ಹಲವು ವರುಷಗಳ ಹಿಂದೆ ಶತಾಯುಷಿಯಾಗಿದ್ದ ಮಲ್ಲಾಡಿ ಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳನ್ನು ನೋಡಲು ನನ್ನ ಸಂಸಾರ ಸಮೇತ ಹೋಗಿದ್ದೆ.

ತಿರುಕ ಎಂಬ ಕಾವ್ಯನಾಮದಿಂದ ನೂರಾರು ಪುಸ್ತಕಗಳನ್ನು ರಚಿಸಿದ ಖ್ಯಾತ ಸಾಹಿತಿ ಆಗಿದ್ದ ಅವರು, ಸದಾ ಖಾಕಿ ಅರ್ಧಚಡ್ಡಿ (ಶಾರ್ಟ್ಸ್) ಮತ್ತು ಬಿಳಿಯ ಖಾದಿಬಟ್ಟೆಯಿಂದ ತಯಾರಿಸಿದ ಅರ್ಧತೋಳಿನ ಬನಿಯಾನ್ ಧರಿಸುತ್ತಿದ್ದರು. ಜಾತಿಬೇಧ, ಮತಬೇಧ ಅಥವಾ ವರ್ಣಬೇಧಗಳು ಅವರ ಆಶ್ರಮದಲ್ಲಿರಲಿಲ್ಲ. ಮಡಿಮಡಿ ಎಂದು ಮೂರಡಿ ಹಾರುವ ಅವಾಂತರಗಳು ನಮಗೆ ಆ ಆಶ್ರಮದಲ್ಲಿ ಕಂಡುಬರಲಿಲ್ಲ. ಅವರು ಆಯುರ್ವೇದ ವೈದ್ಯಕೀಯ ಶಾಸ್ತ್ರವನ್ನು ಅಭ್ಯಾಸಮಾಡಿದ ನುರಿತ ವೈದ್ಯರಾಗಿದ್ದರು. ಮಾನವೀಯತೆಯನ್ನು ಪ್ರಥಮ ಸ್ಥಾನದಲ್ಲಿಟ್ಟು ಮೆರೆದ ಕರ್ಮಯೋಗಿ ಎಂದು ಅವರು ಹೆಸರುಗಳಿಸಿದ್ದರು. ಹಲವಾರು ವರ್ಷ ಯೋಗ ಸಾಧನೆಮಾಡಿ, ಹಲವರಿಗೆ ಯೋಗಪಾಠ ಮತ್ತು ಯೋಗಚಿಕಿತ್ಸೆ ಇವುಗಳನ್ನು ಕೂಡಾ ಬೋಧಿಸುತ್ತಿದ್ದರು. ಅವರು ಶಿಕ್ಷಣತಜ್ಞ ಮತ್ತು ಸಮಾಜ ಸುಧಾರಕ ಸ್ವಾಮೀಜಿ ಎಂದು ಭಾರತದೇಶದಲ್ಲೇ ಹೆಸರು ಮಾಡಿದ ಸನ್ಯಾಸಿಯಾಗಿದ್ದರು. ಹಲವು ಅನಾಥಾಶ್ರಮಗಳು ಮತ್ತು ಶಾಲೆಗಳನ್ನು ನಡೆಸುತ್ತಾ ಸಮಾಜಸೇವೆ ಮಾಡುತ್ತಿದ್ದರು. ನಾನು ಅವರನ್ನು ಕಂಡಾಗ ಅವರ ವಯಸ್ಸು ನೂರಾ ಒಂದಕ್ಕಿಂತ ಹೆಚ್ಚು ಇತ್ತು. ಅವರ ವ್ಯಕ್ತಿತ್ವವನ್ನು ಕಾಣುವ ಕುತೂಹಲದಿಂದ ನಾನು ಸಂಸಾರ ಸಮೇತ ಆ ಆಶ್ರಮಕ್ಕೆ ಹೋಗಿದ್ದೆನು.

ಚಿತ್ರದುರ್ಗ ನಗರದಿಂದ ಕೆಲವು ಮೈಲು ದೂರವಿದ್ದ ಅವರ ಆಶ್ರಮಕ್ಕೆ ನಾವು ತಲುಪಿದಾಗ ಮಧ್ಯಾಹ್ನದ ಮೂರು ಗಂಟೆಯ ಸಮಯ ಆಗಿತ್ತು. ಆಶ್ರಮವು ಸುವ್ಯವಸ್ಥಿತವಾಗಿ ನಿರ್ಮಿಸಲ್ಪಟ್ಟಿತ್ತು. ಆಶ್ರಮದ ಪರಿಸರದಲ್ಲಿ ಎಲ್ಲೆಲ್ಲೂ ಅಚ್ಚುಕಟ್ಟುತನ ಮತ್ತು ನಿರ್ಮಲತೆ ಎದ್ದು ಕಾಣುತ್ತಿದ್ದುವು. ಆಶ್ರಮದ ದೊಡ್ಡ ಗೇಟನ್ನು ದಾಟಿ ಒಳಗೆ ಪ್ರವೇಶಿಸಿದ ಕೂಡಲೇ, ವಾಹನಗಳನ್ನು ನಿಲ್ಲಿಸುವ ವಿಶಾಲವಾದ ಅಂಗಣ ಕಂಡುಬಂತು. ನಮ್ಮ ವಾಹನವನ್ನು ಅಲ್ಲಿ ನಿಲ್ಲಿಸಿ, ಸ್ವಾಗತಕಛೇರಿಗೆ ಹೋಗಿ ನಮ್ಮ ಪರಿಚಯ ತಿಳಿಸಿದೆ. ನಾವು ಆಶ್ರಮವನ್ನು ನೋಡಲು ಮತ್ತು ಸ್ವಾಮಿಗಳ ದರ್ಶನಕ್ಕಾಗಿ ಬಂದಿದ್ದೇವೆ ಎಂದೆ. ಸ್ವಾಗತಕಾರರು ನಮ್ಮ ಹೆಸರು ಮತ್ತು ವಿಳಾಸಗಳನ್ನು ಸಂದರ್ಶಕರ ಪುಸ್ತಕದಲ್ಲಿ ಬರೆಸಿ ಸಹಿ ಹಾಕಿಸಿಕೊಂಡರು.

ತಮ್ಮೆಲ್ಲರ ಮಧ್ಯಾಹ್ನದ ಊಟ ಆಗಿದೆಯೇ? ಊಟ ಆಗದಿದ್ದರೆ, ದಯವಿಟ್ಟು ಮೊದಲು ಭೋಜನಶಾಲೆಗೆ ನನ್ನ ಜತೆಗೆ ಬನ್ನಿ. ನಿಮ್ಮ ಊಟವಾದ ಮೇಲೆ ನಿಮಗೆ ಆಶ್ರಮವನ್ನು ತೋರಿಸಿ, ಸ್ವಾಮಿಗಳ ದರ್ಶನ ಮಾಡಿಸುತ್ತೇನೆ. ಸ್ವಾಮಿಗಳು ಅತಿಥಿಸತ್ಕಾರಕ್ಕೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ಎಂದು ಹೇಳಿದರು. ನಾವೆಲ್ಲರೂ ಚಿತ್ರದುರ್ಗದಲ್ಲಿ ಊಟ ಮಾಡಿ ಬಂದಿದ್ದೇವೆ. ಈಗ ನಮಗೆ ಏನೂ ಆಹಾರ ಬೇಡ ಎಂದು ನಾನು ಉತ್ತರಿಸಿದೆ.

