಣದ ಕೂಲಿಂಗ್‌ಗ್ಲಾಸುಗಳನ್ನು ಹೊಂದಿಸಿ ಏರಿಸಿಕೊಂಡಿದ್ದರು. ಅವರ ಬಲಗೈಯ್ಯ ತರ್ಜನಿಯ ಮೇಲೆ ವಜ್ರದ ಉಂಗುರ ಹೊಳೆಯುತ್ತಿತ್ತು.

ಬಿಸಿಲಿನಿಂದ ರಕ್ಷಣೆಗೆ, ಬೆಲೆಬಾಳುವ ಸೂರ್ಯ ಮಾರ್ಕಿನ ಹೊಸ ಕೊಡೆ ಹಿಡಿದುಕೊಂಡು, ನೀಳಹೆಜ್ಜೆಗಳನ್ನು ಇಡುತ್ತಾ, ಆ ಹಿರಿಯರು ನಡೆದು ಬರುತ್ತಿದ್ದರು. ಕಾಲಿಗೆ ಘಟ್ಟದ ಚಡಾವು ಎಂದು ಕರೆಯಲ್ಪಡುತ್ತಿದ್ದ ಪಾದರಕ್ಷೆ ಧರಿಸಿದ್ದರು. ಅವರು ನಡೆಯುವಾಗ ಆ ಪಾದರಕ್ಷೆಯು, ಜೀಕ್, ಜೀಕ್ ಎಂದು ಶಬ್ದ ಮಾಡುತ್ತಿದ್ದುವು. ಆ ದಿನಗಳಲ್ಲಿ, ಈ ಘಟ್ಟದ ಚಡಾವುಗಳನ್ನು ಮಲೆನಾಡಿನ ಗಣ್ಯವ್ಯಕ್ತಿಗಳು ಧರಿಸುತ್ತಿದ್ದರು. ಇವು ಮಾಡುತ್ತಿದ್ದ ಶಬ್ದವು ಅವರ ಬರವನ್ನು ಸಾರುತ್ತಿತ್ತು. ಈ ಚಡಾವುಗಳನ್ನು ಧರಿಸಿ ಘಟ್ಟದ ತೋಟಗಳು ಮತ್ತು ಕಾನುಗಳಲ್ಲಿ ಇಂತಹ ಗಣ್ಯರು ಓಡಾಡುತ್ತಿದ್ದರೆ, ಕಾಡುಪ್ರಾಣಿಗಳು ಮತ್ತು ಹಾವುಹುಪ್ಪಟೆಗಳು ಅವರ ದಾರಿಯಿಂದ ಸರಿದು ದೂರಹೋಗುತ್ತಿದ್ದುವಂತೆ. ಕೂಲಿಯ ಆಳುಗಳು ಇಂತಹವರ ಬರವನ್ನು ತಿಳಿದು ಗಪ್ ಚಿಪ್! ಆಗಿ ಬಿಡುತ್ತಿದ್ದರಂತೆ. ಈ ಘಟ್ಟದ ಚಡಾವುಗಳು ಕೆಸರಿನಲ್ಲಿ ಜಾರದಂತೆ ಮತ್ತು ಬೇಗನೆ ಸವೆಯದಂತೆ, ಆ ಚಡಾವುಗಳಿಗೆ ಲಾಳ ಕೂರಿಸುವ ಪದ್ಧತಿಯೂ ಇತ್ತು. ಇಂತಹ ಚಡಾವುಗಳನ್ನು ನುರಿತ ಚಮ್ಮಾರರು ತಯಾರಿಸಿ ದುಬಾರಿಬೆಲೆಗೆ ಇಂತಹ ಗಣ್ಯರಿಗೆ ಒದಗಿಸುತ್ತಿದ್ದರು. ಈ ಚಡಾವುಗಳ ಸವೆದ ಲಾಳಗಳನ್ನು ಬದಲಾಯಿಸಿ, ಪಾದರಕ್ಷೆಯ ಚರ್ಮದ ಹಂದರಗಳಿಗೆ ಎಣ್ಣೆ ಕೊಟ್ಟು ಸುಸ್ಥಿತಿಯಲ್ಲಿ ಇರಿಸುವ ಸರ್ವಿಸ್ ಬೇರೆ ನಿಯತಕಾಲಿಕವಾಗಿ ಆ ಚಮ್ಮಾರರಿಂದ ಆಗಬೇಕಿತ್ತಂತೆ. ಈ ಭಾರವಾದ ಚಪ್ಪಲಿಗಳನ್ನು ಧರಿಸುವವರು ಸಾಕಷ್ಟು ಬಲವಂತರೂ, ಧನವಂತರೂ ಆಗಿರುತ್ತಿದ್ದರು.