ಸ್ವಾಗತ ಕಛೇರಿಯ ಮುಂದೆಯೇ ಮೊದಲು ನಮಗೊಂದು ಮಸೀದಿ ಸಿಕ್ಕಿತು. ಸ್ವಾಗತಕಾರರು ಈ ಆಶ್ರಮದಲ್ಲಿ ಬಹಳ ಜನ ಮುಸ್ಲಿಮರು ಇದ್ದಾರೆ.  ಅವರ ಸಲುವಾಗಿ ಈ ಮಸೀದಿ ಇದೆ ಎಂದರು. ಅದಕ್ಕಿಂತ ಸ್ವಲ್ಪ ಮುಂದಕ್ಕೆ ನಮಗೊಂದು ದೇವಸ್ಥಾನ ಸಿಕ್ಕಿತು. ಇದು ಹಿಂದುಗಳಿಗಾಗಿ! ಎಂದರು ನಮ್ಮ ಸ್ವಾಗತಕಾರ. ಮುಂದಕ್ಕೆ ನಮಗೆ ಒಂದು ದೊಡ್ಡದಾದ ಸಾಮೂಹಿಕ ಪ್ರಾರ್ಥನಾ ಮಂದಿರ ಮತ್ತು ಸಭಾಂಗಣವಾಗಿ ಉಪಯೋಗ ಮಾಡಲ್ಪಡುವ ಹಾಲ್ ಸಿಕ್ಕಿತು. ಅದರ ಪಕ್ಕದಲ್ಲೇ ತರಗತಿಗಳನ್ನು ನಡೆಸುವ ಶಾಲಾ ಕೊಠಡಿಗಳ ಸಮುಚ್ಛಯ ಕಾಣಿಸಿತು. ಇದು ನಮ್ಮ ಆಶ್ರಮದ ಶಾಲೆ. ಬಾಲವಾಡಿಯಿಂದ ಎಸ್.ಎಸ್.ಎಲ್.ಸಿ ಕ್ಲಾಸಿನ ತನಕದ ಕ್ಲಾಸುಗಳು ಇಲ್ಲಿ ನಡೆಯುತ್ತವೆ ಎಂದರು. ಸ್ವಲ್ಪ ಬಲಬದಿಗೆ ಕಾಣುತ್ತಿದ್ದ ದೊಡ್ಡಕಟ್ಟಡಗಳ ಸಮೂಹವನ್ನು ತೋರಿಸುತ್ತಾ ಅದು ಗಂಡುಮಕ್ಕಳ ವಸತಿಗೃಹ ಎಂದರು. ಅದೇರೀತಿ ಶಾಲೆಯ ಎಡಪಕ್ಕಕ್ಕೆ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ತೋರಿಸುತ್ತಾ, ಅಲ್ಲಿ ಕಾಣುವುದು ಹೆಣ್ಣುಮಕ್ಕಳ ವಸತಿಗೃಹ ಮತ್ತು ಅಬಲಾಶ್ರಮ. ಅಬಲಾಶ್ರಮದಲ್ಲಿ ಅನಾಥರು, ಯಾರೂ ದಿಕ್ಕಿಲ್ಲದ ಸ್ತ್ರೀಯರು ಮತ್ತು ವೃದ್ಧ ಮಹಿಳೆಯರು ವಾಸಿಸುತ್ತಾರೆ. ಗಂಡಸರ ವೃದ್ಧಾಶ್ರಮದ ಕಟ್ಟಡ ಇಲ್ಲೇ ಸ್ವಲ್ಪ ಮುಂದಕ್ಕೆ ಇದೆ ಎಂದರು.

ಅಲ್ಲಿಂದ ಮುಂದಕ್ಕೆ ಹೋದಾಗ ಹೊಸದಾಗಿ ಒಂದು ಕಟ್ಟಡ ಸಮುಚ್ಛಯದ ನಿರ್ಮಾಣವಾಗುತ್ತಾ ಇರುವುದು ಕಂಡುಬಂತು. ಅದೇನು ಎಂದು ನಾವು ಪ್ರಶ್ನಿಸಿದೆವು. ಅದಕ್ಕೆ ಸ್ವಾಗತಕಾರರು ಆ ಕಟ್ಟಡಗಳ ಬಗ್ಗೆ ಸ್ವಾಮೀಜಿಯವರೇ ತಮಗೆ ಖುದ್ದಾಗಿ ವಿವರಿಸುತ್ತಾರೆ ಎಂದರು. ನಾವು ಮುಂದೆ ನಡೆದಂತೆ ವೈದ್ಯಕೀಯ ಸಸ್ಯೋದ್ಯಾನ ಎಂಬ ಫಲಕ ಕಾಣಿಸಿತು. ಸುಮಾರು ಹದಿನೈದು ಎಕರೆ ಜಾಗದಲ್ಲಿ ವಿವಿಧ ಗಿಡಮೂಲಿಕೆ ಮತ್ತು ಔಷಧೀಯ ಸಸ್ಯಗಳನ್ನು ಅಲ್ಲಿ ಬೆಳೆಸಿದ್ದರು. ಪ್ರತೀ ವಿಧದ ಸಸ್ಯಗಳ ವಿವರ ಕೊಡುವ ಫಲಕಗಳು ಅಲ್ಲಿ ಕಂಡುಬಂದುವು. ಸ್ವಾಗತಕಾರರು ಪಕ್ಕದಲ್ಲಿರುವ ದೊಡ್ಡ ಕಟ್ಟಡವನ್ನು ತೋರಿಸುತ್ತಾ, ಅದು ನಮ್ಮ ಗೋಶಾಲೆ. ಅಲ್ಲಿ ದನಗಳು, ಎಮ್ಮೆಗಳು ಹಾಗೂ ಹೊಲದಲ್ಲಿ ದುಡಿಯುವ ಎತ್ತುಗಳು ಇವೆ. ಅವುಗಳ ಜತೆಗೆ ಅನಾಥ ಮತ್ತು ನಿತ್ರಾಣವಾದ ದನಕರುಗಳನ್ನೂ ಆಶ್ರಮ ಸಾಕುತ್ತಾ ಇದೆ ಅಂದರು. ಇನ್ನು ಉಳಿದ ಜಾಗವು ಆಶ್ರಮಕ್ಕೆ ಸೇರಿದ ತೋಟ, ಹೊಲ ಮತ್ತು ಗದ್ದೆಗಳು. ಈ ಆಶ್ರಮ ವಾಸಿಗಳೆಲ್ಲರೂ ಸೇರಿ ಇಲ್ಲಿರುವ ಸುಮಾರು ನಲ್ವತ್ತು ಎಕರೆಯಷ್ಟು ಜಾಗವನ್ನು ಸಾಗುವಳಿ ಮಾಡುತ್ತೇವೆ ಎಂದು ಹೇಳಿದರು.