ನಾನು ಈ ರೀತಿಯ ದಿರುಸು ಧರಿಸಿದ ವ್ಯಕ್ತಿಯನ್ನು ಅದೇ ಮೊದಲ ಬಾರಿ ಕಂಡಿದ್ದುದರಿಂದ, ಅವರನ್ನು ಹತ್ತಿರದಿಂದ ನೋಡುವ ಸಲುವಾಗಿ, ನಮ್ಮ ಗೇಟಿನ ಬಳಿಹೋಗಿ ನಿಂತೆ. ಒಂದೇ ಗತಿಯಿಂದ ನಡೆದು ಬರುತ್ತಿದ್ದ ಆ ಮಹನೀಯರು, ನಮ್ಮ ಗೇಟಿನ ಬಳಿ ನನ್ನನ್ನು ಕಂಡು ನಿಂತೇಬಿಟ್ಟರು! ನನ್ನನ್ನೇ ಉದ್ದೇಶಿಸಿ, ಏನು ಮಗೂ, ನೀವು ಬಾಗ್ಲೋಡಿ ರಾಮರಾಯರ ಪುಳ್ಳಿಯೋ? ಎಂದು ಪ್ರಶ್ನಿಸಿದರು. (ದಕ್ಷಿಣಕನ್ನಡದ ಆಡುಭಾಷೆಯಲ್ಲಿ ಪುಳ್ಳಿ ಅಂದರೆ ಮೊಮ್ಮಗ. ಆ ಕಾಲದಲ್ಲಿ ಚಿಕ್ಕಮಕ್ಕಳನ್ನು ಬಹುವಚನದಲ್ಲಿ ಮಾತನಾಡಿಸುವ ಕ್ರಮ ದಕ್ಷಿಣಕನ್ನಡದ ಸುಶಿಕ್ಷಿತ ಜನರಲ್ಲಿತ್ತು. ಶ್ರೀಮಾನ್ ಬಂಗೇರ ಅವರು ನನ್ನನ್ನು ಸದಾ ಬಹುವಚನದಲ್ಲೇ ಮಾತನಾಡಿಸುತ್ತಿದ್ದರು.)

ನಾನು ಅವರನ್ನು ಕಂಡು ಗಲಿಬಿಲಿಗೊಂಡರೂ ಧೈರ್ಯವಾಗಿ, ಹೌದು. ನನ್ನ ಹೆಸರು ಮಧುಸೂದನ ಪೆಜತ್ತಾಯ ಎಂದೆ.

ತುಂಬಾ ಸಂತೋಷ ಮಗೂ! ನನ್ನ ಹೆಸರು ಎಮ್. ಕೊರಗಪ್ಪ ಬಂಗೇರ. ನಾನು ಘಟ್ಟದ ಮೇಲಿನ ಕೋದಿ ಎಸ್ಟೇಟ್ ಎಂಬ ತೋಟದ ಮುಖ್ಯ ರೈಟರ್ ಆಗಿದ್ದು ರಿಟೈರ್ ಆಗಿ ಬಂದವನು. ಇಲ್ಲಿಂದ ಎರಡು ಮೈಲು ದೂರದಲ್ಲಿ ವಾಸವಾಗಿದ್ದೇನೆ ಎಂದರು. ನಾನು ಸಹಜವಾಗಿ ಅವರಿಗೆ ಕೈಮುಗಿದೆ. ಅವರು ಕೂಡಾ ನಾನು ಚಿಕ್ಕವನೆಂದು ಕಡೆಗಣಿಸದೆ ನನಗೆ ಕೈಜೋಡಿಸಿ ಪ್ರತಿವಂದನೆ ಮಾಡಿದರು.

ನೀವು ನಮ್ಮ ಪಲಿಮಾರು ಮಠದ ದಿವಾನ್ ಶ್ರೀ ಶ್ರೀನಿವಾಸ ಪೆಜತ್ತಾಯರ ಮಗನಲ್ಲವೆ? ಕೇಳಿದರು. ಅವರು ನನ್ನನ್ನು ಅವರು ಗುರುತಿಸಿದರು..! ಎಂಬ ಸಂತೋಷದಿಂದ ನಾನು ಹೌದು! ಶ್ರೀ ಬಂಗೇರ ಅವರೆ, ನಾನು ಅವರ ಕಿರಿಯ ಪುತ್ರ ಎಂದೆ. ನೀವು ಇದು ತನಕ ಘಟ್ಟದ ಕಾಫಿತೋಟಗಳನ್ನು ನೋಡಿದ್ದೀರಾ? ಎಂದು ಕೇಳಿದರು.

ನಾನು ಕಾಫಿತೋಟಗಳನ್ನು ನಾನು ಇದುವರೆಗೆ ಕಂಡಿಲ್ಲ ಶ್ರೀ ಬಂಗೇರ ಅವರೆ! ಯಾವಾಗಲಾದರೂ, ಕಾಫಿತೋಟಗಳನ್ನು ಸುತ್ತಿ ನೋಡುವ ಆಸೆಯಿದೆ. ಸದ್ಯಕ್ಕೆ, ನನ್ನ ಈ ಅಜ್ಜನ ಮನೆಯ ಹಿಂದೆ ಇರುವ ಅರಬಿಕಾ ಕಾಫಿ ಗಿಡವೊಂದನ್ನು ನೋಡಿರುತ್ತೇನೆ. ಅದರಲ್ಲಿ ಆಗುವ ಸಿಹಿ ರುಚಿಯುಳ್ಳ ಕೆಂಪು ಹಣ್ಣುಗಳನ್ನೂ ನೋಡಿದ್ದೇನೆ! ಎಂದೆ. ಬಹಳ ಸಂತೋಷ ಮಗೂ, ನಿಮಗೆ ಗಿಡಗಳ ಮೇಲೆ ಪ್ರೀತಿ ಇದೆ! ಅಂದರು. ಅದಕ್ಕೆ ನಾನು ನನಗೆ ಗಿಡಮರಗಳನ್ನು ಪ್ರೀತಿಸಲು ಅಜ್ಜ ಹೇಳಿಕೊಟ್ಟಿದ್ದಾರೆ. ಅದಲ್ಲದೇ, ನನಗೆ ಪುಟ್ಟ ದನದ ಕರುಗಳನ್ನು ಕಂಡರೆ ಬಹು ಪ್ರೀತಿ. ನನ್ನ ಅಜ್ಜ ನನಗೆ ಕರುಗಳ ಯಜಮಾನ ಎಂಬ ಅಡ್ಡಹೆಸರು ಇಟ್ಟಿದ್ದಾರೀಂದೆ.