ಆಶ್ರಮದ ಔಷಧೀಯ ಸಸ್ಯೋದ್ಯಾನದಲ್ಲಿ ಸುಮಾರು ನಲ್ವತ್ತೈದು ವರ್ಷ ಪ್ರಾಯದವರಂತೆ ಕಾಣುವ ನೀಳಕಾಯದ ಗೌರವರ್ಣದ ಬಲಿಷ್ಟ ವ್ಯಕ್ತಿಯೊಬ್ಬರು ಔಷಧೀಯ ಗಿಡಗಳ ಪಾತಿಗೆ ನೀರುಣಿಸುತ್ತಿದ್ದರು. ಖಾಕಿ ಹಾಫ್ ಪ್ಯಾಂಟ್ ಧರಿಸಿ ಬಿಳೇ ಖಾದಿ ಬನಿಯನ್ ತೊಟ್ಟಿದ್ದ ಅವರು ಆ ಗಿಡಗಳ ರಖೋಲೆ ನೋಡುವ ಮೇಸ್ತ್ರಿಯಂತೆ ನಮಗೆ ಕಂಡುಬಂದರು. ಸ್ವಾಗತಕಾರರು ಅವರಿಗೆ ಕೈಜೋಡಿಸಿ ವಂದಿಸುತ್ತಾ ಸ್ವಾಮೀಜಿ, ತಮ್ಮನ್ನು ನೋಡಲು ಇವರು ಬಂದಿದ್ದಾರೆ ಎಂದರು. ಅವರೇ ಸ್ವಾಮಿಗಳು ಎಂದು ನಮಗೆ ಗೊತ್ತಾಯಿತು!

ನಾವೆಲ್ಲರೂ ಅವರಿಗೆ ವಂದಿಸಿದೆವು. ಅವರು ಪ್ರತಿವಂದಿಸುತ್ತಾ ಮಲ್ಲಾಡಿಹಳ್ಳಿಯ ಆಶ್ರಮಕ್ಕೆ ಸ್ವಾಗತ ಎಂದರು. ಮೊದಲು ಮಕ್ಕಳನ್ನು, ಆಮೇಲೆ ನಮ್ಮನ್ನು ಕುಶಲ ವಿಚಾರಿಸುತ್ತಾ, ಅವರು ನಗುಮೊಗದಿಂದ ನಮ್ಮೊಡನೆ ಮಾತನಾಡಿದರು.

ಸ್ವಾಮೀಜಿಯವರು ಬಿಡುವಾದಾಗಲೆಲ್ಲಾ ಹೊಲಗದ್ದೆಗಳಲ್ಲಿ ಸಾಮಾನ್ಯ ರೈತನಂತೆ ದುಡಿಯುತ್ತಿದ್ದರಂತೆ. ಪ್ರತಿದಿನ ಬೆಳಗಿನ ಹೊತ್ತು ಮತ್ತು ಸಾಯಂಕಾಲ ಅವರು ನಡೆಸುತ್ತಿದ್ದ ಧರ್ಮಾರ್ಥ ಆಯುರ್ವೇದ ಆಸ್ಪತ್ರೆ ಮತ್ತು ಯೋಗಚಿಕಿತ್ಸಾಕೇಂದ್ರಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದರಂತೆ. ಸ್ವಾಮೀಜಿಯವರು ನನ್ನ ವೃತ್ತಿ ಏನೆಂದು ಕೇಳಿದಾಗ ನಾನೊಬ್ಬ ವೃತ್ತಿಪರ ಕಾಫಿಬೆಳೆಗಾರನೆಂದು ಹೇಳಿದೆ. ನಿಮಗೆ ಇಲ್ಲಿರುವ ಸಸ್ಯಗಳ ಪರಿಚಯ ಈಗಾಗಲೇ ಇರಬಹುದು! ಎನ್ನುತ್ತ ತಮ್ಮ ಔಷಧೀಯ ಸಸ್ಯಗಳ ವನದತ್ತ ಕೈ ಆಡಿಸಿದರು. ನನಗೆ ಕೆಲವೇ ಕೆಲವು ಔಷಧೀಯ ಸಸ್ಯಗಳ ಗುರುತಾಯಿತು. ಉಳಿದುವನ್ನು ನಾನು ಇದೇ ಮೊದಲು ನೋಡುತ್ತಿರುವುದು ಅನ್ನಿಸುತ್ತಿದೆ ಎಂದು ಸತ್ಯ ನುಡಿದೆ.

ಅದಕ್ಕವರು ನೀವು ಹೇಳುವುದು ಸರಿ, ನಾನು ಗುಡ್ಡಬೆಟ್ಟಗಳನ್ನು ಸುತ್ತಿ, ಈ ಸಸ್ಯಗಳನ್ನು ಸಂಪಾದಿಸಿ ತಂದು ಇಲ್ಲಿ ಬೆಳೆಸಿದ್ದೇನೆ. ಕಾಫಿ ಬೆಳೆಗಾರರಾದ ನಿಮಗೆ ಅಮೃತಬಳ್ಳಿ, ನೆಲ್ಲಿ, ಅಣಿಲೇಕಾಯಿ, ಶತಾವರಿ, ಸುಗಂಧಿಬೇರು ಮತ್ತು ಬ್ರಾಹ್ಮೀ ಇವುಗಳ ಪರಿಚಯವಿರಬೇಕಲ್ಲವೆ? ಅವು ಎಷ್ಟು ಸಿಕ್ಕರೂ ಸಂಗ್ರಹಿಸಿ, ನೆರಳಿನಲ್ಲಿ ಒಣಗಿಸಿ, ನಮಗೆ ಕಳುಹಿಸಿಕೊಡಿ. ನಿಮ್ಮಲ್ಲಿ ನಾನು ಹಣದ ಭಿಕ್ಷೆ ಬೇಡುವುದಿಲ್ಲ. ಆದರೆ ಈ ಸಸ್ಯಗಳನ್ನು ಸಂಗ್ರಹಿಸಿ ಕಳುಹಿಸಲು ಬೇಡುವೆ. ಅವು ಎಷ್ಟಿದ್ದರೂ ನಮ್ಮ ಈ ಔಷಧಾಲಯದಲ್ಲಿ ಔಷಧ ತಯಾರಿಕೆಗೆ ಬೇಕು ಎಂದರು.

ನಾನು ಈ ಬಗ್ಗೆ ಪ್ರಯತ್ನ ಮಾಡುತ್ತೇನೆ ಸ್ವಾಮೀಜೀಎಂದೆ. ಸ್ವಾಮಿಗಳು ತಾಯೀ ಸರೋಜಮ್ಮಾ, ಮಲ್ಲಾಡಿಹಳ್ಳಿಗೂ ನಿನಗೂ ಒಂದು ಅಪೂರ್ವ ಸಂಬಂಧ ಇದೆ..! ಅದು ಏನು ಗೊತ್ತೇ? ಎಂದು ಕೇಳಿದರು. ಸರೋಜಮ್ಮಳು ಅವರ ಪ್ರಶ್ನೆಗೆ ಏನು ಉತ್ತರ ಕೊಡುವುದು ಎಂದು ಗೊತ್ತಾಗದೇ ಸುಮ್ಮಗೆ ನಿಂತಳು.

ಗೊತ್ತಾಗಲಿಲ್ಲವೇ? ತಾಯೀ! ಮಲ್ಲಾಡಿಹಳ್ಳಿಯು ನಿನ್ನ ತವರು ಮನೆ! ನೀನು ಇಲ್ಲಿಗೆ ಯಾವಾಗಬೇಕಾದರೂ ಬಂದು, ಬೇಕಷ್ಟು ದಿನ ಇಲ್ಲಿ ವಾಸವಾಗಿ ಇರಬಹುದು. ಇಲ್ಲಿರುವವರೆಲ್ಲರೂ ನಿನ್ನನ್ನು ಈ ಮನೆಯ ಮಗಳೆಂದು ಪ್ರೀತಿಸಿ ಗೌರವಿಸುತ್ತಾರೆ ಎಂದರು. ನಾನು ಸರೋಜಮ್ಮಳ ಮುಖ ನೋಡಿದೆ. ಅವಳ ಕಣ್ಣುಗಳಲ್ಲಿ ಆನಂದಭಾಷ್ಪಗಳು ಸುರಿಯುತ್ತಿದ್ದವು.

ರಾಧಿಕಾಳನ್ನು ಮಾತನಾಡಿಸುತ್ತಾ, ಮಲ್ಲಾಡಿಹಳ್ಳಿಯ ಸ್ವಾಮಿಗಳು ಏನು ಓದುತ್ತಾ ಇದ್ದಿ, ತಾಯೀ ಎಂದರು. ರಾಧಿಕಾ ಮೊದಲನೇ ಎಮ್.ಬಿ.ಬಿ.ಎಸ್. ಓದುತ್ತಿರುವುದಾಗಿ ಉತ್ತರಿಸಿದಳು.

ಒಡನೆಯೇ ಅವರು ನೀನು ದೇವರನ್ನು ಎಲ್ಲಿ ಕಾಣುತ್ತೀ? ಎಂದು ಪ್ರಶ್ನಿಸಿದರು. ರಾಧಿಕಾ ಅದಕ್ಕೆ ಸೇವೆಯಲ್ಲಿ ಎಂಬ ಅರ್ಥಬರುವಂತೆ ಉತ್ತರ ನೀಡಿದಳು. ಸ್ವಾಮಿಗಳು ರಾಧಿಕಾ, ನೀನು ದೇವರನ್ನು ನಿನ್ನ ರೋಗಿಗಳಲ್ಲಿ ಕಾಣು! ಎಂದು ಉಪದೇಶಿಸಿದರು.

ಇನ್ನೂ ಹೈಸ್ಕೂಲಲ್ಲಿ ಓದುತ್ತಿದ್ದ ನನ್ನ ಚಿಕ್ಕಮಗಳು ರಚನಾಳನ್ನು ಹತ್ತಿರ ಕರೆದು, ಮಗೂ, ನಾನು ಮತ್ತು ನೀನು ಸಹಪಾಠಿಗಳು. ನಾನು ಇನ್ನೂ ಕಲಿಕೆಯ ಶಾಲೆಯಲ್ಲಿಯೇ ಇದ್ದೇನೆ! ಎಂದರು. ಅವರಿಬ್ಬರೂ ತಮ್ಮ ಪರಿಶುದ್ಧವಾದ ಮುಗ್ಧ ನಗುವನ್ನು ಹಂಚಿಕೊಂಡು ನಕ್ಕರು. ನಡೆಯುತ್ತಾ ನಾವು ಹೊಸ ಕಟ್ಟಡದ ಬಳಿಗೆ ಬಂದಿದ್ದೆವು. ಒಂದು ಕೇಂದ್ರ ಬಿಂದುವಿನಿಂದ ಆ ಬೃಹತ್ ಕಟ್ಟಡದ ಮೂರು ಶಾಖೆಗಳು ಮೂರು ದಿಕ್ಕಿಗೆ ಹರಡಿದ್ದುವು.

ಇದು ನಾವು ಕಟ್ಟುತ್ತಿರುವ ವೈದ್ಯಕೀಯ ಸಮನ್ವಯ ಕೇಂದ್ರ. ಇಲ್ಲಿಂದ ಮೂರು ದಿಕ್ಕುಗಳ ಕಡೆಗೆ ಚಾಚಿರುವ ಮೂರು ಶಾಖೆಗಳು ಆಯುರ್ವೇದ, ಅಲೋಪಥಿ ಮತ್ತು ಯೋಗವಿಜ್ಞಾನಗಳ ಶಾಖೆಗಳು. ಮುಂದಕ್ಕೆ ಈ ಕಟ್ಟಡಗಳು ಪೂರ್ತಿಗೊಂಡಾಗ, ನಾವು ನಿಂತಿರುವ ಈ ಕೇಂದ್ರೀಯ ಕಟ್ಟಡವು ‘ಸಮನ್ವಯ ಕೇಂದ್ರ ಎನಿಸುವುದು. ಎಲ್ಲಾ ವೈದ್ಯಕೀಯ ಶಾಸ್ತ್ರಗಳ ಮೂಲ ಉದ್ದೇಶ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ. ಈಗ ನಾವು ಕಂಡಂತೆ,  ಈ ವೈದ್ಯಕೀಯ ಸೌಲಭ್ಯಗಳು ಬೇರೆ ಬೇರೆ ರೀತಿಯ ಶಾಸ್ತ್ರೀಯ ಪದ್ಧತಿಗಳಾಗಿದ್ದು, ಬೇರೆ ಬೇರೆ ಜಾಗಗಳಲ್ಲಿ ರೋಗಿಗಳಿಗೆ ದೊರೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ನಮ್ಮ ಈ ಯೋಜನೆ ಪೂರ್ತಿಗೊಂಡಾಗ, ಈ ಮೂರು ವೈದ್ಯಕೀಯ ಪದ್ಧತಿಗಳ ಸಮನ್ವಯದ ಬಗೆಗಿನ ಚರ್ಚೆ, ತುಲನೆ ಮತ್ತು ಸಂಶೋಧನೆ – ಇವೆಲ್ಲವೂ ಈ ಕೇಂದ್ರದಲ್ಲಿ ನಡೆಯುವುದು. ಈ ವೈದ್ಯಕೀಯ ಸಮನ್ವಯ ಕೇಂದ್ರದಿಂದ ಮನುಕುಲಕ್ಕೆ ಬಹಳ ಪ್ರಯೋಜನ ಆಗುವುದು. ಇದು ನನ್ನ ಆಶಯ ಎಂದರು.