ಆ ಎತ್ತರದ ಮನುಷ್ಯ ತನ್ನ ಕೋಟಿನ ಎಡ ವಾಚ್‌ಪಾಕೆಟ್‌ಗೆ ಕೈಹಾಕಿ ಬಂಗಾರದ ಸರಪಳಿ ಜೋಡಿಸಿದ ಬಂಗಾರದ ಪಾಕೆಟ್ ವಾಚ್ ನೋಡುತ್ತಾ ಇಂದು ಸಮಯವಾಯಿತು ಮಗೂ, ನಾನು ಮಂಗಳೂರಿಗೆ ಹೊರಟಿದ್ದೇನೆ. ಹತ್ತು ಗಂಟೆಯ ಬಸ್ಸು ಹಿಡಿದು ಮಂಗಳೂರಿಗೆ ಹೋಗಬೇಕು, ಇನ್ನೊಮ್ಮೆ ಬಂದು ನಿಮ್ಮನ್ನೂ ನಿಮ್ಮ ಅಜ್ಜನವರನ್ನೂ ಕಾಣುವೆ. ನಮಸ್ಕಾರ! ಎಂದು ಮುನ್ನಡೆದರು. ನಾನೂ ಅವರಿಗೆ ಕೈ ಮುಗಿಯುತ್ತಾ ದಯವಿಟ್ಟು ನಮ್ಮ ಮನೆಗೆ ಮರೆಯದೆ ಬನ್ನಿ ಎಂದು ಆಹ್ವಾನಿಸಿದೆ. ಹೀಗೆ ನನಗೆ ಎಮ್.ಕೊರಗಪ್ಪ ಬಂಗೇರರ ಮೊದಲ ಪರಿಚಯವಾಯಿತು.

ಏಳುವರ್ಷದ ಹುಡುಗನಾದ ನನಗೂ, ಎಂಬತ್ತು ವರ್ಷಗಳ ಆ ವೃದ್ಧರಿಗೂ, ಒಂದು ಅಪ್ಯಾಯಮಾನವಾದ ಸ್ನೇಹವೇ ಮುಂದಿನ ದಿನಗಳಲ್ಲಿ ಏರ್ಪಟ್ಟಿತು. ಈ ಭೆಟ್ಟಿಯ ನಂತರ ಶ್ರೀಮಾನ್ ಬಂಗೇರ ಅವರು ತಿಂಗಳಿಗೆ ಮೂರುನಾಲ್ಕು ಸಲ ಭಾನುವಾರ ದಿನಗಳಂದು ನಮ್ಮ ಅಜ್ಜನ ಮನೆಗೆ ಬರುವುದು ವಾಡಿಕೆಯೇ ಆಯಿತು. ಬರುವಾಗ ಬರಿಗೈಯ್ಯಲ್ಲಿ ಎಂದಿಗೂ ಅವರು ಬಂದುದೇ ಇಲ್ಲ..! ಪನ್ನೇರಳೆ, ಪೇರಳೆ, ಕಸ್ತೂರಿ ಜಾಂ, ಸೀತಾಫಲ, ಸಪೋಟಾ ಇವುಗಳಲ್ಲಿ ಯಾವುದಾದರೂ ಒಂದು ತರಹೆಯ ಹಣ್ಣುಗಳನ್ನು ತಮ್ಮ ಕೈಚೀಲದಲ್ಲಿ ತುಂಬಿಕೊಂಡೇ ಬರುತ್ತಿದ್ದರು. ಬಂದೊಡನೇ ನನ್ನ ದೋಸ್ತಿ ಮಧುಸೂದನ ಪೆಜತ್ತಾಯರು ಎಲ್ಲಿ? ಎಂದು ಆ ಹಣ್ಣುಗಳನ್ನು ನನ್ನ ಕೈಯ್ಯಲ್ಲಿ ಕೊಡುತ್ತಿದ್ದರು. ನಾನು ಆ ಹಣ್ಣುಗಳನ್ನು ಸದಾ ಅಡುಗೆಮನೆಯಲ್ಲೇ ಏನಾದರೂ ಕೆಲಸ ನಿಭಾಯಿಸುತ್ತಿದ್ದ ನನ್ನ ಅಜ್ಜಿಯವರ ಕೈಯ್ಯಲ್ಲಿ ಕೊಟ್ಟು, ಶ್ರೀ ಬಂಗೇರರು ಬಂದಿದ್ದಾರೆ. ಅಜ್ಜೀ, ಅವರಿಗೆ ಬಾಯಾರಿಕೆಗೆ ಕೊಡಿ! ಎನ್ನುತ್ತಾ, ಶ್ರೀ ಬಂಗೇರರಿಗೆ ದೊಡ್ಡಲೋಟದಲ್ಲಿ ಕಾಫಿ ಒಯ್ದು ಕೊಡುತ್ತಿದ್ದೆ.