ಅಲ್ಲಿಂದ ಅವರು ನಮ್ಮನ್ನು ತನ್ನ ವಾಸದ ಕೊಠಡಿಗೆ ಕರೆದುಕೊಂಡು ಹೋದರು. ಅದು ಎರಡು ಕೋಣೆಗಳ ಕಟ್ಟಡ. ಅಲ್ಲಿ ಅವರ ಮಲಗುವ ಕೋಣೆ ಹಾಗೂ ದಿವಾನ್‌ಖಾನೆ ಇದ್ದುವು. ಅವರ ಮಲಗುವ ಕೋಣೆಯಲ್ಲಿ ಒಂದು ಹುಲ್ಲು ಚಾಪೆ ಹಾಸಿತ್ತು. ಅವರು ಅದರ ಮೇಲೆ ನಿದ್ರಿಸುತ್ತಿದ್ದರಂತೆ. ದಿವಾನ್‌ಖಾನೆಯಲ್ಲಿ ಅವರನ್ನು ನೊಡಲು ಬರುವ ಜನರಿಗೆ ಕೂರಲು ಕೆಲವು ಬೆತ್ತದಕುರ್ಚಿಗಳು ಹಾಕಲ್ಪಟ್ಟಿದ್ದು, ಮಧ್ಯೆ ಒಂದು ಬೆತ್ತದ ಟೀಪಾಯ್ ಇಡಲ್ಪಟ್ಟಿತ್ತು. ಈ ವಾಸಸ್ಥಾನದ ಪಕ್ಕದಲ್ಲೇ, ಮಾನವ ನಿರ್ಮಿತ ಸುರಂಗ ಒಂದಿತ್ತು. ಅದರ ಗೋಡೆಗಳಿಗೆ ಸಿಮೆಂಟು ಕಾಂಕ್ರೀಟು ಹಾಕಿ ಮಣ್ಣು ಜರಿದು ಬೀಳದಂತೆ ಭದ್ರಪಡಿಸಿದ್ದರು. ಅದನ್ನು ತೋರುತ್ತಾ ಸ್ವಾಮಿಗಳು ಅದು ನನ್ನ ಜ್ಞಾನಸಮಾಧಿ. ಧ್ಯಾನ ಮಾಡಬೇಕು ಎನಿಸಿದಾಗ ಈ ಸುರಂಗದ ಒಳಹೋಗಿ ಅಲ್ಲಿನ ಕಟ್ಟೆಯ ಮೇಲೆ ಪದ್ಮಾಸನ ಹಾಕಿ ಕುಳಿತು ಧ್ಯಾನ ಮಾಡುವೆ. ಕೆಲವುಸಲ ದಿನಗಟ್ಟಲೆ ನನ್ನ ಜ್ಞಾನಸಮಾಧಿ ಮುಂದುವರೆಯುವುದು. ಆ ಸಮಯ ನನಗೆ ಅಹಾರ ಮತ್ತು ವಿಶ್ರಾಂತಿಗಳು ಬೇಕಾಗುವುದಿಲ್ಲ. ಈ ರೀತಿ ಧ್ಯಾನಕ್ಕೆ ಕುಳಿತಾಗ ನನ್ನ ಹೃದಯದ ಬಡಿತ ಬಹು ಕಡಿಮೆ ಆಗುತ್ತದೆ ಮತ್ತು ಉಸಿರಾಟ ಬಹು ಅಲ್ಪಗತಿಯಲ್ಲಿ ಸಾಗುತ್ತದೆ. ಆಗ, ನನಗೆ ಆಹಾರ ಮತ್ತು ವಿಶ್ರಾಂತಿ ಎರಡೂ ಬೇಕಾಗದ ಸ್ಥಿತಿಯಲ್ಲಿ ಇರುತ್ತೇನೆ. ಆಹಾರ ಸ್ವೀಕಾರ ಮಾಡದೇ ಇರುವುದರಿಂದ ಶೌಚದ ತೊಂದರೆಯೂ ಇರುವುದಿಲ್ಲ. ನನ್ನ ಸಮಾಧಿಸ್ಥಿತಿಗೆ ಅಗತ್ಯವಾಗಿ ಬೇಕಾದ ‘ಮೌನ ಮತ್ತು ಏಕಾಂತ ಇವೆರಡೂ ಈ ಗುಹೆಯಲ್ಲಿ ನನಗೆ ಲಭ್ಯವಾಗುತ್ತವೆ ಎಂದರು.

ಸ್ವಾಮಿಗಳು ವರ್ಷಕ್ಕೆ ಎರಡು ಮೂರು ಬಾರಿ ಈ ಗುಹೆಯಲ್ಲಿ ತಮ್ಮ ದೀರ್ಘವಾದ ಭಾವ ಸಮಾಧಿಸ್ಥಿತಿಯಲ್ಲಿ ಧ್ಯಾನಮಾಡುತ್ತಾ, ವಾರಗಟ್ಟಲೆ ಕುಳಿತಿರುತ್ತಾರೆ ಎಂದು ಆಶ್ರಮವಾಸಿಗಳು ಹೇಳಿದರು.

ಸ್ವಾಮಿಗಳು ನಮ್ಮನ್ನು ಬೆತ್ತದ ಕುರ್ಚಿಗಳ ಮೇಲೆ ಕುಳ್ಳಿರಿಸಿ ತಾನೂ ಒಂದು ಕುರ್ಚಿಯಲ್ಲಿ ಕುಳಿತುಕೊಂಡರು. ಅವರ ಭಿಕ್ಷಾಪಾತ್ರೆಯನ್ನು ನಮ್ಮ ಇದುರಿನ ಟೀಪಾಯ್ ಮೇಲಿಟ್ಟು ಭವತಿ ಭಿಕ್ಷಾಂದೇಹಿ ಎಂದರು. ನಾವು ನಮ್ಮ ಯಥಾನುಶಕ್ತಿ ಹಣವನ್ನು ಅದರಲ್ಲಿ ಹಾಕಿದೆವು. ನೀವು ಹಾಕಿದ ಭಿಕ್ಷೆಗೆ ವಂದನೆಗಳು ಎಂದರು.