ಬಂಗೇರರು ಕಾಫಿ ಕುಡಿದು, ನನ್ನ ದೋಸ್ತಿಯವರೊಡನೆ ನಾನು ಸ್ವಲ್ಪ ಮಾತನಾಡಬೇಕು ಎನ್ನುತ್ತಾ ನನ್ನ ಅಜ್ಜನ ಅಪ್ಪಣೆ ಪಡೆದು, ನನ್ನನ್ನು ಅಜ್ಜನಮನೆಯ ಎದುರಿನ ಮಾವಿನ ಮರದ ಕೆಳಗಿನ ಕಲ್ಲುಬೆಂಚಿನ ಕಡೆಗೆ ಕರೆದುಕೊಂಡು ಹೋಗಿ, ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿಸುತ್ತಿದ್ದರು. ಪ್ರತೀಸಲವೂ ಮಾತುಗಳು ತೋಟಗಾರಿಕೆ ಮತ್ತು ಕಾಫಿತೋಟಗಳ ಸುತ್ತವೇ ಇರುತ್ತಿದ್ದುವು. ಬಂಗೇರರದು ಸದಾ ಒಂದೇ ತರಹದ ಠಾಕುಠೀಕಾದ ದಿರುಸು ಧರಿಸಿರುತ್ತಿದ್ದರು. ಅದೇ ಮುಂಡಾಸು, ಕೋಟು, ಕನ್ನಡಕ ಮತ್ತು ಪಾಕೆಟ್ ವಾಚ್! ಅವರು ಅತಿಯಾಗಿ ಪ್ರೀತಿಸುವ ವಸ್ತು ಎಂದರೆ, ಅವರ ಕರೀಕೋಟಿನ ಬಲ ಲ್ಯಾಪೆಲ್ ಮೇಲೆ ಧರಿಸುತ್ತಿದ್ದ ಬೆಳ್ಳಿಯ ಮೆಡಲ್. ಪ್ರತಿಸಲವೂ ಅವರು ಆ ಮೆಡಲನ್ನು ನನಗೆ ತೋರಿಸುತ್ತಾ ಮಗೂ, ಈ ಮೆಡಲ್ ನನ್ನ ಸರ್ವಸ್ವ..! ಕಾಫಿತೋಟದ ದೊರೆಗಳು ನನ್ನ ಕೆಲಸಕ್ಕೆ ಮೆಚ್ಚಿ, ನಾನು ‘ರಿಟೈರ್ ಆಗುವ ದಿನದ ಬೀಳ್ಕೊಡಿಗೆ ಸಮಾರಂಭದಲ್ಲಿ ನನಗೆ ದಯಪಾಲಿಸಿದ ಮೆಚ್ಚುಗೆಯ ಬಹುಮಾನ ಇದು..! ಇದೇ ನನಗೆ ಈ ಭೂಲೋಕದಲ್ಲಿರುವ ಅತೀ ಅಚ್ಚುಮೆಚ್ಚಿನ ವಸ್ತು..! ಎಂದು ಬೀಗುತ್ತಿದ್ದರು. ಅವರು ತೋಟಗಳಲ್ಲಿ ಕೆಲಸ ಮಾಡಿದ ದಿನಗಳ ಕಥೆಗಳನ್ನು ನನಗೆ ಹೇಳುತ್ತಿದ್ದರು. ಆ ದಿನಗಳ ಹುಲಿ ಶಿಖಾರಿಯ ಕಥೆಗಳನ್ನು ನನಗೆ ವರ್ಣಿಸಿ ಹೇಳುವರು. ಅವರು ಘಟ್ಟದ ಜ್ವರ ಎಂಬ ಮಲೇರಿಯಾ ಜ್ವರದಿಂದ ಪಟ್ಟಪಾಡು ವಿವರಿಸಿ ಹೇಳುತ್ತಿದ್ದರು. ಸದಾ ಮಳೆ, ಮಂಜು ಮತ್ತು ಮೋಡಗಳಿಂದ ಆವೃತವಾದ ಕಾಡುಗಳ ಮಧ್ಯೆ ಸಾಗಿದ ಅವರ ಜೀವನದ ಬಗ್ಗೆಯೇ ಅವರ ಮಾತುಗಳು ಸಾಗುತ್ತಿದ್ದುವು. ಅವರು ತಮ್ಮ ಜೀವನದಲ್ಲಿ ನೆಟ್ಟು ಆರೈಕೆ ಮಾಡಿದ ಆ ಲಕ್ಷಾಂತರ ಕಾಫಿಗಿಡಗಳ ಕಥೆ ಮತ್ತು ಅವರು ತಮ್ಮ ಕೆಲಸದಲ್ಲಿ ಕಂಡ ಜೀವನದ ಸಾರ್ಥಕ್ಯ ಇವುಗಳ ಬಗೆಗಿನ ವಿವರಣೆಗಳಲ್ಲೇ ನಮ್ಮ ಹೆಚ್ಚಿನ ಭಾನುವಾರಗಳ ಮುಂಜಾನೆಗಳು ಕಳೆಯುತ್ತಿದ್ದುವು.