ಆನಂತರ ನಮ್ಮನ್ನು ಉದ್ದೇಶಿಸಿ, ಈ ಭಿಕ್ಷೆಯ ಹಣದಿಂದಲೇ ನಮ್ಮ ಆಶ್ರಮವು ಇದುವರೆವಿಗೆ ನಡೆದು ಬಂದಿದೆ. ನಾನು ಊರೂರು ತಿರುಗಿ ಭಿಕ್ಷೆ ಬೇಡುತ್ತೇನೆ. ಯಾರನ್ನೂ ಭಿಕ್ಷೆ ಹಾಕಿ ಎಂದು ಒತ್ತಾಯ ಮಾಡುವುದಿಲ್ಲ. ಬಂದುದನ್ನು ಸ್ವೀಕರಿಸಿ, ಈ ಆಶ್ರಮದ ಶಾಲೆಗಳು, ಅನಾಥಾಲಯಗಳು ಮತ್ತು ವೈದ್ಯಕೀಯ ಕೇಂದ್ರಗಳನ್ನು ನಡೆಸುತ್ತೇವೆ. ನನ್ನ ಆಶ್ರಮದಲ್ಲಿನ ವಿದ್ಯಾರ್ಥಿಗಳೆಲ್ಲರೂ ಬಡ ಕುಟುಂಬಗಳಿಂದ ಬಂದವರು ಅಥವಾ ಅನಾಥರಲ್ಲ. ಹಲವು ಶ್ರೀಮಂತ ಮಹನೀಯರುಗಳು ತಮ್ಮ ಮಕ್ಕಳನ್ನು ನಮ್ಮ ಆಶ್ರಮದಲ್ಲಿ ಓದಲು ಬಿಟ್ಟಿದ್ದಾರೆ. ಆ ಶ್ರೀಮಂತರ ಮಕ್ಕಳು ಯಾವ ಹೆಚ್ಚಿನ ಸೌಲಭ್ಯಗಳಿಗೂ ಹಾತೊರೆಯದೆ,  ಇಲ್ಲಿನ ಶಿಸ್ತು ಪರಿಪಾಲನೆಯ ಜೀವನ ಮಾಡುತ್ತಾ, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಣವು ಆ ಮಕ್ಕಳನ್ನು ಉತ್ತಮಪ್ರಜೆಗಳನ್ನಾಗಿ ಮಾಡುವುದು ಎಂದು ಅವರ ಹೆತ್ತವರ ಅಭಿಪ್ರಾಯ. ಅಂತಹಾ ಶ್ರೀಮಂತ ತಂದೆತಾಯಿಯರು ಆಶ್ರಮಕ್ಕೆ ಹೆಚ್ಚಿನ ಮೊತ್ತದ ದೇಣಿಗೆ ಕೊಡುತ್ತಿದ್ದಾರೆ. ನಮ್ಮ ಈ ಆಶ್ರಮವು ಒಟ್ಟು ಅರುವತ್ತು ಎಕರೆ ವಿಸ್ತೀರ್ಣದ ದೇಣಿಗೆ ಕೊಡಲ್ಪಟ್ಟ ಜಮೀನಿನಲ್ಲಿ ಸ್ಥಾಪಿಸಲ್ಪಟ್ಟಿದೆ. ಅನಾಥಾಲಯ, ಅಬಲಾಶ್ರಮ, ವೃದ್ಧಾಶ್ರಮ, ಪುಸ್ತಕ ಪ್ರಕಾಶನ, ಗ್ರಂಥಾಲಯ ಎಲ್ಲವೂ ಈ ಭಿಕ್ಷಾಪಾತ್ರೆಗೆ ಬಿದ್ದ ಹಣದಿಂದಲೇ ನಡೆಯುತ್ತಿವೆ. ನಾನು ಒಬ್ಬ ದೊಡ್ಡ ತಿರುಕ. ಅದೇ ಕಾವ್ಯನಾಮದಿಂದ ಹಲವಾರು ಪುಸ್ತಕ ಬರೆದು ಪ್ರಕಟಿಸಿದ್ದೇನೆ. ಪುಸ್ತಕಗಳನ್ನು ಆಸಕ್ತಿಯುಳ್ಳವರು ಓದಿ ನೋಡಬಹುದು. ಒಬ್ಬ ಮನುಷ್ಯನು ಸಮಾಜಸೇವೆಯ ಛಲತೊಟ್ಟು ಏನನ್ನೆಲ್ಲಾ ಸಾಧಿಸಬಹುದು ಎಂಬುದನ್ನು ಈಗ ನಮ್ಮ ಆಶ್ರಮದಲ್ಲಿ ತಾವುಗಳೆಲ್ಲಾ ನೋಡಿದಿರಿ. ನೀವು ಇಲ್ಲಿಗೆ ಬಂದುದು ನನಗೆ ತುಂಬಾ ಸಂತೋಷ ತಂದಿದೆ. ಹೀಗೆಯೆ, ಆಗಾಗ ನಮ್ಮ ಆಶ್ರಮಕ್ಕೆ ಬರುತ್ತಾ ನಮ್ಮನ್ನು ಪ್ರೋತ್ಸಾಹಿಸುತ್ತಿರಿ ಎಂದರು.               ಅವರು ವೈದ್ಯಶಾಲೆಗೆ ಹೋಗುವ ಹೊತ್ತಾಗಿತ್ತು. ವೈದ್ಯಶಾಲೆ ನೋಡಲು ಬರುತ್ತೀರಾ? ಎಂದು ನಮ್ಮನ್ನು ಕೇಳಿದರು. ನಾವು ಅವರ ಜತೆಗೆ ಹೊರಟಾಗ ಒಮ್ಮೆಗೇ, ನಿಮ್ಮ ಹೆಸರು ಪೆಜತ್ತಾಯ ಎಂದಿರಲ್ಲವೇ? ಪಲಿಮಾರು ಮಠದ ದಿವಾನರಾಗಿದ್ದ ಶ್ರೀನಿವಾಸ ಪೆಜತ್ತಾಯರು ನಿಮ್ಮ ತಂದೆಯವರಲ್ಲವೇ? ಎಂದು ಕೇಳಿದರು. ನಾನು ಹೌದು..! ಎಂದೆ.

ನಿಮ್ಮ ತಂದೆಯವರು ಮತ್ತು ಆಗಿನ ಗುರುಗಳಾದ ಪಲಿಮಾರು ಮಠಾಧೀಶ   ಶ್ರೀ ರಘುಮಾನ್ಯ ತೀರ್ಥಪಾದಂಗಳವರು ನನಗೆ ನನ್ನ ದೇಶ ಪರ್ಯಟನದ ವಿದ್ಯಾರ್ಥಿಜೀವನದಲ್ಲಿ ಬಹಳ ಸಹಾಯ ಮಾಡಿದ ಮಹನೀಯರು. ಪಲಿಮಾರು ಮಠದಲ್ಲಿ ಇದ್ದುಕೊಂಡು, ನಾನು ದೈಹಿಕ ವ್ಯಾಯಾಮ, ಭಾರತೀಯ ಕುಸ್ತಿಕಲೆ ಮತ್ತು ಹಲವು ಸಂಸ್ಕೃತ ಪಾಠಗಳನ್ನು ಕಲಿತೆ. ಶ್ರೀ ರಘುಮಾನ್ಯತೀರ್ಥರು ತಮ್ಮ ಸಂಸ್ಕೃತ ಪಾಂಡಿತ್ಯದೊಂದಿಗೆ, ಅಸಾಧಾರಣವಾದ ದೈಹಿಕ ಶಕ್ತಿಗೂ ಹೆಸರಾದವರು. ಉಡುಪಿಯ ಪೈಲ್ವಾನ್ ಸ್ವಾಮೀಜಿ ಎಂಬ ಹೆಸರಿನಿಂದ ಅವರು ಪ್ರಖ್ಯಾತರಾಗಿದ್ದರು. ನಿಮ್ಮ ತಂದೆಯವರು ಅವರ ಸೌಜನ್ಯ ಮತ್ತು ಸೇವಾಮನೋವೃತ್ತಿಗಳಿಂದ ಶ್ರೀ ಮಠದ ಸೇವೆ ಮಾಡುತ್ತಿದ್ದ ಜನಪ್ರಿಯ ವ್ಯಕ್ತಿಗಳಾಗಿದ್ದರು. ಇಂದು ನಿಮ್ಮನ್ನು ಕಂಡು ನನಗೆ ಬಹಳ ಸಂತೋಷವಾಯಿತು ಎಂದರು.

ನನ್ನ ದಿವಂಗತ ತಂದೆಯವರನ್ನು ಅವರು ಜ್ಞಾಪಿಸಿಕೊಂಡುದನ್ನು ನೋಡಿ ನಾನು ಪುಳಕಗೊಂಡೆ.

ಒಂದುಕ್ಷಣ ನನ್ನ ಮುಖ ನೋಡುತ್ತಾ, ಪೆಜತ್ತಾಯರೇ! ನೀವು ಅದೇಕೆ ಈ ಫ್ರೆಂಚ್ ಗಡ್ಡ ಬೆಳೆಸಿದ್ದೀರಿ. ಅದನ್ನು ನಾಳೆಯೇ ಬೋಳಿಸಿ ಬಿಡಿ. ನಿಮಗೆ ಎಷ್ಟು ಬೇಕೋ ಅಷ್ಟು ದೊಡ್ಡದಾಗಿ ಮೀಸೆ ಬೆಳೆಸಿರಿ. ಈ ಫ್ರೆಂಚ್ ಗಡ್ಡ ಮಾತ್ರ ಬೇಡ ಎಂದುಬಿಟ್ಟರು. ನಾನು ವಿಧೇಯತೆಯಿಂದ ಆಗಲಿ ಸ್ವಾಮೀಜೀ, ತಮ್ಮ ಅಪ್ಪಣೆಯಂತೆ ನಾಳೆಯೇ ಗಡ್ಡ ಬೋಳಿಸುತ್ತೇನೆ ಎಂದು ಉತ್ತರಿಸಿದೆ. ಅವರು ಹಾಗನ್ನಲು ಕಾರಣ ಏನೋ ನನಗೆ ಗೊತ್ತಿಲ್ಲ. ನಾನು ಆ ನೂರಾ ಒಂದು ವರುಷದ ಯೋಗಿಗಳೊಂದಿಗೆ ಯಾಕೆ ಹಾಗೆ ಹೇಳಿದಿರಿ? ಎಂದು ಕೇಳಲು ತಯಾರಿರಲಿಲ್ಲ. ಅವರ ಅಪ್ಪಣೆಯಂತೆ ಮರುದಿನವೇ ನನ್ನ ಫ್ರೆಂಚ್ ಗಡ್ಡ ಬೋಳಿಸಿದೆ.

ಆಯುರ್ವೇದ ಚಿಕಿತ್ಸಾಲಯದಲ್ಲಿ ಆಗಲೇ ರೋಗಿಗಳ ದೊಡ್ಡ ಕ್ಯೂ ಇತ್ತು. ಹಿಂದುಗಳು, ಕ್ರಿಶ್ಚಿಯನ್‌ರು ಮತ್ತು ಮುಸ್ಲಿಮ್ ಜನರು ಅಲ್ಲಿ ಚಿಕಿತ್ಸೆಗಾಗಿ ಕಾಯುತ್ತಿದ್ದರು. ಹೆಂಗಸರು ಮತ್ತು ಮಕ್ಕಳು ಕೂಡಾ ಸಾಲಿನಲ್ಲಿ ನಿಂತಿದ್ದರು. ಬಹಳ ಜನ ಬುರ್ಖಾಧಾರಿಗಳಾದ ಮುಸಲ್ಮಾನ್ ಮಹಿಳೆಯರನ್ನೂ ನಾವು ರೋಗಿಗಳ ಸಾಲಿನಲ್ಲಿ ಕಂಡೆವು. ಸ್ವಾಮಿಗಳು ಆಜನ್ಮ ಬ್ರಹ್ಮಚಾರಿ. ಯಾವ ಹೆಂಗಸೇ ಅವರಲ್ಲಿ ಚಿಕಿತ್ಸೆಗೆ ಬರಲಿ, ಮೊದಲು ಆ ಸ್ತ್ರೀಯ ಪಾದಮುಟ್ಟಿ ತಾಯೀ, ನಮಸ್ಕಾರ! ಎನ್ನುತ್ತಾ ತಮ್ಮ ವೈದ್ಯಕೀಯ ತಪಾಸಣೆ ಶುರುಮಾಡುತ್ತಿದ್ದರು.

ಎಂತಹಾ ಸುಂದರ ವ್ಯಕ್ತಿತ್ವ ಅವರದು! ಕರುಣೆಯೇ ಮೂರ್ತಿವೆತ್ತ ನಿಶ್ಕಲ್ಮಷ ವೈದ್ಯಕೀಯ ಸೇವೆ ಅವರದು.

ಅವರು ಅಂದು ನನಗೆ ಯೋಗ ಅಥವಾ ಧ್ಯಾನದ ಬಗ್ಗೆ ಉಪನ್ಯಾಸ ಕೊಡಲಿಲ್ಲ. (ನಾನು ಆ ಬಗ್ಗೆ ಅವರನ್ನು ಕೇಳಲೂ ಇಲ್ಲ!) ಅವರು ನಮಗೆ ಜಪ, ಮಂತ್ರ, ಧ್ಯಾನ, ಮುಂತಾದವನ್ನು ಉಪದೇಶ ಮಾಡಲೂ ಇಲ್ಲ. ತಾವು ದೇವರನ್ನು ಪೂಜೆ ಮಾಡುವಾಗ ನಿಂತುನೋಡಿರಿ ಅನ್ನಲಿಲ್ಲ. ಕುಂಕುಮ, ಮಂತ್ರಾಕ್ಷತೆ ಅಥವಾ ಯಾವುದೇ ರೀತಿಯ ಪ್ರಸಾದವನ್ನು ಅವರು ನಮಗೆ ಕೊಡಲಿಲ್ಲ. ಇಂತಹಾ ದೇವರನ್ನು ಪೂಜಿಸಿರಿ ಎಂದೂ ಹೇಳಲಿಲ್ಲ. ಅವರ ಆಶ್ರಮದಲ್ಲಿ ನಾವು ಕಂಡುದು ಬರೇ ಮಾನವೀಯತೆ ಮತ್ತು ಪ್ರೀತಿ ಮಾತ್ರ…!

ಸ್ವಾಮಿಗಳು ವೈದ್ಯಕೀಯ ಸೇವೆಯಲ್ಲಿ ತಲ್ಲೀನರಾದರು. ನಾವು ಅವರ ಅಪ್ಪಣೆ ಪಡೆದು ಹೊರಡಲು ಅನುವಾದಾಗ, ತಮ್ಮ ಸಹಾಯಕನನ್ನು ಕರೆದು ಇವರನ್ನೆಲ್ಲಾ ಭೋಜನಶಾಲೆಗೆ ಕರೆದುಕೊಂಡು ಹೋಗಿ ಉಪಹಾರ ಕೊಡಿಸು ಎಂದರು. ಆ ಮೇಲೆ ನನ್ನತ್ತ ನೋಡಿ ಮುಗುಳ್ನಗುತ್ತಾ ನಮ್ಮಲ್ಲಿ ನಾವೆಲ್ಲರೂ ಹಾಲು ಅಥವಾ ಕಷಾಯ ಸೇವಿಸುತ್ತೇವೆ. ಕಾಫಿ ಪ್ಲಾಂಟರಿಗೆ ಕಾಫಿ ಅಥವಾ ಚಹಾ ಬೇಕಾದರೆ ಅದನ್ನೇ ಮಾಡಿಸಿಕೊಡು..! ಎಂದು ತನ್ನ ಸಹಾಯಕನಿಗೆ ಹೇಳಿದರು. ಅವರ ಸಹಾಯಕನು ನಮಗೆ ಹೊಟ್ಟೆ ತುಂಬುವಷ್ಟು ರುಚಿಯಾದ ಉಪ್ಪಿಟ್ಟು ತಿನ್ನಿಸಿದರು. ನನಗೆ ಚಹಾ ಕೊಡಿಸಿದರು. ಸರೋಜಮ್ಮನಿಗೆ ಕಾಫಿ ಮತ್ತು ಮಕ್ಕಳಿಗೆ ಹಾಲು ಕುಡಿಯಲು ಕೊಡಿಸಿದರು.