ಆಗಾಗ ಅವರು ಪುನರ್ಜನ್ಮದ ಬಗ್ಗೆ ಕೂಡಾ ಮಾತನಾಡುತ್ತಿದ್ದರು. ಪುನರ್ಜನ್ಮದಲ್ಲಿ ಅವರಿಗೆ ಅಚಲವಾದ ನಂಬಿಕೆ. ಅವರು ಮುಂದಿನ ಜನ್ಮದಲ್ಲಿ ಕೂಡಾ ಅವೇ ಕಾಫಿತೋಟಗಳ ರೈಟರಾಗಿ ಹುಟ್ಟಿ ಬರಬೇಕಂತೆ..! ಈ ಜನ್ಮದಲ್ಲಿ ತಾವು ನೆಟ್ಟ ಗಿಡಗಳ ಆರೈಕೆಯನ್ನು ಪುನಃ ಮಾಡಬೇಕಂತೆ..! ತಮ್ಮ ಆ ಮುಂದಿನ ಜನ್ಮದಲ್ಲೂ ಉತ್ತಮ ಕೆಲಸಗಾರನೆಂದು ಅನ್ನಿಸಿಕೊಂಡು ಇದೇ ರೀತಿ ಮೆಡಲ್ ಪಡೆಯಬೇಕಂತೆ. ಇದಕ್ಕೂ ಹೆಚ್ಚಿನ ಆಶೆ ಅವರಲ್ಲಿ ಏನೂ ಇರಲಿಲ್ಲ..!

ಮಧುಸೂದನ ಪೆಜತ್ತಾಯರೆ, ನೀವು ಏನೂ ತಿಳಿಯದ ಮುಗ್ಧ ಮನಸ್ಸಿನ ಮಗು! ನೀವು ಪ್ರಾರ್ಥಿಸಿದರೆ, ದೇವರು ನನಗೆ ಇದೇ ರೀತಿಯ ಪುನರ್ಜನ್ಮ ಕೊಡುತ್ತಾನೆ! ದಯವಿಟ್ಟು ನೀವು ದಿನಾ ನನಗೋಸ್ಕರ ಪ್ರಾರ್ಥಿಸಬೇಕು..! ಎಂದು ನನ್ನನ್ನು ಕೇಳುತ್ತಿದ್ದರು. ನಾನು ಕೂಡಾ ಅವರಂದಂತೆಯೇ ದಿನಾ ರಾತ್ರಿ ಮಲಗುವ ಮುನ್ನ ಅವರಿಗೋಸ್ಕರ ಪ್ರಾರ್ಥನೆಮಾಡುತ್ತಿದ್ದೆ. ನನಗೆ ಹನ್ನೆರಡು ವರುಷ ತುಂಬುತ್ತಲೇ ಶ್ರೀ ಬಂಗೇರರು ತೀರಿಕೊಂಡ ಸುದ್ದಿ ತಿಳಿಯಿತು. ಆದರೆ, ನಾನು ಅವರನ್ನು ಇಂದಿಗೂ ಮರೆತಿಲ್ಲ. ಅವರು ನಾನು ಚಿಕ್ಕಮಗುವಾದರೂ ನನ್ನನ್ನು ಬಹುವಚನದಿಂದಲೇ ಕರೆದ ಸಜ್ಜನಿಕೆಯ ರೀತಿ, ಅವರ ವೃತ್ತಿ ಪ್ರೇಮ ಇವುಗಳನ್ನು ನಾನು ಎಂದಿಗೂ ಮರೆಯಲಾರೆ.

ಇಂದು ಆ ಭಗವಂತನ ದಯೆಯಿಂದ ನಾನೂ ಒಬ್ಬ ಕಾಫಿ ಬೆಳೆಗಾರ ಎನ್ನಿಸಿಕೊಂಡಿದ್ದೇನೆ. ನನ್ನ ವೃತ್ತಿಯ ಘನತೆಗೌರವಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಪಾಡಿಕೊಂಡು ಬಂದಿದ್ದೇನೆ. ನನಗೂ ಲಕ್ಷಾಂತರ ಕಾಫಿಗಿಡಗಳನ್ನು ನೆಟ್ಟು, ಆರೈಕೆ ಮಾಡುವ ಸುಯೋಗ ಈ ಜನ್ಮದಲ್ಲಿ ದೊರಕಿದೆ.

ಇಂದು ಈಗ ನಾನು ಅರುವತ್ತರ ಹರೆಯಕ್ಕೆ ಕಾಲಿಡುತ್ತಾ ವೃದ್ಧಾಪ್ಯದ ಮೊದಲನೇ ಮೆಟ್ಟಿಲನ್ನು ಆ ಭಗವಂತನ ದಯದಿಂದ ಏರುತ್ತಾ ಇದ್ದೇನೆ. ನನಗೂ ಪುನರ್ಜನ್ಮದ ಬಗ್ಗೆ ಆಗಾಗ ಆಲೋಚನೆ ಬರುತ್ತದೆ. ನಾನು ಇದುವರೆಗೆ ಕಣ್ಣಾರೆ ಕಾಣದ ಆ ದೇವರು ನನ್ನ ಮರಣಾನಂತರದಲ್ಲಿ ಎಲೈ, ಮಧುಸೂದನ ಪೆಜತ್ತಾಯ, ನಿನಗೆ ಪುನರ್ಜನ್ಮ ಎಂಬುದು ಬೇಕೇ? ಬೇಕೆಂದಾದರೆ ಯಾವ ಜನ್ಮ ಬೇಕು? ಎಂದು ಪ್ರಶ್ನಿಸಿದರೆ, ನಾನು ಏನು ಕೇಳಿಯೇನು? ನಾನೂ ಮಾನ್ಯ ಎಮ್. ಕೊರಗಪ್ಪ ಬಂಗೇರರಂತೆ ನಾನು ನೆಟ್ಟು ಸಲಹಿದ ಅಸಂಖ್ಯ ಗಿಡಮರಗಳ ಸೇವೆಯ ಭಾಗ್ಯವನ್ನು ಕೊಡು ದೇವಾ! ಎನ್ನುವವನೇ ಖಂಡಿತಾ..!

* * *