ಅಲ್ಲಿಂದ ನಾವು ಗ್ರಂಥಾಲಯದ ಕಡೆಗೆ ನಡೆದೆವು. ಹಲವಾರು ಭಾಷೆಗಳ ಹಲವಾರು ವಿಷಯಗಳ ಮೇಲಿನ ಸಾವಿರಾರುಗ್ರಂಥಗಳು ಅಲ್ಲಿದ್ದುವು. ಪತ್ರಿಕೆ ಮತ್ತು ನಿಯತಕಾಲಿಕಗಳೂ ಇದ್ದುವು. ಸಂಸ್ಕೃತ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ಅಲ್ಲಿಂದ ಆಶ್ರಮದ ಪ್ರಕಾಶನದ ಕಛೇರಿಗೆ ನಾವು ಹೋದೆವು. ಸ್ವಾಮೀಜಿಯವರಿಂದ ಬರೆಯಲ್ಪಟ್ಟ ಪ್ರಬಂಧ, ವೇದಾಂತ ಸಾರ, ಗೀತೆಯ ಟಿಪ್ಪಣಿ, ಪುರಾಣಕಥೆಗಳು, ನಾಟಕಗಳು, ಆರೋಗ್ಯಶಾಸ್ತ್ರ, ಆಯುರ್ವೇದ, ವ್ಯಾಯಾಮ, ಅಕಿಡೊ, ಜುಜುಟ್ಸು, ಪ್ರಾಣಾಯಾಮ, ಯೋಗ, ಯೋಗಚಿಕಿತ್ಸೆ, ಮಕ್ಕಳ ಹಾಗೂ ಸ್ತ್ರೀಪುರುಷರ ಆರೋಗ್ಯದ ಬಗ್ಗೆ ಬರೆದ ಪುಸ್ತಕಗಳು, ಮಾನಸಿಕ ಆರೋಗ್ಯ, ಲಲಿತಕಲೆಗಳು, ಶಿಶುಸಾಹಿತ್ಯ ಮೊದಲಾದ ಹಲವಾರು ಬಗೆಯ ಪುಸ್ತಕಗಳು ಅಲ್ಲಿ ಲಭ್ಯವಿದ್ದುವು.

ಸ್ವಾಮಿಗಳ ವಿಚಾರಧಾರೆಯನ್ನು (ಅವರ ಟ್ರೈನ್ ಆಫ್ ಥಾಟ್) ಕಂಡು ನಾನು ದಂಗಾಗಿಬಿಟ್ಟೆ. ಪುಸ್ತಕಗಳ ಮುಖ ಬೆಲೆ ಕೂಡಾ ಅತ್ಯಂತ ಕಡಿಮೆ ಇದ್ದುದರಿಂದ ನಾನು ಲಭ್ಯವಿರುವ ಪುಸ್ತಕಗಳನ್ನೆಲ್ಲಾ ಕೊಂಡೆ. ಒಟ್ಟು ನೂರಾ ಹನ್ನೊಂದು ಪುಸ್ತಕಗಳು ಅಂದು ನನಗೆ ಸಿಕ್ಕಿದುವು. ಅವನ್ನು ನಮ್ಮ ತೋಟದ ಲೈಬ್ರರಿಯಲ್ಲಿ ಬಹು ಜತನದಿಂದ ಕಾಪಾಡುತ್ತಿದ್ದೇನೆ.           ಆಶ್ರಮದಿಂದ ಹೊರಡಬೇಕಾದರೆ ನಮಗೆ ಯಾವುದೋ ಒಂದು ಅಗಲುವಿಕೆಯ ಅನುಭವ ಉಂಟಾಯಿತು. ಸ್ವಾಮಿಗಳು ತಮ್ಮ ಅಪರೂಪದ ವ್ಯಕ್ತಿತ್ವದ ಪ್ರಭಾವವನ್ನು ನಮ್ಮ ಮೇಲೆ ಬೀರಿದ್ದರು. ನಿನ್ನ ಕೆಲಸದಲ್ಲಿ ದೇವರನ್ನು ಕಾಣು! ಎಂದು ಮಾತ್ರ ನನಗೆ ಅವರು ಉಪದೇಶಿಸಿದ್ದರು.

ಆಶ್ರಮದ ಭೆಟ್ಟಿಯ ಮೇಲೆ ನಾನು ತುಂಬಾ ಸಂತೋಷವಾಗಿ ಇದ್ದೇನೆ. ಇದಕ್ಕೆ ನಾನು ಅವರಿಗೆ ಚಿರ‌ಋಣಿ.

ನನಗೆ ಅರಿವಿಲ್ಲದೇ, ಅವರ ದರ್ಶನ ಆದ ನಂತರ ನಾನು ಮಹಿಳೆಯರನ್ನು ತಾಯೇ! ಎಂದು ಸಂಬೋಧಿಸಲು ಶುರುಮಾಡಿದೆ. ಈ ತಾಯೇ ಎಂಬ ಶಬ್ದ ನನಗೆ ಆ ಹಿರಿಯ ಕರ್ಮಯೋಗಿಯ ನೆನಪನ್ನು ತರುತ್ತದೆ.

‘Voyages of a Paper Boat’ ಎನ್ನುವ ನೆನಪುಗಳ ಇಂಗ್ಲಿಷ್ ಭಾಷೆಯ ಬರವಣಿಗೆಯಲ್ಲಿ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಬಗ್ಗೆ ಕೆಲವು ಪುಟಗಳನ್ನು ಬರೆದಿದ್ದೇನೆ. ನನ್ನ ನೆನಪಿನ ದೋಣಿಯನ್ನು ನನ್ನ ಮಕ್ಕಳು ಪುರುಸೋತ್ತಾದಾಗ ಓದಲಿ! ಎಂದು ನನ್ನ ಕಂಪ್ಯೂಟರಿನ ಸಿ-ಡ್ರೈವ್ನಲ್ಲಿ ಜೋಪಾನವಾಗಿ ಸಂಗ್ರಹಿಸಿ ಇಟ್ಟಿದ್ದೇನೆ.

ಈ ವಿಚಾರ ಹಾಗಿರಲಿ! ಮಹಿಳೆಯರನ್ನು ನಾನು ತಾಯೀ! ಎಂದು ಸಂಬೋಧಿಸುವಾಗ ನಾನು ಕಂಡ ಆ ಮಹಾಯೋಗಿಯ ನೆನಪಾಗುತ್ತದೆ ಮತ್ತು ನನ್ನನ್ನು ಹೆತ್ತು ಸಲಹಿ ಸ್ವರ್ಗಸ್ಥರಾಗಿರುವ ನನ್ನ ತಾಯಿಯ ನೆನಪಾಗುತ್ತದೆ. ಪ್ರತೀ ಸಲ ತಾಯೀ ಎಂಬ ಶಬ್ದ ಉಚ್ಛರಿಸಿದಾಗ ಈ ಎರಡು ವ್ಯಕ್ತಿಗಳ ಆತ್ಮಕ್ಕೆ ಗೌರವ ಕೊಟ್ಟಂತೆ ಅನ್ನಿಸುತ್ತದೆ.

* * *